DK Shivakumar-Siddaramaiah
ಡಿಕೆ ಶಿವಕುಮಾರ್- ಸಿದ್ದರಾಮಯ್ಯ online desk

ಮಧ್ಯಂತರ ಚುನಾವಣೆ ಗುಮ್ಮ? (ಸುದ್ದಿ ವಿಶ್ಲೇಷಣೆ)

ಅರಸು, ಬಂಗಾರಪ್ಪ ಅವರ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಲ್ಲೇ ಇದ್ದ ಗುಂಫುಗಾರಿಕೆ ಅವರು ಅಧಿಕಾರದಿಂದ ಇಳಿಯಲು ಕಾರಣವಾಯಿತು.
Published on

ಇದು ಮಧ್ಯಂತರ ಚುನಾವಣೆಗೆ ತಯಾರಿಯ ಮುನ್ಸೂಚನೆಯೆ?

ಮೂಡಾ ನಿವೇಶನಗಳ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾಪಕ್ಷ ಜೆಡಿಎಸ್ ಜತೆಗೂಡಿ ಬೆಂಗಳೂರಿನಿದ ಮೈಸೂರಿಗೆ ನಡೆಸಿದ ಪಾದಯಾತ್ರೆ, ಇದಕ್ಕೆ ಪ್ರತಿಯಾಗಿ ಆಡಳಿತ ಕಾಂಗ್ರೆಸ್ ಮೈಸೂರಿನಲ್ಲಿ ಬಿಜೆಪಿ ವಿರುದ್ಧ ನಡೆಸಿದ ಬೃಹತ್ ಸಮಾವೇಶದ ಒಟ್ಟಾರೆ ಬೆಳವಣಿಗೆಗಳ ದಿಕ್ಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂಥದೊಂದು ಸಾಧ್ಯಾ ಸಾಧ್ಯತೆಗಳ ಬಗ್ಗೆ ಎರಡೂ ಪಕ್ಷಗಳು ಪೂರ್ವ ತಯಾರಿ ನಡೆಸುತ್ತಿರುವುದು ಕಂಡು ಬರುತ್ತದೆ.

ಬಿಜೆಪಿ ಪಾದಯಾತ್ರೆ ಮೈಸೂರು ತಲಪುವಷ್ಟರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನುಡಿದಿದ್ದ ಭವಿಷ್ಯ ಸದ್ಯಕ್ಕಂತೂ ಸುಳ್ಳಾಗಿದೆ. ಆದರೆ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಚೆಂಡು ಈಗ ರಾಜಭವನದ ಅಂಗಳದಲ್ಲಿದೆ. ತಮಗೆ ರಾಜ್ಯಪಾಲರು ವಿವರಣೆ ಕೇಳಿ ನೀಡಿದ್ದ ನೋಟೀಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ದಾಖಲೆ ಸಮೇತ ಉತ್ತರ ನೀಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ರಾಜ್ಯಪಾಲರು ಕೈಗೊಳ್ಳಬಹುದಾದ ತೀರ್ಮಾನದತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

ಸಂವಿಧಾನದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇ ಆದಲ್ಲಿ ಮುಂದೆ ನಡೆಯುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಆಡಳಿತ ಕಾಂಗ್ರೆಸ್ ನಲ್ಲಿ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನಿರ್ಧಾರಕ್ಕಿಂತ ಕಾನೂನು ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ತಾತ್ವಿಕವಾಗಿ ಹೈಕಮಾಂಡ್ ಇದಕ್ಕೆ ಒಪ್ಪುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಅಂತಹ ಸನ್ನಿವೇಶ ಎದುರಾದರೆ ರಾಜೀನಾಮೆ ನೀಡುವುದಿಲ್ಲ ತಮ್ಮ ಪರ ಇರುವ ಸಂಖ್ಯಾ ಬಲ ಪ್ರದರ್ಶನಕ್ಕೂ ಸಿದ್ಧ ಎಂಬ ಸಂದೇಶವನ್ನೂ ಪಕ್ಷದ ಹೈಕಮಾಂಡ್ ಗೆ ಅವರು ರವಾನಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಪರಿಸ್ಥಿತಿಯನ್ನು ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಪರ ನಿಲ್ಲುತ್ತೇನೆಂದಿದ್ದಾರೆ, ಆದರೆ...
ಶಿವಕುಮಾರ್ ಅವರೇನೋ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ತಾನು ಬಂಡೆಯಂತೆ ನಿಲ್ಲುತ್ತೇನೆ ಎಂದು ಸಮಾವೇಶದಲ್ಲಿ ಘೋಷಿಸಿದ್ದಾರೆ. ಆದರೆ ರಾಜಕಾರಣ ಎಂಬುದು ಸಂದರ್ಭಗಳ ಮೇಲಾಟ. ಹೀಗೇ ಎಂದು ನಿರ್ಧರಿಸುವುದು ಕಷ್ಟ. ಸನ್ನಿವೇಶಗಳು ಬದಲಾದಂತೆ ತೀರ್ಮಾನ, ವಾಗ್ದಾನಗಳೂ ಬದಲಾಗುತ್ತವೆ.

ಸಿದ್ದರಾಮಯ್ಯ ಆಕ್ರೋಶ ಯಾರ ವಿರುದ್ಧ?

ಶುಕ್ರವಾರ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಬೃಹತ್ ಸಮಾವೇಶ ಮೇಲ್ನೋಟಕ್ಕೆ ಬಿಜೆಪಿ ಪಾದಯಾತ್ರೆಯ ವಿರುದ್ಧದ ಪ್ರತಿಭಟನೆ ಎಂದು ಕಂಡು ಬಂದಿತಾದರೂ ಅದು ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಲ ಪ್ರದರ್ಶನದ ಮೇಲಾಟವಾಗಿ ಮಾರ್ಪಟ್ಟಿತು. ಸಮಾವೇಶದಲ್ಲಿ ಮಾತನಾಡಿದ ಶಿವಕುಮಾರ್ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ತಾನು ಬಂಡೆಯಂತೆ ನಿಲ್ಲುತ್ತೇನೆ ಎಂದು ಘೋಷಿಸಿದರೆ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಆಡಿದ ರೋಷಾವೇಶದ ಮಾತುಗಳು ಪಕ್ಷದೊಳಗೇ ತಮ್ಮ ವಿರುದ್ಧ ಗುಟ್ಟಾಗಿ ನಡೆಯುತ್ತಿರುವ ತಂತ್ರಗಳ ಕುರಿತು ಎಚ್ಚರಿಕೆ ನೀಡುವ ಧಾಟಿಯಲ್ಲಿತ್ತು. ಈ ಹಿಂದೆ ಕಾಂಗ್ರೆಸ್ ನಿಂದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿಯವರನ್ನು ಅಧಿಕಾರದಿಂದ ಇಳಿಸಲು ಏನೆಲ್ಲ ಪಿತೂರಿಗಳು ನಡೆಯಿತು ಎಂಬುದನ್ನು ಅವರು ಪ್ರಸ್ತಾಪಿಸುತ್ತಾ ಹಿಂದುಳಿದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿಗಳ ವಿರುದ್ಧ ಪ್ರಬಲ ಸಮುದಾಯಗಳು ರಾಜಕೀಯ ಪಿತೂರಿ ನಡೆಸಿ ಅಧಿಕಾರದಲ್ಲಿ ಮುಂದುವರಿಯಲು ಅಡ್ಡಿಯಾಗಿವೆ ಎಂದು ಪ್ರತಿಪಾದಿಸುವ ಮೂಲಕ ತಮ್ಮ ಅಹಿಂದ ಹೋರಾಟವನ್ನು ಮುಂದಿನ ದಿನಗಳಲ್ಲೂ ಸಕ್ರಿಯವಾಗಿರಿಸುವ ಸೂಚನೆಗಳನ್ನು ನೀಡಿದ್ದಾರೆ.

ವಿಶೇಷ ಎಂದರೆ ಅರಸು, ಬಂಗಾರಪ್ಪ ಅವರ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಲ್ಲೇ ಇದ್ದ ಗುಂಫುಗಾರಿಕೆ ಅವರು ಅಧಿಕಾರದಿಂದ ಇಳಿಯಲು ಕಾರಣವಾಯಿತು. ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ನಂತರ ಅರಸು ಮತ್ತು ಅಂದಿನ ಕಾಂಗ್ರೆಸ್ ನಾಯಕಿ ಶ್ರೀಮತಿ ಇಂದಿರಾಗಾಂಧಿಯವರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿ ಅವರು ಅಧಿಕಾರದಿಂದ ಇಳಿಯುವಂತಾಯಿತು. ಅರಸರ ಜತೆಗಿದ್ದು ನಿಷ್ಠರಾಗಿದ್ದ ಅಧಿಕ ಸಂಖ್ಯೆಯ ಶಾಸಕರು, ಸಚಿವರು ಸಂಜೆ ಕಳೆಯುವುದರೊಳಗೆ ತಮ್ಮ ನಿಷ್ಠೆಯನ್ನು ಇಂದಿರಾ ಗಾಂಧಿಯವರ ಪರ ಬದಲಾಯಿಸಿದ್ದರಿಂದ ಅವರು ಮುಖ್ಯಮಂತ್ರಿ ಪದವಿ ಕಳೆದುಕೊಂಡರು. ಬಂಗಾರಪ್ಪ ಪ್ರಕರಣದಲ್ಲೂ ಅವರ ವಿರುದ್ಧದ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಆರೋಪವೇ ಮುಳುವಾಯಿತು. ಆಗಲೂ ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕತ್ವ ಪ್ರಬಲವಾಗಿತ್ತು.

DK Shivakumar-Siddaramaiah
ಸಂಘರ್ಷ ಅಥವಾ ಸಂಧಾನ?: ಸಿದ್ದರಾಮಯ್ಯ ನಡೆಯತ್ತ ಎಲ್ಲರ ಚಿತ್ತ (ಸುದ್ದಿ ವಿಶ್ಲೇಷಣೆ)

ಇದಕ್ಕೂ ಮೊದಲು ಅನಾರೋಗ್ಯ ಪೀಡಿತರಾಗಿದ್ದ ಮುಖ್ಯಮಂತ್ರಿ ವೀರೇಂದ್ರಪಾಟೀಲರನ್ನು ಭೇಟಿ ಮಾಡಿ ಬೆಂಗಳೂರು ವಿಮಾನ ನಿಲ್ದಾಣದಿಂದ ವಾಪಸು ದಿಲ್ಲಿಗೆ ಹೊರಟ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿ ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ಸೂಚನೆ ನೀಡಿದರು ಆಗಲೂ ವೀರೇಂದ್ರ ಪಾಟೀಲರಿಗೆ ನಿಷ್ಠರಾಗಿದ್ದ ಅಧಿಕ ಸಂಖ್ಯೆಯ ಶಾಸಕರು ಸಚಿವರು ಬಂಗಾರಪ್ಪನವರಿಗೆ ತಮ್ಮ ನಿಷ್ಠೆ ಬದಲಿಸಿದರು. ಬಂಗಾರಪ್ಪ ಅವರ ವಿಚಾರದಲ್ಲೂ ಇದೇ ಘಟನೆ ಮರುಕಳಿಸಿತು. ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ನಡೆದ ಭಿನ್ನಮತೀಯ ಚಟುವಟಿಕೆಗಳಿಗೆ ಶಾಸಕರನ್ನು ಸಂಘಟಿಸುವ ಜವಾಬ್ದಾರಿಯನ್ನು ಅಂದು ಶಾಸಕರಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಹಿಸಿದ್ದರು. ಅಂದು ಉಪ ಮುಖ್ಯಮಂತ್ರಿ ಆಗಿದ್ದ ಎಸ್.ಎಂ. ಕೃಷ್ಣ ಹಾಗೂ ಸಚಿವರಾಗಿದ್ದ ಎಂ.ರಾಜಶೇಖರ ಮೂರ್ತಿಯವರು ಭಿನ್ನಮತೀಯ ಚಟುವಟಿಕೆಯ ನೇತೃತ್ವ ವಹಿಸಿದ್ದರಾದರೂ ಹೈಕಮಾಂಡ್ ಮೊಯ್ಲಿಯವರ ಬೆಂಬಲಕ್ಕೆ ನಿಂತಿದ್ದರಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಫಲ ನೀಡಲಿಲ್ಲ.

ಹೈಕಮಾಂಡ್ ವೀಕ್ಷಕರಾಗಿ ಬಂದಿದ್ದ ಜಗನ್ನಾಥ ಮಿಶ್ರ ಅವರ ಎದುರೇ ಅರಮನೆ ಮೈದಾನದಲ್ಲಿದ್ದ ಕಾಂಗ್ರೆಸ್ ಕಚೇರಿ ಮುಂದೆ ಮೊಯ್ಲಿ ನಿಷ್ಠರು ವಿರೋಧಿಗಳು ಬಡಿದಾಡಿಕೊಂಡಿದ್ದರು. ಈ ಘಟನೆಗಳು ನಡೆದಾಗ ಸಿದ್ದರಾಮಯ್ಯ ಜನತಾ ಪರಿವಾರದಲ್ಲಿದ್ದರು. ಕಾಂಗ್ರೆಸ್ ಸೇರಿರಲಿಲ್ಲ. ಈಗ ಅಂಥದೇ ಪ್ರಸಂಗ ಎದುರಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ತನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಬಲ ಸಮುದಾಯಗಳು ಪಿತೂರಿ ನಡೆಸಿವೆ ಎಂದು ಬಹಿರಂಗವಾಗೇ ಹೇಳುವ ಮೂಲಕ ಸಿದ್ದರಾಮಯ್ಯ ಸಂಘರ್ಷದ ಹೊಸ ಬಾಗಿಲನ್ನು ತೆರೆದಿದ್ದಾರೆ. ಮೇಲ್ನೋಟಕ್ಕೆ ಇದು ಪ್ರಬಲ ಸಮುದಾಯಗಳ ಹಿಡಿತದಲ್ಲಿರುವ ಬಿಜೆಪಿ ಜೆಡಿಎಸ್ ವಿರುದ್ಧದ ಹೇಳಿಕೆಯಂತೆ ಕಂಡು ಬಂದರೂ ಪಕ್ಷದೊಳಗೇ ತಮ್ಮ ಜತೆಗಿದ್ದೇ ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪ್ರತಿಸ್ಪರ್ಧಿಗಳತ್ತಲೂ ನೆಟ್ಟಿದೆ.

ಬಹು ಮುಖ್ಯವಾಗಿ ಎರಡೂವರೆ ವರ್ಷಗಳ ಅವಧಿ ನಂತರ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮಿಸುವುದು ನಂತರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಎಂಬ ಒಡಂಬಡಿಕೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಆಗಿದೆ ಎಂಬ ಸುದ್ದಿಗಳು ಕಳೆದ ಒಂದೂವರೆ ವರ್ಷದಿಂದ ಹರಿದಾಡುತ್ತಲೇ ಇವೆ. ಆದರೆ ಇದನ್ನು ಅಧಿಕೃತವಾಗಿ ಯಾರೂ ಖಾತರಿ ಪಡಿಸಿಲ್ಲ. ಸರ್ಕಾರಕ್ಕೆ ಒಂದುವರ್ಷ ತುಂಬುವ ಮೊದಲೇ ಆರಂಭವಾದ ಮುಖ್ಯಮಂತ್ರಿ ಕುರ್ಚಿ ಕಿತ್ತಾಟವನ್ನು ಸಿದ್ದರಾಮಯ್ಯ ಬೆಂಬಲಕ್ಕಿರುವ ಸಚಿವರೇ ಮುಂದುವರಿಸಿಕೊಂಡು ಬಂದಿದ್ದಾರೆ. ಸಹಜವಾಗೇ ಇದು ಪಕ್ಷದೊಳಗೇ ಬೇಗುದಿಗೆ ಕಾರಣವಾಗಿದೆ.ಹಾಗೊಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಡದಿರುವ ತಮ್ಮ ನಿಲುವಿಗೆ ಅಂಟಿಕೊಂಡಿದ್ದೇ ಆದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ರಾಜಕೀಯ ಬೆಳವಣಿಗೆಗಳನ್ನು ಇತಿಹಾಸದ ಬೆಳಕಿನಲ್ಲಿ ನೋಡಬೇಕಾಗಬಹುದು.

ಕಾಂಗ್ರೆಸ್ ನಲ್ಲಿ ಅಂಥದೊಂದು ಸಂಬವನೀಯ ಬೆಳವಣಿಗೆಯಿಂದ ಪಕ್ಷದ ಸಂಘಟನೆಯೂ ಆಪಾಯಕ್ಕೆ ಸಿಕ್ಕಬಹುದು. ಈ ಸೂಕ್ಷ್ಮ ಅರಿತಿರುವ ಬಿಜೆಪಿ ಹೈಕಮಾಂಡ್ ಸಿದ್ದರಾಮಯ್ಯ ಪದಚ್ಯುತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ರಾಜಕೀಯ ತಂತ್ರಕ್ಕೆ ಮುಂದಾಗಿದೆ. ಮೈಸೂರಿಗೆ ನಡೆದ ಬಿಜೆಪಿ ಪಾದಯಾತ್ರೆ ಮತ್ತು ಸಮಾವೇಶ ಅದರ ಒಂದು ಭಾಗ. ಈ ಪಾದಯಾತ್ರೆ ಕುರಿತಾಗೇ ಬಿಜೆಪಿಯಲ್ಲಿ ಭಿನ್ನಮತ ಇದೆ. ಆರಂಭದಲ್ಲಿ ಜಂಟಿ ಪಾದಯಾತ್ರೆಗೆ ಒಪ್ಪಿಕೊಂಡಿದ್ದ ಜೆಡಿಎಸ್ ನಾಯಕರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಧ್ಯದಲ್ಲಿ ತಕರಾರು ತೆಗೆದು ಕಡೆಗೆ ಒಲ್ಲದ ಮನಸ್ಸಿನಿಂದ ಭಾಗವಹಿಸಲು ಒಪ್ಪಿಕೊಂಡರು. ಇಡೀ ಪಾದಯಾತ್ರೆ ಸಿದ್ದರಾಮಯ್ಯ ಸರ್ಕಾರದ ಹಗರಣಗಳ ವಿರುದ್ಧದ ಪ್ರತಿಭಟನೆಗಿಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯ ವ್ಯಕ್ತಿಗತ ವಿಜೃಂಭಣೆಗೆ ವೇದಿಕೆಯಾಗಿದ್ದರ ಬಗ್ಗೆ ಬಿಜೆಪಿಯಲ್ಲೇ ಅಸಮಧಾನ ಹೊಗೆಯಾಡುತ್ತಿದೆ. ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಒಂದಷ್ಟು ಮಂದಿ ಹೈಕಮಾಂಡ್ ವರೆಗೂ ದೂರಿತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಬಿಜೆಪಿ ವರಿಷ್ಠರು ಖಚಿತ ನಿಲುವು ತಳೆಯುತ್ತಿಲ್ಲ.

DK Shivakumar-Siddaramaiah
ಪಾದಯಾತ್ರೆಗಳ ಹಿಂದೆ ರಾಜಕೀಯ ಅಜೆಂಡಾ!! (ಸುದ್ದಿ ವಿಶ್ಲೇಷಣೆ)

ರಾಷ್ಟ್ರಪತಿ ಆಳ್ವಿಕೆ ಅಥವಾ ಮಧ್ಯಂತರ ಚುನಾವಣೆ:?

ಈಗಿನ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅಧಿಕಾರ ತ್ಯಜಿಸುವ ಸಂದರ್ಭ ಎದುರಾಗಿ ರಾಜಕೀಯ ಅನಿಶ್ಚಯತೆ ಉಂಟಾದರೆ ಅದರ ಲಾಭ ಪಡೆಯಲು ಬಿಜೆಪಿ ಹೈಕಮಾಂಡ್ ತುದಿಗಾಲಮೇಲೆ ನಿಂತಿದೆ. ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಬಲವಾಗುವುದು ಅದಕ್ಕೆ ಬೇಕಾಗಿಲ್ಲ. ಹಾಗಂತ ಅಧಿಕಾರಕ್ಕೆ ಏರುವ ಅವಸರದಲ್ಲಿ ಇರುವ ವಿಜಯೇಂದ್ರ ಅಥವಾ ಕುಮಾರಸ್ವಾಮಿಯವರ ನೇತೃತ್ವದಲ್ಲೂ ಸರ್ಕಾರ ತರುವ ಆಸಕ್ತಿ ಇದ್ದಂತಿಲ್ಲ. ರಾಜಕೀಯ ಸ್ಥಿತ್ಯಂತರ ಸಂಭವಿಸಿ ಸರ್ಕಾರ ಪತನವಾದರೆ ಒಂದಷ್ಟುಕಾಲ ರಾಷ್ಟ್ರಪತಿ ಆಳ್ವಿಕೆ ಹೇರುವ ಆಲೋಚನೆಯೂ ದಿಲ್ಲಿ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ.

ಬಹು ಮುಖ್ಯವಾಗಿ ಬಿಜೆಪಿ ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚಿಸಲು ಮುಂದಾದರೂ ಅತ್ಯ ಸಂಖ್ಯಾ ಬಲದ ಕೊರತೆ ಇದೆ. ಹೀಗಿರುವ ಅಂತಹ ದುಸ್ಸಾಹಸಕ್ಕೆ ಕೈಹಾಕಿ ಸಮಸ್ಯೆಗಳನ್ನು ಎಳೆದುಕೊಳ್ಳುವುದಕ್ಕಿಂತ ಬೆಳವಣಿಗೆ ಕಾದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಬಂದಿದ್ದಾರೆ. ಆದರೆ ಬಿಜೆಪಿಯ ನಿರೀಕ್ಷೆಯ ಪ್ರಕಾರ ರಾಜಕೀಯ ಸ್ತಿತ್ಯಂತರಗಳು ಸಂಭವಿಸಿ ಕಾಂಗ್ರೆಸ್ ಇಬ್ಭಾಗ ಆದೀತೆ ಎಂಬುದು ಈಗ ರಾಜಕೀಯ ವಲಯಗಳಲ್ಲಿ ಕಾಡುತ್ತಿರುವ ಪ್ರಶ್ನೆ.

ರಾಜ್ಯಪಾಲರು ಮತ್ತು ಅವರ ನಡೆ ಅನುಸರಿಸಿ ಸಿದ್ದರಾಮಯ್ಯ ಕೈಗೊಳ್ಳುವ ನಿರ್ಧಾರದ ಮೇಲೆ ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗಳು ನಿಂತಿವೆ. ಏತನ್ಮಧ್ಯೆ ಹಿರಿಯ ಕಾಂಗ್ರೆಸ್ ಮುಖಂಡ ಸಚಿವ ಸತೀಶ ಜಾರಕಿಹೊಳಿ ದಿಲ್ಲಿಯಲ್ಲಿ ಇತ್ತೀಚೆಗೆ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದಾರೆ ಎಂಬ ಮಾಹಿತಿ ಇದೆ. ಸತೀಶ್ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗೂ ಆಪ್ತರು. ಈ ಭೇಟಿಗೆ ಅವರದೇ ರಾಯಭಾರ ಇತ್ತು ಎನ್ನಲಾಗುತ್ತಿದೆ. ಇದೆಲ್ಲ ಏನೇ ಇರಲಿ ಯತ್ನಾಳ್ , ರಮೇಶ ಜಾರಕಿಹೊಳಿ, ಶಾಸಕ ಹರೀಶ್ ಸೇರಿದಂತೆ ಕೆಲವರು ವಿಜಯೇಂದ್ರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುವ ಮೂಲಕ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡುತ್ತಿದ್ದರೂ ಹೈಕಮಾಂಡ್ ಮೌನವಾಗಿರುವುದೇಕೆ? ಎಂದು ರಾಜ್ಯ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದರೆ ದಿಲ್ಲಿಯಲ್ಲಿರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರತ್ತ ಕೈತೋರಿ ಸುಮ್ಮನಾಗುತ್ತಾರೆ? ಈ ಬೆಳವಣಿಗೆಗಳ ನಡುವೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಸ್ಥಿತಿ ಮಾತ್ರ ಅತಂತ್ರ ಎಂಬದು ಸದ್ಯಕ್ಕೆ ಕಂಡು ಬರುವ ಚಿತ್ರಣ. ಬಿಜೆಪಿಯನ್ನು ನಂಬಿ ಕೂರುವಂತಿಲ್ಲ. ನಂಬದೇ ಇರುವಂತೆಯೂ ಇಲ್ಲ. ಇದು ಅವರ ಸ್ಥಿತಿ.

100%

-ಯಗಟಿ ಮೋಹನ್
yagatimohan@gmail.com

X

Advertisement

X
Kannada Prabha
www.kannadaprabha.com