ಗಳಿಕೆ-ಉಳಿಕೆ-ಹೂಡಿಕೆ ಎನ್ನುವುದು ಒಂದು ದಿನದ ವಿಷಯವಲ್ಲ! (ಹಣಕ್ಲಾಸು)

ಹಣಕ್ಲಾಸು-394-ರಂಗಸ್ವಾಮಿ ಮೂಕನಹಳ್ಳಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಮೇಲೆ ಅಣುದಾಳಿ ಆಗಿದ್ದು ಎಲ್ಲರಿಗೂ ತಿಳಿದ ವಿಷಯ. ಅಂದಿನ ಭೀಕರತೆಯನ್ನು ಹೋಗಲಾಡಿಸಿಕೊಂಡು ಇಂದಿಗೆ ಜಪಾನ್ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆ ಎನ್ನಿಸಿಕೊಂಡಿದೆ. ನಾವು ಭಾರತ ಐದನೇ ದೊಡ್ಡ ಆರ್ಥಿಕತೆಯಾಗಿದೆ ಎಂದು ಬೀಗುತ್ತೇವೆ. ಅದು ತಪ್ಪಲ್ಲ. ಆದರೆ ಜಪಾನ್ ಜನಸಂಖ್ಯೆಯಲ್ಲಿ, ಗಾತ್ರದಲ್ಲಿ ಭಾರತದ ಅತಿ ದೊಡ್ಡ ರಾಜ್ಯಕ್ಕಿಂತ ಸ್ವಲ್ಪ ದೊಡ್ಡದಿದೆ ಅಷ್ಟೇ.

ಅಂದರೆ ನಾವು ಲೆಕ್ಕಾಚಾರಕ್ಕೆ ಹೊರಟರೆ ಜಪಾನ್ ನಮ್ಮ ಮುಂದೆ ಏನೇನೂ ಅಲ್ಲ. ಆದರೆ ಸಂಪತ್ತಿನಲ್ಲಿ ಅವರು ನಮಗಿಂತ ಎರಡು ಹೆಜ್ಜೆ ಮುಂದಿದ್ದಾರೆ. ತಲಾದಾಯದ ಲೆಕ್ಕದಲ್ಲಿ ನೋಡಿದರೆ ಕನಿಷ್ಠ ಇನ್ನೊಂದು ಐವತ್ತು ವರ್ಷವಾದರೂ ನಾವು ಅವರನ್ನು ಸರಿಗಟ್ಟಲಾರೆವು. ಹೀಗೇಕೆ? ಗಮನಿಸಿ ಜಪಾನೀಯರ ಮನಸ್ಥಿತಿ ಇದಕ್ಕೆ ಕಾರಣ. ಅವರು ಜಗತ್ತನ್ನು, ಪರಿಸ್ಥಿತಿಯನ್ನು, ಇತರರನ್ನು ದೊಷಿಸುತ್ತ ಕೊರಲಿಲ್ಲ. ಬದಲಿಗೆ ಕಷ್ಟಪಟ್ಟು ಕೆಲಸ ಮಾಡುತ್ತಾ ಹೋದರು. ಉಳಿಸುತ್ತ ಹೋದರು. ಅದನ್ನು ಮರು ಹೂಡಿಕೆ ಮಾಡುತ್ತಾ ಹೋದರು.

12 ಕೋಟಿಗೂ ಸ್ವಲ್ಪ ಹೆಚ್ಚಿರುವ ಜಪಾನ್ ಇಂದು ವಿಶ್ವ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿದೆ. ಇದೆ ರೀತಿ ಚೀನಾ ಕೂಡ 80 ರ ದಶಕದಲ್ಲಿ ಭಾರತ ಮತ್ತು ಚೀನಾದ ಆರ್ಥಿಕತೆ ಹೆಚ್ಚು ಕಡಿಮೆ ಒಂದೇ ಇತ್ತು. ಇಂದಿಗೆ ಚೀನಾದ ಆರ್ಥಿಕತೆ ಭಾರತಕ್ಕಿಂತ ಐದು ಪಟ್ಟು ಹೆಚ್ಚಿದೆ. ಚೀನಾ, ಜಪಾನ್ ಸಂಪತ್ತು ಸೃಷ್ಟಿಸಿಕೊಂಡ ವೇಗ ಜಗತ್ತನ್ನು ಅಚ್ಚರಿಗೊಳಿಸಿದೆ. ಹಾಗೆಯೇ ನಮ್ಮಲ್ಲಿ ರಾಜಸ್ತಾನ್ ಮತ್ತು ಗುಜರಾತ್ ರಾಜ್ಯಗಳನ್ನು ನೋಡಿ, ಅಲ್ಲಿನ ಮಾರ್ವಾಡಿ ಮತ್ತು ಸಿಂಧಿ ಸಮುದಾಯ ಅತಿ ಹೆಚ್ಚಿನ ಶ್ರೀಮಂತರನ್ನು ದೇಶಕ್ಕೆ ನೀಡಿದೆ. ಹಾಗೆ ನೋಡಲು ಹೋದರೆ ಈ ಎರಡೂ ರಾಜ್ಯಗಳು ಬೇರೆ ರಾಜ್ಯಗಳಿಗಿಂತ ನೈಸರ್ಗಿಕ ಸಂಪನ್ಮೂಲದಲ್ಲಿ, ಮೂಲಭೂತ ಸೌಕರ್ಯದಲ್ಲಿ ಹಿಂದಿದ್ದ ರಾಜ್ಯಗಳು. ಅಂದರೆ ಇಂದಿಗೆ ಗುಜರಾತ್ ತನ್ನ ನಕ್ಷೆಯನ್ನೇ ಬದಲಿಸಿಕೊಂಡಿದೆ. ಇಂತಹ ಬದಲಾವಣೆಗೆ ಕಾರಣವೇನು? ಅಲ್ಲಿನ ಜನ ಭಾರತದ ಇತರ ರಾಜ್ಯಗಳ ಜನರಿಗಿಂತ ಹೆಚ್ಚಿನ ತಲಾದಾಯವನ್ನು ಹೊಂದಲು ಕಾರಣವೇನು? ಉತ್ತರ ಮಾತ್ರ ಸೇಮ್. ಅವರ ಮನಸ್ಥಿತಿ.

ಉದ್ಯಮ ಕಟ್ಟುವ ಮನಸ್ಥಿತಿ, ಅಪಾಯವನ್ನು ಎದುರಿಸಿ ನಿಲ್ಲುವ ಮನೋಭಾವ, ಆರಂಭದ ದಿನಗಳಲ್ಲಿ ಕಷ್ಟವನ್ನು ಸಹಿಸುವ ಹುಮ್ಮಸ್ಸು ಇವೆಲ್ಲವೂ ಇದ್ದರೆ ಶ್ರೀಮಂತರಾಗುವುದು ಕಷ್ಟವಲ್ಲ. ಆಸೆ -ನಂಬಿಕೆ -ಕನಸು -ಪ್ಲಾನಿಂಗ್ ಮತ್ತು ಅದನ್ನು ಕಾರ್ಯ ರೂಪಕ್ಕೆ ತರಲು ಶ್ರಮಿಸುವ ಮನೋಭಾವ ಎಂತಹವರನ್ನು ಕೂಡ ಬಡತನದಿಂದ ಹೊರತರಬಲ್ಲದು. ನನ್ನ ಪ್ರಕಾರ ಬಡತನ ಎನ್ನುವುದು ಮನಸ್ಥಿತಿ. ನಾವು ನಮ್ಮ ಚಿಂತನೆಯನ್ನು, ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದೆ ಶ್ರೀಮಂತಿಕೆಯ ಬಗ್ಗೆ ಯೋಚಿಸಲು ಕೂಡ ಸಾಧ್ಯವಿಲ್ಲ. ಮೊದಲಿಗೆ ನಮ್ಮ ಇಂದಿನ ಸ್ಥಾನವೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ಅದು ತಿಳಿದುಕೊಂಡರೆ ಎಲ್ಲಿಗೆ ಹೋಗಬೇಕು ಎನ್ನುವುದನ್ನು ಗುರುತಿಸುವುದು ಸುಲಭ.

ನಿಮ್ಮ ವಯಸ್ಸನ್ನು ನಿಮ್ಮ ವಾರ್ಷಿಕ ಆದಾಯದಿಂದ ಗುಣಿಸಿ. ಬಂದ ಫಲಿತಾಂಶವನ್ನು 10 ರಿಂದ ಭಾಗಿಸಿ.ಭಾಗಲಬ್ಧ ನಿಮ್ಮ ಇಂದಿನ ನೆಟ್ ವರ್ಥ್ ಎಷ್ಟು ಎಂದು ಹೇಳುತ್ತದೆ.  ಪೂರ್ವಾರ್ಜಿತ ಆಸ್ತಿಯನ್ನು ಪರಿಗಣಿಸಬೇಡಿ. ಉದಾಹರಣೆ ವ್ಯಕ್ತಿಯ ವಯಸ್ಸು 35, ವಾರ್ಷಿಕ ಆದಾಯ 10 ಲಕ್ಷ. 10 ಲಕ್ಷ *35 = 3.5 ಕೋಟಿ ಇದನ್ನು 10 ರಿಂದ ಭಾಗಿಸಿದರೆ ಸಿಗುವುದು 35 ಲಕ್ಷ. ಕನಿಷ್ಠ ಇಷ್ಟು ಸಂಪತ್ತು ನಿಮ್ಮ ಬಳಿ ಇರಬೇಕು. ನಿಮ್ಮ ವಯಸ್ಸು ಮತ್ತು ಆದಾಯಕ್ಕೆ ತಕ್ಕಂತೆ ಲೆಕ್ಕಾಚಾರ ಮಾಡಿಕೊಳ್ಳಿ.ಮುಂದಿನ ದಾರಿ ನಿರ್ಧರಿಸಿ.

ಬಡ್ಡಿ ಮತ್ತು ಚಕ್ರ ಬಡ್ಡಿಯ ಶಕ್ತಿಯನ್ನು ನಾವು ಸರಿಯಾಗಿ ತಿಳಿದುಕೊಂಡು ನಮ್ಮ ಪರವಾಗಿ ದುಡಿಸಿಕೊಳ್ಳಲು ಶುರು ಮಾಡಿದರೆ ಸಾಕು, ಬಡತನ ನಮ್ಮ ಹತ್ತಿರವೂ ಸುಳಿಯದು. ಚಕ್ರಬಡ್ಡಿಯ ಶಕ್ತಿಯನ್ನು ವಿವರಿಸುವ ಒಂದು ಕಥೆಯನ್ನು ಹೇಳುವೆ.

ಒಂದೂರಿನಲ್ಲಿ ಒಬ್ಬ ರಾಜನಿದ್ದಂತೆ, ಅವನು ಬಹಳ ಉದಾರಿ ಎಂದು ಪ್ರಸಿದ್ಧನಾಗಿದ್ದ. ತನ್ನ ಆಸ್ಥಾನಕ್ಕೆ ಬಂದು ಕಲೆಯನ್ನು ಪ್ರದರ್ಶಿಸಿದ ಯಾವುದೇ ಕಲೆಗಾರರನ್ನೂ ಆತ ಏನು ಬೇಕು ಎಂದು ಕೇಳುವುದು ಮತ್ತು ಅವರು ಕೇಳಿದ್ದು ನೀಡುವುದು ಆತನ ಸಂಪ್ರದಾಯ. ಹೀಗಾಗಿ ರಾಜ ಬಹಳ ಪ್ರಸಿದ್ಧನೂ ಜನಾನುರಾಗಿಯೂ ಆಗಿದ್ದನು. ಹೀಗಿರುವಾಗ ಒಮ್ಮೆ ಅಲ್ಲಿಗೆ ಒಬ್ಬ ಕೊಳಲು ವಾದಕ ಬರುತ್ತಾನೆ. ರಾಜನ ಆಸ್ಥಾನದಲ್ಲಿ ಕೊಳಲು ನುಡಿಸುತ್ತಾನೆ. ರಾಜನಿಗೆ ಆತನ ಕೊಳಲುವಾದನ ಬಹಳ ಇಷ್ಟವಾಗುತ್ತದೆ. ಆತ ಕಲಾವಿದನನ್ನು ಕುರಿತು ಏನು ಬೇಕು ಎನ್ನುವ ಸಾಮಾನ್ಯ ಪ್ರಶ್ನೆಯನ್ನು ಇಡುತ್ತಾನೆ. ಆಗ ಕೊಳಲುವಾದಕ ಮಹಾಸ್ವಾಮಿ ಹೆಚ್ಚಿನದೇನೂ ಬೇಡ, ನಿಮ್ಮ ಮುಂದಿರುವ ಚೆಸ್ ಬೋರ್ಡ್ನಲ್ಲಿ 64 ಮನೆಗಳಿವೆ, ಅದರಲ್ಲಿನ ಮೊದಲ ಮನೆಗೆ ಒಂದು ಅಕ್ಕಿಕಾಳು ಹಾಕಿ, ಎರಡನೇ ಮನೆಗೆ ಅದನ್ನು ದುಪಟ್ಟು ಮಾಡಿ ಅಂದರೆ ಎರಡು ಕಾಳು ಹಾಕಿ, ಹಾಗೆಯೆ ಮೂರನೇ ಮನೆಗೆ ಎರಡನೇ ಮನೆಗೆ ಹಾಕಿದ್ದನ್ನು ದುಪ್ಪಟ್ಟು ಮಾಡಿ ಅಂದರೆ ನಾಲ್ಕು ಕಾಳು ಹಾಕಿ, ಹೀಗೆ 64 ಮನೆಗಳಿಗೂ ಹಾಕಿ ಎಷ್ಟು ಬರುತ್ತದೋ ಅಷ್ಟನ್ನು ನೀಡಿ ಎನ್ನುತ್ತಾನೆ.

ರಾಜನಿಗೆ ಕಲಾವಿದನ ಮೇಲೆ ಕರುಣೆ ಬರುತ್ತದೆ, ಪಾಪದವನು ಲೆಕ್ಕಾಚಾರ ಬರುವುದಿಲ್ಲ, ಕೆಲವು ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಏನು ಮಾಡುತ್ತಾನೆ ಎಂದು ಕೊಂಡು, ನಿನಗಿನ್ನೊಂದು ಅವಕಾಶ ಕೊಡುವೆ ಬೇಕಾದ್ದು ಕೇಳು ಎನ್ನುತ್ತಾನೆ. ರಾಜನ ಮಾತಿಗೆ ಕಲಾವಿದ ಹಸನ್ಮುಖದಿಂದ ನನಗೆ ಹೆಚ್ಚಿನದು ಬೇಡ, ಕೇಳಿದಷ್ಟು ಕೊಟ್ಟರೆ ಸಾಕು ಎನ್ನುತ್ತಾನೆ. ರಾಜ ಮರು ಮಾತನಾಡದೆ ಆಗಲಿ ಎನ್ನುತ್ತಾನೆ.

ಸ್ವಲ್ಪ ವೇಳೆಯಲ್ಲಿ ಮಹಾಮಂತ್ರಿ ಓಡಿ ಬರುತ್ತಾನೆ, ಮಹಸ್ವಾಮಿ ನಮ್ಮ ಉಗ್ರಾಣದಲ್ಲಿರುವ ಎಲ್ಲಾ ಧವಸವನ್ನು ಹಾಕಿದರೂ ಕೂಡ ನಾವು 64 ಮನೆಯನ್ನು ತುಂಬಲಾರೆವು ಎನ್ನುತ್ತಾನೆ. ರಾಜನಿಗೆ ಅಚ್ಚರಿಯಾಗುತ್ತದೆ, ಅದೇಗೆ ಸಾಧ್ಯ ಲೆಕ್ಕ ಹಾಕಿ ಎಂದು ಅಪ್ಪಣೆ ಕೊಡಿಸುತ್ತಾನೆ. ನಾವು ಕೂಡ ಲೆಕ್ಕ ಮಾಡೋಣ ಬನ್ನಿ. ಮೊದಲ ಮನೆಯಲ್ಲಿ ಒಂದು ಅಕ್ಕಿಕಾಳು ಎರಡನೇ ಮನೆಗೆ ಎರಡು, ಮೂರನೇ ಮನೆಗೆ ನಾಲ್ಕು, ನಾಲ್ಕನೇ ಮನೆಗೆ ಎಂಟು, ಐದನೇ ಮನೆಗೆ ಹದಿನಾರು, ಆರನೇ ಮನೆಗೆ ಮೂವತ್ತೆರೆಡು..., ಹಗೆ 64 ನೇ ಮನೆಗೆ ಹಾಕ ಬೇಕಾದ ಅಕ್ಕಿ ಕಾಳು ಎಷ್ಟು ಗೊತ್ತೇ? 18,446,744,073,709,551,615! ಇದರ ಒಟ್ಟು ತೂಕವೆಷ್ಟಾಗಬಹುದು? ಎನ್ನುವ ಅಂದಾಜು ನಿಮಗಿದೆಯೇ? 461,168,602,000 ಮೆಟ್ರಿಕ್ ಟನ್ ಅಂದರೆ ಇದನ್ನು ಗುಡ್ಡೆಯಾಗಿ ಹಾಕಿದರೆ ಅದು ನಮ್ಮ ಮೌಂಟ್ ಎವರೆಸ್ಟ್ ಪರ್ವತಕ್ಕಿಂತ ಅತಿ ದೊಡ್ಡದಾಗುತ್ತದೆ.

ಇದು ಚಕ್ರಬಡ್ಡಿ- ಕಾಂಪೌಂಡ್ ಇಂಟರೆಸ್ಟ್ ತಾಕತ್ತು. ಮೇಲ್ನೋಟಕ್ಕೆ ಇದು ಅರಿವಿಗೆ ಬರುವುದಿಲ್ಲ, ಜೊತೆಗೆ ಮೊದಲ ವರ್ಷಗಳಲ್ಲಿ ಇದರ ಯುಕ್ತಿಯೂ ನಮಗೆ ತಿಳಿಯುವುದಿಲ್ಲ. ನಿಧಾನವಾಗಿ ಪರಾಮರ್ಶಿಸಲು ಶುರು ಮಾಡಿದಾಗ ಅದರ ಅಗಾಧತೆ ಗೊತ್ತಾಗುತ್ತದೆ. ಚಕ್ರಬಡ್ಡಿ ಎನ್ನುವುದು ಎರಡು ಅಲಗಿನ ಖತ್ತಿ. ಇದನ್ನು ನಮ್ಮ ಒಳಿತಿಗೆ ಬಳಸಿಕೊಂಡರೆ ಕೋಟ್ಯಧಿಪತಿಯಾಗುತ್ತೇವೆ, ಇದನ್ನು ನಾವು ಸಾಲಕ್ಕೆ ಬಡ್ಡಿ ಕಟ್ಟಲು ಬಳಸಿಕೊಂಡರೆ ಆಗ ಬೀದಿಗೆ ಬರುತ್ತೇವೆ.

ಚಕ್ರಬಡ್ಡಿ ಎನ್ನುವ ಪದವನ್ನ ಒಂದಲ್ಲ ಒಂದು ಬಾರಿ ನಾವೆಲ್ಲಾ ಕೇಳಿದವರೇ. ಆದರೆ ಅದೇನು ಅದು ಹೇಗೆ ಕಾರ್ಯ ನಿರ್ವಹಿಸುತ್ತೆ ಎನ್ನುವುದರ ಬಗ್ಗೆ ಹೆಚ್ಚಾಗಿ ಗಮನಕೊಟ್ಟವರಲ್ಲ. ಈ ಚಕ್ರ ಬಡ್ಡಿಗೆ ಇರುವ ಶಕ್ತಿ ತಿಳಿದರೆ ಮತ್ತು ಅದನ್ನ ಸರಿಯಾಗಿ ಉಪಯೋಗಿಸಿಕೊಂಡರೆ ಅದು ನಿಮ್ಮನ್ನ ಕೋಟ್ಯಾಧಿಪತಿ ಮಾಡುತ್ತದೆ. ಕನ್ನಡಿಗರು ಅಪಾಯಕ್ಕೆ ಹೆದರುತ್ತಾರೆ. ಅವರು ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ಜನ ಎನ್ನುವ ಮಾತಿದೆ. ಗುಜರಾತಿ, ರಾಜಸ್ತಾನದ ಜನರನ್ನು ಗಮನಿಸಿದರೆ ಈ ಮಾತು ಸತ್ಯ ಎನ್ನಿಸುತ್ತದೆ. ಆದರೆ ಇತ್ತೀಚಿಗೆ ಕನ್ನಡಿಗರು ಈ ಹಣೆಪಟ್ಟಿಯಿಂದ ಹೊರಬರಲು ಪ್ರಯತ್ನವನ್ನು ನಡೆಸುತ್ತಿದ್ದಾರೆ ಎನ್ನುವುದು ಉತ್ತಮ ಬೆಳವಣಿಗೆ.ಆದರೂ ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳಾಗಬೇಕು. ಬಹಳಷ್ಟು ದಾರಿ ಸಾಗಬೇಕಿದೆ. ನಾವೆಲ್ಲರೂ ಶ್ರೀಮಂತರಾಗಬೇಕು. ಒಳಿತನ್ನು, ಉತ್ತಮವಾದುದನ್ನು ಪಡೆಯುವುದು ನಮ್ಮೆಲ್ಲರ ಹಕ್ಕು. ಪ್ರಯತ್ನ ಬೇಕು, ಜೊತೆಗೆ ಮನಸ್ಥಿತಿ ಬದಲಾವಣೆ ಕೂಡ ಅವಶ್ಯಕ.

ಕೊನೆಮಾತು: ಗಳಿಕೆ -ಉಳಿಕೆ -ಹೂಡಿಕೆ ಎನ್ನುವುದು ಒಂದು ದಿನದ ವಿಷಯವಲ್ಲ, ಅಥವಾ ಇದನ್ನು ನಾನು ಕಲಿತೆ, ಅಲ್ಲಿಗೆ ಮುಗಿಯಿತು ಎನ್ನುವಂತಿಲ್ಲ. ಫೈನಾನ್ಸಿಯಲ್ ಲಿಟ್ರಸಿ ಎನ್ನುವುದು ಪ್ರೋಸೆಸ್. ಇದು ಕೊನೆಯಿಲ್ಲದ ಪ್ರಕ್ರಿಯೆ. ತಾಳ್ಮೆ -ಸಂಯಮ -ಶಿಸ್ತು ಇವುಗಳು ದೀರ್ಘಾವಧಿಯಲ್ಲಿ ಇದನ್ನು ಪಾಲಿಸಿದ ಎಲ್ಲರನ್ನೂ ಕೋಟ್ಯಧಿಪತಿ ಮಾಡುತ್ತದೆ ಇದರಲ್ಲಿ ಯಾವುದೇ ಸಂಶಯವಿಲ್ಲ.

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com