ಸಿರಿವಂತಿಕೆ ಎಂದಿಗೂ ಸೋಮಾರಿಯ ಸೊತ್ತಲ್ಲ! (ಹಣಕ್ಲಾಸು)

ಹಣಕ್ಲಾಸು- 404
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ನಾನು 5ನೇ ತರಗತಿಯಲ್ಲಿ ಇದ್ದಾಗ ಬೇಸಿಗೆ ರಜೆಯಲ್ಲಿ ಪ್ರಥಮ ಬಾರಿಗೆ ಕೆಲಸ ಮಾಡಲು ಶುರು ಮಾಡಿದೆ. ನನಗಾಗ 11 ವರ್ಷ. ಮಾರ್ವಾಡಿ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಮಡಿಸಿಡುವ ಹುಡುಗನಾಗಿ ಎರಡು ತಿಂಗಳು ಕೆಲಸ ಮಾಡಿದ್ದೆ. ತಿಂಗಳಿಗೆ 40 ರೂಪಾಯಿ ಕೊಡುತ್ತೇನೆ ಎಂದಿದ್ದ ಸೇಠು ಎರಡು ತಿಂಗಳ ನಂತರ 80 ರೂಪಾಯಿ ಬದಲು 100 ರೂಪಾಯಿ ನೀಡಿದ್ದರು. 'ತುಮ್ ಜಿಂದಗಿಮೆ ಆಗೇ ಬಡೋಗೆ' ಎಂದಿದ್ದರು. ಮಾರ್ವಾಡಿ ಕಮ್ಯುನಿಟಿ ಜಿಪುಣರಲ್ಲ ಆದರೆ ಲೆಕ್ಕಾಚಾರದ ವ್ಯಕ್ತಿಗಳು.

ಅಂದಿನಿಂದ ಇಂದಿನ ವರೆಗೆ ಕಾಯಕವೇ ಕೈಲಾಸವಾಗಿದೆ. ಕೆಲಸ ಮಾಡದೆ ಸುಮ್ಮನೆ ಕುಳಿತ ದಿನ ಬೇಸರವಾಗುತ್ತದೆ. ಸಿರಿವಂತಿಕೆ ಎಂದಿಗೂ ಸೋಮಾರಿಯ ಸೊತ್ತಲ್ಲ. ನಿತ್ಯ ಬೆಳಿಗ್ಗೆ ಏಳಲು, ಎದ್ದಾಗ ನಿಮ್ಮನ್ನು ಹೆಚ್ಚಿನ ಕೆಲಸಕ್ಕೆ ಪ್ರೇರೇಪಿಸುವ ಶಕ್ತಿ ಯಾವುದು? ನಮ್ಮನ್ನು ಮೋಟಿವೇಟ್ ಮಾಡುವ ಅಂಶ ಯಾವುದು ಎನ್ನುವುದನ್ನು ತಿಳಿದುಕೊಳ್ಳಬೇಕು. ಅದನ್ನು ಇನ್ನಷ್ಟು ಚನ್ನಾಗಿ ಕೆಲಸಕ್ಕೆ ಹಾಕಿದರೆ ನಾವು ಬಯಸುವ ಬದುಕು ನಮ್ಮದಾಗುತ್ತದೆ. ಹೀಗೆ ಸಮಾಜದಲ್ಲಿ ಬರಿಗೈಯಲ್ಲಿ ಬಂದು ಜಗತ್ತು ನಿಬ್ಬೆರಗಾಗಿ ನೋಡುವ ಮಟ್ಟಕ್ಕೆ ಬೆಳೆದ ನನಗಿಷ್ಟವಾದ ಹತ್ತು ಮಹನೀಯರ ಬದುಕನ್ನು ನಾಲ್ಕು ಸಾಲುಗಳಲ್ಲಿ ತಿಳಿಸುವೆ.

(ಸಾಂಕೇತಿಕ ಚಿತ್ರ)
ಹಣ ಎನ್ನುವುದು ನಾವು ಮಾಡಿದ ಕೆಲಸಕ್ಕೆ ಸಿಕ್ಕ ಸಣ್ಣ ಉಡುಗೊರೆ!

ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ನಿಮಗೆಲ್ಲಾ ಗೊತ್ತಿರಲಿ ನಾವು ಯಾರನ್ನೂ ನಕಲು ಮಾಡುವುದು ಬೇಡ. ಆದರೆ ಯಶಸ್ವಿಗಳಿಂದ ಪ್ರೇರಣೆ ಪಡೆಯುವುದು ತಪ್ಪಲ್ಲ.

ನಾರಾಯಣ ಮೂರ್ತಿ: ಇವರ ಹೆಸರು ಕೇಳದವರು ಕಡಿಮೆ. ಕೈಯಲ್ಲಿ ನಯಾಪೈಸೆ ಇರದಿದ್ದರೂ ಕಣ್ಣುತುಂಬಾ ಕನಸು, ತಲೆತುಂಬ ಹೊಸ ಐಡಿಯಾ ಇವರ ಬಂಡವಾಳ. ಇದೆ ಅಧ್ಯಾಯದಲ್ಲಿ ಹೊಸತನ್ನು ಮಾಡಲು ಹಿಂಜರಿಯುವುದು ಬೇಡ. ಹೊಸದಕ್ಕೆ ಸನ್ನದ್ಧರಾಗಿರಬೇಕು ಎನ್ನುವ ಮಾತುಗಳನ್ನು ಹೇಳಲಾಗಿದೆ. ಅದಕ್ಕೆ ಅತ್ಯುತ್ತಮ ಉದಾಹರೆಣೆ ಶ್ರೀ ನಾರಾಯಣ ಮೂರ್ತಿಯವರು. ಅಂದಿನ ಕಾಲಘಟ್ಟದಲ್ಲಿ ಕಂಪ್ಯೂಟರ್ ಎಂದರೇನು ಎಂದು ಗೊತ್ತಿಲದವರ ಸಂಖ್ಯೆ ಹೆಚ್ಚಿತ್ತು. ಆದರೆ ಅವರು ಲೆಸ್ ಟ್ರಾವೆಲ್ಡ್ ಪಾಥ್ ಆಯ್ಕೆ ಮಾಡಿಕೊಂಡರು. ಉಳಿದದ್ದು ಇಂದಿಗೆ ಇತಿಹಾಸ.

ದಿಲೀಪ್ ಸಾಂಗ್ವಿ: ಗುಜರಾತಿನ ಪುಟ್ಟ ಹಳ್ಳಿಯಲ್ಲಿ ಜನಿಸಿದ ಇವರು ಮೊದಲಿಗೆ ಜೆನೆರಿಕ್ ಔಷಧಗಳನ್ನು ಪೂರೈಸುವ ಅಂದರೆ ಡಿಸ್ಟ್ರಿಬ್ಯುಶನ್ ವ್ಯಾಪಾರದಲ್ಲಿ ತೊಡಗಿಕೊಂಡವರು. ಇಂದರಿಂದ ಉಳಿಸಿದ ಹಣದಲ್ಲಿ ಮೆಡಿಸಿನ್ಸ್ ಉತ್ಪಾದನೆ ಘಟಕವನ್ನು ತೆರೆದರು ನಂತರ ಅಮೆರಿಕಾದ ನಷ್ಟದಲ್ಲಿದ್ದ ಸಂಸ್ಥೆಯನ್ನು ಕೊಂಡು ಜಾಗತಿಕವಾಗಿ ತಮ್ಮ ಸಂಸ್ಥೆಗೆ ಒಂದು ಐಡೆಂಟಿಟಿ ಕೊಟ್ಟರು. ಇಂದಿಗೆ ಸನ್ ಫಾರ್ಮ ಹೆಸರು ಕೇಳದವರು ಯಾರು? ಸಮಾಜದಲ್ಲಿ ಆಗುವ ಬದಲಾವಣೆ , ಟ್ರೆಂಡ್ ಗಮನಿಸಿದ್ದು ಮಾತ್ರವಲ್ಲದೆ ಅದಕ್ಕೆ ಬೇಗ ಸ್ವಿಚ್ ಆಗಿದ್ದು ಇವರ ಹೆಗ್ಗಳಿಕೆ.

ಲೀ ಕ ಶಿಂಗ್: ಇವರ ಉಲ್ಲೇಖವನ್ನು ಈಗಾಗಲೇ ಈ ಪುಸ್ತಕದಲ್ಲಿ ಎರಡು ಬಾರಿ ಮಾಡಿದ್ದೇನೆ. ಕೈಯಲ್ಲಿ ಕಾಸಿಲ್ಲದ ಸಮಯದಲ್ಲಿ ಆದಾಯದ ಕೇವಲ 30 ಪ್ರತಿಶತದಲ್ಲಿ ಬದುಕಿ ಎಂದ ಆಸಾಮಿ ಇವರು. ಹಾಗೆ ಬದುಕಿ ತೋರಿಸಿದವರು. ಹಾಂಗ್ ಕಾಂಗ್ ಮೂಲದ 95 ರ ಲೀ, 15 ರಲ್ಲಿ ತಂದೆಯ ಕಳೆದುಕೊಂಡು ಶಾಲೆ ಬಿಟ್ಟು, ಕೆಲಸಕ್ಕೆ ಸೇರಿಕೊಂಡು 16 ತಾಸು ದುಡಿದು, 100 ರೂಪಾಯಿ ಸಂಪಾದನೆಯಲ್ಲಿ 20 ರೂಪಾಯಿ ನೆಟ್ವರ್ಕ್ ಕಟ್ಟಿಕೊಳ್ಳಲು ಬಳಸಿ ಎಂದ ಧೈರ್ಯಶಾಲಿ. ಇಂದಿಗೆ ಜಾಗತಿಕವಾಗಿ 33 ನೇ ಅತಿ ದೊಡ್ಡ ಸಾಹುಕಾರರಾಗಿ ಕೂಡ ಹೇಳಿದಂತೆ ಬದುಕುತ್ತಿರುವ ಕಾಯಕ ಜೀವಿ.

ವಾರೆನ್ ಬಫೆಟ್: ಹೂಡಿಕೆ ಪಿತಾಮಹ ಎನ್ನುವ ಹೆಸರು ಗಳಿಸಿಕೊಂಡಿರುವ ಇವರು ಇಂದಿಗೂ ಅದೇ ಮನೆಯಲ್ಲಿ, ಅದೇ ಸರಳ ಜೀವನ ಜೀವಿಸುತ್ತಿದ್ದಾರೆ. ವ್ಯಾಲ್ಯೂ ಇನ್ವೆಸ್ಟ್ಮೆಂಟ್ ಎಂದರೇನು ಎನ್ನುವುದನ್ನು ಸಶಕ್ತವಾಗಿ ಜಗತ್ತಿಗೆ ತೋರಿಸಿಕೊಟ್ಟವರು. ಇವರು ಹೂಡಿಕೆ ಶುರು ಮಾಡಿದಾಗ ಇವರ ಬಳಿ ಕೋಟ್ಯಂತರ ಬಂಡವಾಳವೇನು ಇರಲಿಲ್ಲ ಎನ್ನುವುದನ್ನು ಗಮನಿಸಬೇಕು .

ದೇಶ್ ಬಂಧು ಗುಪ್ತಾ: ಬಿಟ್ಸ್ ಪಿಲಾನಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ಆರಂಭಿಸಿದ ಇವರು 45 ಸಾವಿರ ಕೋಟಿ ಸಂಪತ್ತಿನ ಮಾಲೀಕರಾದ ಕಥೆ ರೋಚಕವಾಗಿದೆ. ತಲೆಯಲ್ಲಿರುವ ಕನಸಿಗೆ ಪುಕ್ಕ ಕಟ್ಟಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೆಲಸ ಬಿಟ್ಟು ಹೆಂಡತಿಯಿಂದ ಐದು ಸಾವಿರ ಸಾಲ ಪಡೆದು ಕಟ್ಟಿದ ಸಂಸ್ಥೆ ಲುಪಿನ್ ಲಿಮಿಟೆಡ್ 1.

ವಾಡಿಲಾಲ್ ಗಾಂಧಿ: ಫೌಂಟನ್ ಸೋಡಾ ಮಾಡುವುದರಿಂದ ಶುರು ಮಾಡಿ 650 ಕೋಟಿಗೂ ಹೆಚ್ಚಿನ ರೆವೆನ್ಯೂ ಹೊಂದಿರುವ ಸಂಸ್ಥೆ ಕಟ್ಟಿದ ಹೆಗ್ಗಳಿಕೆ ವಾಡಿಲಾಲ್ ಅವರದ್ದು. ಪುಟಾಣಿ ಜಾಗದಲ್ಲಿ ಅತಿ ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ದೊಡ್ಡದಾಗಿ ಬೆಳೆದು ನಿಲ್ಲುವುದಕ್ಕೆ ಈ ಫಾರ್ಮ್ಯಾಟ್ ಮಾದರಿ. ವಾಡಿಲಾಲ್ ಇಂದಿಗೆ 200ಕ್ಕೂ ಅಧಿಕ ವೆರೈಟಿ ಐಸ್ಕ್ರೀಮ್ ಹೊಂದಿದೆ. 49ದೇಶದಲ್ಲಿ ತನ್ನ ಔಟ್ಲೆಟ್ ಹೊಂದಿದೆ. ಸಣ್ಣದಾಗಿ ಶುರು ಮಾಡಬೇಕು ದೊಡ್ಡ ಚಿಂತನೆ ಹೊಂದಿರಬೇಕು ಎನ್ನುವುದಕ್ಕೆ ಇವರು ಉದಾಹರಣೆ.

ತುಷಾರ್ ಜೈನ್: ಮುಂಬೈನ ದಾರಿಗಳಲ್ಲಿ ನಿಂತು ಮಗನ ಜೊತೆಯಲ್ಲಿ ಬ್ಯಾಗ್ ಮಾರುತ್ತಿದ್ದ ಇವರು 2012 ರಲ್ಲಿ ಹೈ ಸ್ಪಿರಿಟ್ ಕಮರ್ಷಿಯಲ್ ವೆಂಚರ್ಸ್ ತೆರೆಯುತ್ತಾರೆ. ಇಂದಿಗೆ ಬ್ಯಾಕ್ಪ್ಯಾಕ್ ಮತ್ತು ಲಗೇಜ್ ಬ್ಯಾಗುಗಳನ್ನು ಮಾರುತ್ತಾ ಇರುವ ಈ ಸಂಸ್ಥೆಯ ಟರ್ನ್ಓವರ್ 250 ಕೋಟಿಗೂ ಹೆಚ್ಚಿದೆ. ತಾಳ್ಮೆ, ಶ್ರದ್ದೆ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದು ಇವರ ನಿಲುವು.

ಸು ಜಿನ್: ಅನಾಥ ಎನ್ನುವ ಹಣೆಪಟ್ಟಿಯೊಂದಿಗೆ ಬೆಳೆದ ಸು ಜಿನ್ ಇಂದಿಗೆ 1.2 ಬಿಲಿಯನ್ ಸಂಪತ್ತಿನ ಒಡೆಯ. ಯಾನೊಲ್ಜಾ ಎನ್ನುವ ಆಪ್ ತೆಗೆಯುವುದಕ್ಕೆ ಮುಂಚೆ ಹೋಟೆಲ್ನಲ್ಲಿ ಕಸ ಗುಡಿಸುವ ಕೆಲಸ ಕೂಡ ಇವರು ಮಾಡಿದ್ದರು. ಇಂದಿಗೆ ಇವರ ವಯಸ್ಸು 45! ಯಾನೊಲ್ಜಾ ಎಂದರೆ ಹೇ ಲೆಟ್ಸ್ ಪ್ಲೆ ಎಂದರ್ಥ. ಹಾಸ್ಪಿಟಾಲಿಟಿ ವಲಯದಲ್ಲಿ ಇವರದ್ದು ದೊಡ್ಡ ಹೆಸರು. ಸೌತ್ ಕೊರಿಯಾದ 26ನೇ ಅತಿದೊಡ್ಡ ಶ್ರೀಮಂತ ಎನ್ನುವ ಶ್ರೇಯಸ್ಸಿಗೆ ಈತ ಭಾಜನರು.

ಫ್ಯಾಬಿಯಾನ್: ಅಮೆರಿಕಾದ ಪಿಟ್ಸ್ಬರ್ಗ್ ನಲ್ಲಿರುವ ಮೆಟಾಫ್ಯ್ ಎನ್ನುವ ಗೇಮಿಂಗ್ ಆಪ್ ನ ಸಂಸ್ಥಾಪಕರಿವರು. ಅಮೇರಿಕಾದ ಪ್ರಜೆಗಳಿಗೆ ದತ್ತು ಪುತ್ರನಾಗಿ ಬಂದ ಇವರು , ಶಾಲೆಯಿಂದ ಹೊರಬಿದ್ದು, 20ಕ್ಕೆ ಅಪ್ಪನಾಗಿ, ಮಗುವಿಗೆ ಡೈಪರ್ ಕೊಳ್ಳಲು, ಹಾಲು ಕೊಳ್ಳಲು ಹಣವಿಲ್ಲದಾಗ ಸೂಪರ್ ಮಾರ್ಕೆಟ್ನಿಂದ ಕದಿಯುತ್ತಿದ್ದೆ ಎಂದು ಹೇಳಿ ಕೊಂಡಿದ್ದಾರೆ. ಇಂದಿಗೆ ಇವರ ಸಂಸ್ಥೆ 105 ಮಿಲಿಯನ್ ಮೌಲ್ಯವನ್ನು ಹೊಂದಿದೆ.

ಗುಚ್ಚಿಯೋ ಗುಚ್ಚಿ: ಗುಚ್ಚಿ (GUCCI ) ಬ್ರಾಂಡ್ ಇಂದು ಕೇಳದವರಿಲ್ಲ. ಇದನ್ನು ಹುಟ್ಟುಹಾಕಿದ ಗುಚ್ಚಿಯೋ ಗುಚ್ಚಿ ಹೋಟೆಲ್ ಲಿಫ್ಟ್ ಒಂದರಲ್ಲಿ ಲಿಫ್ಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಇಂದಿಗೆ ಗುಚ್ಚಿ ರೆವೆನ್ಯೂ ಹತ್ತಿರತ್ತಿರ 10 ಬಿಲಿಯನ್ ಡಾಲರ್.

(ಸಾಂಕೇತಿಕ ಚಿತ್ರ)
Asset class ಅಂದರೇನು? ಯಾವ ಅಸೆಟ್ ಕ್ಲಾಸ್ ನಲ್ಲಿ ಎಷ್ಟು ಹೂಡಿಕೆ ಮಾಡಬೇಕು? (ಹಣಕ್ಲಾಸು)

ನಮ್ಮ ನಡುವಿನ ಜನರನ್ನು ನೋಡುತ್ತಾ ಹೋದರೆ ಸಾಕು ಇಂತಹ ಸಾಧಕರ ಪಟ್ಟಿ ಸಾವಿರ ಸಿಗುತ್ತದೆ. ಇವರೆಲ್ಲರಲ್ಲೂ ಒಂದು ಸಾಮಾನ್ಯ ಅಂಶವಿದೆ. ಇವೆರಲ್ಲರೂ ಸೆಲ್ಫ್ ಮೇಡ್! ಯಾರಿಗೂ ಹಣದ ಬಲವಿರಲಿಲ್ಲ, ಗಾಡ್ ಫಾದರ್ ಇರಲಿಲ್ಲ. ಕೇವಲ ತಮ್ಮ ಕನಸು, ಐಡಿಯಾ, ತಾಳ್ಮೆ, ಛಲದಿಂದ ಜಗತ್ತಿನಲ್ಲಿ ತ್ರಿವಿಕ್ರಮರಾಗಿ ಬೆಳೆದು ನಿಂತವರಿವರು. ಇವರನ್ನು ಇಲ್ಲಿ ಹೆಸರಿಸುವ ಉದ್ದೇಶ ಕೂಡ ಬಹಳ ಸರಳ. ಹಣವಿಲ್ಲ , ಬಾಹ್ಯ ಬೆಂಬಲವಿಲ್ಲ, ಕುಟುಂಬದ ಬಲವಿಲ್ಲ ಎಂದು ಗೊಣಗುವುದು ಬೇಡ ಎನ್ನುವುದು. ನಮ್ಮ ಅದೃಷ್ಟದ ಹರಿಕಾರರು ನಾವೇ ಎನ್ನುವುದು ಮನನವಾಗಲಿ ಎನ್ನುವುದು.

ಈ ಮಟ್ಟದ ಯಶಸ್ಸು ಕಾಣದ ಆದರೆ ಬದುಕನ್ನು ಬಂಗಾರ ಮಾಡಿಕೊಂಡ ಅನಾಮಧೇಯ ಸಾಧಕರ ಪಟ್ಟಿ ಬಹಳ ದೊಡ್ಡದಿದೆ. ನಮ್ಮನ್ನು ನಮ್ಮ ಯಶಸ್ಸಿನಿಂದ ದೂರ ಇಟ್ಟಿರುವುದು ನಮ್ಮ ಆಲೋಚನೆ, ನಮ್ಮ ಮನಸ್ಥಿತಿ.

ನೆನಪಿರಲಿ: ಸಿರಿವಂತಿಕೆ ಎನ್ನುವುದು ಒಮ್ಮೆ ಗಳಿಸಿ ಮುಗಿಯಿತು ಎನ್ನುವ ಕೆಲಸವಲ್ಲ. ಅದನ್ನು ಬದುಕುವ ರೀತಿ ಮಾಡಿಕೊಂಡಾಗ ಮಾತ್ರ ಸಿರಿವಂತಿಕೆ ನಮ್ಮದಾಗುತ್ತದೆ. ಸದಾ ಜೊತೆಗಿರುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ದೆ ಇದ್ದಾಗ ಅದು ಕೆಲಸ ಎನ್ನಿಸಿಕೊಳ್ಳುವುದಿಲ್ಲ, ಬದಲಿಗೆ ಅದು ಬದುಕುವ ರೀತಿಯಾಗುತ್ತದೆ. ನಮ್ಮ ನಡುವಿನ ಶ್ರೀಮಂತರನ್ನು ಗಮನಿಸಿ ನೋಡಿ ಅವರಲ್ಲಿ ಜಗತ್ತು ಹುಚ್ಚ ಎನ್ನುವ ಮಟ್ಟಿನ ಪ್ಯಾಶನ್ ಇರುತ್ತದೆ. ಶ್ರೀಮಂತಿಕೆಯನ್ನು ಸರಳವಾಗಿ ಬದುಕುವುದರ ಮೂಲಕ ಬದುಕನ್ನು ಇನ್ನಷ್ಟು ಶ್ರೀಮಂತ ಗೊಳಿಸಬಹುದು. ನಾವು ಬಯಸುವ ಎಲ್ಲವೂ ನಮ್ಮಲ್ಲೇ ಇದೆ. ಆದರೆ ನಾವು ನೋಡಿ ದಡ್ಡರು ನಮ್ಮಲ್ಲಿರುವ ಶಕ್ತಿಯನ್ನು ಹೊರಗಡೆ ಹುಡುಕಲು ಹೊರಟು ಬಿಡುತ್ತೇವೆ. ಇದಲ್ಲವೇ ವಿಪರ್ಯಾಸ? ಹುಡುಕಾಟ ನಮ್ಮಿಂದ ಶುರುವಾಗಲಿ. ಆಗ ಯಾವುದನ್ನೂ ಹೊರಗೆ ಹುಡುಕ ಬೇಕಾದ ಪ್ರಮೇಯ ಬರುವುದಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com