
ಜೆಡಿಎಸ್ ಅಧ್ಯಕ್ಷ, ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎದುರಿಸುತ್ತಿರುವ ಇಕ್ಕಟ್ಟಿನ ಸ್ಥಿತಿ ಇದು.
ಇತ್ತಿಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಬಳಿಕ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಮಹತ್ವದ ಖಾತೆ ನೀಡಿದ್ದಾರೆ. ಇದಷ್ಟೇ ಅಲ್ಲ ಕೇಂದ್ರ ಸರ್ಕಾರದ ಕೆಲವು ಪ್ರಮಖ ಸಮಿತಿಗಳಿಗೂ ಅವರನ್ನು ಸದಸ್ಯರನ್ನಾಗಿ ಮಾಡುವ ಮೂಲಕ ವಿಶೇಷ ಪ್ರಾಮುಖ್ಯತೆ ನೀಡಿದ್ದಾರೆ.
ಬೃಹತ್ ಕೈಗಾರಿಕೆಗಳ ವ್ಯಾಪ್ತಿಗೆ ಬರುವ ಉಕ್ಕು ಖಾತೆ ಸಚಿವರಾಗಿರುವ ಅವರ ವ್ಯಾಪ್ತಿಗೆ ಇಡೀ ದೇಶದ ಬೃಹತ್ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು ಒಳಪಡುತ್ತವೆ. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಅಗತ್ಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಎಲ್ಲ ಪರಮಾಧಿಕಾರವೂ ಅವರಿಗಿದೆ. ಇನ್ನೂ ಹೇಳಬೇಕೆಂದರೆ ಕೇಂದ್ರ ಸಚಿವ ಸಂಫುಟದಲ್ಲಿ ಅವರು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಚಿವರಿಗಿಂತ ಪ್ರಬಾವಶಾಲಿ. ಇಷ್ಟಿದ್ದರೂ ದಿಲ್ಲಿ ರಾಜಕಾರಣ ಅವರಿಗೆ ಒಗ್ಗುತ್ತಿಲ್ಲ. ಕೇಂದ್ರ ಸಚಿವರಾಗಿ ಹೆಚ್ಚು ಕಾಲ ದಿಲ್ಲಿಯಲ್ಲೇ ಕಳೆಯಬೇಕಿರುವುದರಿಂದ ರಾಜ್ಯ ರಾಜಕಾರಣಕ್ಕೆ ಅಗತ್ಯ ಸಮಯ ನೀಡಲು ಆಗುತ್ತಿಲ್ಲ . ಹಾಗೆಯೇ ಸದ್ಯದ ಪರಿಸ್ಥಿತಿಯಲ್ಲಿ ಬೇರೆಯವರನ್ನು ನಂಬಿ ಪಕ್ಷ ಸಂಘಟನೆಯನ್ನು ಅವರ ಕೈಗೆ ಕೊಡುವ ಪರಿಸ್ಥಿತಿಯಲ್ಲೂ ಅವರಿಲ್ಲ. ಮತ್ತೊಂದು ಕಡೆ ಪಕ್ಷದ ಆಧಾರಸ್ತಂಬವಾಗಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ವಯೋ ಸಹಜ ಕಾರಣಗಳಿಂದಾಗಿ ಮೊದಲಿನಂತೆ ರಾಜ್ಯವ್ಯಾಪಿ ಪ್ರವಾಸ ಮಾಡಿ ಸಂಘಟನೆಯನ್ನು ಬಲಪಡಿಸಲು ಆಗುತ್ತಿಲ್ಲ. ಕೇಂದ್ರ ಮಂತ್ರಿಗಿರಿಗೇ ಅಂಟಿಕೊಂಡು ದಿಲ್ಲಿಯಲ್ಲಿ ಕುಳಿತರೆ ರಾಜ್ಯದಲ್ಲಿ ಪಕ್ಷದ ಸಂಘಟನೆ ದಿಕ್ಕೆಟ್ಟು ಹೋಗುತ್ತದೆ ಎಂಬ ಭಯ ಕುಮಾರಸ್ವಾಮಿಯವರನ್ನು ಕಾಡುತ್ತಿದೆ. ಹಾಗಂತ ಇದ್ದಕ್ಕಿದಂತೆ ಸಚಿವ ಸ್ಥಾನ ತೊರೆದು ವಾಪಸಾಗುವ ಸ್ಥಿತಿಯಲ್ಲೂ ಅವರಿಲ್ಲ.ಒಂದು ಬಗೆಯ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನಕ್ಕೆ ಜೆಡಿಎಸ್ ತಳ್ಳಲ್ಪಟ್ಟಿದ್ದರೂ ಪಕ್ಷದ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಗಳಿಸಿದ ಮತಗಳ ಪ್ರಮಾಣ ತೀರಾ ಚಿಕ್ಕದೇನಲ್ಲ. ಸಂಘಟನಾತ್ಮಕವಾಗಿ ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವ ಅವಕಾಶ ಜೆಡಿಎಸ್ ಗೆ ಇದೆ ಎಂಬ ಸಂಗತಿಯನ್ನು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಕಂಡುಕೊಂಡಿದ್ದಾರೆ. ವಿಶೇಷವಾಗಿ ತುಮಕೂರು, ಚಿತ್ರದುರ್ಗ,ಸೇರಿದಂತೆ ರಾಜ್ಯದ ಸುಮಾರು ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲು ಜೆಡಿಎಸ್ ಬೆಂಬಲವೂ ಕಾರಣ ಎಂಬುದನ್ನು ಮನನ ಮಾಡಿಕೊಂಡಿರುವ ಅವರು ಭವಿಷ್ಯದ ದೃಷ್ಟಿಯಿಂದ ರಾಜ್ಯಕ್ಕೆ ಸೀಮಿತವಾಗಿ ಪಕ್ಷ ಬಲಗೊಳಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಎದುರು ಎಲ್ಲ ವಿಚಾರಗಳಿಗೂ ಮಂಡಿಯೂರಿ ನಿಲ್ಲಬೇಕಾದ ಪರಿಸ್ಥಿತಿ ಬರಲಿದೆ ಎಂಬ ಸಂಗತಿಯನ್ನು ತಮ್ಮ ಆಪ್ತರ ಬಳಿ ಚರ್ಚಿಸಿದ್ದಾರೆ.
ಈ ಕಾರಣಕ್ಕಾಗೇ ಮುಂದಿನ ದಿನಗಳಲ್ಲಿ ನಡೆಯಲಿರುವ ಚೆನ್ನ ಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಕುಟುಂಬದ ಸದಸ್ಯರಲ್ಲೇ ಯಾರಾದರೂ ಒಬ್ಬರು ಸ್ಪರ್ಧಿಸಿ ಗೆಲ್ಲುವಂತೆ ನೋಡಿಕೊಳ್ಳಲು ನಿರ್ಧರಿಸಿದ್ದಾರೆ.
ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಅದಕ್ಕೂ ಹಿಂದೆ ನಡೆದ ಚುನಾವಣೆಯಲ್ಲಿ ಕುಮಾರಸ್ವಾಮಿಯವರೇ ಆಯ್ಕೆಯಾಗಿದ್ದರು. ಈ ಬಾರಿ ಉಪ ಚುನಾವಣೆ ಘೋಷಣೆ ಆಗುವ ಮೊದಲೇ ಮೂರೂ ಪಕ್ಷಗಳಲ್ಲಿ ಚಟುವಟಿಕೆ ಬಿರುಸಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಈ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ನಡೆಸಿದ್ದು ಪ್ರತಿಷ್ಠೆಯ ಕದನವನ್ನಾಗಿ ಸ್ವೀಕರಿಸುವ ಹಠಕ್ಕೆ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್ ಸೋಲಿನಿಂದ ಕಂಗೆಟ್ಟಿದ್ದಾರಾದರೂ ಯಾವುದೇ ಹಂತದಲ್ಲಿ ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯಲೇ ಬೇಕೆಂಬ ಹೋರಾಟಕ್ಕೆ ಇಳಿದಿದ್ದಾರೆ. ಮತ್ತೊಂದು ಕಡೆ ಕ್ಷೇತ್ರದಲ್ಲಿ ಪ್ರಬಲರಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೀಶ್ವರ್ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸಿರುವುದು ಎರಡೂ ಮಿತ್ರ ಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಚನ್ನಪಟ್ಟಣದಲ್ಲಿ ಬಿಜೆಪಿಯ ಸ್ಪರ್ಧೆಯನ್ನು ಆ ಪಕ್ಷದ ವರಿಷ್ಠರಾಗಲೀ ರಾಜ್ಯ ಸಮಿತಿಯ ನಾಯಕರಾಗಲೀ ಪ್ರಕಟಿಸಿಲ್ಲ.
ಆದರೆ ಅದಕ್ಕೆ ಮೊದಲೇ ಯೋಗೀಶ್ವರ್ ತಮ್ಮ ಸ್ಪರ್ಧೆಯ ಬಗ್ಗೆ ಪ್ರಕಟಿಸಿದ್ದಾರೆ. ಇದು ಮೈತ್ರಿ ಕೂಟದಲ್ಲಿ ಗೊಂದಲಗಳಿಗೆ ಕಾರಣವಾಗಿದೆ. ಇನ್ನೂ ಒಂದೂವರೆ ವರ್ಷ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಯೋಗೀಶ್ವರ್ ಗಿದ್ದು ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ರಾಜ್ಯ ನಾಯಕತ್ವ ಆಸಕ್ತಿ ಹೊಂದಿಲ್ಲ. ಕಾರಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ವಿಧಾನಸಭೆ ಪ್ರವೇಶಿಸಿದರೂ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯೇನೂ ಆಗುವುದಿಲ್ಲ. ಆದರೆ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಇರುವ ಸಂಖ್ಯಾ ಬಲದಲ್ಲಿ ಒಂದು ಸ್ಥಾನ ಕಡಿಮೆ ಆಗುವ ಸಾಧ್ಯತೆಗಳಿವೆ . ಈಗಿನ ರಾಜಕೀಯ ಸನ್ನಿವೇಶದಲ್ಲಿ ಅಂಥೊಂದು ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ರಾಜ್ಯ ನಾಯಕತ್ವ ಇಲ್ಲ. ಇದರ ಜತೆಗೇ ಯೋಗೀಶ್ವರ್ ಬಗ್ಗೆ ನಾನಾ ಕಾರಣಗಳಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರಿಗೆ ಒಲವುಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯನ್ನು ಮುರಿದು ಕೊಳ್ಳುವ ಮನಸ್ಥಿತಿಯಲ್ಲಿ ವಿಜಯೇಂದ್ರ ಸೇರಿದಂತೆ ಯಾರೂ ತಯಾರಿಲ್ಲ. ಹೀಗಾಗಿ ಯೋಗೀಶ್ವರ್ ಬಿಜೆಪಿ ಅಭ್ಯರ್ಥಿಯಾಗಿ ಇಲ್ಲಿ ಕಣಕ್ಕಿಳಿಯುವುದು ಸಾಧ್ಯವಿಲ್ಲ ಎಂಬ ಅಂಶವನ್ನು ಆ ಪಕ್ಷದ ನಾಯಕರೊಬ್ಬರು ಮುಂದಿಡುತ್ತಾರೆ.
ಹಾಗೊಂದು ವೇಳೆ ಪಕ್ಷದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಲೋಚನೆ ಯೋಗೀಶ್ವರ್ ದು. ಆದರೆ ಅದಿನ್ನೂ ಪರಿಪೂರ್ಣವಾಗಿಲ್ಲ.
ಈ ಎಲ್ಲ ಪರಿಸ್ಥಿತಿಗಳನ್ನು ಮನಗಂಡಿರುವ ಕುಮಾರಸ್ವಾಮಿ ಕೇಂದ್ರ ಮಂತ್ರಿಗಿರಿಯ ವೈಭೊಗಕ್ಕಿಂತ ರಾಜ್ಯ ರಾಜಕಾರಣವೇ ಸರಿಯಾದ ದಾರಿ ಎಂದೂ ನಿಶ್ಚಯಿಸಿದ್ದಾರೆ. ಬಿಜೆಪಿ ಕುರಿತಾಗಿ ಅವರಲ್ಲಿನ ಅನುಮಾನಗಳೂ ಹಾಗೇ ಇವೆ. ಹಿಂದಿನ ಸಂದರ್ಭಗಳಲ್ಲಿ ಎಚ್.ಎನ್. ನಂಜೆಗೌಡ, ಡಾ. ಜೀವರಾಜ ಆಳ್ವ, ವೈ. ರಾಮಕೃಷ್ಣ , ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಂಥ ಮುಖಂಡರನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಕಡೆಗೆ ನಿರ್ಲಕ್ಷಿಸಿದ ಬಿಜೆಪಿಯ ಕ್ರಮದ ಅರಿವಿರುವ ಅವರು ಆ ಪಕ್ಷದ ಜತೆ ಮೈತ್ರಿ ಇದ್ದರೂ ಸಂಘಟನಾತ್ಮಕ ವಿಚಾರಗಳಲ್ಲಿ ಅಂತರ ಕಾಪಾಡಿಕೊಂಡೇ ಬರುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಅವಧಿಯವರೆಗೆ ಬಿಜೆಪಿಯನ್ನೇ ಅವಲಂಬಿಸಿ ಕೂತರೆ ಪಕ್ಷ ಸಂಘಟನೆ ದುರ್ಬಲವಾಗುತ್ತದೆ ಎಂಬ ಆತಂಕಕ್ಕೆ ಬಿದ್ದಿದ್ದಾರೆ. ಆ ಕಾರಣಕ್ಕಾಗೇ ಪ್ರತಿ ವಾರದ ಕೊನೆಯ ಎರಡು – ಮೂರು ದಿನಗಳು ಮಂಡ್ಯ, ರಾಮನಗರ , ಚನ್ನಪಟ್ಟಣ ವ್ಯಾಪ್ತಿಯಲ್ಲೇ ಪ್ರವಾಸ ಕೈಗೊಳ್ಳುವ ಮೂಲಕ ಸಮುದಾಯದ ಸಂಘಟನೆಯೂ ಕೈ ತಪ್ಪದಂತೆ ನೋಡಿಕೊಳ್ಳುವ ಕಸರತ್ತಿಗೆ ಮುಂದಾಗಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಗೆ ಪುತ್ರ ನಿಖಿಲ್ ಅಥವಾ ಸೋದರಿ ಡಾ. ಅನಸೂಯ ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಗೌಡರ ಕುಟುಂಬದಲ್ಲಿ ಚರ್ಚೆ ನಡೆದಿದೆ. ಆದರೆ ಗ್ರಾಮಾಂತರ ಕ್ಷೇತ್ರದಿಂದ ತಾನು ಲೋಕಸಭೆಯಲ್ಲಿ ಬಿಜೆಪಿ ಸದಸ್ಯನಾಗಿರುವುದರಿಂದ ಪತ್ನಿ ಚನ್ನಪಟ್ಟಣದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ವೈಯಕ್ತಿಕವಾಗಿ ಮುಜುಗುರದ ಪರಿಸ್ಥಿತಿ ಉಂಟಾಗುತ್ತದೆ. ಜತೆಗೇ ಒಂದೇ ಮನೆಯಲ್ಲಿ ಇಬ್ಬರೂ ರಾಜಕಾರಣ ಪ್ರವೇಶಿಸುವುದರ ಬಗ್ಗೆ ಡಾ. ಮಂಜುನಾಥ್ ಆಸಕ್ತರಾಗಿಲ್ಲ ಎಂಬುದು ಜೆಡಿಎಸ್ ಮೂಲಗಳ ವಿವರಣೆ. ಈ ಪರಿಸ್ಥಿತಿಯಲ್ಲಿ ಪುತ್ರ ನಿಖಿಲ್ ರನ್ನೇ ಚುನಾವಣಾ ಕಣಕ್ಕಿಳಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್ ಕಾಂಗ್ರೆಸ್ ಅಭ್ಯರ್ಥಿಯ ಎದುರು ಪರಾಭವಗೊಂಡಿದ್ದರು. ಅದಕ್ಕೂ ಮುನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಸೋತಿದ್ದರು. ಚೆನ್ನ ಪಟ್ಟಣದಿಂದ ಸ್ಪರ್ಧಿಸಿದರೆ ಈ ಎರಡೂ ಚುನಾವಣೆಗಳಲ್ಲಿ ಸೋತ ಅನುಕಂಪ ಅನುಕೂಲಕರವಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರವೂ ಇದೆ.
ಹೀಗಾಗಿ ಯೋಗೀಶ್ವರ್ ಗಿಂತ ಕುಟುಂಬದವರೇ ಒಬ್ಬರು ಸ್ಪರ್ಧಿಸಿ ಗೆದ್ದರೆ ಒಕ್ಕಲಿಗರ ಪಾಳೇಯದಲ್ಲಿ ಹಿಡಿತ ಸಾಧಿಸುವ ತನ್ನ ಪ್ರಯತ್ನ ಫಲಕಾರಿ ಆಗಬಹುದು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೂ ಅನುಕೂಲ ಆಗಬಹುದು ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ. ಇದರ ಮುಂದುವರಿದ ಭಾಗ ಎಂಬಂತೆ ತಮ್ಮ ರಾಜೀನಾಮೆಯಿಂದ ತೆರವಾದ ವಿಧಾನ ಸಭೆಯಲ್ಲಿನ ಪಕ್ಷದ ನಾಯಕನ ಸ್ಥಾನಕ್ಕೆ ತಮ್ಮ ಆತ್ಮೀಯ ಗೆಳೆಯ, ಚಿಕ್ಕನಾಯಕನ ಹಳ್ಳಿಯ ಶಾಸಕ ಸಿ.ಬಿ. ಸುರೇಶ್ ಬಾಬು ಅವರನ್ನು ಆಯ್ಕೆ ಮಾಡುವ ಮೂಲಕ ಅವರು ಜಾಣ್ಮೆ ಮೆರೆದಿದ್ದಾರೆ. ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಸೇರಿದ ಸುರೇಶ ಬಾಬು ಸದನದಲ್ಲಿ ಪಕ್ಷದ ನಾಯಕರಾದರೆ ಭವಿಷ್ಯದಲ್ಲಿ ಪಕ್ಷಕ್ಕೆಆ ಸಮುದಾಯದ ಒಲವು ಗಳಿಸಲು ಸಾಧ್ಯವಾಗಬಹುದು. ಜತೆಗೇ ಅವರೊಬ್ಬ ನಂಬಿಕಸ್ತ ಗೆಳೆಯ. ಸುರೇಶ ಬಾಬು ಆಯ್ಕೆ ಮೂಲಕ ಜೆಡಿಎಸ್ ಬರೀ ಒಕ್ಕಲಿಗರ ಪಕ್ಷ, ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡಿರುವ ಪಕ್ಷ ಎಂಬ ಕಳಂಕವನ್ನು ದೂರ ಮಾಡಿಕೊಳ್ಳುವ ದೂರಾಲೋಚನೆ ಕುಮಾರಸ್ವಾಮಿಯವರದ್ದು. ಸುರೇಶ್ ಬಾಬು ಅವರ ತಂದೆ,ದಿ. ಬಸವಯ್ಯ ಹಿಂದೆ ಶಾಸಕರಾಗಿದ್ದವರು. ಸಮುದಾಯದಲ್ಲಿ ಅವರ ಬಗ್ಗೆ ಈಗಲೂ ಗೌರವವಿದೆ. ಹೀಗಾಗಿ ಹಿಂದುಳಿದ ವರ್ಗಳ ಸಂಘಟನೆ ದೃಷ್ಟಿಯಿನ್ನಿಟ್ಟುಕೊಂಡೇ ಅವರನ್ನುಆಯ್ಕೆ ಮಾಡಲಾಗಿದೆ.
ಆಯ್ಕೆಯಿಂದ ಪಕ್ಷದ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಮುನಿಸಿಕೊಂಡಿದ್ದಾರೆ. ಸದನದಲ್ಲಿ ಪಕ್ಷದ ನಾಯಕನ ಹುದ್ದೆ ತಮಗೆ ಸಿಗಬಹುದೆಂಬ ನಿರೀಕ್ಷೆ ಅವರಲ್ಲಿತ್ತು. ಆದರೆ ಅದು ಈಡೇರಿಲ್ಲ. ಅಸಮಾಧಾನಗೊಂಡಿರುವ ಅವರು ಸದ್ಯ ಸದನಕ್ಕೆ ಹಾಜರಾಗುತ್ತಿಲ್ಲ. ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಜೆಡಿಎಸ್ ಅಧ್ಯಕ್ಷರಾಗುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಮಾತ್ರ ಕುಮಾರಸ್ವಾಮಿಯೇ ಉಳಿಸಿಕೊಂಡಿದ್ದಾರೆ. ಒಂದು ಸಂದರ್ಭದಲ್ಲಿ ನಿಖಿಲ್ ಹೆಸರು ಕೇಳಿ ಬಂದಿತ್ತಾದರೂ ಆ ನೇಮಕದಿಂದ ಹಿರಿಯ ಮುಖಂಡರು ಅಸಮಧಾನಗೊಳ್ಳಬಹುದೆಂಬ ಆತಂಕದಿಂದ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದಾರೆ .
ಪ್ರಭಾವಿ ಮಂತ್ರಿಗಿರಿಯ ಹುದ್ದೆ ಇದ್ದರೂ ಭಾಷೆ, ಪ್ರಾಂತ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ದಿಲ್ಲಿ ರಾಜಕಾರಣ ತನಗೆ ಒಗ್ಗುವುದಿಲ್ಲ ಎಂಬ ಸಂಗತಿಯನ್ನು ಅತ್ಯಲ್ಪ ಕಾಲದಲ್ಲೇ ಅರ್ಥ ಮಾಡಿಕೊಂಡಿರುವ ಕುಮಾರಸ್ವಾಮಿ ಭವಿಷ್ಯದಲ್ಲಿ ಹೆಚ್ಚುಕಾಲ ಬಿಜೆಪಿಯ ಮೇಲೆ ಅವಲಂಬಿತವಾಗದೇ ಜೆಡಿಎಸ್ ನ್ನು ಬಲಿಷ್ಟ ಪ್ರಾದೇಶಿಕ ಪಕ್ಷವಾಗಿ ಸಂಘಟಿಸಲು ನಿರ್ಧರಿಸಿದ್ದಾರೆ. ಈ ಪ್ರಯತ್ನದ ಭಾಗವಾಗಿ ಈ ಹಿಂದೆ ದೇವೇಗೌಡರ ಜತೆ ಇದ್ದು ನಂತರದ ದಿನಗಳಲ್ಲಿ ನಾನಾ ಕಾರಣಗಳಿಗಾಗಿ ಪಕ್ಷದೊಳಗಿದ್ದೂ ದೂರ ಸರಿದಿರುವ ಪ್ರಮುಖ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಅವರೆಲ್ಲರೊಂದಿಗೆ ಮಾತುಕತೆ ಆರಂಭಿಸಿದ್ದಾರೆ.
ಪ್ರಮುಖ ಸಂಗತಿ ಎಂದರೆ ಈ ಪ್ರಯತ್ನ ಆರಂಭವಾಗಿರುವ ಹಂತದಲ್ಲೇಜಿ.ಟಿ.ದೇವೇಗೌಡ ಮುನಿಸಿಕೊಂಡಿದ್ದಾರೆ. ಸದ್ಯದಲ್ಲೇ ಅವರನ್ನು ಮಾಜ ಪ್ರಧಾನಿ ದೇವೇಗೌಡರೇ ಕರೆದು ಸಂತೈಸುತ್ತಾರೆ ಎನ್ನಲಾಗುತ್ತಿದೆ. ಜೆಡಿಎಸ್ ರಾಜಕಾರಣವನ್ನು ಹತ್ತಿರದಿಂದ ನೋಡಿದವರಿಗೆ ಇದ್ಯಾವುದೂ ಆಶ್ಚರ್ಯವೂ ಅಲ್ಲ, ಅನಿರೀಕ್ಷಿತವೂ ಅಲ್ಲ !!
ಕುಮಾರಸ್ವಾಮಿ ದಿಲ್ಲಿ ಮತ್ತು ಕರ್ನಾಟಕದ ರಾಜಕಾರಣದಲ್ಲಿ ಗೊಂದಲದಲ್ಲಿದ್ದಾರೆ. ಕೇಂದ್ರ ಸಚಿವರಾಗಿ ಪ್ರಭಾವಶಾಲಿಯಾದರೂ, ರಾಜ್ಯ ರಾಜಕಾರಣಕ್ಕೆ ಸಮಯ ನೀಡಲು ಕಷ್ಟವಾಗಿದೆ. ಜೆಡಿಎಸ್ ಪಕ್ಷವನ್ನು ಬಲಪಡಿಸಲು ಮತ್ತು ಬಿಜೆಪಿ ಎದುರಿಸಲು, ಅವರು ಚೆನ್ನಪಟ್ಟಣ ಉಪ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಅಥವಾ ಸೋದರಿ ಡಾ. ಅನಸೂಯ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಯೋಜಿಸಿದ್ದಾರೆ.
Advertisement