

ಹಣದ ಪ್ರಾಮುಖ್ಯತೆಯನ್ನ ನಾವು ಹಣಕ್ಲಾಸು ಅಂಕಣದ ಮೂಲಕ ಒಂದಷ್ಟು ಅರಿತುಕೊಂಡಿದ್ದೇವೆ. ಇನ್ನೊಂದು ಪ್ರಮುಖ ಕಲಿಕೆಯನ್ನಕೂಡ ನಾವು ಮಾಡಬೇಕಿದೆ. ಅದೇ ಅರ್ಥ ಶೌಚ ಅಥವಾಹಣಕಾಸು ಶಿಸ್ತು, ಫೈನಾನ್ಸಿಯಲ್ ಡಿಸಿಪ್ಲಿನ್. ಎಲ್ಲಾ ಶಿಸ್ತು ಇದ್ದು, ಆರ್ಥಿಕ ಶಿಸ್ತು ಇಲ್ಲದಿದ್ದರೆ, ಅಗಾಧವಾಗಿ ಕಟ್ಟಿ ನಿಲ್ಲಿಸಿದ ಸೌಧವೂ ಕೂಡ ಅರೆಗಳಿಗೆಯಲ್ಲಿ ನೆಲಸಮವಾಗುತ್ತದೆ. ವರ್ಷಗಳ ಕಠಿಣ ಪ್ರಯತ್ನ, ಯಶಸ್ಸು ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ, ಪ್ರಯೋಜನಕ್ಕೆ ಬಾರದೆ ಹೋಗುತ್ತದೆ. ಇದರ ಬಗ್ಗೆ ಸಂಸ್ಕೃತ ಶ್ಲೋಕವೊಂದರಲ್ಲಿ
ಸರ್ವೇಷಾಣಾಂ ಹಿ ಶೌಚಾನಾಂ ಅರ್ಥಶೌಚಂ ಪರಂಸ್ಮೃತಂ |
ಯೋ ಅರ್ಥೇ ಶುಚಿಃ ಮೃತ್ವಾರಿ ಶುಚಿಃರ್ನಶುಚಿಃ |
ಎಲ್ಲಾ ರೀತಿಯ ಶೌಚಗಳಲ್ಲಿ ಹಣದ ವಿಚಾರದ ಶುಚಿತ್ವವು ಅತ್ಯುತ್ತಮವಾದದ್ದು. ಕೇವಲ ಮಣ್ಣು ಮತ್ತು ನೀರಿನಿಂದ ಆಗುವ ಶುಚಿಯ ಶುಚಿತ್ವವಲ್ಲ. ಅಂದರೆ ಬೇರೆಲ್ಲಾ ಶುಚಿತ್ವಕ್ಕಿಂತ ಹಣಕಾಸು ಶಿಸ್ತು, ಶುಚಿತ್ವ ಅತ್ಯಂತ ಪ್ರಮುಖವಾದದ್ದು ಎಂದು ಹೇಳಲಾಗಿದೆ. ಉತ್ತಮ ಬದುಕಿಗೆ ಶಿಸ್ತು ಬಹಳ ಮುಖ್ಯ. ಶಿಸ್ತುಗಳಲ್ಲಿ ಅನೇಕ ವಿಧಗಳಿವೆ. ಅವೆಲ್ಲಕ್ಕೂ ಕಳಶಪ್ರಾಯವಾಗಿ ಹಣಕಾಸಿನ ಶಿಸ್ತು ಪ್ರಾಮುಖ್ಯತೆಯನ್ನ ಪಡೆದಿದೆ. ಈ ರೀತಿಯ ಆರ್ಥಿಕ ಶಿಸ್ತು ಅದೇಕೆ ಮುಖ್ಯವಾಗುತ್ತದೆ ಎನ್ನುವುದಕ್ಕೆ ಅನೇಕಕಾರಣಗಳಿವೆ. ಅವುಗಳಲ್ಲಿ ಕೆಲವನ್ನ ಪಟ್ಟಿ ಮಾಡೋಣ. ನೆನಪಿರಲಿ ಇದು ವ್ಯಕ್ತಿ ಮತ್ತು ಸಂಸ್ಥೆ ಎರಡಕ್ಕೂ ಅನ್ವಯವಾಗುತ್ತದೆ.
ಚಾಣಕ್ಯನ ನೀತಿ ಶ್ಲೋಕದಲ್ಲಿ ಒಂದು ಹೀಗಿದೆ:
ಕಃ ಕಾಲಃ ಕಾನಿ ಮಿತ್ರಾಣಿ ಕೋ ದೇಶಃ ಕೌ ವ್ಯಾಯಾಗಮ್ !
ಕಸ್ಯಾಹಂ ಕಾ ಚ ಮೇ ಶಕ್ತಿರಿತಿ ಚಿಂತ್ಯಂ ಮುಹುಮುರ್ಹಃ !!
ಸಮಯ ಎಂತಹುದ್ದು? ಗೆಳೆಯರು ಯಾರು? ಇರುವ ಸ್ಥಾನ ಎಂತದ್ದು? ಆಯ-ವ್ಯಯಗಳು ಎಷ್ಟು? ನಾನು ಯಾರು? ನನ್ನ ಶಕ್ತಿಯೆಷ್ಟು? ಇವುಗಳನ್ನ ಪದೇಪದೇ ಆಲೋಚಿಸುತ್ತಿರಬೇಕು ಎನ್ನುತ್ತದೆ. ಗಮನಿಸಿ ನೋಡಿ, ಇವೆಲ್ಲವೂ ಒಮ್ಮೆ ಸಾಧಿಸಿದ ನಂತರ ಆಲಸ್ಯದಿಂದ ಕೂರುವಂತಿಲ್ಲ. ಇವುಗಳ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತಿರಬೇಕು. ಹಣದ ವಿಷಯದಲ್ಲಿ, ಆರ್ಥಿಕ ಶಿಸ್ತಿನ ವಿಷಯದಲ್ಲಿ ಕೂಡ ಇದು ಸತ್ಯ. ಸದಾ ಕಾಲವೂ ಅದೇ ಶಿಸ್ತನ್ನ ಕಾಯ್ದುಕೊಳ್ಳಬೇಕು. ಮಾಡಿದ ಕೆಲಸ ನೋಡದೆ ಹೋಯ್ತು ಎನ್ನುವ ಒಂದು ಆಡು ಮಾತಿದೆ. ನಾವು ಯಾವುದೇ ಶಿಸ್ತನ್ನ ಬಿಟ್ಟರೆ ಮತ್ತದೇ ಹಳೆಯ ಹಾದಿಗೆ ಮರಳುತ್ತೇವೆ. ಹೀಗಾಗಿ ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕು. ಆರ್ಥಿಕ ಶಿಸ್ತು ಎನ್ನುವುದು ಜೀವನ ಶೈಲಿಯಾಗಬೇಕು. ಅದು ಎರಡು ದಿನ ಪಾಲಿಸಿ ಆಮೇಲೆ ಕೈಕೊಡವಿಕೊಳ್ಳುವ ಕ್ರ್ಯಾಶ್ ಕೋರ್ಸ್ ಅಲ್ಲವೇ ಅಲ್ಲ.
ನೆನಪಿರಲಿ: ಎಲ್ಲಾ ಶಿಸ್ತುಗಳಲ್ಲಿ ಆರ್ಥಿಕ ಶಿಸ್ತಿಗೆ ಅಗ್ರ ಸ್ಥಾನವನ್ನ ನೀಡಲಾಗಿದೆ. ಏಕೆಂದರೆ ಬಹುತೇಕ ಎಲ್ಲವೂ ಇಂದು ಮನುಷ್ಯನ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಆರ್ಥಿಕ ಶಿಸ್ತು ಎನ್ನುವುದು ಸದಾ ಕಾಪಾಡಿಕೊಂಡು ಬರಬೇಕಾಗಿರುವ ವಿಷಯವಾಗಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com