social_icon

ಗುಜರಾತಿಗಳೇಕೆ ಹೆಚ್ಚು ಶ್ರೀಮಂತರು? (ಹಣಕ್ಲಾಸು)

ಹಣಕ್ಲಾಸು-371

-ರಂಗಸ್ವಾಮಿ ಮೂಕನಹಳ್ಳಿ

Published: 10th August 2023 01:12 AM  |   Last Updated: 10th August 2023 08:21 PM   |  A+A-


ambani-adani

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಫೋರ್ಬ್ಸ್ ಪ್ರತಿ ವರ್ಷ ಬಿಲಿಯನೇರ್ಗಳ ಪಟ್ಟಿಯನ್ನ ಬಿಡುಗಡೆ ಮಾಡುತ್ತದೆ. ಈ ವರ್ಷವೂ ಏಪ್ರಿಲ್ನಲ್ಲಿ ಈ ಪಟ್ಟಿ ಬಿಡುಗಡೆಯಾಗಿದೆ. ಭಾರತದಲ್ಲಿ ಬರೋಬ್ಬರಿ 169 ಜನ ಬಿಲಿಯನೇರ್ಗಳಿದ್ದಾರೆ ಎಂದಿದೆ ಫೋರ್ಬ್ಸ್ ಪಟ್ಟಿ. ಕಳೆದ ವರ್ಷದ ಸಂಖ್ಯೆ 166, ಈ ವರ್ಷ ಮೂರು ಹೊಸ ಹೆಸರು ಸೇರಿಕೊಂಡಿದೆ. ಆಶ್ಚರ್ಯದ ವಿಷಯವೇನು ಗೊತ್ತೇ? 169 ಜನರಲ್ಲಿ 145 ಜನ ಬಿಲಿಯನೇರ್ಗಳು ಗುಜರಾತಿಗಳು! ಅವರ ವಾಸಸ್ಥಾನ, ಮುಂಬೈ, ಬೆಂಗಳೂರು, ದೆಹಲಿ, ಯಾವುದೇ ಇರಲಿ, ಆದರೆ ಅವರ ಮೂಲ ಗುಜರಾತ್. ನಾವು ಸೇಠು, ಮಾರ್ವಾಡಿ, ಗುಜ್ಜು ಭಾಯ್ ಇತ್ಯಾದಿಗಳನ್ನ ಹೇಳಿ ಅವರನ್ನ ಹಂಗಿಸಬಹುದು, ಅವರನ್ನ ಧನದಾಹಿಗಳು, ಕಂಜೂಸ್ ಎಂದೂ ಕರೆಯಬಹುದು. ಬೇಕಾದ್ದು ಅನ್ನಿ, ಅಡ್ಡಿಯಿಲ್ಲ, ಸದ್ಯಕ್ಕೆ ಭಾರತವನ್ನು ಮುನ್ನೆಡೆಸುತ್ತಿರುವವರು ಅವರೇ, ಒಪ್ಪುವುದು ಬಿಡುವುದು, ಇಷ್ಟವೋ ಇಲ್ಲವೋ ಅದು ಬೇರೆ ಮಾತು. ವಾಸ್ತವ ಮಾತ್ರ ಇರುವುದು ಹೀಗೆ.

ಗುಜರಾತಿನ ಗಲ್ಲಿಯಲ್ಲಿ ಟೀ ಮಾರುವ ವ್ಯಕ್ತಿ, ಅಲ್ಲೆಲ್ಲೋ ಮೂಲೆಯಲ್ಲಿ ದೋಕ್ಲ, ಸಮೋಸ, ಕಚೋರಿ ಮಾಡುವ ವ್ಯಕ್ತಿ, ಇನ್ನ್ಯಾವುದೇ ಸಣ್ಣ ಪುಟ್ಟ ದುಕಾನ್ದಾರರನ ನೆಟ್ ವರ್ತ್ ಕೂಡ ಕೋಟಿಗೆ ಕಡಿಮೆ ಇರುವುದಿಲ್ಲ. ಅವರೇಕೆ ಹಾಗೆ? ಹೌದು ಗುಜರಾತಿಗಳು ಇರುವುದೇ ಹಾಗೆ. ಅವರು ಲೆಕ್ಕಾಚಾರದ ಜೊತೆಗೆ ಅತ್ಯಂತ ಪ್ರಾಕ್ಟಿಕಲ್ ಜನ. ಎಲ್ಲಿ ವ್ಯಾಪಾರ ವಹಿವಾಟು ನಡೆಯುವುದಿಲ್ಲ ಅಲ್ಲಿಂದ ಗೊಣಗದೆ ಎದ್ದು ನಡೆದು ಬಿಡುತ್ತಾರೆ. ಎಲ್ಲಿ ವ್ಯಾಪಾರವಿದೆ ಎನ್ನಿಸುತ್ತದೆ ಅಲ್ಲಿ ನೆಲೆಯೂರುತ್ತಾರೆ. ಭಾರತದ ನಾಲ್ಕನೇ ಅತಿ ದೊಡ್ಡ ಎಕಾನಮಿ ಹೊಂದಿರುವ ರಾಜ್ಯ ಎನ್ನುವ ಹೆಗ್ಗಳಿಕೆಯನ್ನ ಗುಜರಾತ್ ಪಡೆದುಕೊಂಡಿದೆ. ದೇಶದ ತಲಾದಾಯ ಒಂದು ಲಕ್ಷ ಎಪ್ಪತ್ತು ಸಾವಿರವಿದ್ದರೆ, ಗುಜರಾತ್ ತಲಾದಾಯ ಮೂರು ಲಕ್ಷ ಮುಟ್ಟಿದೆ. ವ್ಯಾಪಾರ ಮಾಡಲು ಅತ್ಯಂತ ಸುಲಭ ಎನ್ನುವ ಪಟ್ಟಿ ಅಡಿಯಲ್ಲಿ ಉತ್ತಮ ಸ್ಥಾನವನ್ನ ಪಡೆದುಕೊಂಡಿದೆ, ಅಲ್ಲದೆ ಅತಿ ಕಡಿಮೆ ನಿರುದ್ಯೋಗ ಹೊಂದಿರುವ ರಾಜ್ಯ ಎಂದು ಕೂಡ ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಹಣಕ್ಕೆ ಬದಲಾಗಿಯಾಗಿ 'ವೇಳೆ' ಕರೆನ್ಸಿಯಾಗಬಹುದೇ? ಟೈಮ್ ಡೊನೇಷನ್ ಸಾಧ್ಯವೇ? (ಹಣಕ್ಲಾಸು)

ಇಷ್ಟೇ ಅಲ್ಲದೆ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿ (ಗಿಫ್ಟ್ ಸಿಟಿ - GIFT CITY) ಎನ್ನುವ ಸ್ಪೆಷಲ್ ಎಕನಾಮಿಕ್ ಜೋನ್ (SEZ) ಗಾಂಧಿನಗರ ಮತ್ತು ಅಹಮದಾಬಾದ್ ನಗರದ ನಡುವೆ 886 ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ. ಇದೆ ವರ್ಷ ಅಂದರೆ 2023 ರಲ್ಲಿ ಇದು ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಲಿದೆ. ಇಲ್ಲಿನ ವಿಶೇಷವೆಂದರೆ ಡ್ಯೂಟಿ ಫ್ರೀ ಇಂಪೋರ್ಟ್ ಎಕ್ಸ್ಪೋರ್ಟ್ ಸೌಲಭ್ಯ. ತೆರಿಗೆ ವಿನಾಯ್ತಿ, ವ್ಯಾಪಾರ ವಹಿವಾಟು ಆರಂಭ ಇತ್ಯಾದಿಗಳಿಗೆ ತೊಂದರೆಯಿಲ್ಲದೆ ಪೇಪರ್ ವರ್ಕ್, ಅನುಮತಿ ಪತ್ರಗಳು ಎಲ್ಲವೂ ಸಿಗಲಿದೆ. ಇದು ಭಾರತದ ಮಟ್ಟಿಗೆ ಗೇಮ್ ಚೇಂಜರ್ ಆಗುವುದರಲ್ಲಿ ಸಂಶಯವಿಲ್ಲ.

ನವೋದ್ದಿಮೆಗಳಿರಬಹುದು ಅಥವಾ ಆಗಲೇ ಹೆಸರು ಮಾಡಿರುವ ಉದ್ಯಮ, ಇಲ್ಲಿ ನೋಂದಾವಣಿ ಮಾಡಿಕೊಳ್ಳುವುದರಿಂದ ಬಹಳಷ್ಟು ಅನುಕೊಲಗಳನ್ನ ಪಡೆದುಕೊಳ್ಳಲಿದೆ. ಭಾರತದ ಬಹುತೇಕ ಉದ್ದಿಮೆಗಳು, ಪಕ್ಕದ ದುಬೈನಲ್ಲಿ ತಮ್ಮ ಕಛೇರಿಯನ್ನ ತೆರೆಯುವುದು ಸಾಮಾನ್ಯವಾಗಿತ್ತು. ಇನ್ನು ಮುಂದೆ ಗುಜರಾತಿನ ಗಿಫ್ಟ್ ಸಿಟಿಯಲ್ಲಿ ಆ ಎಲ್ಲಾ ಸವಲತ್ತುಗಳೂ ಸಿಗಲಿವೆ. ಹೀಗಾಗಿ ನಮ್ಮ ಉದ್ದಿಮೆಗಳು ಬೇರೆಡೆಗೆ ಹೋಗುವ ಅವಶ್ಯಕತೆ ಇಲ್ಲವಾಗುತ್ತದೆ. ಇದರ ಜೊತೆಗೆ ವಿಶಾಲವಾದ, ಒಂದನ್ನೊಂದು ಜೋಡಿಸುವ ಕೋ ವರ್ಕಿಂಗ್ ಜಾಗಗಳಿಗೂ ಇಲ್ಲಿ ಕೊರತೆಯಿಲ್ಲ.

ಗುಜರಾತಿಗಳು ವ್ಯಾಪಾರದ ವಿಷಯದಲ್ಲಿ ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಮೊದಲೇ ಹೇಳಿದಂತೆ ಅವರನ್ನ ನಾವು ಆಡಿಕೊಂಡು ನಗಬಹುದು ಆದರೆ ಅವರ ಕಷ್ಟ ಸಹಿಷ್ಣುತೆ, ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಜಗ್ಗದೆ ನಿಂತು ಕಾರ್ಯ ಸಾಧಿಸುವ ಪರಿಯನ್ನ ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ಅಂತಹ ಒಂದು ಗುಜರಾತಿ ಕುಟುಂಬದ ಕಥೆಯನ್ನ ಕೆಳಗಿನ ಸಾಲುಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯನ್ನ ಉತ್ತೇಜಿಸುವ ಅಂಶಗಳೇನು? (ಹಣಕ್ಲಾಸು)

ಇಂದಿಗೆ 150 ವರ್ಷಗಳ ಹಿಂದೆ ರಾಮದಾಸ್ ಥಕ್ಕೆರ್ಸಿ (Ramdas Thackersay) ಗುಜರಾತ್ ನ ಕಡಲ ತೀರದ ಮಾಡ್ವಿ ಬಿಟ್ಟು ಓಮನ್ ದೇಶದ ಮಸ್ಕಟ್ ಗೆ ತಮ್ಮ ವಾಸ ಬದಲಿಸಲು ನಿರ್ಧರಿಸಿದ್ದು ತನ್ನ ಹೆಚ್ಚುತ್ತಿರುವ ವ್ಯಾಪಾರ ನಿರ್ವಹಣೆಗಾಗಿ, ಮಸ್ಕಟ್ ರಾಮದಾಸ್ ವ್ಯಾಪಾರ ವಹಿವಾಟು ವೃದ್ದಿಗೆ ಸರಿಯಾದ ನೆಲೆಯಾಗಿತ್ತು, ಹಿಂದೆ ಸಮುದ್ರದ ಮೂಲಕವೇ ವ್ಯಾಪಾರ ನಡೆಯುತ್ತಿತ್ತು, ಮಸ್ಕಟ್ ನಿಂದ ವ್ಯವಹಾರ ನಿರ್ವಹಣೆ ವೇಗ ಹೆಚ್ಚಿಸಬಹುದು ಎನ್ನುವುದು ಅವರು ನೆಲೆ ಬದಲಿಸಲು ಪ್ರಮುಖ ಕಾರಣ. ಹಾಗೆ ನೋಡಿದರೆ ರಾಮದಾಸ್ ಪೂರ್ವಜರು 1800 ನೇ ಇಸವಿಯಿಂದ ಮಸ್ಕಟ್ ನೊಂದಿಗೆ ವ್ಯಾಪಾರ ಮಾಡುತ್ತ ಬಂದ ದಾಖಲೆ ಇದೆ.

ಭಾರತದಿಂದ ಟೀ ತೆಗೆದುಕೊಂಡು ಹೋಗಿ ಮಾರುವುದು, ಅಲ್ಲಿಂದ ಖರ್ಜೂರ, ಒಣಗಿದ ನಿಂಬೆ ತರುವುದು ಇವರ ಮೊದಲ ವಹಿವಾಟು.  ರಾಮದಾಸ್ ಥಕ್ಕೆರ್ಸಿ ಮಗ ಖಿಮ್ಜಿ ರಾಮದಾಸ್ ಅಪ್ಪನ ದಾರಿಯಲ್ಲಿ ಸಾಗಿ ಒಮಾನ್ ದೇಶದ ಅತಿ ದೊಡ್ಡ ಸಂಸ್ಥೆ ತೆಗೆಯುವಲ್ಲಿ ಯಶಸ್ವೀ ಆದದ್ದು ಜಾಗತೀಕರಣದಿಂದ, ನಂತರ ಖಿಮ್ಜಿ ಯ ಮಗ ಗೋಕುಲದಾಸ್ ನ ಕೈಗೆ ಕಿಮ್ಜಿ ರಾಮದಾಸ್ ಗ್ರೂಪ್ ಆಫ್ ಕಂಪನೀಸ್ ಆಡಳಿತ ಸಿಗುತ್ತದೆ, ಇತ ಕೂಡ ವ್ಯಪಾರ ವೃದ್ದಿ ಮಾಡಿ, ತನ್ನ ಮಗ  ಕನಕ್ಸಿ ಖಿಮ್ಜಿ (ರಾಮದಾಸ್ ಥಕ್ಕೆರ್ಸಿಯ  ಮರಿ ಮೊಮ್ಮಗ)ಗೆ ಅಧಿಕಾರ ಹಸ್ತಾಂತರ ಮಾಡಿದ್ದಾನೆ.

ಇದನ್ನೂ ಓದಿ: ಹಣವೆಂದರೆ ಹೆಣವೂ ಬಾಯೇಕೆ ಬಿಡುತ್ತದೆ? (ಹಣಕ್ಲಾಸು)

ಮುಂಬೈ ನಲ್ಲಿ ವಿಧ್ಯಾಭ್ಯಾಸ ಮಾಡಿರುವ ಕನಕ್ಸಿ ಖಿಮ್ಜಿ ತನ್ನ ಹೊಸ ಆಲೋಚನೆ ನಿರ್ಧಾರಗಳಿಂದ ಇಂದು ಕಂಪನಿಯ ವಹಿವಾಟು ವಾರ್ಷಿಕ ಒಂದು ಬಿಲಿಯನ್ ಡಾಲರ್ಗೂ ಮೀರಿ ಬೆಳೆಯುವಂತೆ ಮಾಡುವಲ್ಲಿ ಸಪಲರಾಗಿದ್ದಾರೆ. ಜಗತ್ತಿನ 400 ಕ್ಕೂ ಹೆಚ್ಚು ಬ್ರಾಂಡ್ ಗಳು ಇವರ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿವೆ. 70 ವರ್ಷಗಳ ಹಿಂದೆ ಹಡಗುಗಳಿಗೆ ಯಂತ್ರ ಜೋಡಣೆ ಮಾಡಿದ್ದೂ  ಖಿಮ್ಜಿ ಮನೆತನಕ್ಕೆ ಸೇರುತ್ತದೆ, ಒಮಾನ್ ದೇಶದ ಮೊದಲ ಬ್ಯಾಂಕ್ HSBC ಅದು ಪ್ರಾರಂಭವಾಗಲು ಮತ್ತು ಅದರ ನಿರ್ವಹಿಸಲು ಬೇಕಾಗುವ ಕಟ್ಟಡ ಕಟ್ಟಿದ್ದು ಕಿಮ್ಜಿ ರಾಮದಾಸ್ ಗ್ರೂಪ್. ಮಸ್ಕಟ್ ನ ಪ್ರಥಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ತೆರೆದದ್ದು ಖಿಮ್ಜಿ, ಇಂದಿಗೆ 19 ಶಾಲೆಗಳಿವೆ 35 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಅಲ್ಲಿ ಇಂದು ಓದುತ್ತಿದ್ದಾರೆ.

ಇಂದಿನ ಮಸ್ಕಟ್ ನ ರುವಿ ಏರ್ಪೋರ್ಟ್ ಕಟ್ಟಿದ್ದು ಕೂಡ ಇವರೇ, 1969 ರಲ್ಲಿ ಮೊತ್ತ ಮೊದಲ ಫೋರ್ಡ್ ಕಾರು ಮಾರುವ ಶೋ ರೂಂ ತೆಗೆದದ್ದು ಇದೆ ಕಂಪನಿ, ಒಮಾನ್ ದೇಶದ ಸುಲ್ತಾನ ಇವರ ಮೊದಲ ಗ್ರಾಹಕ! ಒಮಾನ್ ದೇಶಕ್ಕೆ ಇವರ ಮೆನೆತನದ ಸೇವೆ ಗಮನಿಸಿ, ಓಮನ್ ದೇಶದ ಸುಲ್ತಾನ ಕ್ವಾಬೂಸ್, ಕನಕ್ಸಿ ಖಿಮ್ಜಿ ಗೆ "ಶೇಖ್" ಪದವಿ ನೀಡಿ ಗೌರವಿಸಿದ್ದಾರೆ. ಒಮಾನ್ ಒಳಗೊಂಡಂತೆ ಮಧ್ಯ ಪ್ರಾಚ್ಯದಲ್ಲಿ ಕನಕ್ ಭೈ ಎಂದೇ ಇವರು ಪ್ರಸಿದ್ದಿ. ಇಂದು ಸಿಕ್ಕಿರುವ ಓಮನ್ ಪೌರತ್ವ, ಶೇಖ್ ಪದವಿ ಇವೆಲ್ಲಾ ನಾನು ಮಾಡಿದ ಸಾಧನೆಗೆ ಸಿಕ್ಕದ್ದಲ್ಲ, ನನ್ನ ವಂಶಸ್ಥರು ಮಾಡಿಕೊಂಡ ಬಂದ ಒಳ್ಳೆಯ ಕಾರ್ಯಗಳಿಗೆ ನನಗೆ ಬಹುಮಾನ ನೀಡಿದ್ದಾರೆ ಎಂದು ವಿನಮ್ರರಾಗಿ ಹೇಳುತ್ತಾರೆ ಕನಕ್.

ಇದನ್ನೂ ಓದಿ: ಉಳ್ಳವರ ಹೊಸ ಆಟಗಳು! ಇಲ್ಲದವರ ಪೀಕಲಾಟಗಳು!! (ಹಣಕ್ಲಾಸು)

ಇಂದು ಜಗತ್ತು ನಿಬ್ಬೆರುಗಾಗುವಂತೆ ಬೆಳೆದು ನಿಂತು ವಿಶ್ವದ ಮೊದಲ ಹಿಂದೂ ಶೇಖ್ ಎನ್ನುವ ಪಟ್ಟ ಪಡೆಯುವ ಹಾದಿ ಎಲ್ಲಾ ಸಾಧಕರಿಗೂ ಎದುರಾಗುವಂತೆ ಮುಳ್ಳಿನದೇ, 70 ರ ದಶಕದಲ್ಲಿ ವಿದ್ಯುತ್ ಇಲ್ಲದೆ, ಸುಟ್ಟು ಹೋಗುವ ಬಿಸಿಲಿನ ಜಳದಲ್ಲಿ ಒಂದಲ್ಲ ಮೂರು ತಲೆಮಾರಿನ ಬೆವರ ಕಥೆ ಅಡಗಿದೆ, ಸ್ನಾನಕ್ಕಾಗಿ ತೆರೆದ ಭಾವಿಗಳ ಹುಡುಕಾಟ, ಒಂದೇ ಎರಡೇ ಇಷ್ಟೆಲ್ಲಾ ವೈರುಧ್ಯಗಳ ನಡುವೆ ಮುಖಕ್ಕೆ ಮಣ್ಣೆರೆಚುವ ಮರಳಿನಲ್ಲಿ ಮರೆಯಾಗದೆ ಹೆಜ್ಜೆ ಗುರುತು ಉಳಿಸಲು ಕೆಚ್ಚೆದೆ ಬೇಕು.

ಕೊನೆ ಮಾತು: 
ಡೈಮಂಡ್ ಮರ್ಚೆಂಟ್, ಡೈಮಂಡ್ ವ್ಯಾಪಾರಕ್ಕೂ ಗುಜರಾತ್ ಪ್ರಸಿದ್ದಿ ಪಡೆದಿದೆ. ಈ ಹಿಂದೆ ಬೆಲ್ಜಿಯಂ ದೇಶ ಡೈಮಂಡ್ ಬ್ಯುಸಿನೆಸ್ಗೆ ಬಹಳ ಹೆಸರುವಾಸಿಯಾಗಿತ್ತು. 1950/60 ರ ಸಮಯದಲ್ಲಿ ಗುಜರಾತಿಗಳು ಬೆಲ್ಜಿಯಂ ಪ್ರವೇಶಿಸುತ್ತಾರೆ. ಇಂದಿಗೆ ಅಂದರೆ 70/75 ವರ್ಷದಲ್ಲಿ ಜಗತ್ತಿನ ಡೈಮಂಡ್ ಬಿಸಿನೆಸ್ ಗುಜರಾತಿಗಳ ಕೈ ಸೇರಿದೆ. ಮಾಡುವ ಕೆಲಸದಲ್ಲಿ ಶ್ರದ್ದೆ, ನಿಖರತೆ ಮತ್ತು ಹಿಡಿದ ಕೆಲಸ ಮಾಡುವ ಛಲ, ಅವರನ್ನ ಇತರ ಭಾರತೀಯರಿಗಿಂತ ಭಿನ್ನವಾಗಿಸಿದೆ. ಅಂದಹಾಗೆ ಅವರ ಬದುಕಿನ ಶೈಲಿ ಪೇಟೆಂಟ್ ಆಗಿಲ್ಲ. ನಾವು ಅದನ್ನ ಅಳವಡಿಸಿಕೊಳ್ಳಬಹುದು. ಸದ್ಯಕ್ಕೆ ಅದು ಪುಕ್ಕಟೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp