ಹೀಟ್ ವೇವ್ ಅಥವಾ ಉಷ್ಣದ ಅಲೆ: ಆರೋಗ್ಯದ ಮೇಲೆ ಪರಿಣಾಮ (ಕುಶಲವೇ ಕ್ಷೇಮವೇ)
ಭಾರತೀಯ ಹವಾಮಾನ ಇಲಾಖೆಯು ಪ್ರಕಾರ ಬಯಲು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಉಷ್ಣತೆ ಇದ್ದರೆ ಉಷ್ಣದ ಅಲೆ ಇದೆ ಎಂದು ಹೇಳಿದೆ.
Published: 15th April 2023 03:33 AM | Last Updated: 15th April 2023 02:03 PM | A+A A-

ಉಷ್ಣಹವೆ (ಸಾಂಕೇತಿಕ ಚಿತ್ರ)
ಬೇಸಿಗೆಯಲ್ಲಿ ದೈನಂದಿನ ತಾಪಮಾನ ಹೆಚ್ಚಾಗುವುದು ಮತ್ತು ಉಷ್ಣದ ಅಲೆ (ಹೀಟ್ ವೇವ್) ಏಳುವುದು ಸಾಮಾನ್ಯ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವುದು ಸಹಜ. ಮಕ್ಕಳು, ವಯಸ್ಕರು ಮತ್ತು ವೃದ್ಧರು ಎಲ್ಲರನ್ನು ಇದು ಬಾಧಿಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಆರೋಗ್ಯದ ಕುರಿತು ಎಚ್ಚರದಿಂದ ಇರುವುದು ಒಳಿತು.
ಹೀಟ್ ವೇವ್ ಪರಿಸ್ಥಿತಿ ಎಂದರೇನು?
ವಿಶ್ವ ಹವಾಮಾನ ಸಂಸ್ಥೆಯು ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದ ಐದು ಅಥವಾ ಅದಕ್ಕಿಂತ ಹೆಚ್ಚು ಸತತ ದಿನಗಳ ಅವಧಿ ಪರಿಸ್ಥಿತಿಯನ್ನು ಉಷ್ಣದ ಅಲೆ (ಹೀಟ್ ವೇವ್) ಎಂದು ವ್ಯಾಖ್ಯಾನಿಸುತ್ತದೆ. ಭಾರತೀಯ ಹವಾಮಾನ ಇಲಾಖೆಯು ಪ್ರಕಾರ ಬಯಲು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಉಷ್ಣತೆ ಇದ್ದರೆ ಉಷ್ಣದ ಅಲೆ ಇದೆ ಎಂದು ಹೇಳಿದೆ.
ಇದನ್ನೂ ಓದಿ: H3N2 ಇನ್‌ಫ್ಲುಯೆಂಜಾ: ಭಯ ಬೇಡ, ಜಾಗ್ರತೆ ಇರಲಿ
ಉಷ್ಣದ ಅಲೆಯಿಂದ ಆರೋಗ್ಯದ ಮೇಲೆ ಪರಿಣಾಮ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎನ್ವಿರಾನ್‌ಮೆಂಟಲ್ ಹೆಲ್ತ್ ಸೈನ್ಸಸ್‌ನ ಪ್ರಕಾರ ಉಷ್ಣದ ಅಲೆಯು ದೇಹದ ಆಂತರಿಕ ತಾಪಮಾನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸೆಳೆತ ಮತ್ತು ಬಳಲಿಕೆ ಉಂಟಾಗುತ್ತದೆ. ತಾಪಮಾನದ ವೈಪರೀತ್ಯಗಳು ಹೃದಯ ರಕ್ತನಾಳದ ಕಾಯಿಲೆ, ಉಸಿರಾಟದ ಕಾಯಿಲೆ ಮತ್ತು ಮಧುಮೇಹ ಸಂಬಂಧಿತ ಪರಿಸ್ಥಿತಿಗಳಂತಹ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಇನ್ನಷ್ಟು ಹದಗೆಡಿಸಬಹುದು. ನಿರ್ಜಲೀಕರಣ, ಬಿಸಿಲಿನ ಹೊಡೆತ, ಮೂತ್ರಪಿಂಡದ ತೊಂದರೆಗಳು ಮತ್ತು ಚರ್ಮದ ಸೋಂಕುಗಳು ಉಂಟಾಗಬಹುದು ಎಂದು ಹೇಳಲಾಗಿದೆ.
ದಟ್ಟವಾದ ಜನಸಂಖ್ಯೆ ಹೊಂದಿರುವ ದೊಡ್ಡ ನಗರಗಳಲ್ಲಿ ಮಾನವ ನಿರ್ಮಿತ ಮೇಲ್ಮೈಗಳು ಹಗಲಿನಲ್ಲಿ ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತವೆ ಮತ್ತು ರಾತ್ರಿಯಲ್ಲಿ ಹಾಗೆ ಶೇಖರಿಸಿದ ಶಕ್ತಿಯನ್ನು ಶಾಖವಾಗಿ ಹೊರಸೂಸಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ಬಗ್ಗೆ ಆದಷ್ಟೂ ಜಾಗೃತರಾಗಿರಬೇಕು. ಆದ್ದರಿಂದ ಉಷ್ಣದ ಅಲೆ ಇದ್ದಾಗ ಹೀಗೆ ಮಾಡಿ:
ಇದನ್ನೂ ಓದಿ: ಬೇಸಿಗೆಯಲ್ಲಿ ಬೆವರುಗುಳ್ಳೆ ಸಮಸ್ಯೆ
- ಬಾಯಾರಿಕೆಯಾದರೆ ನೀರನ್ನು ತಡಮಾಡದೇ ಕುಡಿಯಿರಿ. ಹೆಚ್ಚು ಬಾಯಾರಿಕೆಯಾದರೆ ಶುದ್ಧವಾದ ನೀರು, ಎಳೆನೀರು, ನೀರುಮಜ್ಜಿಗೆ, ತಂಪಾದ ರಾಗಿ, ಅಕ್ಕಿ ಗಂಜಿ, ಪಾನಕ, ಮತ್ತಿತರ ಆರೋಗ್ಯಕ್ಕೆ ಒಳ್ಳೆಯದಾದ ಪಾನೀಯಗಳನ್ನು ಸೇವಿಸಬೇಕು. ಅತಿಯಾಗಿ ಫ್ರಿಜ್ಜಿನಲ್ಲಿಟ್ಟ ತಣ್ಣನೆಯ ನೀರನ್ನು ಕುಡಿಯಬಾರದು. ಮಡಕೆಯಲ್ಲಿ ಸಂಗ್ರಹಿಸಿರುವ ತಣ್ಣನೆಯ ನೀರು ಉತ್ತಮ.
- ನೀರಿನ ಅಂಶವಿರುವ ಹಣ್ಣುಗಳ ಸೇವನೆ ಒಳಿತು. ಆದರೆ ಸೋಡಾ, ಮದ್ಯ ಮತ್ತಿತರ ಸಕ್ಕರೆ ಅಂಶ ಜಾಸ್ತಿ ಇರುವ ತಂಪು ಪಾನೀಯಗಳನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.
- ಯಾವುದೇ ಕಾರಣಕ್ಕೂ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಉಷ್ಣತೆ ತೀವ್ರವಾಗಿದ್ದಾಗ ನಮ್ಮ ದೇಹ ಬಹುಬೇಗನೇ ನಿರ್ಜಲೀಕರಣಗೊಳ್ಳುತ್ತದೆ. ಆಗ ವಾಂತಿವಾಗುವುದು, ಅತಿಯಾಗಿ ಬೆವರುವುದು, ಬಾಯಿ ಒಣಗುವುದು, ತಲೆ ನೋವು ಮತ್ತು ತಲೆಸುತ್ತಿನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
- ಬಿಸಿಲ ಕಾಲದಲ್ಲಿ ಧಗೆ ಹೆಚ್ಚಿದ್ದಾಗ ಸಾಧ್ಯವಾದಷ್ಟೂ ಮನೆಯಲ್ಲೇ ಇರಬೇಕು. ಅಗತ್ಯ ಕೆಲಸವಿದ್ದರೆ ಮಾತ್ರ ಹೊರಹೋಗಬೇಕು. ಹನ್ನೊಂದು ಗಂಟೆ ನಂತರದ ಬಿಸಿಲು ಹೆಚ್ಚಾಗಿರುತ್ತದೆ. ಹೊರಹೋದಾಗ ಛತ್ರಿಯನ್ನು ತಪ್ಪದೇ ಕೊಂಡೊಯ್ಯಿರಿ. ತಂಪಾದ ಕನ್ನಡಕಗಳು, ಹಗುರಾದ ಪೂರ್ತಿ ತೋಳಿರುವ ಹತ್ತಿಯ ತಿಳಿ ಬಣ್ಣದ ಸಡಿಲ ಉಡುಪುಗಳನ್ನು ಧರಿಸಿ. ತಲೆಗೆ ಕ್ಯಾಪನ್ನೂ ಹಾಕಿಕೊಳ್ಳಿ. ಹೆಚ್ಚು ದೂರ ದಣಿವಾಗುವ ತನಕ ನಡೆಯಬಾರದು. ತಲೆಸುತ್ತು ಬಂದು ಕೆಳಗೆ ಬೀಳುವ ಅನುಭವವಾದರೆ ಡಾಕ್ಟರನ್ನು ತಕ್ಷಣ ನೋಡಿ.
- ಹಗಲು ಹೊತ್ತಿನಲ್ಲಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನೂ ಆದಷ್ಟೂ ಮುಚ್ಚಿ ನೇರವಾಗಿ ಬಿಸಿಲು ಬರುವುದನ್ನು ತಡೆಯಿರಿ. ಸೆಕೆಗಾಲದಲ್ಲಿ ಗಾಳಿಯೂ ಕೂಡ ಬಿಸಿಯಾಗಿಯೇ ಇರುವುದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು.
- ಊಟತಿಂಡಿಯ ವಿಚಾರದಲ್ಲೂ ಬಹಳ ಎಚ್ಚರಿಕೆ ವಹಿಸಬೇಕು. ಹೊಟ್ಟೆ ಬಿರಿಯುವಷ್ಟು ತಿನ್ನುವುದು ಒಳ್ಳೆಯದಲ್ಲ. ಅತಿಯಾದ ಆಹಾರ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಗೆಡವಬಹುದು. ಗಟ್ಟಿ ಪದಾರ್ಥಗಳ ಸೇವನೆಗಿಂತ ನೀರಿನ ಅಂಶ ಜಾಸ್ತಿ ಇರುವ ಆಹಾರ ಸೇವನೆ ಒಳ್ಳೆಯದು. ನಾರಿನ ಅಂಶ ಹೆಚ್ಚಿರುವ ತರಕಾರಿಗಳೂ ಒಳ್ಳೆಯದು. ಸಲಾಡು ಮತ್ತು ರಸಾಯನಗಳು ಹಿತಕಾರಿ.
- ಚರ್ಮದ ಆರೋಗ್ಯದ ಬಗ್ಗೆ ಬಿರುಬೇಸಿಗೆಯಲ್ಲಿ ಅತಿ ಹೆಚ್ಚು ಗಮನ ಹರಿಸಬೇಕು. ಇದೊಂದು ದೊಡ್ಡ ಸವಾಲೇ ಸರಿ. ಹೊರಗೆ ಹೋಗುವಾಗ ಕೂಲಿಂಗ್ ಗ್ಲಾಸ್ ಮತ್ತು ಚರ್ಮದ ತೊಂದರೆಗಳಿದ್ದರೆ ಮಾಯಿಶ್ಚರೈಸರ್ ನಿಯಮಿತವಾಗಿ ಹಚ್ಚಿಕೊಳ್ಳಬೇಕು. ಬಿಸಿಲಿಗೆ ಮುಖ ಒಡ್ಡುವುದನ್ನು ಕಡಿಮೆ ಮಾಡಬೇಕು. ಕಾಲಿಗೆ ಹಗುರವಾಗಿರುವ ಹತ್ತಿಯ ಸಾಕ್ಸುಗಳನ್ನು ತೊಡಬೇಕು.
- ಅತಿಯಾದ ಬಿಸಿಲು ಇರುವುದರಿಂದ ನಮ್ಮ ಮುದ್ದಿನ ಬೆಕ್ಕು, ನಾಯಿ ಮತ್ತು ಜಾನುವಾರುಗಳನ್ನೂ ಸುರಕ್ಷಿತ ಮಾಡಬೇಕಾಗುತ್ತದೆ. ಅವುಗಳು ಬಿಸಿಲಿನಲ್ಲಿ ಹೆಚ್ಚು ಅಡ್ಡಾಡದಂತೆ ಎಚ್ಚರ ವಹಿಸಬೇಕು. ಅವುಗಳ ತಲೆ ಮೇಲೆ ಸೂರು ಕಟ್ಟಿಡಬೇಕು. ದಿನವೂ ಕಾಲಕಾಲಕ್ಕೆ ನೀರು, ಆಹಾರ ಮತ್ತು ಮೇವು ಕೊಡುತ್ತಿರಬೇಕು. ಬೇಸಿಗೆಯಲ್ಲಿ ನಮ್ಮಂತೆಯೇ ಪ್ರಾಣಿಗಳಿಗೂ ಕೂಡ ಜಾಸ್ತಿ ನೀರು ಬೇಕಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಗಿಡಮರಗಳನ್ನು ಬೆಳೆಸಿದ್ದರೆ ಅವುಗಳಿಗೆ ಕಾಲಕಾಲಕ್ಕೆ ನೀರು ಹಾಕಬೇಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com