ಪಾದಯಾತ್ರೆಗಳ ಹಿಂದೆ ರಾಜಕೀಯ ಅಜೆಂಡಾ!! (ಸುದ್ದಿ ವಿಶ್ಲೇಷಣೆ)

ಎಲ್ಲದಕ್ಕಿಂತ ಮಿಗಿಲಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಅಜೆಂಡಾಗಳನ್ನು ಗಮನಿಸಿದರೆ ಹಗರಣಗಳ ವಿರುದ್ಧದ ಪ್ರತಿಭಟನೆಗೆ ಹೆಚ್ಚಾಗಿ ಅದನ್ನೊಂದು ವರ್ಗಗಳ ಬಲಾಬಲ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ. ಬಹು ಮುಖ್ಯವಾಗಿ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾದ ಕೇಂದ್ರೀಕೃತ ಹೋರಾಟವಾಗಿ ರೂಪುಗೊಳ್ಳುವಂತೆ ಅವರ ಬೆಂಬಲಿಗರು ತಯಾರಿ ನಡೆಸಿದ್ದಾರೆ.
BJP protest- Siddaramaiah
ಬಿಜೆಪಿ ಪ್ರತಿಭಟನೆ- ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)online desk
Updated on

ಇದು ಹಗರಣಗಳ ವಿರುದ್ಧದ ಹೋರಾಟವೊ? ಅಥವಾ ಮಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವಗಳ ವಿಜೃಂಭಣೆಯ ಹೋರಾಟವೊ?

ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಅಕ್ರಮ ಹಣದ ವರ್ಗಾವಣೆ ಹಾಗೂ ಮೈಸೂರಿನ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣಗಳ ಕುರಿತಂತೆ ಇದೀಗ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಬೃಹತ್ ಪಾದಯಾತ್ರೆ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

ಮತ್ತೊಂದು ಕಡೆ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಡೆದಿರುವ ವಿವಿಧ ಹಗರಣಗಳ ವಿರುದ್ಧ ಕಾಂಗ್ರೆಸ್ ಕೂಡಾ ಪರ್ಯಾಯವಾಗಿ ಮೈಸೂರಿನಿಂದ ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಈ ಎರಡೂ ಹೋರಾಟಗಳ ಕುರಿತಂತೆ ಸಾರ್ವತ್ರಿಕವಾಗಿ ತಲೆ ಎತ್ತಿರುವ ಪ್ರಶ್ನೆ ಇದು.

ಮೇಲ್ನೋಟಕ್ಕೆ ಇದೊಂದು ಅಕ್ರಮಗಳ ವಿರುದ್ಧ ಹೋರಾಟ. ಸರ್ಕಾರವೊಂದು ಅಧಿಕಾರದಲ್ಲಿದ್ದಾಗ ಆಡಳಿತಾವಧಿಯಲ್ಲಿ ಅಕ್ರಮಗಳು ನಡೆದಿದ್ದರೆ ಪ್ರತಿ ಪಕ್ಷಗಳು ಅದರ ವಿರುದ್ಧ ವಿವಿಧ ವೇದಿಕೆಗಳನ್ನು ಬಳಸಿಕೊಂಡು ಪ್ರತಿಭಟನೆ , ಹೋರಾಟ ನಡೆಸುವುದು ಜನತಂತ್ರ ವ್ಯವಸ್ಥೆಯಲ್ಲಿ ಸಹಜ ಕ್ರಮ. ಎರಡೂ ಪಕ್ಷಗಳೂ ಹಿಂದೆ ಇಂತಹ ಹೋರಾಟಗಳನ್ನು ನಡೆಸಿಯೇ ಅಧಿಕಾರಕ್ಕೆ ಬಂದಿವೆ. ಆದರೆ ಈ ಬಾರಿ ಆರಂಭಿಸಲು ಉದ್ದೇಶಿಸಿರುವ ಹೊರಾಟಕ್ಕೆ ಬೇರೆಯದೇ ಆದ ಅರ್ಥಗಳು, ಗೌಪ್ಯ ಉದ್ದೇಶಗಳೂ ಇವೆ ಎಂಬುದು ಈ ಪಕ್ಷಗಳ ಆಂತರಿಕ ವಿದ್ಯಮಾನಗಳ ಒಳಹೊಕ್ಕು ನೋಡಿದರೆ ಕಂಡು ಬರುವ ಅಂಶ.

ಪಾದಯಾತ್ರೆ ಕೇವಲ ಹಗರಣಗಳ ವಿರುದ್ಧದ ಪ್ರತಿಭಟನೆಯಷ್ಟೇ ಅಲ್ಲ...
ಎಲ್ಲದಕ್ಕಿಂತ ಮಿಗಿಲಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಅಜೆಂಡಾಗಳನ್ನು ಗಮನಿಸಿದರೆ ಹಗರಣಗಳ ವಿರುದ್ಧದ ಪ್ರತಿಭಟನೆಗೆ ಹೆಚ್ಚಾಗಿ ಅದನ್ನೊಂದು ವರ್ಗಗಳ ಬಲಾಬಲ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ. ಬಹು ಮುಖ್ಯವಾಗಿ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾದ ಕೇಂದ್ರೀಕೃತ ಹೋರಾಟವಾಗಿ ರೂಪುಗೊಳ್ಳುವಂತೆ ಅವರ ಬೆಂಬಲಿಗರು ತಯಾರಿ ನಡೆಸಿದ್ದಾರೆ.

ಈ ಹಂತದಲ್ಲಿ ಇನ್ನೂ ಎರಡೂ ಪಕ್ಷಗಳ ಪ್ರತಿಭಟನೆ ದಿನಾಂಕ ನಿಗದಿಯಾಗಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಬರುವ ಆಗಸ್ಟ್ ತಿಂಗಳಲ್ಲಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಅವರ ಬೆಂಬಲಿಗರು ಬೃಹತ್ ಅಹಿಂದ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನದ ತಯಾರಿಯಲ್ಲಿದ್ದಾರೆ. ಇದೀಗ ಮೈಸೂರಿನಿಂದ ಬೆಂಗಳೂರಿಗೆ ನಡೆಸಲು ಉದ್ದೇಶಿಸಿರುವ ಪಾದ ಯಾತ್ರೆಯನ್ನೂ ಅಹಿಂದ ಹೋರಾಟವಾಗಿ ರೂಪಿಸಲು ಉದ್ದೇಶಿಸಲಾಗಿದೆ. ಎರಡೂ ಕಾರ್ಯಕ್ರಮಗಳ ಕೇಂದ್ರ ಬಿಂದು ಸಿದ್ದರಾಮಯ್ಯನವರೇ ಆಗಿದ್ದು ಇದರ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಅವರು ತಾಲೀಮು ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟ.

ವಾಲ್ಮೀಕಿನಿಗಮ ಹಾಗೂ ಮೈಸೂರಿನ ಸೀಟಿ ಹಂಚಿಕೆ ಅಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ. ವಾಲ್ಮೀಕಿ ನಿಗಮದ ಹಗರಣದ ಕುರಿತಾಗಿ ರಾಜ್ಯ ಸರ್ಕಾರದ ತನಿಖೆಯ ಜತೆಗೇ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯವೂ ಕೂಡಾ ತನಿಖೆ ಆರಂಭಿಸಿದ್ದು ಈಗಾಗಲೇ ಅದು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ಈ ಹಗರಣದ ತನಿಖೆ ಸಾಗುತ್ತಿರುವ ದಿಕ್ಕನ್ನು ನೋಡಿದರೆ ರಾಜ್ಯ ಸರ್ಕಾರದ ಅಧಿಕಾರಿಗಳ ಕೊರಳಿಗೂ ಸುತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನೇ ಪರೋಕ್ಷವಾಗಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಗುರಿಯಾಗಿಸಿಕೊಂಡಿದ್ದು ಪ್ರಕರಣದಲ್ಲಿ ಮುಖ್ಯಮಂತ್ರಿಯಾಗಿ ಅವರ ಪಾತ್ರದ ಕುರಿತಂತೇ ವಿಚಾರಣೆ ಮುಂದುವರಿಸಿದೆ. ನಿಗಮದಲ್ಲಿ ಹಣದ ಅಕ್ರಮ ವರ್ಗಾವಣೆ ನಡೆದಿರುವುದನ್ನು ವಿಧಾನಸಭೆಯಲ್ಲಿ ಸರ್ಕಾರವೇ ಒಪ್ಪಿಕೊಂಡಿದೆ.

BJP protest- Siddaramaiah
ದಿಲ್ಲಿಯೋ….? ಕರ್ನಾಟಕವೊ…? ಗೊಂದಲದಲ್ಲಿ ಕುಮಾರಸ್ವಾಮಿ!! (ಸುದ್ದಿ ವಿಶ್ಲೇಷಣೆ)

ಇನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲೂ ಸಿದ್ದರಾಮಯ್ಯ ಅವರ ಕುಟುಂಬದ ಸದಸ್ಯರ ಹೆಸರು ಕೇಳಿ ಬಂದಿದೆ. ಈಗಾಗಲೇ ಇದರ ಕುರಿತಂತೆ ಸರ್ಕಾರ ತನಿಖಾ ಆಯೋಗ ರಚಿಸಿದ್ದು ಹೈಕೋರ್ಟ್ ನ ನಿವೃತ್ತ ನ್ಯಾಯ ಮೂರ್ತಿಗಳನ್ನೂ ನೇಮಕ ಮಾಡಿದೆ. ಈ ಎಲ್ಲ ಪ್ರಕ್ರಿಯೆಗಳು ನಡೆದಿರುವ ಹಂತದಲ್ಲೇ ಬಿಜೆಪಿ ಈ ಬಾರಿ ವಿಧಾನ ಮಂಡಲದ ಅಧಿವೇಶನದಲ್ಲಿ ಕಲಾಪ ನಡೆಯಲೂ ಬಿಡದೇ ಪ್ರತಿಭಟನೆ ನಡೆಸಿದ್ದು ಮಾತ್ರ ವೈಪಲ್ಯಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಎಂದೇ ಅರ್ಥೈಸಲಾಗುತ್ತಿದೆ.

ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ನಂತರವೂ ಪಕ್ಷದಲ್ಲಿ ಭಿನ್ನಮತ ನಿಂತಿಲ್ಲ. ಅವರ ವಿರುದ್ದ ಅವರದೇ ಪಕ್ಷದ ಕೆಲವು ಶಾಸಕರು,ಮುಖಂಡರು ಬಂಡಾಯ ಎದ್ದಿದ್ದಾರೆ. ಅದು ಗುರುವಾರ ಮುಕ್ತಾಯಗೊಂಡ ವಿಧಾನಸಭೆಯ ಅಧಿವೇಶನದಲ್ಲೂ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಮಾತುಗಳಿಂದಲೇ ವ್ಯಕ್ತವಾಗಿದೆ. ಪಕ್ಷದ ಇನ್ನೊಬ್ಬ ಶಾಸಕ ಹರೀಶ್ ಕೂಡಾ ವಿಜಯೇಂದ್ರ ವಿರುದ್ಧ ಬಂಡಾಯದ ರಣ ಕಹಳೆ ಮೊಳಗಿಸಿದ್ದಾರೆ. ಇದು ಬಿಜೆಪಿಗೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತದ ವೈಫಲ್ಯಗಳನ್ನು ಸದನದಲ್ಲಿ ತರೆದಿಡುವ ಮೂಲಕ ಜನ ಪರ ಹೋರಾಟ ಕೆಚ್ಚು ಪ್ರದರ್ಶಿಸಬೇಕಿದ್ದ ಬಿಜೆಪಿ ವಾಲ್ಮೀಕಿ ಮತ್ತು ಮೈಸೂರಿನ ಮೂಡಾ ಪ್ರಕರಣಗಳನ್ನೇ ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದು ಸಂಸದೀಯ ತಂತ್ರಗಾರಿಕೆಯ ವೈಫಲ್ಯ ಎನ್ನಬಹುದು.

ಬಿಜೆಪಿ ಈ ಹಿಂದೆ ಅಧಿಕಾರದಲ್ಲಿದ್ದಾಲೂ ಹಗರಣಗಳು ನಡೆದಿದ್ದು ಅದನ್ನು ಸದನದಲ್ಲಿ ಬಿಚ್ಚಿಡುವುದಾಗಿ ಮುಖ್ಯಮಂತ್ರಿ ಘೋಷಿಸಿದಾಗ ಪ್ರತಿಪಕ್ಷದ ಹಲವು ನಾಯಕರು ಉತ್ತರ ನೀಡಲು ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.

ಪಕ್ಷದ ಆಂತರಿಕ ಕಿತ್ತಾಟ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಬಿಕ್ಕಟ್ಟುಗಳಿಂದ ಪಾರಾಗಲು ಬಿಜೆಪಿ ಈ ಹೋರಾಟಕ್ಕೆಮುಂದಾಗಿದೆ ಎಂಬ ಆರೋಪಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದಕ್ಕೂ ಮಿಗಿಲಾಗಿ ಕೇಂದ್ರದ ನಾಯಕರಿಂದ ಸಿದ್ದರಾಮಯ್ಯ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವಂತೆ ಸೂಚನೆಯೂ ಬಂದಿದೆ. ಒಂದಷ್ಟು ಬಿಜೆಪಿ ನಾಯಕರು ಒಲ್ಲದ ಮನಸ್ಸಿನಿಂದ ಹೋರಾಟಕ್ಕೆ ಒಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ಪಾದಯಾತ್ರೆಯ ಹೋರಾಟದ ಸಂಪೂರ್ಣ ರಾಜಕೀಯ ಲಾಭವನ್ನು ತಮ್ಮದಾಗಿಸಿಕೊಳ್ಳಲು ಅಧ್ಯಕ್ಷ ವಿಜಯೇಂದ್ರ, ವಿದಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನಡುವೆ ಪೈಪೋಟಿಯೇ ನಡೆದಿದೆ.

ಸಿದ್ದು ಅಹಿಂದ ಅಸ್ತ್ರ

ಕಾಂಗ್ರೆಸ್ ಪಕ್ಷ ಮೈಸೂರಿನಿಂದ ಆರಂಭಿಸಲಿರುವ ಹೋರಾಟದ ಕುರಿತೂ ಹಲವಾರು ಪ್ರಶ್ನೆಗಳು ತಲೆ ಎತ್ತಿವೆ. ಆಡಳಿತಕ್ಕೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪದಚ್ಯುತಿಗೆ ಪಕ್ಷದೊಳಗೇ ಭೂಮಿಕೆ ಸಿದ್ಧವಾಗುತ್ತಿದೆ. ಈ ಸೂಕ್ಷ್ಮ ಅರಿತಿರುವ ಸಿದ್ದರಾಮಯ್ಯ ಕಾಂಗ್ರೆಸ್ ಆರಂಭಿಸಲಿರುವ ಹೋರಾಟವನ್ನು ಅಹಿಂದ ಪರವಾದ ಹೋರಾಟವಾಗಿಸುವ ಮೂಲಕ ಈವರ್ಗಗಳು ತಮ್ಮ ಜತೆಯಲ್ಲಿವೆ ಎಂಬ ಎಚ್ಚರಿಕೆಯ ಸಂದೇಶವನ್ನು ಪಕ್ಷದ ಹೈಕಮಾಂಡ್ ಗೆ ಹಾಗೂ ಬಿಜೆಪಿಗೆ ನೀಡುವ ತಂತ್ರಗಾರಿಕೆಗೆ ಶರಣಾಗಿದ್ದಾರೆ. ಅವರ ರಾಜಕಾರಣದ ಹಾದಿ ಗಮನಸಿದವರಿಗೆ ಇದೇನೂ ಹೊಸದಲ್ಲ. ತಮ್ಮ ಅಧಿಕಾರ ರಾಜಕಾರಣದ ಅಸ್ತಿತ್ವಕ್ಕೆ ಅಪಾಯ ಎದುರದಾಗಲೆಲ್ಲ ಅದರ ವಿರುದ್ಧ ಹೋರಾಟಕ್ಕೆ ಅಹಿಂದ ಅಸ್ತ್ರವನ್ನು ಬಳಕೆ ಮಾಡುತ್ತಲೇ ಬಂದಿದ್ದಾರೆ. ಅದರಂತೆ ಈ ಬಾರಿಯೂ ಮೈಸೂರಿನಿಂದ ಕಾಂಗ್ರೆಸ್ ಆರಂಭಿಸಲು ಉದ್ದೇಶಿಸಿರುವ ಪ್ರತಿಭಟನೆ ಅಹಿಂದ ಹೋರಾಟದ ಮುಂದುವರಿದ ಭಾಗವಾಗಿರುವಂತೆ ತಯಾರಿ ನಡೆದಿದೆ. ಒಂದು ರೀತಿಯಿಂದ ನೋಡಿದರೆ ಹಿಂದುಳಿದ ವರ್ಗಕ್ಕೆ ಸೇರಿದ ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲೆಲ್ಲ ಅವರ ವಿರುದ್ಧ ಕಾಂಗ್ರೆಸ್ ಪಕ್ಷದೊಳಗೇ ಭಿನ್ನಮತೀಯ ಚಟುವಟಿಕೆಗಳು ನಡೆದಿದದ್ದವು. ತಮ್ಮ ಕೈಗೆ ಸಿಗಬೇಕಾದ ರಾಜ್ಯಾಡಳಿತ ಕೈ ತಪ್ಪಿ ಬೇರೆ ಸಮುದಾಯಗಳ ಪಾಲಾದಾಗಲೆಲ್ಲ ಪ್ರಬಲ ಜಾತಿಗಳು ಅದರ ವಿರುದ್ಧ ರಾಜಕೀಯ ತಂತ್ರ ರೂಪಿಸಿ ಯಶಸ್ವಿಯಾಗಿದ್ದು, ಕೆಲವೊಮ್ಮೆ ವೈಫಲ್ಯಗಳನ್ನೂ ಅನುಭವಿಸಿದ್ದು ರಾಜ್ಯ ರಾಜಕಾರಣದಲ್ಲಿ ಹಿಂದಿನಿಂದಲೂ ನಡೆದೇ ಇದೆ.

BJP protest- Siddaramaiah
ಈಗ ಬಿಜೆಪಿಯ ಗುರಿ ಕಾಂಗ್ರೆಸ್ ಅಲ್ಲ… ಸಿದ್ದರಾಮಯ್ಯ!! (ಸುದ್ದಿ ವಿಶ್ಲೇಷಣೆ)

ಈ ಸಂಗತಿಯನ್ನು ತಿಳಿದಿರುವ ಸಿದ್ದರಾಮಯ್ಯ ಅಹಿಂದ ಸಮಾವೇಶ, ಹೋರಾಟಗಳ ಮೂಲಕ ತಮ್ಮದೇ ಪಕ್ಷದಲ್ಲಿರುವ ಎದುರಾಳಿಗಳಿಗೆ ಉತ್ತರ ನೀಡಲು ಹೊರಟಿದ್ದಾರೆ. ಮೈಸೂರಿನಿಂದ ಕಾಂಗ್ರೆಸ್ ಆರಂಭಿಸಲು ಉದ್ದೇಸಿಸಿರುವ ಪಾದಯಾತ್ರೆ ಅದರ ಮುಂದುವರಿದ ಭಾಗವಷ್ಟೆ. ಆದರೆ ಈ ಹೋರಾಟದ ಕುರಿತು ಕಾಂಗ್ರೆಸ್ ನಲ್ಲಿ ಗೊಂದಲಗಳು ಇವೆ. ಇಂಥ ಪ್ರಮುಖ ನಿರ್ಧಾರವನ್ನು ಪ್ರಕಟಿಸುವ ಮುನ್ನ ಕೆಪಿಸಿಸಿ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದು ನಿಯಮ ಹಾಗೂ ಸಂಪ್ರದಾಯ . ಕೆಪಿಸಿಸಿ ಅಧ್ಯಕ್ಷರು ಪಕ್ಷದ ತೀರ್ಮಾನವನ್ನು ಮಾಧ್ಯಗಳಿಗೆ ತಿಳಿಸುವುದು ವಾಡಿಕೆ. ಆದರೆ ಮೈಸೂರಿನಿಂದ ಆರಂಭಿಸಲು ಉದ್ದೇಶಿಸಿರುವ ಪಾದಯಾತ್ರೆ ವಿಚಾರದ ಬಗ್ಗೆ ಕಾಂಗ್ರೆಸ್ ನಲ್ಲೇ ಅಸಮಧಾನಗಳಿವೆ . ಇದು ಪಕ್ಷದ ಹೋರಾಟ ಎನ್ನುವದಕ್ಕಿಂತ ಸಿದ್ದರಾಮಯ್ಯ ನಾಯಕತ್ವದ ವಿಜೃಂಭಣೆಯ ಹೋರಾಟವಾಗಿ ರೂಪುಗೊಳ್ಳುವ ಅಪಾಯಗಳ ಬಗ್ಗೆ ಪಕ್ಷದೊಳಗೆ ಚರ್ಚೆ ಆರಂಭವಾಗಿದೆ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com