ಕಾಂಗ್ರೆಸ್ ಒಳ ಜಗಳ: ಅಡಕತ್ತರಿಯಲ್ಲಿ ಹೈಕಮಾಂಡ್ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಡಿಸಿಎಂ ಸ್ಥಾನ ಕುರಿತಂತೆ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಲ್ಲಿ ವಿವಾದದ ಹುಯಿಲೆಬ್ಬಿಸಿರುವ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ವರಿಷ್ಠರಿಗೆ ದೂರು ನೀಡಿದ್ದಾರೆ.
ಡಿಸಿಎಂ ಡಿಕೆಶಿವಕುಮಾರ್-ಸಚಿವ ಕೆಎನ್ ರಾಜಣ್ಣ- ಸಿಎಂ ಸಿದ್ದರಾಮಯ್ಯ
ಡಿಸಿಎಂ ಡಿಕೆಶಿವಕುಮಾರ್-ಸಚಿವ ಕೆಎನ್ ರಾಜಣ್ಣ- ಸಿಎಂ ಸಿದ್ದರಾಮಯ್ಯ

ಬಲಾಬಲ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಯ್ತಾ? 

ಉಪ ಮುಖ್ಯಮಂತ್ರಿ ಸ್ಥಾನ ಕುರಿತಂತೆ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಲ್ಲಿ ವಿವಾದದ ಹುಯಿಲೆಬ್ಬಿಸಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ವರಿಷ್ಠರಿಗೆ ದೂರು ನೀಡಿದ್ದಾರೆ.  

ಈ ದೂರಿನ ಹಿನ್ನಲೆಯಲ್ಲೇ ತಲೆ ಎತ್ತಿರುವ ಪ್ರಶ್ನೆ ಎಂದರೆ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವಿನ ಶೀತಲ ಸಮರಕ್ಕೆ ಹಾಗೂ ಪರಸ್ಪರರ ಬಲಾಬಲ ಪ್ರದರ್ಶನಕ್ಕೆ ವೇದಿಕೆಯಾಗಿ ಪರಿವರ್ತಿತವಾಗಲಿದೆಯೆ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ತಮಿಳು ನಾಡಿಗೆ ಪ್ರತಿನಿತ್ಯ ಐದುಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಕಾವೇರಿ ಪ್ರಾಧಿಕಾರದ ಆದೇಶವನ್ನು  ಸುಪ್ರೀಂ ಕೋರ್ಟ್ ನ ವಿಶೇಷ ಪೀಠ ಎತ್ತಿ ಹಿಡಿದಿರುವ ಪರಿಣಾಮ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಕ್ಕಿರುವ ಸಂದರ್ಭದಲ್ಲೇ ಕಾಂಗ್ರೆಸ್ ನಲ್ಲಿ ಅಧಿಕಾರಕ್ಕಾಗಿ ಆರಂಭವಾಗಿರುವ ಕಿತ್ತಾಟ ಪಕ್ಷದ ಹೈಕಮಾಂಡ್ ನ್ನು ಕಂಗೆಡಿಸಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇಬ್ಬರು ಪ್ರಬಲ ನಾಯಕರ ನಡುವಿನ ಪ್ರತಿಷ್ಠೆಯ ಶೀತಲ ಸಮರ ಬೀದಿಗೆ ಬಂದರೆ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತು ಚುನಾವಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂಬ ಆತಂಕಕ್ಕೆ ಬಿದ್ದಿರುವ ಕಾಂಗ್ರೆಸ್ ನ ದಿಲ್ಲಿ ನಾಯಕರು ಈ ಶೀತಲ ಸಮರವನ್ನು ಹಾಗೇ ತಣ್ಣಗಾಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವಿವಾದವೇನು?: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ರೀತಿ, ಅದರಿಂದ ಸಿಕ್ಕ ಯಶಸ್ಸು ರಾಜಕೀಯ ಪಂಡಿತರನ್ನೇ ಆಶ್ಚರ್ಯಕ್ಕೆ ದೂಡಿದ್ದು ಹೌದು. ಹಲವು ಸವಾಲುಗಳನ್ನು ಎದುರಿಸಿ, ಪಕ್ಷ ಅಧಿಕಾರಕ್ಕೆ ತರಲು ಕಾರಣರಾದ ತಮಗೇ ಮುಖ್ಯಮಂತ್ರಿ ಹುದ್ದೆ ಸಿಗಬೇಕೆಂದು ಹೈಕಮಾಂಡ್ ಮುಂದೆ ಅವರು ಪಟ್ಟು ಹಿಡಿದಿದ್ದರು.

ಆದರೆ ಪಕ್ಷದ ಪ್ರಚಂಡ ವಿಜಯದಲ್ಲಿ ತನ್ನ ಪಾಲೂ ಇದೆ. ಹೀಗಾಗಿ ತಾನೇ ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಹಟಕ್ಕೆ ಬಿದ್ದಾಗ ಮಧ್ಯೆ ಪ್ರವೇಶಿಸಿದ್ದ ಕಾಂಗ್ರೆಸ್ ವರಿಷ್ಠರು ಡಿ.ಕೆ.ಶಿವಕುಮಾರ್ ಮನವೊಲಿಸಿ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಒಪ್ಪಿಸಿ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ರಹಸ್ಯ ಸೂತ್ರ ರೂಪಿಸಿ ಅವರನ್ನ ತಣ್ನಗೆ ಮಾಡಿದ್ದರು. ಈ ಸೂತ್ರ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಶಿವಕುಮಾರ್, ಮುಖ್ಯಮಂತ್ರಿಗೆ ಸಮನಾದ ಅಧಿಕಾರ ತನಗಿರಬೇಕು. ಮತ್ತೊಂದು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸಬಾರದು, ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ತಮಗೇ ನೀಡಬೇಕೆಂದು ವಿಧಿಸಿದ್ದ ಷರತ್ತಿಗೆ ಹೈಕಮಾಂಡ್ ಬೇರೆ ದಾರಿಯೇ ಇಲ್ಲದೇ ಒಪ್ಪಿತ್ತು.

ಇದರಿಂದ ಇಬ್ಬರೂ ನಾಯಕರ ನಡುವೆ ಇದರಿಂದ ಸಮನ್ವಯ ಮೂಡಿಲ್ಲ. ಬದಲು ಪ್ರತಿಷ್ಠೆಯ ಹಣಾ ಹಣಿ, ಮತ್ತು ಸಂಘರ್ಷದ ವಾತಾವರಣ  ಸೃಷ್ಟಿಯಾಗಿದೆ. ಉಪ ಮುಖ್ಯಮಂತ್ರಿಯಾಗಿ ಶಿವಕುಮಾರ್ ಕೈಗೊಳ್ಳುತ್ತಿರುವ ಕೆಲವೊಂದು ಆಡಳಿತಾತ್ಮಕ ನಿರ್ಧಾರಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಹಾಗೆ ನೋಡಿದರೆ ಉಪ ಮುಖ್ಯಮಂತ್ರಿ ಹುದ್ದೆ ಒಂದು ರಾಜಕೀಯ ಪದವಿಯೇ ಹೊರತೂ ಅದಕ್ಕೆ ಸಂವಿಧಾನಾತ್ಮಕವಾದ ಯಾವುದೇ ಮಾನ್ಯತೆಗಳು ಇಲ್ಲ. ಇತರ ಸಚಿವರಂತೆ ಉಪಮುಖ್ಯಮಂತ್ರಿಯೂ ಸಂಪುಟಕ್ಕೆ ಜವಾಬ್ದಾರರಾಗಿರುತ್ತಾರೆ. ಹಾಗೂ ಸಂಪುಟದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಯ ಅಧಿಕಾರದ ಅಡಿಯಲ್ಲೇ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದ ನೀತಿ ನಿಲುವುಗಳಿಗೆ ಸಂಬಂಧಿಸಿದ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವಾಗ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿಯ ಸೂಚನೆಗನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ ಹಾಗೂ ಅಂತಹ ನಿರ್ಧಾರಗಳಲ್ಲಿ ಮುಖ್ಯಮಂತ್ರಿಯ ಒಳಗೊಳ್ಳುವಿಕೆ ಆಡಳಿತದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿರುತ್ತದೆ.

ಆದರೆ ಸಮಸ್ಯೆಯ ಮೂಲ ಆರಂಭವಾಗಿರುವುದೇ ಇಲ್ಲಿಂದ ಎಂಬುದು ಸಿದ್ದರಾಮಯ್ಯ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಗಮನಿಸುವ ಯಾರಿಗಾದರೂ ಮೇಲ್ನೋಟಕ್ಕೆ ಗೋಚರವಾಗುವ ಸಂಗತಿ. ಬೆಂಗಳೂರಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ಜಾರಿ ಕುರಿತು ಕೈಗೊಳ್ಳುತ್ತಿರುವ ನಿರ್ಧಾರಗಳಲ್ಲಿ ಮುಖ್ಯಮಂತ್ರಿಯನ್ನು ಹೊರಗಿಟ್ಟೇ ಶಿವಕುಮಾರ್ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಬ್ರಾಂಡ್ ಬೆಂಗಳೂರು ಯೋಜನೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ಬಿಲ್ ಸ್ಥಗಿತ ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಮುಖ್ಯಮಂತ್ರಿಯ ಪಾಲ್ಗೊಳ್ಳುವಿಕೆ ಕಾಣುತ್ತಿಲ್ಲ. ಇದು ಸಹಜವಾಗೇ ಆಡಳಿತ ಪಕ್ಷದಲ್ಲಿ ಅತೃಪ್ತಿ ಹುಟ್ಟುಹಾಕಿದೆ. ಬೆಂಗಳೂರಿಗೆ ಸಂಬಂಧಿಸಿದ ಹಾಗೂ ನೀರಾವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ತನ್ನ ಗಮನಕ್ಕೆ ಬರುತ್ತಿಲ್ಲ ಎಂಬುದು ಸಿದ್ದರಾಮಯ್ಯ ಅತೃಪ್ತಿಗೆ ಕಾರಣವಾಗಿದೆ. ಶಿವಕುಮಾರ್ ಸರ್ಕಾರದಲ್ಲಿ ಸಮಾನಾಂತರ ಅಧಿಕಾರದ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಲು ಇದು ಸಹಕಾರಿ ಆಗಿದೆ.

ಇದನ್ನು ಹೀಗೆ ಮುಂದುವರಿಯಲು ಬಿಟ್ಟರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಹಕ್ಕು ಚಲಾಯಿಸಲು ಆಗದ ಅಸಹಾಯಕ ಸ್ಥಿತಿಯೂ ಬಂದೊದಗಬಹುದು ಎಂಬ ಆತಂಕಕ್ಕೆ ಬಿದ್ದಿರುವ ಸಿದ್ದರಾಮಯ್ಯ ಆರಂಭದಲ್ಲೇ ಶಿವಕುಮಾರ್ ಅಬ್ಬರಕ್ಕೆ ಕಡಿವಾಣ ಹಾಕಲು ಮುಂದಡಿ ಇಟ್ಟಿದ್ದಾರೆ. ಹಾಗೆ ನೋಡಿದರೆ ಆಡಳಿತದ ಪ್ರಾರಂಭದ ದಿನಗಳಲ್ಲೇ ಸಚಿವರಾದ ಜಮೀರ್ ಅಹಮದ್. ಡಾ. ಮಹದೇವಪ್ಪ, ಎಂ.ಬಿ.ಪಾಟೀಲ್ ಸೇರಿದಂತೆ ಆಯ್ದ ಕೆಲವು ಸಚಿವರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷದ ಅವಧಿಯನ್ನೂ ಪೂರೈಸುತ್ತಾರೆ ಅಧಿಕಾರ ಹಂಚಿಕೆಯ ಯಾವುದೇ ಒಪ್ಪಂದ ಆಗಿಲ್ಲ ಎಂದು ಹೇಳುವ ಮೂಲಕ ಸುಖಾ ಸುಮ್ಮನೇ ವಿವಾದ ಎಬ್ಬಿಸಿದ್ದರು. ತಮ್ಮ ಪರಮಾಪ್ತ ಸಚಿವರ ಈ ಹೇಳಿಕೆಗಳು ಪುಂಖಾನು ಪುಂಖವಾಗಿ ಮಾಧ್ಯಮಗಳಲ್ಲಿ ಬರುತ್ತಿದ್ದರೂ ಸಿದ್ದರಾಮಯ್ಯ ಅದರಿಂದ ಅಂತರ ಕಾಯ್ದುಕೊಂಡರೇ ಹೊರತೂ ಹೇಳಿಕೆ ನೀಡುತ್ತಿದ್ದ ತಮ್ಮ ಪರಮಾಪ್ತ ಸಹೋದ್ಯೊಗಿಗಳನ್ನು ಸುಮ್ಮನಿರಿಸಲಿಲ್ಲ. ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ ಮುಖ್ಯಮಂತ್ರಿಯ ಗಮನಕ್ಕೆ ಬಾರದೇ ಇಂತಹ ಹೇಳಿಕೆಗಳನ್ನು ಅವರ ಆಪ್ತ ಸಚಿವರು ಇಷ್ಟು ಬಹಿರಂಗವಾಗಿ ನೀಡಲು ಸಾಧ್ಯವೇ ಇಲ್ಲ. ಶಿವಕುಮಾರ್ ಪ್ರಾಬಲ್ಯವನ್ನು ಪ್ರಾರಂಭದಲ್ಲೇ ಮುರಿಯುವ ವಿಫಲ ಪ್ರಯತ್ನ ಇದಾಗಿದ್ದು ಸಿದ್ದರಾಮಯ್ಯ ಅವರ ಗಮನಕ್ಕೆ ಬಂದೇ ಈ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದೂ ಆರೋಪಿಸುತ್ತಾರೆ. ಸರ್ಕಾರದ ಆಡಳಿತ ಸುಗಮವಾಗಿ ನಡೆಯಲು ಸಹೋದ್ಯೋಗಿಗಳ ನಡುವೆ ಸಮನ್ವಯತೆ ರೂಪಸಿಬೇಕಿದ್ದ ಅವರೇ ವಿವಾದ ಮೊಳಕೆಯೊಡೆಯಲು ಬಿಟ್ಟು ಪರೀಕ್ಷೆ ಮಾಡಿದರೆ? ಎಂಬ ಸಂದೇಹ ಸಾರ್ವತ್ರಿಕವಾಗಿ ಮೂಡಿದೆ. 

ಸಚಿವ ಸಂಪುಟ ಸೇರುವ ಪ್ರಯತ್ನದಲ್ಲಿ ವಿಫಲರಾದ ಕಾಂಗ್ರೆಸ್ ನ ಹಿರಿಯ ನಾಯಕ ಹಾಗು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿ ಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗೇ ವಾಗ್ದಾಳಿಗಿಳಿದಾಗ ಅವರನ್ನು ಭೇಟಿ ಆಗಿದ್ದ ಶಿವಕುಮಾರ್ ವಿವಾದ ಮುಂದುವರಿಸದಂತೆ ಮನವಿ ಮಾಡಿದ್ದರಲ್ಲದೇ ಆಗಿರುವ ಅನ್ಯಾಯ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಇದರಿಂದ ಸಮಾಧಾನಗೊಳ್ಳದ ಹರಿ ಪ್ರಸಾದ್ ಮುಖ್ಯಮಂತ್ರಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಲ್ಲದೇ ಅದನ್ನು ವಿವಾದದ ಪರಾಕಾಷ್ಠೆಗೆ ತೆಗೆದುಕೊಂಡು ಹೋದಾಗ ಶಿವಕುಮಾರ್ ಅಸಹಾಯಕರಾದರು. ಈ ವಿಚಾರವನ್ನು ಕಾಂಗ್ರೆಸ್ ವರಿಷ್ಠರ ಗಮನಕ್ಕೂ ತಂದು ವಿವಾದ ಬಗೆಹರಿಸಲು ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿದರು. ವಿವಾದ ತಣ್ಣಗೆ ಮಾಡಬೇಕಿದ್ದ ದಿಲ್ಲಿ ವರಿಷ್ಠರು ಮೌನಕ್ಕೆ ಶರಣಾದಾಗ ಹರಿ ಪ್ರಸಾದ್ ಮತ್ತಷ್ಟು ಉಗ್ರರಾಗಿ ವಾಗ್ದಾಳಿ ಮುಂದುವರಿಸಿದರು. ಅವರಿಗೆ ಕಾರಣ ಕೇಳಿ ನೋಟಿಸ್ ಕೊಡಿಸುವ ವಿಚಾರದಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಸಿದ್ದರಾಮಯ್ಯ ಯಶಸ್ವಿಯಾದರು. 

ಈಗ ಅವರದೇ ಸಂಪುಟದ ಸಚಿವ ಹಾಗೂ ಅವರ ಪರಮಾಪ್ತ ಸಚಿವ ಕೆ.ಎನ್. ರಾಜಣ್ಣ ಉಪ ಮುಖ್ಯಮಂತ್ರಿ ಹುದ್ದೆ ಕುರಿತು ವಿವಾದ ಮೊಳಕೆಯೊಡಲು ಕಾರಣವಾಗಿದ್ದಾರೆ. ಲಿಂಗಾಯಿತರು, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗುತ್ತದೆ ಎಂಬ ಅವರ ವಾದ ಮೇಲ್ನೋಟಕ್ಕೆ ಸರಿ ಅನ್ನಿಸಿದರೂ ಅದರ ಹಿಂದೆ ಶಿವಕುಮಾರ್ ವೇಗಕ್ಕೆ ನಿಯಂತ್ರಣ ಹಾಕುವ ಗುಪ್ತ ಕಾರ್ಯ ಸೂಚಿಯಂತೂ ಇದ್ದೇ ಇದೆ. ಸಹಜವಾಗೇ ಇದು ಸಿದ್ದರಾಮಯ್ಯ ಇಚ್ಛೆಗೆ ಅನುಸಾರವಾಗೇ ನಡೆಯುತ್ತಿದೆ. ಮೊದಲು ರಾಜಣ್ಣ  ಹೇಳಿಕೆಗೆ ಸಿಡಿಮಿಡಿಗೊಂಡು ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಮಾರನೇ ದಿನವೇ ಹೈಕಮಾಂಡ್ ಒಪ್ಪಿದರೆ ನನ್ನದೇನೂ ಅಭ್ಯಂತರ ಇಲ್ಲ ಎಂದು ಹೇಳುವ ಮೂಲಕ ಇದಕ್ಕೆ ತನ್ನ ಸಮ್ಮತಿಯೂ ಇದೆ ಎಂಬ ಸಂದೇಶ ರವಾನಿಸಿದ್ದಾರೆ. ಅವರ ರಾಜಕೀಯ ನಡೆಯೇ ಹಾಗೆ ಮೊದಲು ತಮ್ಮ ಮನಸ್ಸಿನಲ್ಲಿರುವುದು ಪರಮಾಪ್ತ ಮುಖಂಡರ ಮೂಲಕ ಹೊರಗೆ ಬರುವಂತೆ ನೋಡಿಕೊಳ್ಳುತ್ತಾರೆ. ಅದು ಬಹಿರಂಗಗೊಂಡು ವಿವಾದಕ್ಕಿಡಾದಾಗ ಮೌನ ವಹಿಸುತ್ತಾರೆ ನಂತರ ಅದಕ್ಕೆ ಪರೋಕ್ಷವಾಗಿ ತನ್ನ ಸಮ್ಮತಿಯಿದೆ ಎಂದು ಮುದ್ರೆ ಒತ್ತುತ್ತಾರೆ. ಸಂದರ್ಭ ಬಂದಾಗ ಬಹಿರಂಗವಾಗಿ ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಈಗ ಆಗುತ್ತಿರುವುದೂ ಅದೇ.

ಸಿದ್ದರಾಮಯ್ಯ ಬಣದ ಸಚಿವರ ಹೇಳಿಕೆಯ ಹಿಂದಿನ ರಹಸ್ಯ ಕಾರ್ಯ ಸೂಚಿ ತಿಳಿದ ಶಿವಕುಮಾರ್ ಈಗ ನೇರವಾಗಿ ಹೈಕಮಾಂಡ್ ಕದ ತಟ್ಟಿದ್ದು  ಹರಿ ಪ್ರಸಾದ್ ಪ್ರಕರಣದಲ್ಲಿ ಕ್ರಮ ಕೈಗೊಂಡಂತೆ ಕಾರಣ ಕೇಳಿ ರಾಜಣ್ಣ ಅವರಿಗೂ ನೋಟಿಸ್ ನೀಡುವಂತೆ ಒತ್ತಡ ಹಾಕಿದ್ದಾರೆ. ಇದರಿಂದ ಫಜೀತಿಗೆ ಸಿಕ್ಕಿರುವುದು ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ಕೊಟ್ಟರೆ ರಾಜಣ್ಣ ತಿರುಗಿ ಬೀಳುತ್ತಾರೆ. ಅವರಿಗೆ ಸಿದ್ದರಾಮಯ್ಯ ನವರ ಶ್ರೀರಕ್ಷೆ ಇದೆ. ಹಾಗಂತ ಕ್ರಮ ಕೈಗೊಳ್ಳದೇ ಇದ್ದರೆ ಡಿ.ಕೆ.ಶಿವಕುಮಾರ್ ಅಸಮಧಾನಗೊಳ್ಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಅವರ ಸಹಕಾರ ಪರಿಶ್ರಮ ಇಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸಲು ಸಾಧ್ಯವಿಲ್ಲ. ಮೇಲಾಗಿ ಕಾಂಗ್ರೆಸ್ ಕುರಿತ ಅವರ ನಿಷ್ಠೆ ಪ್ರಶ್ನಾತೀತ. ಸದ್ಯಕ್ಕೆ ಹೈಕಮಾಂಡ್ ದು ಕತ್ತರಿಯಲ್ಲಿ ಸಿಕ್ಕ ಅಡಕೆಯ ಸ್ಥಿತಿ. ಈ ಇಬ್ಬರು ನಾಯಕರ ಈ ಶೀತಲ ಸಮರಕ್ಕೆ ಉಳಿದ ಹಿರಿಯ ಸಚಿವರು, ಮುಖಂಡರು ಮೌನ ಸಾಕ್ಷಿಗಳಾಗಿದ್ದು ಪ್ರತಿಕ್ರಿಯೆ ನೀಡುತ್ತಿಲ್ಲ. ಒಂದು ವೇಳೆ ರಾಜಣ್ಣ ವಿರುದ್ಧ ಕ್ರಮ್ಕೆ ಹೈಕಮಾಂಡ್ ಮುಂದಾದರೆ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು? ಎಂಬುದು ಸದ್ಯದ ಪ್ರಶ್ನೆ.ಅಧಿಕಾರ ಉಳಿಸಿಕೊಳ್ಳಲು ಮೌನಕ್ಕೆ ಶರಣಾದರೆ ಬೆಂಬಲಿಗನನ್ನು ಕಷ್ಟಕ್ಕೆ ದೂಡುತ್ತಾರಾ ಅಥವಾ ಸ್ನೇಹಿತನ ಪರ ನಿಲ್ಲುತ್ತಾರಾ ಎಂಬುದೇ ಈಗ ನಿರ್ಣಾಯಕ ಅಂಶ. ಲೋಕಸಭಾ ಚುನಾವಣೆಗೆ ಜೆಡಿಎಸ್ ಬಿಜೆಪಿ ನಡುವೆ ಮೈತ್ರಿಯ ಮಾತುಕತೆಗಳು ಅಂತಿಮ ಘಟ್ಟಕ್ಕೆ ಮುಟ್ಟಿರುವ ಹಂತದಲ್ಲೇ ಕಾಂಗ್ರೆಸ್ ಒಳ ಜಗಳ ದಿನಕ್ಕೊಂದು ಸ್ವರೂಪ ಪಡೆಯುತ್ತಿರುವುದು ರಾಜಕೀಯವಾಗಿ ಉಪೇಕ್ಷೆ ಪಡುವಂತಹ ಬೆಳವಣಿಗೆಯೇನಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com