ಡಿ.ಕೆ.ಶಿ ಮಹತ್ವಾಕಾಂಕ್ಷೆಯ ಹಾದಿಯ ತುಂಬ ಮುಳ್ಳುಗಳ ರಾಶಿ...! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಅಧಿಕಾರದ ಹಾದಿಯ ಉದ್ದಕ್ಕೂ ಮುಳ್ಳುಗಳ ರಾಶಿ. ಅವೆಲ್ಲವನ್ನು ದಾಟಿ ಯಶಸ್ವಿಯಾಗುತ್ತಾರಾ? ಕರ್ನಾಟಕದ ಉಪ ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರಿಸುತ್ತಿರುವ ಪರಿಸ್ಥಿತಿ ಇದು.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಅಧಿಕಾರದ ಹಾದಿಯ ಉದ್ದಕ್ಕೂ ಮುಳ್ಳುಗಳ ರಾಶಿ. ಅವೆಲ್ಲವನ್ನು ದಾಟಿ ಯಶಸ್ವಿಯಾಗುತ್ತಾರಾ? ಕರ್ನಾಟಕದ ಉಪ ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರಿಸುತ್ತಿರುವ ಪರಿಸ್ಥಿತಿ ಇದು. ಎರಡೂವರೆ ವರ್ಷಗಳ ಅವಧಿಯ ನಂತರ ಮುಖ್ಯಮಂತ್ರಿ ಆಗಬೇಕೆಂಬ ಅವರ ಮಹತ್ವಾಕಾಂಕ್ಷೆಯ ಹಾದಿ ದಾಟಲು ಸಾಧ್ಯವೇ ಆಗದಷ್ಟು ದುರ್ಗಮವಾಗಿದೆ. ಹೆಜ್ಜೆ ಹೆಜ್ಜೆಗೂ ಎದುರಾಗುತ್ತಿರುವ ಅಡೆ ತಡೆಗಳು, ಅವರಿಗೆ ಸಾಲು ಸಾಲು ಸಂಕಷ್ಟ ತಂದೊಡ್ಡುತ್ತಿವೆ. ಈಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಶಿವಕುಮಾರ್ ತಮ್ಮ ಸುತ್ತಲ ರಾಜಕೀಯ ಚಕ್ರವ್ಯೂಹವನ್ನು ಭೇದಿಸಲು ಆಗದೇ ಪರದಾಡುತ್ತಿರುವುದು ಗೋಚರವಾಗುತ್ತದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಗೆದ್ದು ಅಧಿಕಾರದ ಗದ್ದುಗೆ ಏರುವ ಹಂತದಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ತೀವ್ರ ಪೈಪೋಟಿ ನಡೆದದ್ದು ಕಡೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಹೀಗೆ ಆಯ್ಕೆಯಾಗುವ ಪ್ರಕ್ರಿಯೆಗಳು ನಡೆದ ಹಂತದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಕುಮಾರ್ ಅವರನ್ನು ಒಪ್ಪಿಸುವ ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎರಡೂವರೆ ವರ್ಷಗಳ ಅವಧಿಯ ನಂತರ ಅಧಿಕಾರ ಹಂಚಿಕೆಯ ಸೂತ್ರವನ್ನು ರೂಪಿಸಿರುವ ಸುದ್ದಿಗಳು ರಾಜಕಾರಣದ ಪಡಸಾಲೆಯಲ್ಲಿ ರಾರಾಜಿಸಿದ್ದು ಬಿಟ್ಟರೆ ಅದರ ಬಗ್ಗೆ ಖಚಿತ ಹೇಳಿಕೆ ಈವರೆವಿಗೂ ಕಾಂಗ್ರೆಸ್ ಹೈಕಮಾಂಡ್ ನಿಂದ ಬಂದಿಲ್ಲ.

ಹೀಗಾಗಿ ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಪದವಿ ಸಿದ್ದರಾಮಯ್ಯ ಅವರಿಂದ ವರ್ಗಾವಣೆ ಆಗುತ್ತದೆಂಬ ಭರವಸೆ ಸ್ವತಃ ಶಿವಕುಮಾರ್ ಅವರಿಗೂ ಇಲ್ಲ. ಹಾಗಂತ ಮುಖ್ಯಮಂತ್ರಿ ಪದವಿಯನ್ನು ಪಡೆಯುವ ಪ್ರಯತ್ನವನ್ನು ಅವರೂ ಕೈಬಿಟ್ಟಿಲ್ಲ. ತೆರೆ ಮರೆಯಲ್ಲಿ ಅದರ ಕಸರತ್ತು ಮುಂದುವರಿದೇ ಇದೆ. ಮತ್ತೊಂದು ಕಡೆ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನೇ ದಿನೇ ಬಿಗಿ ಹಿಡಿತ ಸಾದಿಸುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ತಾನು ಅನಿವಾರ್ಯ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ರಾಜಕೀಯ ತಂತ್ರಗಳಿಗೆ ಪ್ರತಿ ತಂತ್ರ ರೂಪಿಸುವಲ್ಲಿ ಶಿವಕುಮಾರ್ ಎಡವುತ್ತಿದ್ದಾರೆ. ಇದೇ ಕಾಂಗ್ರೆಸ್ ನಲ್ಲಿ ಗೊಂದಲಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತಂತೆ ಉಲ್ಬಣಿಸಿರುವ ವಿವಾದವನ್ನೇ ತೆಗೆದುಕೊಂಡರೆ ಇದು ಸರ್ಕಾರದ ನಿರ್ಧಾರವಾದರೂ ಈ ವಿವಾದವನ್ನು ಅತ್ಯಂತ ಜಾಣತನದಿಂದ ಶಿವಕುಮಾರ್ ತಲೆಗೆ ಕಟ್ಟುವ ಮೂಲಕ ಇಡೀ ಅನಾಹುತಕ್ಕೆ ಅವರೇ ಕಾರಣ ಎಂದು ನಿರೂಪಿಸುವಲ್ಲಿ ಸಿದ್ದರಾಮಯ್ಯ ಮಿತ್ರಮಂಡಳಿ ತಂತ್ರ ಯಶಸ್ವಿಯಾಗಿದೆ. ಹೀಗಾಗಿ ಕಾವೇರಿ ವಿವಾದದ ವಿಚಾರದಲ್ಲಿ ಮುಖ್ಯಮಂತ್ರಿಗಿಂತ ಹೆಚ್ಚಾಗಿ ಜಲ ಸಂಪನ್ಮೂಲ ಖಾತೆ ಹೊಣೆ ಹೊತ್ತಿರುವ ಶಿವಕುಮಾರ್ ವಿರುದ್ಧವೇ ಹೆಚ್ಚು ಪಕ್ಷಪಾತದ ಆರೋಪಗಳು ಕೇಳಿ ಬರುತ್ತಿವೆ.

ಇಡೀ ಜಲ ವಿವಾದವನ್ನು ಅವರು ಆ ಖಾತೆಯ ಸಚಿವರಾಗಿ ಸಮರ್ಪಕವಾಗಿ ನಿರ್ವಹಿಸಲಿಲ್ಲ. ಮತ್ತು ಈ ವಿಚಾರದಲ್ಲಿ ಗಂಭೀರತೆ ತೋರಲಿಲ್ಲ ಎಂಬ ಆರೋಪಗಳನ್ನು ಸ್ವ ಪಕ್ಷೀಯರೇ ಮಾಡುತ್ತಿದ್ದಾರೆ.  ಅದೆಲ್ಲ ಏನೇ ಇರಲಿ ಜಲಸಂಪನ್ಮೂಲದಂತಹ  ಅತಿ ದೊಡ್ಡ ಮತ್ತು ಸೂಕ್ಷ್ಮ ಖಾತೆಯ ನಿರ್ವಹಣೆಯಲ್ಲಿ ಎಷ್ಟು ಗಂಭೀರತೆ ಪ್ರದರ್ಶಿಸಬೇಕಿತ್ತೊ ಅಷ್ಟರ ಮಟ್ಟಿನ ಗಮನವನ್ನು ಆ ಕಡೆ ನೀಡಲಿಲ್ಲ. ಬದಲಾಗಿ ಬೆಂಗಳೂರು ನಗರಾಭಿವೃದ್ಧಿಯ ಖಾತೆಯ ಕಡೆಗೆ  ಹೆಚ್ಚು ಗಮನ ನೀಡಿದ್ದಲ್ಲದೇ ಗುತ್ತಿಗೆದಾರರ ಬಿಲ್ ಪಾವತಿ ಸಂಬಂಧ ಅನಗತ್ಯ ವಿವಾದಗಳನ್ನು ತಾವಾಗೇ ಮೈಮೇಲೆ ಎಳೆದುಕೊಂಡಿದ್ದೇ ಅವರ ಸಾಧನೆ. ಈ ಎಲ್ಲ ವಿಚಾರಗಳು ಅವರ ಕುರಿತಾಗಿ ಬೇರೆಯದೇ ರೀತಿಯ ಅಭಿಪ್ರಾಯ ರೂಪಿಸುವ ಸುದ್ದಿಗಳು ಹರಡಲು ದಾರಿ ಮಾಡಿಕೊಟ್ಟಿದೆ. ಹಾಗೆಯೇ ಇಂತಹ ಹತ್ತು ಹಲವು ಆರೋಪಗಳ ಚಕ್ರವ್ಯೂಹದಿಂದ ಹೊರ ಬರಲು ಅವರು ಪರದಾಡುತ್ತಿರುವುದೂ ಸತ್ಯ.

ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಉತ್ತಮ ಸಂಘಟನಕಾರ. ವಿಧಾನಸಭೆ ಚುನಾವಣೆಗೂ ಮುನ್ನ ಅವರು ರೂಪಿಸಿದ ಕಾರ್ಯತಂತ್ರಗಳೂ ಪಕ್ಷ ಹೆಚ್ಚಿನ ಸ್ಥಾನ ಗಳಿಸಲು ನೆರವಾದವು. ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಬಹುತೇಕ ನಾಯಕರು ಪಕ್ಷ ಗಳಿಸುವ ಸ್ಥಾನಗಳ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿದ್ದಾಗ ಖಿಚತವಾಗಿ ನಾವು 135 ರಿಂದ 137 ಸ್ಥಾನಗಳನ್ನು ಗಳಿಸುತ್ತೇವೆ ಎಂದು ಗಟ್ಟಿಯಾಗಿ ಪ್ರತಿಪಾದಿಸಿದ್ದು ಮಾತ್ರ ಶಿವಕುಮಾರ್. ಅಧಿಕಾರಕ್ಕೆ ಬಂದ ನಂತರವೂ ಜೆಡಿಎಸ್ ಮತ್ತು ಬಿಜೆಪಿಗಳ ದೌರ್ಬಲ್ಯಗಳ ಲಾಭ ಪಡೆದು ಆ ಪಕ್ಷಗಳ ಪ್ರಭಾವಿ ನಾಯಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಬುನಾದಿಯನ್ನು ಮತ್ತಷ್ಟು ಗಟ್ಟಿ ಮಾಡುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಅವರ ಶರವೇಗದ ಕಾರ್ಯನಿರ್ವಹಣೆ ಪ್ರಮುಖವಾಗಿ ಬಿಜೆಪಿಯ ದಿಲ್ಲಿ ನಾಯಕರ ನಿದ್ದೆಗೆಡಿಸಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಎರಡು ಸಮೀಕ್ಷೆಗಳನ್ನು ಮಾಡಿಸಿರುವ ಬಿಜೆಪಿಯ ದಿಲ್ಲಿ ಮುಖಂಡರಿಗೆ ಆಘಾತಕಾರಿ ಫಲಿತಾಂಶ ಲಭ್ಯವಾಗಿದೆ. ರಾಜ್ಯದ 28 ಸ್ಥಾನಗಳ ಪೈಕಿ ಈ ಬಾರಿ ಬಿಜೆಪಿ ಒಂದಂಕಿಗೆ ಇಳಿಯುವ ಸಾಧ್ಯತೆಗಳಿವೆ ಎಂಬ ವರದಿ ಅವರನ್ನು ಚಿಂತೆಗೀಡು ಮಾಡಿದೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಭದ್ರ ನೆಲೆ ಕಂಡುಕೊಂಡಿದ್ದ ಪಕ್ಷ ಈಗ ವಿಧಾನಸಭೆ ಚುನಾವಣೆಯ ನಂತರ ಸಮರ್ಥ ಸೇನಾಪತಿಯೇ ಇಲ್ಲದೇ ದಿಕ್ಕಾಪಾಲಾಗಿದೆ. ಎಲ್ಲವನ್ನೂ ದಿಲ್ಲಿಯಿಂದಲೇ ನಿರ್ವಹಿಸುವ ವರಿಷ್ಠರ ನಿರ್ಧಾರದಿಂದ  ಬರೀ ಎಡವಟ್ಟುಗಳೇ ಸಂಭವಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ರಾಜ್ಯ ನಾಯಕರನ್ನು ಕಡೆಗಣಿಸಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿರ್ಧಾರದ ಬಗ್ಗೆ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಮುಲಾಜಿಲ್ಲದೇ ಮಾತಾಡಿರುವುದು ಮತ್ತು ಗುಂಪುಗಾರಿಕೆಯಿಂದಲೇ ಪಕ್ಷ ಈ ಬಾರಿ ಸೋಲು ಅನುಭವಿಸಬೇಕಾಯಿತೆಂದು ನಿಷ್ಠುರವಾಗಿ ಹೇಳಿದ್ದಾರೆ. ಆದರೆ ಈ ಹೇಳಿಕೆಯ ನಂತರವೂ ದಿಲ್ಲಿ ಬಿಜೆಪಿ ವರಿಷ್ಠರ ನಡೆ ಬದಲಾಗಿಲ್ಲ. ಎಲ್ಲವನ್ನು ನಿರ್ವಹಿಸುವ ಭಾರೀ ಆತ್ಮ ವಿಶ್ವಾಸದಲ್ಲಿರುವ ಈ ನಾಯಕರು ಕಾಂಗ್ರೆಸ್ ನ್ನು ದುರ್ಬಲಗೊಳಿಸಲು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಒಂದು ಆಯುಧವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹಳೇ ಮೈಸೂರು ಪ್ರಾಂತ್ಯಗಳಲ್ಲಿ ಅದರಲ್ಲೂ ಒಕ್ಕಲಿಗರೇ ಪ್ರಧಾನವಾಗಿರುವ ಜಿಲ್ಲೆಗಳಲ್ಲಿ ಜೆಡಿಎಸ್ ಬೆಂಬಲದ ಮೂಲಕ ಕೆಲವು ಸ್ಥಾನಗಳನ್ನು ಗೆಲ್ಲಲು ತಂತ್ರ ನಡೆಸಿರುವ ದಿಲ್ಲಿ ನಾಯಕರ ಮೂಲ ಉದ್ದೇಶವೇ ಕಾಂಗ್ರೆಸ್ ಪಕ್ಷದಲ್ಲಿ ಶಿವಕುಮಾರ್ ಅವರ ತಂತ್ರವನ್ನು ವಿಫಲಗೊಳಿಸುವುದೇ ಆಗಿದೆ.  ಒಮ್ಮೆ ತಮ್ಮದೇ ಸಮುದಾಯದ ಪ್ರಭಾವ ಇರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಸೋತರೆ ಅದರ ನೇರ ಹೊಣೆಯನ್ನು ಶಿವಕುಮಾರ್ ಮೇಲೆ ಹೊರಿಸುವ ತಂತ್ರವೂ ಇದರಲ್ಲಿದೆ. ಈ ತಂತ್ರಕ್ಕೆ ಕಾಂಗ್ರೆಸ್ ನ ಕೆಲವು ಪ್ರಮುಖ ನಾಯಕರ ಗೌಪ್ಯ ಸಹಕಾರವೂ ಇದೆ. ಏಕೆಂದರೆ ಇಲ್ಲಿ ಶಿವಕುಮಾರ್ ಮತ್ತೆ ಪ್ರಬಲರಾದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಅಧಿಕಾರ ಹಿಡಿಯುವ ತಮ್ಮ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಬಹುದು ಎಂಬ ದೂರಾಲೋಚನೆಯೂ ಇದರ ಹಿಂದಿದೆ ಎಂಬುದು ಕಾಂಗ್ರೆಸ್ ಮೂಲಗಳಿಂದಲೇ ಬಂದಿರುವ ಮಾಹಿತಿ.

ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತಿಚೆಗೆ ಹೇಳಿಕೆಯೊಂದನ್ನು ನೀಡಿ ಲೋಕಸಭೆ ಚುನಾವಣೆಗೂ ಮುನ್ನ ಡಿ.ಕೆ.ಶಿವಕುಮಾರ್ ಮತ್ತೆ ಜೈಲುಪಾಲಾಗುವುದು ಖಚಿತ ಎಂದೂ ಭವಿಷ್ಯ ನುಡಿದಿದ್ದಾರೆ. ಇದೊಂದು ಹತಾಶೆ ತುಂಬಿದ, ಅಪ್ರಬುದ್ಧ ಹೇಳಿಕೆ ಎಂದು ಮೇಲ್ನೋಟಕ್ಕೆ ಕಂಡರೂ ಕೇಂದ್ರ ಸರ್ಕಾರ ತನ್ನದೇ ಆದ ಸಂಸ್ಥೆಗಳನ್ನ ಬಳಸಿಕೊಂಡು ರಾಜ್ಯದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಗಮನಿಸಿದರೆ ಇದರ ಹಿಂದೆ ಗುಪ್ತ ಅಜೆಂಡಾ ಇದೆ ಎಂಬ ಸಂಶಯವಂತೂ ಇದ್ದೇ ಇದೆ. ಅದನ್ನೇ ಕುಮಾರಸ್ವಾಮಿ ಮೂಲಕ ಬಿಜೆಪಿ ಮುಖಂಡರು ಹೇಳಿಸಿದ್ದಾರೆ ಎಂಬ ವಾದದಲ್ಲಿ ತರ್ಕವಿದೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲೂ ಶಿವಕುಮಾರ್ ಕುರಿತು ಅಂತಹ ಒಲವೇನೂ ಇಲ್ಲ. ಸ್ವತಃ ಸಿದ್ದರಾಮಯ್ಯ ಅನೇಕ ವಿಚಾರಗಳಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಉಳಿದ ಪ್ರಭಾವಿ ಮುಖಂಡರು ಅನಿವಾರ್ಯ ಕಾರಣಕ್ಕೆ ಇಷ್ಟವಿಲ್ಲದಿದ್ದರೂ ಸಿದ್ದರಾಮಯ್ಯ ನಾಯಕತ್ವ ಒಪ್ಪಿಕೊಂಡಿದ್ದಾರೆ. ಆಡಳಿತಕ್ಕೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ಶಿವಕುಮಾರ್ ಉಳಿದ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ ಎಂಬ ಅಸಮಧಾನ ದಿನೇ ದಿನೇ ಬಿಗಿಯಾಗುತ್ತಿದೆ. ಹಾಗಾಗೇ ಕೆಲವು ನಾಯಕರು ಸಿದ್ದರಾಮಯ್ಯ ಕುರಿತ ಪ್ರತಿಪಕ್ಷಗಳು ನಡೆಸುವ ದಾಳಿಗೆ ಪ್ರತ್ಯುತ್ತರ ನೀಡುವಷ್ಟು ಶಿವಕುಮಾರ್ ವಿರುದ್ಧದ ಆಕ್ರೋಶ ಭರಿತ ಟೀಕೆಗಳಿಗೆ ಪ್ರತ್ಯುತ್ತರ ನೀಡದೇ ಮೌನ ವಹಿಸುತ್ತಿದ್ದಾರೆ. ಸಿದ್ದರಾಮಯ್ಯ ಜತೆಗೆ ಸಚಿವರಾದ ಡಾ. ಮಹದೇವಪ್ಪ, ಜಮಿರ್ ಅಹಮದ್, ಬೈರತಿ ಸುರೇಶ್, ಕೆ.ಎನ್. ರಾಜಣ್ಣ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಶಾಸಕರಾದ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್ ಸೇರಿದಂತೆ ಮಹಾನ್ ದಂಡ ನಾಯಕರ ಪಡೆಯೇ ಇದೆ. ಆದರೆ ಶಿವಕುಮಾರ್ ವಿಚಾರದಲ್ಲಿ ಹಾಗಾಗುತ್ತಿಲ್ಲ.

ಇತ್ತೀಚೆಗೆ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸರ್ಕಾರದಲ್ಲಿ ಲಿಂಗಾಯಿತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಬಹಿರಂಗವಾಗೇ ಹೇಳಿಕೆ ನೀಡಿದರು. ಇದಕ್ಕೆ ಪ್ರತಿಯಾಗಿ ರಾಯರೆಡ್ಡಿ ಹೇಳಿಕೆ ನೀಡಿ ಅಂಕಿ ಅಂಶಗಳ ಸಮೇತ ವಿವರ ನೀಡಿ ಯಾವುದೇ ಅನ್ಯಾಯ ಆಗಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಕಡೆಗೆ ಸಚಿವ ಹಾಗೂ ಶಾಮನೂರು ಪುತ್ರ ಮಲ್ಲಿಕಾರ್ಜುನ ಅವರೇ ತಮ್ಮ ತಂದೆಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡು ಅನಿವಾರ್ಯವಾಗಿ ಸ್ಪಷ್ಟನೆ ನೀಡಬೇಕಾಯಿತು. ಇದು ಸಿದ್ದರಾಮಯ್ಯ ಜಾಣತನಕ್ಕೆ ಪ್ರತ್ಯಕ್ಷ ಉದಾಹರಣೆ.

ಶಿವಕುಮಾರ್ ಗೆ ಹೋಲಿಸಿದರೆ ಸಿದ್ದರಾಮಯ್ಯ ಶಾಮನೂರು ಶಿವಶಂಕರಪ್ಪ ನಡುವೆ ರಾಜಕಾರಣ ಮೀರಿದ ಆತ್ಮೀಯತೆ ಇದೆ. ಆದರೆ ರಾಜಕಾರಣದಲ್ಲಿ ಅಧಿಕಾರವೇ ಪ್ರಧಾನವಾದಾಗ ಸ್ನೇಹ , ಸಂಬಂಧಗಳು ದೂರವಾಗುತ್ತವೆ. ಒಂದು ಕಾಲಕ್ಕೆ ಶಿವಶಂಕರಪ್ಪನವರ ವಿರೋಧ ಕಟ್ಟಿಕೊಂಡಿದ್ದ ಈಗಿನ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಈಗ ಶಾಮನೂರು ಕುಟುಂಬದ ಜತೆ ಸಂಬಂಧ ಬೆಳೆಸಿ ಸದ್ಯದಲ್ಲೇ ಬೀಗರಾಗಲಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನ ಪರಿಷತ್ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡಾ ಶಾಮನೂರು ಕುಟುಂಬದ ಬೀಗರು. ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಶಾಮನೂರು ಶಿವಶಂಕರಪ್ಪನವರ ಜತೆ ರಾಜಕಾರಣದ ಮೀರಿದ ಅತ್ಯುತ್ತಮ ಸಂಬಂಧ ಇದೆ. ಮತ್ತೊಂದು ಕಡೆ ಡಿಸೆಂಬರ್ ನಲ್ಲಿ ಲಿಂಗಾಯಿತರ ಬೃಹತ್ ಸಮಾವೇಶ ನಡೆಲಿದೆ. ಈ ಎಲ್ಲ ಅಂಶಗಳೂ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ನಡೆಯನ್ನು ಬದಲಾಯಿಸಲು ಮುನ್ನುಡಿ ಎಂದು ಹೇಳಲಾಗುತ್ತಿದೆ. ಕಾದು ನೋಡಬೇಕು.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com