ಲೋಕಸಭೆ ಚುನಾವಣೆ 2024: ಮೋದಿ v/s ಖರ್ಗೆ ಮಲ್ಲ ಯುದ್ಧಕ್ಕೆ ಅಖಾಡ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್
ಮೋದಿ ಮತ್ತು ಖರ್ಗೆ
ಮೋದಿ ಮತ್ತು ಖರ್ಗೆ

ನರೇಂದ್ರ ಮೋದಿ ಅಥವಾ ಮಲ್ಲಿಕಾರ್ಜುನ ಖರ್ಗೆ. ಈ ಇಬ್ಬರಲ್ಲಿ ಮುಂದಿನ ಪ್ರಧಾನಿ ಗದ್ದುಗೆ ಏರುವವರು ಯಾರು? ಲೋಕಸಭೆಗೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇದೀಗ ರಾಷ್ಟ್ರದಾದ್ಯಂತ ಹೊಸದೊಂದು ಚರ್ಚೆಗೆ ಚಾಲನೆ ಸಿಕ್ಕಿದೆ.  

ಇತ್ತೀಚೆಗೆ ನಡೆದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಮೈತ್ರಿಕೂಟದಲ್ಲಿ ಎಐಸಿಸಿ ಅಧ್ಯಕ್ಷರೂ ಆದ ಕರ್ನಾಟಕದ ಮುತ್ಸದ್ದಿ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಪ್ರಸ್ತಾಪದ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.

ಖರ್ಗೆಯವರ ಹೆಸರಿಗೆ ಮೈತ್ರಿಕೂಟದ ಅಂಗ ಪಕ್ಷ ಸಂಯುಕ್ತ ಜನತಾದಳ ಸಹಮತ ವ್ಯಕ್ತಪಡಿಸಿಲ್ಲ. ರಾಷ್ಟ್ರ ರಾಜಕಾರಣದ ಪರಿಸ್ತಿತಿಯ ಸೂಕ್ಷ್ಮತೆಗಳನ್ನು ಅರಿತಿರುವ ಖರ್ಗೆಯವರು ಮೊದಲು ಚುನಾವಣೆಯಲ್ಲಿ ಸರ್ಕಾರ ರಚನೆಗೆ ಅಗತ್ಯ ಸಂಖ್ಯೆಯ ಸ್ಥಾನಗಳನ್ನು ಗೆಲ್ಲೋಣ, ಪ್ರಧಾನಿ ಯಾರಾಗಬೇಕು ಎಂಬುದನ್ನು ಚುನಾವಣೆಯ ನಂತರ ನಿರ್ಧರಿಸೋಣ ಎಂದು ಪ್ರತಿಕ್ರಿಯಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಅವರ ಅನುಭವ ಮತ್ತು ದೂರದೃಷ್ಟಿಗೆ ಮತ್ತೊಂದು ಸಾಕ್ಷಿ. ಐದು ದಶಕಗಳ ರಾಜಕಾರಣದ ಹಾದಿಯಲ್ಲಿ ಎಲ್ಲ ಅರ್ಹತೆಗಳಿದ್ದರೂ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶದಿಂದ ವಂಚಿಸಲ್ಪಟ್ಟ  ಖರ್ಗೆಯವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆ ವಿರುದ್ಧ ಸೆಣಸಿ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕಿದೆ. ಮತ್ತೊಂದು ಕಡೆ ಪ್ರಧಾನಿ ಪಟ್ಟ ಇಂದಿರಾ ಕುಟುಂಬದ ಜಹಗಿರಿ ಎಂಬಂತೆ ವರ್ತಿಸುತ್ತಿರುವ ಕಾಂಗ್ರೆಸ್ ನಲ್ಲಿರುವ ಇತರ ನಾಯಕರನ್ನೂ ಸಂಬಾಳಿಸಬೇಕಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆಎಂಬ ಸತ್ಯವನ್ನು ಅರಿತಿರುವ ಅವರು ರಾಷ್ಟ್ರ ರಾಜಕಾರಣದ ವಾಸ್ತವವನ್ನೇ ಮಾತನಾಡಿದ್ದಾರೆ. ಹಾಗಾಗೆ ಇದು ಮುತ್ಸದ್ದಿತನದ ನಿಲುವಲ್ಲದೇ ಬೇರೆ ಏನೂ ಅಲ್ಲ.

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೊಂದು ಸುತ್ತಿನ ಭಾರತ್ ಜೋಡೊ ಪಾದಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಇಷ್ಟರಲ್ಲೇ ಅದರ ದಿನಾಂಕವೂ ಪ್ರಕಟವಾಗಲಿದೆ. ಮತ್ತೊಂದು ಕಡೆ ಉತ್ತರದ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿನ ಸೋಲನ್ನು ಕಾಂಗ್ರೆಸ್ ಅರಗಿಸಿಕೊಂಡು ಲೋಕಸಭಾ ಚುನಾವಣೆಗೆ ಅಯಾ ರಾಜ್ಯ ಘಟಕಗಳನ್ನು ಹುರಿಗೊಳಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಗೆ ಮೊದಲೇ ಪ್ರಧಾನಿ ಪಟ್ಟದ ಕುರಿತು ಚರ್ಚೆ ಆರಂಭವಾದರೆ ಅದು ಮುಂದಿನ ದಿನಗಳಲ್ಲಿ ವಿವಾದಕ್ಕೆ ಕಾರಣವಾಗಿ ಮೈತ್ರಿಕೂಟದ ಅಸ್ತಿತ್ವಕ್ಕೇ ಧಕ್ಕೆ ತರಬಹುದು ಎಂಬ ದೂರ ದೃಷ್ಟಿಯಿಂದಲೇ ಪ್ರಧಾನಿ ಯಾರಾಗಬೇಕು ಎಂಬ ಚರ್ಚೆ ಈಗ ಬೇಡ ಎಂದು ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. 

ರಾಷ್ಟ್ರ ರಾಜಕಾರಣದ ಈಗಿನ ಸ್ಥಿತಿ ನೋಡಿದರೆ ಪ್ರಧಾನಿ ಮೋದಿಯವರ ಜನಪ್ರಿಯತೆಯ ನಡುವೆಯೂ ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ ಇತ್ತೀಚೆಗೆ ನೆರೆಯ ತೆಲಂಗಾಣ ರಾಜ್ಯದಲ್ಲೂ ಅದು ಗೆದ್ದು ಅಧಿಕಾರ ಹಿಡಿದಿರುವುದಕ್ಕೆ ಸಾಕ್ಷಿ. ಇದಕ್ಕೆ ಮುನ್ನ ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲೂ ಮೋದಿ ಹಾಗೂ ಅಮಿತ್ ಶಾ ಜೋಡಿಯ ಜನಪ್ರಿಯತೆ ಅಥವಾ ರಾಜಕೀಯ ತಂತ್ರಗಳು ಫಲ ನೀಡದೇ ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸಿ  ಅಧಿಕಾರ ಹಿಡಿದಿರುವುದು ಈಗ ಇತಿಹಾಸ. ಕರ್ನಾಟದಲ್ಲಿ ತನ್ನ ಸೋಲಿನ ಆಘಾತದಿಂದ ಹೊರ ಬರಲು ಬಿಜೆಪಿ ಇದೀಗ ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದ ಜಾತ್ಯತೀತ ಜನತಾದಳದ ನೆರವನ್ನು ಆಶ್ರಯಿಸುವ ದಯನೀಯ ಸ್ಥಿತಿಗೆ ಬಂದು ಮುಟ್ಟಿದೆ. ಹಾಗೆ ನೋಡಿದರೆ ಜೆಡಿಎಸ್ ಜತೆಗಿನ ಲೋಕಸಭಾ ಚುನಾವಣೆಯ ಪ್ರಸ್ತಾವಿತ ಮೈತ್ರಿ ಸ್ಥಳೀಯವಾಗಿ ಬಿಜೆಪಿಯ ಪ್ರಮುಖ ನಾಯಕರಿಗೇ ಇಷ್ಟವಿಲ್ಲ. ಆದರೂ ದಿಲ್ಲಿ ಧಣಿಗಳ ಸೂಚನೆಗೆ ಮಣಿದು ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿ ನಿರೀಕ್ಷಿಸಿದ ಫಲಿತಾಂಶ ನೀಡುತ್ತದೆ ಎಂಬ ಖಚಿತತೆಯೇನೂ ಇಲ್ಲ. 

ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಒಂದಷ್ಟರ ಮಟ್ಡಿಗೆ ಜನಪ್ರಿಯತೆ ತಂದುಕೊಟ್ಟಿದೆ. ಇದಲ್ಲದೇ ಬಿಜೆಪಿಯಲ್ಲಿ ಬಿ.ವೈ. ವಿಜಯೇಂದ್ರ ರಾಜ್ಯಘಟಕದ ಅಧ್ಯಕ್ಷ ಹಾಗೂ ಆರ್.ಅಶೋಕ್ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ನಂತರವೂ ಆಂತರಿಕ ಬಿಕ್ಕಟ್ಟು, ಭಿನ್ನಮತ ಬಗೆಹರಿದಿಲ್ಲ. ಬದಲಾಗಿ ಬೀದಿಗೆ ಬಂದಿದೆ. ಈ ಪರಿಸ್ಥಿತಿಯಲ್ಲಿ ಸಹಜವಾಗೇ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂಬುದೇನೋ ನಿಜ. ಆದರೆ ರಾಷ್ಟ್ರ ರಾಜಕಾರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಮೋದಿ ಜನಪ್ರಿಯತೆ ಕಡಿಮೆ ಏನೂ ಆಗಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಯೋಜನೆ ಸಾಕಾರಗೊಂಡಿರುವುದು, ಜಮ್ಮು- ಕಾಶ್ಮೀರ  ವಿಶೇಷ ಸ್ಥಾನಮಾನ ವಿವಾದಕ್ಕೆ ಕಾರಣವಾಗಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಇವೇ ಮೊದಲಾದ ಅಂಶಗಳನ್ನು ಮುಂದಿಟ್ಟುಕೊಂಡು ಭಾವನಾತ್ಮಕವಾಗಿ ಜನರನ್ನು ತನ್ನ ಕಡೆಗೆ ಸೆಳೆದುಕೊಳ್ಳುವ ಪ್ರಯತ್ನಗಳನ್ನು ಬಿಜೆಪಿ ವ್ಯವಸ್ಥಿತವಾಗಿ ಮುಂದುವರಿಸಲಿದೆ. ಚುನಾವಣೆಯಲ್ಲಿ ಇದು ಆ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯ ಸಂಸದರನ್ನು ಗೆಲ್ಲಿಸಿಕೊಳ್ಳುವಲ್ಲಿ ನರೆವಾದರೂ ಆಶ್ಚರ್ಯ ಏನಿಲ್ಲ.

ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದ ಎಡ ಪಕ್ಷಗಳು ಲೋಕಸಭೆ ಚುನಾವಣೆ ಗೆ ಸ್ಪರ್ಧಿಸಬಾರದೆಂಬ ಬೇಡಿಕೆಯನ್ನು ರಾಹುಲ್ ಗಾಂಧಿಯವರ ಮುಂದಿಟ್ಟಿವೆ. ಆದರೆ ಹಾಗಾಗುವ ಸಾಧ್ಯತೆ ಕಡಿಮೆ. ಕರ್ನಾಟಕದಿಂದ ಲೋಕಸಭೆಗೆ ರಾಹುಲ್ ಗಾಂಧಿಯವರನ್ನು ಕಣಕ್ಕಿಳಿಸುವ ಪ್ರಯತ್ನಗಳು ನಡೆದಿವೆ. ಒಂದು ವರದಿ ಪ್ರಕಾರ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ಇವೆ. ಈಗ ಈ ಕ್ಷೇತ್ರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ. ಸುರೇಶ್ ಪ್ರತಿನಿಧಿಸುತ್ತಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳೂ ಇವೆ. ಕರ್ನಾಟಕದ ಮಟ್ಟಿಗೆ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಎಂಬ ಎರಡು ಅಧಿಕಾರ ಕೇಂದ್ರಗಳ ನಡುವೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಹಮತ ಮೂಡಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಈ ಇಬ್ಬರು ನಾಯಕರ ನಡುವೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ ನಡೆದೇ ಇದೆ. ಈ ವಿಚಾರ ಖರ್ಗೆಯವರಿಗೂ ಗೊತ್ತು.  ಅಭ್ಯರ್ಥಿಗಳ ಆಯ್ಕೆಯಲ್ಲಿ ತುಸು ಏರುಪೇರಾದರೂ ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿ ಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಿಗಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆ ಅವರಿಗೆ ಒಂದು ದೊಡ್ಡ ಸವಾಲೆ ಎಂಬುದರಲ್ಲಿ ಅನುಮಾನವೇ ಇಲ್ಲ. ಉತ್ತರ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ  ಮಾಯಾವತಿಯವರಿಗೆ ಪರ್ಯಾಯವಾಗಿ ಖರ್ಗೆಯವರನ್ನು ದಲಿತ ಸಮುದಾಯದ ನಾಯಕರಾಗಿ ಬಿಂಬಿಸಲು ಪ್ರಯತ್ನಿಸುವ ಮೂಲಕ ಕಾಂಗ್ರೆಸ್ ಪಕ್ಷ ಉತ್ತರದ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ  ಮತಗಳ ಮೇಲೆ ಕಣ್ಣಿಟ್ಟಿದೆ. ಮಾಯಾವತಿಯವರನ್ನು ದುರ್ಬಲಗೊಳಿಸಿದರೆ ಅದರ ಲಾಭ ಕಾಂಗ್ರೆಸ್ ಗೆ ಆಗಲಿದೆ ಎಂಬುದು ಒಂದು ಲೆಕ್ಕಾಚಾರ. 

ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷದ ನಾಯಕರಾಗಿ ಅತ್ಯಂತ ಜನಪ್ರಿಯತೆ ಪಡೆದಿದ್ದಾರೆ. ಹಲವು ಸಂದರ್ಭಗಳಲ್ಲಿ ಮೋದಿ ಸರ್ಕಾರ ಅವರಿಂದ ಇಕ್ಕಟ್ಟಿಗೆ ಸಿಕ್ಕಿ ಉತ್ತರ ಕೊಡಲಾಗದೇ ಸಂಸತ್ತಿನಲ್ಲಿ ಪರದಾಡಿದ್ದೂ ಇದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಸದನದ ಒಳಗೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲವು ಯುವಕರು ನಡೆಸಿದ ದಾಳಿ ಪ್ರಕರಣ ಸರ್ಕಾರದ ಭದ್ರತಾ ವೈಫಲ್ಯಗಳನ್ನು ಪ್ರದರ್ಶಿಸಿದೆ. ಸಂಸತ್ತಿನ ಭದ್ರತೆ ಕಾಪಾಡಲು ಆಗದ ಚೌಕೀದಾರ ದೇಶವನ್ನು ರಕ್ಷಿಸಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಎತ್ತುವ ಮೂಲಕ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ಹೊಣೆಗೇಡಿತನವನ್ನು ಬಯಲಿಗೆಳೆದಿದೆ. ಸದನದ ಭದ್ರತಾ ವೈಫಲ್ಯ ಕುರಿತಂತೆ ಹೇಳೊಕೆ ನೀಡಿ ಜವಾಬ್ದಾರಿ ಮೆರೆಯಬೇಕಿದ್ದ ಕೇಂದ್ರದ ಗೃಹ ಸಚಿವರು, ಪ್ರಧಾನಿ ಹಾಗೆ ಮಾಡದೇ ಪ್ರತಿ ಪಕ್ಷಗಳನ್ನು ಸದನದಿಂದ ಹೊರ ಹಾಕುವ ಮೂಲಕ ಸರ್ವಾಧಿಕಾರಿ ದೋರಣೆ ಮೆರೆದಿರುವುದರ ಬಗ್ಗೆ ಇಡೀ ದೇಶದಲ್ಲಿ ಪ್ರಶ್ನೆಗಳು ಎದ್ದಿವೆ. ಸಹಜವಾಗೇ ಈ ವೈಫಲ್ಯಗಳನ್ನು ಮರೆಮಚಾಲು ಕೇಂದ್ರ ಸರ್ಕಾರ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದಿದೆ.

ಐದು ದಶಕಗಳ ರಾಜಕಾರಣದ ಅವಧಿಯಲ್ಲಿ ಇಂದಿರಾ ಕುಟುಂಬಕ್ಕೆ ನಿಷ್ಠರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ವಿವಾದಗಳಿಂದ ದೂರ. ತಮಗೆ ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ಸಿಕ್ಕಬೇಕಾಗಿದ್ದ ಮುಖ್ಯಮಂತ್ರಿ ಪದವಿ ಸ್ವಪಕ್ಷೀಯರ ರಾಜಕೀಯ ಪಿತೂರಿಗಳಿಂದ ತಪ್ಪಿ ಹೋದಾಗಲೂ ಅವರು ಸಿಟ್ಟಿಗೆದ್ದು ಬಂಡಾಯ ಎದ್ದವರಲ್ಲ. ರಾಜಕಾರಣದ ಹೊರತಾಗಿಯೂ ಅವರನ್ನು ರಾಜ್ಯದಲ್ಲಿ ಇಷ್ಟ ಪಡುವ ಮುಖಂಡರು, ಬೆಂಬಲಿಗರ ಸಂಖ್ಯೆ ದೊಡ್ಡದು. ಅದಕ್ಕೆ ಜಾತಿಗಳ ನಿರ್ಬಂಧ ಇಲ್ಲ. ಈ ಕಾರಣಕ್ಕಾಗೇ ಅವರು ತಮ್ಮನ್ನು ದಲಿತ ನಾಯಕ ಎಂದು ಬಿಂಬಿಸಿಕೊಳ್ಳಲು ತಯಾರಿಲ್ಲ. ಹಾಗೆ ಯಾರಾದರೂ ಹೇಳಿದರೆ ಸಿಟ್ಟಿಗೇಳುತ್ತಾರೆ. ಒಬ್ಬ ರಾಜಕೀಯ ನಾಯಕ ಎಲ್ಲ ವರ್ಗಗಳ ಪ್ರತಿನಿಧಿಯಾಗಿ ರೂಪುಗೊಳ್ಳಬೇಕೆಂಬ ಸಿದ್ಧಾಂತವೇ ಅವರನ್ನು ರಾಷ್ಟ್ರ ರಾಜಕಾರಣದ ಮುಂಚೂಣಿಗೆ ತಂದು ನಿಲ್ಲಿಸಿದೆ. 

2024ರ ಲೋಕಸಭಾ ಚುನಾವಣೆ ನಿಶ್ಚಿತವಾಗಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನ ಜನಪ್ರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ನಡುವಿನ ನೇರ ಸಮರವಾಗಿ ರೂಪುಗೊಳ್ಳಲಿದೆ. ಈ ಸಮರದಲ್ಲಿ ಇಂಡಿಯಾ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗಳಿಸಿದ ನಂತರವೂ ಪಿತೂರಿಗಳು ನಡೆಯದಿದ್ದರೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗುವ ಸಾಧ್ಯತೆಗಳಿವೆ. ಆದರೆ ಆ ಹಾದಿ ಸುಲಭದ್ದೇನೂ ಅಲ್ಲ. ಮೈತ್ರಿಕೂಟದಲ್ಲೇ ವಿಭಿನ್ನ ಮನೋಸ್ಥಿತಿಯ ಮಹತ್ವಾಕಾಂಕ್ಷಿ  ನಾಯಕರು ಇದ್ದಾರೆ. ಜತೆಗೇ ಮೂರನೇ ಬಾರಿಯೂ ಪ್ರಧಾನಿ ಆಗ ಬಯಸಿರುವ ನರೇಂದ್ರ ಮೋದಿಯವರನ್ನು ಎದುರಿಸಬೇಕಿದೆ.  

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com