ಡಿಕೆಶಿ ಮಹತ್ವಾಕಾಂಕ್ಷೆಗೆ ಸ್ವಪಕ್ಷೀಯರೆ ಅಡ್ಡಗಾಲು! (ಸುದ್ದಿ ವಿಶ್ಲೇಷಣೆ)

ಮುಂದೆ ನಡೆಯಲಿರುವುದು ಅಳಿವು ಉಳಿವಿನ ಮಹಾ ಸಮರ. ಗೆದ್ದರೆ ಮುಖ್ಯಮಂತ್ರಿ ಕುರ್ಚಿ ಏರುವ ಕನಸು ಈಡೇರಿಕೆಗೆ ದಾರಿ ಸುಲಭ. ಸೋತರೆ…. ರಾಜಕೀಯ ಭವಿಷ್ಯವೇ ಅಂತ್ಯ.
DK Shivakumar
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)online desk
Updated on

ಮುಂದೆ ನಡೆಯಲಿರುವುದು ಅಳಿವು ಉಳಿವಿನ ಮಹಾ ಸಮರ. ಗೆದ್ದರೆ ಮುಖ್ಯಮಂತ್ರಿ ಕುರ್ಚಿ ಏರುವ ಕನಸು ಈಡೇರಿಕೆಗೆ ದಾರಿ ಸುಲಭ. ಸೋತರೆ…. ರಾಜಕೀಯ ಭವಿಷ್ಯವೇ ಅಂತ್ಯ. ಯುದ್ಧದಲ್ಲಿ ಮುಂದಿರುವುದು ಪ್ರಬಲ ಎದುರಾಳಿಗಳು. ಅವರನ್ನು ಎದುರಿಸುವುದು ಸುಲಭವೇನಲ್ಲ.

ಬೆಂಗಳೂರು ನಗರದ ಸರಹದ್ದಿಗೆ ಅಂಟಿಕೊಂಡಿರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಒಟ್ಟು ಪರಿಸ್ಥಿತಿ ಇದು. ಈಗಾಗಲೇ ಇಲ್ಲಿಂದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯುತ್ತಾರೆ ಎಂಬ ಸುದ್ದಿಗಳ ಕಾರಣಕ್ಕಾಗಿ ಅಧಿಕೃತವಾಗಿ ಚುನಾವಣೆ ಘೋಷಣೆ ಆಗುವ ಮುನ್ನವೇ ಚಟುವಟಿಕೆ ಬಿರುಸುಗೊಂಡಿದೆ.

ಈ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರೂ ಆದ ಹಿನ್ನಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇದೂ ಸೇರಿದಂತೆ ಬಳ್ಳಾರಿ ಜಿಲ್ಲೆಯ ಸೊಂಡೂರು, ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ.

ಆದರೆ ಉಳಿದೆರಡು ಕ್ಷೇತ್ರಗಳಿಗಿಂತ ಇಲ್ಲಿ ಈಗಾಗಲೇ ಚುನಾವಣೆ ಕಾವು ಹೊಗೆಯಾಡಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಅದು ಧಗ ಧಗಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿರ್ಗಮಿತ ಲೋಕಸಭಾ ಸದಸ್ಯ ಹಾಗೂ ಶಿವಕುಮಾರ್ ರವರ ಸೋದರ ಡಿ.ಕೆ.ಸುರೇಶ್ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ವಿರುದ್ಧ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋತಿದ್ದಾರೆ. ಚೆನ್ನಪಟ್ಟಣ ಇದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವುದರಿಂದ ಉಪ ಚುನಾವಣೆಗೆ ಮಹತ್ವ ಬಂದಿದೆ.

ಪಕ್ಕದ ಕನಕಪುರ ಕ್ಷೇತ್ರದಿಂದ ಶಿವಕುಮಾರ್ ವಿಧಾನಸಭೆಗೆ ಆಯ್ಕೆಯಾಗಿ ಶಾಸಕರಾಗಿದ್ದರೂ ಮತ್ತೆ ಚೆನ್ನಪಟ್ಟಣ ಕ್ಷೆತ್ರದಿಂದ ಉಪ ಚುನಾವಣೆಗೆ ಇಳಿಯಲು ನಿರ್ಧರಿಸಿರುವುದರ ಹಿಂದೆ ಪ್ರಮುಖವಾಗಿ ಎರಡು ಕಾರಣಗಳಿವೆ. ತಮ್ಮ ಪರಂಪರಾನುಗತ ರಾಜಕೀಯ ಎದುರಾಳಿ ದೇವೇಗೌಡರ ಕುಟುಂಬವನ್ನು ಮಣಿಸುವುದು, ಆ ಮೂಲಕ ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗ ಸಮುದಾಯದ ನಾಯಕತ್ವ ತಮ್ಮ ಕೈ ತಪ್ಪಿ ಗೌಡರ ಕುಟುಂಬದ ವಶವಾಗದಂತೆ ಎಚ್ಚರ ವಹಿಸಿವುದು ಇದಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸೋದರನ ಪರಾಭವದ ನಂತರ ಪಕ್ಷದೊಳಗೇ ತನ್ನ ವಿರುದ್ಧ ವಿರೋಧಿಗಳು ಪ್ರಬಲರಾಗುವ ಪ್ರಯತ್ನ ನಡೆಸಿರುವುದು. ಪಕ್ಷದೊಳಗೆ ಕೈ ತಪ್ಪಿ ಹೋಗಬಹುದಾದ ತನ್ನ ಸಾರ್ವಭೌಮತ್ವವನ್ನು ಮರಳಿ ಸ್ಥಾಪಿಸಿವುದು. ಇದಲ್ಲದೇ ಉಪ ಚುನಾವಣೆಯಲ್ಲಿ ಗೆದ್ದರೆ ತೆರವಾಗಲಿರುವ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಸೋದರ ಡಿ.ಕೆ.ಸುರೇಶ್ ಅವರನ್ನೇ ನಿಲ್ಲಿಸಿ ಗೆಲ್ಲಿಸಿಕೊಳ್ಳುವುದು. ಹಾಗೆಯೇ ಈ ಎಲ್ಲ ವಿದ್ಯಮಾನಗಳ ನಂತರ ತನ್ನ ಮಹತ್ವಾಕಾಂಕ್ಷೆಯ ಪಟ್ಟವಾದ ಮುಖ್ಯಮಂತ್ರಿ ಸ್ಥಾನ ಪಡೆಯಲು ಹೋರಾಟ ಆರಂಭಿಸುವುದು. ಇವಿಷ್ಟು ಸದ್ಯಕ್ಕೆ ಅವರ ಮುಂದಿರುವ ಅಜೆಂಡಾ.

DK Shivakumar
ಬೀಸೋ ದೊಣ್ಣೆಯಿಂದ ಪಾರು: ಯಡಿಯೂರಪ್ಪ ಮುಂದಿನ ನಡೆಯೇ ಈಗ ಕುತೂಹಲ! (ಸುದ್ದಿ ವಿಶ್ಲೇಷಣೆ)

ಈಗಾಗಲೇ ಈ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿರುವ ಶಿವಕುಮಾರ್ ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಒಬ್ಬ ರಾಜಕೀಯ ನಾಯಕನಾಗಿ ಅದೊಂದು ಸಹಜ ಪ್ರಕ್ರಿಯೆ ಕೂಡಾ. ಈ ವಿಚಾರದಲ್ಲಿ ಮಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ ಅಥವಾ ಕಾಂಗ್ರೆಸ್ ಹೈಕಮಾಂಡ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೆ ನೋಡಿದರೆ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಈ ಇಬ್ಬರು ನಾಯಕರು ಮುಖಾಮುಖಿ ಭೇಟಿಯಾಗಿದ್ದೇ ಕಡಿಮೆ.

ಫಲಿತಾಂಶದ ಹಿನ್ನೆಡೆ ಕುರಿತು ಇಬ್ಬರ ನಡುವೆಯೂ ಚರ್ಚೆ ನಡೆದಿಲ್ಲ. ಒಂದು ರೀತಿಯಲ್ಲಿ ಇಬ್ಬರ ನಡುವಿನ ಅಂತರವೂ ದೊಡ್ಡದಾಗುತ್ತಿದೆ. ಇಬ್ಬರೂ ನಾಯಕರು ಪ್ರತಿಷ್ಠೆಗೆ ಬಿದ್ದಿರುವುದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗುದ ಸಾಧ್ಯತೆಗಳೂ ಇಲ್ಲದಿಲ್ಲ. ಆದರೆ ಒಂದಂತೂ ಸ್ಪಷ್ಟ ಉಪ ಚುನಾವಣೆ ನಡೆಯಲಿರುವ ಉಳಿದೆರಡು ವಿಧಾನಸಭಾ ಕ್ಷೇತ್ರಗಳ ಗೆಲುವಿಗೆ ಅಗತ್ಯ ರಣನೀತಿ ರೂಪಿಸುವ ಉಮೇದು ಕಾಂಗ್ರೆಸ್ ನಲ್ಲಿ ಕಾಣುತ್ತಿಲ್ಲ. ಚೆನ್ನಪಟ್ಟಣ ವಿಧಾನಸಭಾ ಕ್ಷೆತ್ರದಲ್ಲಿ ಶಿವಕುಮಾರ್ ಸ್ವತಹಾ ಸ್ಪರ್ಧಿಸಿದರೂ ಈಗಿನ ರಾಜಕೀಯ ಸನ್ನಿವೇಶದಲ್ಲಿ ಗೆಲುವು ಸುಲಭ ಸಾಧ್ಯವೇನೂ ಅಲ್ಲ.

ಯೋಗೀಶ್ವರ್ ಪ್ರಬಲ ಶಕ್ತಿ

ಏಕೆಂದರೆ ಈ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ಹಾಗೂ ಈಗ ಬಿಜೆಪಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೀಶ್ವರ್ ಪ್ರಾಬಲ್ಯ ಇದ್ದೇ ಇದೆ.

ಮೂರು ವಿಧಾನಸಭಾ ಚುನಾವಣೆಗಳಲ್ಲಿ ಇಲ್ಲಿಂದ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಎರಡರಲ್ಲಿ ಸೋತಿದ್ದರೂ ಗಳಿಸಿರುವ ಮತಗಳ ಪ್ರಮಾಣ ದೊಡ್ಡದು. ಹೀಗಾಗಿ ಅವರ ವಿರುದ್ದ ಹಗರಣಗಳ ಆರೋಪಗಳು ಏನೇ ಇರಲಿ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ 15,915 ಮತಗಳ ಅಂತರದಿಂದ ಸೋತರೂ ಬಿಜೆಪಿ ಅಭ್ಯರ್ಥಿಯಾಗಿ 80, 677 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಂಗಾಧರ್ ಕೇವಲ 15, 374 ಮತಗಳನ್ನು ಮಾತ್ರ ಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಮತಗಳಿಕೆ ಪ್ರಮಾಣದ ವ್ಯತ್ಯಾಸ ಕೇವಲ ಶೇ. 8 ರಷ್ಟಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶ.

DK Shivakumar
ಮುಖ್ಯಮಂತ್ರಿ ಸ್ಥಾನ: ಸಿದ್ದು–ಡಿಕೆಶಿ ನಡುವೆ ಮತ್ತೆ ಚದುರಂಗದಾಟ ಆರಂಭ (ಸುದ್ದಿ ವಿಶ್ಲೇಷಣೆ)

ಇದಕ್ಕೂ ಮುನ್ನ ನಡೆದಿದ್ದ 2018 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೀಶ್ವರ್ 80099 ಮತಗಳನ್ನು ಗಳಿಸಿದ್ದರೆ ಕುಮಾರಸ್ವಾಮಿ 87995 ಮತಗಳನ್ನು ಗಳಿಸಿದ್ದರು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ಅವರಿಗೆ 64162 ಮತಗಳು ಬಂದಿದ್ದವು. 1999 ಮತ್ತು 2008 ರ ಚುನಾವಣೆಗಳಲ್ಲೂ ಅವರ ಮತಗಳಿಕೆ ಪ್ರಮಾಣ ಹೆಚ್ಚುತ್ತಲೇ ಬಂದಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಯೋಗೀಶ್ವರ್ ಇಲ್ಲಿ ರಾಜಕೀಯವಾಗಿ ಪ್ರಬಲ ಶಕ್ತಿ ಎಂಬದನ್ನು ಅಲ್ಲಗಳೆಯಲು ಆಗುವುದಿಲ್ಲ. ಈ ಬಾರಿ ಉಪ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲು ಆಸಕ್ತರಾಗಿದ್ದಾರೆ. ಆದರೆ ಜೆಡಿಎಸ್ ಗೆದ್ದ ಕ್ಷೇತ್ರವಾಗಿರುವುದರಿಂದ ಚೆನ್ನಪಟ್ಟಣದಿಂದ ದೇವೇಗೌಡರ ಕುಟುಂಭದ ಸದಸ್ಯರೇ ಒಬ್ಬರು ಚುನಾವಣೆಗೆ ಸ್ಪರ್ಧಿಸುತ್ತಾರೆ. ಹೀಗಾಗಿ ಎರಡೂ ಪಕ್ಷಗಳು ಮೈತ್ರಿಕೂಟಕ್ಕೇ ಸೇರಿದವಾದರೂ ಜೆಡಿಎಸ್ ಈ ಕ್ಷೇತ್ರವನ್ನು ಭವಿಷ್ಯದ ರಾಜಕಾರಣದ ದೃಷ್ಟಿಯಿಂದಲೂ ತನ್ನ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದೆ.

ಸದ್ಯಕ್ಕೆ ಯೋಗೀಶ್ವರ್ ಮೈತ್ರಿಕೂಟದಿಂದ ಯಾರೇ ಅಭ್ಯರ್ಥಿಯಾದರೂ ಅವರ ಪರ ತಾನು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದೇ ನಿರ್ಧಾರಕ್ಕೆ ಅವರು ಬದ್ದರಾಗಿರುತ್ತಾರಾ ಎಂಬುದನ್ನು ಹೇಳಲು ಆಗದು.

ನಿಖಿಲ್ ಜೆಡಿಎಸ್ ಅಭ್ಯರ್ಥಿ?

ಕಳೆದ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋತ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಈ ಕ್ಷೇತ್ರದಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿ ಸಂದರ್ಭಗಳಲ್ಲಿ ಅವರನ್ನು ತನ್ನ ಜತೆಗೇ ಕರೆದೊಯ್ಯುತ್ತಿರುವ ಕುಮಾರಸ್ವಾಮಿ ಪುತ್ರನಿಗೊಂದು ರಾಜಕೀಯವಾದ ಭದ್ರ ನೆಲೆ ಒದಗಿಸಲು ಕಸರತ್ತು ನಡೆಸಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನಿರ್ಧಾರವೇ ಅಂತಿಮವಾಗಲಿದೆ. ಹಾಗೇನಾದರೂ ಆದರೆ ಗೌಡರ ಪುತ್ರಿ ಹಾಗೂ ಗ್ರಾಮಾಂತರ ಲೋಕಸಭಾ ಕ್ಷೇತ್ರದ ನಿಯೋಜಿತ ಸದಸ್ಯರೂ ಆದ ಡಾ. ಸಿ.ಎನ್. ಮಂಜುನಾಥ್ ಅವರ ಪತ್ನಿ ಡಾ. ಅನಸೂಯ ಅವರು ಕಣಕ್ಕಿಳಿಯುತ್ತಾರೆಂದೂ ಹೇಳಲಾಗುತ್ತಿದೆ. ಆದರೆ ಸದ್ಯಕ್ಕೆ ನಿಖಿಲ್ ಸ್ಪರ್ಧೆಯೇ ಅಂತಿಮ ಎನ್ನುವ ವಾತಾವರಣ ನಿರ್ಮಾಣವಾಗಿದೆ.

ಡಿಕೆಶಿಗೆ ಸ್ವಕ್ಷೀಯರೇ ವಿರೋಧಿಗಳು:

ಚೆನ್ನಪಟ್ಟಣದಿಂದ ಸ್ಪರ್ಧಿಸಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾದಿ ಸುಗಮವಾಗೇನೂ ಇಲ್ಲ. ಒಂದು ವೇಳೆ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ಕಾಂಗ್ರೆಸ್ ನಲ್ಲೇ ವ್ಯೂಹ ತಯಾರಾಗಿದೆ. ಲೋಕಸಭಾ ಚುನಾವಣೆ ನಂತರ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಕುರಿತು ಒತ್ತಾಯ ಕಾಂಗ್ರೆಸ್ ನಲ್ಲಿ ಕೇಳಿ ಬರುತ್ತಿದೆ. ಹೀಗೆ ಒತ್ತಾಯ ಮಾಡುತ್ತಿರುವವರು ಸಿದ್ದರಾಮಯ್ಯ ಬೆಂಬಲಿಗ ಸಚಿವರು ಎಂಬುದು ಇಲ್ಲಿ ಗಮನಾರ್ಹ. ಹಾಗೆಯೇ ಬೆಳಗಾವಿಯ ಹಿರಿಯ ಕಾಂಗ್ರೆಸ್ ನಾಯಕ, ಸಚಿವ ಸತೀಶ ಜಾರಕಿಹೊಳಿ ಚುನಾವಣೆ ನಂತರ ಬಹಿರಂಗವಾಗೇ ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರೊಬ್ಬರಷ್ಟೇ ಅಲ್ಲ ಇಡೀ ಜಾರಕಿಹೊಳಿ ಕುಟುಂಬವೇ ಎದುರಾಗಿ ನಿಂತಿದೆ. ಇದು ಈ ಉಪ ಚುನಾವಣೆಯಲ್ಲೂ ನಿರ್ಣಾಯಕ ಘಟಕ್ಕೆ ತಲಪುವ ಎಲ್ಲ ಸಾಧ್ಯತೆಗಳೂ ಇವೆ.

ಮುಖ್ಯಮಂತ್ರಿ ಹುದ್ದೆಗೆ ಏರುವ ಆತುರದಲ್ಲಿರುವ ಶಿವಕುಮಾರ್ ರನ್ನು ಈ ಉಪ ಚುನಾವಣೆಯಲ್ಲಿ ಸೋಲಿಸಿದರೆ ಉಪ ಮುಖ್ಯಮಂತ್ರಿ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ತ್ಯಜಿಸಬೇಕಾಗುತ್ತದೆ. ಹೀಗಾದಾಗ ರಾಜಕೀಯವಾಗಿ ಮೂಲೆಗುಂಪಾಗುತ್ತಾರೆ. ಅವರೊಬ್ಬರನ್ನು ಮಣಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರತಿಸ್ಪರ್ಧಿಯೇ ಇಲ್ಲದಂತಾಗುತ್ತದೆ ಆಗ ಸಿದ್ದರಾಮಯ್ಯ ಹಾದಿ ಸುಗಮವಾಗುತ್ತದೆ ಎಂಬುದು ಕಾಂಗ್ರೆಸ್ ನಲ್ಲೇ ಇರುವ ವಿರೋಧಿ ಬಣದಿಂದ ನಡೆದಿರುವ ಲೆಕ್ಕಾಚಾರ.

DK Shivakumar
ಸರ್ಕಾರದ ಸಂಭ್ರಮದ ಮೇಲೆ ಹಗರಣದ ಕರಿ ನೆರಳು (ಸುದ್ದಿ ವಿಶ್ಲೇಷಣೆ)

ಜಾರಕಿಹೊಳಿಗೆ ಬಿಜೆಪಿ ಗಾಳ ?

ಸಚಿವ ಸಂಪುಟ ಪುನಾರಚನೆ ಸಂದರ್ಭ ಎದುರಾಗಿ ಬೆಳಗಾವಿಯ ಇನ್ನೊಬ್ಬ ಮುಖಂಡ ಲಕ್ಷ್ಮಣ ಸವದಿಯವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಬಂಡಾಯ ಏಳಲು ಸತೀಶ ಜಾರಕಿಹೊಳಿ ಸಿದ್ಧವಾಗಿದ್ದಾರೆ. ಅವರು ಮಾಜಿ ಮಖ್ಯಮಂತ್ರಿ ಕುಮಾರಸ್ವಾಮಿಗೂ ಆಪ್ತರು ಹಾಗೆಯೇ ಬಿಜೆಪಿ ನಾಯಕರಿಗೂ ಪರಮಾಪ್ತರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಒಂದು ಮಾಹಿತಿ ಪ್ರಕಾರ ಸತೀಶ್ ಜತೆ 25 ಮಂದಿ ಕಾಂಗ್ರೆಸ್ ಶಾಸಕರು ಇದ್ದಾರೆ ಎಂದೂ ಹೇಳಲಾಗುತ್ತಿದೆ. ಇದನ್ನು ಮನಗಂಡೇ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೂಲಕ ಅವರಿಗೆ ಗಾಳ ಹಾಕಿದ್ದಾರೆ. ಶೆಟ್ಟರ್ ಬೆಳಗಾವಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com