ಡಾಲರ್ ಎದುರು ರೂಪಾಯಿ ಮೌಲ್ಯವೇಕೆ ಕುಸಿಯುತ್ತಿದೆ? (ಹಣಕ್ಲಾಸು)

ಹಣಕ್ಲಾಸು-380-ರಂಗಸ್ವಾಮಿ ಮೂಕನಹಳ್ಳಿ
ಡಾಲರ್-ರೂಪಾಯಿ (ಸಂಗ್ರಹ ಚಿತ್ರ)
ಡಾಲರ್-ರೂಪಾಯಿ (ಸಂಗ್ರಹ ಚಿತ್ರ)

ಭಾರತದ ಆರ್ಥಿಕತೆ ವೇಗವಾಗಿ ಮುಂದುವರಿಯುತ್ತಿದೆ. ಜಗತ್ತಿನ ಇತರ ಎಲ್ಲಾ ದೇಶಗಳಿಗಿಂತ ನಮ್ಮ ಜಿಡಿಪಿ ಹೆಚ್ಚಾಗುತ್ತಿದೆ. ಗ್ರೋಥ್ ರೇಟ್ ಏರುಗತಿಯಲ್ಲಿದೆ, ಎನ್ನುವ ಮಾತುಗಳನ್ನು ನಾವು ಕೇಳುತ್ತಲೆ ಇದ್ದೇವೆ. ಇದರ ನಡುವೆ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಕುಸಿತ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರೂಪಾಯಿ ಈ ಪ್ರಮಾಣದ ಅಪಮೌಲ್ಯವಾಗಿರುವುದು ಇದೆ ಮೊದಲು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಈ ಲೇಖನ ಬರೆಯುವಾಗ ಒಂದು ಡಾಲರ್ 83 ರೂಪಾಯಿಗೂ ಮೀರಿದೆ. ಭಾರತದ ಆರ್ಥಿಕತೆ, ಆಂತರಿಕ ಖರೀದಿ ಶಕ್ತಿ ತಕ್ಷಣದ ಮಟ್ಟಿಗೆ ಕುಸಿತ ಕಾಣದಿದ್ದರೂ ಡಾಲರ್ ಎದುರು ರೂಪಾಯಿ ಈ ರೀತಿ ಮೌಲ್ಯವೇಕೆ ಕಳೆದುಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಇಂದಿನ ಲೇಖನದಲ್ಲಿ ಅದಕ್ಕೆ ಒಂದಷ್ಟು ಕಾರಣ, ಉತ್ತರ ಹುಡಕುವ ಪ್ರಯತ್ನವನ್ನ ಮಾಡೋಣ.

ಪ್ರಮುಖ ಕಾರಣಗಳು:

  1. ಅಮೆರಿಕನ್ ಡಾಲರ್ ಜಾಗತಿಕ ಹಣವಾಗಿದೆ: ನಾವು ಡಾಲರ್ನನ್ನು ವರ್ಲ್ಡ್ ಕರೆನ್ಸಿ, ಜಾಗತಿಕ ಹಣ ಎಂದು ಒಪ್ಪಿಕೊಂಡಿದ್ದೇವೆ. ಜಗತ್ತಿನಲ್ಲಿ ನಡೆಯುವ ವ್ಯಾಪಾರ, ವಹಿವಾಟಿನ 70 ಪ್ರತಿಶತಕ್ಕೂ ಹೆಚ್ಚು ಸೆಟಲ್ಮೆಂಟ್ ಆಗುವುದು ಡಾಲರ್ನಲ್ಲಿ. ಅಂದರೆ ಅಮೇರಿಕಾ ದೇಶದ ಜೊತೆಗೆ ನೇರವಾಗಿ ವ್ಯಾಪಾರ ಮಾಡದೆ ಇದ್ದ ದೇಶಗಳು ಕೂಡ ತಮ್ಮ ನಡುವಿನ ಟ್ರೇಡ್ ಸೆಟ್ಟಲ್ ಮಾಡಿಕೊಳ್ಳುವುದು ಡಾಲರ್ನಲ್ಲಿ. ಹೀಗಾಗಿ ಜಗತ್ತಿನ ಎಲ್ಲಾ ದೇಶಗಳೂ ಡಾಲರ್ನನ್ನು ರಿಸೆರ್ವೆ ಕರೆನ್ಸಿಯನ್ನಾಗಿ ಇಟ್ಟು ಕೊಳ್ಳುತ್ತೇವೆ. ಇಟ್ಟು ಕೊಳ್ಳಬೇಕು ಅದು ಅಲಿಖಿತ ನಿಯಮ. ಅದೆಷ್ಟೇ ದೊಡ್ಡ ಪಶುವಾಗಿದ್ದರೂ ಮೂಗುದಾರ ಹಿಡಿದು ಎಳೆದರೆ ಅದು ನಿಯಂತ್ರಣಕೆ ಬಂದೆ ಬರುತ್ತದೆ. ಡಾಲರ್ ಜಾಗತಿಕ ಮಟ್ಟದಲ್ಲಿ ಮೂಗುದಾರದಂತೆ ಕೆಲಸ ಮಾಡುತ್ತದೆ. ತಮ್ಮ ಹಣವನ್ನು ಏರಿಕೆ ಅಥವಾ ಇಳಿಕೆ ಮಾಡುವ ಮೂಲಕ ಜಗತ್ತಿನ ಇತರ ದೇಶಗಳ ಆರ್ಥಿಕತೆಯನ್ನು ನಿಯಂತ್ರಿಸುವ ಮಟ್ಟದಲ್ಲಿದೆ.
  2. ಹೆಚ್ಚಾಗುವ ಡಾಲರ್ ಮೇಲಿನ ಡಿಮ್ಯಾಂಡ್: ಜಾಗತಿಕವಾಗಿ ಕಚ್ಚಾ ತೈಲ, ಮತ್ತು ಚಿನ್ನ ಅತ್ಯಂತ ಹೆಚ್ಚು ಬೇರೆ ದೇಶಗಳು ತರಿಸಿಕೊಳ್ಳುವ ವಸ್ತುಗಳು. ಇವುಗಳ ಬೆಲೆ ಡಾಲರ್ನಲ್ಲಿ ನಿಗದಿಯಾಗಿರುತ್ತದೆ. ಹೀಗಾಗಿ ಇವುಗಳಲ್ಲಿ ಆಗುವ ಬೆಲೆಯೇರಿಕೆ, ವಿನಿಮಯ ದರ ವ್ಯತ್ಯಾಸ ಹೆಚ್ಚು ಡಾಲರ್ ನೀಡುವಂತೆ ಮಾಡುತ್ತದೆ. ಉದಾಹರಣೆಗೆ ನಾವು 100 ಡಾಲರ್ ಕಚ್ಚಾ ತೈಲವನ್ನು ತರಿಸಿಕೊಂಡಿರುತ್ತೇವೆ ಎಂದುಕೊಳ್ಳಿ. ತರಿಸಿಕೊಳ್ಳುವ ಸಮಯದಲ್ಲಿ ಡಾಲರ್ ಬೆಲೆ 70 ರೂಪಾಯಿ ಇದ್ದು, ಅವರಿಗೆ ಹಣ ನೀಡುವ ಸಮಯದಲ್ಲಿ ಡಾಲರ್ ಬೆಲೆ 83 ಆಗಿದ್ದರೆ ಆಗ ನಾವು ಪ್ರತಿ ಡಾಲರ್ಗೆ 13 ರೂಪಾಯಿ ಹೆಚ್ಚು ನೀಡಬೇಕಾಗುತ್ತದೆ. ಕೊಡಬೇಕಾಗಿರುವ ಡಾಲರ್ 100 ಅದರಲ್ಲಿ ಬದಲಾವಣೆ ಇಲ್ಲ. ಆದರೆ ಗಮನಿಸಿ ಕೊಂಡಾಗ 100*70= 7000 ರೂಪಾಯಿ ಮೊತ್ತದ ತೈಲವನ್ನು ತರಿಸಿಕೊಂಡೆವು. ಅವರಿಗೆ ಈ ಹಣವನ್ನು ನೀಡುವಾಗ ಡಾಲರ್ ಬೆಲೆ 83, ಅಂದರೆ 100*83=8300 . ಪ್ರತಿ ನೂರು ಡಾಲರ್ಗೆ 1300 ರೂಪಾಯಿ ಹೆಚ್ಚಿಗೆ ನೀಡಿದಂತಾಯ್ತು. ಗಮನಿಸಿ ನೋಡಿ, ಇಲ್ಲಿ ಅಮೆರಿಕಾದ ಆರ್ಥಿಕತೆ ಚೆನ್ನಾಗಿದೆಯೋ, ಇಲ್ಲವೋ ಅದರ ಪ್ರಶ್ನೆ ಬರುವುದಿಲ್ಲ. ಹೆಚ್ಚಾದ ತೈಲ ಬೆಲೆ, ಬದಲಾದ ವಿದೇಶಿ ವಿನಿಮಯ ಮಾತ್ರ ಲೆಕ್ಕಕ್ಕೆ ಬರುತ್ತದೆ.
  3. ಹೆಚ್ಚುತ್ತಿರುವ ಫೆಡರಲ್ ಇಂಟರೆಸ್ಟ್ ರೇಟ್: ಅಮೇರಿಕಾ ದೇಶದಲ್ಲಿ ಹೆಚ್ಚಿರುವ ಹಣದುಬ್ಬರದ ಸಲುವಾಗಿ ಬಡ್ಡಿ ದರವನ್ನು ಒಂದೇ ಸಮನೆ ಏರಿಸಿಕೊಂಡು ಬರುತ್ತಿದ್ದಾರೆ. 2023 ರ ಸೆಪ್ಟೆಂಬರ್ 20, 21ರ ಲ್ಲಿ ನಡೆಯಲಿರುವ ಸಭೆಯಲ್ಲಿ ಬಡ್ಡಿದರವನ್ನು 5.25 ಅಥವಾ 5.5 ರ ಆಸುಪಾಸಿನಲ್ಲಿ ಇಟ್ಟುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಕಳೆದ 22 ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದ ಬಡ್ಡಿಯನ್ನು ಅಮೆರಿಕನ್ನರು ಕಂಡಿರಲಿಲ್ಲ. ಹಣದುಬ್ಬರ ನಿಯಂತ್ರಿಸಲು ಬಡ್ಡಿ ದರ ಏರಿಕೆ ಅಲ್ಲಿ ಅನಿವಾರ್ಯ. ಹೀಗೆ ಅಲ್ಲಿ ಬಡ್ಡಿ ದರ ಏರಿಸಿದರೆ, ಭಾರತದಲ್ಲಿ ಹೂಡಿಕೆ ಮಾಡಿದ್ದವರು ಹಣವನ್ನು ತೆಗೆದು ಡಾಲರ್ನಲ್ಲಿ ಹೂಡಿಕೆ ಮಾಡುತ್ತಾರೆ. ಏಕೆಂದರೆ ರೂಪಾಯಿಯಲ್ಲಿ ಗಳಿಸಿದ ಲಾಭ ಅಪಮೌಲ್ಯದಲ್ಲಿ ಕರಗಿ ಹೋಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಅಮೇರಿಕಾದಲ್ಲಿ ಹೆಚ್ಚಿನ ಬಡ್ಡಿ ಸಿಕ್ಕರೆ ಹೂಡಿಕೆದಾರರ ಮೊದಲ ಆದ್ಯತೆ ಡಾಲರ್. ಹೀಗಾಗಿ ಭಾರತದಲ್ಲಿನ ಹೂಡಿಕೆದಾರರ ಗಮನ ಡಾಲರ್ ಕಡೆಗೆ ಹೊರಳಿದೆ.
  4. ಕ್ಯಾಪಿಟಲ್ ಔಟ್ ಫ್ಲೋ: ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಸಂಸ್ಥೆಗಳು ಲಾಭವನ್ನು ಬುಕ್ ಮಾಡಿ ಹಣವನ್ನು ಡಾಲರ್ ಮೂಲಕ ವರ್ಗಾವಣೆ ಮಾಡಲು ಹೊರಟಾಗ ಕೂಡ ರೂಪಾಯಿ ಅಪಮೌಲ್ಯವಾಗುತ್ತದೆ. ಗಮನಿಸಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿರುವ ವಿದೇಶಿ ಸಂಸ್ಥೆಗಳು ಹೆಚ್ಚಿನ ಲಾಭವನ್ನು ನೋಡಿದಾಗ ತಮ್ಮ ಷೇರನ್ನು ಮಾರುವುದರ ಮೂಲಕ ಹಣವನ್ನು ಪಡೆದುಕೊಂಡು ಮರಳಿ ತಮ್ಮ ಮೂಲ ದೇಶಕ್ಕೆ ಕಳಿಸಲು ಯತ್ನಿಸುತ್ತಾರೆ. ಇದು ಸಹಜ. ಇದು ಭಾರತದ ಮಟ್ಟಿಗೆ ಬಂಡವಾಳ ಹಿಂತೆಗೆತ ಎನ್ನುವಂತಾಗುತ್ತದೆ. ಹೀಗೆ ಭಾರತದಿಂದ ಹೊರಕ್ಕೆ ಹೋಗುವ ಹಣವನ್ನು ಕ್ಯಾಪಿಟಲ್ ಔಟ್ ಫ್ಲೋ ಎನ್ನಲಾಗುತ್ತದೆ. ಸಹಜವಾಗೇ ಇದು ಸಾಮಾನ್ಯ ಸಮಯಕ್ಕಿಂತ ಹೆಚ್ಚಿನ ಡಾಲರ್ ಮೇಲಿನ ಡಿಮ್ಯಾಂಡ್ ಸೃಷ್ಟಿಸುತ್ತದೆ. ಇದು ರೂಪಾಯಿ ಕುಸಿತಕ್ಕೆ ನಾಂದಿ ಹಾಡುತ್ತದೆ.
  5. ಕುಸಿತ ಕಾಣುವ ಫಾರಿನ್ ಎಕ್ಸ್ಚೇಂಜ್ ರಿಸರ್ವ್: ಭಾರತದ ವಿದೇಶಿ ವಿನಿಮಯ ಸಂಗ್ರಹ 2022ಕ್ಕೆ ಹೋಲಿಸಿದರೆ 45 ಬಿಲಿಯನ್ ಅಮೆರಿಕನ್ ಡಾಲರ್ ಕುಸಿತ ಕಂಡಿದೆ. 2022 ರಲ್ಲಿ 607 ಬಿಲಿಯನ್ ಡಾಲರ್ ಇದ್ದದ್ದು 2023ರ ಸೆಪ್ಟೆಂಬರ್ನಲ್ಲಿ 562 ಬಿಲಿಯನ್ ಡಾಲರ್ ಆಗಿದೆ. ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿದಷ್ಟು ನಾವು ಜಾಗತಿಕ ಮಟ್ಟದಲ್ಲಿ ಚೌಕಾಸಿ ಮಾಡುವ ಕ್ಷಮತೆಯನ್ನು ಗಳಿಸಿಕೊಳ್ಳುತ್ತೇವೆ. ಎಕಾನಾಮಿಯಲ್ಲಿ ಡಾಲರ್ ಬೇಡಿಕೆ ಹೆಚ್ಚಾದಾಗ, ರೂಪಾಯಿ ಮೌಲ್ಯ ಕುಸಿಯುತ್ತದೆ. ಹೆಚ್ಚಿನ ಕುಸಿತವನ್ನು ತಪ್ಪಿಸಲಿ ಆರ್ಬಿಐ ತನ್ನ ವಿದೇಶಿ ಹಣದ ಸಂಗ್ರಹದಲ್ಲಿನ ಹಣವನ್ನು ತೆಗೆದು ಡಿಮ್ಯಾಂಡ್ ಪೂರೈಸುತ್ತದೆ, ತನ್ಮೂಲಕ ಹೆಚ್ಚಿನ ಕುಸಿತವನ್ನು ತಡೆಯುತ್ತದೆ.
  6. ಕುಸಿಯುತ್ತಿರುವ ಚೀನಾದ ಯುಆನ್: ಚೀನಾ ದೇಶದ ಹಣ ಅಮೆರಿಕನ್ ಡಾಲರ್ ಎದುರು ಕುಸಿತವನ್ನು ಕಂಡಿದೆ. ಈ ರೀತಿಯ ಕುಸಿತವಾದಾಗ ಚೀನಾದ ಪದಾರ್ಥಗಳು ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟು ಚೀಪ್ ಆಗುತ್ತದೆ. ಇನ್ನಷ್ಟು ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಆ ಪದಾರ್ಥಗಳ ಬೇಡಿಕೆ ಹೆಚ್ಚುತ್ತದೆ. ಆಗ ಭಾರತವೂ ಸೇರಿ ಇತರ ದೇಶಗಳ ಪದಾರ್ಥಗಳು ಹೆಚ್ಚಿನ ಬೆಲೆಯುಳ್ಳವು ಎನ್ನಿಸುತ್ತದೆ. ಹೀಗಾಗಿ ಇವುಗಳ ಮೇಲಿನ ಬೇಡಿಕೆ ಕುಸಿಯುತ್ತದೆ. ಇಂತಹ ಅಪಾಯದಿಂದ ತಪ್ಪಿಸಿಕೊಳ್ಳಲು ಕೂಡ ಕೆಲವೊಮ್ಮೆ ಭಾರತ ತನ್ನ ರೂಪಾಯಿಯನ್ನು ಅಪಮೌಲ್ಯ ಮಾಡಿಕೊಳ್ಳುತ್ತದೆ. ಇದನ್ನು ಕರೆಕ್ಷನ್ ಎನ್ನಲಾಗುತ್ತದೆ.
  7. ಸೌದಿ , ರಷ್ಯಾ ಸೇರಿದಂತೆ ಒಪೆಕ್ ರಾಷ್ಟ್ರಗಳು ಕಡಿಮೆ ತೈಲವನ್ನು ಉತ್ಪಾದಿಸಲು ನಿರ್ಧರಿಸಿವೆ: ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯನ್ನು ಬೀಳದಂತೆ ತಡೆಯಲು ಒಪೆಕ್ ರಾಷ್ಟಗಳು ತಮ್ಮ ಉತ್ಪತ್ತಿಯನ್ನು ಕಡಿಮೆ ಅಥವಾ ಜಾಸ್ತಿ ಮಾಡುವ ಮೂಲಕ ನಿಯಂತ್ರಿಸುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತೈಲವನ್ನು ಉತ್ಪಾದಿಸಲು ಈ ದೇಶಗಳು ನಿರ್ಧರಿಸಿವೆ. ಸಹಜವಾಗೇ ಡಿಮ್ಯಾಂಡ್ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಯಾಗುತ್ತದೆ. ಇದು ತೈಲ ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೈಲ ಬೆಲೆ ಹೆಚ್ಚಾದರೆ ಇತರ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಇದು ಹಣದುಬ್ಬರಕ್ಕೆ ದಾರಿಯಾಗುತ್ತದೆ. ವಸ್ತುವಿನ ಬೆಲೆ ಹೆಚ್ಚಾದಷ್ಟೂ ಹಣದ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಇದು ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗುತ್ತದೆ.

ಕೊನೆಮಾತು: ಆಗಸ್ಟ್ ತಿಂಗಳಲ್ಲಿ ಎಫ್ ಐ ಐ ಗಳು ಹತ್ತಿರತ್ತಿರ 11 ಸಾವಿರ ಕೋಟಿಗೂ ಮೀರಿದ ಷೇರುಗಳನ್ನು ನಗದು ಮಾರುಕಟ್ಟೆಯಲ್ಲಿ ಮಾರಿದ್ದಾರೆ. ಇದು ಕ್ಯಾಶ್ ಔಟ್ ಫ್ಲೋ, ಕ್ಯಾಪಿಟಲ್ ಔಟ್ ಫ್ಲೋ ಗೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ ಹೆಚ್ಚುತ್ತಿರುವ ತೈಲಬೆಲೆ, ಕುಸಿಯುತ್ತಿರುವ ಚೀನಾದ ಕರೆನ್ಸಿ ಮೌಲ್ಯ, ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಎಲ್ಲವು ಸೇರಿಕೊಂಡು ಡಾಲರ್ ಎದುರು ರೂಪಾಯಿ ಕುಸಿತಕ್ಕೆ ಕಾರಣವಾಗಿವೆ. ರೂಪಾಯಿ ಕುಸಿತವಾದ ತಕ್ಷಣ ಅಮೇರಿಕಾ ಆರ್ಥಿಕತೆ ಬಲಿಷ್ಠವಾಗಿದೆ ಎಂದಲ್ಲ, ಭಾರತದ ಆರ್ಥಿಕತೆ ಶಕ್ತಿ ಕಳೆದುಕೊಂಡಿದೆ ಎಂದಲ್ಲ. ಇವೆಲ್ಲವೂ ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಅಂಶಗಳು. ದೀರ್ಘಕಾಲದಲ್ಲಿ ಕುಸಿತ ಮುಂದುವರಿದರೆ ಮಾತ್ರ ಅದು ಅಪಾಯ. ಉಳಿದಂತೆ ಇತ್ತೀಚೆಗೆ ಕಾಣುತ್ತಿರುವ ಏರಿಳಿತಗಳು ಜಾಗತಿಕ ವಿತ್ತ ಜಗತ್ತಿನಲ್ಲಿ ಸಾಮಾನ್ಯ. ಅದನ್ನು ಏಕಮುಖವಾಗಿ ವಿಶ್ಲೇಷಿಸುವುದು ತಪ್ಪಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com