ಗರ್ಭಿಣಿಯರ ಮತ್ತು ಬಾಣಂತಿಯರ ಆಹಾರ (ಕುಶಲವೇ ಕ್ಷೇಮವೇ)

ಗರ್ಭಿಣಿಯರ ಆಹಾರ ಸಮತೋಲನದಲ್ಲಿರಬೇಕು. ಹಾಲು, ತುಪ್ಪ ಮತ್ತು ಜೇನುತುಪ್ಪವನ್ನು ಹೆಚ್ಚಾಗಿ ಸೇವಿಸಬೇಕು. ಆರೋಗ್ಯವಂತ ಮಗುವಿನ ಜನನ ಪ್ರತಿ ಗರ್ಭಿಣಿಯ ಕನಸಾಗಿರುತ್ತದೆ. ‘ಪ್ರತಿಯೊಂದು ಮನೆಯ ನಗು - ಆರೋಗ್ಯವಂತ ಮಗು’ ಎಂಬುದಾಗಿರುತ್ತದೆ.
ಗರ್ಭಿಣಿ (ಸಂಗ್ರಹ ಚಿತ್ರ)
ಗರ್ಭಿಣಿ (ಸಂಗ್ರಹ ಚಿತ್ರ)

ಗರ್ಭಿಣಿಯರ ಆಹಾರ ಸಮತೋಲನದಲ್ಲಿರಬೇಕು. ಹಾಲು, ತುಪ್ಪ ಮತ್ತು ಜೇನುತುಪ್ಪವನ್ನು ಹೆಚ್ಚಾಗಿ ಸೇವಿಸಬೇಕು. ಆರೋಗ್ಯವಂತ ಮಗುವಿನ ಜನನ ಪ್ರತಿ ಗರ್ಭಿಣಿಯ ಕನಸಾಗಿರುತ್ತದೆ. ‘ಪ್ರತಿಯೊಂದು ಮನೆಯ ನಗು - ಆರೋಗ್ಯವಂತ ಮಗು’ ಎಂಬುದಾಗಿರುತ್ತದೆ. ಆದ್ದರಿಂದ ಗರ್ಭ ಧರಿಸಿದ ನಂತರ ತನ್ನ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳೊಂದಿಗೆ ಭ್ರೂಣದ ಬೆಳವಣಿಗೆಗೆ ಬೇಕಾಗುವ ಆಹಾರಾಂಶಗಳನ್ನು ಸೇವಿಸಬೇಕಾಗುತ್ತದೆ. 

ತುಪ್ಪ ತಿಂದರೆ ದಪ್ಪಗಾಗುವುದಿಲ್ಲ...

ಗರ್ಭಿಣಿಯರು ಎರಡು ಮತ್ತು ಮೂರನೇ ತಿಂಗಳುಗಳಲ್ಲಿ ಮೃದುವಾಗಿ ಬೇಯಿಸಿದ ಅನ್ನವನ್ನು ಹಾಲಿನೊಡನೆ ಬೆರೆಸಿ ಉಣ್ಣಬೇಕು. ಪಾನೀಯಗಳನ್ನು ಕುಡಿಯಬೇಕು. ಜೇನುತುಪ್ಪದ ಬಳಕೆಯೂ ಇರಲಿ. ಜೇನುತುಪ್ಪ ಸುಲಭವಾಗಿ ಜೀರ್ಣವಾಗುತ್ತದೆ. ಜಠರಾಗ್ನಿಯನ್ನು ವರ್ಧಿಸುತ್ತದೆ. ದೇಹಕ್ಕೆ ಮಾರ್ದವತೆ ನೀಡುತ್ತದೆ. ಶರೀರದ ಎಲ್ಲ ಜೀವಕೋಶಗಳಿಗೆ ಪೋಷಕಾಂಶ ಒದಗಿಸುತ್ತದೆ. ಈ ಸಮಯದಲ್ಲಿ ಗರ್ಭಿಣಿಯ ಆಹಾರದಲ್ಲಿರಬೇಕಾದ ಮತ್ತೊಂದು ಪ್ರಮುಖ ದ್ರವವೆಂದರೆ ತುಪ್ಪ. ಇಂದು ಅನೇಕ ಜನರು ತುಪ್ಪವನ್ನು ಹತ್ತಿರ ಕೂಡ ಸೇರಿಸುವುದಿಲ್ಲ. ಎಲ್ಲಿ ದಪ್ಪಗಾಗುತ್ತೇವೆಂಬ ಕಾರಣದಿಂದ. ಆದರೆ ಕೇವಲ ತುಪ್ಪ ಸೇವಿಸುವುದರಿಂದ ದಪ್ಪಗಾಗುವುದಿಲ್ಲ. ದಪ್ಪವಾಗಲು ಇಂದಿನ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಪ್ರಮುಖ ಕಾರಣ. ತುಪ್ಪದ ಸೇವನೆ ಭ್ರೂಣದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಬುದ್ಧಿ, ಜಾಣ್ಮೆ ಮತ್ತು ಸೌಂದರ್ಯ ಹೆಚ್ಚುತ್ತದೆ. ಶಕ್ತಿ ನೀಡುತ್ತದೆ. 

ಬೇಳೆಕಾಳುಗಳು, ಮೊಳಕೆಕಾಳುಗಳು, ಸೊಪ್ಪು, ವಿವಿಧ ತರಕಾರಿಗಳನ್ನು ಒಳಗೊಂಡಿರುವ ಆಹಾರ ಸೇವನೆ ಮಾಡಬೇಕು. ಪ್ರತಿದಿನ ಊಟದ ನಂತರ ಹಣ್ಣುಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಬೇಕು. ಆಯಾ ಋತುಮಾನದಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸಬೇಕು. ಉಪ್ಪಿನ ಸೇವನೆ ಹೆಚ್ಚಾಗಿ ಬೇಕು. ಕರಿದ ಪದಾರ್ಥ, ಉಪ್ಪಿನಕಾಯಿ, ಹಪ್ಪಳ ಮತ್ತು ಸಂಡಿಗೆಗಳ ಸೇವನೆಯು ಮಿತಿಯಲ್ಲಿರಲಿ.

ಗರ್ಭಿಣಿ ದೌಹೃದಿನೀ
ನಾಲ್ಕನೇ ತಿಂಗಳಲ್ಲಿ ಗರ್ಭಿಣಿಯನು ದೌಹೃದಿನೀ ಎಂದು ಕರೆಯುತ್ತಾರೆ. ಏಕೆಂದರೆ ಮಗುವಿನ ಮನಸ್ಸು ನಾಲ್ಕನೇ ತಿಂಗಳಲ್ಲಿ ವ್ಯಕ್ತವಾಗುತ್ತದೆಂದು ಆಯುರ್ವೇದಲ್ಲಿ ಉಲ್ಲೇಖವಿದೆ. ದೌಹೃದಿನೀ ಎಂದರೆ ಎರಡು ಹೃದಯಗಳು ಇರುತ್ತವೆ ಎಂದರ್ಥ (ತಾಯಿಯದು ಮತ್ತು ಮಗುವಿನದು). 

ಗರ್ಭಿಣಿ ಬಯಕೆ
ಈ ನಾಲ್ಕು ತಿಂಗಳುಗಳಲ್ಲಿ ಭ್ರೂಣದ ಬೆಳವಣಿಗೆ ಆಗುವುದರಿಂದ ಇದು ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಸಮಯದಲ್ಲ ಕೊರತೆಗಳು ಆಸೆಯಾಗಿ ವ್ಯಕ್ತವಾಗುತ್ತವೆ. ದೇಹದಲ್ಲಿ ಯಾವುದೇ ಪೋಷಕಾಂಶ ಕಡಿಮೆಯಾಗಿದೆಯೋ ದೇಹ ಅದನ್ನು ಬಯಸುತ್ತದೆ. ಅದನ್ನೇ ‘ಬಯಕೆ’ ಎಂದು ರೂಢಿಗತವಾಗಿ ಕರೆಯುತ್ತಾರೆ. ಅದಕ್ಕೆ ಪುಷ್ಟಿಕರವಾದ ಆಹಾರವನ್ನು ಆಕೆ ಸೇವಿಸಲೇಬೇಕು. 

ನಾಲ್ಕನೇ ತಿಂಗಳಿನಲ್ಲಿ ಗರ್ಭಿಣಿಯರಿಗೆ ಇತರೆ ಆಹಾರದೊಂದಿಗೆ ಬೆಣ್ಣೆಯನ್ನು ನೀಡಬೇಕು. ಬೆಣ್ಣೆಯ ಸೇವನೆಯಿಂದ ಶರೀರದ ಬಲವು ಹೆಚ್ಚುತ್ತದೆ ಮತ್ತು ಆಹಾರ ಜೀರ್ಣಿಸುವುದೂ ಸುಲಭವಾಗುತ್ತದೆ. ಈ ಸಮಯದಲ್ಲಿ ಅನ್ನ ಮತ್ತು ಮೊಸರಿನ ಸೇವನೆಯೂ ಒಳ್ಳೆಯದು. ಮಾಂಸಾಹಾರಿಗಳು ಪ್ರಾಣಿಗಳ ಮಾಂಸವನ್ನು ಸೇವಿಸಬಹುದು. ಐದನೆಯ ತಿಂಗಳಿನಲ್ಲಿ ಅನ್ನಕ್ಕೆ ಹಾಲು, ಬೆಲ್ಲ ಸೇರಿಸಿ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಪಾಯಸ ತಯಾರಿಸಿಕೊಂಡು ಸೇವನೆ ಮಾಡಬೇಕು. ಅಲ್ಲದೇ ತನ್ನ ಮತ್ತು ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅಲ್ಲದೇ ನೆಲ್ಲಿಕಾಯಿಯಿಂದ ಚಟ್ನಿ, ಮುರಬ್ಬ ಮತ್ತು ಗುಳುಂಬಗಳನ್ನು ತಯಾರಿಸಿಕೊಟ್ಟುಕೊಂಡು ಆಹಾರದೊಂದಿಗೆ ತಿನ್ನಬೇಕು. ನೆಲ್ಲಿಕಾಯಿಯಲ್ಲಿ ಜೀವಸತ್ವ ಸಿ ಅಧಿಕವಾಗಿರುವುದರಿಂದ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಗರ್ಭಿಣಿಯರು ಕಾಫಿ, ಟೀ ಹೆಚ್ಚು ಬಾರಿ ಸೇವಿಸುವುದು, ಐಸ್ ಕ್ರೀಂ, ಮಸಾಲೆ ಪದಾರ್ಥಗಳ ಸೇವನೆ ಹೆಚ್ಚು ಮಾಡುವುದು ಬೇಡ. 

ಆರು ಮತ್ತು ಏಳನೇ ತಿಂಗಳುಗಳಲ್ಲಿ ಹಣ್ಣಿನ ರಸ, ಸಿಹಿ ಮಜ್ಜಿಗೆ, ರಾಗಿ ಗಂಜಿ ಮುಂತಾದವುಗಳನ್ನು ಹೆಚ್ಚು ಸೇವಿಸಬೇಕು. 
ಎಂಟನೆಯ ತಿಂಗಳಿನಲ್ಲಿ ಮಗುವಿಗೆ ಸಂಪೂರ್ಣ ಕೊಬ್ಬು ಪೂರೈಕೆಯಾಗುವುದರಿಂದ ಮಗುವಿನ ಮಾಂಸಖಂಡಗಳು ಬೆಳವಣಿಗೆಯಾಗಿ ರಕ್ತಪರಿಚಲನೆ ಆರಂಭವಾಗಿ ಅದು ಆಹಾರ ಜೀರ್ಣಿಸಿಕೊಳ್ಳುವ ಶಕ್ತಿಯನ್ನ ಪಡೆದಿರುತ್ತದೆ. ಆದ್ದರಿಂದ ಇಂತಹ ಸಮಯದಲ್ಲಿ ಪೋಷಕಾಂಶಯುಕ್ತ ಆಹಾರವನ್ನು ದಿನಕ್ಕೆ ನಾಲ್ಕು ಬಾರಿ ಸೇವನೆ ಮಾಡಬೇಕು. ಒಂದೇ ಬಾರಿಗೆ ಹೆಚ್ಚು ಪ್ರಮಾಣ ಸೇವಿಸಲು ಆಗದಿದ್ದಾಗ ಆಗಾಗ ಸ್ವಲ್ಪ ಸ್ವಲ್ಪ ಸೇವಿಸಬೇಕು. 

ಬಾಣಂತಿಯರಿಗೆ ಅತಿ ಕಟ್ಟುನಿಟ್ಟು ಬೇಡ 
ಬಾಣಂತಿಯರ ಆಹಾರ ವಿಷಯದಲ್ಲಿ ಅತಿಯಾದ ಕಟ್ಟುನಿಟ್ಟು ಬೇಡ. ಹೆರಿಗೆಯಾದ ಮೊದಲೆರಡು ದಿನಗಳಲ್ಲಿ ಮೃದುವಾಗಿ ಬೇಯಿಸಿದ ಅನ್ನ, ಸಾರು, ಇಡ್ಲಿ ಮತ್ತು ಸ್ವಲ್ಪ ಬೇಯಿಸಿದ ತರಕಾರಿ ಕೊಡಬೇಕು. ದಿನಕ್ಕೆರಡು ಬಾರಿ ಹಾಲು ಕೊಡಬೇಕು. ಕುಡಿಯಲು ಕುದಿಸಿ ಆರಿಸಿದ ನೀರನ್ನೇ ಕೊಡಬೇಕು. ಕೆಲವರು ನೀರು ಕೊಡುವುದೇ ಇಲ್ಲ. ಅತ್ಯಲ್ಪ ಪ್ರಮಾಣದಲ್ಲಿ ಕೊಡುತ್ತಾರೆ. ನೀರನ್ನು ಕೊಡದಿದ್ದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಹಾಲು ಕೂಡ ಕಡಿಮೆಯಾಗುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಮಲಬದ್ಧತೆಯುಂಟಾಗಿ ಮುಂದುವರೆದು ಮೂಲವ್ಯಾಧಿಯೂ ಕಾಣಿಸಿಕೊಳ್ಳಬಹುದು. 

ಪುಷ್ಟಿಕರ ಮತ್ತು ಸಮತೋಲಿತ ಆಹಾರ
ಬಾಣಂತಿಯರಿಗೆ ಪುಷ್ಟಿಕರ ಮತ್ತು ಸಮತೋಲನ ಆಹಾರ ಅವಶ್ಯಕ. ಅವರು ಬಿಸಿಯಾಗಿ ಆಹಾರವನ್ನು ಸೇವಿಸಬೇಕು. ಎಲ್ಲ ಬಗೆಯ ಸೊಪ್ಪುಗಳು (ದಂಟು, ಹರಿವೆ, ಪಾಲಕ್, ಹೊನಗೊನೆ, ಸಬ್ಬಸಿಗೆ, ಬಸಳೆ ಮತ್ತು ಅಗಸೆ ಸೊಪ್ಪು ಮುಖ್ಯವಾಗಿ) ಆಹಾರದಲ್ಲಿ ಬಳಕೆಯಾಗಬೇಕು. ಗೋಧಿ, ಅಕ್ಕಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆ ಮುಖ್ಯ. ಪಪ್ಪಾಯ, ಟೊಮ್ಯಾಟೋ, ನೆಲ್ಲಿಕಾಯಿ, ಕ್ಯಾರೆಟ್ ಮುಂತಾದವುಗಳನ್ನು ನಿಯಮಿತವಾಗಿ ಸೇವಿಸಿ. ಪುಷ್ಟಿಕರ ಪೋಷಕಾಂಶಗಳನ್ನು ಹೆಸರುಬೇಳೆ ಪಾಯಸ ಮತ್ತು ಹಾಲಿನಿಂದ ತಯಾರಿಸಿದ ಖೀರು ಒಳ್ಳೆಯದು.

ಎದೆಹಾಲಿನ ಪ್ರಮಾಣ ಕಡಿಮೆಯಾಗಿದ್ದರೆ ತಾಜಾ ದಂಟಿನಸೊಪ್ಪಿನ ರಸವನ್ನು ಜೇನುತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಬೆರೆಸಿ ಕುಡಿಯಬೇಕು. ನುಗ್ಗೆಸೊಪ್ಪನ್ನು ಬೇಯಿಸಿ ರಸ ತೆಗೆದು ಕುಡಿಯಬೇಕು ಮತ್ತು ಹೊನಗೊನೆ ಸೊಪ್ಪಿನ ಪಲ್ಯವನ್ನು ಸೇವಿಸಬೇಕು. ಸಬ್ಬಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಚಪಾತಿ ಅಥವಾ ಅನ್ನದೊಂದಿಗೆ ಸೇವಿಸಬೇಕು.  ಕೆಸುವಿನ ಗೆಡ್ಡೆಯನ್ನು ಬೇಯಿಸಿ ಅದರಿಂದ ತಯಾರಿಸಿದ ಪಲ್ಯ ಇಲ್ಲವೇ ಮೊಸರುಬಜ್ಜಿ ಸೇವನೆ ಮಾಡಬೇಕು. ತೊಂಡೆಹಣ್ಣಿನ ಸೇವನೆಯೂ ಒಳ್ಳೆಯದು. ಬಿಳಿಯ ಎಳ್ಳನ್ನು ಹಾಲಿನಲ್ಲಿ ಅರೆದು ಕುಡಿಯಬೇಕು. ಎಳ್ಳಿನ ಪುಡಿಯಲ್ಲಿ ತುಪ್ಪ, ಹಾಲು, ಬೆಲ್ಲ ಮತ್ತು ಜೇನುತುಪ್ಪ ಬೆರೆಸಿ ತಿನ್ನಬೇಕು.

ಬಾಣಂತಿಯರಿಗೆ ಅಂಟಿನುಂಡೆ ಬಹಳ ಪೌಷ್ಟಿಕ ಆಹಾರ. ಇದನ್ನು ತಯಾರಿಸಲು ಕೊಬ್ಬರಿ ಗಿಟುಕು ಅರ್ಧ ಕೆಜಿ, ಉತ್ತುತ್ತಿ 50 ಗ್ರಾಂ, ಗಸಗಸೆ 100 ಗ್ರಾಂ, ಲವಂಗ 50 ಗ್ರಾಂ, ಅಂಟು 100 ಗ್ರಾಂ, ಬೆಲ್ಲ 1 ಕೆಜಿ, ಬಾದಾಮಿ 100 ಗ್ರಾಂ ಮತ್ತು ತುಪ್ಪ ಕಾಲು ಕೆಜಿ ಬೇಕು. ಮೊದಲಿಗೆ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಬೇಕು. ಈ ಎಲ್ಲ ಸಾಮಗ್ರಿಗಳನ್ನು ತುಪ್ಪದಲ್ಲಿ ಕೆಂಪಗಾಗುವವರೆಗೆ ಹುರಿದುಕೊಳ್ಳಬೇಕು. ಗಸಗಸೆ ಮತ್ತು ಅಂಟನ್ನು ಕೂಡ ಹುರಿದುಕೊಳ್ಳಬೇಕು. ನಂತರ ಬೆಲ್ಲವನ್ನು ಕರಗಿಸಿ ಅದರೊಂದಿಗೆ ಬೆರೆಸಿ ಉಂಡೆ ತಯಾರಿಸಿಟ್ಟುಕೊಳ್ಳಬೇಕು. ಇದನ್ನು ನಿಯಮಿತವಾಗಿ ಸೇವಿಸುವುದು ಬಾಣಂತಿಯರ ಆರೋಗ್ಯಕ್ಕೆ ಹಿತಕಾರಿ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com