ಉತ್ತಮ ಆರೋಗ್ಯಕ್ಕೆ ವಿಟಮಿನ್ B12, ಪ್ರೋಟಿನ್ ಎಷ್ಟು ಮುಖ್ಯ? (ಕುಶಲವೇ ಕ್ಷೇಮವೇ)

ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಣ್ಣುಮಕ್ಕಳಲ್ಲಿ ಬಿ12 ಕೊರತೆಯಿರುವುದು ಕಂಡುಬರುತ್ತಿದೆ. ನಮಗೆ ದಿನವೊಂದಕ್ಕೆ 1ರಿಂದ 2 ಗ್ರಾಂ ಜೀವಸತ್ವ ಬಿ12 ಬೇಕು.
ವಿಟಮಿನ್ B12
ವಿಟಮಿನ್ B12

(ಹಿಂದಿನ ಅಂಕಣ ‘ಆರೋಗ್ಯ ಭಾಗ್ಯಕ್ಕೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ?’ದ ಮುಂದುವರೆದ ಭಾಗ)

ಜೀವಸತ್ವ ಬಿ12: ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಣ್ಣುಮಕ್ಕಳಲ್ಲಿ ಬಿ12 ಕೊರತೆಯಿರುವುದು ಕಂಡುಬರುತ್ತಿದೆ. ನಮಗೆ ದಿನವೊಂದಕ್ಕೆ 1ರಿಂದ 2 ಗ್ರಾಂ ಜೀವಸತ್ವ ಬಿ12 ಬೇಕು. ಹಾಲು ಮತ್ತು ಮಾಂಸಾಹಾರದಲ್ಲಿ ಇದು ಹೆಚ್ಚಾಗಿರುತ್ತದೆ. ನಮ್ಮ ದೇಹದಲ್ಲಿ ರಕ್ತ ಉತ್ಪಾದನೆಯಾಗಲು ಇದು ಬಹಳ ಮುಖ್ಯ. ಬಿ12 ಕೊರತೆಯಾದಲ್ಲಿ ರಕ್ತಹೀನತೆ ಉಂಟಾಗುತ್ತದೆ.

ಫೋಲಿಕ್ ಆಮ್ಲ: ನಮಗೆ ದಿನಕ್ಕೆ 5 ಮಿಲಿ ಗ್ರಾಂ ಫೋಲಿಕ್ ಆಮ್ಲ ಬೇಕು. ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ, ಹೆಸರುಬೇಕು ಮತ್ತು ಉದ್ದುಗಳಲ್ಲಿ ಇದು ಹೆಚ್ಚಾಗಿರುತ್ತದೆ. ಫೋಲಿಕ್ ಆಮ್ಲದ ಕೊರತೆಯಾದಲ್ಲಿ ಬೆಳೆಯುವ ಹುಡುಗಿಯರಲ್ಲಿ, ಗರ್ಭಿಣಿಯರಲ್ಲಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಉಂಟಾಗುತ್ತದೆ.

ಜೀವಸತ್ವ ಸಿ: ದಿನವೊಂದಕ್ಕೆ ನಮಗೆ 50 ಮಿಲಿಗ್ರಾಂ ಜೀವಸತ್ವ ಬೇಕು. ನಿಂಬೆಹಣ್ಣು, ಮೋಸಂಬಿ, ಕಿತ್ತಲೆ ಹಣ್ಣು ಮತ್ತು ಬೆಟ್ಟದ ನೆಲ್ಲಿಕಾಯಿಗಳಲ್ಲಿ ಅತ್ಯಧಿಕವಾಗಿರುತ್ತದೆ. ಎಲ್ಲ ಬಗೆಯ ಸೊಪ್ಪುಗಳು, ಟೊಮ್ಯಾಟೋ, ಆಲೂಗೆಡ್ಡೆ, ಮೊಳಕೆ ಬರಿಸಿದ ಕಾಳುಗಳಲ್ಲಿ ಜೀವಸತ್ವ ಸಿ ಇದೆ ವಿಟಮಿನ್ ಸಿ ಕೊರತೆಯಾದಲ್ಲಿ ವಸಡಿನಿಂದ ರಕ್ತಸ್ರಾವವಾಗುತ್ತದೆ. ಗಾಯವಾದರೆ ಬೇಗ ಮಾಯುವುದಿಲ್ಲ.

ಜೀವಸತ್ವ ಡಿ: ಹಾಲು, ಮೊಟ್ಟೆ ಮತ್ತು ಸೊಪ್ಪುಗಳಲ್ಲಿ ಜೀವಸತ್ವ ಡಿ ಇರುತ್ತದೆ. ಇದರ ಕೊರತೆಯಾದಲ್ಲಿ ಚರ್ಮದ ಕಾಂತಿ ಇರುವುದಿಲ್ಲ. ಜೊತೆಗೆ ಸುಸ್ತು ಮತ್ತು ವಯಸ್ಸಿಗೇ ಮುಂಚೆ ವೃದ್ಧಾಪ್ಯ ಬಂದಂತೆ ಭಾಸವಾಗುತ್ತದೆ.

ಜೀವಸತ್ವ ಕೆ: ವಿಟಮಿನ್ ಕೆ ವಿಶೇಷವೆಂದರೆ ನಮ್ಮ ದೇಹದಲ್ಲಿಯೇ ಕರುಳುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಹಸಿರು ತರಕಾರಿಗಳು ಮತ್ತು ಟೊಮ್ಯಾಟೋಗಳಲ್ಲಿ ಇದು ಅಧಿಕವಾಗಿರುತ್ತದೆ. ಇದರ ಕೊರತೆಯಾದಲ್ಲಿ ರಕ್ತಸ್ರಾವವಾಗುತ್ತದೆ.

ಖನಿಜ ಲವಣಗಳು: ನಾವು ಪ್ರತಿಯೊಬ್ಬರೂ ದಿನವೊಂದಕ್ಕೆ 20 ರಿಂದ 30 ಗ್ರಾಂ ಲವಣಗಳನ್ನು ವಿಸರ್ಜಿಸುತ್ತೇವೆ. ಈ ಲವಣಗಳಲ್ಲಿ ಮುಖ್ಯವಾದವೆಂದರೆ ಕ್ಲೋರೈಡ್, ಸೋಡಿಯಂ ಮತ್ತು ಪೊಟ್ಯಾಸಿಯಂ ಫಾಸ್ಫೇಟ್‌ಗಳು. ಇವುಗಳಲ್ಲಿ ಆಹಾರದ ಮೂಲಕ ಪ್ರತಿದಿನ ಪೂರೈಕೆ ಮಾಡಬೇಕು. ಇದೇ ರೀತಿ ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ ಮುಂತಾದ ಖನಿಜಗಳು ದೇಹದ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಕ್ಯಾಲ್ಸಿಯಂ: ಪ್ರತಿದಿನ ನಮಗೆ 1 ಗ್ರಾಂ ಕ್ಯಾಲ್ಸಿಯಂ ಬೇಕು. ಹಾಲು, ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪು ತರಕಾರಿಗಳು, ರಾಗಿ, ಗೋಧಿ ಮತ್ತು ಅಕ್ಕಿಹಿಟ್ಟುಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಕ್ಯಾಲ್ಸಿಯಂನ ಕೊರತೆಯಿಂದ ಮೂಳೆಗಳು ಬೆಳವಣಿಗೆಯಾಗುವುದಿಲ್ಲ. ಮಾಂಸಖಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ಕಬ್ಬಿಣ: ನಮಗೆ ದಿನಕ್ಕೆ 20 ರಿಂದ 30 ಮಿಲಿ ಗ್ರಾಂ ಕಬ್ಬಿಣ ಬೇಕು. ಏಕದಳ ಧಾನ್ಯ, ಎಳ್ಳು, ಹಸಿರು ಸೊಪ್ಪುಗಳು ಅದರಲ್ಲಿಯೂ ನುಗ್ಗೆ ಸೊಪ್ಪು, ಚಕ್ರಮುನಿ ಸೊಪ್ಪುಗಳಲ್ಲಿ ಅಧಿಕವಾಗಿ, ಬೀಟ್‌ರೂಟಿನಂತಹ ತರಕಾರಿಗಳು ಮತ್ತು ಮಾಂಸಾಹಾರದಲ್ಲಿ ಹೆಚ್ಚಾಗಿ ಇರುತ್ತದೆ. ದೇಹಕ್ಕೆ ಕಬ್ಬಿಣಾಂಶದ ಕೊರತೆಯಾದರೆ ರಕ್ತಹೀನತೆ ಉಂಟಾಗುತ್ತದೆ. ಹೆಚ್ಚು ಕಡಿಮೆ ಎಲ್ಲಾ ಮಹಿಳೆಯರು ಋತುಮತಿಯಾದಾಗಿನಿಂದ ಋತುಬಂಧವಾಗುವ ತನಕ ರಕ್ತಹೀನತೆಯಿಂದ ಅಂದರೆ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಾರೆ.

ಪ್ರೋಟಿನ್: ನಮ್ಮ ದೇಹದ ಮಾಂಸಖಂಡಗಳು ಮತ್ತು ವಿವಿಧ ಅಂಗಗಳನ್ನು ನಿರ್ಮಿಸುವ ಮುಖ್ಯ ವಸ್ತುವಾಗಿದೆ. ದೇಹರಚನಾ ಕಾರ್ಯದಲ್ಲಿ ಪ್ರಮುಖ ಪಾತ್ರ ಪ್ರೋಟಿನಿನದು. ಮೇದಸ್ಸು ಮತ್ತು ಶರ್ಕರ ಪಿಷ್ಟ ದೇಹದ ಇಂಧನಗಳಾಗಿ ಕೆಲಸ ಮಾಡುತ್ತವೆ. ಇವುಗಳು ಶರೀರದಲ್ಲಿ ದಹನ ಹೊಂದಿ ಅತ್ಯಗತ್ಯ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಯನ್ನು ಒದಗಿಸುತ್ತವೆ. ದೇಹದ ಉಷ್ಣತೆ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತವೆ.

ಖನಿಜಗಳು ಮೂಳೆ ಮತ್ತು ಹಲ್ಲುಗಳ ರಚನೆಯಲ್ಲಿ ಮುಖ್ಯ ಅಂಶಗಳಾಗಿವೆ. ನಮ್ಮ ದೇಹದಲ್ಲಿ ಪ್ರೋಟಿನ್, ಶರ್ಕರ ಪಿಷ್ಟಗಳು, ಮೇದಸ್ಸು, ಜೀವಸತ್ವಗಳು ಮತ್ತು ಖನಿಜಗಳ ಸೂಕ್ತ ಉಪಯೋಗ ಮತ್ತು ರಕ್ತಗತವಾಗುವ ಕ್ರಿಯೆಗಳು ಅಡೆತಡೆಯಿಲ್ಲದೇ ಕ್ರಮಬದ್ಧತೆಯಲ್ಲಿ ನಡೆಯಲು ಜೀವಸತ್ವಗಳು ಕಾರಣ. ದೇಹವು ಸರಿಯಾಗಿ ಬೆಳವಣಿಗೆ ಹೊಂದಲು ಮತ್ತು ಕಾಯಿಲೆಗಳು ಬಾರದಂತೆ ತಡೆಗಟ್ಟಿ ನಮ್ಮನ್ನು ಕಾಪಾಡುವುದಕ್ಕೂ ಇವುಗಳು ಕಾರಣ.

ಸಮತೋಲಿತ ಆಹಾರ

ಸರಿಯಾದ ಸಮತೋಲನ ಆಹಾರ ಸೇವನೆ ಮಾಡದಿದ್ದಲ್ಲಿ ಅನೇಕ ಕಾಯಿಲೆಗಳು ಬರುತ್ತವೆ. ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ದೊರೆಯದೇ ಇದ್ದಾದ ಉಂಟಾಗುವ ಅಪೌಷ್ಟಿಕತೆಯಿಂದ ಕಡಿಮೆ ತೂಕ, ಎತ್ತರ, ಆಯಾಸ, ದುರ್ಬಲ ಮಾಂಸಖಂಡಗಳು, ಒಣಗಿಕೊಂಡ ಧರ್ಮ, ರಾತ್ರಿಕುರುಡುತನ, ಭೇದಿ ಮತ್ತು ವಸಡಿನಲ್ಲಿ ರಕ್ತಸ್ರಾವ ಉಂಟಾಗುತ್ತವೆ. ಪ್ರೋಟಿನ್ ಸೇವನೆಯಲ್ಲಿ ಕೊರತೆಯಾದರೆ ಶರೀರ ಊದಿಕೊಳ್ಳುತ್ತದೆ.

ಅಪೌಷ್ಟಿಕತೆ ಬಾರದಂತೆ ತಡೆಯಲು ಸಮತೋಲನ ಆಹಾರ ಬಹುಮುಖ್ಯ. ಒಂದೇ ಆಹಾರ ಪದಾರ್ಥದಲ್ಲಿ ಎಲ್ಲ ಪೋಷಕಾಂಶಗಳು ದೊರೆಯದೇ ಇರುವುದರಿಂದ ಎಲ್ಲ ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುವ ಏಕದಳ ಧಾನ್ಯ, ದ್ವಿದಳ ಧಾನ್ಯ, ಹಸಿರು ಸೊಪ್ಪುಗಳು, ತಾಜಾ ತರಕಾರಿಗಳು, ಹಣ್ಣುಗಳು, ಹಾಲು, ಎಣ್ಣೆ, ಬೆಣ್ಣೆ ಮುಂತಾದ ಎಲ್ಲವನ್ನು ಒಳಗೊಂಡ ಆಹಾರ ನಮ್ಮದಾಗಬೇಕು. ತಿನ್ನಲು ರುಚಿಕರವಾಗಿರುವ, ಹಿತವಾಗಿರುವ ಆಹಾರ ಸೇವನೆ ಅಪೌಷ್ಟಿಕತೆಯನ್ನು ತಡೆಗಟ್ಟುತ್ತದೆ. ದಿನಕ್ಕೊಂದು ಬಗೆಯ ಆಹಾರ ಪದಾರ್ಥವನ್ನು ತಯಾರಿಸಿದಲ್ಲಿ, ಊಟದಲ್ಲಿ ವೈವಿಧ್ಯತೆಯಿದ್ದಲ್ಲಿ ಒಳ್ಳೆಯದು. ಇದರಿಂದ ಒಂದೇ ರೀತಿಯ ಆಹಾರ ಸೇವನೆಯಿಂದಾಗುವ ಬೇಸರ ತಪ್ಪುತ್ತದೆಯಲ್ಲದೇ ದೇಹಕ್ಕೆ ಎಲ್ಲ ಬಗೆಯ ಪೋಷಣೆ ದೊರೆಯತ್ತದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com