ವಸಡಿನ ನೋವು ಮತ್ತು ಪರಿಹಾರಗಳು (ಕುಶಲವೇ ಕ್ಷೇಮವೇ)

ನಾವು ಸಂಪೂರ್ಣ ಆರೋಗ್ಯದಿಂದಿರಲು ನಮ್ಮ ಬಾಯಿಯ ಆರೋಗ್ಯವೂ ಬಹಳ ಮುಖ್ಯ. ಆರೋಗ್ಯಕ್ಕೆ ಬಾಯಿಯ ಶುಚಿತ್ವದ ಜೊತೆಗೆ ಹಲ್ಲು ಮತ್ತು ವಸಡುಗಳು ಶುಚಿಯಾಗಿ ನೋವಿನಿಂದ ಮುಕ್ತವಾಗಿರಬೇಕು.
ವಸಡಿನ ನೋವು ಮತ್ತು ಪರಿಹಾರಗಳು (ಸಾಂಕೇತಿಕ ಚಿತ್ರ)
ವಸಡಿನ ನೋವು ಮತ್ತು ಪರಿಹಾರಗಳು (ಸಾಂಕೇತಿಕ ಚಿತ್ರ)

ನಾವು ಸಂಪೂರ್ಣ ಆರೋಗ್ಯದಿಂದಿರಲು ನಮ್ಮ ಬಾಯಿಯ ಆರೋಗ್ಯವೂ ಬಹಳ ಮುಖ್ಯ. ಆರೋಗ್ಯಕ್ಕೆ ಬಾಯಿಯ ಶುಚಿತ್ವದ ಜೊತೆಗೆ ಹಲ್ಲು ಮತ್ತು ವಸಡುಗಳು ಶುಚಿಯಾಗಿ ನೋವಿನಿಂದ ಮುಕ್ತವಾಗಿರಬೇಕು.

ವಸಡು ನಮ್ಮ ಬಾಯಿಯ ಮೃದು ಅಂಗಾಂಶದ ಒಳಪದರದ ಭಾಗ. ಹಲ್ಲುಗಳನ್ನು ಸುತ್ತುವರಿದು ವಸಡು ಅವುಗಳಿಗೆ ರಕ್ಷಣೆ ಒದಗಿಸುತ್ತದೆ. ಹಲ್ಲಗಳನ್ನು ಭದ್ರವಾಗಿ ಹಿಡಿದಿಟ್ಟುಕೊಂಡು ಅವು ಅಲುಗಾಡದಂತೆ ಮತ್ತು ಹಲ್ಲುಗಳ ಆಳ ಅಂಗಾಂಶಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ವಸಡು ನಸುಗುಲಾಬಿ ಬಣ್ಣದ್ದಾಗಿರುತ್ತದೆ. ಕೆಲವೊಮ್ಮೆ ಮೆಲನಿನ್ ವರ್ಣದ್ರವ್ಯದಿಂದ ನೈಸರ್ಗಿಕವಾಗಿ ಹೆಚ್ಚು ಗಾಢ ಬಣ್ಣದ್ದಾಗಿರಬಹುದು.

ವಸಡಿನ ಸಾಮಾನ್ಯ ಸಮಸ್ಯೆಗಳು

ಹಲ್ಲುಜ್ಜುವಾಗ ರಕ್ತ ಬರುವುದು, ನೋವಾಗುವುದು, ಊದಿಕೊಳ್ಳುವುದು ಮತ್ತು ಜುಂ ಎನ್ನಿಸುವುದು ವಸಡಿನ ಸಾಮಾನ್ಯ ಸಮಸ್ಯೆಗಳು. ಬಾಯಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ಕೀಟಾಣುಗಳು ಉಂಟು ಮಾಡುವಂತಹ ಸೋಂಕಿನಿಂದಾಗಿ ವಸಡಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಊಟ ಅಥವಾ ತಿಂಡಿ ಸೇವಿಸಿದ ನಂತರ ಹಲ್ಲುಗಳ ನಡುವಿನ ಜಾಗದಲ್ಲಿ ಆಹಾರದ ತುಣುಕುಗಳು ಸಿಕ್ಕಿ ಹಾಕಿಕೊಳ್ಳುವುದು ಸಹಜ. ಈ ತುಣುಕುಗಳು ಹೊರಗೆ ಬಾರದೆ ಕಿರಿಕಿರಿ ಮಾಡುತ್ತದೆ. ಅಲ್ಲದೇ ಇದು ವಸಡಿನ ಊತಕ್ಕೂ ಕಾರಣವಾಗಬಹುದು.

ವಸಡಿನ ನೋವಿಗೆ ಪರಿಹಾರಗಳು

ವಸಡಿನಲ್ಲಿ ನೋವಿದೆ ಎಂದರೆ ಅದು ಸೋಂಕಿನ ಕಾರಣದಿಂದಿರಬಹುದು. ಆಗ ಒಂದು ಚಮಚ ಅರಿಶಿಣವನ್ನು ನೀರಿನೊಂದಿಗೆ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಂಡು ಈ ಪೇಸ್ಟ್ ನಿಂದ ಪ್ರತಿ ದಿನ ಹಲ್ಲುಜ್ಜುತ್ತಾ ಇದ್ದರೆ ಸೋಂಕು ಹೋಗಿ ನೋವು ನಿವಾರಣೆಯಾಗುತ್ತದೆ.

ವಸಡಿನಲ್ಲಿರುವ ನೋವು ಮತ್ತು ಊತವನ್ನು ಕಡಿಮೆ ಮಾಡಬೇಕಾದರೆ ಉಪ್ಪಿನ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು. ವಸಡಿನ ಸೋಂಕನ್ನು ನಿವಾರಣೆ ಮಾಡಲು ದಿನದಲ್ಲಿ ಮೂರರಿಂದ ನಾಲ್ಕು ಸಲ ಹೀಗೆ ಮಾಡಬೇಕು. ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ವಸಡಿನ ನೋವಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕುವುದು.

ಹಲ್ಲುಗಳನ್ನು ನಿಯಮಿತವಾಗಿ ಬ್ರಷ್ ಮಾಡಿದರೆ ವಸಡಿನ ಸಮಸ್ಯೆಗಳು ಕಾಡುವುದಿಲ್ಲ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತಪ್ಪದೇ ಬ್ರಷ್ ಮಾಡಿದರೆ ಹಲ್ಲುಗಳು ಮತ್ತು ವಸಡುಗಳ ಆರೋಗ್ಯ ಚೆನ್ನಾಗಿರುತ್ತದೆ. ಬ್ರಷ್ ಮಾಡುವಾಗ ಹಲ್ಲುಗಳನ್ನು ಅತಿ ಗಟ್ಟಿಯಾಗಿ ತಿಕ್ಕಬಾರದು. ಹಲ್ಲುಗಳು ಮತ್ತು ವಸಡುಗಳ ಮೇಲೆ ಸೂಕ್ಷ್ಮವಾಗಿ ಬ್ರಷ್ ಮಾಡಿ ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬ್ರಷ್ಷಿನ ಬ್ರಿಸಲ್ಲುಗಳು ವಸಡುಗಳಲ್ಲಿ ರಕ್ತಸ್ರಾವ ಉಂಟುಮಾಡುತ್ತವೆ. ಒಂದೇ ಟೂತ್ ಬ್ರಷ್ಷನ್ನು ದೀರ್ಘಕಾಲ ಬಳಸುವುದು ಸರಿಯಲ್ಲ. ಆಗಾಗ ಟೂತ್‌ಬ್ರಷ್ ಬದಲಿಸಿದರೆ ಉತ್ತಮ. ಬ್ರಷ್ಷಿನ ಬ್ರಿಸಲ್ಲುಗಳು ಮೃದುವಾಗಿರಬೇಕು. ಗಟ್ಟಿಯಾಗಿರಬಾರದು.

ವಸಡಿನ ನೋವಿಗೆ ಆಯುರ್ವೇದ ಪರಿಹಾರಗಳು

ಬೇವನ್ನು ಅನಾದಿ ಕಾಲದಿಂದಲೂ ಆಯುರ್ವೇದದಲ್ಲಿ ಬಳಸುತ್ತಾ ಬಂದಿದ್ದಾರೆ. ಮೂಲತ: ಬೇವು ಕ್ರಿಮಿಕೀಟ ನಾಶಕ. ವಸಡಿನ ಸಮಸ್ಯೆ ನಿವಾರಣೆ ಮಾಡಲು ಬೇವಿನ ಎಲೆಗಳನ್ನು ಜಗಿಯಬಹುದು. ಜೊತೆಗೆ ಇದರಿಂದ ಹಲ್ಲು ಗುಳಿ ಬೀಳುವುದನ್ನು ತಡೆಯಬಹುದು ಮತ್ತು ಬಾಯಿಯ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಬಹುದು. ಒಣಗಿಸಿ ಪುಡಿ ಮಾಡಿದ ಬೇವಿನ ಎಲೆಗಳನ್ನು ಅಡುಗೆ ಸೋಡಾ ಮತ್ತು ನೀರಿನೊಂದಿಗೆ ಹಾಕಿ ಮೌತ್ ವಾಶ್ ಮಾಡಿಕೊಳ್ಳಬಹುದು. ಹೀಗೆ ವಸಡಿನ ನೋವು ನಿವಾರಣೆ ಮಾಡಿಕೊಳ್ಳಲು ಬೇವನ್ನು ನಿಯಮಿತವಾಗಿ ಬಳಸಿಕೊಳ್ಳಬಹುದು.

ಲವಂಗ ಹಲ್ಲು ನೋವು ನಿವಾರಣೆಗೆ ಒಳ್ಳೆಯ ಔಷಧ. ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಲವಂಗವನ್ನು ತೊಂದರೆ ಇರುವ ಹಲ್ಲು ಅಥವಾ ವಸಡಿನ ಭಾಗದಲ್ಲಿ ಇಟ್ಟುಕೊಂಡು ರಸ ಹೀರಿದರೆ ತಕ್ಷಣ ನೋವು ಉಪಶಮನವಾಗುತ್ತದೆ. ಲವಂಗದ ಎಣ್ಣೆಯನ್ನೂ ಸಹ ಬಳಸಬಹುದು. ಇದರಿಂದ ಸ್ವಲ್ಪ ಉರಿ ಉಂಟಾದರೂ ಕೆಲವು ನಿಮಿಷಗಳಲ್ಲಿ ನೋವು ಸರಿಹೋಗುತ್ತದೆ.

ಕಾಳುಮೆಣಸನ್ನು ನೋವಿರುವ ಜಾಗದಲ್ಲಿ ಉಜ್ಜಿಕೊಳ್ಳುವುದರಿಂದ ನೋವು ಮಾಯವಾಗುತ್ತದೆ. ಹಸಿ ಈರುಳ್ಳಿಯಲ್ಲಿ ನೋವು ಕಡಿಮೆ ಮಾಡುವ ಔಷಧೀಯ ಗುಣಗಳಿವೆ. ಸುಮಾರು 3-4 ನಿಮಿಷಗಳ ಕಾಲ ಈರುಳ್ಳಿಯನ್ನು ಜಗಿಯಬೇಕು. ಅದೂ ಕಷ್ಟವಾದರೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮೇಲೆ ಇರಿಸಿಕೊಳ್ಳಿ. ಇದರಿಂದ ತಕ್ಕಮಟ್ಟಿಗೆ ನೋವು ಕಡಿಮೆ ಆಗುತ್ತದೆ.ತ್ರಿಫಲಾ ಚೂರ್ಣವನ್ನು ನೀರಿಗೆ ಹಾಕಿ ಕುದಿಸಿ ಅದು ಸ್ವಲ್ಪ ಬಿಸಿಯಾಗಿರುವಾಗಲೇ ವಾರಕ್ಕೊಮ್ಮೆಯಾದರೂ ಮುಕ್ಕಳಿಸಬೇಕು.

ವಸಡನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಮಾರ್ಗಗಳು

ಸೀಗರೇಟ್ ಸೇದುವುದು ಶ್ವಾಸಕೋಶಕ್ಕೆ ಮಾತ್ರವಲ್ಲ ಹಲ್ಲು ಹಾಗೂ ವಸಡಿನ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಇದರೊಂದಿಗೆ ಪಾನ್, ಗುಟ್ಕಾದಂತಹ ತಂಬಾಕಿನ ಉತ್ಪನ್ನಗಳು ವಸಡಿನ ಸಮಸ್ಯೆಗೆ ಕಾರಣವಾಗುತ್ತವೆ. ಇದರಿಂದ ವಸಡಿನಲ್ಲಿ ಆದ ಗಾಯ ಗುಣವಾಗದೆ ಕೀವು ಉಂಟಾಗಬಹುದು. ವಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಧೂಮಪಾನವನ್ನು ತಕ್ಷಣ ಬಿಡಬೇಕು.

ಸಿಹಿತಿಂಡಿಗಳನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಸಿಹಿಪದಾರ್ಥಗಳ ಕಣಗಳು ಹಲ್ಲುಗಳ ನಡುವೆ ಸಿಕ್ಕಿಕೊಂಡು ಹಲ್ಲುಗಳು ಮತ್ತು ವಸಡು ಎರಡಕ್ಕೂ ತೊಂದರೆ ಉಂಟುಮಾಡಬಹುದು. ಹೆಚ್ಚು ಕಾಫಿ ಮತ್ತು ಟೀ ಸೇವನೆಯೂ ಒಳ್ಳೆದಯಲ್ಲ. ದಿನಕ್ಕೆ ಎರಡು ಬಾರಿ ಸೇವಿಸಿದರೆ ಸಾಕು. ಹಾಗೆಯೇ ಅತಿ ತಣ್ಣಗಿನ ಅಥವಾ ಅತಿ ಬಿಸಿಯಾಗಿರುವ ಆಹಾರ ಸೇವನೆಯು ಸಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ವಸಡನ್ನು ಮತ್ತು ಹಲ್ಲನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಮಾರ್ಗ ಎಂದರೆ ಪ್ರತಿ ಸಲ ಆಹಾರ ಸೇವಿಸಿದಾಗಲೂ ಚೆನ್ನಾಗಿ ಒಮ್ಮೆ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದು.

ಇಂಟರ್‌ನ್ಯಾಷನಲ್ ಡೆಂಟಲ್ ಜರ್ನಲ್ ಪ್ರಕಾರ “ವಸಡಿನ ಸಮಸ್ಯೆ ಜನರ ಆರೋಗ್ಯವನ್ನು ತೀವ್ರವಾಗಿ ಬಾಧಿಸುವ ಬಾಯಿಯ ರೋಗಗಳಲ್ಲಿ ಒಂದು. ಇದರಿಂದಾಗ ಜನರು ತೀವ್ರ ನೋವು ಅನುಭವಿಸುತ್ತಾರೆ. ಆಹಾರವನ್ನು ತಿನ್ನಲು ಆಗದೆ ಪರದಾಡುತ್ತಾರೆ. ಹಾಗಾಗಿ ಜೀವನದಲ್ಲಿ ಆನಂದವನ್ನು ಕಳೆದುಕೊಳ್ಳುತ್ತಾರೆ.” ಆದ್ದರಿಂದ ವಸಡಿನ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಪರಿಹಾರ ಮಾಡಿಕೊಳ್ಳಬೇಕು. ಸಮಸ್ಯೆ ಗಂಭೀರವಾಗಿದ್ದರೆ ವೈದ್ಯರನ್ನು ತಡಮಾಡದೇ ಕಾಣಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com