ಉತ್ತಮ ಹಣಕಾಸು ನಿರ್ವಹಣೆಗೆ ವೇದಿಕ್ ಹಣಕಾಸು ಸಲಹೆಗಳು! (ಹಣಕ್ಲಾಸು)

ಹಣಕ್ಲಾಸು-369-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ವೇದದಲ್ಲಿ ನಾಲ್ಕು ವೇದಗಳಿವೆ. ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ವೇದವೆಂದರೆ ಜ್ಞಾನ, ನಾಲೆಡ್ಜ್ ಎಂದರ್ಥ. ವೇದಿಕ್ ಎಂದರೆ ಜ್ಞಾನವನ್ನ ಹೊಂದಿದವನು ಎಂದರ್ಥ. ಶತಮಾನಗಳಿಂದ ವೇದದಲ್ಲಿ ಇರುವ ಜ್ಞಾನವನ್ನ ಕಲಿಯುತ್ತ ಅದನ್ನ ಮತ್ತಷ್ಟು ವೃದ್ಧಿ ಮಾಡುತ್ತಾ ಹೋಗುವವನೇ ವೇದಿಕ್. ಹಣಕಾಸಿನ ಬಗ್ಗೆ ಇಲ್ಲಿ ಹೇಳುವ ಮಾತುಗಳು ವೇದಿಕ್ ಫೈನಾನ್ಸಿಯಲ್ ಅಡ್ವೈಸ್ ಎನ್ನಿಸಿಕೊಳ್ಳುತ್ತವೆ. ಹಾಗೆಂದ ಮಾತ್ರಕ್ಕೆ ನೂರಾರು ಸಲಹೆಗಳನ್ನ ಪಾಲಿಸಬೇಕಾಗುತ್ತದೆ ಎನ್ನುವ ಭಯ ಬೇಕಿಲ್ಲ. ಇಲ್ಲಿ ಸಮರ್ಥವಾಗಿರುವ ಒಂದಷ್ಟು ಸಲಹೆಗಳಿವೆ, ಅವುಗಳನ್ನ ಸರಿಯಾಗಿ ಅಳವಡಿಸಿಕೊಂಡರೆ ಸಾಕು.

1. ಸಂಪತ್ತನ್ನ, ಹಣವನ್ನ ಕೆಲಸ ಮಾಡುವುದರ ಮೂಲಕ ಸಂಪಾದಿಸಬೇಕು: ವೇದದ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೂ ಕೆಲವು ಕರ್ತವ್ಯಗಳನ್ನ ಮಾಡಲೆಬೇಕು ಎಂದು ಹೇಳಲಾಗಿದೆ. ಇದನ್ನ ಮಾಡದೆ ಬೇರೆ ದಾರಿಯಿಲ್ಲ , ಇವುಗಳಲ್ಲಿ ಆಯ್ಕೆಯಿಲ್ಲ, ಕಡ್ಡಾಯವಾಗಿ ಮಾಡಲೇಬೇಕಾದವು....

  • ಬ್ರಹ್ಮ ಯಜ್ಞ: ಇದನ್ನ ನಾವು ಸರ್ವಿಸ್ ಟು ಗಾಡ್ ಎನ್ನಬಹುದು. ದೇವರ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಜ್ಞಾನ ಸಂಪಾದನೆಯಾಗುತ್ತದೆ, ತನ್ಮೂಲಕ ಹಣವು ಹಿಂಬಾಲಿಸುತ್ತದೆ. ಇದು ಏಕ ವಲಯ, ಏಕ ದೈವ, ಏಕತ್ವವನ್ನ ಪ್ರತಿನಿಧಿಸುತ್ತದೆ.
  • ದೇವ ಯಜ್ಞ: ದೇವರುಗಳಿಗೆ ಮಾಡುವ ಸೇವೆಯನ್ನ ನಾವು ದೇವಯಜ್ಞ ಎನ್ನಬಹುದು. ಇದು ಒಂದಕ್ಕಿಂತ ಹೆಚ್ಚಿನ ದೇವರನ್ನ ಪ್ರತಿನಿಧಿಸುತ್ತದೆ. ಅರ್ಥ ಏಕತ್ವದ ಜೊತೆಗೆ ಬಹುತ್ವವನ್ನ ಕೂಡ ಇದು ಬೆಂಬಲಿಸುತ್ತದೆ.
  • ಪಿತೃಯಜ್ಞ: ತಂದೆ ತಾಯಿರರಿಗೆ ಮಾಡುವ ಸೇವೆಯನ್ನ ಪಿತೃಯಜ್ಞ ಎನ್ನಲಾಗುತ್ತದೆ. ಮನುಷ್ಯನಿಗೆ ಹುಟ್ಟಿನಿಂದಲೇ ಈ ಕರ್ತವ್ಯವು ನೀಡಲ್ಪಡುತ್ತದೆ. ಯಾರು ತನ್ನ ಹೆತ್ತವರನ್ನ ಸರಿಯಾಗಿ ನೋಡಿಕೊಳ್ಳುತ್ತಾರೋ ಅವರಿಗೆ ಧನ, ಧಾನ್ಯ, ಸಂಪತ್ತು ಒಲಿದು ಬರುತ್ತದೆ ಎನ್ನಲಾಗುತ್ತದೆ.
  • ಮನುಷ್ಯ ಯಜ್ಞ: ಪ್ರತಿಯೊಬ್ಬ ಮನುಷ್ಯನೂ ತನ್ನ ಸಹಜೀವಿಗಳ ಬಗ್ಗೆ ಕೂಡ ಒಂದಷ್ಟು ಹೊಣೆಗಾರಿಕೆಯನ್ನ ಹೊಂದಿರುತ್ತಾನೆ. ಆ ಕರ್ತವ್ಯವನ್ನ ಕೂಡ ಆತ ಪಾಲಿಸಬೇಕಾಗುತ್ತದೆ. ತನ್ನ ಸಹಜೀವಿಗಳ ಬಗ್ಗೆ ಅನುಕಂಪ, ಸಹಾಯ, ಮಾರ್ಗದರ್ಶನ ಮಾಡುವುದರಿಂದ ಅಂತಹ ಮನುಷ್ಯ ಹೆಚ್ಚನ ಅಭಿವೃದ್ದಿಯನ್ನ ಹೊಂದುತ್ತಾನೆ.
  • ಭೂತ ಯಜ್ಞ: ಮನುಷ್ಯ ಜೀವಿಯನ್ನ ಹೊರತು ಪಡಿಸಿ ಕೂಡ ಜಗತ್ತಿನಲ್ಲಿ ಅನೇಕ ಜೀವರಾಶಿಗಳಿವೆ. ಮನುಷ್ಯನಾದವನಿಗೆ ಅಂತಹ ಬೇರೆಲ್ಲಾ ಜೀವಿಗಳ ಬಗ್ಗೆ ಕೂಡ ಮಮಕಾರವಿರಬೇಕು, ಅವುಗಳ ಬಗೆಗಿನ ಹೊಣೆಗಾರಿಯೆಯನ್ನ ಕೂಡ ಸಂಪೂರ್ಣಗೊಳಿಸಬೇಕು. ಆಗಷ್ಟೇ ಅದು ಪರಿಪೂರ್ಣತೆಯನ ಹೊಂದುತ್ತದೆ. ಒಟ್ಟಾರೆ ಸಂಪತ್ತುವೃದ್ದಿಗೂ ಸಹಾಯಕವಾಗುತ್ತದೆ ಎನ್ನುವುದು ವೇದದ ಸಾರ.

2. ಸರಿಯಾದ ಮಾರ್ಗದಲ್ಲಿ ಸಂಪತ್ತನ್ನ ವೃದ್ಧಿಸಿಕೊಳ್ಳಬೇಕು: ನಮ್ಮಲ್ಲಿರುವ ಎನರ್ಜಿಯನ್ನ ನಾವು ಹೂಡಿಕೆ ಮಾಡಬೇಕು.ಅಂತಹ ಹೂಡಿಕೆಯಿಂದ ನಾವು ಹಣವು ವೃದ್ಧಿಯಾಗುವುದಕ್ಕೆ ಸಮಾಧಾನದಿಂದ ಕಾಯಬೇಕು. ಆತುರದಿಂದ ಅನ್ಯ ಮಾರ್ಗದ ಮೂಲಕ, ಬೇರೆಯವರ ಸಂಪತ್ತನ್ನ ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನ ಎಂದಿಗೂ ಮಾಡಬಾರದು. ಹಾಗೊಮ್ಮೆ ಅನ್ಯ ಮಾರ್ಗದಿಂದ ಗಳಿಸಿದ ಹಣವು ಕ್ಷಣ ಮಾತ್ರದಲ್ಲಿ ಕೈತಪ್ಪಿ ಕೂಡ ಹೋಗುತ್ತದೆ. ಸ್ವಶ್ರಮದಿಂದ , ಸರಿಯಾದ ಮಾರ್ಗದಲ್ಲಿ ಮಾತ್ರ ಸಂಪತ್ತನ್ನ ವೃದ್ಧಿಸಿಕೊಳ್ಳಬೇಕು.

3. ಬೆಳಿಗ್ಗೆ ಬೇಗ ಏಳುವುದು, ಸರಿಯಾದ ಸಮತೋಲಿತ ಬದುಕನ್ನ ಬದುಕುವುದು: ಬೆಳಿಗ್ಗೆ ಬೇಗ ಏಳುವುದು ಸಂಪತ್ತಿನ ಸೃಷ್ಟಿಗೆ ಕಾರಣ ಎನ್ನುತ್ತದೆ. ನಮ್ಮ ಬೇಕುಗಳಲ್ಲಿ ಯಾವುದು ಅವಶ್ಯಕ, ಯಾವುದು ಐಷಾರಾಮ ಎನ್ನುವುದನ್ನ ವರ್ಗಿಕರಿಸಿಕೊಳ್ಳಬೇಕಾಗುತ್ತದೆ. ಯಾವುದು ಬದುಕಿಗೆ ಅತ್ಯಂತ ಅವಶ್ಯಕ ಅದನ್ನ ಪೂರ್ಣಗಳಿಸಿಕೊಳ್ಳಲು ಎಲ್ಲರೂ ಪ್ರಯತ್ನಪಡೆಬೇಕು. ಯಾವುದು ಅವಶ್ಯಕವಲ್ಲವೋ ಅದು ಬೇಕಿಲ್ಲದ ಬೇಕು ಎನ್ನಿಸಿಕೊಳ್ಳುತ್ತದೆ. ಅದನ್ನ ಪಡೆಯಲು ವ್ಯಯಿಸುವ ವೇಳೆ ನಷ್ಟವಾಗುತ್ತದೆ. ಹೀಗಾಗಿ ಬೇಕಿಲ್ಲದ ಬೇಕುವಿನ ಹಿಂದೆ ಹೋಗದೆ ಕರ್ತವ್ಯ ನಿರತರಾದ ಪಕ್ಷದಲ್ಲಿ ಸಮಯ ಕಳೆದಂತೆ ವ್ಯಕ್ತಿಯು ಸ್ಥಿತಿವಂತನಾಗುತ್ತಾನೆ.

ಕಾಮಧೇನುಗುಣಾ ವಿದ್ಯಾ ಹ್ಯಕಾಲೇ ಫಲದಾಯಿನಿ!
ಪ್ರವಾಸೇ ಮಾತೃಸದೃಶೀ ವಿದ್ಯಾ ಗುಪ್ತಧನಂ ಸ್ಮೃತಮ್!!

ಕಾಮಧೇನುವಿನ ಗುಣವುಳ್ಳದ್ದು ವಿದ್ಯೆ. ಅದು ಅಕಾಲದಲ್ಲಿಯೂ ಫಲವನ್ನ ನೀಡುತ್ತದೆ. ಅದು ಪ್ರವಾಸದಲ್ಲಿ ತಾಯಿಯಿದ್ದಂತೆ, ಇಂತಹ ವಿದ್ಯೆಯನ್ನ ಗುಪ್ತವಾಗಿರುವ ಹಣ ಎನ್ನಲಾಗಿದೆ. ಇದರರ್ಥ ಬಹಳ ಸರಳ. ಜ್ಞಾನವು ಹಣಕ್ಕಿಂತ ಹೆಚ್ಚಿನ ಮಹತ್ವವನ್ನ ಹೊಂದಿದೆ. ಜ್ಞಾನದಿಂದ ಸಂಪತ್ತನ್ನ ಸೃಷ್ಟಿಸಬಹುದು. ಹೀಗಾಗಿ ಜ್ಞಾನ ಕಣ್ಣಿಗೆ ಕಾಣದ ಸಂಪತ್ತು, ಅದನ್ನ ಯಾರಿಂದಲೂ ಕದಿಯಲು ಆಗದು, ನಾಶ ಪಡಿಸಲು ಆಗದು. ನಮಗೆ ಬೇಕಾದ ಸಮಯದಲ್ಲಿ ಜ್ಞಾನದ ಮೂಲಕ ಸಂಪತ್ತನ್ನ ಸೃಷ್ಟಿಸಿಕೊಳ್ಳಬಹುದು.

ಹಣ, ಸಂಪತ್ತು ಬಧುಕಿಗೆ ಬೇಕೇಬೇಕು. ಅದಿಲ್ಲದೆ ಯಾವ ಕಾರ್ಯವು ಸಿದ್ಧವಾಗುವುದಿಲ್ಲ. ಹೀಗಾಗಿ ಹಣ ಸಂಪಾದನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಕೂಡ. ಹಣವನ್ನ ಸಂಪಾದಿಸಿದವನು ಕೂಡ ಸಂಪಾದನೆಯನ್ನ ಬಿಡುವಂತಿಲ್ಲ, ಆತ ಲೋಕಕಲ್ಯಾಣಕ್ಕೆ ಸಂಪಾದಿಸಬೇಕು, ಇಲ್ಲದವರು ಸ್ವಕಲ್ಯಾಣಕ್ಕೆ ಸಂಪಾದಿಸಬೇಕು. ಒಟ್ಟಿನಲ್ಲಿ ಯಾರೊಬ್ಬರೂ ಕರ್ತವ್ಯದಿಂದ ವಿಮುಖರಾಗುವಂತಿಲ್ಲ.

ಹಣವಿಲ್ಲದೆ ಹೋದರೆ ಬದುಕು ಖಾಲಿ ಖಾಲಿ ಎನ್ನುವುದನ್ನ ಕೆಳಗಿನ ಶ್ಲೋಕ ವಿವರಿಸುತ್ತದೆ.

ಅಪುತ್ರಸ್ಯ ಗೃಹಂ ಶೂನ್ಯಮ್ ದಿಶಃ ಶೂನ್ಯಸ್ತ್ವ ಬಾಂಧವಃ!
ಮೂರ್ಖಸ್ಯ ಹೃದಯಂ ಶೂನ್ಯ: ಸರ್ವಶೂನ್ಯಾ ದರಿದ್ರತಾ !!

ಮಕ್ಕಳಿಲ್ಲದ ಮನೆಯು ಖಾಲಿ, ಬಂಧುಗಳಿಲ್ಲದ ದಿಕ್ಕುಗಳೆಲ್ಲ ಖಾಲಿ, ಮೂರ್ಖನಾದವನಿಗೆ ಹೃದಯವು ಖಾಲಿ, ಆದರೆ ಬಡವನಾದರೆ ಎಲ್ಲವೂ ಖಾಲಿ ಎನ್ನುತ್ತದೆ ಮೇಲಿನ ಶ್ಲೋಕ. ಇದು ಹಣದ ಮಹತ್ವವನ್ನ ಎತ್ತಿ ತೋರಿಸುತ್ತದೆ.

ಋಗ್ವೇದದ ತುಂಬೆಲ್ಲಾ ಜ್ಞಾನ ಹೇಗೆ ಬೇರೆಲ್ಲಾ ಸಂಪತ್ತನ್ನ ಸೃಷ್ಟಿಸಲು ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ಬರೆಯಲಾಗಿದೆ. ಅವುಗಳನ್ನ ಇಲ್ಲಿ ಹೇಳುತ್ತಾ ಹೋದರೆ ಅವು ಪುನರಾವರ್ತನೆ ಎನ್ನಿಸುತ್ತದೆ. ಆದರೆ ಗಮನಿಸಿ ನೋಡಿ ಒಂದು ವಿಷಯ ತುಂಬಾ ಅವಶ್ಯಕವಾಗಿದ್ದಾಗ ಅದನ್ನ ಪದೇಪದೇ ಹೇಳುವುದರಿಂದ ಅದು ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಆ ಕಾರಣಕ್ಕೆ ಋಗ್ವೇದದಲ್ಲಿ ಜ್ಞಾನದ ಮಹತ್ವವನ್ನ ಬಹಳಷ್ಟು ಬಾರಿ ಹೇಳಲಾಗಿದೆ. ಎಲ್ಲಾ ರೀತಿಯ ಸಂಪತ್ತಿನ ಮೂಲ ಜ್ಞಾನ ಎನ್ನವುದು ಋಗ್ವೇದದ ಸಾರ. ಸೋಮಾರಿತನ  ಎನ್ನುವುದು ಶ್ರೀಮಂತಿಕೆಯ ಮಹಾನ್ ಶತ್ರು. ಸೋಮಾರಿತನ ನಮ್ಮ ದಾರಿಯಲ್ಲಿ ಬರುವ ಅವಕಾಶಗಳಿಗೆ ನಮ್ಮನ್ನ ಕುರುಡು ಮಾಡುತ್ತದೆ. ಹೀಗೆ ಏನೂ ಮಾಡದೆ ಕುಳಿತುಕೊಳ್ಳುವ ಕಾರಣ ಆತನಲ್ಲಿ ಉಲ್ಲಾಸ ಕಡಿಮೆಯಾಗುತ್ತದೆ. ಆತ ಬಹುಬೇಗ ಬೇಸರಕ್ಕೆ ಸಿಕ್ಕಿಕೊಳ್ಳುತ್ತಾನೆ. ಕೊನೆಯ ಹಂತದಲ್ಲಿ ಆತ ತನ್ನ ಮೇಲಿನ ನಂಬಿಕೆಯನ್ನ ಕಳೆದುಕೊಳ್ಳುತ್ತಾನೆ. ಸ್ವ ನಂಬಿಕೆಯನ್ನ ಕಳೆದುಕೊಂಡ ವ್ಯಕ್ತಿ ಬದುಕಿದ್ದೂ ಸತ್ತಂತೆ. ಶ್ರೀಮಂತರಾಗಬೇಕಿದ್ದರೆ ಮೊದಲು ಸೋಮಾರಿತನವನ್ನ ಹೊಡೆದೋಡಿಸಿ. ಕಾರ್ಯತತ್ಪರರಾಗಿ.

ನಾನು ಹಣವಂತ ಎನ್ನುವ ಗರ್ವವು ಹಣವನ್ನೂ, ಬುದ್ಧಿಶಾಲಿ ಎನ್ನುವ ಅಹಂಭಾವವು ಬುದ್ಧಿಯನ್ನೂ, ಶಕ್ತಿಶಾಲಿ ಎನ್ನುವ ಮದವು ಶಕ್ತಿಯನ್ನೂ ನಮ್ಮಿಂದ ಕಸಿಯುತ್ತದೆ. ನಾವು ಗಳಿಸಿದ ಸಂಪತ್ತು, ಬುದ್ದಿ, ಶಕ್ತಿ ಯಾವುದೂ ನಮ್ಮಲ್ಲಿ ಅಹಂಭಾವವನ್ನ ಹುಟ್ಟುಹಾಕಬಾರದು. ಹಾಗೊಮ್ಮೆ ಅಹಂಭಾವ ಹುಟ್ಟಿದರೆ ಅದು ವಿನಾಶಕ್ಕೆ ಕಾರಣವಾಗುತ್ತದೆ. ಹೀಗೆ ವೇದದಲ್ಲಿ ಹಣದ ಬಗ್ಗೆ ಇರುವ ಭಾವನೆಯನ್ನ ಕೆಸರಿನಲ್ಲಿ ಅರಳುವ ಕಮಲಕ್ಕೆ ಹೋಲಿಸಬಹುದು. ಹಣಬೇಕು. ಆದರೆ ಅದಕ್ಕಾಗಿ ಜೀವನವನ್ನ ಆಸ್ವಾದಿಸುವುದು ಬಿಡಬಾರದು. ಅಥರ್ವ ವೇದದಲ್ಲಿ ಒಂದು ಪ್ರಶ್ನೆಯನ್ನ ಕೇಳಲಾಗಿದೆ. ಅರಸನು, ಸೇವಕನು ಇಬ್ಬರೂ ಹುಟ್ಟುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ. ಇವರೆಡರ ಮಧ್ಯದ ಬದುಕಿನಲ್ಲಿ ಒಬ್ಬ ಅರಸ, ಇನ್ನೊಬ್ಬ ಸೇವಕ ಹೇಗಾದ? ಹುಟ್ಟು -ಸಾವಿನಲ್ಲಿ ಇಬ್ಬರೂ ಸಮಾನರು. ಮಧ್ಯದ ಈ ಬದಲಾವಣೆ ಹೇಗಾಯ್ತು? ಬಂದಾಗ ಎಲ್ಲಿಂದ ಬಂದರು ಗೊತ್ತಿಲ್ಲ, ಹೋಗುವಾಗ ಹೊಸ ವಿಳಾಸ ಇಬ್ಬರೂ ತಿಳಿಸಿ ಹೋಗಿಲ್ಲ. ನಿದ್ದೆಯಲ್ಲಿ, ಹುಟ್ಟಿನಲ್ಲಿ, ಸಾವಿನಲ್ಲಿ ಇವರು ಸಮಾನರು. ಮಧ್ಯಂತರದಲ್ಲಿ ಅದೇಕೆ ಒಬ್ಬ ರಾಜ? ಇನ್ನೊಬ್ಬ ಸೇವಕ? ಗಮನಿಸಿ ನೋಡಿ ಇದಕ್ಕೆ ಇರುವ ಸರಳ ಉತ್ತರವನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಬದುಕು ಹಗುರಾಗುತ್ತದೆ. ಹಸನಾಗುತ್ತದೆ. ನಾವು ಮಾಡುವ ಕೆಲಸ, ತುಳಿಯುವ ಹಾದಿ ನಮ್ಮನ್ನ ಮಧ್ಯಂತರದಲ್ಲಿ ನಾವ್ಯಾರು ಎನ್ನುವುದನ್ನ ಜಗತ್ತಿಗೆ ತಿಳಿಸುತ್ತದೆ. ಕರ್ಮವೊಂದೇ ಸತ್ಯ. ಈ ಜಗತ್ತಿನಲ್ಲಿ ಜನಿಸಿದ ಯಾವೊಂದು ಜೀವಿಯೂ ಕರ್ಮವನ್ನ ನಿರಾಕರಿಸುವಂತಿಲ್ಲ.

ಕೊನೆಮಾತು: ಇವತ್ತಿನ ಹಣಕಾಸು ನೀತಿಗಳು ಸಾವಿರ ನೀತಿಯನ್ನ ಹೇಳಲಿ, ಅವುಗಳ ತಳಹದಿ ಮಾತ್ರ ಇದೆ ಆಗಿರುತ್ತದೆ. ಕೈತುತ್ತನ್ನ ನಾವು ಹತ್ತು ಬಾರಿ ಸುತ್ತಿಸಿದರೂ ಅದನ್ನ ಕೊನೆಗೆ ನಾವು ನಮ್ಮ ಬಾಯಿಗೆ ಇಡಬೇಕೆಲ್ಲವೇ ? ಥೇಟ್ ಹಾಗೆ ನೂರಾರು ನೀತಿಗಳಿದ್ದರೂ ಅದು ಕೊನೆಗೆ ಮೇಲೆ ಉಲ್ಲೇಖಿಸಿರುವ ಮೂರು ಪ್ರಮುಖ ನೀತಿಯಲ್ಲೇ ವಿಲೀನವಾಗಬೇಕು. ಸರಳವಾದ ಗಳಿಕೆ, ಸರಿಯಾದ ಖರ್ಚು ಸುಖದ ಬದುಕಿಗೆ ರಹದಾರಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com