ಜಾಗತಿಕವಾಗಿ ವೇಗವಾಗಿ ಮರೆಯಾಗುತ್ತಿರುವ ಪ್ರಭೇದ ಯಾವುದು ಗೊತ್ತಾ? (ಹಣಕ್ಲಾಸು)

ಹಣಕ್ಲಾಸು-388-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತ ಸಾಗುತ್ತಿದೆ. ಹಿಂದೆಲ್ಲಾ ಒಂದು ದಶಕದಲ್ಲಿ ಆಗುತ್ತಿದ್ದ ಬದಲಾವಣೆಗಳು ಇಂದು ವರ್ಷದಲ್ಲಿ ಹೆಚ್ಚೆಂದರೆ ಎರಡು ವರ್ಷದಲ್ಲಿ ಆಗುತ್ತಿದೆ. ತಂತ್ರಜ್ಞಾನ ಎನ್ನುವುದು ಇಂದು ಜಗತ್ತನ್ನು ಆವರಿಸಿಕೊಂಡು ಬಿಟ್ಟಿದೆ. ಮುಂಬರುವ ವರ್ಷಗಳಲ್ಲಿ ಜಗತ್ತನ್ನು ಆಳುವುದು, ನಿಯಂತ್ರಣದಲ್ಲಿಡುವುದು ತಂತಜ್ಞಾನ. ಈ ಮಾತುಗಳನ್ನು ಕಳೆದ ಐದಾರು ವರ್ಷದಲ್ಲಿ ನಾನು 10 ಬಾರಿ ಉಚ್ಚರಿಸಿದ್ದೇನೆ, ಬರೆದಿದ್ದೇನೆ, ಆದರೂ ಇದನ್ನು ಎಷ್ಟು ಬಾರಿ ಹೇಳಿದರೂ ಕಡಿಮೆ ಎನ್ನಿಸುತ್ತದೆ. ಏಕೆಂದರೆ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ಜನ ಸಾಮಾನ್ಯ ಅನುಭವಿಸುತ್ತಿದ್ದಾನೆ ಆದರೆ ಅದರ ಫಲಿತಾಂಶ, ಅಥವಾ ಔಟ್ ಕಮ್ ಬಗ್ಗೆ ಆತನಿಗೆ ಅರಿವಿಲ್ಲ. ಇವೆಲ್ಲವೂ ಆತನನ್ನು ನಿಯಂತ್ರಿಸಲು ಹಣೆದಿರುವ ಬಲೆ ಎನ್ನುವುದು ಆತನಿಗೆ ಅರಿವಾಗುತ್ತಿಲ್ಲ. ನೀವೇ ಗಮನಿಸಿ ನೋಡಿ ಜಗತ್ತಿನ ಒಂದು ವರ್ಗ ಬದುಕಿನ ಆಟವನ್ನು ವೇಗವಾಗಿ ತಮ್ಮಿಚ್ಚೆಯ ದಾರಿಯಲ್ಲಿ ಒಯ್ಯುತ್ತಿದ್ದಾರೆ. ಜನ ಸಾಮಾನ್ಯನಿಗೆ ಅದರ ಹಿಂದೆ ಹೋಗುವುದು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಈ ಆಟದಲ್ಲಿ ಅಲ್ಪಸ್ವಲ್ಪ ತಿಳುವಳಿಕೆ ಉಳ್ಳವರು ಕೂಡ ಹೇಗೋ ಬದುಕುತ್ತಾರೆ, ಉಳಿದವರ ಪಾಡೇನು?

ಕಳೆದ ಎರಡು ದಶಕದಲ್ಲಿ ಗಣನೀಯವಾಗಿ ಮನೆಯಿಲ್ಲದೆ ರಸ್ತೆಯಲ್ಲಿ ವಾಸಿಸುವವರ ಸಂಖ್ಯೆಯಲ್ಲಿ ಆಗಿರುವ ಏರಿಕೆ ಇದಕ್ಕೊಂದು ಉದಾಹರಣೆ. ಇಲ್ಲಿ ತಪ್ಪು ಮಾಡಲು ಅವಕಾಶಗಳಿಲ್ಲ. ಅವರು ಹಾಕಿರುವ ಗಾಣಕ್ಕೆ ತಲೆ ಕೊಟ್ಟು ದುಡಿಯುತ್ತಿದ್ದರೆ ಬದುಕು ಹೇಗೋ ಸಾಗುತ್ತದೆ. ಇಲ್ಲ ನನ್ನಿಚ್ಛೆಯಂತೆ ಬದುಕುತ್ತೇನೆ ಎಂದು ಏನಾದರೂ ಹೊಸತನ್ನು ಮಾಡಲು ಹೋದರೆ ಅಲ್ಲಿಗೆ ಬದುಕು ಮೂರಾಬಟ್ಟೆ! ಇದೇಕಿಷ್ಟು ಋಣಾತ್ಮಕ ಮಾತು? ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ, ಅದು ಸಹಜ. ಆದರೆ ನಾನು ಬರೆದಿರುವ ಸಾಲುಗಳು ಋಣಾತ್ಮಕವಲ್ಲ. ಪೇಸಿಮಿಸ್ಟಿಕ್, ಆಪ್ಟಿಮಿಸ್ಟಿಕ್ ತರಹ ರಿಯಲಿಸ್ಟಿಕ್ ಎನ್ನುವುದು ಕೂಡ ಇದೆ. ಇಲ್ಲಿ ಹೇಳಿರುವುದು ರಿಯಲಿಸ್ಟಿಕ್ ಮಾತುಗಳು. ಅಭಿವೃದ್ಧಿಯ ಹೆಸರಿನಲ್ಲಿ ಜನರ ಬದುಕು ಇನ್ನಷ್ಟು ಹಸನಾಗಬೇಕು, ಆದರೆ ಅದಾಗುತ್ತಿಲ್ಲ. ಬದಲಿಗೆ ನಿನ್ನೆಯ ಜೀವನವನ್ನು ಇಂದು ನಡೆಸಲು ತಿಣುಕಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ಜಾಗತಿಕ ಸಮಸ್ಯೆ. ಕಳೆದ ಒಂದು ತಿಂಗಳಲ್ಲಿ ಯೂರೋಪು ಮತ್ತು ದುಬೈ ದೇಶಗಳನ್ನು ಭೇಟಿ ನೀಡಿ ಬಂದೆ, ಅಲ್ಲೆಲ್ಲಾ ಕಂಡದ್ದು ಇದೇ. ದುಬೈ ಮತ್ತು ಯೂರೋಪಿನ ದೇಶಗಳನ್ನು ಕಳೆದ 23 ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ. ದಶಕಗಳ ಹಿಂದಿನ ಜೀವನ ಇಂದಿಲ್ಲ. ಹಿಂದಿದ್ದ ಆ ಸುಖ, ಶಾಂತಿ, ನೆಮ್ಮದಿ ಮರೆಯಾಗಿದೆ. ಜಾಗತಿಕ ವಿತ್ತ ಜಗತ್ತು ಟ್ರಿಲಿಯನ್ ಮೇಲೆ ಟ್ರಿಲಿಯನ್ ಆರ್ಥಿಕತೆಯನ್ನು ದಾಖಲಿಸುತ್ತ ಮುಂದೆ ಸಾಗುತ್ತಿದೆ. ಆದರೆ ಈ ಅಬ್ಬರದಲ್ಲಿ ಸದ್ದಿಲ್ಲದೇ ಮಧ್ಯಮ ವರ್ಗ ಎನ್ನುವ ಒಂದು ಪ್ರಭೇದ ಮರೆಯಾಗುತ್ತಿದೆ. ಇದು ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಆಗುತ್ತಿದೆ. ಇಂದು ಅತ್ಯಂತ ವೇಗವಾಗಿ ಮರೆಯಾಗುತ್ತಿರುವ ಪ್ರಭೇದ ಯಾವುದು ಗೊತ್ತಾ? ಎನ್ನುವ ಒಂದು ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದೆ. ಅದನ್ನು ಸ್ವೀಕರಿಸುವರೇ ಇರಲಿಲ್ಲ.

ಅದೇ ಒಂದು ಜೋಕ್ ಬರೆದು ಹಾಕಿದರೆ ಅದಕ್ಕೆ ನೂರಾರು ಪ್ರತಿಕ್ರಿಯೆಗಳು ಬರುತ್ತವೆ. ಹೀಗೇಕೆ? ಇದಕ್ಕೂ ಉತ್ತರ ಸರಳ. ನಮ್ಮ ಅರಿವಿಗೆ ಬರದೇ ಹೋದರೆ, ಅಂದರೆ ಯಾವುದೋ ಒಂದು ವಿಷಯ ಸಮಸ್ಯೆ ಎಂದು ಅನ್ನಿಸದಿದ್ದರೆ? ಇಂದು ಆಗುತ್ತಿರುವುದು ಕೂಡ ಅದೇ, ಹಣದುಬ್ಬರ ಯಾವ ಮಟ್ಟದಲ್ಲಿದೆ ಎಂದರೆ ಸದ್ದಿಲ್ಲದೇ ಮಧ್ಯಮವರ್ಗ ಎನ್ನುವ ಒಂದು ವರ್ಗ ಕುಸಿತ ಕಾಣುತ್ತಿದೆ. ಆಶ್ಚರ್ಯವೆಂದರೆ ಆ ವರ್ಗಕ್ಕೆ ಏನೋ ಆಗುತ್ತಿದೆ ಎನ್ನುವುದು ತಿಳಿಯುತ್ತಿದೆ ಆದರೆ ನಿಖರವಾಗಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಏನಿಲ್ಲ, ನಿಮ್ಮ ಖರೀದಿ ಶಕ್ತಿ ಕುಗ್ಗುತ್ತಿದೆ. ಎಲ್ಲೆಡೆ ನಾನು ಮಧ್ಯಮವರ್ಗಕ್ಕೆ ಸೇರಿದವನು ಎಂದು ಹೇಳಿಕೊಂಡು ತಿರುಗುವ ನಾವೆಲ್ಲರೂ ಅಲ್ಲಿಂದ ಕುಸಿತ ಕಂಡು ಬಡವರಾಗಿದ್ದೇವೆ. ಈ ಆರ್ಥಿಕ ವ್ಯವಸ್ಥೆಯ ವಿಪರ್ಯಾಸ ನೋಡಿ! ಉಳ್ಳವರು ಇನ್ನಷ್ಟು ಗಳಿಸುತ್ತಿದ್ದಾರೆ, ಸಮಾಜದ ಇನ್ನೊಂದು ವರ್ಗದ ಜನರ ಆದಾಯದ ಒಂದಂಶವನ್ನು ಅವರು ಕಸಿಯುತ್ತಿದ್ದಾರೆ. ಹೀಗಾಗಿ ಹಿಂದಿನಂತೆ ಸಮಾಜದಲ್ಲಿ ಹೆಚ್ಚು ಆರ್ಥಿಕ ವರ್ಗಗಳಿಲ್ಲ! ಇನ್ನೊಂದೈದು ವರ್ಷದಲ್ಲಿ ಉಳಿಯುವುದು ಎರಡೇ ಪ್ರಭೇದ, ಬಡವ-ಶ್ರೀಮಂತ.

ಇಂದಿಗೆ ಜಾಗತಿಕ ವಿತ್ತ ಜಗತ್ತು ಸಾಗುತ್ತಿರುವ ರೀತಿ ಸರಿಯಿಲ್ಲ. ಅದನ್ನು ಬದಲಿಸದಿದ್ದರೆ ಮುಂದಿನ ಐದು ವರ್ಷದಲ್ಲಿ ಜಗತ್ತಿನಲ್ಲಿ ಉಳಿಯುವುದು ಬಡವ-ಶ್ರೀಮಂತ ಎನ್ನುವ ವರ್ಗಗಳು ಮಾತ್ರ. ಆದರೆ ಆಶ್ಚರ್ಯವೆಂದರೆ ನಾವು ಇದಕ್ಕೆ ಸಂಘಟಿತರಾಗುವುದಿಲ್ಲ, ಇದನ್ನು ವಿರೋಧಿಸುವುದಿಲ್ಲ! ಆದರೆ ಕ್ಷಣದಲ್ಲಿ ಜಾತಿ, ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ಹೊಡೆದಾಟಕ್ಕೆ ಸಿದ್ಧವಾಗುತ್ತೇವೆ. ಜಗತ್ತಿನ ಯಾವುದೇ ದೇಶವನ್ನು ನೀವು ಗಮನಿಸಿ ನೋಡಿ ಅಲ್ಲೆಲ್ಲಾ ಕೆಳಗೆ ಬರೆದಿರುವ ಬದಲಾವಣೆಗಳಾಗಿವೆ, ಅದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗಿದೆ.

  1. ಸಣ್ಣ ಪುಟ್ಟ ವ್ಯಾಪಾರಿಗಳು ಮಾಯವಾಗುತ್ತಿದ್ದಾರೆ: ನೀವೇ ಗಮನಿಸಿ ನೋಡಿ ಸಣ್ಣ ಪುಟ್ಟ ಊರುಗಳಲ್ಲಿ ಕೂಡ ಸೂಪರ್ ಮಾರ್ಕೆಟ್ ಚೈನ್ಗಳು ರಾರಾಜಿಸುತ್ತಿವೆ. ಜನ ಹಿಂದಿನಿಂದ ಇದ್ದ ಅಂಗಡಿಗೆ ಹೋಗಲು ಬಯಸುತ್ತಿಲ್ಲ. ಹತ್ತಾರು ವರ್ಷದಿಂದ ಸೊಪ್ಪು, ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ಹಳ್ಳಿಯ ಬಡ ವ್ಯಾಪಾರಿಯ ವ್ಯಾಪಾರವನ್ನು ಕೂಡ ದೊಡ್ಡ ಬ್ರ್ಯಾಂಡ್ಗಳು ಕಸಿಯುತ್ತಿವೆ. ಇದು ಜಾಗತಿಕ. ಇದು ಕೇವಲ ತರಕಾರಿ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಬದುಕಿನ ಎಲ್ಲಾ ಮಜಲುಗಳಲ್ಲಿ ಇದು ನಿಜ. ಮನೆಪಾಠದ ಉದಾಹರೆಯನ್ನೇ ತೆಗೆದುಕೊಳ್ಳಿ, ಅಲ್ಲಿಗೂ ಬ್ರಾಂಡ್ ದಾಳಿಯಿಟ್ಟಿದೆ. ಹೋಟೆಲ್, ಪಾದರಕ್ಷೆ, ಎಲೆಕ್ಟ್ರಾನಿಕ್ಸ್, ಹೀಗೆ ಎಲ್ಲೆಡೆಯೂ ದೊಡ್ಡ ಕಾರ್ಪೊರೇಟ್ ಹೌಸ್ಗಳು ಬಂದಿವೆ. ಇದರಿಂದ ಕೇವಲ ಒಂದು ಸಂಸ್ಥೆ ಬೆಳೆಯುತ್ತದೆ. ಸಾವಿರಾರು ವ್ಯಾಪಾರಿಗಳು ಅವನತಿ ಕಾಣುತ್ತಾರೆ.
  2. ಏರುತ್ತಿರುವ ಹಣದುಬ್ಬರ, ಕುಸಿಯುತ್ತಿರುವ ಖರೀದಿ ಶಕ್ತಿ: ಇನ್ನೊಂದು ಜಾಗತಿಕವಾಗಿ ಭಾದಿಸುತ್ತಿರುವ ಸಮಸ್ಯೆಯಿದು. ಹಣದುಬ್ಬರ ಜಗತ್ತಿನಾದ್ಯಂತ ಅತಿ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಆದಾಯ ಏರುತ್ತಿಲ್ಲ. ಹೀಗಾಗಿ ಖರೀದಿ ಶಕ್ತಿ ಗಣನೀಯವಾಗಿ ಕುಸಿತ ಕಂಡಿದೆ. ಯೂರೋಪು ಮತ್ತು ಅಮೆರಿಕಾದಂತಹ ದೇಶದಲ್ಲಿ ಹೆಚ್ಚಿರುವ ಆಹಾರ ಪದಾರ್ಥಗಳ ಬೆಲೆ ಜನರನ್ನು ಸುಡುತ್ತಿದೆ. ಅದು ಅವರ ಗಮನಕ್ಕೆ ಬಂದಿದೆ. ಭಾರತದಲ್ಲಿ ಕೂಡ ಇದರ ಬಿಸಿ ಬಹಳಷ್ಟಿದೆ. ಬಡವನನ್ನು ಪುಕ್ಕಟೆ, ಡಿಸ್ಕೌಂಟ್ ಕಾಪಾಡಿದೆ. ಶ್ರೀಮಂತರಿಗೆ ಬಿಸಿ ತಟ್ಟುವುದಿಲ್ಲ. ಎಲ್ಲಾ ತರಹದ ಪೆಟ್ಟು ಬೀಳುವುದು ಮಾತ್ರ ಮಧ್ಯಮವರ್ಗ ಎನ್ನುವ ಎಲ್ಲವನ್ನು ಸಹಿಸುವ, ಮಾತನಾಡದ ವರ್ಗದ ಮೇಲೆ ಮಾತ್ರ. ಅಚ್ಚರಿಯೆಂದರೆ ಈ ವಿತ್ತ ಜಗತ್ತು ನಡೆಯಲು ಈ ವರ್ಗ ಬೇಕೇಬೇಕು! ವ್ಯವಸ್ಥೆಯನ್ನು ಕಟ್ಟುವವರಿಗೆ ಇದೇಕೆ ತಿಳಿಯುತ್ತಿಲ್ಲ? ಈ ವರ್ಗವೇ ಸಮಾಜದ, ಆರ್ಥಿಕತೆಯ ಬೆನ್ನೆಲುಬು.
  3. ವಿಭಜಿತ ಸಮಾಜ: ಜಗತ್ತಿನ ಯಾವುದೇ ದೇಶವನ್ನು ತೆಗೆದುಕೊಳ್ಳಿ, ಅಲ್ಲೆಲ್ಲಿಯೂ ಯಾವುದರರಲ್ಲೂ ಸಮಾಜದಲ್ಲಿ ಸಹಮತವಿಲ್ಲ. ಯಾವುದೇ ವಿಷಯಕ್ಕೂ 20/25 ಪ್ರತಿಶತ ಒಪ್ಪಿಗೆ ಸಿಗುತ್ತಿಲ್ಲ. ಯೂರೋಪಿನ ದೇಶಗಳಲ್ಲಿ ಇದು ಇನ್ನೂ ಹೆಚ್ಚು. ಜಗತ್ತು ಇಂದಿಗೆ ಛಿದ್ರವಾದ ಕನ್ನಡಿ. ಯಾವ ತುಂಡಿನಲ್ಲೂ, ಎಲ್ಲಾ ತುಂಡಿನಲ್ಲೂ ನಮ್ಮ ಮುಖ ಕಾಣುತ್ತದೆ, ಆದರೆ ಯಾವುದರಲ್ಲೂ ಇಲ್ಲದ ಖಾಲಿತನವೂ ಜೊತೆಯಾಗಿದೆ.
  4. ಎಲ್ಲೆಡೆ ಮನೆಮಾಡಿರುವ ಅನಿಶ್ಚಿತತೆ ಎನ್ನುವ ಭೂತ: ಸಮಾಜದಲ್ಲಿ ಸ್ಥಿರತೆ, ಮನಸ್ಸಿನಲ್ಲಿ ಶಾಂತಿ ನೆಮ್ಮದಿಯಿದ್ದಾಗ ಬದುಕು ಸುಂದರ. ಆದರೆ ಇಂದಿಗೆ ಜಾಗತಿಕವಾಗಿ ಇದನ್ನು ಕದಡಲಾಗಿದೆ. ನಾಳೆಯ ಬಗ್ಗೆ ಭರವಸೆಯನ್ನು ಜನ ಸಾಮಾನ್ಯನಿಂದ ಕಸಿಯಲಾಗಿದೆ. ಅಬ್ಬಾ ಇಂದು ಬದುಕಿದೆ ಎನ್ನುವ ಮಟ್ಟಕ್ಕೆ ಜೀವನವನ್ನು ತರಲಾಗಿದೆ. ಇಂದಿಗೆ 14/16 ತಾಸು ದುಡಿಯದಿದ್ದರೆ ಬದುಕಲು ಸಾಧ್ಯವಿಲ್ಲ ಎನ್ನುವ ವ್ಯಕ್ತಿಯ ಬಳಿ ನಾಳೆಯ ಬಗ್ಗೆ ಚಿಂತೆ ಮಾಡುವಷ್ಟು ಸಮಯವೆಲ್ಲಿದೆ?
  5. ಎಲ್ಲೆಡೆ ಮೊನಾಪಲಿ, ನೆಪೋಟಿಸಂ (nepotism) ತಾಂಡವಾಡುತ್ತಿದೆ: ಉಳ್ಳವರು ತಮ್ಮ ನಡುವಿನ ನೆಟ್ ವರ್ಕ್ನಲ್ಲೆ ತಮ್ಮ ಸಾಮ್ರಾಜ್ಯವನ್ನು ಉಳಿಸಿ ಬೆಳೆಸಿಕೊಳ್ಳುತ್ತಿದ್ದಾರೆ. ಸಾವಿರಕ್ಕೂ ಲಕ್ಷಕ್ಕೊ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಶ್ರಮದಿಂದ, ಬುದ್ದಿವಂತಿಕೆಯಿಂದ, ಚಿಟಿಕೆ ಅದೃಷ್ಟದಿಂದ ಕೂಡ ಮೇಲೇರಿದ ಉದಾಹರೆಣೆಗಳನ್ನು ಬಿಟ್ಟರೆ, ಎಲ್ಲೆಡೆ ಅವರದೇ ಸಾಮ್ರಾಜ್ಯ. ಇಲ್ಲಿ ಯಾರೂ ಇಂಚು ಜಾಗ ಬಿಟ್ಟುಕೊಡುವುದಿಲ್ಲ. ನಮ್ಮ ಜಾಗವನ್ನು ಸೃಷ್ಟಿಕೊಳ್ಳಲು ಕೂಡ ನೂರೆಂಟು ಅಡ್ಡಿ ಆತಂಕಗಳು. ಇಲ್ಲಿ ನಮ್ಮ ಜಾಗ ಸೃಷ್ಟಿಸಿಕೊಳ್ಳಲು ವಿಶೇಷ ಗುಣಗಳ ಅವಶ್ಯಕತೆಯಿದೆ. ಅದೇನೂ ಇಲ್ಲದ ಜನ ಸಾಮಾನ್ಯನನ ಬದುಕುವ ಹಕ್ಕನ್ನು ಅವನಿಗೆ ಗೊತ್ತಿಲ್ಲದೇ ಕಸಿಯಲಾಗಿದೆ.

ಕೊನೆಮಾತು: ಭಾರತದಂತಹ ದೊಡ್ಡ ಮತ್ತು ಅತ್ಯಂತ ಸಂಕೀರ್ಣ ಸಮಾಜದಲ್ಲಿ ಯಾವುದೇ ಮಾತು ಹೇಳಿದರೂ ಅದು ಬೇರೆಯ ಅರ್ಥ ಮತ್ತು ರೂಪವನ್ನು ಪಡೆದುಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಒಮ್ಮತ, ಸಹಮತ ಎನ್ನುವುದು ಇಲ್ಲಿ ಸಾಧ್ಯವಿಲ್ಲದ ಮಾತು. ಇಂತಹ ಸಮಯದ ಲಾಭವನ್ನು ಪಡೆದು ಒಂದು ವರ್ಗ ವೇಗವಾಗಿ ಬಲಿಷ್ಠವಾಗಿವೆ, ಆಗುತ್ತಿವೆ. ಜನ ಸಾಮಾನ್ಯ ಮಾತ್ರ ಅವರು ಸೃಷ್ಟಿಸಿರುವ ಜಾತಿ-ಭಾಷೆ -ಧರ್ಮ ಎನ್ನುವ ಸರಪಳಿಯಲ್ಲಿ ಸುಖವಾಗಿ ಬಂಧಿಯಾಗಿದ್ದಾನೆ. ಒಂದು ವಿಷಯದಲ್ಲಿ ಎಲ್ಲರೂ ಒಂದೇ! ಅದೇನು ಗೊತ್ತೇ? ಈ ಜನ ಸಾಮಾನ್ಯ ಅಥವಾ ಮಧ್ಯಮವರ್ಗವಿಲ್ಲದೆ ಶ್ರೀಮಂತನಿಗೆ ಹೆಚ್ಚು ದಿನ ಉಳಿಗಾಲವಿಲ್ಲ, ಅದು ಅವನಿಗೆ ಗೊತ್ತಾಗುತ್ತಿಲ್ಲ, ಮಧ್ಯಮ ವರ್ಗವನ್ನು ಕೊಲ್ಲಲು ಬಯಸುತ್ತಿದ್ದಾನೆ. ಇನ್ನು ಮಧ್ಯಮ ವರ್ಗದವನಿಗೆ ತನಗೆ ಹೀಗಾಗುತ್ತಿದೆ, ಹೋರಾಟ ಮಾಡಬೇಕು, ಉಳಿಯಬೇಕು ಎನ್ನುವುದು ಕೂಡ ಗೊತ್ತಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಗತ್ತಿನ ಜನರೆಲ್ಲಾ ಸೇಮ್!

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com