ಸರ್ಕಾರದ ಸಂಭ್ರಮದ ಮೇಲೆ ಹಗರಣದ ಕರಿ ನೆರಳು (ಸುದ್ದಿ ವಿಶ್ಲೇಷಣೆ)

ನಡೆದಿರುವುದು ಬಹು ದೊಡ್ಡ ಹಗರಣ. ಆಡಳಿತ ಕಾಂಗ್ರೆಸ್ ಪಕ್ಷದ ಸಂಭ್ರಮವನ್ನೇ ಅದು ಕಸಿಯುತ್ತಾ? ನಿಜಕ್ಕೂ ಆರೋಪಿ ಸ್ಥಾನದಲ್ಲಿರುವವರು ಅಮಾಯಕರಾ? ಸಚಿವರ ಗಮನಕ್ಕೇ ಬರದೇ ಇಂಥದೊಂದು ದೊಡ್ಡ ಮೊತ್ತದ ಹಣದ ಅಕ್ರಮ ವಹಿವಾಟು ನಡೆಯಲು ಸಾಧ್ಯವಾ?
File pic
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ- ಸಿಎಂ ಸಿದ್ದರಾಮಯ್ಯonline desk
Updated on

ನಡೆದಿರುವುದು ಬಹು ದೊಡ್ಡ ಹಗರಣ. ಆಡಳಿತ ಕಾಂಗ್ರೆಸ್ ಪಕ್ಷದ ಸಂಭ್ರಮವನ್ನೇ ಅದು ಕಸಿಯುತ್ತಾ?  ನಿಜಕ್ಕೂ ಆರೋಪಿ ಸ್ಥಾನದಲ್ಲಿರುವವರು ಅಮಾಯಕರಾ? ಸಚಿವರ ಗಮನಕ್ಕೇ ಬಾರದೆ ಇಂಥದೊಂದು ದೊಡ್ಡ ಮೊತ್ತದ ಹಣದ ಅಕ್ರಮ ವಹಿವಾಟು ನಡೆಯಲು ಸಾಧ್ಯವಾ?

ರಾಜ್ಯ ಸರ್ಕಾರದ ಅಧೀನ ಸಂಸ್ಥೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 87 ಕೋಟಿ ರೂ ಹಗರಣಕ್ಕೆ ಸಂಬಂಧಿಸಿದಂತೆ ಈಗ ತಲೆ ಎತ್ತಿರುವ ಪ್ರಶ್ನೆ ಇದು.

ಈಗಾಗಲೇ ವರದಿ ಆಗಿರುವಂತೆ ನಿಗಮದ ಸಿಬ್ಬಂದಿಯಾಗಿದ್ದ ಚಂದ್ರಶೇಖರನ್ ಅವರ ಆತ್ಮಹತ್ಯೆ ನಂತರ ಸಿಕ್ಕಿರುವ ಮರಣ ಪೂರ್ವ ಪತ್ರ(ಡೆತ್ ನೋಟ್) ದಲ್ಲಿ ಪ್ರಸ್ತಾಪಿತವಾಗಿರುವ ಅಂಶಗಳನ್ನೂ ಒಳಗೊಂಡಂತೆ ಇಡೀ ಪ್ರಕರಣವನ್ನು ಗಮನಿಸಿದಾಗ ದೊಡ್ಡವರು ಮತ್ತು ಅಧಿಕಾರಸ್ಥಾನದಲ್ಲಿರುವ ಪ್ರಭಾವಿಗಳ ಆದೇಶವಿಲ್ಲದೇ ಇಂಥದೊಂದು ಅಕ್ರಮ ನಡೆಯಲು ಸಾಧ್ಯವೇ ಇಲ್ಲ ಎಂಬ ಸಂಗತಿ ಗೊತ್ತಾಗುತ್ತದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ ಕೆಲವು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಆದರೆ ಈ ತನಿಖೆಯಿಂದ ಹಗರಣದ ಹಿಂದಿರುವ ಪ್ರಭಾವೀ ವ್ಯಕ್ತಿಗಳ ಮುಖವಾಡ ಬಯಲಾಗುತ್ತಾ ಎಂಬುದು ಸದ್ಯದ ಪ್ರಶ್ನೆ.

ಇದೀಗ ಇಡೀ ಪ್ರಕರಣ ರಾಜಕೀಯ ತಿರುವು ಪಡೆದಿದ್ದು ಸಚಿವ ನಾಗೇಂದ್ರ ಕೊರಳಿಗೆ ಸುತ್ತಿಕೊಂಡಿದೆಯಲ್ಲದೇ ಅವರ ರಾಜೀನಾಮೆಗೂ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಸಾಮಾನ್ಯವಾಗಿ ಇಂತಹ ಹಗರಣಗಳಲ್ಲಿ ಸಚಿವರು ಅಥವಾ ಅಧಿಕಾರದಲ್ಲಿರುವ ಯಾರೇ ವ್ಯಕ್ತಿಗಳ ಹೆಸರು ಕೇಳಿ ಬಂದಾಗ ಅವರ ರಾಜೀನಾಮೆಗೆ ಪ್ರತಿಪಕ್ಷಗಳಿಂದ ಒತ್ತಡಗಳು ಬರುವುದು, ರಾಜಿನಾಮೆಗೆ ಆಗ್ರಹಿಸಿ ಹೋರಾಟ ನಡೆಸುವುದು ಸರ್ವೇ ಸಾಮಾನ್ಯ. ಹಿಂದೆ ಅಧಿಕಾರ ನಡೆಸಿದ ಎಲ್ಲ ಪಕ್ಷಗಳ ಕಾಲದಲ್ಲೂ ಇಂಥದ್ದು ನಡೆದೇ ಇದೆ. ಮೊದಲು ರಾಜೀನಾಮೆ ನೀಡಲು ಒಪ್ಪದ ಸಚಿವರು ನಂತರ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಟರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ ಪ್ರಸಂಗಗಳು ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಕಾಲದಲ್ಲೂ ನಡೆದಿತ್ತು.

ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಪ್ರಕರಣದಲ್ಲಿ ಅಂದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಹೆಸರು ಕೇಳಿಬಂದಿತ್ತು. ನಂತರ ಅವರು ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದು ಇತಿಹಾಸ. ಈಗಲೂ ಅಷ್ಟೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ತಾವಾಗೇ ರಾಜೀನಾಮೆ ನೀಡುತ್ತಾರಾ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದಿಂದ ವಜಾ ಮಾಡುತ್ತಾರಾ ಎಂಬುದು ಸದ್ಯದ ಪ್ರಶ್ನೆ.

ಈ ಪ್ರಕರಣದಲ್ಲಿ ನಿಗಮದ ವತಿಯಿಂದ ಅಕ್ರಮ ನಡೆದಿರುವುದು ನಿಜ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಸಂಬಂಧಿತ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದ್ದು ಅವರನ್ನು ಅಮಾನತ್ತಿನಲ್ಲೂ ಇಡಲಾಗಿದೆ. ಆದರೆ ಪ್ರಕರಣ ಇಲ್ಲಿಗೇ ಮುಗಿಯುವುದಿಲ್ಲ. ರಾಜ್ಯ ಸರ್ಕಾರ ನಿಗಮದ ಮೂಲಕ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಬಿಡುಗಡೆ ಮಾಡಿ ಹಣದಲ್ಲಿ ಭಾರೀ ಮೊತ್ತ ನೆರೆಯ ತೆಲಂಗಾಣ ರಾಜ್ಯದ ಬ್ಯಾಂಕಿನ ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಆಗಿದೆ. ಇದೇ ಈಗ ಸಂಶಯದ ಮೂಲ.

File pic
ಮುಖ್ಯಮಂತ್ರಿ ಸ್ಥಾನ: ಸಿದ್ದು–ಡಿಕೆಶಿ ನಡುವೆ ಮತ್ತೆ ಚದುರಂಗದಾಟ ಆರಂಭ (ಸುದ್ದಿ ವಿಶ್ಲೇಷಣೆ)

ಸಾಮಾನ್ಯವಾಗಿ ಸರ್ಕಾರ ಹಾಗು ಅದರ ಅಧೀನ ಸಂಸ್ಥೆಗಳಲ್ಲಿ ಸಣ್ಣ ಮೊತ್ತದ ಹಣ ಬಿಡುಗಡೆ ಆಗಬೇಕೆಂದರೂ ಅದು ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಬೇಕಿದೆ? ಯಾವ ಲೆಕ್ಕ ಶೀರ್ಷಿಕೆಯಿಂದ ಬಿಡುಗಡೆ ಆಗಬೇಕು? ಲಭ್ಯ ಇರುವ ಅನುದಾನದ ಪ್ರಮಾಣ ಎಷ್ಟು? ಇತ್ಯಾದಿ ವಿವರಗಳುಳ್ಳ ಕಡತ ತಯಾರಾಗುತ್ತದೆ. ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಅಧಿಕೃತ ಸೂಚನೆ ಅನುಸಾರ ಸಿದ್ಧಗೊಳ್ಳುವ  ಕಡತ ನಂತರ ಅನುಮೋದನೆ ನಂತರ ಸಂಬಂಧ ಪಟ್ಟ ಅಧಿಕಾರಿಯ ಅಧಿಕೃತ ಸಹಿಯೊಂದಿಗೆ ಆದೇಶವಾಗಿ ಹೊರ ಬೀಳುತ್ತದೆ.

ನಂತರವೇ ಸಂಬಂಧಪಟ್ಟ ಬಾಬ್ತಿಗೆ ಹಣ ಬಿಡುಗಡೆ ಆಗುತ್ತದೆ. ಇದಿಷ್ಟೂ ಪ್ರಕ್ರಿಯೆ ಇಲಾಖೆ ಆಡಳಿತದ ವಿವಿಧ ಹಂತಗಳಲ್ಲಿ ನಡೆಯುವುದರಿಂದ ಅದಕ್ಕೆ ಸಂಬಂಧಿಸಿದ ಅಧಿಕೃತ ಅನಮೋದನೆ ಇಲ್ಲದೇ ಸರ್ಕಾರಿ ಖಜಾನೆಯಾಗಲೀ ಅಥವಾ ಬ್ಯಾಂಕ್ ಆಗಲೀ ನೇರವಾಗಿ ಹಣ ಬಿಡುಗಡೆಗೆ ಒಪ್ಪಿಗೆ ನೀಡುವುದಿಲ್ಲ. ಕೆಲವೊಮ್ಮೆ ಸರ್ಕಾರದ ಮಾರ್ಗಸೂಚಿ ಅನ್ವಯ ಸಚಿವರ ಅನುಮೋದನೆ ಅಗತ್ಯವಿದ್ದರೆ ಅದಕ್ಕೂ  ಕಡತಕ್ಕೆಅಧಿಕೃತ ಅನುಮೋದನೆ  ಪಡೆಯಲಾಗುತ್ತದೆ. ಸಂಬಂಧಿತ ಪ್ರಕರಣದಲ್ಲಿ ಸಚಿವರು ತಮ್ಮ ಅಭಿಪ್ರಾಯ ದಾಖಲಿಸುವುದು ಕಡ್ಡಾಯ.

ಈ ಪ್ರಕರಣದಲ್ಲಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿರುವ ಸಚಿವ ನಾಗೇಂದ್ರ ಹಗರಣ ನಡೆದಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ನೌಕರ ಚಂದ್ರಶೇಖರನ್ ತಮ್ಮ ಡೆತ್ ನೋಟ್ ನಲ್ಲಿ ಸಚಿವರ ಮೌಖಿಕ ಆದೇಶ ಇತ್ತು ಎಂದು ಉಲ್ಲೇಖಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಾಮಾನ್ಯವಾಗಿ ಸಚಿವರು ಅಥವಾ ಉನ್ನತ ಅಧಿಕಾರಸ್ಥಾನದಲ್ಲಿರುವ ವ್ಯಕ್ತಿಗಳು ನೀಡುವ ಆದೇಶಗಳು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಮಾತ್ರ ಸೀಮಿತವಾಗಿರುತ್ತವೆ. ಕೆಳ ಹಂತದ ಸಿಬ್ಬಂದಿ, ಅಧಿಕಾರಿಗಳಿಗೆ ಸೂಚನೆ ನೀಡಲು ಸಾಧ್ಯವಿಲ್ಲ.

ಹೀಗಾಗಿ ಇಲ್ಲಿ ಸಚಿವರ ಗಮನಕ್ಕೆ ಬರದೇ ಇಷ್ಟು ದೊಡ್ಡ ಮೊತ್ತದ ಹಣ ನೆರೆಯ ರಾಜ್ಯದ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಹೇಗೆ? ಎಂಬುದು ಸದ್ಯದ ಪ್ರಶ್ನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಸಂಭ್ರಮದಲ್ಲಿರುವಾಗಲೇ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪ ಇಡೀ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಹೀಗಾಗಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವ ಮೂಲಕ ಈ ಪ್ರಕರಣ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರವಾಗದಂತೆ ನೋಡಿಕೊಳ್ಳುವ ಚಿಂತನೆ ಮುಖ್ಯಮಂತ್ರಿಗಳದ್ದು. ಆದರೆ ಈ ವಿಚಾರದಲ್ಲಿ ಆಡಳಿತ ಪಕ್ಷದಲ್ಲೇ ಪರ–ವಿರೋಧಗಳು ಇವೆ. ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವು ಸಚಿವರು ಪಕ್ಷದ ಮುಖಂಡರ ವಿರೋಧ ಇದೆ ಎಂದೂ ಹೇಳಲಾಗುತ್ತಿದೆ.

ಹೀಗೆ ಆರೋಪಗಳು ಕೇಳಿ ಬಂದವರ ರಾಜೀನಾಮೆ ಪಡೆಯುತ್ತಾ ಹೋದರೆ ಅದಕ್ಕೆ ಕೊನೆ ಮೊದಲು ಇರುವುದಿಲ್ಲ ಎಂಬುದು ನಾಗೇಂದ್ರ ಪರ ನಿಂತಿರುವ ಸಚಿವರ ವಾದ. ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಡಲಾಗಿದ್ದು ವಿಚಾರಣೆಗೂ ಆದೇಶಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗದೇ ಸಚಿವರ ರಾಜೀನಾಮೆ ಪಡೆದರೆ ಅದು ಸರ್ಕಾರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಈ ಸಚಿವರು, ಮುಖಂಡರ ವಾದ. ಸದ್ಯಕ್ಕೆ ಮುಖ್ಯಮಂತ್ರಿ ಈ ವಿಚಾರದಲ್ಲಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

File pic
ಗೌಡರ ಭಿನ್ನರಾಗ: ಫಲಿತಾಂಶಕ್ಕೆ ಮೊದಲೆ ಅತಂತ್ರವಾದ ಬಿಜೆಪಿ- ಜೆಡಿಎಸ್ ಮೈತ್ರಿ (ಸುದ್ದಿ ವಿಶ್ಲೇಷಣೆ)

ಒಂದುವೇಳೆ ಒತ್ತಾಯಕ್ಕೆ ಕಟ್ಟುಬಿದ್ದು ಸಚಿವ ನಾಗೇಂದ್ರ ರಾಜೀನಾಮೆ ಪಡೆದರೆ ಅದರಿಂದ ಪಕ್ಷ ಮತ್ತು ಸರ್ಕಾರದೊಳಗೆ ಉಂಟಾಗಬಹುದಾದ ರಾಜಕೀಯ ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಚಿಂತಿತರಾಗಿದ್ದಾರೆ. ಇನ್ನು ಮೂರು ದಿನಗ ಕಳೆದರೆ ಲೋಕಸಭೆ ಚುನಾವಣೆ ಮತಗಳ ಎಣಿಕೆ ಮುಗಿದು ಫಲಿತಾಂಶ ಹೊರ ಬರಲಿದೆ. ರಾಜ್ಯದ ಮಟ್ಟಿಗೆ ಅದು ಕಾಂಗ್ರೆಸ್ ಸರ್ಕಾರದ ಮುಂದಿನ ಬೆಳವಣಿಗೆಗಳನ್ನೂ ನಿರ್ಧರಿಸಲಿದೆ. ಹೀಗಾಗಿ ಫಲಿತಾಂಶ ಹೊರಬಿದ್ದ ನಂತರ ಸಂಪುಟ ಪುನಾರಚನೆ ನೆಪದಲ್ಲಿ ಒಂದಷ್ಟು ಮಂದಿ ಅದಕ್ಷ ಸಚಿವರನ್ನು ಕೈಬಿಡುವುದು ಸಿದ್ದರಾಮಯ್ಯ ಆಲೋಚನೆ. ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿನ ಎಂಟು ಅಭ್ಯರ್ಥಿಗಳ ಆಯ್ಕೆ ವಿಚಾರವೇ ಸದ್ಯ ಕಾಂಗ್ರೆಸ್ ನಲ್ಲಿ ಬಿಕ್ಕಟಟು ಸೃಷ್ಟಿಸಿದೆ. ಈಗ ಅದರ ಜತೆಗೆ ಮತ್ತೊಂದಿಷ್ಟು ಸಮಸ್ಯೆಗಳನ್ನು ತಂದುಕೊಳ್ಳಲು ಮುಖ್ಯಮಂತ್ರಿ ತಯಾರಿಲ್ಲ. ಹೀಗಾಗಿ ಸದ್ಯಕ್ಕೆ ಮೂರ್ನಾಲ್ಕು ದಿನಗಳ ಮಟ್ಟಿಗೆ ಪ್ರತಿಪಕ್ಷಗಳಿಗೆ ಈ ಪ್ರಕರಣ ಸರ್ಕಾರದ ವಿರುದ್ಧ ಸಮರಕ್ಕೆ ಒಂದು ನೆಪವಾಗಲಿದೆ.

ಹಾಗೆ ನೋಡಿದರೆ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡುವ ಕೋಟ್ಯಂತರ ರೂ. ಅನುದಾನದ ಮೊತ್ತವನ್ನು ಅಲ್ಪ ಅವಧಿಗೆ ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿಗೆ ಠೇವಣಿ ಇಡುವಂತೆ ಉನ್ನತ ಅಧಿಕಾರಿಗಳ ಮನವೊಲಿಸಿ ಕೆಲಸ ಸಾಧಿಸಿಕೊಳ್ಳುವ ಮಧ್ಯವರ್ತಿಗಳ ಗುಂಪೇ ಇದೆ. ಈ ಗುಂಪು ರಾಜಕೀಯವಾಗಿಯೂ ಪ್ರಭಾವಿ ಆಗಿರುತ್ತದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಇಂಥ ಮಧ್ಯವರ್ತಿಗಳ ಪಾತ್ರವೇನು? ಅವರ ಹಿಂದಿರುವ ರಾಜಕೀಯ ಮುಖಂಡರುಗಳು ಯಾರು? ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಾದ ಸಂಗತಿ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com