ಒಂದು ದಿನ ಬೆಳಗ್ಗೆ ನನ್ನ ಕ್ಲಿನಿಕ್ಕಿಗೆ ಮಹಿಳೆಯೊಬ್ಬರು ತಮ್ಮ ಎಂಟು ವರ್ಷದ ಮಗನನ್ನು ಕರೆದುಕೊಂಡು ಬಂದು “ಡಾಕ್ಟರೇ, ಇವನು ನನ್ನ ಮಗ ಅನಿರುದ್ಧ. ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದಾನೆ. ಒಳ್ಳೆಯ ಸ್ಕೂಲಿಗೇ ಸೇರಿಸಿದ್ದೇವೆ. ಓದಲು, ಬರೆಯಲು ಮತ್ತು ಕೆಲವೊಮ್ಮೆ ಮಾತನಾಡಲು ತೊಂದರೆಯಾಗುತ್ತಿದೆ.
ಇವನ ವಯಸ್ಸಿನ ಮಕ್ಕಳು ಓದಲು ಬರೆಯಲು ಸರಿಯಾಗಿ ಕಲಿಯುವುದು ಸಾಗಿದೆ. ಆದರೆ ಇವನು ಮಾತ್ರ ಹಿಂದೆ. ಆಲ್ಭಬೆಟ್ ಮತ್ತು ನಂಬರುಗಳನ್ನು ಕನ್ಫೂಸ್ ಮಾಡಿಕೊಳ್ಳುತ್ತಿದ್ದಾನೆ. ನಾನು ಮನೆಯಲ್ಲಿ ಆದಷ್ಟೂ ಹೇಳಿಕೊಡುತ್ತೇನೆ. ಟ್ಯೂಷನ್ನಿಗೂ ಸೇರಿಸಿದ್ದೇವೆ. ಹೆಚ್ಚೇನೂ ಪ್ರಯೋಜನವಾಗಿಲ್ಲ. ಇವನು ಯಾವಾಗ ಸರಿಹೋಗೋದು ನೋಡಿ ಪ್ಲೀಸ್” ಎಂದು ಹೇಳಿದರು. ನಾನು ಅವರ ಮಾತನ್ನು ಗಮನವಿಟ್ಟು ಕೇಳಿದೆ. ಹಾಗೆಯೇ ಆ ಮಗುವನ್ನು ಮಾತನಾಡಿಸಿದೆ. ಇದು ಡಿಸ್ಲೆಕ್ಸಿಯಾ ಪ್ರಕರಣ ಎಂದು ತಿಳಿಯಿತು. ಪರಿಚಿತ ತಜ್ಞರನ್ನು ಅವರಿಗೆ ರೆಫರ್ ಮಾಡಿದೆ. ಹಾಗೆಯೇ ಅವರಿಗೆ ಡಿಸ್ಲೆಕ್ಸಿಯಾದ ಬಗ್ಗೆ ತಿಳಿ ಹೇಳಿ ಕಳಿಸಿದೆ. ಈಗ ತಜ್ಞವೈದ್ಯರ ಸಲಹೆಯಂತೆ ಅವನ ಪರಿಸ್ಥಿತಿ ಸುಧಾರಿಸುತ್ತಿದೆ.
ಡಿಸ್ಲೆಕ್ಸಿಯಾ ಎಂದರೇನು?
ಮಗು ಬೆಳೆಯುವ ಹಂತದಲ್ಲಿ ಮಾತುಗಳು ಮತ್ತು ಬರವಣಿಗೆಯ ಮೇಲೆ ಪ್ರಭಾವ ಬೀರುವ ಒಂದು ಸಮಸ್ಯೆ ಡಿಸ್ಲೆಕ್ಸಿಯಾ. ಈ ಸಮಸ್ಯೆಯಿದ್ದರೆ ಮಕ್ಕಳು ತಂದೆ-ತಾಯಿ ಅಥವಾ ಶಾಲೆಯಲ್ಲಿ ಶಿಕ್ಷಕರು ಹೇಳಿದ ಯಾವುದೇ ಹೊಸ ವಿಚಾರಗಳನ್ನು/ಭಾಷೆಗಳನ್ನು ಗ್ರಹಿಸಲು ಕಷ್ಟಪಡುತ್ತಾರೆ. ಯಾವುದೇ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರಬಹುದು. ಬೆಳವಣಿಗೆಯ ಸಂದರ್ಭದಲ್ಲಿ ಈ ಸಮಸ್ಯೆ ಕಂಡು ಬಂದರೆ ಅದರ ಪ್ರಭಾವದಿಂದ ದೀರ್ಘಕಾಲದವರೆಗೆ ಮಕ್ಕಳು ಕಷ್ಟವನ್ನು ಅನುಭವಿಸುತ್ತಾರೆ. ಆದ್ದರಿಂದ ಆರಂಭಿಕ ಹಂತದಲ್ಲಿ ಇದನ್ನು ಗುರುತಿಸಿ ಅವರ ಪರಿಸ್ಥಿತಿಯನ್ನು ಸುಧಾರಿಸಬೇಕು.
ಡಿಸ್ಲೆಕ್ಸಿಯಾ ಒಂದು ಕಾಯಿಲೆ ಅಲ್ಲ. ಇದು ಕಲಿಕೆಯಲ್ಲಿ ಉಂಟಾಗುವ ತೊಂದರೆ. ಆದ್ದರಿಂದ ಪೋಷಕರಿಗೆ ಅಥವಾ ಮಕ್ಕಳಿಗೇ ಆಗಲಿ ಇದು ತಲೆತಗ್ಗಿಸುವ ವಿಚಾರವಲ್ಲ. ಡಿಸ್ಲೆಕ್ಸಿಯಾ ಎಲ್ಲಾ ಮಕ್ಕಳಿಗೆ ಬರುವುದಿಲ್ಲ. ಮಕ್ಕಳು ಹೊಸದನ್ನು ಕಲಿಯಲು ಕಷ್ಟವಾದರೆ ಅವೆಲ್ಲ ಡಿಸ್ಲೆಕ್ಸಿಯಾ ಪ್ರಕರಣಗಳಲ್ಲ. ಸರಳವಾಗಿ ಹೇಳುವುದಾದರೆ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ, ಬುದ್ಧಿವಂತಿಕೆಯ ಮೇಲೆ ಹಾಗೂ ಮಕ್ಕಳ ಭಾವನಾತ್ಮಕ ವಿಚಾರಗಳ ಮೇಲೆ ನಕಾರಾತ್ಮಕವಾಗಿ ಪ್ರಭಾವ ಬೀರುವ ಒಂದು ಅಸ್ವಸ್ಥತೆ ಎಂದು ನಾವು ಅರ್ಥಮಾಡಿಕೊಳ್ಳಬಹುದು.
ಇದನ್ನೂ ಓದಿ: ಹಿಮ್ಮಡಿ ನೋವು: ಭಯ ಬೇಡ, ಜಾಗ್ರತೆ ಇರಲಿ
ಒಂದು ಆಶ್ಚರ್ಯಕರವಾದ ವಿಷಯವೆಂದರೆ ಚಿಕ್ಕವರಾಗಿದ್ದಾಗ ಡಿಸ್ಲೆಕ್ಸಿಯಾ ಸಮಸ್ಯೆಯನ್ನು ಎದುರಿಸಿದ ಮಕ್ಕಳು ದೊಡ್ಡವರಾದ ಮೇಲೆ ಓದಿನಲ್ಲಿ ಅಥವಾ ಬುದ್ಧಿವಂತಿಕೆಯಲ್ಲಿ ಇತರರಿಗಿಂತ ಹೆಚ್ಚಿನ ಸಾಧನೆ ಮಾಡಿ ತೋರಿಸಿದ್ದಾರೆ. ಉದಾಹರಣೆಗೆ ಹೇಳುವುದಾದರೆ ವಿಶ್ವಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರಿಗೂ ಡಿಸ್ಲೆಕ್ಸಿಯಾ ಇತ್ತು. ಅವರು ನಂತರ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಹೀಗೆ ಕಲಿಕೆಯಲ್ಲಿ ತೊಂದರೆ ಪಟ್ಟು ನಂತರ ಬೇರೆಯವರಿಗೆ ಮಾದರಿಯಾಗಿ ನಿಂತಿರುವ ಹಲವಾರು ಉದಾಹರಣೆಗಳಿವೆ. ಈ ಬಗ್ಗೆ ದೃಶ್ಯ ಶ್ರವ್ಯ ಮಾಧ್ಯಮಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಬಂದ ನಟ ಅಮೀರ್ ಖಾನ್ ನಟನೆಯ ‘ತಾರೇ ಜಮೀನ್ ಪರ್’ ಎಂಬ ಸಂವೇದನಾಶೀಲ ಹಿಂದಿ ಸಿನಿಮಾ ಮಕ್ಕಳಲ್ಲಿ ಕಂಡುಬರುವ ಕಲಿಕಾ ಸಮಸ್ಯೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದೆ.
ಡಿಸ್ಲೆಕ್ಸಿಯಾ ಲಕ್ಷಣಗಳು
ಸಾಮಾನ್ಯವಾಗಿ ಡಿಸ್ಲೆಕ್ಸಿಯಾ ಇರುವ ಮಕ್ಕಳು ತಮ್ಮ ಟೆಕ್ಸ್ಟ್ ಬುಕ್ಕನ್ನು ಓದಲು ಕಷ್ಟಪಡುತ್ತಾರೆ. ಅದರಲ್ಲಿರುವ ಭಾಷೆ, ಪದಗಳು, ಸಂಖ್ಯೆಗಳು ಮತ್ತು ಅಕ್ಷರಗಳನ್ನು ಸುಲಭವಾಗಿ ಗ್ರಹಿಸುವುದಿಲ್ಲ ನಿಧಾನವಾಗಿ ಅದೂ ತಪ್ಪಾಗಿ ಓದುತ್ತಾರೆ ಮತ್ತು ಬರೆಯಲು ಬಹಳ ಕಷ್ಟ ಪಡುತ್ತಾರೆ. ಇದರಿಂದ ಹೆದರಿಕೆ ಮತ್ತು ನಾಚಿಕೆ ಈ ಮಕ್ಕಳಲ್ಲಿ ಇರುತ್ತದೆ. ಆದ್ದರಿಂದ ಎಲ್ಲರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಸಣ್ಣ ಸಣ್ಣ ಸಂಖ್ಯೆಗಳನ್ನು ಕೂಡಲು ಕಳೆಯಲು ಅವರಿಗೆ ತುಂಬ ಕಷ್ಟ. ಸ್ವಲ್ಪ ದೊಡ್ಡ ಲೆಕ್ಕಗಳು ಮಕ್ಕಳಿಗೆ ಅರ್ಥವೇ ಆಗುವುದಿಲ್ಲ. ಬರೆಯಲು ಬಳಸುತ್ತಿರುವ ಪೆನ್ಸಿಲ್ ಅಥವಾ ಪೆನ್ ಹಿಡಿದುಕೊಳ್ಳಲು ಕಷ್ಟಪಡುತ್ತಾರೆ. ಒಟ್ಟಾರೆ ಕಲಿಕೆಯಲ್ಲಿ ಬಹಳ ಹಿಂದೆ ಉಳಿಯುತ್ತಾರೆ. ಪೋಷಕರು, ಟೀಚರುಗಳು ಕೊಡುವ ಸೂಚನೆಗಳನ್ನು ಪಾಲಿಸಲು ಕಷ್ಟವಾಗುತ್ತದೆ. ಹಲವಾರು ಸಲ ಹೇಳಿಕೊಟ್ಟ ನಂತರವೂ B ಯನ್ನು D ಎಂದು ಓದುತ್ತಾರೆ ಅಕ್ಷರಗಳು ಮತ್ತು ಪದಗಳಲ್ಲಿರುವ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಗಮನಿಸಲು (ಮತ್ತು ಸಾಂದರ್ಭಿಕವಾಗಿ ಕೇಳಿಸಿಕೊಳ್ಳಲು/ಹೇಳಲು) ವಿಫಲರಾಗಬಹುದು.
ಡಿಸ್ಲೆಕ್ಸಿಯಾ ಸಮಸ್ಯೆ ಇರುವವರಿಗೆ ಪ್ರೋತ್ಸಾಹ ಮುಖ್ಯ
ಡಿಸ್ಲೆಕ್ಸಿಯಾದಿಂದ ತೊಂದರೆ ಒಳಗಾದವರು ಸೂಕ್ತ ಶೈಕ್ಷಣಿಕ ಬೆಂಬಲದಿಂದ ಓದಲು ಮತ್ತು ಬರೆಯಲು ಕಲಿಯಲು ಸಾಧ್ಯವಿದೆ. ಇದಕ್ಕೆಂದೇ ಟೀಚರುಗಳಿಗೆ ವಿಶೇಷ ಟ್ರೈನಿಂಗ್ ನೀಡಲಾಗಿದೆ. ಅವರು ಮಕ್ಕಳ ಕಲಿಕೆಯನ್ನು ಉತ್ತೇಜಿಸಬಲ್ಲರು. ಅವರು ಮನೆಯಲ್ಲಿ ತಂದೆ-ತಾಯಿ ಮತ್ತು ಕುಟುಂಬಸ್ಥರು ಈ ಮಕ್ಕಳ ಉತ್ತಮ ಬೆಳವಣಿಗೆ ಹೇಗೆ ಕಾರಣವಾಗಬಹುದೆಂದು ತಿಳಿಹೇಳುತ್ತಾರೆ. ಕ್ರಮೇಣ ಅವರ ಕಲಿಕೆ ಉತ್ತಮವಾಗಿ ಅತ್ಯುತ್ತಮ ಅಂಕಗಳನ್ನು ಅವರು ಗಳಿಸಬಲ್ಲರು. ಸಾಮಾನ್ಯ ಶಾಲೆಗಳಲ್ಲಿಯೂ ಮಕ್ಕಳಿಗೆ ಡಿಸ್ಲೆಕ್ಸಿಯಾ ಇದೆ ಎಂದು ಗೊತ್ತಾದರೆ ಅವರಿಗೆ ಮೂರು ಭಾಷೆ ಕಲಿಯುವ ಬದಲು ಎರಡೇ ಭಾಷೆಗಳನ್ನು ಕಲಿಸುವ ವಿನಾಯಿತಿ ಇದೆ. ಕೆಲವು ಕಷ್ಟಕರ ವಿಷಯಗಳಿಂದ ಅವರಿಗೆ ವಿನಾಯತಿ ದೊರಕುತ್ತದೆ.
ಇದನ್ನೂ ಓದಿ: ಲ್ಯುಕೇಮಿಯಾ ಅಥವಾ ಬ್ಲಡ್ ಕ್ಯಾನ್ಸರ್
ಭಾರತದಲ್ಲಿ ಇರುವ ಒಟ್ಟು ಮಕ್ಕಳಲ್ಲಿ ಶೇಕಡಾ 5 ರಿಂದ 17ರಷ್ಟು ಮಕ್ಕಳಿಗೆ ಈ ಸಮಸ್ಯೆ ಕಾಡುತ್ತದೆ. 2019ರಲ್ಲಿ ಸುಮಾರು 35 ದಶಲಕ್ಷ ಮಕ್ಕಳಿಗೆ ಈ ತೊಂದರೆ ಇದೆ ಎಂದು ಅಂದಾಜಿಸಲಾಗಿತ್ತು. ಇದಕ್ಕೆ ಪ್ರಮುಖ ಕಾರಣ ವಂಶವಾಹಿ ಜೀನುಗಳು ಎಂದು ಹೇಳಲಾಗಿದೆ. ಅಲ್ಲದೇ ಕೆಲವು ಪರಿಸರ ಅಂಶಗಳು ಕಾರಣವಾಗಬಹುದು. ಈ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಪೋಷಕರು ತಮ್ಮ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಆಸಕ್ತಿ ತೋರಿಸುತ್ತಿರುವುದು ಸಂತಸದ ಸಂಗತಿ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com
Advertisement