ಹಣವನ್ನು ಸಂರಕ್ಷಿಸಬೇಕು, ಆದರೆ ಅದೇ ಗೀಳಾದರೆ ಅದರಿಂದಾಗುವ ಸಮಸ್ಯೆಗಳಿವು... (ಹಣಕ್ಲಾಸು)

ಹಣಕ್ಲಾಸು-381-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಕ್ವ ಚಿರಾಯ ಪರಿಗ್ರಹಃ ಶ್ರಿಯಾಂ
ಕ್ವ ಚ ದುಷ್ಟೇಂದ್ರಿಯವಾಜಿವಶ್ಯತಾ|
ಶರದಭ್ರಚಲಾಶ್ಚಲೇಂದ್ರಿಯೈಃ
ಅಸುರಕ್ಷಾ ಹಿ ಬಹುಚ್ಛಲಾ ಶ್ರಿಯಃ

ಬಹುಕಾಲ ರಾಜ್ಯಲಕ್ಷ್ಮಿಯನ್ನಾಗಲೀ ದೊಡ್ಡಸಂಪತ್ತನ್ನಾಗಲೀ ಇಟ್ಟುಕೊಳ್ಳುವುದು ವಿರಳ. ಕೆಟ್ಟ ಇಂದ್ರಿಯಗಳೆಂಬ ಕುದುರೆಗಳನ್ನು ಹತೋಟಿಯಲ್ಲಿಡುವುದೂ ಕಷ್ಟ. ಶರತ್ಕಾಲದ ಮೋಡಗಳಂತೆ ಚಂಚಲವಾದ, ಬಹುರೀತಿಯಲ್ಲಿ ಮೋಸಗೊಳಿಸುವ ಸಂಪತ್ತನ್ನು ನಿಗ್ರಹವಿಲ್ಲದವನು ರಕ್ಷಿಸಲಾರರು, ಎನ್ನುತ್ತದೆ ಕಿರಾತಾರ್ಜುನೀಯ- 2.39ರ ಒಂದು ಶ್ಲೋಕ.

ಹಣ ಗಳಿಸುವುದು ಒಂದು ಹಂತವಾದರೆ ಅದನ್ನ ಉಳಿಸುವುದು, ಬೆಳೆಸುವುದು ಮತ್ತು ರಕ್ಷಿಸಿಕೊಳ್ಳುವುದು ಅದಕ್ಕಿಂತ ದೊಡ್ಡದು. ಗಳಿಸಿದ ಹಣವನ್ನ ದೀರ್ಘಕಾಲ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಹಣವಿದ್ದವನಿಗೆ ಸಿಗುವ ಗೌರವ, ದಾರಿಯಲ್ಲಿ ಬರುವ ಪ್ರಲೋಭನೆಗಳು ಆತನನ್ನ ನಾನು ಬಹಳ ಶಕ್ತಿಶಾಲಿ ನನ್ನಿಂದ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ ಭಾವನೆಯನ್ನ ಉಂಟು ಮಾಡುತ್ತದೆ. ಈ ಭಾವನೆ ಗಳಿಸಿದ ಹಣವನ್ನ ಕಳೆದುಕೊಳ್ಳಲು ಮೊದಲ ಹಂತವಾಗುತ್ತದೆ. ಗಳಿಸಿದ ಹಣವನ್ನ ರಕ್ಷಿಸಿಕೊಳ್ಳುವುದು ಅತ್ಯಂತ ಮುಖ್ಯ. ಆದರೆ ಗಳಿಸಿದ ಹಣವು ಎಲ್ಲಿ ದೂರಾಗುತ್ತದೆಯೋ ಎನ್ನುವ ಭಯ ಮತ್ತು ಅದನ್ನ ರಕ್ಷಿಸಿಕೊಳ್ಳಲು ಮಾನಸಿಕ ನೆಮ್ಮದಿಯನ್ನ ಕಳೆದುಕೊಳ್ಳುವ ಹಂತಕ್ಕೆ ಮಾತ್ರ ಅದು ಹೋಗಬಾರದು. ನಿಮಗೆಲ್ಲಾ ಗೊತ್ತಿರಲಿ ಯಾವೆಲ್ಲಾ ವಸ್ತುಗಳು ಅಥವಾ ಸೇವೆ ನಮಗೆ ಸಂತೋಷವನ್ನ ನೀಡುತ್ತದೆ, ಅದು ಮಾತ್ರ ಅಸೆಟ್ ಎನ್ನಿಸಿಕೊಳ್ಳುತ್ತದೆ. ಯಾವೆಲ್ಲಾ ವಸ್ತು ಅಥವಾ ಸೇವೆ ನೋವು ನೀಡುತ್ತದೆ ಅದು ಲಿಯಬಿಲಿಟಿ ಎನ್ನಿಸಿಕೊಳ್ಳುತ್ತದೆ.

ಆದರೆ ಒಮ್ಮೆ ಹಣದ ಮೇಲಿನ ಮೋಹ ವಿಪರೀತವಾದರೆ ಅದರ ಸಂಗ್ರಹಣೆಯಲ್ಲಿ ಮನುಷ್ಯ ತೊಡಗಿಕೊಳ್ಳುತ್ತಾನೆ. ಹೀಗೆ ಸಂಗ್ರಹಸಿದ ಹಣ ಹೆಚ್ಚಾಗುತ್ತಾ ಹೋದಂತೆಲ್ಲಾ ಅದರ ರಕ್ಷಣೆಯೇ ಪರಮ ಗುರಿಯಾಗುತ್ತದೆ. ಬಂಧುಗಳು ಅಥವಾ ಮಿತ್ರರು ಅಥವಾ ಇನ್ನಿತರರು ನನ್ನ ಹಣವನ್ನ ಲಪಟಾಯಿಸಯಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮನೋಭಾವ ಬಂದಿದೆ ಎಂದರೆ ಅಲ್ಲಿಗೆ ಹಣದ ರಕ್ಷಣೆಯ ಅತೀವ ಗೀಳಿನ ಒಡೆಯರಾಗಿದ್ದಾರೆ ಎಂದರ್ಥ. ನಿಮಗೆಲ್ಲಾ ಒಂದಂಶ ನೆನಪಿರಲಿ ಯಾವಾಗ ಸಂಗ್ರಹಣೆ ಮತ್ತು ರಕ್ಷಣೆಯ ಗೀಳು ಹೆಚ್ಚಾಗುತ್ತದೆಯೋ, ಆಗ ಮನುಷ್ಯ ಹಣ ಸೃಷ್ಟಿಯಾಗಿದ್ದರ ಮೂಲ ಉದ್ದೇಶವಾದ ವಿನಿಮಯ ಅಥವಾ ಖರ್ಚು ಮಾಡುವುದನ್ನ ಮರೆತು ಬಿಡುತ್ತಾನೆ. ಹಣ ಅತ್ಯಂತ ಸುಖ ಕೊಡುವುದು ಅದನ್ನ ವ್ಯಯಿಸಿದಾಗ ಮಾತ್ರ! ಕನ್ನಡದಲ್ಲಿ 'ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ' ಎನ್ನುವ ಒಂದು ಆಡುಮಾತಿದೆ. ಅದಕ್ಕೆ ಪೂರಕವಾಗಿ

ನಿರ್ಗುಣಸ್ಯ ಹತಂ ರೂಪಂ ದುಃಶೀಲಯ್ಸ ಹತಂ ಕುಲಮ್ !
ಅಸಿದ್ದಸ್ಯ  ಹತಾ ವಿದ್ಯಾ ಹ್ಯಭೋಗೇನ ಹತಂ ಧನಮ್

ಎನ್ನುವ ಶ್ಲೋಕವನ್ನ ಚಾಣಕ್ಯನ ನೀತಿ ಶ್ಲೋಕದಲ್ಲಿ ಉಲ್ಲೇಖಿಸಲಾಗಿದೆ. ಗುಣವಿಲ್ಲದವನ ರೂಪವು ಹಾಳು. ನಡತೆಯಿಲ್ಲದವನ ಮನೆತನವು ಹಾಳು. ಸಿದ್ದಿ ಪಡೆಯದವನ ವಿದ್ಯೆಯು ಹಾಳು. ಅನುಭವಿಸದಿದ್ದ ಮೇಲೆ ಹಣವು ಹಾಳು. ಎನ್ನುವುದು ಶ್ಲೋಕದ ಅರ್ಥ. ನಮ್ಮ ಪೂರ್ವಜರಿಗೆ ಹಣದ ಮಹತ್ವ ಮತ್ತು ಅದನ್ನ ಎಲ್ಲಿಯವರೆಗೆ ಮಾತ್ರ ನೀಡಬೇಕು ಎನ್ನುವ ಅರಿವಿತ್ತು. ಒಂದು ಹಂತದ ನಂತರ ಅದರಿಂದ ಯಾವ ಪ್ರಯೋಜವೂ ಇಲ್ಲ ಎನ್ನುವುದನ್ನ ಅವರು ಅರಿತುಕೊಂಡಿದ್ದರು. ಹೀಗಾಗಿ ಹಲವಾರು ಶ್ಲೋಕಗಳಲ್ಲಿ ಇದನ್ನ ಪುನರುಚ್ಚಾರಿಸಿದ್ದಾರೆ. ಇಂದಿನ ಧಾವಂತದ ಜೀವನದಲ್ಲಿ ಎಷ್ಟು ಸಂಗ್ರಹಣೆ ಅಗತ್ಯ ಎನ್ನುವುದು ತಿಳಿಯದಾಗಿದೆ. ಗಳಿಸಿದ ಹಣದ ರಕ್ಷಣೆ ತಲೆನೋವಾಗಿ ಪರಿಣಮಿಸಿದೆ. ಹಣವಿಲ್ಲದೆ ಇದ್ದ ಸಾಮಾನ್ಯರಲ್ಲಿ ಸಾಮಾನ್ಯನಿಗೂ ಹಣ ಬಂದರೆ ಅದರ ರಕ್ಷಣೆಯಲ್ಲಿ ಅವನ ಬದುಕು ಹೇಗೆ ಸತ್ವವನ್ನ ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಒಂದು ಕಥೆಯಿದೆ. ಇದು ಕಥೆ ಎನಿಸಬಹುದು, ಆದರೆ ಅದು ನಮ್ಮ ನಿಮ್ಮೆಲ್ಲರ ಕಥೆಯೂ ಹೌದು. ಈ ಕಥೆಯನ್ನ ಓದಿದ ನಂತರ ಬದಲಾವಣೆಗೆ ಮನಸ್ಸು ಮಾಡಿದರೆ, ಅದು ಸುಖ, ಶಾಂತಿಯೆಡೆಗೆ ಒಂದು ಹೊಸ ಹೆಜ್ಜೆಯಾಗುವುದು ಖಂಡಿತ.

ಭರತಖಂಡದಲ್ಲಿನ ಒಂದು ರಾಜ್ಯ. ರಾಜ್ಯ ಎಂದಮೇಲೆ ಅದಕ್ಕೊಬ್ಬ ರಾಜನಿರಬೇಕಲ್ಲ? ಆ ರಾಜ್ಯಕೊಬ್ಬ ರಾಜನಿದ್ದ. ಅವನು ಬಹಳ ಧರ್ಮಭೀರುವಾಗಿದ್ದ, ನ್ಯಾಯವಂತನಾಗಿ, ಬಹಳ ಉತ್ತಮ ರೀತಿಯಲ್ಲಿ ತನ್ನ ರಾಜ್ಯವನ್ನ ನಡೆಸುತ್ತಿದ್ದ. ಆತನ ಗುಪ್ತಚರರು ಬೇರೆ ಬೇರೆ ರಾಜ್ಯಗಳ ಮಾಹಿತಿಯನ್ನ ತಂದು ನೀಡುತ್ತಿದ್ದರು. ಅದರ ಪ್ರಕಾರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈತನ ರಾಜ್ಯ ಅತ್ಯಂತ ಸುಭಿಕ್ಷವಾಗಿತ್ತು. ಜನರು ಕೂಡ ಅತ್ಯಂತ ಖುಷಿಯಾಗಿದ್ದರು. ಇಂತಹ ರಾಜ್ಯದ ದೊರೆಯಾದ ನಾನೇ ಅತ್ಯಂತ ಸುಖಿ, ಖುಷಿಯಾಗಿರುವವನು ಎನ್ನವುದು ರಾಜನ ನಂಬಿಕೆಯಾಗಿತ್ತು. ಅದು ಕೇವಲ ನಂಬಿಕೆಯಾಗಿ ಉಳಿಯದೆ ರಾಜ ಅದನ್ನ ಅತೀವವಾಗಿ ಹಚ್ಚಿಕೊಂಡಿದ್ದನು. ನಾನೇ ಜಗತ್ತಿಗೆಲ್ಲಾ ಅತ್ಯಂತ ಸಂತೋಷಶಾಲಿ ಎನ್ನುವುದು ಆತನಿಗೆ ಹೆಗ್ಗಳ್ಳಿಕೆಯಾಗಿತ್ತು. ಹೀಗಿರುವಾಗ ಆತನ ಕ್ಷೌರಿಕ ಮರಣ ಹೊಂದುತ್ತಾನೆ. ಹೀಗಾಗಿ ಆತನ ಜಾಗದಲ್ಲಿ ಹೊಸದಾಗಿ ನಿಯುಕ್ತಿಗೊಂಡ ಹೊಸ ಕ್ಷೌರಿಕ ರಾಜನ ಸೇವೆಗೆ ಬರುತ್ತಾನೆ. ರಾಜನ ತಲೆಗೂದಲನ್ನ ಕತ್ತಲಿರಿಸುವ ಸಮಯ ಪೂರ್ಣ ಆತ ಸಣ್ಣ ಮಟ್ಟದಲ್ಲಿ ಹಾಡನ್ನ ಗುನುಗುನಿಸಿತ್ತಿದ್ದ. ಕೆಲಸದ ಪೂರ್ಣ ವೇಳೆಯಲ್ಲಿ ಆತನಲ್ಲಿದ್ದ ತೃಪ್ತಿ , ಖುಷಿ ಎರಡೂ ರಾಜನ ಕಣ್ಣಿಗೆ ಬೀಳುತ್ತದೆ. ರಾಜನಿಗೆ ನಿಧಾನವಾಗಿ ಜಗತ್ತಿನಲ್ಲಿ ಅತ್ಯಂತ ಸಂತೋಷಶಾಲಿ ಯಾರು? ಎನ್ನುವ ಪ್ರಶ್ನೆ ಉಧ್ಭವಾಗುತ್ತದೆ.

ಎಲ್ಲಾ ರಾಜರಂತೆ ಈ ರಾಜನೂ ತನ್ನ ಮಹಾಮಂತ್ರಿಯನ್ನ ಕರೆಸುತ್ತಾನೆ. ಎಲ್ಲಾ ಕಥೆಯನ್ನ ಅವನಿಗೆ ಹೇಳುತ್ತಾನೆ. ನನಗೆ ಸಂಶಯ ಉಂಟಾಗಿದೆ, ನನಗಿಂತ ಹೆಚ್ಚಿನ ಸಂತೋಷಶಾಲಿ ವ್ಯಕ್ತಿ ನನ್ನ  ಕ್ಷೌರಿಕನೆಂದು, ಇದು ಹೇಗೆ ಸಾಧ್ಯ ಮಹಾಮಂತ್ರಿ? ಇಡೀ ರಾಜ್ಯವೇ ನನ್ನದು, ನಾನು ಕೊಡುವ ಎರಡು ಕಾಸು ಹಣದಿಂದ ಜೀವನ ನಡೆಸುವ ಒಬ್ಬ ಕ್ಷೌರಿಕ ಅಷ್ಟೊಂದು ಸಂತೋಷವಾಗಿರಲು ಹೇಗೆ ಸಾಧ್ಯ? ಎನ್ನುವ ಮಾತುಗಳನ್ನ ಕೇಳುತ್ತಾನೆ. ಆಗ ಮಹಾಮಂತ್ರಿ ಸಂಯಮದಿಂದ ' ಮಹಾಪ್ರಭು, ನಿಮಗೆ ಹಣವನ್ನ, ರಾಜ್ಯವನ್ನ, ಅಧಿಕಾರವನ್ನ ಉಳಿಸಿಕೊಳ್ಳುವ ಚಿಂತೆ, ನಾಳಿನ ಚಿಂತೆ, ಪ್ರಜೆಗಳ ಚಿಂತೆ, ಆತನಿಗೆ ಅದೇನೂ ಇಲ್ಲ. ಎಲ್ಲಕ್ಕೂ ಮುಖ್ಯವಾಗಿ ಅವನ ಬಳಿ ಬದುಕಿಗೆ ಎಷ್ಟು ಬೇಕು ಅಷ್ಟು ಮಾತ್ರ ಹಣವಿದೆ. ಹೆಚ್ಚಿನ ಹಣ ಅಸಂತೋಷಕ್ಕೆ ಕಾರಣ' ಎನ್ನುತ್ತಾನೆ. ರಾಜನಿಗೆ ಮಂತ್ರಿಯ ಮಾತು ಸಮಾಧಾನ ನೀಡುವುದಿಲ್ಲ. ಆಗ ಮಂತ್ರಿ ಮುಂದಿನ ಬಾರಿ ಕ್ಷೌರಿಕ ಬಂದಾಗ ಆತನನ್ನ ಗಮನಿಸಿ ಎಂದು ಹೇಳಿ ಎಂದು ನಿರ್ಗಮಿಸುತ್ತಾನೆ.

ದಿನಗಳು ಉರುಳಿ ಮತ್ತೆ ಕ್ಷೌರಿಕರಾಜನ ಸೇವೆಗೆ ಬರುತ್ತಾನೆ. ಆತನಲ್ಲಿ ನಗುವಿಲ್ಲ, ಸಂತೋಷವಿಲ್ಲ, ನಿಸ್ತೇಜನಾಗಿ ಮಾಡುವ ಕೆಲಸವನ್ನ ಯಾಂತ್ರಿಕವಾಗಿ ಮುಗಿಸಿ ಹೋಗುತ್ತಾನೆ. ರಾಜನಿಗೆ ಅತ್ಯಂತ ಆಶ್ಚರ್ಯವಾಗುತ್ತದೆ. ಕೆಲವೇ ದಿನಗಳಲ್ಲಿ ಆತನಲ್ಲಿ ಆದ ಬದಲಾವಣೆಗೆ ಕಾರಣವೇನು? ಎನ್ನುವ ಕುತೊಹಲದಿಂದ ಮಂತ್ರಿಯನ್ನ ಕರೆದು ಕೇಳುತ್ತಾನೆ.

ಆಗ ಮಂತ್ರಿ ಮಹಾಪ್ರಭು, ಹೆಚ್ಚಿನದೇನೂ ನಾನು ಮಾಡಲಿಲ್ಲ, ಬೆಳಗಿನ ಜಾವದ ವೇಳೆಯಲ್ಲಿ ಆತನ ಮನೆಯ ಮುಂದೆ 98 ವರಹಗಳನ್ನ ಒಂದು ಥೈಲಿಯಲ್ಲಿ ಇಟ್ಟು ಬಂದೆ, ಆತ ಅದನ್ನ ತೆಗೆದುಕೊಂಡ. ಅದನ್ನ ತನ್ನ ಪರಿವಾರಕ್ಕೂ ಹೇಳದೆ ಅದನ್ನ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾನೆ. ಜೊತೆಗೆ 98 ವರಹವನ್ನ 100 ಮಾಡುವ ಭೂತ ಅವನನ್ನ ಹೊಕ್ಕಿದೆ. ಆತನಿಗೆ ಬರುವ ವರಮಾನದಲ್ಲಿ ಉಂಡುಟ್ಟು ಸುಖವಾಗಿದ್ದ, ಇದೀಗ ಖರ್ಚು ಕಡಿಮೆ ಮಾಡಿದ್ದಾನೆ, ಸಂಗ್ರಹಣೆಯಲ್ಲಿ ತೊಡಗಿದ್ದಾನೆ. ಹೊಸ ಮನೆ, ಹೊಸ ವ್ಯಾಪಾರಕ್ಕೆ ಎಂದು ಹಣವನ್ನ ಕೂಡಿಡುವ, ರಕ್ಷಿಸುವ ಹೊಣೆ ಅವನದಾಗಿದೆ ಅಷ್ಟೇ, ಎನ್ನುತ್ತಾನೆ.

ರಾಜನಿಗೆ ಮತ್ತೊಮ್ಮೆ ತಾನೇ ಪರಮಸುಖಿ, ಅತ್ಯಂತ ಸಂತೋಷಶಾಲಿ ಎನ್ನಿಸುತ್ತದೆ. ಭಾಗವತದಲ್ಲಿನ ಒಂದು ಶ್ಲೋಕ ನೆನಪಿಗೆ ಬರುತ್ತದೆ. ರಾಜ ಮುಂದೆ ಸದಾ ಸಂತೋಷವಾಗಿರುತ್ತಿದ್ದ.

ಧರ್ಮಾಯ ಯಶಸೇರ್ಥಾಯ ಕಾಮಾಯ ಸ್ವಜನಾಯ ಚ|
ಪಂಚಧಾ ವಿಭಜನ್ ವಿತ್ತಮಿಹಾಮುತ್ರ ಚ ಮೋದತೆ ||

ಮನುಷ್ಯನು ತನ್ನ ಹಣವನ್ನು ಧರ್ಮಕ್ಕೆ, ಕೀರ್ತಿಗೆ, ಅರ್ಥಕ್ಕೆ, ಕಾಮಕ್ಕೆ ಮತ್ತು ಸ್ವಜನರಿಗೆ, ಹೀಗೆ ಐದು ವಿಧದಲ್ಲಿ ಖರ್ಚು ಮಾಡತಕ್ಕವನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖಪಡುತ್ತಾನೆ.

ಕೊನೆಮಾತು: ಅತಿಯಾದರೆ ಅಮೃತವೂ ವಿಷ. ಅತಿಯಾದ ಹಣದ ಸಂರಕ್ಷಣೆಯ ಬಗೆಗಿನ ಗೀಳು, ನಮ್ಮಲ್ಲಿನ ಶಾಂತಿ, ನೆಮ್ಮದಿಯನ್ನ ಕದಡುತ್ತದೆ. ಹಣ ಇರುವುದು ಉಪಭೋಗಕ್ಕೆ ವಿನಃ ಸಂರಕ್ಷಣೆಗಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com