ಅಂಗಾಂಗ ದಾನ (ಕುಶಲವೇ ಕ್ಷೇಮವೇ)

ನಾವು ಪತ್ರಿಕೆಗಳಲ್ಲಿ ‘ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ಆರು ಮಂದಿಗೆ ಜೋಡಣೆ’ ಮತ್ತು ‘ಮೃತ ಯುವತಿಯಿಂದ ಎಂಟು ಮಂದಿಗೆ ಅಂಗ ದಾನ’ ಎಂಬ ಸುದ್ದಿಗಳನ್ನು ಆಗಾಗ ಓದುತ್ತಲೇ ಇರುತ್ತೇವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾವು ಪತ್ರಿಕೆಗಳಲ್ಲಿ ‘ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ಆರು ಮಂದಿಗೆ ಜೋಡಣೆ’ ಮತ್ತು ‘ಮೃತ ಯುವತಿಯಿಂದ ಎಂಟು ಮಂದಿಗೆ ಅಂಗ ದಾನ’ ಎಂಬ ಸುದ್ದಿಗಳನ್ನು ಆಗಾಗ ಓದುತ್ತಲೇ ಇರುತ್ತೇವೆ. ಅಪಘಾತ ಮತ್ತಿತರ ಕಾರಣಗಳಿಂದ ಸತ್ತವರ ಮತ್ತು ಮೆದುಳು ನಿಷ್ಕ್ರಿಯಗೊಂಡ (ಬ್ರೈನ್ ಡೆಡ್) ವ್ಯಕ್ತಿಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಅಂಗಾಂಗಗಳನ್ನು ಅವರ ಕುಟುಂಬದವರ ಒಪ್ಪಿಗೆಯೊಂದಿಗೆ ಅವುಗಳ ಆವಶ್ಯಕತೆ ಇರುವವರಿಗೆ ಜೋಡಿಸುವುದು ಇಂದು ಸಾಕಷ್ಟು ಚಾಲ್ತಿಯಲ್ಲಿದೆ. ಇದರಿಂದ ಬೇರೆಯವರ ಬಾಳಿನಲ್ಲಿ ಬೆಳಕು ಮೂಡುತ್ತದೆ. ಈ ದೃಷ್ಟಿಯಿಂದ ಅಂಗ/ಅಂಗಾಂಗ ದಾನಕ್ಕೆ ಇಂದು ಬಹಳ ಮಹತ್ವವಿದೆ. ಆದ್ದರಿಂದಲೇ ಪ್ರತಿ ವರ್ಷ ಆಗಸ್ಟ್ 13ರಂದು ‘ವಿಶ್ವ ಅಂಗ ದಾನ ದಿನ’ ಎಂದೇ ಆಚರಿಸಿಕೊಂಡು ಬರಲಾಗಿದೆ.

ಅಂಗಾಂಗ ದಾನ ಎಂದರೇನು?

ಅಂಗ/ಅಂಗಾಂಗ ದಾನ ಒಂದು ಅಥವಾ ಹೆಚ್ಚಿನ ಅಂಗಗಳನ್ನು (ಅಥವಾ ಅದರ ಭಾಗಗಳನ್ನು) ಪರಿಹಾರವಿಲ್ಲದೆ, ಬೇರೆಯವರಿಗೆ ಕಸಿ ಮಾಡಲು ನೀಡುವ ಕ್ರಿಯೆ. ಕರುಳುಗಳು, ಮೂತ್ರಪಿಂಡಗಳು (ಕಿಡ್ನಿ), ಯಕೃತ್ತು, ಶ್ವಾಸಕೋಶಗಳು ಮತ್ತು ಮೇದೋಜೀರಕ ಗ್ರಂಥಿಯ (ಉದಾಹರಣೆಗೆ ಲ್ಯಾಂಗರ್‌ಹಾನ್ಸ್ ದ್ವೀಪಗಳು) ದಾನ ಮತ್ತು ಕಸಿ ಮಾಡಲು ಸಾಧ್ಯ.

ಅಂಗಾಂಗ ದಾನದ ಪ್ರಕ್ರಿಯೆ ಹೇಗೆ?

ದಾನ ಮಾಡಿದ ಅಂಗಗಳು ಸತ್ತ ದಾನಿಯಿಂದ ಅಥವಾ ಇನ್ನೂ ಜೀವಂತ ದಾನಿಯಿಂದ ಬರುತ್ತವೆ. ಜೀವಂತ ದಾನಿಗಳು ಮೂತ್ರಪಿಂಡ, ಕರುಳಿನ ಭಾಗ, ಯಕೃತ್ತಿನ ಭಾಗ, ಶ್ವಾಸಕೋಶದ ಭಾಗ ಅಥವಾ ಮೇದೋಜ್ಜೀರಕ ಗ್ರಂಥಿಯ ಭಾಗವನ್ನು ದಾನ ಮಾಡಬಹುದು. ಮೃತ ದಾನಿಗಳನ್ನು (1) ಮೆದುಳಿನ ಸಾವಿನ ನಂತರ ದಾನ ಅಥವಾ (2) ಹೃದಯ ಸಾವಿನ ನಂತರ ದಾನ ಮಾಡುವವರು ಎಂದು ವರ್ಗೀಕರಿಸಲಾಗಿದೆ. ಕೆಲವರು ಸಾವಿನ ನಂತರ ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿ ಎಂದು ಉಯಿಲು ಮಾಡಿರುತ್ತಾರೆ ಅಥವಾ ಕುಟುಂಬಸ್ಥರೇ ಮೃತರ ದೇಹವನ್ನು ವೈದ್ಯಕೀಯ ಸಂಸ್ಥೆಗಳಿಗೆ ದಾನ ಮಾಡುತ್ತಾರೆ.

ಎಲ್ಲಾ ವಯಸ್ಸಿನ ಜನರು ತಮ್ಮನ್ನು ಸಂಭಾವ್ಯ ಅಂಗ ದಾನಿಗಳು ಎಂದೇ ಪರಿಗಣಿಸಬಹುದು. ಆದರೆ ಎಚ್ಐವಿ, ಕ್ಯಾನ್ಸರ್ ಮತ್ತು ಸೋಂಕುಗಳಿದ್ದಾಗ ಎಚ್ಚರವಾಗಿರಬೇಕಷ್ಟೇ. ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ಸೂಕ್ತ ಪರೀಕ್ಷೆ ಮಾಡಿಯೇ ಅಂಗದಾನ ಪ್ರಕ್ರಿಯೆ ಆರಂಭವಾಗುತ್ತದೆ.

ಅಂಗಾಂಗ ದಾನ ಕೇವಲ ವೈದ್ಯಕೀಯ ಪ್ರಕ್ರಿಯೆ ಅಲ್ಲ. ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡಾಗ ಅವರ ಕುಟುಂಬ ತೀವ್ರ ಆಘಾತದಲ್ಲಿರುತ್ತದೆ. ಇವರನ್ನು ಮನ ಒಲಿಸಿ ಅಂಗಾಂಗ ದಾನಕ್ಕೆ ಒಪ್ಪಿಸುವುದು ಸೂಕ್ಷ್ಮ ಸಂಗತಿ. ಅಲ್ಲದೆ, ಅಂಗಾಂಗಗಳನ್ನು ದೇಹದಿಂದ ಹೊರತೆಗೆಯುವುದು, ಸ್ಥಳಾಂತರ, ಕಸಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಬೇಗ ಆಗಬೇಕು. ಆದರೆ ಇದಕ್ಕೆ ಕುಟುಂಬದವರು, ವೈದ್ಯರು, ಆರೋಗ್ಯ ಸಂಸ್ಥೆ, ಸ್ಥಳಾಂತರಕ್ಕೆ ನೆರವಾಗುವ ಟ್ರಾಫಿಕ್ ಪೊಲೀಸ್ (ಕೆಲವೊಮ್ಮೆ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಟ್ರಾಫಿಕ್ ಪೋಲಿಸರ ಸಹಾಯದಿಂದ ಗೋಲ್ಡನ್ ಕಾರಿಡಾರ್ ಮೂಲಕ ಕಸಿ ಮಾಡಲು ಹೃದಯ ತಂದದ್ದೂ ಇದೆ ಮತ್ತು ಕೆಲವೊಮ್ಮೆ ಏರ್ ಲಿಫ್ಟ್ ಕೂಡ ಮಾಡಲಾಗುತ್ತದೆ). ಹೀಗೆ ಅಂಗದಾನಕ್ಕೆ ಎಲ್ಲರ ಸಹಕಾರ ಅಗತ್ಯ. ಹೀಗಾಗಿ ಅಂಗಾಂಗ ದಾನ ಎಂಬುದು ಸಾಮೂಹಿಕ ಕಾರ್ಯ.

ಅಂಗ ದಾನದ ಬಗ್ಗೆ ಅರಿವಿನ ಕೊರತೆ

ಭಾರತದಲ್ಲಿ ಅಂಗದಾನದ ಬೇಡಿಕೆ ಹೆಚ್ಚಿದೆ. ಆದರೆ ಅಂಗಗಳ ಪೂರೈಕೆ ಮಾತ್ರ ತೀರಾ ಕಡಿಮೆಯಾಗಿದೆ.. ಇದರ ಪರಿಣಾಮವಾಗಿ ಅಗತ್ಯವಿರುವ ಅಂಗಾಂಗ ಸೂಕ್ತ ಸಮಯಕ್ಕೆ ಸಿಗದಿರುವುದು ಅನೇಕ ರೋಗಿಗಳು ಸಾವಿಗೆ ಕಾರಣವಾಗುತ್ತದೆ. ಜೊತೆಗೆ ಅಂಗಾಂಗ ದಾನದ ಬಗ್ಗೆ ಅರಿವಿನ ಕೊರತೆ ಇದೆ. ತಪ್ಪು ಕಲ್ಪನೆಗಳು ಮತ್ತು ಮೂಲಸೌಕರ್ಯ ಸಮಸ್ಯೆಗಳು ಸೇರಿದಂತೆ ಅಂಗಾಂಗ ದಾನಿಗಳ ಕೊರತೆಗೆ ಕಾರಣವಾಗುವಹಲವು ಅಂಶಗಳನ್ನು ವೈದ್ಯರು ಮತ್ತು ಕಸಿ ತಜ್ಞರು ಗುರುತಿಸಿದ್ದಾರೆ.

ರಸ್ತೆ ಸಾರಿಗೆ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಸುಮಾರು 1,50,000 ಜನ ಸಾಯುತ್ತಾರೆ. ಪ್ರತಿ ದಿನ ಸರಾಸರಿ 1,000ಕ್ಕೂ ಹೆಚ್ಚು ಘರ್ಷಣೆಗಳಿಂದ ಹಾಗೂ 400ಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಮೃತರಾಗುತ್ತಿದ್ದಾರೆ. ಈ ಮೃತರ ಹೃದಯ, ಲಿವರ್, ಕಿಡ್ನಿ, ಕರುಳುಗಳು, ಕಣ್ಣು, ಶ್ವಾಸಕೋಶ ಹಾಗೂ ಮೇದೋಜೀರಕ ಗ್ರಂಥಿಯನ್ನು ದಾನ ಮಾಡಬಹುದಾಗಿದೆ. ಅಗತ್ಯವಿರುವ ರೋಗಿಗಳಿಗೆ ಈ ಅಂಗಾಂಗಳನ್ನು ನೀಡಿದರೆ ಅವರ ಜೀವ ಉಳಿಸಬಹುದಾಗಿದೆ.

ನಮ್ಮ ರಾಜ್ಯದಲ್ಲಿ ಅಂಗಾಂಗ ದಾನದ ಎಲ್ಲಾ ಚಟುವಟಿಕೆ ನಿರ್ವಹಣೆ ಮಾಡಲು “ಜೀವಸಾರ್ಥಕತೆ’ ಸೊಸೈಟಿ ಆರಂಭಿಸಲಾಗಿತ್ತು. ಈ ಸೊಸೈಟಿ ಈಗ “ಸೊಟ್ಟೊ ಕರ್ನಾಟಕ’ (State Organ and Tissue Transplant Organization-SOTTO) ಎಂದು ಬದಲಾಗಿದೆ. ಮಾನವ ಅಂಗಾಂಗಗಳ ಕಸಿ ಕಾಯ್ದೆ-1994ರ ಸಮರ್ಪಕ ಅನುಷ್ಠಾನದ ಹೊಣೆ ಇದರ ಮೇಲಿದೆ. ಈ ಸಂಸ್ಥೆ ಅಂಗಾಂಗ ದಾನದ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ.

ಈವರೆಗೆ ಸರಕಾರ ಕೈಗೊಂಡ ಜಾಗೃತಿ ಕಾರ್ಯಗಳಿಂದಾಗಿ ಹಿಂದೆಗಿಂತಲೂ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಾಗಿದೆ. 2017ರಿಂದ ಆರಂಭವಾಗಿ 2022ರ ಮಧ್ಯಭಾಗದವರೆಗೆ 448 ಪ್ರಕರಣಗಳಲ್ಲಿ ಅಂಗಾಂಗ ದಾನಗಳು ನಡೆದಿವೆ. ಇದರಲ್ಲಿ 662 ಕಿಡ್ನಿ, 374 ಯಕೃತ್ತು, 133 ಹೃದಯ ದಾನಗಳು ಸೇರಿವೆ.

ಅಂಗಾಂಗ ದಾನ ಮಹಾದಾನ

ಒಬ್ಬ ವ್ಯಕ್ತಿಯು ತನ್ನ ಪ್ರಮುಖ ಅಂಗಗಳನ್ನು ದಾನ ಮಾಡಿದರೆ ಕನಿಷ್ಠ ಎಂಟು ಜೀವಗಳನ್ನು ಉಳಿಸಬಹುದು. ಅಂಗಗಳು ಆರೋಗ್ಯಕರವಾಗಿದ್ದರೆ ಹೃದಯ, ಯಕೃತ್ತು, ಮೂತ್ರಪಿಂಡಗಳು (2), ಮೇದೋಜೀರಕ ಗ್ರಂಥಿ, ಶ್ವಾಸಕೋಶಗಳು (2) ಮತ್ತು ಕರುಳುಗಳನ್ನು ದಾನ ಮಾಡಬಹುದು. ಆದ್ದರಿಂದಲೇ ಇಂದು ಅಂಗಾಂಗ ದಾನವನ್ನು ಮಹಾದಾನವೆಂದು ಕರೆಯಲಾಗಿದೆ.

ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯವಿರುತ್ತದೆ. ಆದರೆ ದಾನಿಗಳ ಕೊರತೆಯಿಂದ ಯಾವುದನ್ನೂ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಈ ವಿಷಯವನ್ನು ಎಲ್ಲರೂ ಅರಿತು ಅಂಗಾಂಗಗಳು ಬೇಕಾದವರಿಗೆ ದೊರೆಯುವಂತಾದರೆ ಬದುಕು ನಿಜಕ್ಕೂ ಸಾರ್ಥಕ. ಅಲ್ಲವೇ?

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com