G20: ಜಾಗತಿಕವಾಗಿ ಭಾರತದ ವರ್ಚಸ್ಸು ವೃದ್ಧಿ! (ಹಣಕ್ಲಾಸು)

ಹಣಕ್ಲಾಸು-379-ರಂಗಸ್ವಾಮಿ ಮೂಕನಹಳ್ಳಿ
ಜಿ20 ಶೃಂಗಸಭೆ
ಜಿ20 ಶೃಂಗಸಭೆ

ಜಿ20 ಶೃಂಗಸಭೆ ಯಶಸ್ವಿಯಾಗಿ ಮುಗಿದಿದೆ. ಮುಂದಿನ ಸೆಪ್ಟೆಂಬರ್ ವರೆಗೆ ಭಾರತ ಈ ಒಕ್ಕೂಟದ ಅಧ್ಯಕ್ಷ ಸ್ಥಾನದಲ್ಲಿ ಇರಲಿದೆ. ಮುಂದಿನ ವರ್ಷ ಇದು ಬ್ರೆಜಿಲ್ ದೇಶಕ್ಕೆ ವರ್ಗಾವಣೆಯಾಗಲಿದೆ. ಕಳೆದ ವರ್ಷ ಇದು ಇಂಡೋನೇಶಿಯಾ ದೇಶಕ್ಕೆ ದಕ್ಕಿತ್ತು. 

ಜಿ20 ಎನ್ನುವುದು ಇಪ್ಪತ್ತು ದೇಶಗಳ ಒಕ್ಕೂಟ. ಗ್ರೂಪ್ ಆಫ್ ಟ್ವೆಂಟಿ ಎನ್ನುವುದನ್ನು ಜಿ ಟ್ವೆಂಟಿ ಎನ್ನುತ್ತಾರೆ. ಇದೆಷ್ಟು ದೊಡ್ಡ ಒಕ್ಕೂಟ ಎನ್ನುವುದಕ್ಕೆ ಒಂದು ಉದಾಹರಣೆಯನ್ನು ನೋಡೋಣ. ಜಿ20 ದೇಶಗಳು ಜಾಗತಿಕ ಜನಸಂಖ್ಯೆಯ 60 ಪ್ರತಿಶತ ಜನರನ್ನು ಪ್ರತಿನಿಧಿಸುತ್ತದೆ. ಜಾಗತಿಕ ವಹಿವಾಟಿನ 75 ಪ್ರತಿಶತ ಈ ದೇಶಗಳ ನಡುವೆ ನಡೆಯುತ್ತದೆ. ಜಗತ್ತಿನ ಒಟ್ಟು ಜಿಡಿಪಿಯ 85 ಪ್ರತಿಶತ ಈ ದೇಶಗಳ ನಡುವೆ ಉತ್ಪತ್ತಿಯಾಗುತ್ತದೆ. ಇದರ ನಾಯಕತ್ವ ಮುಂದಿನ ವರ್ಷದವರೆಗೆ ಭಾರತಕ್ಕೆ ಸಿಕ್ಕಿದೆ. ಈ ಒಕ್ಕೊಟವನ್ನು ಈ ವರ್ಷ ಇಂಡೋನೇಶಿಯಾ, ಭಾರತ ಮತ್ತು ಬ್ರೆಜಿಲ್ ದೇಶಗಳು ಒಟ್ಟಾಗಿ ಮುನ್ನೆಡೆಸುತ್ತವೆ. ನಿಕಟಪೂರ್ವ ಇಂಡೋನೇಶಿಯಾ, ಭಾವಿ ಅಧ್ಯಕ್ಷ ಭಾರತ ಮತ್ತು ಭವಿಷ್ಯದ ಅಧ್ಯಕ್ಷ ಬ್ರೆಜಿಲ್ ನಾಯಕತ್ವವನ್ನು ಹಂಚಿಕೊಳ್ಳಲಿವೆ.

ಜಿ20ಯಲ್ಲಿ ಯಾವೆಲ್ಲಾ ದೇಶಗಳಿವೆ ಗೊತ್ತಾ ?
ಗ್ರೂಪ್ ಆಫ್ 20 ರಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಆಸ್ಟ್ರೇಲಿಯಾ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ,ಇಂಡಿಯಾ, ಇಂಡೋನೇಶಿಯಾ, ಇಟಲಿ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ ಸೌತ್ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ನೇಷನ್ಸ್ ಮತ್ತು ಯೂರೋಪಿಯನ್ ಯೂನಿಯನ್. ಈ ಬಾರಿಯ ಅಧ್ಯಕ್ಷ ಸ್ಥಾನ ವಹಿಸಿರುವ ಭಾರತ ತನಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಆಫ್ರಿಕಾ ದೇಶಗಳ ಒಕ್ಕೊಟವನ್ನು ಜಿ 20 ಕ್ಕೆ ಸದಸ್ಯ ರಾಷ್ಟ್ರವನ್ನಾಗಿ ಸೇರಿಸಿಕೊಳ್ಳುವಲ್ಲಿ ಮಹತ್ವದ ಕಾರ್ಯನಿರ್ವಹಿಸಿದೆ. ಆ ಮೂಲಕ ಆಫ್ರಿಕನ್ ಒಕ್ಕೊಟದ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಿಕೊಂಡಿದೆ.

ಈ ರೀತಿಯ ಅಧ್ಯಕ್ಷ ಪಟ್ಟ ರೊಟೇಷನ್ ಬೇಸಿಸ್ ಮೇಲೆ ಸಿಗುತ್ತದೆ. ಹೀಗಾಗಿ ಇಂದಲ್ಲ ನಾಳೆ ಎಲ್ಲಾ ದೇಶಕ್ಕೂ ಸಿಗುತ್ತದೆ. ಭಾರತಕ್ಕೆ ಸಿಕ್ಕಿರುವ ಈ ಅವಕಾಶವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಬಿಂಬಿಸಲಾಗುತ್ತಿದೆ ಎನ್ನುವ ಕೂಗು ಸಮಾಜದ ಹಲವು ವಲಯಗಳಲ್ಲಿ ಕೇಳಿ ಬರುತ್ತಿದೆ. ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸುವಲ್ಲಿ ಬಹಳ ಯಶಸ್ವಿಯಾಗಿದೆ. ಸಾವಿರಾರು ಕೋಟಿ ರೂಪಾಯಿ ಹಣಕಾಸು ಒಪ್ಪಂದಗಳಿಗೆ ಸಹಿ ಬಿದ್ದಿದೆ.

ಲಕ್ಷಾಂತರ ಹೊಸ ಉದ್ಯೋಗ ಸೃಷ್ಟಿಯಾಗುವುದು ಖಚಿತವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಚೀನಾ ದೇಶದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದು ನಿಲ್ಲಬಲ್ಲ ಬಲಿಷ್ಠ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ರಷ್ಯಾ ಮತ್ತು ಉಕ್ರೈನ್ ಯುದ್ಧದ ಸಮಯದಲ್ಲಿ ಭಾರತ ರಷ್ಯಾ ದೇಶದಿಂದ ಕಚ್ಚಾ ತೈಲವನ್ನು ಖರೀದಿ ಮಾಡುವುದರ ಮೂಲಕ ಉಕ್ರೈನ್ ಮೇಲಿನ ಯುದ್ಧಕ್ಕೆ ರಷ್ಯಾವನ್ನು ಬೆಂಬಲಿಸಿದಂತೆ ಆಗಿದೆ. ರಷ್ಯಾಗೆ ಹಣಕಾಸು ಸಹಾಯ ಒದಗಿಸಿದಂತೆ ಆಗಿದೆ ಎನ್ನುವ ಮುಂದುವರೆದ ದೇಶಗಳ ಕೂಗನ್ನು ತಣ್ಣಗಾಗಿಸಿ ಭಾರತ ರಾಜತಾಂತ್ರಿಕತೆಯಲ್ಲಿ ತಾನೆಷ್ಟು ಬಲಿಷ್ಠ ಎನ್ನುವುದನ್ನು ಸಾಬೀತು ಮಾಡಿದೆ. ಇವುಗಳ ಬಗ್ಗೆ ಒಂದಷ್ಟು ವಿವರವಾಗಿ ತಿಳಿದುಕೊಳ್ಳೋಣ.

  1. ಭಾರತ ವಾಯ್ಸ್ ಆಫ್ ಏಷ್ಯಾ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ: ನಾವು ಇಲ್ಲಿ ಗಮನಿಸಬೇಕಾದ ಅಂಶವೇನು ಗೊತ್ತೇ? ಇಲ್ಲಿಯವರೆಗೆ ಭಾರತ ಸೌತ್ ಏಷ್ಯಾದ ನಾಯಕ ಎನ್ನುವ ಮಾತ್ತಿತ್ತು. ಏಕೆಂದರೆ ಪೂರ್ಣ ಏಷ್ಯಾ ಎಂದರೆ ಅಲ್ಲಿ ದೊಡ್ಡಣ್ಣ ಚೀನಾ ಕೂಡ ಸೇರಿಕೊಳ್ಳುತ್ತದೆ. ಹೀಗಾಗಿ ಭಾರತ ಎಂದರೆ ಸೌತ್ ಏಷ್ಯಾ ಎನ್ನುವಂತೆ ನೋಡಲಾಗುತ್ತಿತ್ತು. ಇದೀಗ ಭಾರತವೆಂದರೆ ವಾಯ್ಸ್ ಆಫ್ ಏಷ್ಯಾ, ಗ್ಲೋಬಲ್ ಸೌತ್, ಎಂದರೆ ದಕ್ಷಿಣ ಜಗತ್ತಿನ ಅದ್ವಿತೀಯ ನಾಯಕ ಎನ್ನುವ ಮಟ್ಟಕ್ಕೆ ಬೆಳವಣಿಗೆ ಕಂಡಿದ್ದೇವೆ. ಇದು ಕಡಿಮೆ ಸಾಧನೆಯಲ್ಲ. ಜಾಗತಿಕ ಮಟ್ಟದಲ್ಲಿ ಬಳಸುವ ಪ್ರತಿ ಪದಕ್ಕೂ ಅದರದೇ ಅದ ವ್ಯಾಪ್ತಿ, ಅರ್ಥವಿರುತ್ತದೆ. ಚೀನಾ ದೇಶಕ್ಕೆ ಹೋಲಿಸಿದರೆ ನಾವಿನ್ನೂ ಆರ್ಥಿಕತೆಯಲ್ಲಿ ಬಹಳ ಚಿಕ್ಕವರು. ಆದರೆ ನಮ್ಮ ನಡವಳಿಕೆ, ನಾಯಕತ್ವ ಗುಣ ನಮ್ಮನ್ನು ಆ ಪಟ್ಟಕ್ಕೆ ಏರಿಸಿದೆ. ಚೀನಾ ಜಿ 20 ಶೃಂಗ ಸಭೆಗೆ ಬರದೇ ದೂರ ಉಳಿದುಕೊಂಡು ನಷ್ಟವನ್ನು ಮಾಡಿಕೊಂಡಿತು.
  2. ಸಾವಿರಾರು ಕೋಟಿ ಆರ್ಥಿಕ ಒಪ್ಪಂದಕ್ಕೆ ಬಿದ್ದಿದೆ ಸಹಿ: ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮ ಬಾರಿಗೆ ಕ್ಲೈಮೇಟ್ ಫೈನಾನಾನ್ಸಿಂಗ್ ಎನ್ನುವ ಕೂಗಿಗೆ ಬಲ ಸಿಕ್ಕಿದೆ. ಇದನ್ನು ಗ್ರೀನ್ ಫೈನಾನಾನ್ಸಿಂಗ್ ಎಂತಲೂ ಕರೆಯಬಹುದು. ಜಗತ್ತನ್ನು ಅತಿ ವೇಗದಲ್ಲಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯಿಂದ ರಕ್ಷಿಸಲು ಬೇಕಾಗುವ ಕೆಲಸಗಳನ್ನು ಮಾಡಲು ಮುಂದುವರೆಯುತ್ತಿರುವ ದೇಶಗಳಿಗೆ ಬೇಕಾಗಿರುವ ಒಟ್ಟು ಹಣದ ಮೊತ್ತವನ್ನು 5.9 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಜಾಗತಿಕ ಬ್ಯಾಂಕುಗಳ ಜೊತೆಗೆ ಒಪ್ಪಂದ, ಜಾಗತಿಕ ತೆರಿಗೆ ನೀತಿ , ಸುಸ್ಥಿರ ಅಭಿವೃದ್ಧಿ ಇವುಗಳ ಬಗ್ಗೆಯ ಚರ್ಚೆ ಭಾರತವನ್ನು ಬೇರೆಯ ಹಂತಕ್ಕೆ ಕರೆದೊಯ್ದಿದೆ.
  3. ಸೌದಿ ಅರೇಬಿಯಾ ಜೊತೆಗೆ 50 ಅಗ್ರಿಮೆಂಟ್ ಗಳಿಗೆ ಸಹಿ ಬಿದ್ದಿದೆ: ಇಂಡಿಯಾ -ಸೌದಿ ಇನ್ವೆಸ್ಟ್ಮೆಂಟ್ ಫೋರಂ ಮೂಲಕ ಐವತ್ತು ಮೆಮೊರೆಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ (MoU)ಗಳಿಗೆ ಸಹಿ ಬಿದ್ದಿದೆ. ಎನೆರ್ಜಿ ಯಿಂದ ಹ್ಯೂಮನ್ ರಿಸೋರ್ಸ್ ವರೆಗೆ ಅನೇಕ ಕ್ಷೇತ್ರಗಳಲ್ಲಿ ಒಪ್ಪಂದವಾಗಿದೆ. ಎಲ್ಲಕಿಂತ ಮುಖ್ಯವಾಗಿ ಇಂಡಿಯಾ -ಮಿಡ್ಡೇಲ್ ಈಸ್ಟ್ -ಯೂರೋಪ್ ಎಕನಾಮಿಕ್ ಕಾರಿಡಾರ್ ನಿರ್ಮಿಸಲು ಒಪ್ಪಂದವಾಗಿದೆ. ಇದರಲ್ಲಿ ಅಮೇರಿಕಾ , ಇಂಡಿಯಾ, ಫ್ರಾನ್ಸ್, ಜರ್ಮನಿ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯೂರೋಪಿಯನ್ ಯೂನಿಯನ್ ಮತ್ತು ಇಟಲಿ ದೇಶಗಳು ಭಾಗಿಯಾಗಲಿವೆ. ಇದೊಂದು ಮಹತ್ತರ ಬೆಳವಣಿಗೆಯಾಗಿದ್ದು, ಚೀನಾ ದೇಶಕ್ಕೆ ಪರ್ಯಾಯ ವ್ಯವಸ್ಥೆ ಕಟ್ಟುವುದರಲ್ಲಿ ಮೊದಲ ಹೆಜ್ಜೆಯಾಗಲಿದೆ. ಇದರ ಜೊತೆಗೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಅಭಿವೃದ್ಧಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಬಗ್ಗೆ , ಭಯೋತ್ಪಾದನೆ ದೃಷ್ಟಿಯಿಂದ ಆಗುವ ಹಣಕಾಸು ವಹಿವಾಟು ತಡೆಯುವುದು, ಜಗತ್ತಿನ ಯಾವುದೇ ಭಾಗದಿಂದ ಇನ್ನೊಂದು ಭಾಗಕ್ಕೆ ಸುಲಭವಾಗಿ ಹಣ ವರ್ಗಾವಣೆ ಮಾಡುವುದರ ಬಗ್ಗೆ, ಹಣಕಾಸು ನಿರ್ಬಂಧಗಳನ್ನು ಪಾಲಿಸಬೇಕಾದ ಪರಿಸ್ಥಿತಿಯ ಬಗ್ಗೆ ಚರ್ಚೆ, ಜಾಗತಿಕ ತೆರಿಗೆ ವಂಚನೆಯನ್ನು ತಪ್ಪಿಸಲು ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಹೀಗೆ ಒಟ್ಟಾರೆ ಜಾಗತಿಕವಾಗಿ ಹಣಕಾಸು ಸೋರಿಕೆ ತಡೆಯುವಲ್ಲಿ ಕೂಡ ಅನೇಕ ಮಾತುಕತೆ ಮತ್ತು ಒಪ್ಪಂದಗಳಿಗೆ ಈ ಸಭೆ ಸಾಕ್ಷಿಯಾಯಿತು.
  4. ರಷ್ಯಾ-ಉಕ್ರೈನ್ ಯುದ್ಧದ ವಿಷಯದಲ್ಲಿ ಸಮತೋಲನ ಕಾಪಾಡಿಕೊಂಡದ್ದು ಮಹತ್ಸಾಧನೆ: ಎಲ್ಲಾ ಪಾಶ್ಚಾತ್ಯ ದೇಶಗಳೂ ಭಾರತ ಹಿಂಬಾಗಿಲಿನ ಮೂಲಕ ರಷ್ಯಾ ದೇಶವನ್ನು ಬೆಂಬಲಿಸುತ್ತಿದೆ, ತನ್ಮೂಲಕ ಉಕ್ರೈನ್ ಮೇಲಿನ ಯುದ್ಧಕ್ಕೆ ಸಹಾಯ ಮಾಡುತ್ತಿದೆ ಎನ್ನುವ ಆರೋಪವನ್ನು ಜೋರಾಗಿ ಮಾಡುತ್ತಿದ್ದವು. ಜಿ 20 ಸಭೆಯ ಉದ್ದೇಶವನ್ನು ಹಾಳುಗೆಡವಲು ಈ ಒಂದು ವಿಷಯ ಸಾಕಾಗಿತ್ತು. ಆದರೆ ನಮ್ಮ ರಾಜತಾಂತ್ರಿಕ ವಲಯ, ವಿದೇಶಾಂಗ ಸಚಿವ ಜೈ ಶಂಕರ್ ಅವರ ನೇತೃತ್ವದಲ್ಲಿ ಅದೆಷ್ಟು ಬಲಿಷ್ಠವಾಗಿದೆ ಎಂದರೆ ಮುನ್ನೂರು ಬೈಲಟೇರಲ್ ಮೀಟಿಂಗ್, 200 ಗಂಟೆಗಳ ಮಾತುಕತೆ, 15 ಕರಡುಗಳನ್ನು ತಯಾರಿಸಿದ ನಂತರ ಒಂದು ಒಪ್ಪಂದಕ್ಕೆ ಬರಲಾಯಿತು. ನಾವು ಇಲ್ಲಿ ಸೇರಿರುವ ಮುಖ್ಯ ಉದ್ದೇಶವನ್ನು ಮರೆಯಬೇಡಿ, ರಷ್ಯಾ ಉಕ್ರೈನ್ ಯುದ್ಧ ನಮ್ಮ ಭೇಟಿಯನ್ನು ಹಾಳು ಮಾಡುವುದು ಬೇಡ ಎಂದು ಸ್ಪಷ್ಟವಾಗಿ ಹೇಳುವ ಮಟ್ಟಕ್ಕೆ, ಮತ್ತು ಜಗತ್ತಿನ ದೇಶಗಳು ಕೇಳುವ ಮಟ್ಟಕ್ಕೆ ಭಾರತದ ಡಿಪ್ಲೊಮ್ಯಾಟಿಕ್ ಶಕ್ತಿ ವೃದ್ಧಿಯಾಗಿದೆ. ರಷ್ಯಾ ದೇಶದ ವಿದೇಶಾಂಗ ಸಚಿವ ಸಭೆಯ ನಂತರ ಭಾರತ ಎಲ್ಲವನ್ನೂ ಚನ್ನಾಗಿ ಬ್ಯಾಲೆನ್ಸ್ ಮಾಡಿತು. ಭಾರತವಾಗಿರದೆ ಬೇರೆ ಯಾವುದೇ ದೇಶವಾಗಿದ್ದರೂ ಈ ಮಟ್ಟಿನ ಬ್ಯಾಲೆನ್ಸ್ ಸಾಧ್ಯವಾಗುತ್ತಿರಲಿಲ್ಲ ಎನ್ನುವ ಮಾತನ್ನು ಆಡಿದ್ದಾರೆ. ಜೊತೆಗೆ ಭಾರತಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ.
  5. ಆಫ್ರಿಕನ್ ಒಕ್ಕೊಟವನ್ನು ಜಿ 20 ರಲ್ಲಿ ಸೇರಿಸಿದ್ದು: 55 ದೇಶಗಳ ಆಫ್ರಿಕನ್ ಯೂನಿಯನ್ನನ್ನು ಜಿ20 ರಲ್ಲಿ ಸೇರಿಸುವುದರಲ್ಲಿ ಭಾರತದ ಪ್ರಯತ್ನವನ್ನು ಚರಿತ್ರೆ ಎಂದೂ ಮರೆಯುವಂತಿಲ್ಲ. ಆಫ್ರಿಕನ್ ಒಕ್ಕೊಟ, ಆಫ್ರಿಕನ್ ದೇಶಗಳು ಭಾರತಕ್ಕೆ ಸದಾ ಋಣಿಯಾಗಿರಲಿವೆ. ಚೀನಾ ದೇಶವು ಆಫ್ರಿಕನ್ ದೇಶಗಳನ್ನು ಡೆಟ್ ಟ್ರ್ಯಾಪ್ ಮೂಲಕ ಹಣಿಯಲು ನೋಡಿದರೆ, ಭಾರತ ತನ್ನ ಎಂದಿನ ವಸುದೈವಕುಟುಂಬಕಂ ಎನ್ನುವ ಧ್ಯೇಯ ವಾಕ್ಯದ ಮೂಲಕ ಗೆದ್ದಿದೆ. ಸಾವಿರಾರು ಕೋಟಿ ಹಣಕಾಸು ವ್ಯವಹಾರ ಒಂದುಕಡೆಯಾದರೆ, ಬೆಲೆ ಕಟ್ಟಲಾಗದ ಸೋಶಿಯಲ್ ಕ್ಯಾಪಿಟಲ್ ಭಾರತ ಸದ್ದಿಲ್ಲದೇ ಸಂಪಾದಿಸಿ ಬಿಟ್ಟಿದೆ.
  6. ದೆಹಲಿ ಡಿಕ್ಲೆರೇಷನ್ ಅವಿರೋಧವಾಗಿ ಜಗತ್ತಿನ ಮುಂದಿಡಲಾಯಿತು: ಚೀನಾ ಈ ಸಭೆಯಲ್ಲಿ ಪಾಲ್ಗೊಳ್ಳದಿದ್ದರೂ ಡಿಕ್ಲೆರೇಷನ್ಗೆ ಸಹಿ ಹಾಕುವ ಮೂಲಕ ಜಗತ್ತಿನ ದೃಷ್ಟಿಯಲ್ಲಿ 'ಸ್ಪಾಯ್ಲರ್ ' ಎನ್ನುವುದರಿಂದ ಬಚಾವಾಗಿದೆ. ಅದನ್ನು ಅದು ಹೇಳಿಕೊಂಡಿದೆ ಕೂಡ . ಸಂಸ್ಕೃತದಲ್ಲಿ ಬರದಿದ್ದ ವಸುಧೈವಕುಟುಂಬಕಂ ಎನ್ನುವ ವಾಕ್ಯಕ್ಕೂ ಚೀನಾ ತಗಾದೆ ತೆಗೆದಿತ್ತು. ತನ್ನ ಖಾಸಗಿ ಅಜೆಂಡಾವನ್ನು ಭಾರತ ಸಭೆಯ ಮುಂದಿಡುತ್ತಿದೆ ಎಂದು ಕೂಡ ದೂಷಿಸಿತ್ತು. ಭಾರತ ಅದನ್ನು ಇಂಗ್ಲಿಷ್ಗೆ ಅನುವಾದಿಸಿ “One Earth, One Family, One Future” ಎನ್ನುವ ಮಾತನ್ನು ಹಾಕಿತು. ಅದು ಎಲ್ಲಾ ಸದಸ್ಯ ದೇಶಗಳಿಗೂ ಇಷ್ಟವಾಯಿತು. ಇದು ಯುದ್ಧದ ಸಮಯವಲ್ಲ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಅಭಿವೃದ್ಧಿ ಹೊಂದುವ ಸಮಯ ಎನ್ನುವ ಪ್ರಧಾನಮಂತ್ರಿಯವರ ಮಾತಿಗೆ ಎಲ್ಲರೂ ತಲೆದೂಗಿದ್ದಾರೆ. ಚೀನಾ ಮಾತ್ರ ಅಮೇರಿಕಾ ದೇಶದ ಏಕಮುಖ ನೀತಿಗಳ ಪರಿಣಾಮ ಜಗತ್ತು ಇಂದಿನ ಸ್ಥಿತಯಲ್ಲಿದೆ ಎಂದಿದೆ. ಭಾರತವನ್ನು ಮತ್ತೆ ದೂಷಿಸಲು ಹೋಗಿಲ್ಲ.

ಕೊನೆಮಾತು: 
ಜಾಗತಿಕ ರಾಜಕೀಯದಲ್ಲಿ ಇಂದು ಧ್ರುವೀಕರಣ ನಡೆಯುತ್ತಿದೆ. ಭಾರತ ಇದರ ಮಧ್ಯದಲ್ಲಿದೆ. ಜಗತ್ತನ್ನು ಹೆಚ್ಚು ತನ್ನ ಕಡೆಗೆ ವಾಲಿಸಿಕೊಳ್ಳುತ್ತಿದೆ. ಚೀನಾ ತನ್ನ ಧೋರಣೆಯನ್ನು ಮುಂದುವರಿಸಿರುವ ಕಾರಣ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಬಾರದು. ಆದರೆ ವಿಶ್ವ ರಾಜಕೀಯ ಸದ್ದಿಲ್ಲದೇ ಮಗ್ಗುಲು ಬದಲಾಯಿಸುತ್ತಿದೆ ಮತ್ತು ಅದು ಭಾರತಕ್ಕೆ ಹೆಚ್ಚು ಸೂಕ್ತವೂ ಆಗಿದೆ. ಇವೆಲ್ಲವುಗಳ ಮಧ್ಯೆ ಖಾಲಿಸ್ಥಾನಿ ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿದ್ದ ಕೆನಡಾ ಪ್ರಧಾನಿಯವರಿಗೆ ಬುದ್ದಿ ಹೇಳಿ ಕಳಿಸಿದ್ದು ಇನ್ನೊಂದು ಕಥೆ. ಅಮೇರಿಕಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಇನ್ನಿತರ ಸದಸ್ಯ ದೇಶಗಳು ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚಿನ ಬೆರಗುಗಣ್ಣಿನಿಂದ ನೋಡುತ್ತಿವೆ. ಮುಂದಿನ ದಶಕ ಭಾರತದ್ದು ಅದರಲ್ಲಿ ಯಾವುದೇ ಸಂಶಯವಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com