ಚಂದ್ರಯಾನ-3 ಯಶಸ್ಸು: ದಶಕದಲ್ಲಿ ಲೂನಾರ್ ಎಕನಾಮಿಕ್ಸ್ ಅಸಾಧ್ಯವೇನಲ್ಲ! (ಹಣಕ್ಲಾಸು)

ಹಣಕ್ಲಾಸು-373-ರಂಗಸ್ವಾಮಿ ಮೂಕನಹಳ್ಳಿ
ಚಂದ್ರಯಾನ-3
ಚಂದ್ರಯಾನ-3

ನಾವು ಚಿಕ್ಕವರಿದ್ದಾಗಿನಿಂದ 'ಆಕಾಶ ನೋಡಲು ನೂಕು ನುಗ್ಗಲು ಏಕೆ' ಎನ್ನುವ ಮಾತನ್ನು ಕೇಳಿಕೊಂಡು ಬಂದಿದ್ದೇವೆ. ವಿಶಾಲವಾದ ಆಕಾಶ ಎಲ್ಲಿ ನಿಂತರೂ ಕಾಣುವ ಕಾರಣ ಅದನ್ನು ನೋಡಲು ವಿಶೇಷವಾಗಿ ಗುಂಪು ಕಟ್ಟಿಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಹಾಗೊಮ್ಮೆ ಜನ ಸಾಗರ ಏರ್ಪಟ್ಟರೆ ಅಯ್ಯೋ ಇಷ್ಟೊಂದು ಸಣ್ಣ ವಿಷಯಕ್ಕೆ ಇಷ್ಟೊಂದು ಗದ್ದಲ ಮಾಡಿಕೊಳ್ಳುವ ಅವಶ್ಯಕತೆಯೇನು? ಎನ್ನುವ ಅರ್ಥದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. 

ಈಗ ನೋಡಿ ಚಂದ್ರನ ಮೇಲೆ ಇಳಿಯಲು ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಅಮೇರಿಕಾ, ಚೀನಾ ಮತ್ತು ರಷ್ಯಾ ಜೊತೆಗೆ ಭಾರತ ಚಂದ್ರನ ಮೇಲೆ ಇಳಿಯಲು ಬಿರುಸಿನ ತಯಾರಿ ನಡೆಸಿದ್ದು, ಭಾರತ ಚಂದ್ರಯಾನ-3 ಮಿಷಷನ್ ನಲ್ಲಿ ಯಶಸ್ಸು ಗಳಿಸಿದೆ. 

2008ರ ಪ್ರಥಮ ಚಂದ್ರಯಾನ ಮಿಷನ್ ನಲ್ಲಿ ಭಾರತ ಚಂದ್ರನಲ್ಲಿ ನೀರಿದೆ ಎನ್ನುವುದನ್ನು ಪತ್ತೆ ಹಚ್ಚಿ ಅದನ್ನು ಜಗತ್ತಿಗೆ ಸಾರಿದೆ. ಅಲ್ಲಿಂದೀಚೆಗೆ ಭಾರತ ಸದ್ದಿಲ್ಲದೇ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಅಮೇರಿಕಾ ದೇಶ ಭಾರತ ಇನ್ನು ಕಣ್ಣು ಬಿಡುವ ಮುಂಚೆಯೇ ಚಂದ್ರನ ಮೇಲೆ ಕಾಲಿಟ್ಟ ದೇಶವಾಗಿತ್ತು. ಐವತ್ತು ವರ್ಷಗಳ ನಂತರ ಭಾರತ ಅಮೇರಿಕಾ ದೇಶವನ್ನೂ ಹಿಂದಿಕ್ಕುವ ಪ್ರಮುಖ ಪ್ರತಿ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಅಮೇರಿಕಾ ಐವತ್ತು ವರ್ಷದ ನಂತರ ಮತ್ತೆ ಚಂದ್ರನ ಮೇಲೆ ತನ್ನ ಜನರನ್ನು ಕಳಿಸಲು ಹವಣಿಸುತ್ತಿದೆ. ಚೀನಾ ಮತ್ತು ರಷ್ಯಾ ಕೂಡ ಸ್ಪರ್ಧೆಗೆ ಬಿದ್ದವರಂತೆ ಪ್ರಯತ್ನ ಪಡುತ್ತಿದ್ದಾರೆ. ಇಲ್ಲಿಯವರೆಗೆ 11 ದೇಶಗಳು ಚಂದ್ರನ ಮೇಲೆ ತಮ್ಮ ನೌಕೆಗಳನ್ನು ಕಳುಹಿಸಿದ್ದಾರೆ. ರಷ್ಯಾ ಇಲ್ಲಿಯವರೆಗೆ 23 ಮಿಷನ್ ಮುಗಿಸಿದೆ. ಮೊನ್ನೆ ವಿಫಲವಾದದ್ದು ದೊಡ್ಡ ಸುದ್ದಿಯಾಯ್ತು. ಆದರೆ ಈಗಾಗಲೇ ಅಮೇರಿಕಾ 32, ರಷ್ಯಾ 23 ಮತ್ತು ಚೀನಾ 7 ಬಾರಿ ತಮ್ಮ ಮಿಷನ್ ಗಳಲ್ಲಿ ಯಶಸ್ಸನ್ನು ಕಂಡಿದೆ. ಆದರೆ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ. ಅವೆಲ್ಲವೂ ಚಂದ್ರನ ಇತರ ಭಾಗಗಳಲ್ಲಿ ಇಳಿದಿವೆ. ಭಾರತದ ನೌಕೆ ಇಂದು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದ ಪ್ರಥಮ ದೇಶ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ಇನ್ನೊಂದಷ್ಟು ಮುಖ್ಯ ಅಂಶಗಳು ಕೂಡ ಭಾರತದ ಮಡಿಲಿಗೆ ಸುಲಭವಾಗಿ ಬೀಳಲಿದೆ. ಅವೇನು? ಎನ್ನುವುದನ್ನು ನೋಡೋಣ.

  1. ಚಂದ್ರನ ಮೇಲೆ ಯಥೇಚ್ಛವಾಗಿ ಬಿಲ್ಡಿಂಗ್ ಮೆಟೀರಿಯಲ್ಸ್, ನೀರು, ಆಮ್ಲಜನಕಳು ಸಿಗುತ್ತವೆ. ಅವುಗಳಲ್ಲಿ ಬಹಳಷ್ಟನ್ನು ಬಳಸುವುದಕ್ಕೆ ಮುಂಚೆ ಪ್ರೋಸೆಸ್ ಮಾಡುವ ಅವಶ್ಯಕತೆಯಿದೆ. ಚಂದ್ರನ ಮೇಲಿರುವ ಹಿಮವು ಚಂದ್ರನ ಮೇಲೆ ಜೀವರಾಶಿಯನ್ನು ಬೆಳೆಸಲು, ಅಲ್ಲೊಂದು ವಸಹಾತು ಕಟ್ಟಲು, ಲಾಭದಾಯಕ ಲೂನಾರ್ ಎಕಾನಮಿ ಕಟ್ಟಲು ಬಹಳಷ್ಟು ಸಹಾಯವನ್ನು ಮಾಡಲಿದೆ.
  2. ಹೀಲಿಯಂ-3 ಚಂದ್ರನಲ್ಲಿ ಹೇರಳವಾಗಿ ಸಿಗುತ್ತದೆ. ಆದರೆ ಇದು ಭೂಮಿಯ ಮೇಲೆ ಅಷ್ಟಾಗಿ ಸಿಗುವುದಿಲ್ಲ. ಮುಂಬರುವ ದಿನಗಳಲ್ಲಿ ನ್ಯೂಕ್ಲಿಯರ್ ಫ್ಯೂಶನ್ ರಿಯಾಕ್ಟರ್ ಗೆ ಬೇಕಾಗುವ ಇಂಧನವನ್ನು ತಯಾರು ಮಾಡಲು ಈ ಹೀಲಿಯಂ ಅತ್ಯಂತ ಅವಶ್ಯಕವಾಗಿ ಬೇಕಾಗುತ್ತದೆ. ಜಗತ್ತಿಗೆ ಮುಂದಿನ ದಿನದಲ್ಲಿ ಬೇಕಾಗುವ ಎನರ್ಜಿ ಉತ್ಪತ್ತಿಯಾಗುವುದು ನ್ಯೂಕ್ಲಿಯರ್ ಎನರ್ಜಿಯಿಂದ ಎನ್ನುವುದು ಇಂದಿಗೆ ಎಲ್ಲರಿಗೂ ಗೊತ್ತಿರುವ ವಿಷಯ.
  3. ಹೀಲಿಯಂ ಸಹಿತ ಇನ್ನಿತರ ಸಂಪನ್ಮೂಲಗಳನ್ನು ಚಂದ್ರನ ಮೇಲೆ ಗಣಿಗಾರಿಕೆ ಮಾಡುವುದರ ಮೂಲಕ ನಾವು ಪಡೆದುಕೊಳ್ಳಬಹುದು. ಇದರಿಂದ ಭೂಮಿಯ ಮೇಲಿನ ಜನರ ಜೀವನ ಮಟ್ಟವನ್ನು ಇನ್ನಷ್ಟು ಸುಧಾರಿಸಬಹುದು. ಹೊಸ ತಂತ್ರಜ್ಞಾನದ ಸಹಾಯದಿಂದ ಚಂದ್ರನ ಮೇಲಿನ ಗಣಿಗಾರಿಕೆ ಅತಿ ಶೀಘ್ರದಲ್ಲಿ ಶುರುವಾಗುತ್ತದೆ. ಒಂದು ಕೇಜಿ ಹೀಲಿಯಂ ಉತ್ಪಾದನೆ ಮಾಡಿದರೆ ಭೂಮಿಯ ಮೇಲೆ ಅದರ ಸಂಪತ್ತು 3 ಮಿಲಿಯನ್ ಡಾಲರ್ ಹೆಚ್ಚಾದಂತೆ! ಅಂದರೆ 30 ಲಕ್ಷ ಅಮೆರಿಕನ್ ಡಾಲರ್, ಈ ಮಟ್ಟದ ಲಾಭ ಬೇರೆ ಯಾವ ವ್ಯಾಪಾರ ಮಾಡಿ ಕೂಡ ಗಳಿಸಲಾಗುವುದಿಲ್ಲ.
  4. ರೇರ್ ಅರ್ಥ್ ಮೆಟಲ್ಸ್ ಗಳು ಇಂದಿನ ಎಲ್ಲಾ ಎಲೆಕ್ಟ್ರಾನಿಕ್ಸ್, ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ಸ್ ಸೇರಿ ಒಟ್ಟಾರೆ ಇಂದಿನ ಜೀವನಕ್ಕೆ ಬೇಕಾದ ಮುಕ್ಕಾಲು ಪಾಲು ಎಲ್ಲಾ ಪದಾರ್ಥಗಳಲ್ಲಿ ಬಳಕೆಯಾಗುತ್ತದೆ. ಈ ಪದಾರ್ಥದ ಮೇಲೆ ಚೀನಾ ತನ್ನ ಏಕಸ್ವಾಮ್ಯವನ್ನು ಪಡೆದಿದೆ. ಅಮೇರಿಕಾ ದೇಶ ಕೂಡ ಚೀನಾ ದೇಶವನ್ನು ಬಗ್ಗಿಸಿ ಸಂಧಾನಕ್ಕೆ ಕೂಡಿಸುವಲ್ಲಿ ವಿಫಲವಾಗಿದೆ. ಚೀನಾದ ಅಣತಿಯಿಲ್ಲದೆ ಇಂದು ಜಗತ್ತಿನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಚಂದ್ರನ ಮೇಲೆ ಇವುಗಳು ದೊರೆಯುವ ಸಾಧ್ಯತೆ ಇರುವುದರಿಂದ, ಅಮೇರಿಕಾ 50 ವರ್ಷದ ನಂತರ ಮತ್ತೊಮ್ಮೆ ಚಂದ್ರನಲ್ಲಿ ಆಸಕ್ತಿ ತೋರಿಸುತ್ತಿದೆ. ಭಾರತ ಮೊದಲು ಕಾಲಿಟ್ಟರೆ ಅಷ್ಟರ ಮಟ್ಟಿನ ಅಡ್ವಾಂಟೇಜ್ ನಮ್ಮದು.
  5. ಮೈನಿಂಗ್, ಗಣಿಗಾರಿಕೆ ಎನ್ನುವ ಬೃಹತ್ ಉದ್ಯಮ ಕಟ್ಟಲು ವಿಫುಲ ಅವಕಾಶಗಳಿವೆ: ಚಂದ್ರನಲ್ಲಿ ದೊರೆಯಬಹುದಾದ ಸಂಭಾವ್ಯ ಸಂಪನ್ಮೂಲಗಳನ್ನು, ಭೂಮಿಯ ಮೇಲಿನ ಗಣಿಗಾರಿಕೆಗಿಂತ ಕಡಿಮೆ ವೆಚ್ಚದಲ್ಲಿ ಮಾಡಬಹುದು ಎನ್ನುವ ಅಂದಾಜು, ಅಮೇರಿಕಾ, ರಷ್ಯಾ, ಚೀನಾ ಮತ್ತು ಭಾರತಕ್ಕೆ ಆಗಲೇ ಸಿಕ್ಕಿದೆ. ಈ ನಿಟ್ಟಿನಲ್ಲಿ ಸಹ ಚಂದ್ರಯಾನ ಭಾರತಕ್ಕೆ ಭಾಗ್ಯದ ಬಾಗಿಲಾಗುವ ಸಾಧ್ಯತೆಯಿದೆ.
  6. ಡೇಟಾ ಮೈನಿಂಗ್: ಇವತ್ತು ಮಾಹಿತಿ ಹಣಕ್ಕಿಂತ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆ. ಭಾರತ, ಚಂದ್ರನ ಮೇಲೆ ನೀರಿದೆ ಎಂದು ಹೇಳಿದ ಪ್ರಥಮ ರಾಷ್ಟ್ರ, ನಿಮಗೆಲ್ಲಾ ನೆನಪಿರಲಿ 1969ರಲ್ಲಿ ಅಮೇರಿಕಾ ಚಂದ್ರನ ಮೇಲೆ ಕಾಲಿಟ್ಟಿತ್ತು. ಭಾರತ ಆಗಿನ್ನೂ ಈ ವಲಯದಲ್ಲಿ ಕಣ್ಣು ಬಿಡುತ್ತಿದ್ದ ಹಸುಳೆ. ಹಾವಾಡಿಗರ ದೇಶ ಎಂದು ಪಾಶ್ಚಾತ್ಯರು ನಗುತ್ತಿದ್ದರು. ಚೀನಾ, ಪಾಕಿಸ್ತಾನದ ಜೊತೆಗೆ ಯುದ್ಧದಲ್ಲಿ ಸುಸ್ತಾಗಿ ಭಾರತದ ಎಕಾನಮಿ ತೆವಳುತ್ತಿದ್ದ ಸಮಯವದು, ಇಂದಿಗೆ ಭಾರತ, ಜಗತ್ತಿನ ಅತಿರಥ ಮಹಾರಥ ದೇಶಗಳಿಗೆ ಸಡ್ಡು ಹೊಡೆದು ನಿಲ್ಲುವ ಮಟ್ಟಕ್ಕೆ ಬೆಳದಿದೆ. ನಾವು ಮೊದಲಿಗರಾದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಬಳಿ ಹೆಚ್ಚಿನ ಮಾಹಿತಿ ದೊರಕುತ್ತದೆ. ಇವತ್ತು ಡೇಟಾ ಇದ್ದವರೇ ಅಧಿಪತಿಗಳು.
  7. ಅಲ್ಲಿ ನೆಲೆ ನಿಲ್ಲಲು ಬೇಕಾಗುವ ಕಟ್ಟಡಗಳನ್ನು ಕಟ್ಟಲು, ಮೂನ್ ಕ್ವೆಕ್, ನೆಲದ ಸ್ಟಬಿಲಿಟಿ, ರೇಡಿಯೇಷನ್ ಬ್ಲಾಸ್ಟ್ಸ್, ಎಲೆಕ್ಟ್ರೋಮ್ಯಾಗ್ನಟಿಕ್ ಇಂಟರ್ಫೆರೆನ್ಸ್, ಹೀಗೆ ಇವುಗಳಲ್ಲೆವೂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ನಮಗಿನ್ನೂ ಗೊತ್ತಿಲ್ಲ. ಇವುಗಳೆಲ್ಲವನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಯಾರು ಮೊದಲು ಊರುತ್ತಾರೆ, ಅವರಿಗೆ ಹೆಚ್ಚಿನ ಶಕ್ತಿ, ಅಡ್ವಾಂಟೇಜ್ ಸಿಗುತ್ತದೆ. ಈ ಅರ್ಥದಲ್ಲಿ ಭಾರತದ ಇಂದಿನ ಚಂದ್ರಯಾನದ ಫಲಿತಾಂಶ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
  8. ಲೂನಾರ್ ರಿಯಲ್ ಎಸ್ಟೇಟ್ ಬಿಸಿನೆಸ್: ನಾವಿರುವ ಭೂಮಿ ಬಿಟ್ಟರೆ ನಾವು ಸದ್ಯಕ್ಕೆ ಚಂದ್ರನ ಮೇಲೆ ಸೈಟ್ ಮಾಡಿ ಮಾರಬಹುದು ನೋಡಿ! ಮುಂದಿನ ಹತ್ತು ವರ್ಷದಲ್ಲಿ ಇಂದೊಂದು ಸಾಧ್ಯವಾಗಬಲ್ಲ ಕನಸು. 2025 ರ ವೇಳೆಗೆ ಜನರನ್ನು ಚಂದ್ರಯಾನ ಮಾಡಿಸಿ ವಾಪಸ್ಸು ಕರೆದುಕೊಂಡು ಬರಲು ಸಿದ್ಧತೆ ನಡೆಸಲಾಗುತ್ತಿದೆ. ಭೂಮಿಯ ಮೇಲಿನ ಅತ್ಯುತ್ತಮ ಜನ, ಮನೆತನೆಗಳು ಅಲ್ಲಿ ಮನೆ ಮಾಡಿ, ಭೂಮಿಗೆ ಬಂದು ಹೋಗಿ ಮಾಡುವ ದಿನಗಳು ಬರಬಹುದು. ಹಾಗೊಮ್ಮೆ ಆದರೆ, ಭಾರತ ಆ ಆಟದಲ್ಲಿ ಖಂಡಿತ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಂದಿನ ಫಲಿತಾಂಶ ಹಲವು ಕಾರಣಗಳಿಂದ ಮುಖ್ಯವಾಗಿದೆ.

ಕೊನೆಮಾತು: ಅಮೇರಿಕಾದ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ ಏಜನ್ಸಿ (DARPA ) ಎನ್ನುವ ಸಂಸ್ಥೆ ಅಮೆರಿಕಾದ ಮಿಲಿಟರಿಗೆ ಬೇಕಾದ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸಲು ಶ್ರಮಿಸುತ್ತದೆ. ಇದು ಮುಂದಿನ ಹತ್ತು ವರ್ಷದಲ್ಲಿ ಚಂದ್ರನ ಮೇಲೆ ಒಂದು ಹೊಸ ಎಕಾನಮಿ ಸೃಷ್ಟಿಸುವ ಕೆಲಸವನ್ನು ಹೊತ್ತಿದೆ. ಅದಕ್ಕೆ ಲೂನಾರ್ ಎಕಾನಮಿ (Lunar Economy) ಎನ್ನುವ ನಾಮಕರಣವನ್ನು ಸಹ ಮಾಡಿದೆ. ಇಂದಿಗೆ ಜಗತ್ತಿನ ನಾಲ್ಕು ದೇಶಗಳು ಚಂದ್ರನ ಮೇಲಿನ ಹಿಡಿತಕ್ಕೆ ಸ್ಪರ್ಧೆಗೆ ಇಳಿದಿವೆ. ಐವತ್ತು ವರ್ಷದ ಹಿಂದೆ ಈ ಸ್ಪರ್ಧೆಯಲ್ಲಿ ಭಾರತವೂ ಇರುತ್ತದೆ ಎನ್ನುವ ಮಾತನ್ನು ಕೇಳಿದ್ದರೆ ಸಾಕು ಜಗತ್ತು ನಕ್ಕಿರುತ್ತಿತ್ತು, ಭಾರತವೂ ನಂಬುತ್ತಿರಲಿಲ್ಲ. ಐದು ದಶಕದಲ್ಲಿ ಭಾರತ ಸಂಪೂರ್ಣ ಬದಲಾಗಿ ಹೋಗಿದೆ. ಚಂದ್ರಯಾನ-3 ಯಶಸ್ವಿಯಾಗಿ ಸಂಪನ್ನವಾದರೆ ಭಾರತದ ಓಟವನ್ನು, ಆದರ ವೇಗವನ್ನು ತಡೆಯುವುದು ಬೇರೆ ದೇಶಗಳಿಗೆ ಅಸಾಧ್ಯವಾಗುತ್ತದೆ. ಹಾಗೊಮ್ಮೆ ಫಲಿತಾಂಶ ನಮ್ಮಂತೆ ಆಗದಿದ್ದರೂ ಅದು ಕೂಡ ದೊಡ್ಡ ಗೆಲುವು ಎನ್ನುವುದರಲ್ಲಿ ಸಂಶಯವಿಲ್ಲ. ಭಾರತೀಯ ವಿಜ್ಞಾನಿಗಳು ಜಗತ್ತು ನಿಬ್ಬೆರಗಾಗಿ ತಮ್ಮೆಡೆಗೆ ನೋಡುವಂತೆ ಮಾಡುವಲ್ಲಿ ಅದಾಗಲೆ ಗೆದ್ದಿದ್ದಾರೆ .
 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com