ಚುನಾವಣೆ ನಂತರ ರಾಜ್ಯದಲ್ಲಿ ಹೊಸ ರಾಜಕೀಯ ಧ್ರುವೀಕರಣ? (ಸುದ್ದಿ ವಿಶ್ಲೇಷಣೆ)

ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಗಳ ಧೃವೀಕರಣಕ್ಕೆಮುನ್ನುಡಿ ಬರೆಯಲಿದೆಯೆ...?
ಯಡಿಯೂರಪ್ಪ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಯಡಿಯೂರಪ್ಪ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)online desk

ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಗಳ ಧೃವೀಕರಣಕ್ಕೆಮುನ್ನುಡಿ ಬರೆಯಲಿದೆಯೆ ..? ಮೊದಲ ಹಂತದ ಚುನಾವಣೆಯ ಮತದಾನಕ್ಕೆ ಇನ್ನೂ ಒಂದು ವಾರ ಇದೆ.

ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಶುರುವಾಗಿರುವ ಈ ಹಂತದಲ್ಲಿ ಇಂಥದೊಂದು ಬೆಳವಣಿಗೆ ಮೇಲ್ನೋಟಕ್ಕೆ ಅಸಾಧ್ಯ ಎನಿಸುವುದು ಸಹಜವೆ. ಆದರೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಆಳಕ್ಕಿಳಿದು ನೋಡಿದರೆ ಅಂಥದೊಂದು ಬೆಳವಣಿಗೆಗೆ ಭೂಮಿಕೆ ಸಿದ್ಧವಾಗುತ್ತಿರುವುದಂತೂ ಸತ್ಯ.

ಈ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವ್ಯಕ್ತಿಗತ ನಾಯಕತ್ವದ ಅಸ್ತಿತ್ವದ ಪ್ರಶ್ನೆ. ನಿರೀಕ್ಷಿತ ಫಲಿತಾಂಶದಲ್ಲಿ ಕೊಂಚ ಏರುಪೇರಾದರೂ ಅದರಿಂದ ಆಗುವ ರಾಜಕೀಯ ಪರಿಣಾಮ ಮೂವರೂ ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ಕಾಂಗ್ರೆಸ್ ಗೆ ಸೀಮಿತವಾಗಿ ಹೇಳಬಹುದಾದರೆ ಚುನಾವಣಾ ಫಲಿತಾಂಶ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದ್ದರೆ ಬಿಜೆಪಿಯಲ್ಲಿ ಈಗಾಗಲೇ ಹಿರಿಯ ನಾಯಕ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಪಕ್ಷದೊಳಗೆ ಬಹಿರಂಗವಾಗೇ ಎದ್ದಿರುವ ಬಂಡಾಯದ ಸ್ವರೂಪವನ್ನು ನಿರ್ಧರಿಸಲಿರುವುದು ಅಷ್ಟೇ ಅಲ್ಲ ವಿವಾದಗಳಿಗೆ ಸ್ಪಷ್ಟ ಉತ್ತರ ಸಿಕ್ಕಲಿದೆ. ಎರಡೂ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಮತ್ತು ನಾಯಕತ್ವದ ಕುರಿತಾಗೇ ಅಸಮಧಾನ ಕುದಿಯುತ್ತಿದೆ. ಈ ಪರಿಸ್ಥಿತಿಯಲ್ಲಿ ಚುನಾವಣಾ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಕಾಂಗ್ರೆಸ್ ನಲ್ಲಿ: ಬಿಜೆಪಿಗೆ ಹೋಲಿಸಿದರೆಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಅಸಮಧಾನ, ಬಂಡಾಯ ಮೆಲ್ನೋಟಕ್ಕೆ ಕಾಣುತ್ತಿಲ್ಲ ಎಂಬುದೆ ನಿಜ .ಆದರೆ ವಾಸ್ತವದಲ್ಲಿ ಪರಿಸ್ಥಿತಿ ಬೇರೆಯದೇ ಆಗಿದೆ. ಬಹು ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಆಂತರಿಕ ಕಿತ್ತಾಟ ನಡೆದಿರುವುದು ಈಗ ಗುಟ್ಟಾಗೇನೂ ಇಲ್ಲ. ಇಬ್ಬರು ನಾಯಕರ ಬೆಂಬಲಿಗರು, ಕುಟುಂಬದ ಸದಸ್ಯರು ಆಗಾಗ ಅಧಿಕಾರ ಹಂಚಿಕೆ ಕುರಿತಂತೆ ನೀಡುತ್ತಿರುವ ಹೇಳಿಕೆಗಳು ವಿವಾದವನ್ನೇ ಸೃಷ್ಟಿಸಿವೆ. ಅವಕಾಶ ಸಿಕ್ಕಾಗಲೆಲ್ಲ ಪರಸ್ಪರರ ಕಾಲೆಳೆಯುವ ಪ್ರಯತ್ನಗಳು ಅಧಿಕಾರಕ್ಕೆ ಬಂದ ದಿನದಿಂದ ನಡೆದೇ ಇದೆ. ಲೋಕಸಭಾ ಚುನಾವಣೆ ಅದರ ಮುಂದುವರಿದ ಭಾಗ ಅಷ್ಟೆ.

ಯಡಿಯೂರಪ್ಪ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)
BSY ಸಂಧಾನಕ್ಕೂ ಬಗ್ಗದ ಬಿಜೆಪಿ ಭಿನ್ನರು; ಹೊರೆಯಾದ ಮೈತ್ರಿ! (ಸುದ್ದಿ ವಿಶ್ಲೇಷಣೆ)

ಸಿದ್ದು ಪ್ರತಿಷ್ಠೆ ಪಣಕ್ಕೆ: ವಿಶೇಷವಾಗಿ ಮೈಸೂರು ಮತ್ತು ಚಾಮರಾನಗರ ಲೋಕಸಭಾ ಕ್ಷೇತ್ರಗಳ ಚುನಾವಣೆಯನ್ನು ತಮ್ಮ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಅತ್ಯಂತ ಎಚ್ಚರಿಕೆಯಿಂದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮಹತ್ವದ ಹೊಣೆಗಾರಿಕೆ ಅವರ ಮೇಲಿದೆ. ಫಲಿತಾಂಶ ಒಂದುವೇಳೆ ಕೈಕೊಟ್ಟರೆ ಅದು ಅವರ ಮುಖ್ಯಮಂತ್ರಿ ಪದವಿಗೇ ಕುತ್ತು ತಂದೊಡ್ಡುವ ಸಾಧ್ಯತೆಗಳೂ ಇವೆ. ಸ್ವಂತ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳದೇ ಹೋದರೆ ಅದರಿಂದ ದೂರಗಾಮಿ ರಾಜಕೀಯ ಪರಿಣಾಮಗಳನ್ನೂ ಅವರು ಎದುರಿಸುವ ಸನ್ನಿವೇಶಗಳು ಬರಲಿವೆ.

ಈ ಕಾರಣಕ್ಕೆ ಅವರು ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೈಸೂರು ರಾಜವಂಶದ ಪ್ರತಿನಿಧಿ ಯದುವೀರ ಕೃಷ್ಣದತ್ತ ಒಡೆಯರ್ ವಿರುದ್ಧ ಯಾವುದೇ ವ್ಯಕ್ತಿಗತ ಟೀಕೆಗಳನ್ನ ಮಾಡದಂತೆ ಬೆಂಬಲಿಗರಿಗೆ, ಪಕ್ಷದ ಹುರಿಯಾಳುಗಳಿಗೆ ಸೂಚಿಸಿದ್ದಾರೆ. ಇದಕ್ಕೆ ರಾಜವಂಶದ ಕುರಿತು ಮೈಸೂರು ಪ್ರಾಂತ್ಯದಲ್ಲಿ ಜನಸಾಮಾನ್ಯರಿಗಿರುವ ಭಾವನಾತ್ಮಕ ಸಂಬಂಧಗಳೂ ಕಾರಣ. ಇದೇ ಹಿನ್ನಲೆಯಲ್ಲಿ ತಮ್ಮ ಟೀಕೆಗಳನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಚಾಮರಾಜನಗರದಲ್ಲಿ ತಮ್ಮ ದಶಕಗಳ ಗೆಳೆಯ, ಕಟ್ಟಾ ಬೆಂಬಲಿಗ ಸಚಿವ ಡಾ. ಮಹದೇವಪ್ಪ ಪುತ್ರ ಸುನಿಲ್ ಬೋಸ್ ಅವರನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯತೆಯೂ ಅವರಿಗಿದೆ. ಈ ಪ್ರಯತ್ನದಲ್ಲಿ ಸೋತರೆ ಮಹದೇವಪ್ಪ ತಿರುಗಿ ಬೀಳುವ ಅಪಾಯವಿದೆ.

ಅದರಿಂದ ರಾಜಕೀಯವಾಗಿ ಪ್ರತಿಕೂಲ ಪರಿಣಾಮಗಳೇ ಹೆಚ್ಚು. ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಪರದಾಡುತ್ತಿರುವ ಅವರಿಗೆ ಪರಿಸ್ಥಿತಿ ಎಲ್ಲ ರೀತಿಯಿಂದಲೂ ಅನುಕೂಲವಾಗಿಲ್ಲ, ಎದುರಾಳಿ ಬಿಜೆಪಿ ಜತೆಗೇ ಸ್ವಪಕ್ಷೀಯರೇ ತನ್ನ ವಿರುದ್ಧ ನಡೆಸುತ್ತಿರುವ ಗುಪ್ತ ತಂತ್ರಗಾರಿಕೆಯನ್ನೂ ಸಿದ್ದರಾಮಯ್ಯ ಎದುರಿಸಬೇಕಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗೆಲ್ಲದಿದ್ದರೆ ಮುಖ್ಯಮಂತ್ರಿ ಕುರ್ಚಿಯನ್ನು ಅವರು ಬಿಡಬೇಕಾಗಿ ಬರಬಹುದು ಎಂದು ಅವರ ಸಚಿವ ಸಹೋದ್ಯೋಗಿ ಭೈರತಿ ಸುರೇಶ್ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ (ವಾಸು) ಬಹಿರಂಗವಾಗೇ ಹೇಳಿರುವುದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ.

ಯಡಿಯೂರಪ್ಪ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)
BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)

ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆಅವರ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರೈಸುತ್ತಾರೆ ಎಂದು ಅನೇಕಬಾರಿ ಬಹಿರಂಗವಾಗೇ ಹೇಳಿಕೆ ನೀಡುವ ಮೂಲಕ ಮೂಲ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಬಹು ಮುಖ್ಯವಾಗಿ ಸಿದ್ದರಾಮಯ್ಯ ಖುದ್ದು ಆಸ್ಥೆ ವಹಿಸಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಹೆಚ್ಚು ಸ್ಥಾನ ತರಬಹುದೆಂಬ ಭರವಸೆ ಅವರ ಬೆಂಬಲಿಗರಲ್ಲಿದೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಹೆಚ್ಚು ಸ್ಥಾನ ಗಳಿಸಿದರೆ ಅದನ್ನು ಸಿದ್ದರಾಮಯ್ಯ ದಿಗ್ವಿಜಯ ಎಂದು ಬಿಂಬಿಸಲು ಈಗಿನಿಂದಲೇ ತಯಾರಿಗಳು ನಡೆದಿವೆ.

ಸಹಜವಾಗೇ ಇದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮೂಲ ಕಾಂಗ್ರೆಸ್ಸಿಗರ ಅಸಮಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಾಲಿ ಲೋಕಸಭಾ ಸದಸ್ಯ ಹಾಗೂ ಶಿವಕುಮಾರ್ ಸೋದರ ಡಿ.ಕೆ. ಸುರೇಶ್ ಅವರ ವಿರುದ್ಧ ಕಾಂಗ್ರೆಸ್ ನ ಒಂದು ಗುಂಪು ಗುಪ್ತವಾಗಿ ಕೆಲಸ ಮಾಡುತ್ತಿದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಗೆಲುವಿಗೆ ಕಾಂಗ್ರೆಸ್ ನಲ್ಲೇ ಇರುವ ವಿರೋಧಿಗಳು ಗುಪ್ತವಾಗಿ ಎಲ್ಲ ರೀತಿಯಿಂದಲೂ ನೆರವು ನೀಡುತ್ತಿರುವ ಮಾಹಿತಿ ತಿಳಿದ ಶಿವಕುಮಾರ್ ಪ್ರತಿ ತಂತ್ರಗಳನ್ನು ರೂಪಿಸಿದ್ದಾರೆ.

ಯಡಿಯೂರಪ್ಪ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಕಾಂಗ್ರೆಸ್ ಗೆ ಹಿತ ಶತ್ರುಗಳ ಕಾಟ; ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ! (ಸುದ್ದಿ ವಿಶ್ಲೇಷಣೆ)

ಇಡೀ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಕೆಳ ಹಂತದ ಮುಖಂಡರುಗಳು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಜೆಡಿಎಸ್ ಗೆ ಅಸ್ತಿತ್ವವೇ ಇಲ್ಲ ಎಂದು ಬಿಂಬಿಸುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ.ಈಗಿನ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಐದರಿಂದ ಆರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಗಮನಿಸಿಬೇಕಾದ ಒಂದು ಅಂಶ ಎಂದರೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕತ್ವಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚುವುದು ಬೇಕಾಗಿದೆ. ಒಂದು ವೇಳೆ ಕಾಂಗ್ರೆಸ್ ಒಂದಂಕಿಗೆ ಇಳಿದರೆ ಅದರ ನೇರ ಪರಿಣಾಮ ಸಿದ್ದರಾಮಯ್ಯ ಅವರ ಮೇಲಾಗಲಿದೆ. ಅಧಿಕಾರ ಪ್ರಧಾನ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮಣಿಸುವುದು ಬಿಜೆಪಿ ರಾಷ್ಟ್ರೀಯ ನಾಯಕತ್ವಕ್ಕೆ ಈಗಿನ ಸನ್ನಿವೇಶದಲ್ಲಿ ಕಷ್ಟವೇನೂ ಅಲ್ಲ. ಆದರೆ ಅದಕ್ಕಿಂತ ಮುಖ್ಯವಾಗಿ ಕಡು ಸೈದ್ಧಾಂತಿಕ ವಿರೋಧಿ ಸಿದ್ದರಾಮಯ್ಯ ನಾಯಕತ್ವಕ್ಕೆ ಸೋಲಾಗುವುದು ಮೋದಿ ಅಮಿತ್ ಶಾ ರಂಥ ನಾಯಕರಿಗೆ ಬೇಕಾಗಿದೆ.

ಈ ಹಿನ್ನಲೆಯಲ್ಲೇ ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರಜತೆ ಮಾತುಕತೆ ನಡೆಸಿದ ದಿಲ್ಲಿ ನಾಯಕರು ರಾಜ್ಯದಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಸೇರಿದಂತೆ ಪಕ್ಷದಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಗೆಲ್ಲಲೇ ಬೇಕು ಮತ್ತು ಕಾಂಗ್ರೆಸ್ ಒಂದಂಕಿಗೆ ಇಳಿಯುವಂತೆ ಶ್ರಮಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಸ್ಥಳೀಯವಾದ ಭಿನ್ನಮತವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂಬ ಸೂಚನೆ ವರಿಷ್ಠರಿಂದ ಯಡಿಯೂರಪ್ಪ ಅವರಿಗೆ ಬಂದಿದೆ. ಹೀಗಾಗಿ ಮಾಜಿ ಸಚಿವ ಸೋಮಣ್ಣ ಸ್ಪರ್ಧಿಸಿರುವ ತುಮಕೂರು ಸೇರಿದಂತೆ ಎಲ್ಲ 28 ಕ್ಷೇತ್ರಗಳಲ್ಲಿ ಯಡಿಯೂರಪ್ಪ ವಿಜಯೇಂದ್ರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಇದೇ ವೇಳೆ ಉಂಟಾಗಬಹುದಾದ ರಾಜಕೀಯ ಸನ್ನಿವೇಶದ ಲಾಭ ಪಡೆದು ಬಿಜೆಪಿ –ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಪ್ರಯತ್ನಗಳು ನಡೆಯುವ ಸಾಧ್ಯತೆಗಳೂ ಇವೆ. ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಇರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪದೇ ಪದೇ ಹೇಳುತ್ತಿದ್ದಾರೆ. ಚುನಾವಣೆ ನಂತರವೂ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮುಂದುವರಿಯುತ್ತದೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ.

ಯಡಿಯೂರಪ್ಪ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಡಿಕೆಶಿ ವಿರುದ್ಧ ಸಿದ್ದು ಬೆಂಬಲಿಗರ ಒಕ್ಕಲಿಗ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ಈ ಹೇಳಿಕೆಗಳ ಅಂತರಾರ್ಥ ಗಮನಿಸಿದರೆ ಹೊಸ ರಾಜಕೀಯ ಸಮೀಕರಣಕ್ಕೆ ಭೂಮಿಕೆ ಸಿದ್ಧಗೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯ ನಾಯಕತ್ವ ಗೆಲ್ಲುವುದು ಶಿವಕುಮಾರಗೆ ಬೇಕಾಗಿಲ್ಲ. ಶಿವಕುಮಾರ್ ರಾಜಕೀಯವಾಗಿ ಪ್ರಬಲರಾಗಿ ಮುಖ್ಯಮಂತ್ರಿ ಪಟ್ಟ ಏರುವುದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೂ ಬೇಕಾಗಿಲ್ಲ.

ಶತ್ರುವಿನ ಶತ್ರು ನನ್ನ ಮಿತ್ರ ಎಂಬ ಗಾದೆ ಮಾತು ರಾಜಕಾಣದಲ್ಲಿ ಆಗಾಗ ಕೇಳಿ ಬರುತ್ತದೆ. ಇಂತಹ ಸನ್ನಿವೇಶ ಗಮನಿಸಿರುವ ಸಿದ್ದರಾಮಯ್ಯ ಅದಕ್ಕಾಗಿ ಪೂರವ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಸಂದರ್ಭ ವಶಾತ್ ಅಧಿಕಾರ ಕಳೆದುಕೊಂಡರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು. ಕಾಂಗ್ರೆಸ್ ನ ಇಡೀ ಸಂಘಟನಾ ಸೂತ್ರ ತನ್ನ ಕೈಲೇ ಇರಬೇಕು ಎಂಬುದು ಅವರ ಲೆಕ್ಕಾಚಾರ. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಮೀರಿದ ಸ್ನೇಹ ಇದೆ ಎಂದು ಬಿಜೆಪಿಯ ಕೆಲವು ನಾಯಕರೇ ಬಹಿರಂಗವಾಗಿ ಹೇಳುತ್ತಾರೆ. ಚುನಾವಣೆ ನಂತರ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ. ಸದ್ಯಕ್ಕಂತೂ ಬಿಜೆಪಿಯಲ್ಲಿ ಯಡಿಯೂರಪ್ಪ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು. ಅವರನ್ನು ಎದುರು ಹಾಕಿಕೊಳ್ಳಲು ಎರಡೂ ಪಕ್ಷದ ಹೈಕಮಾಂಡ್ ಗಳಿಗೂ ಧೈರ್ಯ ಇಲ್ಲ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com