ಆರೋಗ್ಯ ಭಾಗ್ಯಕ್ಕೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ? (ಕುಶಲವೇ ಕ್ಷೇಮವೇ)

ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿ ರಕ್ತಗತವಾಗಿ ದೇಹಕ್ಕೆ ಪ್ರೋಟಿನ್, ಶರ್ಕರ ಪಿಷ್ಟ, ಮೇದಸ್ಸು, ಜೀವಸತ್ವಗಳು (ವಿಟಮಿನ್‌ಗಳು) ಮತ್ತು ಖನಿಜಗಳು ಬೇಕಾಗುತ್ತವೆ. ನೀರು ಕೂಡ ಪೋಷಣೆಗೆ ಬಹಳ ಮುಖ್ಯ.
ಪೌಷ್ಟಿಕ ಆಹಾರ  (ಸಂಗ್ರಹ ಚಿತ್ರ)
ಪೌಷ್ಟಿಕ ಆಹಾರ (ಸಂಗ್ರಹ ಚಿತ್ರ)

ಪ್ರತಿ ವ್ಯಕ್ತಿಗೆ ಬಾಲ್ಯದಿಂದ ವೃದ್ಧಾಪ್ಯದವರೆಗೂ ಪೌಷ್ಟಿಕ ಆಹಾರ ಅತ್ಯಂತ ಅವಶ್ಯಕ. ಅದರಲ್ಲಿಯೂ ಋತುಸ್ರಾವವಾಗುವ ಹುಡುಗಿಯರು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ನಮ್ಮ ದೇಹಕ್ಕೆ ಬೇಕಾಗುವಷ್ಟು ಆಹಾರ ಸೇವನೆ ಮಾಡದಿದ್ದರೆ ಕೆಲಸ ಮಾಡಲು ಮತ್ತು ಓಡಾಡಲು ಶಕ್ತಿ ಇರುವುದಿಲ್ಲ. ದೇಹದ ಅಂಗಾಂಗಗಳು ಬೆಳವಣಿಗೆಯಾಗಲು ಮತ್ತು ಸುಸ್ಥಿತಿಯಲ್ಲಿರಲು ಆಹಾರದ ಅಗತ್ಯ ಬಹಳಷ್ಟಿರುತ್ತದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಎಲ್ಲಾ ಜೀವಕೋಶಗಳಿಗೂ ದೊರಕಬೇಕು. ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿ ರಕ್ತಗತವಾಗಿ ದೇಹಕ್ಕೆ ಪ್ರೋಟಿನ್, ಶರ್ಕರ ಪಿಷ್ಟ, ಮೇದಸ್ಸು, ಜೀವಸತ್ವಗಳು (ವಿಟಮಿನ್‌ಗಳು) ಮತ್ತು ಖನಿಜಗಳು ಬೇಕಾಗುತ್ತವೆ.

ನೀರು ಕೂಡ ಪೋಷಣೆಗೆ ಬಹಳ ಮುಖ್ಯ. ದೇಹದ ಒಟ್ಟು ತೂಕದಲ್ಲಿ 70 ಭಾಗ ನೀರು ಇರುತ್ತದೆ. ದೇಹದ ಎಲ್ಲಾ ಜೀವಕೋಶಗಳಲ್ಲಿಯೂ ನೀರು ಬಹುಮುಖ್ಯ ಘಟಕ. ದೇಹದಲ್ಲಿ ಜರುಗುವ ಎಲ್ಲಾ ರಸಾಯನಿಕ ಬದಲಾವಣೆಗಳು ಮತ್ತು ಇತರ ಕ್ರಿಯೆಗಳು ನೀರಿನ ಮಾಧ್ಯಮದಲ್ಲಿಯೇ ನಡೆಯುತ್ತವೆ. ಆದ್ದರಿಂದ ಕನಿಷ್ಠ ಎರಡು ಗರಿಷ್ಠ ಮೂರು ಲೀಟರ್ ನೀರನ್ನು ತಪ್ಪದೇ ಕುಡಿಯಬೇಕು.

ಪ್ರೋಟಿನ್

ನಾವು ಸೇವಿಸುವ ಆಹಾರದಿಂದ ದೇಹಕ್ಕೆ ಪ್ರೋಟಿನ್ ದೊರೆಯಬೇಕು. ದೇಹದ ಅಂಗಾಂಗಗಳ ಬೆಳವಣಿಗೆಗೆ, ಜೀವಕೋಶಗಳ ದುರಸ್ತಿಗೆ ಮತ್ತು ರಕ್ಷಣಾ ವ್ಯವಸ್ಥೆಗೆ ಅಗತ್ಯವಾಗಿ ಬೇಕು. ದೊಡ್ಡವರಿಗೆ ಒಂದು ಕೆಜಿ ತೂಕಕ್ಕೆ ಒಂದು ಪ್ರೋಟಿನ್ ಬೇಕಾದರೆ, ಬೆಳೆಯುವ ಹುಡುಗಿಯರಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಇನ್ನೂ ಹೆಚ್ಚು ಅಂದರೆ ಒಂದು ಕೆಜಿ ತೂಕಕ್ಕೆ 2 ರಿಂದ 3.5 ಗ್ರಾಂ ಪ್ರೋಟಿನ್ ಬೇಕು. ಒಂದು ಗ್ರಾಂ ಪ್ರೋಟಿನ್ ನಾಲ್ಕು ಕ್ಯಾಲೋರಿ ಶಕ್ತಿ ಉತ್ಪತ್ತಿ ಮಾಡುತ್ತದೆ. ಹಾಲು, ದ್ವಿದಳ ಧಾನ್ಯ, ಬೇಳೆಕಾಳು, ತೊಗರಿ, ಹೆಸರು, ಉದ್ದು, ಕಡಲೆ, ಮೊಟ್ಟೆ, ಮೀನು ಮತ್ತು ಮಾಂಸಗಳಲ್ಲಿ ಪ್ರೋಟಿನ್ ಇರುತ್ತದೆ.

ಶರ್ಕರ ಪಿಷ್ಟ (ಕಾರ್ಬೋಹೈಡ್ರೇಟ್)

ಶರ್ಕರ ಪಿಷ್ಟಗಳು ನಮಗೆ ಶಕ್ತಿಯನ್ನು ನೀಡುತ್ತವೆ. ನಮ್ಮ ದೇಹದ ಎಲ್ಲಾ ಚಟುವಟಿಕೆಗಳು ಈ ಶಕ್ತಿಯನ್ನು ಅವಲಂಬಿಸಿರುತ್ತವೆ. ಒಂದು ಗ್ರಾಂ ಶರ್ಕರ ಪಿಷ್ಟ ನಾಲ್ಕು ಕ್ಯಾಲೋರಿ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ನಮ್ಮ ದೇಹದ ಜೀವಕೋಶಗಳು ಸರಳ ಸಕ್ಕರೆಗಳನ್ನು ಉಪಯೋಗಿಸಿಕೊಂಡು ಶಾಖವನ್ನು ಉತ್ಪತ್ತಿ ಮಾಡುತ್ತವೆ. ಶಾಖವು ಶಕ್ತಿಯಾಗಿ ಪರಿವರ್ತನೆ ಹೊಂದಿ ಜೀವರಕ್ಷಣೆ ಮಾಡುತ್ತವೆ. ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ಹೆಚ್ಚಾಗಿ ಶರ್ಕರ ಪಿಷ್ಟಗಳಲ್ಲಿ ಇರುತ್ತವೆ. ಏಕದಳ ಧಾನ್ಯ ಅಂದರೆ ಅಕ್ಕಿ, ರಾಗಿ, ಜೋಳ, ಗೋಧಿ, ಆಲೂಗೆಡ್ಡೆ, ಸಬ್ಬಕ್ಕಿ ಮತ್ತು ಗೆಡ್ಡೆಗೆಣಸುಗಳಲ್ಲಿ ಕಾರ್ಬೋಹೈಡ್ರೇಟ್ ಇರುತ್ತದೆ.

ಮೇದಸ್ಸು (ಕೊಬ್ಬು)

ಒಂದು ಗ್ರಾಂ ಮೇದಸ್ಸು ಒಂಬತ್ತು ಕ್ಯಾಲೋರಿ ಶಕ್ತಿ ನೀಡುತ್ತದೆ. ಆಹಾರಕ್ಕೆ ಮೇದಸ್ಸು ರುಚಿ ಕೊಡುತ್ತದೆ. ಇದನ್ನು ತಿನ್ನಲು ನಮಗೆಲ್ಲಾ ಬಹಳ ಇಷ್ಟ. ವಡೆ, ಬಜ್ಜಿ, ಬೋಂಡಾ ನಮಗೆಲ್ಲಾ ಇಷ್ಟವಾದರೂ ಅಗತ್ಯವಾದ ಕ್ಯಾಲೋರಿಗಳಿಗಿಂತ ಹೆಚ್ಚು ಕೊಬ್ಬು ಬೇಕಿಲ್ಲ. ದೊಡ್ಡವರಿಗೆ ಅಂದರೆ ಹದಿನೆಂಟು ವರ್ಷ ತುಂಬಿದವರಿಗೆ 45 ಗ್ರಾಂನಿಂದ 60 ಗ್ರಾಂ ಮೇದಸ್ಸು ದಿನಕ್ಕೆ ಬೇಕು. ನಾವು ಪ್ರತಿದಿನ ಬಳಸುವ ಅಡುಗೆ ಎಣ್ಣೆಗಳಿಂದ ಮೇದಸ್ಸಿನ ಹೆಚ್ಚು ಭಾಗ ದೊರೆಯುತ್ತದೆ (ಕಡಲೆಕಾಯಿ ಎಣ್ಣೆ, ಕುಸುಬೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳು, ತುಪ್ಪ ಮತ್ತು ಮಾಂಸದ ಕೊಬ್ಬು).

ಜೀವಸತ್ವಗಳು (ವಿಟಮಿನ್‌ಗಳು)

ನಮ್ಮ ದೇಹದ ಚಯಾಪಚಯ ಕ್ರಿಯೆ ನಡೆಯಬೇಕಾದರೆ ಜೀವಸತ್ವ ಅಗತ್ಯ. ಜೀವಸತ್ವಗಳು ದೇಹದ ಬೆಳವಣಿಗೆ ಮಾಡುತ್ತವಲ್ಲದೇ ಅನೇಕ ಕಾಯಿಲೆಗಳನ್ನು ತಡೆಗಟ್ಟುತ್ತವೆ. ಆದ್ದರಿಂದಲೇ ಜೀವಸತ್ವಗಳನ್ನು ರಕ್ಷಕ ಆಹಾರಗಳೆಂದು ಕರೆಯುತ್ತಾರೆ. ಜೀವಸತ್ವಗಳನ್ನು ಎ, ಬಿ, ಬಿ1, ಬಿ2, ಬಿ6, ನಿಯಾಸಿನ್, ಬಿ12, ಫೋಲಿಕ್ ಆಮ್ಲ, ಸಿ, ಡಿ, , ಇ ಮತ್ತು ಕೆ ಮೇದಸ್ಸಿನಲ್ಲಿ ಕರಗುತ್ತವೆ. ಉಳಿದವುಗಳು ನೀರಿನಲ್ಲಿ ಕರಗುವುದಿಲ್ಲ.

  • ಎ ಜೀವಸತ್ವ: ದಿನವೊಂದಕ್ಕೆ 18 ವರ್ಷ ತುಂಬಿದವರಿಗೆ 3000 ದಿಂದ 4000 ಐಯುನಷ್ಟು ಎ ಜೀವಸತ್ವದ ಅವಶ್ಯಕತೆ ಇರುತ್ತದೆ. ಬೆಂಡೆಕಾಯಿ, ಹೀರೆಕಾಯಿ, ಹಾಗಲಕಾಯಿ ಸೇರಿದಂತೆ ಎಲ್ಲಾ ತರಕಾರಿಗಳು, ಟೊಮ್ಯಾಟೋ, ಹಾಲು, ತುಪ್ಪ, ಬೆಣ್ಣೆ, ಮೀನು ಮತ್ತು ಮೀನಿನ ಎಣ್ಣೆಗಲಲ್ಲಿ ಎ ಜೀವಸತ್ವ ಇದೆ. ಎಲ್ಲಾ ಸೊಪ್ಪುಗಳಲ್ಲಿಯೂ ಅದರಲ್ಲೂ ಮುಖ್ಯವಾಗಿ ನುಗ್ಗೆಸೊಪ್ಪು ಮತ್ತು ಚಕ್ರಮುನಿಸೊಪ್ಪುಗಳಲ್ಲಿ (ಇದಕ್ಕೆ ವಿಟಮಿನ್ ಸೊಪ್ಪು ಎಂದೇ ಹೆಸರು) ಅಧಿಕವಾಗಿರುತ್ತದೆ. ಎ ಜೀವಸತ್ವ ಕೊರತೆಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ. ರಾತ್ರಿ ಕುರುಡು, ಸೋಂಕು ರೋಗಗಳು ಕಾಣಿಸಿಕೊಳ್ಳುತ್ತವೆ ಮತ್ತು ಚವದ ಬಣ್ಣ ಬದಲಾಗುತ್ತದೆ.

  • ಬಿ1 ಜೀವಸತ್ವ: ದಿನವೊಂದಕ್ಕೆ ಒಂದರಿAದ ಎರಡು ಗ್ರಾಂ ಬಿ ಜೀವಸತ್ವ ನಮಗೆ ಬೇಕು. ಅಕ್ಕಿ, ಗೋಧಿ ಹಿಟ್ಟು, ಎಳ್ಳು, ಕಡಲೆಕಾಯಿ ಮತ್ತು ಒಣಮೆಣಸಿನಕಾಯಿಗಳಲ್ಲಿ ಈ ಜೀವಸತ್ವ ಇರುತ್ತದೆ. ಇದರ ಕೊರತೆಯಾದಲ್ಲಿ ಹಸಿವು, ತೂಕ ಕಡಿಮೆಯಾಗುವುದು, ಜೀರ್ಣಶಕ್ತಿ ತೊಂದರೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ.

  • ಬಿ2 ಜೀವಸತ್ವ: ಹಾಲು, ಹಾಲಿನ ಉತ್ಪನ್ನಗಳು, ಹಸಿರು ತರಕಾರಿಗಳು, ಮೀನು ಮತ್ತು ಮೊಟ್ಟೆಗಳಲ್ಲಿ ಬಿ2 ಜೀವಸತ್ವ ಅಧಿಕವಾಗಿರುತ್ತದೆ. ಇದರ ಕೊರತೆಯಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಕೆಂಪು ಕಣ್ಣು, ಮಂದ ದೃಷ್ಟಿ ತೊಂದರೆಗಳೂ ಉಂಟಾಗುತ್ತವೆ. ದಿನವೊಂದಕ್ಕೆ ನಮಗೆ 1.5 ಮಿಲಿ ಗ್ರಾಂ ಬಿ2 ಜೀವಸತ್ವ ಬೇಕು.

  • ಬಿ6 ಜೀವಸತ್ವ: ಇದು ಎಲ್ಲಾ ಬಗೆಯ ಹಸಿರು ತರಕಾರಿಗಳಲ್ಲಿ ಮತ್ತು ಮಾಂಸಾಹಾರದಲ್ಲಿ ಇರುತ್ತದೆ. ಇದರ ಕೊರತೆಯಿಂದ ಮಕ್ಕಳಲ್ಲಿ ಅಪಸ್ಮಾರ (ಫಿಟ್ಸ್) ಉಂಟಾಗುತ್ತದೆ.

  • ನಿಯಾಸಿನ್: ನಮಗೆ ದಿನಕ್ಕೆ 10 ಗ್ರಾಂ ನಿಯಾಸಿನ್ ಬೇಕು. ಗೋಧಿ, ಆಲೂಗೆಡ್ಡೆ, ಬೇಳೆಕಾಳುಗಳು, ಟೊಮ್ಯಾಟೋ, ಹಸಿರು ಸೊಪ್ಪುಗಳು, ತರಕಾರಿಗಳು ಮತ್ತು ಮಾಂಸಾಹಾರಗಳಲ್ಲಿ ನಿಯಾಸಿನ್ ಇರುತ್ತದೆ. ನಿಯಾಸಿನ್ ಕೊರತೆಯಾದಲ್ಲಿ ಮಾನಸಿಕ ತೊಂದರೆ ಅಂದರೆ ಆತಂಕ, ಖಿನ್ನತೆ, ಚರ್ಮದ ಕಾಯಿಲೆ ಮತ್ತು ಜೀರ್ಣಾಂಗಗಳ ಕಾಯಿಲೆಗಳು ಉಂಟಾಗುತ್ತವೆ.

(ಮುಂದುವರೆಯುತ್ತದೆ)

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com