ಗೌಡರ ಭಿನ್ನರಾಗ: ಫಲಿತಾಂಶಕ್ಕೆ ಮೊದಲೆ ಅತಂತ್ರವಾದ ಬಿಜೆಪಿ- ಜೆಡಿಎಸ್ ಮೈತ್ರಿ (ಸುದ್ದಿ ವಿಶ್ಲೇಷಣೆ)

ಜೆಡಿಎಸ್ ಬಿಜೆಪಿ ಮೈತ್ರಿ ಮುಂದುರಿಯಲಿದೆಯೆ? ಅಥವಾ ಈ ಚುನಾವಣೆ ನಂತರ ಮುರಿದು ಬೀಳಲಿದೆಯೆ?
HD Kumaraswamy with BJP leaders
ಬಿಜೆಪಿ ನಾಯಕರೊಂದಿಗೆ ಹೆಚ್ ಡಿ ಕುಮಾರಸ್ವಾಮಿonline desk
Updated on

ಜೆಡಿಎಸ್ ಬಿಜೆಪಿ ಮೈತ್ರಿ ಮುಂದುರಿಯಲಿದೆಯೆ? ಅಥವಾ ಈ ಚುನಾವಣೆ ನಂತರ ಮುರಿದು ಬೀಳಲಿದೆಯೆ?

ಸದ್ಯದ ಬೆಳವಣಿಗೆಯನ್ನು ನೋಡಿದರೆ ಈ ಪ್ರಶ್ನೆ ಉದ್ಭವಿಸಿದೆ.

ಮೊದಲ ಹಂತದ ಮತದಾನ ಮುಗಿದು ಎರಡನೇ ಹಂತದ ಲೋಕ ಸಮರಕ್ಕೆ ರಾಜ್ಯದ ಉಳಿದ 14 ಕ್ಷೇತ್ರಗಳು ಸಜ್ಜಾಗುತ್ತಿರುವ ಈ ಹಂತದಲ್ಲಿ ಮೈತ್ರಿ ಮುಂದುವರಿಯುವ ಕುರಿತಂತೇ ಅನುಮಾನಗಳು ಸೃಷ್ಟಿಯಾಗಿವೆ.

ಬಹು ಮುಖ್ಯವಾಗಿ ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಗೆದ್ದೇ ಬಿಟ್ಟೆವೆಂಬ ಆತ್ಮ ವಿಶ್ವಾಸದಲ್ಲೇನೋ ಇದ್ದಾರೆ. ಆದರೆ ಎರಡೂ ಕ್ಷೇತ್ರಗಳಲ್ಲಿನ ಮತದಾನ ವಿದ್ಯಮಾನಗಳನ್ನು ಆಳಕ್ಕಿಳಿದು ಗಮನಿಸಿದರೆ ಅಂತಹ ಸನ್ನಿವೇಶ ಇಲ್ಲ ಎಂಬ ಮಾಹಿತಿ ಸಿಗುತ್ತದೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜತೆಗಿನ ಮೈತ್ರಿ ಫಲಪ್ರದವಾಗಿಲ್ಲ. ಸಮನ್ವಯತೆ ಮೂಡದ ಕಾರಣ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಜತೆಗೆ ಚುನಾವಣೆಯಲ್ಲಿ ಸಹಕರಿಸಿಲ್ಲ. ಮಂಡ್ಯದಲ್ಲಿ ಸಂಸದೆ ಸುಮಲತ ಕಡೇ ದಿನದವರೆಗೂ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬರಲಿಲ್ಲ. ಹಾಸನದಲ್ಲಿ ಆರಂಭದಿಂದಲೂ ಜೆಡಿಎಸ್ ಜತೆ ಅಂತರ ಕಾಯ್ದುಕೊಂಡು ದೂರವೇ ಉಳಿದಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರ ಪಡೆ ಚುನಾವಣೆಯ ಮತದಾನದ ವರೆಗೂ ದೂರವೇ ಉಳಿಯಿತು. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಪರಿಸ್ಥಿತಿ ಆಶಾದಾಯಕವಾಗಿಲ್ಲ ಎಂಬುದು ಸದ್ಯದ ಮಾಹಿತಿ.

ಆದರೂ ಮಂಡ್ಯದಲ್ಲಿ ಅತಿ ಕಡಿಮೆ ಅಂತರದ ಮತಗಳಲ್ಲಿ ತನ್ನ ಗೆಲುವು ಸಾಧ್ಯ ಎಂದು ಕುಮಾರಸ್ವಾಮಿ ಭರವಸೆ ಹೊಂದಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೆಸರಾಂತ ಹೃದ್ರೋಗ ತಜ್ಞ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಹಾದಿಯೂ ಸರಾಗವಾಗಿಲ್ಲ. ರಾಮನಗರ, ಚೆನ್ನಪಟ್ಟಣ, ಮಾಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಎದ್ದು ಕಾಣುತ್ತಿದ್ದು ಡಿ.ಕೆ.ಶಿವಕುಮಾರ್ ಸೋದರರ ಚುನಾವಣಾ ತಂತ್ರಗಳನ್ನು ಹಿಮ್ಮೆಟ್ಟಿಸುವ ವಿಚಾರದಲ್ಲಿ ಜೆಡಿಎಸ್ ಪರದಾಟ ನಡೆಸಿರುವುದು ಕಂಡು ಬಂದಿದೆ. ಹೀಗಾಗಿ ಭಾರೀ ನಿರೀಕ್ಷೆಯೊಂದಿಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ತಮ್ಮ ಕುಟುಂಬದ ಸದಸ್ಯರನ್ನೇ ಬಿಜೆಪಿ ಟಿಕೆಟ್ ನಿಂದ ಕಣಕ್ಕಿಳಿಸಿದ ಜೆಡಿಎಸ್ ಗೆ ಲೆಕ್ಕಾಚಾರಗಳನ್ನು ಗಮನಿಸಿದರೆ ಗೆಲುವು ಸುಲಭದ ತುತ್ತಲ್ಲ. ಕೈ ಜಾರಿದರೂ ಆಶ್ಚರ್ಯ ಪಡಬೇಕಿಲ್ಲ ಎಂಬ ಪರಿಸ್ಥಿತಿ ಉದ್ಭವಿಸಿದೆ.

HD Kumaraswamy with BJP leaders
ಚುನಾವಣೆ ನಂತರ ರಾಜ್ಯದಲ್ಲಿ ಹೊಸ ರಾಜಕೀಯ ಧ್ರುವೀಕರಣ? (ಸುದ್ದಿ ವಿಶ್ಲೇಷಣೆ)

ಬಹು ಮುಖ್ಯವಾಗಿ ಮೈತ್ರಿ ಕುರಿತಂತೆ ಚುನಾವಣೆ ಪೂರ್ತಿ ಮುಗಿಯುವ ಮುನ್ನವೇ ಜೆಡಿಎಸ್ ಅಪಸ್ವರ ಎತ್ತಿದೆ. ಸ್ವತಹಾ ಆ ಪಕ್ಷದ ಪ್ರಶ್ನಾತೀತ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರೇ ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಕೆಲಸ ಮಾಡಲಿಲ್ಲ ಎಂದು ಹೇಳಿರುವುದು ಪರಿಸ್ಥಿತಿಯ ಗಂಭಿರತೆಯನ್ನು ಮನವರಿಕೆ ಮಾಡಿಕೊಟ್ಟಿದೆ. ಮಂಡ್ಯದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಇದೇ ಮಾತುಗಳನ್ನುಆಡಿದ್ದಾರೆ. ಇಬ್ಬರು ನಾಯಕರೂ ಮಂಡ್ಯ ರಾಜಕಾರಣಕ್ಕೆ ಸೀಮಿತವಾಗಿ ಹಾಲಿ ಸಂಸದೆ ಸುಮಲತ ಅವರನ್ನೇ ನೇರವಾಗಿ ಗುರಿಯಾಗಿಸಿಕೊಂಡು ಮಾತನಾಡಿರುವುದು ಮುಂದಿನ ದಿನಗಳಲ್ಲಿ ಮೈತ್ರಿ ದಿಕ್ಕು ತಪ್ಪುವ ಸೂಚನೆಗಳನ್ನು ಹೊರ ಹಾಕಿದೆ.

ವಾಸ್ತವಿಕ ಲೆಕ್ಕಾಚಾರಗಳನ್ನು ಗಮನಿಸಿದರೆ ಮಂಡ್ಯದಲ್ಲಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಬೆಂಗಳೂರಿನಲ್ಲಿ ಸುಮಲತಾ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಆಗಿದ್ದ ಕುಮಾರಸ್ವಾಮಿ ಸಹಕಾರ ಕೋರಿದ್ದರು. ಇದಕ್ಕೆ ಸುಮಲತ ಕೂಡಾ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರಾದರೂ ತಾನು ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದು ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವ ಮಾತುಗಳನ್ನಾಡಿದ್ದರು. ಈ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರವೂ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಅವರು ಘೋಷಿಸಲಿಲ್ಲ. ಜೆಡಿಎಸ್ ನಾಯಕರೂ ಕೂಡಾ ಅವರನ್ನು ತಮ್ಮ ಪರ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಲಿಲ್ಲ.

ಈ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ಪಕ್ಷ ಸೂಚಿಸಿದ ಕಡೆ ತಾನು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾಗಿ ತಿಳಿಸಿದ್ದು ಮಂಡ್ಯದಲ್ಲಿ ಪ್ರಚಾರ ನಡೆಸುವಂತೆ ಪಕ್ಷದ ವರಿಷ್ಠರು ತನಗೆ ಸೂಚಿಸಿರಲಿಲ್ಲ ಎಂಬ ಸಂಗತಿಯನ್ನು ಬಹಿರಂಗವಾಗೇ ಸ್ಪಷ್ಟಪಡಿಸಿದ್ದಾರೆ.

ತಮ್ಮ ರಾಜಕೀಯ ನಡೆಯನ್ನುಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಪಕ್ಕಾ ಪಳಗಿದ ರಾಜಕೀಯ ನಾಯಕಿಯಂತೆ ಸುಮಲತಾ ನಡೆದುಕೊಳ್ಳುತ್ತಿರುವುದು ಜೆಡಿಎಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದರೆ ಬಿಜೆಪಿಯ ಹಿರಿಯ ನಾಯಕರು ಈ ಚಾರದ ಬಗ್ಗೆ ಅಷ್ಟು ಆಶ್ತೆ ತೋರಿಸಿದಂತೆ ಕಾಣುತ್ತಿಲ್ಲ.

HD Kumaraswamy with BJP leaders
ಕಾಂಗ್ರೆಸ್ ಗೆ ಹಿತ ಶತ್ರುಗಳ ಕಾಟ; ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ! (ಸುದ್ದಿ ವಿಶ್ಲೇಷಣೆ)

ಮತ್ತೊಂದು ಸಂಗತಿ ಎಂದರೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿರುವ ಸಚಿವ ಚೆಲುವರಾಯಸ್ವಾಮಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿವು ಮೂಲಕ ಕಟ್ಟಿಹಾಕುವ ಪ್ರಯತ್ನ ಮಾಡಿರುವುದು ಮೆಲ್ನೋಟಕ್ಕೆ ಕಾಣುತ್ತದೆ. ಕಾಂಗ್ರೆಸ್ ನ ಪರಂಪರಾನುಗತ ಮತ ಬ್ಯಾಂಕನ್ನು ಛಿದ್ರ ಮಾಡುವಲ್ಲಿ ಜೆಡಿಎಸ್  ಯಶಸ್ವಿಯಾದಂತೆ ಕಾಣುತ್ತಿಲ್ಲ. ಇನ್ನುಳಿದಂತೆ ಮಂಡ್ಯದಲ್ಲಿ ಬಿಜೆಪಿಗೆ ಅಂತಹ ದೊಡ್ಡ ಶಕ್ತಿ ಏನಿಲ್ಲ. ಬಿಜೆಪಿಯನ್ನು ಬೆಂಬಲಿಸಬಹುದೆಂಬ ನಿರೀಕ್ಷೆಯಿದ್ದ ಒಂದು ವರ್ಗ ಜೆಡಿಎಸ್ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ನತ್ತ ವಾಲಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ. ಹೀಗಾಗಿ ಜೆಡಿಎಸ್ ಒಂದು ಕಡೆ ಆಂತರಿಕ ಶತ್ರುಗಳ ಜತೆಗೇ ಪ್ರಬಲ ಎದುರಾಳಿ ಕಾಂಗ್ರೆಸ್ ಮತ್ತು ಒಂದು ಕಾಲದಲ್ಲಿ ದೇವೇಗೌಡರ ಗರಡಿಯಲ್ಲೇ ಇದ್ದು ಪಳಗಿ ನಂತರ ಕಾಂಗ್ರೆಸ್ ಸೇರಿದ ಸಚಿವ ಚೆಲವುರಾಯಸ್ವಾಮಿಯವರ ರಾಜಕೀಯ ಪಟ್ಟುಗಳನ್ನು ಹೇಗೆ ಎದುರಿಸಿದೆ ಎಂಬುದೇ ಸದ್ಯದ ಕುತೂಹಲ.

ಇಷ್ಟೆಲ್ಲದರ ನಡುವೆಯೂ ಅಧಿಕ ಸಂಖ್ಯೆಯ ಒಕ್ಕಲಿಗರು ದೇವೇಗೌಡರ ಮೇಲಿನ ಅಭಿಮಾನದಿಂದ ತನ್ನನ್ನು ಬೆಂಬಲಿಸಿದ್ದು ಉಳಿದ ಮತಗಳೂ ಅನುಕಂಪ ಸೇರಿದರೆ ಗೆಲವು ಕಷ್ಟವೇನಲ್ಲ ಎಂಬುದು ಕುಮಾರಸ್ವಾಮಿ ನಂಬಿಕೆ. ಇದೇ ವಿಶ್ವಾಸದ ಮೇಲೆ ಅವರು ಸುಮಲತಾ ಮತ್ತು ಅಂಬರೀಷ್ ಅಭಿಮಾನಿಗಳ ಬೆಂಬಲವನ್ನು ನೆಚ್ಚಿಕೊಂಡಿಲ್ಲ ಎಂಬುದು ಕಾಣಬರುವ ಅಂಶ.

ಇನ್ನು ದೇವೇಗೌಡರ ತವರು ಹಾಸನದಲ್ಲೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಿಲ್ಲ ಎಂಬ ವರದಿಗಳು ಸಿಗುತ್ತಿವೆ. ಮಾಜಿ ಶಾಸಕ ಹಾಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಿತಂ ಗೌಡ ಸೇರಿದಂತೆ ಹಲವು ಪ್ರಮುಖ ಬಿಜೆಪಿ ಮುಖಂಡರು ಪ್ರಚಾರದಿಂದ ದೂರ ಉಳಿಯುವ ಮೂಲಕ ಜೆಡಿಎಸ ಜತೆಗಿನ ಹಳೆಯ ಹಗೆತನವನ್ನು ತೀರಿಸಿಕೊಂಡಿದ್ದಾರೆ. ಆದರೆ ಇಲ್ಲೂ ತನ್ನ ಪಾರಂಪರಿಕ ಮತಗಳು ಬಂದೇ ಬರುತ್ತವೆ ಹಾಗಾಗಿ ಗೆಲುವು ಖಚಿತ ಎಂಬುದು ಜೆಡಿಎಸ್ ಲೆಕ್ಕಾಚಾರ. 

HD Kumaraswamy with BJP leaders
BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)

ಸದ್ಯದ ಪರಿಸ್ಥಿತಿಯಲ್ಲಿ ಸಂಘಟನಾತ್ಮಕವಾಗಿ ಸ್ವತಂತ್ರವಾಗಿ ಎದ್ದು ದೊಡ್ಡ ರಾಜಕೀಯ ಶಕ್ತಿಯಾಗಿ ನಿಲ್ಲುವ ಶಕ್ತಿ ಜೆಡಿಎಸ್ ಗೆ ಇಲ್ಲ. ಮತ್ತೊಂದು ಕಡೆ ಚುನಾವಣಾ ಫಲಿತಾಂಶದ ನಂತರ ರಾಜಕೀಯ ಸ್ತ್ಯಂತರಗಳು ಜೆಡಿಎಸ್ ನಲ್ಲೂ ಸಂಭವಿಸುವ ಸಾಧ್ಯತೆ ಇವೆಯಾದ್ದರಿಂದ ಆ ಪಕ್ಷಕ್ಕೆ ಸದ್ಯಕ್ಕೆ ಬಿಜೆಪಿಯ ಆಸರೆ ಅಗತ್ಯ ಇದೆ. ಹೀಗಾಗಿ  ಏಕಾ ಏಕಿ ಮೈತ್ರಿ ಕಡಿದುಕೊಳ್ಳುವುದು ಗೌಡರಿಗೂ ಬೇಕಾಗಿಲ್ಲ.

ಒಂದುವೇಳೆ ಮಂಡ್ಯದಲ್ಲಿ ಕುಮಾರಸ್ವಾಮಿ, ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದರೆ ಆ ಅವಕಾಶವನ್ನು ಬಳಸಿಕೊಂಡು ಸ್ಥಳೀಯವಾಗಿ ಸುಮಲತಾ ಮತ್ತು ಹಾಸನದ ಸ್ಥಳಿಯ ಬಿಜೆಪಿ ಮುಖಂಡರನ್ನು ಮೂಲೆಗೊತ್ತುವುದು ಗೌಡರ ತಂತ್ರದ ಒಂದು ಭಾಗ. ವಿರೋಧಿಗಳು ಕಣ್ಣೆದುರೇ ಇರಬೇಕು. ಆದರೆ ಅವರ ಪ್ರಭಾವ  ಬಿಜೆಪಿ ಸರ್ಕಾರವಿದ್ದರೂ ನಡೆಯಬಾರದು ಎಂಬುದು ಈ ಉದ್ದೇಶಿತ ತಂತ್ರದ ಒಂದು ಭಾಗ. ಆದರೆ ನಿರೀಕ್ಷಿತ ಫಲಿತಾಶ ಬಾರದೇ ಜೆಡಿಎಸ್ ಒಂದಂಕಿಗೆ ಇಳಿದರೆ ಅಥವಾ ಶೂನ್ಯ ಸಾಧನೆ ಮಾಡಿದರೆ ಬಿಜೆಪಿ ನಾಯಕತ್ವ ಗೌಡರ ಜತೆಗಿನ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗುವ ವಿಚಾರದಲ್ಲಿ ಹಿಂದಿನ ಉತ್ಸುಕತೆ ತೋರಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ.

HD Kumaraswamy with BJP leaders
ಯತ್ನಾಳ್ ಬಂಡಾಯದ ಹಿಂದೆ ಬಿಜೆಪಿ ಮುಖಂಡರ ನೆರಳು! (ಸುದ್ದಿ ವಿಶ್ಲೇಷಣೆ)

ಏಕೆಂದರೆ ರಾಜ್ಯ ಬಿಜೆಪಿ ನಾಯಕರಿಗೆ ದೇವೇಗೌಡರ ಜತೆಗಿನ ಯಾವುದೇ ಸ್ವರೂಪದ ಹೊಂದಾಣಿಕೆ ಇಷ್ವವಿಲ್ಲ. ಅದರಿಂದ ಪಕ್ಷಕ್ಕೆ ತಮ್ಮ ನಾಯಕತ್ವಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬ ವಾದವನ್ನು ಖಾಸಗಿಯಾಗಿ ಮಂಡಿಸುತ್ತಾರೆ. ಜೆಡಿಎಸ್ ಕತೆ ಇದಾದರೆ, ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿ ದಿಲ್ಲಿ ನಾಯಕರ ಕೃಪಾ ಕಟಾಕ್ಷ ದಿಂದ ಟಿಕೆಟ್ ತಂದು ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳ ಪರಿಸ್ಥಿತಿಯೂ ಉತ್ತಮವಾಗೇನೂ ಇಲ್ಲ.

ಒಂದಂತೂ ಸ್ಪಷ್ಟ. ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನು ನಿರ್ಧರಿಸುತ್ತದೆ ಎಂಬುದಂತೂ ಖಚಿತ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com