ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ; ಮೈಸೂರಿನಿಂದ ಲೋಕಸಭೆಗೆ ಸ್ಪರ್ಧೆ? (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೆಜ್ಜೆ ಇಡುತ್ತಾರಾ?..... ಅಂಥದೊಂದು ಸುದ್ದಿ ಕಾಂಗ್ರೆಸ್ ನಲ್ಲಿ ಈಗ ಹರಿದಾಡುತ್ತಿದೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೆಜ್ಜೆ ಇಡುತ್ತಾರಾ?.....

ಅಂಥದೊಂದು ಸುದ್ದಿ ಕಾಂಗ್ರೆಸ್ ನಲ್ಲಿ ಈಗ ಹರಿದಾಡುತ್ತಿದೆ. ಸ್ವತಃ ಅವರೇ ಅದನ್ನು ಅಲ್ಲಗಳೆದಿದ್ದಾರೆ. ಆದರೆ ಲೋಕಸಭೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ ಅಂಥದೊಂದು ಚರ್ಚೆಯಂತೂ ಆರಂಭವಾಗಿದೆ. 

ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸರೆ ಆಗುತ್ತಾರೆ. ಇದರ ಜತೆಗೇ ಉತ್ತರದ ರಾಜ್ಯಗಳಲ್ಲಿ ರಾಜಕೀಯ ನೆಲೆ ಕಂಡುಕೊಂಡಿರುವ ಅವರ ಹಳೇ ಸಮಾಜವಾದಿ ಗೆಳೆಯರನ್ನೂ ಕಾಂಗ್ರೆಸ್ ನತ್ತ ಸೆಳೆಯಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವೂ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ. ಅವರು ಲೋಕಸಭೆಗೆ ಸ್ಪರ್ಧಿಸಿದರೆ ರಾಜ್ಯದಲ್ಲಿ ಅಹಿಂದ ಮತಗಳು ಹೆಚ್ಚು ಪ್ರಮಾಣದಲ್ಲಿ ಕಾಂಗ್ರೆಸ್ ಗೆ ಬರಲಿದ್ದು ಇದು ಲೋಕಸಭೆಯಲ್ಲಿ ಪಕ್ಷದ ಬಲ ಹೆಚ್ಚಲು ಕಾರಣವಾಗಲಿದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ. ಆದರೆ ಇದಿನ್ನೂ ಅಧಿಕೃತ ಸ್ವರೂಪ ಪಡೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರೀಗ ಇನ್ನು ಮುಂದೆ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಘೋಷಿಸಿದ್ದಾರೆ . ಎರಡನೇ ಅವಧಿಯಲ್ಲೂ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಬೇಕೆಂಬ ಆಸೆ ಅವರಿಗಿದೆ. ಹೀಗಾಗಿ ಲೋಕಸಭೆಗೆ ಮೈಸೂರಿನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಅವರಿನ್ನೂ ಪೂರ್ತಿಯಾಗಿ ನಿರ್ಧರಿಸಿಲ್ಲ. ಒಂದು ವೇಳೆ ರಾಜಕೀಯ ಸಮೀಕರಣದ ಲೆಕ್ಕಾಚಾರ ಕೈಗೂಡಿದರೆ ಅವರ ಸ್ಪರ್ಧೆ ಖಚಿತವಾಗ ಬಹುದು.  
 
ಮುಖ್ಯಮಂತ್ರಿಯಾಗಿ ಅಹಿಂದ ವರ್ಗಗಳ ನಾಯಕನಾಗಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಭದ್ರ ರಾಜಕೀಯ ನೆಲಗಟ್ಟಿದೆ. ಈಗ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೂ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದಿದೆ. ಈ ಜನಪ್ರಿಯತೆಯ ಲಾಭ ಪಡೆಯುವ ಆಲೋಚನೆಯಲ್ಲಿರುವ ಕಾಂಗ್ರೆಸ್ ವರಿಷ್ಠರು ರಾಜ್ಯದಲ್ಲಿ ಮೋದಿ ಜನಪ್ರಿಯತೆಯನ್ನು ಎದುರಿಸಲು ಸಿದ್ದರಾಮಯ್ಯ ವರ್ಚಸ್ಸು ಮತ್ತು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ನೆರವಾಗಲಿದ್ದು ಲೋಕಸಭೆಗೆ ಅವರು ಸ್ಪರ್ಧಿಸಿದರೆ ಅದರ ರಾಜಕೀಯ ಲಾಭ ದುಪ್ಪಟ್ಟಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಈ ಹಿನ್ನಲೆಯಲ್ಲೇ ಮೈಸೂರಿನಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಅವರಿಗೆ ಕಾಂಗ್ರೆಸ್ ವರಿಷ್ಠರು ಸಲಹೆ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಪ್ರಮುಖ ಖಾತೆ ನೀಡುವ ಭರವಸೆಯನ್ನೂ ನೀಡಲಾಗಿದೆ.

ಬಹು ಮುಖ್ಯವಾಗಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ತವರು ರಾಜ್ಯ ಕರ್ನಾಟಕದಲ್ಲಿ ಬಿಜೆಪಿಗಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಸವಾಲಿದೆ. ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಉಳ್ಳ ಖರ್ಗೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಸುಲಲಿತವಾಗಿ ಮಾತಾಡಬಲ್ಲರು. ಹೀಗಾಗಿ ಅವರಿಗೆ ದಿಲ್ಲಿ ರಾಜಕಾರಣ ಕಷ್ಟವೇನೂ ಅಲ್ಲ. ಜತೆಗೆ ಉತ್ತಮ ಸಂಸದೀಯ ಪಟುವಾಗಿ ಅಲ್ಲದೇ ಕೇಂದ್ರ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿಯೂ ಆಡಳಿತದಲ್ಲಿ ಅನುಭವ ಹೊಂದಿರುವ ಅವರು ಕಾಂಗ್ರೆಸ್ ನಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 

ಬಿಜೆಪಿ ವಿರುದ್ಧ ನಿಂತಿರುವ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಲ್ಲಿ ತರುವ ನಿಟ್ಟಿನಲ್ಲಿ ಅವರ ಪರಿಶ್ರಮವೂ ಇದೆ. ಹೀಗಾಗಿ ದಿಲ್ಲಿ ರಾಜಕಾರಣದ ಅಂಗಳದಲ್ಲಿ ದಕ್ಷಿಣದವರಾಗಿದ್ದರೂ ಪ್ರಭಾವಿಯಾಗಿ ಗುರುತಿಸಿಕೊಂಡಿರುವ ಖರ್ಗೆಯವರು ಕಾಂಗ್ರೆಸ್ ನಲ್ಲಿ ಪ್ರಧಾನಿ ಪಟ್ಟದ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸಿದ್ದು ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಗ್ರಾಮೀಣ ಮಟ್ಟದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಾಯ ಆಗಬಹುದು ಎಂಬುದು ಒಂದು ಲೆಕ್ಕಾಚಾರ. 

ಸಿದ್ದರಾಮಯ್ಯ ಎರಡನೇ ಅವದಿಯಲ್ಲಿ ಮುಖ್ಯಮಂತ್ರಿ ಆದ ಆರಂಭದ ದಿನಗಳಲ್ಲಿ ಪಕ್ಷದೊಳಗೆ, ಮತ್ತು ಸಂಪುಟದೊಳಗೇ ಕೆಲವೊಂದು ಅಪಸ್ವರಗಳು ಅಸಮಧಾನಗಳು ಇತ್ತಾದರೂ ಅದು ಸಂಘಟನಾತ್ಮಕವಾಗಿ ಪ್ರತಿಕೂಲ ಪರಿಣಾಮ ಬೀರಿಲ್ಲ. ಹೀಗಾಗಿ ಅವರು ಯಶಸ್ವಿಯಾಗಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಲೋಕಸಭೆಗೆ ಸಿದ್ದರಾಮಯ್ಯ ಸ್ಪರ್ಧಿಸಿದರೆ ರಾಜ್ಯದಲ್ಲಿ ಅವರ ಬೆಂಬಲಕ್ಕಿರುವ ಅಹಿಂದ ವರ್ಗದ ಮತಗಳು ಇಡುಗಂಟಾಗಿ ಕಾಂಗ್ರೆಸ್ ಪಾಲಾಗುವುದಲ್ಲದೇ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯೂ ಹೆಚ್ಚಿನ ಮತಗಳನ್ನು ತರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ವರಿಷ್ಠರು ಇದ್ದಾರೆ. ಆ ಕಾರಣಕ್ಕೇ ಲೋಕಸಭೆಗೆ ಸ್ಪರ್ಧಿಸುವಂತೆ ಅವರಿಗೆ ದುಂಬಾಲು ಬಿದ್ದಿದ್ದಾರೆ.  

ಈ ಪ್ರಸ್ತಾಪ ಕುರಿತಂತೆ ಸಿದ್ರಾಮಯ್ಯ ತಮ್ಮ ಪರಮಾಪ್ತರೊಂದಿಗೂ ಚರ್ಚೆ ನಡೆಸಿದ್ದು ಅಭಿಪ್ರಾಯ ಕೇಳಿದ್ದಾರೆ. ಈ ವಿಚಾರದಲ್ಲಿ ಸಂಪೂರ್ಣ ಸಹಮತ ವ್ಯಕ್ತವಾಗಿಲ್ಲವಾದರೂ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುವಂತೆ ಒಂದು ಸಲಹೆ ಆಪ್ತರಿಂದ ಬಂದಿದೆ. ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿರುವ ಅವರು ಮತ್ತೆ ಐದು ವರ್ಷ ಪೂರೈಸುವ ಆಸೆ ಹೊತ್ತಿದ್ದಾರೆ. ಆದರೆ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಎರಡೂ ವರೆ ವರ್ಷ ಮಾತ್ರ ಅವರು ಮುಖ್ಯಮಂತ್ರಿ ಉಳಿದ ಅವಧಿಗೆ  ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂಬ ಒಪ್ಪಂದ ಆಗಿದೆ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿದೆಯಾದರೂ ಅಧಿಕೃತವಾಗಿ ಅದು ಘೋಷಣೆ ಆಗಿಲ್ಲ. ಇದು ಸದ್ಯಕ್ಕೆ ಗೊಂದಲವಾಗೇ ಮುಂದುವರಿದಿದೆ. 

ಸಿದ್ದರಾಯ್ಯ ಲೋಕಸಭೆಗೆ ಆಯ್ಕೆಯಾದರೆ ತೆರವಾಗುವ ಸ್ಥಾನಕ್ಕೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿ ಮಂತ್ರಿಗಿರಿ ನೀಡುವುದು ಎಂಭ ಪ್ರಸ್ತಾಪನೆಯೂ ಕಾಂಗ್ರೆಸ್ ವರಿಷ್ಠರಿಂದ ಬಂದಿದೆ.ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೆಣಸಲು ಸಿದ್ದರಾಮಯ್ಯನವರೇ ಸೂಕ್ತ ಎಂಬ ಅಭಿಪ್ರಾಯ ಕಾಂಗ್ರೆಸ್ ವರಿಷ್ಠರದ್ದು. ಜತೆಗೇ ಕೆಪಿಸಿಸಿ ಅಧ್ಯಕ್ಷರಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಂದುವರಿದಿದ್ದು ಚುನಾವಣೆಯ ಉಸ್ತುವಾರಿಯೂ ಅವರ ಹೆಗಲಿಗೇ ಬೀಳುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಕಷ್ಟವೇನೂ ಆಗಲಾರದು ಎಂಬುದು ಕಾಂಗ್ರೆಸ್ ಹೈಕಮಾಂಡ್ ನ ಇನ್ನೊಂದು ಲೆಕ್ಕಾಚಾರ.

ಆದರೆ ರಾಷ್ಟ್ರ ರಾಜಕಾರಣದ ಪ್ರಸ್ತಾಪವನ್ನ ಒಪ್ಪಿಕೊಳ್ಳುವ ವಿಚಾರದಲ್ಲಿ ಸಿದ್ದರಾಮಯ್ಯ ಗೊಂದಲಕ್ಕೀಡಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯೊಂದಿಗೆ ಸಚಿವ ಸ್ಥಾನವೇನೋ ಗ್ಯಾರಂಟಿ ಆದರೆ ಪರಿಸ್ಥಿತಿ ಬೇರೆಯದೇ ಸ್ವರೂಪ ಪಡೆದು ಕಾಂಗ್ರೆಸ್ ಮತ್ತೆ ವಿರೋಧ ಪಕ್ಷದಲ್ಲಿ ಕೂರುವ ಪರಿಸ್ಥಿತಿಯೇ ಬಂದರೆ ಬರೀ ಸಂಸದನಾಗಿದ್ದುಕೊಂಡು ಏನು ಪ್ರಯೋಜನ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ ಎಂಬುದು ಅವರ ಪರಮಾಪ್ತರು ಹೇಳುವ ಮಾತು. ಮುಖ್ಯಮಂತ್ರಿ ಹುದ್ದಯನ್ನೂ ಉಳಿಸಿಕೊಂಡು ಚುನಾವಣೆಗೆ ಸ್ಪರ್ಧಿಸುವುದು ಕಡೆಗೆ ರಾಷ್ಟ ರಾಜಕಾರಣದಲ್ಲಿನ ಸ್ಥಿತಿಗತಿಗಳನ್ನು ನೋಡಿಕೊಂಡು ಮುಖ್ಯಮಂತ್ರಿ ಸ್ಥಾನ ಬಿಡಬೇಕೇ ಬೇಡವೆ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಆಪ್ತರಿಂದ ಸಲಹೆ ಬಂದಿದೆ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸುವ ವಿಚಾರದಲ್ಲಿ ಇನ್ನೂ ಅವರು ಖಚಿತ ತೀರ್ಮಾನಕ್ಕೆ ಬಂದಿಲ್ಲ. 

ಇನ್ನು ರಾಜ್ಯದಲ್ಲಿ ಬಿಜೆಪಿಯ ಸ್ಥಿತಿ ಚುನಾವಣಾ ಫಲಿತಾಂಶದ ನಂತರ ಸುಧಾರಿಸಿಲ್ಲ. ಪಕ್ಷ ತೊರೆದು ಕಾಂಗ್ರೆಸ್ ಸೇರಲು ಸರತಿ ಸಾಲಿನಲ್ಲಿ ನಿಂತಿರುವ ಪ್ರಭಾವಿ ನಾಯಕರು, ಶಾಸಕರ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಧಾನಸಭೆ ರಚನೆಗೊಂಡು ಹೊಸ ಸರ್ಕಾರ ಅಧಿಕಾರಕ್ಕೇರಿ ನೂರುದಿನಗಳಾದರೂ ಉಭಯ ಸದನಗಳಿಗೆ ಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲು ಆ ಪಕ್ಷಕ್ಕೆ ಆಗುತ್ತಿಲ್ಲ.  ಪಕ್ಷದ ಪ್ರಭಾವಿ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗೊಮ್ಮೆ, ಹೀಗೊಮ್ಮೆ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಗುಟುರು ಹಾಕುತ್ತಾರಾದರೂ ಅದಕ್ಕೆ ಪೂರಕ ಸ್ಪಂದನೆ ಪಕ್ಷದ ನಾಯಕರಿಂದಲೇ ಸಿಗುತ್ತಿಲ್ಲ. ಅವರೂ ಮತ್ತೆ ಮೌನಕ್ಕೆ ಶರಣಾಗಿದ್ದರೆ ಅವರ ಪರಮಾಪ್ತ ಬೆಂಬಲಿಗರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗೇ ಬಂಡಾಯ ಸಾರಿರುವುದಷ್ಟೇ ಅಲ್ಲ, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇದು ಬಿಜೆಪಿ ನಾಯಕತ್ವಕ್ಕೆ ಬಿಡಿಸಲಾರದ ಕಗ್ಗಂಟಾಗಿದೆ. 

ಇತ್ತೀಚೆಗೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆಯಲ್ಲಿ ಪಕ್ಷದ ಸೋಲಿನ ಕುರಿತಂತೆ ಆತ್ಮಾವಲೋಕನ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಬಹುತೇಕ ಶಾಸಕರು, ಪ್ರಮುಖ ಮುಖಂಡರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ಹೊರಹಾಕಿದರು. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಿಂದ ಶಿಫಾರಸು ಮಾಡಿದ್ದ ಪಟ್ಟಿಯನ್ನು ತಮಗೆ ಬೇಕಾದಂತೆ ಬದಲಾಯಿಸಿ ಶಕ್ತರಲ್ಲದವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದೇ ಪಕ್ಷದ ಸೋಲಿಗೆ ಕಾರಣ ಸಂಘಟನಾತ್ಮಕ ಹೊಣೆ ಹೊತ್ತವರೇ ಇದಕ್ಕೆ ಹೊಣೆ ಎಂಬ ಆಕ್ರೋಶದ ಮಾತುಗಳು ಕೇಳಿ ಬಂದವು ಎಂಬ ಸಂಗತಿ ಬಹಿರಂಗವಾಗಿದೆ.

ಒಂದಂತೂ ಸ್ಪಷ್ಟ ಕಾಂಗ್ರೆಸ್ ಈಗಾಗಲೇಒಂದು ಹೆಜ್ಜೆ ಮುಂದೆ ಹೋಗಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಿದ್ಧತೆ ಆರಂಭಿಸಿದೆ. ಆದರೆ ಬಿಜೆಪಿ ಇನ್ನೂ ಸೋಲಿನ ಹತಾಶೆ ಮತ್ತು ಗುಂಪುಗಾರಿಕೆಯಿಂದ ಹೊರ ಬಂದಿಲ್ಲ. ಈ ಪರಿಸ್ಥಿತಿ ಮುಂದುವರಿದಿರುವ ಹಂತದಲ್ಲೇ ಪಕ್ಷದ ಹಿರಿಯ ಮುಖಂಡರೂ ಮಾಜಿ ಸಚಿವರೂ ಆದ ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಇನ್ನೂ ಹಲವು ಪ್ರಮುಖರು ಪಕ್ಷ ಬಿಡುವ ಸಿದ್ಧತೆಯಲ್ಲಿದ್ದಾರೆ.

ಲೋಕಸಭಾ ಚುನಾವಣೆಯ ಹೀನಾಯ ಸೋಲಿನಂತರ ತೆರೆಮರೆಗೆ ಸರಿದಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇತ್ತೀಚೆಗೆ ಬೆಂಗಳೂರಿನಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು. ವಿಶೇಷ ಎಂದರೆ ಈ ಸಭೆಗೆ ಬಿಜೆಪಿಯಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿರುವ ವಲಸಿಗ ಶಾಸಕರು ಬಂದಿರಲಿಲ್ಲ. ಹಿರಿಯ ನಾಯಕರ ಪೈಕಿ ಯಡಿಯೂರಪ್ಪ ಸೇರಿದಂತೆ ಅನೇಕರು ಗೈರು ಹಾಜರಾಗಿದ್ದರು. ಲೋಕಸಭಾ ಚುನಾವನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯದಲ್ಲಿ ಉತ್ತರ ಪ್ರದೇಶ ಮೂಲದ ಸಂಸ್ಥೆಯೊಂದರ ಮೂಲಕ ನಡೆಸಿರುವ ಸಮೀಕ್ಷೆಯಲ್ಲಿ ಈಗ ಚುನಾವಣೆ ನಡೆದರೆ ಪಕ್ಷ ಕೇವಲ 12 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎಂಬ ವರದಿ ಬಂದಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಸದ್ಯಕ್ಕಂತೂ ಕಮಲ ಪಕ್ಷ ಚೇತರಿಸಿಕೊಂಡು ಪುಟಿದೇಳುವ ಪರಿಸ್ಥಿತಿಯಲ್ಲಿ ಇಲ್ಲ. 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com