ಹೈಕಮಾಂಡ್ ವಿರುದ್ಧ ಯುದ್ಧಕ್ಕೆ ತೊಡೆ ತಟ್ಟಿದ ಸಿದ್ದರಾಮಯ್ಯ! (ಸುದ್ದಿ ವಿಶ್ಲೇಷಣೆ)

ದಿಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಚಿವರೂ ಆದ ಕಾಂಗ್ರೆಸ್ ನಾಯಕರೊಬ್ಬರ ಬಳಿ ಮಾತನಾಡಿದ ಖರ್ಗೆ ರಾಜ್ಯ ರಾಜಕಾರಣಕ್ಕೆ ಮರಳುವ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆಂಬ ಮಾಹಿತಿ ಬಂದಿದೆ. ಒಂದು ವೇಳೆ ಇದೇ ನಿಜವಾದರೆ ರಾಜ್ಯ ರಾಜಕಾರಣದ ಒಟ್ಟು ಸಮೀಕರಣವೇ ಬದಲಾಗಬಹುದು.
AICC President Mallikarjuna Kharge- CM Siddaramaiah
ಎಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ- ಸಿಎಂ ಸಿದ್ದರಾಮಯ್ಯonline desk
Q

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಬಹಿರಂಗ ಯುದ್ಧಕ್ಕೆ ಸಜ್ಜಾಗೇ ಬಿಟ್ಟರಾ?

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಹುದ್ದೆಗಳಿಗೆ ನಡೆದಿರುವ ಕಿತ್ತಾಟ ಮತ್ತು ನಂತರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂಥದೊಂದು ಸನ್ನಿವೇಶ ಎದುರಾಗಿದೆ ಎಂಬ ಸಂಗತಿ ಗೊತ್ತಾಗುತ್ತದೆ.

ಶುಕ್ರವಾರ (ಜುಲೈ 5) ರಂದು ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ಮುಖ್ಯಮಂತ್ರಿಯವರ ಸಮಾಲೋಚನಾ ಸಭೆ ನಿಗದಿಯಾಗಿತ್ತು. ಕಾರ್ಯಕರ್ತರ ಅಹವಾಲುಗಳನ್ನು ಖುದ್ದು ಮುಖ್ಯಮಂತ್ರಿಯೇ ಕೇಳಿ ಪರಿಹಾರ ಕಲ್ಪಿಸುವ ಉದ್ದೇಶಕ್ಕೆ ಅದು ಏರ್ಪಾಟಾಗಿತ್ತು. ಆದರೆ ಆ ಕಾರ್ಯಕ್ರಮ ಇದ್ದಕ್ಕಿದ್ದಂತೆ ರದ್ದಾಯಿತು, ಮುಖ್ಯಮಂತ್ರಿಗಳ ಕಾಂಗ್ರೆಸ್ ಕಚೇರಿ ಭೇಟಿ ರದ್ದಾಗಿದೆ ನಿಜ, ಆದರೆ ಕೆಪಿಸಿಸಿ ಕಚೇರಿಯಲ್ಲಿ ತಾನೇ ಇದ್ದು ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವುದಾಗಿ ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಅಧಿಕೃತವಾಗಿ ಪ್ರಕಟಿಸಿದರು.

ಮುಖ್ಯಮಂತ್ರಿ ಹಾಗೂ ಸಚಿವರು, ಕಾಂಗ್ರೆಸ್ ಕಚೇರಿಗೆ ನಿಯಮಿತವಾಗಿ ಆಗಮಿಸಿ ಪಕ್ಷದ ಕಾರ್ಯಕರ್ತರ ಅಹವಾಲುಗಳಿಗೆ ಸ್ಪಂದಿಸಬೇಕೆಂದು ಈ ಮೊದಲು ಕೆಪಿಸಿಸಿಯಲ್ಲಿ ತೀರ್ಮಾನವಾಗಿತ್ತು. ಆದರೆ ಅದು ಮುಖ್ಯಮಂತ್ರಿಯವರ ವಿಚಾರದಲ್ಲಿ ಪಾಲನೆ ಆಗಲಿಲ್ಲ.

ಮುಂಬರುವ ಆಗಸ್ಟ್ ನಲ್ಲಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯಲ್ಲಿ ಆಚರಿಸುವ ನೆಪದಲ್ಲಿ ಭರ್ಜರಿ ಬಲ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಹಿಂದಿನಂತೆ ಮತ್ತೆ ಅವರು ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುವ ಮೂಲಕ ಮತ್ತೊಂದು ಯುದ್ಧಕ್ಕೆ ರಣ ಕಹಳೆ ಮೊಳಗಿಸಲು ತಯಾರಿ ನಡೆಸಿದ್ದಾರೆ. ಈ ಕಾರ್ಯಕ್ರಮ ವ್ಯವಸ್ಥೆಗೊಳಿಸಿರುವುದು ಸಿದ್ದರಾಮಯ್ಯ ಅವರ ಅಭಿಮಾನಿಗಳೇ ಆದರೂ ಅದೊಂದು ರಾಜಕೀಯ ಸಮರಕ್ಕೆ ಮುನ್ನುಡಿ ಬರೆಯುವ ವೇದಿಕೆ ಆಗುವ ಎಲ್ಲ ಸಾಧ್ಯತೆಗಳು ಇವೆ.

AICC President Mallikarjuna Kharge- CM Siddaramaiah
ಡಿಕೆಶಿ ಮಹತ್ವಾಕಾಂಕ್ಷೆಗೆ ಸ್ವಪಕ್ಷೀಯರೆ ಅಡ್ಡಗಾಲು! (ಸುದ್ದಿ ವಿಶ್ಲೇಷಣೆ)

ಬೆಂಗಳೂರಿಗೆ ಅಂಟಿಕೊಂಡೇ ಇರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾರೀ ತಯಾರಿ ನಡೆಸಿದ್ದಾರೆ. ಕ್ಷೇತ್ರದ ಮೂಲೆ ಮೂಲೆಗಳಲ್ಲಿ ಪ್ರವಾಸ ಕೈಗೊಂಡು ಈಗಲೇ ಚುನಾವಣಾ ತಯಾರಿ ಆರಂಬಿಸಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮ್ಮ ಸೋದರನ ಸೋಲಿನಿಂದ ಕಳೆದುಕೊಂಡಿರುವ ನಷ್ಟವನ್ನು ಮತ್ತೆ ಗಳಿಸುವ ಮೂಲಕ ಒಕ್ಕಲಿಗ ನಾಯಕತ್ವದ ಪಟ್ಟಕ್ಕೆ ಏರುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ.

ಅದಕ್ಕಾಗಿ ಅವರು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದರೆ ಅದಕ್ಕೆ ಮಖ್ಯಮಂತ್ರಿ ಮಟ್ಟದಲ್ಲಿ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಶಿವಕುಮಾರ್ ಹೊರತುಪಡಿಸಿದರೆ ಉಳಿದ ಪ್ರಮುಖ ಮತ್ತು ಪ್ರಭಾವೀ ಸಚಿವರು ಇನ್ನೂ ಚೆನ್ನಪಟ್ಟಣದತ್ತ ಹೆಜ್ಜೆ ಇಟ್ಟಿಲ್ಲ. ಒಂದು ಬಗೆಯ ಗೊಂದಲಕ್ಕೆ ಸಿಕ್ಕಿದ್ದಾರೆ.

ಈ ಉಪ ಚುನಾವಣೆ ರಾಜ್ಯ ರಾಜಕಾರಣಕ್ಕೆ ಹೊಸ ತಿರುವು ನೀಡುವ ನಿರೀಕ್ಷೆ ಇದೆ. ಇದರ ಜತೆಗೇ ಉಳಿದೆರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ನಡೆಯಬೇಕಿದೆ. ಆದರೆ ಆ ಕ್ಷೇತ್ರಗಳ ಬಗ್ಗೆ ಯಾವುದೇ ಪಕ್ಷಗಳೂ ಇನ್ನೂ ಗಮನ ಹರಿಸಿಲ್ಲ. ಚುನಾವಣೆ ಘೋಷಿಸಬೇಕಾದ ಕೇಂದ್ರ ಚುನಾವಣಾ ಆಯೋಗ ಇನ್ನೂ ಸಮಯ ಇರುವುದರಿಂದ ಅಧಿಸೂಚನೆ ಹೊರಡಿಸಿಲ್ಲ. ಶಾಸಕರ ಸ್ಥಾನಗಳು ತೆರವಾದ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕೆಂಬ ನಿಯಮ ಇರುವುದರಿಂದ ವೇಳಾ ಪಟ್ಟಿ ಪ್ರಕಟಣೆಗೆ ಇನ್ನೂ ಸಮಯ ಹಿಡಿಯಬಹುದು.

ರಾಜ್ಯ ಸರ್ಕಾರದ ಅಧೀನ ಸಂಸ್ಥೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹು ಕೋಟಿ ಭ್ರಷ್ಟಾಚಾರ, ಹಣ ದುರುಪಯೋಗ ಪ್ರಕರಣದ ನಂತರ ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ ಬಯಲಿಗೆ ಬಂದಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ನೇರ ಆರೋಪ ಕೇಳಿ ಬಂದಿದ್ದು ಬಿಜೆಪಿ ಇದೇ ಅಂಶವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರತಿಭಟನೆ ನಡೆಸಿದೆ.

ಸದ್ಯದಲ್ಲೇ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಇದೇ ಹಗರಣ ಪ್ರಸ್ತಾಪಿಸಿ ಸಿಬಿಐ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿ ರಾಜೀನಾಮೆಗೂ ಪಟ್ಟು ಹಿಡಿದು ಹೋರಾಟ ನಡೆಸಲು ಆ ಪಕ್ಷ ನಿರ್ಧರಿಸಿದೆ. ಅಧಿವೇಶನ ಸುಸೂತ್ರವಾಗಿ ನಡೆಯುವ ಸಾಧ್ಯತೆಗಳು ಸದ್ಯಕ್ಕೆ ದೂರ.

ಈ ಬೆಳವಣಿಗೆಗಳು ಒಂದು ಕಡೆಯಾದರೆ. ಇತ್ತಿಚೆಗೆ ನಡೆದ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಸಂಸ್ಥಾನದ ಪೀಠಾಧಿಪತಿ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಬಹಿರಂಗ ವೇದಿಕೆಯಲ್ಲೇ ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಮುಖ್ಯಮಂತ್ರಿ ಪಟ್ಟವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುವಂತೆ ಆಗ್ರಹಿಸಿದ್ದು ಕಾಂಗ್ರೆಸ್ ನಲ್ಲಿ ಹೊಸ ತಲ್ಲಣ ಸೃಷ್ಟಿಸಿದೆಯಷ್ಟೇ ಅಲ್ಲ, ಇದುವರೆಗೆ ತೆರೆಮರೆಯಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಪರ ವಿರೋಧಿ ಚಟುವಟಿಕೆಗಳಿಗೆ ಅಧಿಕೃತ ಸ್ವರೂಪ ಸಿಕ್ಕಂತಾಗಿದೆ. ಈ ಹೇಳಿಕೆಯ ಬೆನ್ನಲ್ಲೇ ಸಿದ್ದರಾಮಯ್ಯ ಬಣ ಚುರುಕಾಗಿದೆ. ಸಚಿವರಾದ ಕೆ.ಎನ್. ರಾಜಣ್ಣ, ಸತೀಶ ಜಾರಕಿಹೊಳಿ, ಜಮೀರ್ ಅಹಮದ್ ಸೇರಿದಂತೆ ಮುಖ್ಯಮಂತ್ರಿಗಳ ಆಯ್ದ ಬೆಂಬಲಿಗರು ಸಭೆ ಸೇರಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲುವ ತೀರ್ಮಾನ ಕೈಗೊಂಡಿರುವುದು ಇದರ ಜತೆಗೇ ಸಮುದಾಯವಾರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂದೂ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಬೇಕೆಂದೂ ಆಗ್ರಹ ಮುಂದಿಟ್ಟಿದ್ದಾರೆ.

AICC President Mallikarjuna Kharge- CM Siddaramaiah
CM ಪಟ್ಟಕ್ಕಾಗಿ ಭವಿಷ್ಯದ ಸಮರಕ್ಕೆ DK Shivakumar ಶಸ್ತ್ರಾಭ್ಯಾಸ! (ಸುದ್ದಿ ವಿಶ್ಲೇಷಣೆ)

ಯಥಾ ಪ್ರಕಾರ ಇದು ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯವನ್ನು ಕುಗ್ಗಿಸುವ ಇನ್ನೊಂದು ಪ್ರಯತ್ನ. ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ತೆಗೆದುಕೊಳ್ಳುತ್ತಿರುವ ಕೆಲವೊಂದು ಖಡಕ್ ನಿರ್ಧಾರಗಳು ಸಿದ್ದರಾಮಯ್ಯ ಅವರಿಗೆ ಕಸಿವಿಸಿ ತಂದಿದೆ. ಹಿಂದೆ ಡಾ. ಜಿ ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಅವರು ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸರ್ಕಾರ ಮತ್ತು ಪಕ್ಷದ ಮೇಲೂ ಸಂಪೂರ್ಣ ಹಿಡಿತ ಸಾಧಿಸಿ\ ಪಕ್ಷದ ಅಧ್ಯಕ್ಷರು ತಮ್ಮ ಮುಂದೆ ಮಂಡಿಯೂರುವಂತೆ ಮಾಡಿದ್ದ ಸಿದ್ದರಾಮಯ್ಯನವರಿಗೆ ಶಿವಕುಮಾರ್ ಅಧ್ಯಕ್ಷರಾದ ನಂತರ ಪರ್ಯಾಯ ಹಾಗೂ ಸಮಾನಾಂತರ ಅಧಿಕಾರದ ಕೇಂದ್ರವಾಗಿ ರೂಪುಗೊಂಡಿರುವುದು ಚಡಪಡಿಕೆಗೆ ಕಾರಣವಾಗಿದೆ. ದೆಹಲಿ ಭೇಟಿ ಸಂದರ್ಭದಲ್ಲೆಲ್ಲ ಶಿವಕುಮಾರ್ ವಿರುದ್ಧ ಪಕ್ಷದ ನಾಯಕತ್ವಕ್ಕೆ ದೂರಿತ್ತರೂ ಹೈಕಮಾಂಡ್ ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿರುವುದು ಅವರನ್ನು ಕಂಗೆಡಿಸಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದಲೂ ಅಂತರ ಕಾಯ್ದುಕೊಂಡಿರುವ ಸಿದ್ದರಾಮಯ್ಯ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಹತ್ತಿರವಾಗುವ ಪ್ರಯತ್ನದಲ್ಲಿದ್ದಾರೆ. ಇದು ಸಹಜವಾಗೇ ಖರ್ಗೆಯವರ ಅಸಮಾಧಾನಕ್ಕೆ ಕಾರಣವಾಗಿದೆ. ಅದಕ್ಕಾಗೇ ಇತ್ತಿಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಂದು ವರ್ಷದ ಹಿಂದೆ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಆದ ಒಡಂಬಡಿಕೆಯಂತೆ ಎರಡೂ ವರೆ ವರ್ಷ ಅವಧಿ ಪೂರ್ಣಗೊಂಡ ನಂತರ ಮುಖ್ಯಮಂತ್ರಿ ಪದವಿ ತ್ಯಜಿಸುವ ಒಪ್ಪಂದಕ್ಕೆ ಬದ್ಧವಾಗಿರಬೇಕೆಂದು ಹೈಕಮಾಂಡ್ ನಾಯಕರು ಸ್ಪಷ್ವವಾಗೆ ಹೇಳಿ ಕಳಿಸಿರುವುದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ದಿಲ್ಲಿಯಿಂದ ಮರಳಿದ ಸಿದ್ದರಾಮಯ್ಯ ನೇರವಾಗಿ ಬಲ ಪ್ರದರ್ಶನದ ಮೂಲಕ ಹೈಕಮಾಂಡ್ ಗೆ ಸಂದೇಶ ರವಾನಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದರ ಮುಂದುವರಿದ ಭಾಗವೇ ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಬಲ ಪ್ರದರ್ಶನ ನಡೆಸುವುದು ಅವರ ರಾಜಕೀಯ ತಂತ್ರ ಈ ಸಮಾವೇಶದ ಮೂಲಕ ಮುಖ್ಯಮಂತ್ರಿಯಾಗಿ ಐದು ವರ್ಷಗಳನ್ನು ತಾನು ಪೂರ್ಣಗೊಳಿಸುವುದಲ್ಲದೇ ಪಕ್ಷದಲ್ಲಿ ತಾನೇ ಪ್ರಶ್ನಾತೀತ ನಾಯಕ, ಹಾಗೆಯೇ ಸಂದರ್ಭ ಎದುರಾದಲ್ಲಿ ಬಂಡಾಯಕ್ಕೂ ಸಿದ್ಧ ಎಂಬ ಸಂದೇಶವನ್ನು ರವಾನಿಸುವ ಚಿಂತನೆಯಲ್ಲಿದ್ದಾರೆ.

ಈ ಹಿನ್ನಲೆಯಲ್ಲೇ ಅವರ ಬೆಂಬಲಿಗರಾದ ಸಚಿವ ಸತೀಶ ಜಾರಕಿಹೊಳಿ ನೇರವಾಗಿ ಶಿವಕುಮಾರ್ ವಿರುದ್ಧ ಸಮರ ಸಾರಿದ್ದಾರೆ. ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ತಮ್ಮ ಪುತ್ರಿಯನ್ನು ಸೋಲಿಸಲು ಕಾಂಗ್ರೆಸ್ ನ ಮುಖಂಡರೇ ಪಿತೂರಿ ನಡೆಸಿದರು. ಆದರೆ ಆ ಪ್ರಯತ್ನದಲ್ಲಿ ಸಫಲವಾಗಲಿಲ್ಲ ಎಂದು ನೇರವಾಗಿ ಆರೋಪಿಸುವ ಮೂಲಕ ಯುದ್ಧ ಸಾರಿದ್ದಾರೆ. ಚುನಾವಣೆ ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಿರಿಯ ಮುಖಂಡ ಲಕ್ಷ್ಮಣ ಸವದಿ ಮತ್ತು ಅವರ ಬೆಂಬಲಿಗರ ವಿರುದ್ಧ ನೇರ ಸಂಘರ್ಷಕ್ಕೆ ಇಳಿಯುವ ಮೂಲಕ ಸತೀಶ್ ಶಿವಕುಮಾರ್ ವಿರುದ್ಧ ಸಮರ ಸಾರಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ತಾನಲ್ಲ ಎಂದು ಹೇಳುತ್ತಿರುವ ಸತೀಶ್, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ಹಿಂದೆ ಆಡಿದ ಮಾತಿನಂತೆ ಅಧ್ಯಕ್ಷರನ್ನು ಬದಲಾಯಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಒಂದು ಮಾಹಿತಿಯ ಪ್ರಕಾರ ಸತೀಶ್ ಜತೆ 25 ಕ್ಕೂ ಹೆಚ್ಚು ಶಾಸಕರು ಬೆಂಬಲಕ್ಕೆ ಇದ್ದಾರೆ ಎಂದೂ ಹೇಳಾಗುತ್ತಿದೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಜೋರಾದರೆ ಸತೀಶ್ ನೇರವಾಗಿ ರಂಗಕ್ಕಿಳಿದು ಬಲಾಬಲ ಪ್ರದರ್ಶನಕ್ಕೂ ಸಿದ್ಧವಾಗಲಿದ್ದಾರೆ ಎಂಬುದು ಕಾಂಗ್ರೆಸ್ ಮೂಲಗಳು ನೀಡುವ ವಿವರಣೆ.

AICC President Mallikarjuna Kharge- CM Siddaramaiah
ಡಿಕೆಶಿ ವಿರುದ್ಧ ಸಿದ್ದು ಬೆಂಬಲಿಗರ ಒಕ್ಕಲಿಗ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ಗೋಕಾಕ್ ಬ್ರದರ್ಸ್ ಎಂದೇ ಖ್ಯಾತಿಯಾದ ಜಾರಕಿಹೊಳಿ ಕುಟುಂಬದ ಪೈಕಿ ರಮೇಶ ಜಾರಕಿಹೊಳಿಗೆ ಹೋಲಿಸಿದರ ಸತೀಶ್ ಮಾತನಾಡುವುದು ತುಂಬಾ ಕಡಿಮೆ. ಮೇಲ್ನೋಟಕ್ಕೆ ಒಂಟಿಯಂತೆ ಕಾಣುತ್ತಾರೆ. ಅವರ ರಾಜಕೀಯ ಕಾರ್ಯಾಚರಣೆಗಳೇ ನಿಗೂಢ. ಬೆಳಗಾವಿ, ಸೇರಿದಂತೆ ಮುಂಬೈ ಕರ್ನಾಟಕ ಪ್ರಾಂತ್ಯದ ಕೆಲವು ಭಾಗಗಳ ರಾಜಕಾರಣದ ಮೇಲೆ ಅವರ ಹಿಡಿತ ಇದೆ. ಹೀಗಾಗೇ ಅವರ ಮುಂದಿನ ರಾಜಕೀಯ ಹೆಜ್ಜೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಒಂದು ವೇಳೆ ಸಿದ್ದರಾಮಯ್ಯ ನಾಯಕತ್ವ ಬದಲಾವಣೆಯೇ ಆಗುವುದು ಅಂತಿಮವೇ ಆದರೆ ಅವರ ನಂತರ ಯಾರು ಎಂಬ ಚರ್ಚೆಯೂ ಎದ್ದಿದೆ. ಶಿವಕುಮಾರ್ ಶತಾಯ ಗತಾಯ ಆ ಸ್ಥಾನ ಪಡೆಯಲೇ ಬೇಕೆಂಬ ಹೋರಾಟಕ್ಕೆ ಬಿದ್ದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವರೆಗೆ ಅವರ ವಿರೋಧ ಕಟ್ಟಿಕೊಂಡು ಹೆಚ್ಚು ಸಂಖ್ಯೆಯ ಶಾಸಕರು ಶಿವಕುಮಾರ್ ಗೆ ಬೆಂಬಲಿಸುವ ಸಾಧ್ಯತೆ ಕಡಿಮೆ. ಹಾಗಿದ್ದರೆ ಮತ್ತಿನ್ಯಾರು ಎಂಬ ಪ್ರಶ್ನೆಗೆ ಹಿರಿಯ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಮುಂಚೂಣಿಗೆ ಬಂದಿದೆ.

ದಿಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಚಿವರೂ ಆದ ಕಾಂಗ್ರೆಸ್ ನಾಯಕರೊಬ್ಬರ ಬಳಿ ಮಾತನಾಡಿದ ಖರ್ಗೆ ರಾಜ್ಯ ರಾಜಕಾರಣಕ್ಕೆ ಮರಳುವ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆಂಬ ಮಾಹಿತಿ ಬಂದಿದೆ. ಒಂದು ವೇಳೆ ಇದೇ ನಿಜವಾದರೆ ರಾಜ್ಯ ರಾಜಕಾರಣದ ಒಟ್ಟು ಸಮೀಕರಣವೇ ಬದಲಾಗಬಹುದು. ಹುಬ್ಬಳ್ಳಿಯಲ್ಲಿ ಮುಂದಿನ ತಿಂಗಳು ನಡೆಯುವ ಸಿದ್ದರಾಮಯ್ಯ ಹುಟ್ಟು ಹಬ್ಬದ ನೆಪದ ಅಹಿಂದ ಸಮಾವೇಶದಲ್ಲಿ ಸ್ಪಷ್ಟ ಉತ್ತರ ಸಿಕ್ಕಬಹುದು.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com