ಬ್ಯಾಂಕ್, ಬ್ಯಾಂಕಿಂಗ್ ಹುಟ್ಟು ಹೇಗಾಯ್ತು? (ಹಣಕ್ಲಾಸು)

ಒಂದು ಸಂಸ್ಥೆ ಜನರಿಗೆ, ಇತರ ಸಂಸ್ಥೆಗಳಿಗೆ, ಸರಕಾರಕ್ಕೆ ಹಣಕಾಸಿನ ಸೇವೆಯನ್ನು ನೀಡುತ್ತದೆ. ಹೀಗೆ ಸೇವೆ ನೀಡುವ ಸಂಸ್ಥೆಗೆ ಬ್ಯಾಂಕ್ ಎನ್ನುತ್ತಾರೆ. (ಹಣಕ್ಲಾಸು-407)
ಬ್ಯಾಂಕಿಂಗ್ (ಸಾಂಕೇತಿಕ ಚಿತ್ರ)
ಬ್ಯಾಂಕಿಂಗ್ (ಸಾಂಕೇತಿಕ ಚಿತ್ರ)online desk

ಒಂದು ಸಂಸ್ಥೆ ಜನರಿಗೆ, ಇತರ ಸಂಸ್ಥೆಗಳಿಗೆ, ಸರಕಾರಕ್ಕೆ ಹಣಕಾಸಿನ ಸೇವೆಯನ್ನು ನೀಡುತ್ತದೆ. ಹೀಗೆ ಸೇವೆ ನೀಡುವ ಸಂಸ್ಥೆಗೆ ಬ್ಯಾಂಕ್ ಎನ್ನುತ್ತಾರೆ. ಮತ್ತು ಹೀಗೆ ನೀಡುವ ಸೇವೆಗಳಿಗೆ ಒಟ್ಟಾರೆ ಬ್ಯಾಂಕಿಂಗ್ ಎನ್ನಲಾಗುತ್ತದೆ. ಮುಖ್ಯವಾಗಿ ಬ್ಯಾಂಕುಗಳು ಹಣವನ್ನು ಠೇವಣಿಯ ರೂಪದಲ್ಲಿ ಪಡೆದುಕೊಳ್ಳುತ್ತದೆ ಮತ್ತು ಅದಕ್ಕೆ ಒಂದಷ್ಟು ಬಡ್ಡಿಯನ್ನು ನೀಡುತ್ತದೆ. ಹಣವನ್ನು ಸಾಲದ ರೂಪದಲ್ಲಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ನೀಡುತ್ತದೆ. ಹಣಕಾಸು ವಹಿವಾಟು ನಡೆಯಲು ಬೇಕಾದ ಸೌಕರ್ಯಗಳನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ ಇಂದಿನ ದಿನದಲ್ಲಿ ಇನ್ನಿತರೇ ಬಹಳಷ್ಟು ಸೇವೆಗಳನ್ನು ಕೂಡ ನೀಡುತ್ತದೆ. ಇದರ ಬಗ್ಗೆ ವಿವರವಾಗಿ ನೋಡೋಣ. ಬ್ಯಾಂಕಿನ ಉಗಮದಿಂದ ಬ್ಯಾಂಕಿಂಗ್ ಬೇಕು ಆದರೆ ಬ್ಯಾಂಕ್ ಬೇಕೇ ಎನ್ನುವವರೆಗೆ ನಾವು ಕ್ರಮಿಸಿದ ದಾರಿ ಬಹಳ ದೊಡ್ಡದಿದೆ. ಅವುಗಳ ಬಗ್ಗೆ ಒಂದಷ್ಟು ವಿವರಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಬ್ಯಾಂಕುಗಳ ಉಗಮಕ್ಕೆ ಮುಂಚೆ ಕೂಡ ಬ್ಯಾಂಕ್ ಇತ್ತು. ಬ್ಯಾಂಕಿಂಗ್ ಇತ್ತು. ಆದರೆ ಇಂದಿನಷ್ಟು ಕಟ್ಟುಕಟ್ಟಳೆಗಳು ಇರಲಿಲ್ಲ. ಇಂದು ನಾವು ಉಪಯೋಗಿಸುವ ಟೆಕ್ನಿಕಲ್ ಪದಗಳನ್ನು ಇನ್ನು ಟಂಕಿಸಿರಲಿಲ್ಲ. ಅಂದ ಮಾತ್ರಕ್ಕೆ ಅವುಗಳು ಇರಲಿಲ್ಲ ಎಂದಲ್ಲ. ಇಂದು ನಾವು ಮೂಲಭೂತ ಬ್ಯಾಂಕಿಂಗ್ ಸೇವೆಗಳು ಎಂದು ಯಾವುದನ್ನು ಗುರುತಿಸುತ್ತೇವೆ ಅವೆಲ್ಲವೂ ಹಿಂದೆಯೂ ಇದ್ದವು. ಇಂದಿಗೆ ನಮ್ಮ ಬ್ಯಾಂಕುಗಳು ಮಾಡುವ ಕಾರ್ಯವನ್ನು ನಮ್ಮ ದೇವಸ್ಥಾನಗಳು ಮಾಡುತ್ತಿದ್ದವು! ಹೌದು ಇಲ್ಲಿ ನಾನು ದೇವಸ್ಥಾನ ಎನ್ನುವ ಪದವನ್ನು ಬಳಸಿದ್ದೇನೆ ಆದರೆ ಅದನ್ನು ನೀವು ರಿಲಿಜಿಯಸ್ ಸೆಂಟರ್ಗಳು ಎಂದು ಪರ್ಯಾಯವಾಗಿ ಬಳಸ ಬಹುದು. ನಮ್ಮಲ್ಲಿದ್ದ ಶ್ರೀಮಂತ ವ್ಯಾಪಾರಿಗಳಿಗೆ, ರಾಜರಿಗೆ ತಮ್ಮಲ್ಲಿರುವ ಹಣವನ್ನು ರಕ್ಷಿಸಿ ಇಟ್ಟುಕೊಳ್ಳುವ ಅವಶ್ಯಕತೆ ಇತ್ತು.

ಹೀಗಾಗಿ ದೇವಸ್ಥಾನಕ್ಕಿಂತ ಅತ್ಯುತ್ತಮ ಸ್ಥಳ ಅವರಿಗೆ ಬೇರಾವುದೂ ಕಾಣಲಿಲ್ಲ. ಭಕ್ತಿಯ ಕಾರಣ ಸಾಮಾನ್ಯ ಜನರಿಂದ ಎಲ್ಲರೂ ದೇವಸ್ಥಾನದ ದುಡ್ಡು, ದೇವರ ದುಡ್ಡು ಎನ್ನುವ ಭಾವನೆಯಲ್ಲಿದ್ದರು. ದೇವಸ್ಥಾನದಲ್ಲಿ ಇರುವ ಹಣ ಕಳ್ಳತನವಾಗುವ ಸಾಧ್ಯತೆಗಳು ಅಂದಿನ ದಿನದಲ್ಲಿ ಇಲ್ಲವೆನ್ನುವಷ್ಟು ಗೌಣವಾಗಿತ್ತು. ಇನ್ನು ವ್ಯಾಪಾರಿಗಳಿಗೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಚಿನ್ನ ಅಥವಾ ವರಹಗಳನ್ನು ಒತ್ತೊಯ್ಯುವುದು ಕಷ್ಟದ ಕೆಲಸವಾಗಿತ್ತು. ವಹಿವಾಟಿನ ಪ್ರಮಾಣ ಹೆಚ್ಚುತ್ತಾ ಹೋದಂತೆ ವಿನಿಮಯಕ್ಕೆ ಬಳಸುವ ಚಿನ್ನವನ್ನು ಸಾಗಿಸುವುದು ಸವಾಲಾಯ್ತು. ಆಗ ಹುಟ್ಟಿಕೊಂಡದ್ದು ಮುಚ್ಚಳಿಕೆ ಪತ್ರಗಳು! ಏನಿದು ಮುಚ್ಚಳಿಕೆ ಪತ್ರ? ಒಂದು ದೇವಸ್ಥಾನದಲ್ಲಿ ಇಟ್ಟಿರುವ ತನ್ನ ಚಿನ್ನದ ಮೌಲ್ಯವನ್ನು ಒಂದು ಪತ್ರದಲ್ಲಿ ಬರೆಸಿಕೊಂಡು ವ್ಯಾಪಾರ ಮಾಡಿದ ಇನ್ನೊಂದು ಸ್ಥಳದಲ್ಲಿರುವ ದೇವಸ್ಥಾನದಲ್ಲಿ ಈ ಪತ್ರವನ್ನು ತೋರಿಸುವುದು, ಅಲ್ಲಿ ಚಿನ್ನವಿದೆ ಎನ್ನುವ ನಂಬಿಕೆಯ ಆಧಾರದ ಮೇಲೆ ಸರಕುಗಳನ್ನು ಬಿಡಲಾಗುತ್ತಿತ್ತು. ಹೀಗೆ ಚಿನ್ನವನ್ನು ಭೌತಿಕವಾಗಿ ಸಾಗಿಸದೆ , ಅಥವಾ ಕೈ ಬದಲಾಯಿಸದೆ ವಹಿವಾಟು ಮುಗಿದು ಹೋಗುತ್ತಿತ್ತು. ಲೆಕ್ಕಾಚಾರವೆಲ್ಲವೂ ಪತ್ರದಲ್ಲಿ ಮಾತ್ರ ನಮೋದನೆಯಾಗಲು ಶುರುವಾಯ್ತು. ಇದು ಬ್ಯಾಂಕಿಂಗ್ನ ತಳಹದಿ.

ಬ್ಯಾಂಕಿಂಗ್ (ಸಾಂಕೇತಿಕ ಚಿತ್ರ)
ವಿಮೆಯಲ್ಲಿ ULIP ಅಂದರೇನು?; ಪ್ರಯೋಜನ ಪಡೆಯಲು ಈ ಅಂಶಗಳನ್ನು ಗಮನಿಸಬೇಕು... (ಹಣಕ್ಲಾಸು)

ದೇವಸ್ಥಾನದಲ್ಲಿ ಇಟ್ಟಿರುವ ಚಿನ್ನದ ಮೌಲ್ಯಕ್ಕಿಂತ ಹೆಚ್ಚಿನ ವಹಿವಾಟು ಮಾಡಬೇಕಾದ ಸಂದರ್ಭಗಳು ಸೃಷ್ಟಿಯಾದವು. ಅದು ಲೋನ್ ಅಥವಾ ಬಿಲ್ ಆಫ್ ಕ್ರೆಡಿಟ್ ಸೃಷ್ಟಿಗೆ ಕಾರಣವಾಯ್ತು. ಉದಾಹರಣೆ ನೋಡೋಣ. ಸೋಮನಳ್ಳಿ ವರ್ತಕರೊಬ್ಬರು ದೇವಸ್ಥಾನದಲ್ಲಿ 10 ಸಾವಿರ ಮೌಲ್ಯದ ಚಿನ್ನವನ್ನು ಇಟ್ಟಿರುತ್ತಾರೆ. ಆದರೆ ಅವರು ರಾಮನಳ್ಳಿಯಿಂದ 15 ಸಾವಿರ ಮೌಲ್ಯದ ಸರಕುಗಳನ್ನು ಖರೀದಿಸಬೇಕಾದ ಅವಶ್ಯಕತೆ ಇದೆ ಎಂದುಕೊಳ್ಳಿ. ಆಗ ಸೋಮನಳ್ಳಿ ದೇವಸ್ಥಾನ 10 ಸಾವಿರ ಮೌಲ್ಯದ ಚಿನ್ನವಿದೆ , ಉಳಿದ ಐದು ಸಾವಿರಕ್ಕೆ ನಾನು ಗ್ಯಾರಂಟಿ , ಚಿಂತೆ ಬೇಡ ಅವರಿಗೆ ಸರಕು ನೀಡಿ ಎನ್ನುವ ಪತ್ರವೇ ಲೋನ್ ಅಥವಾ ಲೆಟರ್ ಆಫ್ ಕ್ರೆಡಿಟ್. ಹೀಗೆ ನೀಡಿದ ಸೇವೆಗೆ ಒಂದಷ್ಟು ಶುಲ್ಕವನ್ನು ವಸೂಲಿ ಮಾಡಲು ಶುರುವಾಯ್ತು ಅದಕ್ಕೆ ಬಡ್ಡಿ ಎನ್ನುವ ಹೆಸರು ಕೂಡ ಬಂತು. ಹೀಗೆ ಠೇವಣಿ , ಸಾಲ , ಬಡ್ಡಿ , ಚಕ್ರಬಡ್ಡಿ , ಜೊತೆಗೆ ಹೊಸ ಹೊಸ ಸನ್ನಿವೇಶಗಳು ಹೊಸ ಸೇವೆಯನ್ನು ಸೃಷ್ಟಿಸುತ್ತಾ ಹೋದವು. ಇಂದಿಗೆ ಬ್ಯಾಂಕಿಂಗ್ ಇಲ್ಲದೆ ಬದುಕಿಲ್ಲ. ಆದರೆ ಬ್ಯಾಂಕ್ ಇಲ್ಲದೆ ನಾವು ಬದುಕಬಹುದು! ಬ್ಯಾಂಕಿನ ಜಾಗವನ್ನು ಫಿನ್ ಟೆಕ್ ಕಂಪನಿಗಳು ಆಕ್ರಮಿಸುತ್ತವೆ. ಅಂದು ಕೂಡ ಹೀಗೆ ಆಯ್ತು. ಧಾರ್ಮಿಕ ಕೇಂದ್ರಗಳು ಹಣಕಾಸಿನ ಶಕ್ತಿ ಕೇಂದ್ರಗಳಾಗಿದ್ದವು ನಿಧಾನವಾಗಿ ಅದು ಆಯಾ ನಗರದ ದೊಡ್ಡ ವ್ಯಾಪಾರಿಗಳು , ರಾಜರ ಕೈಗೆ,ಆ ಊರಿನ ಅಕ್ಕಸಾಲಿಗರ ಅಂದರೆ ಗೋಲ್ಡ್ ಸ್ಮಿಥ್ ಗಳ ಕೈಗೆ ಹಸ್ತಾಂತರವಾದವು. ಇವರುಗಳು ಪೂರ್ಣ ಪ್ರಮಾಣದ ಬ್ಯಾಂಕ್ಗಳಂತೆ ಕೆಲಸ ನಿರ್ವಹಿಸದೇ ಹೋದರೂ ಮನಿ ಲೆಂಡರ್ಸ್ ರೀತಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಕಷ್ಟ ಬಂದಾಗ ಜನ ಇವರ ಬಳಿ ತಮ್ಮ ಬಳಿಯಿರುವ ಮೌಲ್ಯಯುತ ವಸ್ತುವನ್ನು ಒತ್ತೆಯಾಗಿ ಇಡುತ್ತಿದ್ದರು , ಮತ್ತು ಈ ಲೇವಾದೇವಿಗಾರರು ಅವರಿಗೆ ಬೇಕಾದ ಹಣವನ್ನು ನೀಡುತ್ತಿದ್ದರು. ಒಂದಷ್ಟು ಶತಮಾನ ಈ ರೀತಿಯ ವ್ಯವಸ್ಥೆ ನಡೆಯಿತು. ಆದರೆ ರಾಜರು ರಾಜ್ಯವನ್ನು ನಡೆಸಲು ಸಂಗ್ರಹಿಸುತ್ತಿದ್ದ ತೆರಿಗೆಯನ್ನು ಸುಲಭವಾಗಿ ಸಂಗ್ರಹಿಸಲು ದಾರಿ ಹುಡುಕುತ್ತಿದ್ದರು.

ದೂರದ ಪ್ರದೇಶದಿಂದ ಸಂಗ್ರಹಿಸಿದ ತೆರಿಗೆ ಖಜಾನೆ ಸೇರುವ ವೇಳೆಗೆ ದಾರಿಯಲ್ಲಿ ಹಲವು ಅಪಾಯಗಳಿಗೆ ಸಿಲುಕುತ್ತಿತ್ತು. ಇವೆಲ್ಲವುಗಳಿಗೆ ಮುಕ್ತಿ ನೀಡಲು ಇದಕ್ಕೆ ಇನ್ನಷ್ಟು ವೃತ್ತಿಪರ ರೂಪುರೇಷೆಯನ್ನು ನೀಡಲು ನಿರ್ಧಾರವಾಗುತ್ತದೆ. ಇದು 14 ನೇ ಶತಮಾನದಲ್ಲಿ ಪ್ರಥಮ ಬಾರಿಗೆ ಇಟಲಿಯಲ್ಲಿ ಮಾಡ್ರನ್ ಬ್ಯಾಂಕಿಂಗ್ ಉಗಮಕ್ಕೆ ಕಾರಣವಾಗುತ್ತದೆ. 17 ಶತಮಾನದ ವೇಳೆಗೆ ಇದು ಯೂರೋಪು ಪೂರ್ತಿ ಹರಡಿಕೊಳ್ಳುತ್ತದೆ. ಬಾಂಕೋ (BANCO )ಎನ್ನುವ ಇಟಾಲಿಯನ್ ಪದ ಮತ್ತು ಬ್ಯಾಂಕೆ ಎನ್ನುವ ಫ್ರೆಂಚ್ ಪದ ಇಂಗ್ಲಿಷ್ನಲ್ಲಿ ಬ್ಯಾಂಕ್ ಆಗಿ ರೂಪಾಂತರಗೊಂಡು ಇಂದು ವಿಶ್ವದಾದ್ಯಂತ ಮನೆಮಾತಾಗಿದೆ. ಇಟಾಲಿಯನ್ ಮತ್ತು ಫ್ರೆಂಚ್ ಬಾಂಕೋ ಅಥವಾ ಬ್ಯಾಂಕೆ ಪದದ ಅರ್ಥ ಮನಿ ಎಕ್ಸ್ಚೇಂಜ್ ಟೇಬಲ್ ಅಥವಾ ಹಣ ಬದಲಿಸುವ ಜಾಗ ಎನ್ನುವ ಅರ್ಥವನ್ನು ಕೊಡುತ್ತದೆ. ವಿಶೇಷವೆಂದರೆ ಬಂಗಾಳಿ ಭಾಷೆಯಲ್ಲಿ ಕೂಡ ಬ್ಯಾಂಕ್ ಎನ್ನುವ ಪದ ಬಳಕೆಯನ್ನು ಇದೆ ಅರ್ಥದಲ್ಲಿ ಮಾಡಲಾಗಿದೆ. ಇಂದಿಗೆ ಲಭ್ಯವಿರುವ ಆಧಾರಗಳ ಮೇಲೆ ಮಾಡ್ರನ್ ಬ್ಯಾಂಕಿಂಗ್ ಉಗಮವಾದದ್ದು ಯೂರೋಪಿನಲ್ಲಿ, ಆದರೆ ಚರಿತ್ರೆಯಲ್ಲಿ ಇದಕ್ಕೆ ಸಮವಾಗಿ ಟೆಕ್ನಿಕಲ್ ಪದಗಳನ್ನು ಟಂಕಿಸದೆ ಭಾರತದಲ್ಲಿ ನಾವು ಸೇವೆಯನ್ನು ನೀಡುತ್ತಿದ್ದೆವು.

ಬ್ಯಾಂಕಿಂಗ್ (ಸಾಂಕೇತಿಕ ಚಿತ್ರ)
ಸಿರಿವಂತಿಕೆ ಎಂದಿಗೂ ಸೋಮಾರಿಯ ಸೊತ್ತಲ್ಲ! (ಹಣಕ್ಲಾಸು)

19 ನೇ ಶತಮಾನದವರೆಗೆ ಈ ವ್ಯವಸ್ಥೆ ಕೂಡ ನಡೆದುಕೊಂಡು ಬರುತ್ತದೆ. 19 ನೇ ಶತಮನದಲ್ಲಿ ಪೂರ್ಣಪ್ರಮಾಣದ ಇಂದು ನಾವು ಕಾಣುತ್ತಿರುವ ಬ್ಯಾಂಕ್ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಶುರುವಾಗುತ್ತದೆ. ದೊಡ್ಡ ಮಟ್ಟದಲ್ಲಿ ಇಂಡಸ್ಟ್ರಿ ಸ್ಥಾಪಿಸಲು, ಮನೆ ಕಟ್ಟಲು, ಕಾರು ಖರೀದಿಸಲು ಹಣವನ್ನು ಸಾಲದ ರೂಪದಲ್ಲಿ ನೀಡುವ ಪ್ರಕ್ರಿಯೆ ಶುರುವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಬ್ಯಾಂಕಿಂಗ್ ಒಂದು ದೊಡ್ಡ ಉದ್ಯಮವಾಗಿ ಬೆಳೆಯಲು ಶುರುವಾದದ್ದು 19ನೇ ಶತಮಾನದಲ್ಲಿ !

ಭಾರತದಲ್ಲಿ ಬ್ಯಾಂಕಿಂಗ್ ಚರಿತ್ರೆ !

ಭಾರತದಲ್ಲಿ ಧಾರ್ಮಿಕ ಕೇಂದ್ರಗಳು ಕೇವಲ ಭಕ್ತಿಗೆ ಮಾತ್ರವಲ್ಲದೆ ಹಣಕಾಸಿಗೂ ಶಕ್ತಿ ಕೇಂದ್ರವಾಗಿದ್ದವು. ರಾಜ ಮಹಾರಾಜರು ತಮ್ಮ ಹಣವನ್ನು ದೇವಸ್ಥಾನದಲ್ಲಿ ಇರಿಸುತ್ತಿದ್ದರು.ದೇಶದ ಆರ್ಥಿಕತೆಯ ಬೆನ್ನೆಲುಬು ನಮ್ಮ ದೇವಸ್ಥಾನಗಳಿದ್ದವು. ರಾಜ್ಯದಲ್ಲಿ ನಡೆಯುವ ಎಲ್ಲಾ ವ್ಯಾಪಾರ , ವಹಿವಾಟುಗಳು ಕೂಡ ಧಾರ್ಮಿಕತೆಯ ಜೊತೆಗೆ ಒಂದು ನಂಟು ಹೊಂದಿರುತ್ತಿದ್ದವು. ಧಾರ್ಮಿಕತೆ ಮತ್ತು ಆರ್ಥಿಕತೆ ಬಿಡಿಸಲಾಗದ ಸಂಬಂಧವನ್ನು ಹೊಂದಿದ್ದವು. ನೀವು ಗಮನಿಸಿ ನೋಡಿ ಮೊಘಲರು , ಬ್ರಿಟಿಷರು ಮೊದಲು ದಾಳಿ ಮಾಡುತ್ತಿದ್ದದ್ದು ನಮ್ಮ ದೇವಸ್ಥಾನಗಳ ಮೇಲೆ , ಅದಕ್ಕೆ ಕಾರಣ ಅದು ಕೇವಲ ದೇವಸ್ಥಾನವಾಗಿರದೆ ರಾಜ್ಯದ ಸಂಪತ್ತನ್ನು ಶೇಖರಿಸಿಡುವ ದೊಡ್ಡ ಖಜಾನೆ ಕೂಡ ಆಗಿರುತ್ತಿತ್ತು. 1608 ರಲ್ಲಿ ಬ್ರಿಟಿಷರು ಮೊದಲ ಬಾರಿಗೆ ಸೂರತ್ ಮೂಲಕ ಭಾರತದಲ್ಲಿ ಕಾಲಿರಿಸುತ್ತಾರೆ. ಅದಕ್ಕೂ ಮುಂಚೆಯೇ ಮೊಘಲರು ಭಾರತದ ಮೇಲೆ ಬಹಳಷ್ಟು ದಾಳಿ ಮಾಡಿದ್ದರು, ಹಲವು ಭೂಭಾಗಗಳನ್ನು ಆಳುತ್ತಿದ್ದರು ಕೂಡ , ಆದರೆ ಬ್ಯಾಂಕಿಂಗ್ನಲ್ಲಿ ಮಹತ್ತರ ಬದಲಾವಣೆ ಕಂಡಿರಲಿಲ್ಲ. ಮೊದಲ ಬಾರಿಗೆ 1770 ರಲ್ಲಿ ಬ್ಯಾಂಕ್ ಆಫ್ ಹಿಂದೂಸ್ತಾನ್ ಶುರುವಾಗುತ್ತದೆ, 1832ರಲ್ಲಿ ಇದು ಕಾರ್ಯಾಚರಣೆ ನಿಲ್ಲಿಸುತ್ತದೆ. ಆ ನಂತರ ಬ್ಯಾಂಕ್ ಆಫ್ ಬೆಂಗಾಲ್ , ಬ್ಯಾಂಕ್ ಆಫ್ ಬಾಂಬೆ , ಬ್ಯಾಂಕ್ ಆಫ್ ಮದ್ರಾಸ್ ಶುರುವಾಗುತ್ತವೆ. ವಸಹಾತು ಸಮಯದಲ್ಲಿ ಬ್ರಿಟಿಷರು ಭಾರತದಲ್ಲಿ ಅನೇಕ ಬ್ಯಾಂಕುಗಳ ಉಗಮಕ್ಕೆ ಕಾರಣರಾಗುತ್ತಾರೆ.

ಬ್ಯಾಂಕಿಂಗ್ (ಸಾಂಕೇತಿಕ ಚಿತ್ರ)
ಖರ್ಚು, ಉಳಿಕೆ, ಹೂಡಿಕೆಗೆ ಸಿದ್ಧ ಫಾರ್ಮುಲಾ: ಯಶಸ್ವಿ ಉದ್ಯಮಿ ಲೀ ಕ-ಶಿಂಗ್ ಸೂತ್ರದ ಬಗ್ಗೆ ಗೊತ್ತಿದೆಯೇ?

ಭಾರತದ ಬ್ಯಾಂಕಿಂಗ್ ಚರಿತ್ರೆಯನ್ನು ನಾವು ಐದು ಭಾಗವಾಗಿ ವಿಭಾಗಿಸಬಹುದು.

  • 18 ನೇ ಶತನಮಾನಕ್ಕೂ ಹಿಂದಿನ ಚರಿತ್ರೆ.

  • 18 ನೇ ಶತಮಾನದಿಂದ ಸ್ವಂತಂತ್ರ ಬರುವವರೆಗೆ ಅಂದರೆ 1770 ರಿಂದ 1947 ರವರೆಗೆ

  • 1947 ರಿಂದ 1969 ಬ್ಯಾಂಕುಗಳ ನ್ಯಾಷನಲೈಸಷನ್ ಆಗುವವರೆಗೆ

  • ರಾಷ್ಟ್ರೀಕೃತ ಆದ ದಿನದಿಂದ 1991 ಲಿಬರಲೈಸಷನ್ ಆಗುವವರೆಗೆ

  • 1991 ರಿಂದ 2024ರ ವರೆಗೆ

ಕೊನೆಮಾತು: ಭಾರತದ ಬ್ಯಾಂಕಿಂಗ್ ನಡೆದು ಬಂದ ದಾರಿ ಅತ್ಯಂತ ರೋಚಕವಾಗಿದೆ. ಕಮರ್ಶಿಯಲ್ ಬ್ಯಾಂಕುಗಳು ಇಲ್ಲದ ಕಾಲಘಟ್ಟದಿಂದ ಇಂದಿನ ಡಿಜಿಟಲ್ ಯಾತ್ರೆವರೆಗೆ ಭಾರತ ಬಹುದೂರ ಸಾಗಿ ಬಂದಿದೆ. ಜಗತ್ತಿನ ಅತ್ಯಂತ ಮುಂದುವರೆದ ದೇಶಗಳು ಕೂಡ ಭಾರತದತ್ತ ಆಶ್ಚರ್ಯ ಭರಿತ ಕಣ್ಣುಗಳಿಂದ ನೋಡುವಂತೆ ನಮ್ಮ ಬ್ಯಾಂಕಿಂಗ್ ವಹಿವಾಟು ವಿಸ್ತರಿಸಿದೆ. ಸಾಗಬೇಕಾದ ದಾರಿ ಇನ್ನೂ ಬಹಳವಿದೆ. ಆದರೆ ಸಾಗುವ ಹಾದಿಯಲ್ಲಿ ನಾವು ನಿಚ್ಚಳವಾಗಿ ನಾಯಕರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com