BSY ಸಂಧಾನಕ್ಕೂ ಬಗ್ಗದ ಬಿಜೆಪಿ ಭಿನ್ನರು; ಹೊರೆಯಾದ ಮೈತ್ರಿ! (ಸುದ್ದಿ ವಿಶ್ಲೇಷಣೆ)

ದಿಲ್ಲಿ ವರಿಷ್ಠರ ಸೂಚನೆಯ ನಂತರವೂ ಬಿಜೆಪಿಯಲ್ಲಿ ಭಿನ್ನಮತ ಬಗೆಹರಿದಿಲ್ಲ. ಮೊದಲ ಹಂತದ ಚುನಾವಣೆಯ ಮತದಾನಕ್ಕೆ ದಿನ ಸಮೀಪಿಸುತ್ತಿದ್ದರೂ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ.
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ

ದಿಲ್ಲಿ ವರಿಷ್ಠರ ಸೂಚನೆಯ ನಂತರವೂ ಬಿಜೆಪಿಯಲ್ಲಿ ಭಿನ್ನಮತ ಬಗೆಹರಿದಿಲ್ಲ. ಮೊದಲ ಹಂತದ ಚುನಾವಣೆಯ ಮತದಾನಕ್ಕೆ ದಿನ ಸಮೀಪಿಸುತ್ತಿದ್ದರೂ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ. ಇದು ರಾಜ್ಯದಲ್ಲಿ ಬಿಜೆಪಿ ಎದುರಿಸುತ್ತಿರುವ ಸಂಕಷ್ಟದ ಸ್ಥಿತಿ.

ಚುನಾವಣೆ ಚಟುವಟಿಕೆ ಬಿರುಸುಗೊಂಡಿರುವ ಈ ಹಂತದಲ್ಲಿ  ತತ್ ಕ್ಷಣಕ್ಕೆ ಅದರ ಕುರಿತಾದ ಸ್ಪಷ್ಟತೆ ಇನ್ನೂ ರೂಪುಗೊಂಡಿಲ್ಲ ಎಂಬುದೇನೋ ನಿಜ.ಆದರೆ  ಅಂಥದೊಂದು  ಸಂಭವನೀಯಬೆಳವಣಿಗೆಗೆ ಭೂಮಿಕೆ ಸಿದ್ಧವಾಗುತ್ತಿದೆ.

ಈ ಬಾರಿಯ ಚುನಾವಣೆ ರಾಜ್ಯದ ಮಟ್ಟಿಗೆ ಹಲವು ಬೆಳವಣಿಗೆಗಳಿಗೆ ಕಾರಣವಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಹಿಂದಿನ ಚುನಾವಣೆಯಂತೆ ಅಧಿಕ ಸ್ಥಾನಗಳನ್ನು ಗೆದ್ದು ಬೀಗುವ ಉತ್ಸಾಹದಲ್ಲಿದೆ. ಆ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ .

ಆದರೆ ಪಕ್ಷದೊಳಗಿನ ಪರಿಸ್ಥಿತಿ ಇದಕ್ಕೆ ಪೂರಕವಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ  ಪಕ್ಷದ ಮುಖಂಡರಲ್ಲಿ ತಲೆದೋರಿರುವ ಅಸಮಾಧಾನ ಬಗೆಹರಿಯುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಮೊದಲ ಹಂತದ ಚುನಾವಣೆ ನಡೆಯುವ ರಾಜ್ಯದ 14 ಕ್ಷೇತ್ರಗಳ ಪೈಕಿ  ಮೈತ್ರಿ ಪಕ್ಷ ಜೆಡಿಎಸ್ ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳೂ ಸೇರಿ ಇನ್ನುಳಿದಂತೆ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿರುವ 11 ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ,ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿಯ ಪರಿಸ್ಥಿತಿ ಹಿಂದಿನಷ್ಟು ಉತ್ತಮವಾಗಿಲ್ಲ.

ಪಕ್ಷದೊಳಗಿನ ಭಿನ್ನಮತ, ಅಧಿಕಾರ ವಂಚಿತರ ಅಸಹನೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳನ್ನು ಕಂಗೆಡಿಸಿದೆ. ಆದರೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಅಲೆ ತಮ್ಮನ್ನು ಗೆಲ್ಲಿಸಬಹುದು ಮತ್ತು ಈಗ ಎದ್ದಿರುವ ಭಿನ್ನಮತ ಶಮನವಾಗಬಹುದು ಎಂಬ ದೂರದ ನಿರೀಕ್ಷೆಯಲ್ಲಿದ್ದಾರೆ.

ಬಹು ಮುಖ್ಯವಾಗಿ ಬಿಜೆಪಿಯಲ್ಲಿ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಎಲ್ಲವೂ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರ ಮರ್ಜಿಗೆ ಅನುಸಾರವಾಗಿ ನಡೆದಿಲ್ಲ. ಮೊದಲ ಹಂತದ ಚುನಾವಣೆ ನಡೆಯುವ ತುಮಕೂರು, ಚಿಕ್ಕಬಳ್ಳಾಪುರ, ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಿ ಮಾಜಿ ಸಚಿವರಾದ ವಿ. ಸೋಮಣ್ಣ ಹಾಗೂ ಡಾ. ಸುಧಾಕರ್ ಕಣಕ್ಕಿಳಿದಿದ್ದಾರೆ ಎಂಬುದೇನೋ ನಿಜ. ಆದರೆ ಈ ಇಬ್ಬರೂ ಬಿಜೆಪಿ ವರಿಷ್ಟರ ಜತೆ ತಮಗಿರುವ ಸಂಪರ್ಕದ ಹಿನ್ನಲೆಯಲ್ಲಿ ಪಕ್ಷದ ಟಿಕೆಟ್ ಪಡೆದಿದ್ದಾರೆ. ಈ ವಿಚಾರದಲ್ಲಿ ಯಡಿಯೂರಪ್ಪನವರ ಮಾತು ನಡೆದಿಲ್ಲ.

ಬಿ.ಎಸ್. ಯಡಿಯೂರಪ್ಪ
ಸುಮಲತಾ ರಾಜಕೀಯ ನಡೆಯ ನಿರ್ದೇಶಕರು ಯಾರು? (ಸುದ್ದಿ ವಿಶ್ಲೇಷಣೆ)

ಸೋಮಣ್ಣ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಗಿ ಘೋಷಣೆ ಆಗುವವರೆಗೆ ಯಡಿಯೂರಪ್ಪನವರು ಮತ್ತು ಅವರ ಮಕ್ಕಳನ್ನು ವಿರೋಧಿಸಿಕೊಂಡೇ ಬಂದವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರಗಳಿಂದ ಭಾರೀ ವಿಶ್ವಾಸದೊಂದಿಗೆ ಸ್ಪರ್ಧಿಸಿದ್ದ ಅವರು ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡ ನಂತರ ಯಡಿಯೂರಪ್ಪನವರು ಹಾಗೂ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಒಂದು ರೀತಿಯಲ್ಲಿ ಯುದ್ಧವನ್ನೇ ಸಾರಿದ್ದರು.

ಇದಕ್ಕೆ ಪಕ್ಷದ ಇತರ ಅತೃಪ್ತ ನಾಯಕರ ಬೆಂಬಲವೂ ಅವರಿಗೆ ಸಿಕ್ಕಿತ್ತು. ಇನ್ನೇನು ಕಾಂಗ್ರೆಸ್ ಸೇರೇ ಬಿಡುತ್ತಾರೆ ಎಂಬ ಹಂತದಲ್ಲಿ ಪಕ್ಷ ಬಿಡದಂತೆ ಅವರ ಮನವೊಲಿಸಿದ ದಿಲ್ಲಿಯಲ್ಲಿ ಪ್ರಭಾವ ಹೊಂದಿರುವ ಕರ್ನಾಟಕದ ಬಿಜೆಪಿ ಪ್ರಮುಖ ನಾಯಕರೊಬ್ಬರು ಬಿಜೆಪಿ ವರಿಷ್ಠರ ಭೇಟಿಗೆ ವ್ಯವಸ್ಥೆ ಮಾಡಿ ತುಮಕೂರಿನಿಂದ ಸ್ಪರ್ಧೆಗೆ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು.

ಯಡಿಯೂರಪ್ಪನವರೊಂದಿಗಿನ ಅಸಮಾಧಾನ ಸರಿಹೋಯಿತು ಎನ್ನುವಷ್ಟರಲ್ಲಿ ತುಮಕೂರು ಜಿಲ್ಲೆಯ ಬಿಜೆಪಿ ಹಿರಿಯ ನಾಯಕರೂ ಆದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮಣ್ಣ ವಿರುದ್ಧ ಮುನಿಸಿಕೊಂಡು ಚುನಾವಣೆಯಿಂದ ದೂರ ಉಳಿದಿದ್ದಾರೆ.

ಸ್ವತಹಾ ಯಡಿಯೂರಪ್ಪನವರೇ ಖುದ್ದು ಆಸ್ಥೆ ವಹಿಸಿ ಸಂಧಾನ ನಡೆಸಿದರೂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ಸೋಮಣ್ಣ ಜತೆಗೆ ಭೇಟಿಯೂ ಆಗಿಲ್ಲ. ಹಾಗೆ ನೋಡಿದರೆ ತುಮಕೂರಿನಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಧುಸ್ವಾಮಿ ಆಸಕ್ತರಾಗಿದ್ದರು. ಯಡಿಯೂರಪ್ಪನವರಿಂದ ಟಿಕೆಟ್ ಕೊಡಿಸುವ ಭರವಸೆಯೂ ಸಿಕ್ಕಿತ್ತು. ಆದರೆ ಪರಿಸ್ಥಿತಿ ನಂತರ ಆದದ್ದೇ ಬೇರೆ. ತುಮಕೂರು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅವರಿಗೆ ತಮ್ಮದೇ ಆದ ಪ್ರಭಾವ ಇದೆ. ಸಚಿವರಾಗಿದ್ದ ಅವಧಿಯಲ್ಲಿ ಮಾಡಿರುವ ಕೆಲಸಗಳು ಅವರಿಗೆ ಶ್ರೀರಕ್ಷೆಯಾಗಿವೆ. ಪ್ರಭಾವೀ ಬೆಂಬಲಿಗರ ಪಡೆಯನ್ನೂ ಹೊಂದಿದ್ದಾರೆ.ಆದರೆ ಇಡೀ ಬೆಂಬಲಿಗರ ಪಡೆ ತಮ್ಮ ನಾಯಕನ ಸೂಚನೆಗೆ ಕಾಯುತ್ತಿದೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿಲ್ಲ. ಹಾಗಂತ ಕಾಂಗ್ರೆಸ್ ಗೂ ಬೆಂಬಲ ನೀಡಿಲ್ಲ.ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಮುದ್ದ ಹನುಮೆಗೌಡ ಚುನಾವಣೆ ಸಂದರ್ಭದಲ್ಲಿ ಮಾಧುಸ್ವಾಮಿಯವರನ್ನು ಮನೆಗೇ ಹೋಗಿ ಭೇಟಿ ಆಗಿ ಬೆಂಬಲ ಕೇಳಿದ್ದಾರೆ. ಆದರೆ ಯಾವುದೇ ಸ್ಪಷ್ಟ ಉತ್ತರ ನೀಡದೇ ಅವರನ್ನು ಬೀಳ್ಕೊಟ್ಟಿದ್ದಾರೆ.

ಬಿ.ಎಸ್. ಯಡಿಯೂರಪ್ಪ
BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)

ಆದರೆ ಈ ಭೇಟಿ ಜಿಲ್ಲೆಯಲ್ಲಿ ಮಾಧುಸ್ವಾಮಿ ಕಾಂಗ್ರೆಸ್ ಪರವಾಗಿದ್ದಾರೆ ಎಂಬ ಸಂದೇಶ ಹರಡಲು ಕಾರಣವಾಗಿದೆ.  ಮತ್ತೊಂದು ಕಡೆ ಅಭ್ಯರ್ಥಿ ಸೋಮಣ್ಣ ಕೂಡಾ ತಮ್ಮ ಗೆಲುವಿಗೆ ಬೇಕಾದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ನಿರತರಾಗಿದ್ದಾರೆ. ಬಿಜೆಪಿ ನಾಯಕತ್ವಕ್ಕಿಂತ ಹೆಚ್ಚಾಗಿ ತಮ್ಮ ಹಳೆಯ ರಾಜಕೀಯ ಗುರು ದೇವೇಗೌಡರನ್ನು ಹೆಚ್ಚಾಗಿ ಭೇಟಿ ಆಗಿ ಚುನಾವಣೆಯಲ್ಲಿ ನೆರವು ಪಡೆಯಲು ಪ್ರಯತ್ನ ನಡೆಸಿದ್ದಾರೆ. ದೇವೇಗೌಡರು ಬೆಂಬಲಿಸಿದರೆ ಒಕ್ಕಲಿಗರ ಮತಗಳಲ್ಲಿ ಅರ್ಧದಷ್ಟು ತಮಗೆ ಸಿಗುವುದು ಖಚಿತ ಎಂಬ ದೂರದ  ಭರವಸೆ ಅವರದ್ದು . ಆದರೆ ರಾಜಕೀಯವಾಗಿ ತಮ್ಮ ಪ್ರತಿ ಹೆಜ್ಜೆಯನ್ನೂ ಅತ್ಯಂತ ಕರಾರುವಕ್ಕಾದ ಲೆಕ್ಕಾಚಾರದ ಮೇಲೆಯೇ ಇಡುವ ದೇವೇಗೌಡರ ನೆರವು ಸೋಮಣ್ಣ ಅವರನ್ನು ಎಷ್ಟರ ಮಟ್ಟಿಗೆ ಕಾಪಾಡುತ್ತದೆ ಎಂಬುದು ಇನ್ನೂ ನಿಗೂಢ.

ಕಾಂಗ್ರೆಸ್ ಅಭ್ಯರ್ಥಿ ಮುದ್ದ ಹನುಮೇಗೌಡ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಸಚಿವರಾದ ಡಾ. ಜಿ.ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಟೊಂಕ ಕಟ್ಟಿ ನಿಂತಿದ್ದಾರೆ, ಇಲ್ಲೂ ಸ್ಥಳೀಯ ವಿಧಾನಸಭಾ ಕ್ಷೇತ್ರಗಳ  ರಾಜಕಾರಣದ ಲೆಕ್ಕಾಚಾರಗಳಿವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪೂರ್ಣ ಗಮನವನ್ನು ತುಮಕೂರು ಕ್ಷೇತ್ರಕ್ಕೆ ಇನ್ನೂ ಹರಿಸಿಲ್ಲ ಇದು ಕಾಂಗ್ರೆಸ್  ಪಾಳೇಯದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.ಸೋಮಣ್ಣ ತಮ್ಮದೇ ಸಮುದಾಯದ ಮತಗಳ ಮೇಲೆ ಭರವಸೆ ಇಟ್ಟಿದ್ದಾರೆ. ಜತೆಗೇ ಮೋದಿ ಅಲೆ  ತನ್ನನ್ನು ಗೆಲ್ಲಿಸಬಹುದೆಂಬ ಪ್ರಚಂಡ ಆತ್ಮ ವಿಶ್ವಾಸದಲ್ಲಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಕೆಲವು ಪ್ರಭಾವೀ  ದಾರ್ಮಿಕ ಮುಖಂಡರೊಂದಿಗೆ ನಡೆದುಕೊಂಡ ರೀತಿಯೂ ಈ ಚುನಾವಣೆಯಲ್ಲಿ ಅವರು ಗಳಿಸುವ ಮತಗಳ ಪ್ರಮಾಣವನ್ನು ನಿರ್ಧರಿಸಲಿದೆ ಎಂಬ ವಾತಾವರಣವೂ ಇದೆ.

ಆದರೂ ತುಮಕೂರು ಜಿಲ್ಲೆ ಜತೆಗಿನ ಸೋಮಣ್ಣ ಒಡನಾಟ ತಿರಾ ಹಳೆಯದು ಅದಕ್ಕೊಂದು ಸುದೀರ್ಘ ನಂಟೇ ಇದೆ. ಜಿಲ್ಲೆಯ ರಾಜಕಾರಣದ ಒಳಸುಳಿಗಳು, ಭೌಗೋಳಿಕ ಪರಿಸರ ಸೇರಿದಂತೆ ಸೂಕ್ಷ್ಮ ವಿಚಾರಗಳ ಅರಿವು ಅವರಿಗಿದೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರೊಂದಿಗೆ ರಾಜಕಾರಣದಲ್ಲಿ ಪಳಗಿರುವ ಅವರಿಗೆ ಬಿಜೆಪಿಯ ಸದ್ಯದ ಅನಿವಾರ್ಯ ಪರಿಸ್ಥಿತಿಯ ಅರಿವೂ ಇದೆ.

ಕೇಂದ್ರ ನಾಯಕರ ಸೂಚನೆಗೆ ಮಣಿದಿರುವ ಯಡಿಯೂರಪ್ಪ ರಾಜ್ಯದ 28 ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಂಡು ಅಲ್ಲಲ್ಲಿ ತಲೆ ಎತ್ತಿರುವ ಭಿನ್ನಮತವನ್ನು ತಣ್ಣಗೆ ಮಾಡುವ ಪ್ರಯತ್ನದಲ್ಲಿದ್ದಾರೆ. ಹಾಸನದಲ್ಲಿ ಇದು ಫಲ ನೀಡಿಲ್ಲ. ಮಾಜಿ ಶಾಸಕ ಪ್ರಿತಂ ಗೌಡ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ಮೈತ್ರಿ ಕೂಟದ ಅಭ್ಯರ್ಥಿ ಜೆಡಿಎಸ್ ನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡುತ್ತಿಲ್ಲ. ಈ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಪ್ರಜ್ವಲ್ ಪರ ಕೆಲಸ ಮಾಡುತ್ತಿದ್ದಾರೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಪರಿಸ್ಥಿತಿ ಇಲ್ಲ. ಸಂಸದರಾದ ಅವಧಿಯಲ್ಲಿ ಲೋಕಸಭೆಯ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿದರೂ ಕ್ಷೇತ್ರಕ್ಕೆ ಸೀಮಿತವಾಗಿ ನೋಡಿದರೆ ಪ್ರಜ್ವಲ್ ಸೇರಿದಂತೆ ರೇವಣ್ಣ ಕುಟುಂಬದ ವಿರುದ್ಧವೇ ಸಾಮಾನ್ಯ ಜನರಲ್ಲಿ ಸಿಟ್ಟು ಇದೆ. ಇದು ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ವರಿಷ್ಠರ ಸೂಚನೆಯ ನಂತರವೂ ಪ್ರೀತಂ ಗೌಡ ಮತ್ತು ದೇವೇಗೌಡರ ಕುಟುಂಬದ ನಡುವಿನ ರಾಜಕೀಯ ವೈಮನಸ್ಯ ದೂರವಾಗಿಲ್ಲ. ಈಗಾಗಲೇ ಪ್ರೀತಂ ಬೆಂಬಲಿಗರ ಪೈಕಿ ಕೆಲವು ಪ್ರಭಾವಿ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದಾರೆ. ಇದಲ್ಲದೇ ಶತಾಯ ಗತಾಯ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲಿಸುವ ಪಣ ತೊಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಟ್ಟಾಗಿ ಕಾರ್ಯತಂತ್ರ ರೂಪಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ
ಯಡಿಯೂರಪ್ಪ ತಂತ್ರಕ್ಕೆ ವಿರೋಧಿಗಳು ತತ್ತರ! (ಸುದ್ದಿ ವಿಶ್ಲೇಷಣೆ)

ತಮ್ಮ ರಾಜಕೀಯ ವಿರೋಧಿ ದೇವೇಗೌಡರ ಸ್ವಂತ ನೆಲದಲ್ಲೇ ಅವರ ಮೊಮ್ಮಗನನ್ನು ಸೋಲಿಸಬೇಕೆಂಬ ಹಟ ಸಿದ್ದರಾಮಯ್ಯ ಅವರದ್ದಾದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ಗೌಡರ ಒಂದು ಕಾಲದ ರಾಜಕೀಯ ವಿರೋಧಿ ಮಾಜಿ ಸಚಿವ ದಿ.ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಗಮನಾರ್ಹ ಸಂಗತಿ.ಹಳೆಯ ಶಿಷ್ಯರೂ ಈಗ ಗೌಡರ ಪಾಳೇಯ ತೊರೆದು ಸಿದ್ದರಾಮಯ್ಯ ಕ್ಯಾಂಪ್ ಸೇರಿದ್ದಾರೆ. ಆದರೂ ಮೊಮ್ಮಗನನ್ನು ಗೆಲ್ಲಿಸುವ ಪಣತೊಟ್ಟು ಸ್ವತಹಾ ದೇವೇಗೌಡರೇ ಹಾಸನದ ಚುನಾವಣಾ ರಣಾಂಗಣಕ್ಕೆ ಧುಮುಕಿದ್ದಾರೆ. ಅವರಿಗೂ ಇದು ರಾಜಕೀಯವಾಗಿ ಪ್ರತಿಷ್ಠೆಯ ಪ್ರಶ್ನೆ. ಈ ಎಲ್ಲ ಕಾರಣಕ್ಕಾಗಿ ಹಾಸನದ ಚುನಾವಣಾ ಅಖಾಡ ಕುತೂಹಲ ಕೆರಳಿಸಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ ಕ್ಷೇತ್ರದಲ್ಲೂ ಪರಿಸ್ಥಿತಿ ಸುಲಭವಾಗೇನೂ ಇಲ್ಲ. ಬಿಜೆಪಿ ಸೇರಿರುವ ಪಕ್ಷೇತರ ಸಂಸದೆ ಸುಮಲತಾ ಅವರು ಹಾಗೂ ಬೆಂಬಲಿಗರು ಜೆಡಿಎಸ್ ಪರ ಪ್ರಚಾರಕ್ಕೆ ಸಕ್ರಿಯವಾಗಿ ಧುಮುಕಿಲ್ಲ. ಮುಖ್ಯವಾಗಿ ಇಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚೆಲುರಾಯಸ್ವಾಮಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ವಿರುದ್ಧ ಒಟ್ಟಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಆದಿ ಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆಗೆ ಆದೇಶ ನೀಡಿದ್ದು ಅದರ ದಾಖಲೆಗಳು ತಮ್ಮ ಬಳಿ ಇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿರುವುದು ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದು ಚುನಾವಣಾ ಅಸ್ತ್ರವಾಗಿಯೂ ಬಳಕೆಯಾಗಲಿದೆ.

ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಡಾ. ಸುಧಾಕರ್ ಹಾಗೂ ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ನಡುವಿನ ಭಿನ್ನಮತಕ್ಕೆ ವರಿಷ್ಠರು ತೇಪೆ ಹಾಕಿದ್ದರೂ ಮತ್ತೆ ವೈಮನಸ್ಯ ಮೂಡಿ ವಿಶ್ವನಾಥ್ ಸಿಡಿದೆದ್ದಾರೆ. ಇದು ಸಾಕಷ್ಟು ಸಮಸ್ಯೆ ತಂದೊಡ್ಡಲಿದೆ.  ಇನ್ನುಳಿದ ಕ್ಷೇತ್ರಗಳಲ್ಲೂ ಬಿಜೆಪಿಗೆ ಸ್ಥಳೀಯವಾದ ಭಿನ್ನಮತದ ಕಾಟ ಅದನ್ನು ನಿವಾರಿಸುವುದೇ ದೊಡ್ಡ ಸವಾಲಾಗಿದೆ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com