Asset class ಅಂದರೇನು? ಯಾವ ಅಸೆಟ್ ಕ್ಲಾಸ್ ನಲ್ಲಿ ಎಷ್ಟು ಹೂಡಿಕೆ ಮಾಡಬೇಕು? (ಹಣಕ್ಲಾಸು)

ಹಣಕ್ಲಾಸು-402 ರಂಗಸ್ವಾಮಿ ಮೂಕನಹಳ್ಳಿ
ಅಸೆಟ್ ಕ್ಲಾಸ್
ಅಸೆಟ್ ಕ್ಲಾಸ್ online desk

ನಾವು ಹೂಡಿಕೆ ಮಾಡುವ ಯಾವುದೇ ವಸ್ತುವಿನ ಬೆಲೆ ಅಥವಾ ಮೌಲ್ಯ ಸಮಯ ಸರಿದಂತೆ ಹೆಚ್ಚಾಗುತ್ತದೆ ಅದನ್ನು ಅಸೆಟ್ (Asset) ಎನ್ನಲಾಗುತ್ತದೆ. ಈ ರೀತಿ ಹಲವಾರು ಅಸ್ಸೇಟ್ಗಳನ್ನು ಒಟ್ಟಾರೆ ಅಸೆಟ್ ಕ್ಲಾಸ್ (Asset Class) ಎನ್ನಲಾಗುತ್ತದೆ. ಅಸ್ಸೆಟ್ನಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ಸುಮ್ಮನೆ ಕೂರುವಂತಿಲ್ಲ. ಪೋರ್ಟ್ಫೋಲಿಯೋ (portfolio)ದಲ್ಲಿ ಬದಲಾವಣೆ ಅವಶ್ಯಕತೆ ಬೀಳುತ್ತದೆ. ಸದಾ ಒಂದು ಕಣ್ಣಿಟ್ಟಿರಬೇಕು.

ಯಾವುದನ್ನು ಅಸೆಟ್ ಅಥವಾ ಅಸೆಟ್ ಕ್ಲಾಸ್ ಎನ್ನಬಹುದು?

ಯಾವುದೆಲ್ಲಾ ತನ್ನ ಮೌಲ್ಯವನ್ನು ವೃದ್ಧಿಸಿಕೊಳ್ಳುತ್ತದೆ ಅವೆಲ್ಲವೂ ಅಸೆಟ್ ಎನ್ನಿಸಿಕೊಳ್ಳುತ್ತವೆ. ಸ್ಥೂಲವಾಗಿ ಕೆಳಗಿನವುಗಳನ್ನು ಅಸೆಟ್ ಕ್ಲಾಸ್ ಎಂದು ವರ್ಗಿಕರಿಸಬಹುದು.

ಎರಡು ದಶಕಗಳ ಹಿಂದೆ ಅಸೆಟ್ ಕ್ಲಾಸ್ ಎಂದರೆ ಕೇವಲ ಈಕ್ವಿಟಿ, ಹಣ ಮತ್ತು ಹಣಕ್ಕೆ ಸಮನಾದ ಹೂಡಿಕೆಗಳು ಎನ್ನುವ ಅರ್ಥ ನೀಡುತ್ತಿತ್ತು. ಇಂದಿಗೆ ಇದರ ವ್ಯಖ್ಯಾನ ಬದಲಾಗಿದೆ. ಇವತ್ತಿಗೆ ರಿಯಲ್ ಎಸ್ಟೇಟ್ ನ್ನು ಆಸೆಟ್ ಕ್ಲಾಸ್ ಎಂದು ಪರಿಗಣಿಸಲಾಗುತ್ತಿದೆ. ಈಗಿನ ಹಣಕಾಸು ಸಲಹೆಗಾರರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಪ್ರೈವೇಟ್ ಈಕ್ವಿಟಿ (private equity), ಹೆಡ್ಜ್ ಫಂಡ್ (Hedge funds) ಮತ್ತು ಕ್ರಿಪ್ಟೋ (crypto) ಮೇಲಿನ ಹೂಡಿಕೆಯನ್ನು ಸಹ ಅಸೆಟ್ ಕ್ಲಾಸ್ ಎಂದು ವರ್ಗಿಕರಿಸಿದ್ದಾರೆ. ಡೆಫಿನಿಶನ್ ಏನು ಬೇಕಾದರೂ ಹೇಳಲಿ. ನಾವು ನಮ್ಮ ರಿಸ್ಕ್ ಅಪಿಟೈಟ್ (Risk appetite) ಎಷ್ಟಿದೆ, ಆ ಹೂಡಿಕೆ ನಮ್ಮ ಮನಸ್ಸಿಗೆ ಒಗ್ಗುತ್ತದೆಯೇ ಎನ್ನುವುದನ್ನು ಪ್ರಶ್ನಿಸಿಕೊಂಡು ಹೂಡಿಕೆಯನ್ನು ಮಾಡಬೇಕು.

  1. ಈಕ್ವಿಟಿ (equity): ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಅಥವಾ ನೋಂದಾಯಿತವಲ್ಲದ, ಪಬ್ಲಿಕ್ ಅಥವಾ ಪ್ರೈವೇಟ್ ಹೀಗೆ ಯಾವುದೇ ಸಂಸ್ಥೆಯ ಷೇರುಗಳನ್ನು ಖರೀದಿಸುವುದರ ಮೂಲಕ ಹೂಡಿಕೆಯನ್ನು ಮಾಡಿದರೆ, ನಾವು ಕೊಂಡ ಷೇರಿನ ಬೆಲೆಯ ಒಡೆತನವನ್ನು ನಾವು ಆ ಸಂಸ್ಥೆಯಲ್ಲಿ ಹೊಂದಿದ್ದೇವೆ ಎಂದರ್ಥ. ಹೀಗೆ ಮಾಡುವ ಹೂಡಿಕೆ ಅಸೆಟ್ ಕ್ಲಾಸ್ ಪರಿಭಾಷೆಯಲ್ಲಿ ಈಕ್ವಿಟಿ ಎನ್ನಿಸಿಕೊಳ್ಳುತ್ತದೆ. ಅಂದರೆ ನಾವೇ ವ್ಯಾಪಾರ ಮಾಡುವ ಬದಲು ವ್ಯಾಪಾರ ಮಾಡುವ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದು, ಮತ್ತು ಅದರಲ್ಲಿ ಆಗುವ ಲಾಭ ಅಥವಾ ನಷ್ಟಕ್ಕೆ ನಮ್ಮ ಹೂಡಿಕೆಯ ಮೊತ್ತವನ್ನು ಒಡ್ಡಿಕೊಳ್ಳುವುದು. ಇದು ಬಹಳ ಅಪಾಯಕಾರಿ ಹೂಡಿಕೆ ಎನ್ನಿಸಿಕೊಂಡಿದೆ. ಲಾಭ ಬಂದಾಗ ಹೆಚ್ಚು ಲಾಭವಾಗುವುದು ದಿಟ. ಆದರೆ ನಷ್ಟವಾದಾಗ ಎಲ್ಲರಿಗಿಂತ ಹೆಚ್ಚು ನಷ್ಟವನ್ನು ಭರಿಸುವುದು ಕೂಡ ಈಕ್ವಿಟಿ ಷೇರುದಾರರು ಮಾತ್ರ.

  2. ಫಿಕ್ಸೆಡ್ ಇನ್ಕಮ್-ಬಾಂಡ್ಸ್ (Fixe Income Bonds): ಇದನ್ನು ಡೆಟ್ (Debt) ಮೇಲಿನ ಹೂಡಿಕೆ ಎನ್ನಬಹುದು. ಅಂದರೆ ಗಮನಿಸಿ ಈಕ್ವಿಟಿಯಲ್ಲಿ ಸಂಸ್ಥೆಯ ಲಾಭ ಅಥವಾ ನಷ್ಟಕ್ಕೆ ಹೂಡಿಕೆ ಲಿಂಕ್ ಆಗಿರುತ್ತದೆ. ಡೆಟ್ ವಿಷಯದಲ್ಲಿ ಹಾಗಲ್ಲ. ಇದು ನಾವು ಸಂಸ್ಥೆಗೆ ಸಾಲ ನೀಡಿದಂತೆ, ಸಂಸ್ಥೆ ಲಾಭದಲ್ಲಿರಲಿ ಅಥಾವ ನಷ್ಟದಲ್ಲಿರಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಮೊದಲೇ ನಿರ್ಧಾರವಾಗಿರುವ ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ. ಸಂಸ್ಥೆ ನಷ್ಟಕ್ಕೆ ಒಳಗಾಗಿ ಮುಚ್ಚುವ ಹಂತಕ್ಕೆ ಬಂದರೆ ಈಕ್ವಿಟಿ ಷೇರುದಾರರಿಗಿಂತ ಮುಂಚಿತವಾಗಿ ಬಾಂಡ್ ಹೋಲ್ಡರ್ಸ್ ಗಳಿಗೆ ಹಣವನ್ನು ಹಿಂತಿರಿಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇದು ಈಕ್ವಿಟಿಗೆ ಹೋಲಿಕೆ ಮಾಡಿ ನೋಡಿದಾಗ ಕಡಿಮೆ ಅಪಾಯವುಳ್ಳ ಹೂಡಿಕೆ ಎಂದು ಹೇಳಬಹುದು.

  3. ಹಣ ಮತ್ತು ಹಣದ ಸಮಾನ ಹೂಡಿಕೆಗಳು: ಹಣವನ್ನು ಬ್ಯಾಂಕಿನಲ್ಲಿ ಇಟ್ಟುಕೊಳ್ಳುವುದು, ಅಥವಾ ನಿಗದಿತ ಸಮಯಕ್ಕೆ ಡೆಪಾಸಿಟ್ ಇಡುವುದು.ಬೇಕಾದಾಗ ತಕ್ಷಣ ಹಣದ ರೂಪಕ್ಕೆ ಹೆಚ್ಚು ಸಮಯ ಮತ್ತು ಖರ್ಚಿಲ್ಲದೆ ಬದಲಿಸಿಕೊಳ್ಳಬಲ್ಲ ಎಲ್ಲಾ ಹೂಡಿಕೆಗಳು ಕೂಡ ಇದರಡಿಯಲ್ಲಿ ಬರುತ್ತವೆ.

  4. ರಿಯಲ್ ಎಸ್ಟೇಟ್: ಭೂಮಿ ಅಥವಾ ಮನೆ, ಅಪಾರ್ಟ್ಮೆಂಟ್, ಕಮರ್ಶಿಯಲ್ ಕಟ್ಟಡಗಳು, ಸೈಟುಗಳ ಮೇಲೆ ಬಿಡಿಯಾಗಿ ಅಥವಾ ಒಟ್ಟಾರೆ ಹೂಡಿಕೆಯನ್ನು ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಎನ್ನಲಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣವಿರಬೇಕು ಎನ್ನುವುದು ಬಹುತೇಕ ಸತ್ಯವಾದ ಮಾತು. ಆದರೆ ರಿಯಲ್ ಎಸ್ಟೇಟನಲ್ಲಿ ಹೂಡಿಕೆ ಮಾಡುವ ಸಂಸ್ಥೆಯಲ್ಲಿ ನಾವು ಕೂಡ ಕೈಲಾದ ಮಟ್ಟಿನ ಹಣವನ್ನು ತೊಡಗಿಸಬಹುದು. ಹೀಗಾಗಿ ಮಾರುಕಟ್ಟೆಯಲ್ಲಿ ರಿಯಲ್ ಎಸ್ಟೇಟ್ ಏರಿಕೆಯಾದರೆ ಅಷ್ಟರ ಮಟ್ಟಿಗಿನ ಲಾಭವನನ್ನು ನಾವು ಕೂಡ ಮಾಡಿಕೊಳ್ಳಬಹುದು. ಇದರಲ್ಲಿ ಅಪಾಯದ ಸಾಧ್ಯತೆ ಇದೆ. ಆದರೆ ಇದ್ದುದರಲ್ಲಿ ಈಕ್ವಿಟಿಗೆ ಹೋಲಿಸಿದರೆ ಕಡಿಮೆ ಎನ್ನಬಹುದು. ಆದರೆ ಗಮನಿಸಿ ಎಲ್ಲರೂ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಲು ಬಯಸುವುದಿಲ್ಲ. ಇದಕ್ಕೆ ಕಾರಣಗಳು ಹಲವು. ಹೀಗಿದ್ದೂ ಇದೊಂದು ಉತ್ತಮ ಅಸೆಟ್ ಕ್ಲಾಸ್.

  5. ಕಮೊಡಿಟಿಸ್: ಷೇರು ಮರುಕಟ್ಟೆ ಇರುವಂತೆ ಕಮಾಡಿಟಿ ಮಾರುಕಟ್ಟೆ ಕೂಡ ಇದೆ. ಅಂದರೆ ಸಂಸ್ಥೆಯ ಷೇರುಗಳು ಮಾರಾಟವಾದಂತೆ ಇಲ್ಲಿ ವಸ್ತುಗಳ ಮಾರಾಟವಾಗುತ್ತದೆ. ಅಕ್ಕಿ, ಬೆಳೆ ಯಿಂದ ಹಿಡಿದು ಚಿನ್ನ, ಬೆಳ್ಳಿ, ನ್ಯಾಚುರಲ್ ಗ್ಯಾಸ್, ಪೆಟ್ರೋಲಿಯಿಂ ಪದಾರ್ಥಗಳು ಹೀಗೆ ಇಲ್ಲಿ ಎಲ್ಲವೂ ಟ್ರೇಡ್ ಆಗುತ್ತದೆ. ಇವುಗಳ ಕೈ ಬದಲಿಸುವಿಕೆ ಕಂಪ್ಯೂಟರ್ ಪರದೆಯಲ್ಲಿ ಆಗುತ್ತದೆ, ಭೌತಿಕ ಕೈ ಬದಲಾವಣೆ ಇರುವುದಿಲ್ಲ. ಈ ಮಾರುಕಟ್ಟೆಯಲ್ಲಿ ಕೂಡ ಏರಿಳಿತಗಳು ಸಾಮಾನ್ಯ. ಹೀಗಾಗಿ ಷೇರುಮಾರುಕಟ್ಟೆಯಲ್ಲಿ ಕಾಣಸಿಗುವ ಅಪಾಯಗಳು ಇಲ್ಲೂ ಇರುತ್ತವೆ.

  6. ಪರ್ಯಾಯ ಹೂಡಿಕೆಗಳು: ಹೆಡ್ಜ್ ಫಂಡ್, ಪ್ರೈವೇಟ್ ಈಕ್ವಿಟಿ, ಕ್ರಿಪ್ಟೋ, ತೀರಾ ಏರಿಳಿತ ಇರುವ ಲೋಹಗಳ ಮೇಲಿನ ಹೂಡಿಕೆ. ಮೊದಲೇ ಹೇಳಿದಂತೆ ಇಂದಿಗೆ ಇವೆಲ್ಲವೂ ಅಸೆಟ್ ಕ್ಲಾಸ್ ಎನ್ನಿಸಿಕೊಂಡಿವೆ. ಇವುಗಳ ಮೇಲಿನ ಹೂಡಿಕೆ ಅತಿ ಅಪಾಯ ಅಥವಾ ಹೈ ರಿಸ್ಕ್ ವಲಯದಲ್ಲಿ ಬರುತ್ತದೆ. ಮೇಲಿನ ಎಲ್ಲಾ ಹೊಡಿಕೆಗಳನ್ನು ಮಾಡಿದ ನಂತರ ಕೂಡ ಹಣವಿರುವ ಹೂಡಿಕೆದಾರರು ಇಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಇಲ್ಲಿ ಅತಿ ಅಪಾಯವಿದ್ದೂ ಕೂಡ ಹೂಡಿಕೆ ಮಾಡುವ ಉದ್ದೇಶ ಇದು ಅಷ್ಟೇ ಲಾಭವನ್ನೂ ಕೂಡ ತಂದುಕೊಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುತ್ತಾರೆ. ಕ್ರಿಪ್ಟೋ ದಲ್ಲಿ ಮಾತ್ರ ಹೂಡಿಕೆ ಮಾಡುವುದು ಬೇಡ. ಇಂದಿಗೂ ಕ್ರಿಪ್ಟೋ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಯಾರಿಗೂ ಇಲ್ಲ. ಇದು ಹೇಗೆ ಕೆಲಸ ನಿರ್ವಹಿಸುತ್ತದೆ ಎನ್ನುವುದರ ಅರಿವು ಕೂಡ ನಮಗಿಲ್ಲ. ಹೀಗಾಗಿ ಕ್ರಿಪ್ಟೋ ಇಂದಿನ ದಿನದಲ್ಲಿ ಅಸೆಟ್ ಕ್ಲಾಸ್ ಎಂದು ವರ್ಗಿಕರಿಸುವುದು ತಪ್ಪಾಗುತ್ತದೆ.

ಅಸೆಟ್ ಕ್ಲಾಸ್
ಗಳಿಕೆ-ಉಳಿಕೆ-ಹೂಡಿಕೆ ಎನ್ನುವುದು ಒಂದು ದಿನದ ವಿಷಯವಲ್ಲ! (ಹಣಕ್ಲಾಸು)

ಎಲ್ಲಿ ಎಷ್ಟು ಹಣವನ್ನು ಹೂಡಬೇಕು?

ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ಎಲ್ಲಿ ಮತ್ತು ಎಷ್ಟು ಹೂಡಿಕೆ ಮಾಡಬೇಕು ಎನ್ನುವುದಕ್ಕೆ ನಿಖರ ಸಿದ್ದಾಂತ ಅಥವಾ ಫಾರ್ಮುಲಾಗಳು ಇಲ್ಲ.

ಆದರೆ ಜಗತ್ತಿನಲ್ಲಿರುವ ಶ್ರೀಮಂತರು ಮಾಡುತ್ತಿರುವ ಹೂಡಿಕೆಯ ಆಧಾರದ ಮೇಲೆ ನಾವೊಂದಷ್ಟು ಫಾರ್ಮುಲಾವನ್ನು ಸಿದ್ದ ಪಡಿಸಬಹುದು. ಅದರ ಪ್ರಕಾರ:

1. Aggressive, ಹೆಚ್ಚು ಅಪಾಯವನ್ನು ತೆಗೆದುಕೊಳ್ಳಲು ಬಯಸುವ ಹೂಡಿಕೆದಾರರು:

  • 80 percent equities: ಅಂದರೆ ಸಂಸ್ಥೆಯ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

  • 10 percent bonds: ಅಂದರೆ ಸಾಲದ ರೂಪದಲ್ಲಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ

  • 5 percent real estate: ಜಾಗ, ಜಮೀನು ಕಟ್ಟಡ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

  • 5 percent gold: ಉಳಿದ ಹಣವನ್ನು ದುರಿತಕಾಲದ ಡಾರ್ಲಿಂಗ್ ಎಂದು ಹೆಸರಾಗಿರುವ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

2. Moderate- ಮೀಡಿಯಂ ಅಪಾಯ ಅಂದರೆ ಅತ್ತು ಹೆಚ್ಚು ಅಲ್ಲ, ಇತ್ತ ಕಡಿಮೆಯೂ ಅಲ್ಲದ ಮಧ್ಯಮ ಕ್ರಮದ ಮಾರ್ಗವನ್ನು ಅನುಸರಿಸುತ್ತಿರುವರು ಹೂಡಿಕೆಯನ್ನು ಕೆಳಗಿನ ಪ್ರಮಾಣದಲ್ಲಿ ಬೇರೆ ಬೇರೆ ಅಸೆಟ್ ಕ್ಲಾಸ್ನಲ್ಲಿ ಮಾಡುತ್ತಿದ್ದಾರೆ .

  • 70 ಪ್ರತಿಶತ ಈಕ್ವಿಟಿಯಲ್ಲಿ ಹೂಡಿದ್ದಾರೆ.

  • 20 ಪ್ರತಿಶತ ಬಾಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.

  • 5 ಪ್ರತಿಶತ ಹಣವನ್ನು ರಿಯಲ್ ಎಸ್ಟೇಟನಲ್ಲಿ ಹೂಡಿಕೆ ಮಾಡಿದ್ದಾರೆ.

  • 5 ಪ್ರತಿಶತ ಚಿನ್ನದ ಮೇಲಿನ ಹೂಡಿಕೆಗೆ ಮೀಸಲಿಟ್ಟಿದ್ದಾರೆ.

Conservative ಅಥವಾ ಕಡಿಮೆ ಅಪಾಯವನ್ನು ಬಯಸುವ ಸಿರಿವಂತರು ಕೆಳಗಿನ ಅನುಪಾತದಲ್ಲಿ ಹೂಡಿಕೆ ಮಾಡಿದ್ದಾರೆ

  • 60 ಪ್ರತಿಶತ ಈಕ್ವಿಟಿಯಲ್ಲಿ

  • 20 ಪ್ರತಿಶತ ಬಾಂಡ್ಗಳಲ್ಲಿ

  • 13 ಪ್ರತಿಶತ ರಿಯಲ್ ಎಸ್ಟೇಟನಲ್ಲಿ

  • 7 ಪ್ರತಿಶತ ಚಿನ್ನದ ಮೇಲೆ

ಯಾವ ಫಾರ್ಮುಲಾ ಬೆಸ್ಟ್? ಎಲ್ಲಿ ಹೂಡಿಕೆ ಮಾಡಿದರೆ ಸೇಫ್?

ಇದು ಉತ್ತಮ ಮಾರ್ಗ, ಬೆಸ್ಟ್ ಫಾರ್ಮುಲಾ ಎನ್ನವುದು ಯಾವುದೂ ಇಲ್ಲ. ಮೇಲಿನ ಅನುಪಾತದಲ್ಲಿ ಬಹಳಷ್ಟು ಶ್ರೀಮಂತರು ಹೂಡಿಕೆ ಮಾಡಿದ್ದಾರೆ, ಗೆದ್ದಿದ್ದಾರೆ ಹೀಗಾಗಿ ಇವುಗಳನ್ನು ಸಮಾಜ ಅನುಸರಿಸಲು ತೊಡಗಿದೆ. ಸೇಫ್ ಎನ್ನುವುದು ಕೂಡ ಭ್ರಮೆ. ಈ ಭೂಮಿಯ ಮೇಲೆ ಯಾವುದೂ ಸುರಕ್ಷಿತ ಎನ್ನುವಂತಿಲ್ಲ. ಬ್ಯಾಂಕಿನಲ್ಲಿ ಇಟ್ಟ ಹಣ ಕೂಡ ಕೇವಲ ಐದು ಲಕ್ಷದ ವರೆಗೆ ಮಾತ್ರ ಸೇಫ್ , ಏಕೆಂದರೆ ಅಷ್ಟು ಹಣಕ್ಕೆ ಮಾತ್ರ ವಿಮೆಯಿದೆ. ಇದರರ್ಥ ಉಳಿದದ್ದು ಅಪಾಯಕ್ಕೆ ತೆರೆದುಕೊಂಡಿದೆ. ಹೀಗಾಗಿ ಇದ್ದುದರಲ್ಲೇ ಅಳೆದುತೂಗಿ ಅಪಾಯದ ಮಟ್ಟವನ್ನು ಗ್ರಹಿಸಿ ಹೂಡಿಕೆ ಮಾಡುವುದು ಜಾಣತನ. ಮೇಲಿನ ಎಲ್ಲವುಗಳನ್ನು ಗಮನಿಸಿ ಮತ್ತು ವೈಯಕ್ತಿಕ ಅನುಭವದ ಆಧಾರದ ಮೇಲೆ ಹೂಡಿಕೆಯ ಅನುಪಾತ ಕೆಳಗಿನ ರೀತಿಯಲಿದ್ದರೆ ಉತ್ತಮ .

  • 50 ಪ್ರತಿಶತ ಈಕ್ವಿಟಿ

  • 20 ಪ್ರತಿಶತ ಬಾಂಡ್

  • 25 ಪ್ರತಿಶತ ಹಣವನ್ನು ರಿಯಲ್ ಎಸ್ಟೇಟ್

  • 5 ಪ್ರತಿಶತ ಚಿನ್ನ

ಅಸೆಟ್ ಕ್ಲಾಸ್
ಭಾರತ ಸಿರಿವಂತವಾಗಿದೆ, ಶ್ರೇಷ್ಠವಾಗುವುದು ಬಾಕಿಯಿದೆ! (ಹಣಕ್ಲಾಸು)

ಕೊನೆಮಾತು: ಇಂದಿಗೆ ಅಸೆಟ್ ಕ್ಲಾಸ್ ನಾಳೆಗೆ ನಮ್ಮ ಪಾಲಿಗೆ ಲಿಯಬಿಲಿಟಿ ಆಗಬಹುದು ಹೀಗಾಗಿ ಇವುಗಳಲ್ಲಿ ಹೂಡಿಕೆ ಮಾಡಿದ ಮೇಲೆ ಸಮಯದಿಂದ ಸಮಯಕ್ಕೆ ಇದನ್ನು ಗಮನಿಸುತ್ತಿರಬೇಕು. ಅಪಾಯ ಬದುಕಿನ ಅಂಗ ಎನ್ನುವುದನ್ನು ಮನಗಾಣಬೇಕು. ಚಾನ್ಸ್ ತೆಗೆದುಕೊಳ್ಳಬೇಕು. ಲಾಟರಿ ಟಿಕೆಟ್ ಖರೀದಿ ಮಾಡದೆ ಲಾಟರಿ ಮೊತ್ತ ನಮಗೆ ಸಿಗಲಿ ಎಂದು ಬಯಸುವುದರಿಂದ ಏನೂ ಪ್ರಯೋಜನವಿಲ್ಲ. ಹಾಗೆ ರಿಸ್ಕ್ ಇಲ್ಲದ ಹೂಡಿಕೆ, ರಿಟರ್ನ್ ಕೂಡ ಇಲ್ಲ. ಇರುವ ಅಸೆಟ್ ಕ್ಲಾಸ್ನಲ್ಲಿ ನಮಗೆ ಯಾವುದು ಹೆಚ್ಚು ಲಾಭದಾಯಕ ಎನ್ನವುದರ ಮೇಲೆ ಹೂಡಿಕೆ ಮಾಡಬೇಕು. ಬೆಸ್ಟ್ ಫಾರ್ಮುಲಾ ಎನ್ನುವುದು ಇಲ್ಲಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com