ಈ ಆರು ಗುಣಗಳು ಇದ್ದರೆ ಶ್ರೀಮಂತರಾಗುವುದು ಕಷ್ಟವೇನಲ್ಲ! (ಹಣಕ್ಲಾಸು)

ಶ್ರೀಮಂತರು ನಿಜವಾದ ಶ್ರೀಮಂತರು ಎಂದಿಗೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಬದಲಿಗೆ ಅವರು ತಮ್ಮ ಕನಸಿನ ಹಿಂದೆ ಓಡುವುದನ್ನು ಉಸಿರಿರುವವರೆಗೆ ನಿಲ್ಲಿಸುವುದಿಲ್ಲ. (ಹಣಕ್ಲಾಸು-409)
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರonline desk

ನಿಮಗೆ ನಮ್ಮ ಸಮಾಜದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ನೀವೇನೇ ಮಾಡಿದರೂ ಅದರಲ್ಲಿ ತಪ್ಪು ಹುಡಕುವುದು, ಇದು ಸಾಧ್ಯವಿಲ್ಲ ಎನ್ನುವುದು ಸಾಮಾನ್ಯವಾಗಿ ಎದುರಾಗುವ ಮಾತುಗಳು. ಎಲ್ಲರೂ ಸಾಹುಕಾರರಾದರೆ ಕೆಲಸ ಮಾಡುವವರು ಯಾರು? ಎನ್ನುವ ಪ್ರಶ್ನೆ ಕೂಡ ಇದೆ ಸಮಾಜ ನನ್ನನ್ನು ಕೇಳಿದೆ.

ಆದರೆ ಈ ರೀತಿಯ ಮಾತುಗಳನ್ನು ಆಡುವವರು ಒಂದು ಅಂಶವನ್ನು ಮರೆತಿದ್ದಾರೆ. ಶ್ರೀಮಂತರು ನಿಜವಾದ ಶ್ರೀಮಂತರು ಎಂದಿಗೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಬದಲಿಗೆ ಅವರು ತಮ್ಮ ಕನಸಿನ ಹಿಂದೆ ಓಡುವುದನ್ನು ಉಸಿರಿರುವವರೆಗೆ ನಿಲ್ಲಿಸುವುದಿಲ್ಲ.

ನಿಜವಾದ ಶ್ರೀಮಂತರ ಪ್ರಮುಖ ಗುಣಗಳಲ್ಲಿ ಮುಖ್ಯವಾಗಿ ಈ 6 ಗುಣಗಳು ಅವರನ್ನು ಜಗತ್ತಿನ ಜನರಿಂದ ಬೇರ್ಪಡಿಸಿ ವಿಶೇಷವಾಗಿ ನಿಲ್ಲಿಸುತ್ತದೆ. ಇದನ್ನು ಕೇವಲ ಓದುವುದರಿಂದ ಖಂಡಿತ ಶ್ರೀಮಂತರಾಗಲು ಸಾಧ್ಯವಿಲ್ಲ. ಈ ಗುಣಗಳನ್ನು ನಮ್ಮದಾಗಿಸಿಕೊಳ್ಳಬೇಕು.

  • ಸ್ವತಂತ್ರ ಆಲೋಚನೆ: ಜಗತ್ತಿನಲ್ಲಿ ಇಂದು ಅತ್ಯಂತ ಕಡಿಮೆ ಇರುವುದು ಈ ಗುಣ. ಎಲ್ಲರಿಗೂ ಒಂದು ಸಕ್ಸಸ್ ಫಾರ್ಮುಲಾ ಬೇಕು. ರಾತ್ರಿ ಕಳೆದು ಬೆಳಗಾಗುವುದರೊಳಗೆ ಶ್ರೀಮಂತರಾಗಬೇಕು ಎನ್ನುವ ಹಪಹಪಿಕೆ ಇಂದು ನಾವು ಸಮಾಜದಲ್ಲಿ ಕಾಣಬಹುದು. ಸಮಾಜದ ಒಂದು ಭಾಗದಲ್ಲಿ ಒಂದು ಅಂಶ ಗೆಲುವು ಕಂಡರೆ ಸಾಕು ಅದನ್ನು ಕಾಪಿ ಮಾಡಲು ದೊಡ್ಡ ಸೈನ್ಯ ಸಿದ್ದವಾಗಿರುತ್ತದೆ. ಆ ಭಾಗದಲ್ಲಿ ಆ ಅಂಶ ಕೆಲಸ ಮಾಡಿದೆ ಹೀಗಾಗಿ ಅದು ಗೆದ್ದಿದೆ ಎನ್ನುವುದನ್ನು ನಾವು ಮರೆಯುತ್ತೇವೆ. ಅದನ್ನು ನಕಲು ಮಾಡಲು ಪ್ರಾರಂಭಿಸುತ್ತೇವೆ. ಹೋಗಲಿ ನಾವಿರುವ ಸಮಾಜಕ್ಕೆ ಅದರ ಅವಶ್ಯಕತೆಯಿದೆಯೇ , ಅಥವಾ ಸಮಾಜಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳೋಣ ಎನ್ನುವ ವ್ಯವಧಾನ ಕೂಡ ಇಂದು ಮರೆಯಾಗುತ್ತಿದೆ. ಎಲ್ಲರಿಗೂ ಬೇಕಿರುವುದು ಇನ್ಸ್ಟಂಟ್ ಗ್ರಾಟಿಫಿಕೇಷನ್ ತಕ್ಷಣ ಹೆಸರು , ಹಣ ಬಂದು ಬಿಡಬೇಕು. ಎಲ್ಲವೂ ಸಾಧ್ಯ ಅದಕ್ಕೆ ಸ್ವತಂತ್ರ ಚಿಂತನೆಯನ್ನು ಬೆಳಸಿಕೊಳ್ಳಬೇಕು. ಒರಿಜಿನಲ್ ಥಿಂಕಿಂಗ್ ನಮ್ಮದಾಗಿರಬೇಕು. ಷೇರು ಮಾರುಕಟ್ಟೆಯಲ್ಲಿ ನೂರಾರು ಸರ್ವಿಸ್ ಪ್ರೊವೈಡರ್ಸ್ ಇದ್ದಾಗ ಹೊಸದಾಗಿ ಬಂದ ಜೀರೊದ ಮಾರ್ಕೆಟ್ ಆವರಿಸಿಕೊಂಡ ಪರಿಯನ್ನು ನೀವೇ ನೋಡಿ. ಇತರೆ ಸೇವೆ ನೀಡುವ ಸಂಸ್ಥೆಗಳು ನೀಡದೆ ಇದ್ದ ಮತ್ತು ಸೇವೆಯಲ್ಲಿ ಇದ್ದ ಗ್ಯಾಪ್ ಬಳಸಿಕೊಂಡು ಅವರು ಬೆಳೆದ ಪರಿ ಜಗತ್ತಿಗೆ ಅಚ್ಚರಿ ಎನ್ನಿಸಬಹುದು. ಆದರೆ ಒಂದಷ್ಟು ಪ್ಲಾನಿಂಗ್, ಒಂದಷ್ಟು ಸೂಕ್ಷ್ಮ ದೃಷ್ಟಿ ಎಲ್ಲರಿಗೂ ಅವರ ದಾರಿಯಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ. ಅದೆಷ್ಟೇ ಲಾಭದಾಯಕವಾಗಿರಲಿ ನಕಲು ಬೇಡ. ಅದೆಷ್ಟೇ ಕಷ್ಟದ ದಾರಿ ನಮ್ಮದಾಗಲಿ ಸ್ವತಂತ್ರ ಚಿಂತನೆ ನಮ್ಮದಾಗಿರಲಿ. ಏಕೆಂದರೆ ದೀರ್ಘಕಾಲದಲ್ಲಿ ಗೆಲುವಿನ ಜೊತೆಗೆ ಆತ್ಮಗೌರವ, ಆತ್ಮವಿಶ್ವಾಸವೂ ಹೆಚ್ಚುತ್ತದೆ. ಎಲ್ಲಕ್ಕೂ ಮಿಗಿಲಾಗಿ ಬೆಲೆ ಕಟ್ಟಲಾಗದ ಸೋಶಿಯಲ್ ಕ್ಯಾಪಿಟಲ್ ನಮ್ಮದಾಗುತ್ತದೆ.

  • ದೂರದರ್ಶಿತ್ವ: ಜನ ಸಾಮಾನ್ಯರು ಇಂದಿನ ಲಾಭ ಅಂದರೆ ತಕ್ಷಣದ ಲಾಭವನ್ನು ಮಾತ್ರ ನೋಡುತ್ತಾರೆ. ವಿಷನರಿಗಳು ಮುಂದಿನ ಹತ್ತಾರು ವರ್ಷದ ಸಾಧ್ಯತೆಗಳನ್ನು ಲೆಕ್ಕ ಹಾಕುತ್ತಾರೆ. ಇಂದಿನ ದಿನದಲ್ಲಿ ಅದು ನಷ್ಟದ ಕೆಲಸ ಎನ್ನಿಸಿದರೂ ಸಹ, ಮುಂಬರುವ ವರ್ಷಗಳಲ್ಲಿ ಅದರಲ್ಲಿರುವ ಸಾಧ್ಯತೆಗಳನ್ನು ಮನಗಾಣುವ ಶಕ್ತಿಗೆ ದೂರದರ್ಶಿತ್ವ ಎನ್ನುತ್ತೇವೆ. ಇಂದು ನಮ್ಮ ಸುತ್ತಮುತ್ತಲಿರುವ ಶ್ರೀಮಂತರನ್ನು, ಕೈಗಾರಿಕೋದ್ಯಮಿಗಳನ್ನು ಅಥವಾ ಇನ್ನ್ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದವರು ಎಂದುಕೊಂಡವರನ್ನು ಒಮ್ಮೆ ಗಮನಿಸಿ ನೋಡಿ . ಅವರೆಲ್ಲರೂ ಈ ಗುಣವನ್ನು ಹೊಂದಿರುವುದು ವೇದ್ಯವಾಗುತ್ತದೆ. ಜಗತ್ತಿನಲ್ಲಿ ಮುಂಬರುವ ದಿನಗಳಲ್ಲಿ ಆಗುವ ಬದಲಾವಣೆಯನ್ನು ತಮ್ಮ ಸಾಮಾನ್ಯಜ್ಞಾನ, ವೃತ್ತಿಪರ ಜ್ಞಾನ ಮತ್ತು ಜಾಗತಿಕ ಒಳನೋಟಗಳ ಸಹಾಯದಿಂದ ಮನಗಾಣುವವರು ಮಾತ್ರ ಬದಲಾವಣೆಗೆ ಸೆಡ್ಡು ಹೊಡೆದು ನಿಲ್ಲಬಲ್ಲರು. ಈ ನಿಟ್ಟಿನಲ್ಲಿ ಈ ಗುಣವನ್ನು ನಾವೆಲ್ಲರೂ ವೃದ್ಧಿಸಿಕೊಳ್ಳಬೇಕಿದೆ.

  • ಕೌಶಲ: ನಮ್ಮ ಇಂದಿನ ಪ್ರಧಾನಿ ನರೇಂದ್ರ ಮೋದಿಯವರನ್ನು ನೀವು ಗಮನಿಸಿ ನೋಡಿ , ಆತ ಇಂದಿಗೆ ಟೆಕ್ನಾಲಜಿ ಬಗ್ಗೆ ಒಲವು ಹೊಂದಿದವರಲ್ಲ. ಅವರು ಸಾಮಾನ್ಯ ಕಾರ್ಯಕರ್ತರಾಗಿದ್ದ ದಿನದಿಂದ ಕಂಪ್ಯೂಟರ್ ಬಗ್ಗೆ ಒಲವಿತ್ತು , ಹೊಸ ತಂತ್ರಜ್ಞಾನದ ಬಗ್ಗೆ ಹಸಿವಿತ್ತು. ತಿಳಿದುಕೊಳ್ಳಬೇಕು ಎನ್ನುವ ಹಸಿವಿತ್ತು. ಹೀಗಾಗಿ ಅವರು ಸದಾ ಅದಕ್ಕೆ ಪೋಷಣೆ ನೀಡುತ್ತಾ ಕಲಿಯುತ್ತ ಬಂದರು. ಇಂದಿಗೂ ಯಾವುದೇ ಹೊಸ ವಿಷಯವಿರಲಿ ಅವರು ಅದರ ಕಲಿಕೆಯ ಬಗ್ಗೆ ಅಪಾರ ಶ್ರದ್ದೆ ಮತ್ತು ಒಲವನ್ನು ತೋರಿಸುತ್ತಾರೆ. ಇದೆ ರೀತಿ ಜಗತ್ತಿನ ಅತ್ಯುತ್ತಮ ಸಿಇಓ ಗಳನ್ನೂ ಪಟ್ಟಿ ಮಾಡಿ ಅವರೆಲ್ಲರಲ್ಲೂ ಇರುವ ಸಾಮಾನ್ಯ ಗುಣವೇನು ಗೊತ್ತೇ? ಅವರು ಹೊಸ ಕಲಿಕೆಯಿಂದ ದೂರವಾಗುವುದಿಲ್ಲ. ಹೊಸ ಸ್ಕಿಲ್ ದೆವೆಲೋಪ್ ಮಾಡಿಕೊಳ್ಳುವುದರಲ್ಲಿ ಅವರೆಂದಿಗೂ ಹಿಂದೆ ಬೀಳುವುದಿಲ್ಲ. ನಾನು ನನ್ನ ಎಲ್ಲಾ ಮಾತುಗಳಲ್ಲಿ ಪದೇ ಪದೇ ಉಚ್ಚರಿಸುವ ಒಂದು ಮಾತನ್ನು ಮತ್ತೆ ಇಲ್ಲಿಯೂ ಹೇಳುತ್ತೇನೆ' ಜೀವನದ ಯಾವುದೋ ಒಂದು ಕಾಲಘಟ್ಟದಲ್ಲಿ ನಾವು ಪಡೆದ ಡಿಗ್ರಿ ಸರ್ಟಿಫಿಕೇಟ್ ಜೀವಮಾನ ಪೂರ್ತಿ ಅನ್ನ ಹಾಕಲಿ ಎಂದು ಯೋಚಿಸುವುದೇ ತಪ್ಪು'. ಹೊಸ ಕೌಶಲಗಳನ್ನು ನಮ್ಮದಾಗಿಸಿಕೊಳ್ಳದಿದ್ದರೆ ನಾವು ಔಟ್ಡೇಟೆಡ್ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಸಾಂಕೇತಿಕ ಚಿತ್ರ
ಸಾಲವೇ ಎಂದೆಂದಿಗೂ ನಿಜವಾದ ಹಣ: ಗೊತ್ತೇ ಇದರ ಇತಿಹಾಸ? (ಹಣಕ್ಲಾಸು)
  • ಪ್ಯಾಶನ್: ನಿಮಗೆಲ್ಲಾ ಎಲಾನ್ ಮಸ್ಕ್ ಗೊತ್ತಲ್ಲವೇ? ಜಗತ್ತು ಹುಚ್ಚ ಎನ್ನುವಷ್ಟರ ಮಟ್ಟಿಗೆ ತಾನು ಮಾಡುವ ಕೆಲಸಕ್ಕೆ ಆತ ಬದ್ದ. ಜಗತ್ತಿನ ಕೋಟ್ಯಂತರ ಜನರು ಕನಸಿನಲ್ಲಿ ಕಾಣಲು ಆಗದಷ್ಟು ಸಂಪತ್ತಿನ ಒಡೆಯನಾಗಿದ್ದ ಕಾಲದಲ್ಲಿ ತನ್ನ ಹೊಸ ಕನಸು ಸ್ಪೇಸ್ ಎಕ್ಸ್ ಗೆ ತನ್ನ ಬಳಿಯಿದ್ದ ಎಲ್ಲಾ ಹಣವನ್ನೂ ಸುರಿಯುತ್ತಾನೆ. ಅದು ಮುಳುಗುವ ಹಂತವನ್ನು ತಲುಪಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಆತ ಬೀದಿಗೆ ಬರುತ್ತಿದ್ದ. ಆದರೆ ಆತನಿಗೆ ತನ್ನ ಕೆಲಸದಲ್ಲಿ ಇದ್ದ ಅಪಾರ ನಂಬಿಕೆ , ಮಾಡುವ ಕೆಲಸದಲ್ಲಿನ ಪ್ಯಾಶನ್, ಶ್ರದ್ದೆ ಆತನನ್ನು ಜಗತ್ತಿನ ಜನರಿಂದ ಬೇರ್ಪಡಿಸಿ ನಿಲ್ಲಿಸಿದೆ. ಇಂದಿಗೆ ಎಲಾನ್ ಮಸ್ಕ್ ಎಂದರೆ ಆತನೊಬ್ಬ ವಿಷನರಿ , ಗೋ ಗೆಟ್ಟರ್ ಎನ್ನುವ ಮಾತಿದೆ. ಸತ್ಯವೇನು ಗೊತ್ತೇ? ಸೋಲು ಎನ್ನುವುದು, ವೈಫಲ್ಯ ಎನ್ನುವುದು ನೆರಳಿನಂತೆ ಸದಾ ಹಿಂಬಾಲಿಸುತ್ತದೆ. ಅದನ್ನು ಗೆಲ್ಲುವ ಮನೋಭಾವ ಮಾಡುವ ಕೆಲಸದಲ್ಲಿನ ಅದಮ್ಯ ನಂಬಿಕೆ, ಎಷ್ಟೆಂದರೆ ಜಗತ್ತಿನ ಜನ ಹುಚ್ಚ ಎನ್ನುವ ಮಟ್ಟಿನ ಬದ್ಧತೆ ಸಿರಿವಂತಿಕೆಗೆ ರಹದಾರಿ.

  • ಹೂಡಿಕೆ: ಈ ಜಗತ್ತಿನಲ್ಲಿನ ಪ್ರತಿಯೊಬ್ಬ ಬಿಸಿನೆಸ್ ಮ್ಯಾನ್ ಕೂಡ ಒಂದಲ್ಲ ಒಂದು ಸಮಯದಲ್ಲಿ ಸಹಾಯ ಬೇಡುತ್ತಾನೆ. ಅಥವಾ ಸಹಾಯ ಬೇಕಾಗುವ ಸ್ಥಿತಿಗೆ ಬರುತ್ತಾನೆ. ಹೂಡಿಕೆ ಎನ್ನುವುದು ಇದಕ್ಕೊಂದು ಮದ್ದು. ಹೂಡಿಕೆ ಎಂದ ತಕ್ಷಣ ನಾವು ನಮ್ಮ ವ್ಯಾಪಾರಕ್ಕೆ ಹಣ ಹೂಡುವುದು ಎಂದರ್ಥವಲ್ಲ. ಇತರರ ಶ್ರಮ, ಕನಸುಗಳ ಮೇಲೆ ಕೂಡ ನಾವು ಹೂಡಿಕೆ ಮಾಡಬೇಕು. ಮಾಡುತ್ತಿದ್ದಾರೆ. ಅದರಲ್ಲೂ ಇದೆ ದಾರಿಯಲ್ಲಿ ಬಂದು ಯಶಸ್ಸು ಕಂಡವರಿಗಿಂತ ಇದರ ಬಗ್ಗೆ ಹೆಚ್ಚು ಯಾರಿಗೆ ತಿಳಿದಿರಲು ಸಾಧ್ಯ? ಹೀಗಾಗಿ ಶ್ರೀಮಂತರು ಅಪಾಯವನ್ನು ಲೆಕ್ಕಿಸುವುದಿಲ್ಲ, ಹೆಚ್ಚು ಅಪಾಯದ ವ್ಯಾಪಾರದಲ್ಲೂ ಹೂಡಿಕೆ ಮಾಡುತ್ತಾರೆ. ಪ್ರೈವೇಟ್ ಈಕ್ವಿಟಿ ಇದಕ್ಕೊಂದು ಉದಾಹರಣೆ. ಶ್ರೀಮಂತರ ಮನಸ್ಥಿತಿ ಸಾಮಾನ್ಯನ ಮನಸ್ಥಿತಿಗಿಂತ ಹೆಚ್ಚು ಭಿನ್ನವಾಗಿರುತ್ತದೆ. ಬದುಕಿಗೆ ಬೇಕಾದ ಹಣವನ್ನು ಬದಿಗಿರಿಸಿ ಉಳಿದದ್ದನ್ನು ಅವರು ಮರಳಿ ಹೂಡಿಕೆ ಮಾಡುತ್ತಾರೆ. ಕೆರೆಯ ನೀರನ್ನು ಕೆರೆಗೆ ಚಲ್ಲು ಎನ್ನುವ ವಾಕ್ಯವನ್ನು ತಪ್ಪದೆ ಪಾಲಿಸುತ್ತಾರೆ. ಉತ್ತಮ ಹೂಡಿಕೆಯಿಂದ ಮಾತ್ರ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಲು ಸಾಧ್ಯ. ಸಾಮಾನ್ಯ, ಅಸಾಮನ್ಯನಾಗಲು ಸಾಧ್ಯ.

  • ಕನಸುಗಳನ್ನು ಮಾರಾಟ ಮಾಡುವ ಕಲೆ: ವಾಷಿಂಗ್ ಪೌಡರ್ ನಿರ್ಮಾ ನಮಗೆಲ್ಲಾ ಗೊತ್ತಿದೆ. ಅದರ ಮಾಲೀಕ ಕಾರ್ಸನ್ ಭಾಯ್ ಪಟೇಲ್ ಇದನ್ನು ಮಾರಲು ಮನೆ ಮನೆಯ ಬಾಗಿಲಿಗೆ ಸೈಕಲ್ ಹೊಡೆದ ಕಥೆ ಹೆಚ್ಚು ಜನರಿಗೆ ತಿಳಿಯುವುದಿಲ್ಲ. ಆದರೆ ಆತ ತನ್ನ ಕನಸನ್ನು ಜನರಿಗೆ ತಲುಪಿಸುವವರೆಗೂ ನಿಲ್ಲಲಿಲ್ಲ. ಹಾಗೆ ಹಾಂಗ್ ಕಾಂಗ್ ನಿವಾಸಿ 95 ರ ವಯೋವೃದ್ಧ ಲೀ ಕ ಶಿಂಗ್ 15 ಕ್ಕೆ ಅಪ್ಪನನ್ನು ಕಳೆದುಕೊಂಡು, ಶಾಲೆ ಬಿಟ್ಟು, ಪ್ಲಾಸ್ಟಿಕ್ ಫ್ಯಾಕ್ಟಾರಿಯಲ್ಲಿ ದುಡಿಯುತ್ತ ಇಂದಿಗೆ ಜಗತ್ತಿನ 33 ನೇ ಅತಿದೊಡ್ಡ ಶ್ರೀಮಂತ ಎನ್ನಿಸಿಕೊಂಡ ಹಾದಿಯಲ್ಲೂ ಕಾಣ ಸಿಗುವುದು ಕನಸು! ಅದನ್ನು ನನಸಾಗಿಸುವ ಕಲೆ. ಬತ್ತದ ಉತ್ಸಾಹ. ಅದ್ಯಮ್ಯ ಜೀವನ ಪ್ರೀತಿ. ನಾವು ಜೀವನದ ಯಾವುದೊ ಒಂದು ಹಂತದಲ್ಲಿ ಸಾಕು ಎಂದು ಕೈಕಟ್ಟಿ ಕುಳಿತು ಬಿಡುತ್ತೇವೆ ಆದರೆ ಈ ಕನಸುಗಾರರು ಕನಸು ಕಾಣುವುದನ್ನು ನಿಲ್ಲಿಸುವುದೇ ಇಲ್ಲ.

ಸಾಂಕೇತಿಕ ಚಿತ್ರ
ಬ್ಯಾಂಕ್, ಬ್ಯಾಂಕಿಂಗ್ ಹುಟ್ಟು ಹೇಗಾಯ್ತು? (ಹಣಕ್ಲಾಸು)

ಕೊನೆ ಮಾತು: ಈ ಗುಣಗಳನ್ನು ನಾವು ಅಳವಡಿಸಿಕೊಳ್ಳಬಹುದು. ನಿಮಗೆಲ್ಲಾ ನೆನಪಿರಲಿ ನಾವೆಲ್ಲರೂ ಎಲ್ಲವನ್ನೂ ಕಲಿತು ಬಂದಿಲ್ಲ. ಅಥವಾ ಎಲ್ಲಾ ಗುಣಗಳು ಹುಟ್ಟಿನಿಂದ ಬಂದಿರುವುದಿಲ್ಲ. ಸತತ ಪರಿಶ್ರಮ. ದಣಿವರಿಯದ ಕೆಲಸ, ನಿತ್ಯವೂ ಕಲಿಯುವ ಉತ್ಸಾಹ ನಮ್ಮನ್ನು ಮೇಲ್ಮಟ್ಟಕ್ಕೆ ಏರಿಸುತ್ತದೆ ಇದರಲ್ಲಿ ಸಂಶಯವಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com