ಯಡಿಯೂರಪ್ಪ ತಂತ್ರಕ್ಕೆ ವಿರೋಧಿಗಳು ತತ್ತರ! (ಸುದ್ದಿ ವಿಶ್ಲೇಷಣೆ)

ಬಿಜೆಪಿ ಟಿಕೆಟ್ ಹಂಚಿಕೆಯ ಸಮೀಕರಣವನ್ನು ಯಾವುದೇ ಕೋನದಿಂದ ನೋಡಿದರೂ ಯಡಿಯೂರಪ್ಪ ಪ್ರಾಬಲ್ಯ ಎದ್ದು ಕಾಣುತ್ತದೆ.
ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾ
ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾTNIE

ಬಿಜೆಪಿ ಟಿಕೆಟ್ ಹಂಚಿಕೆಯ ಸಮೀಕರಣವನ್ನು ಯಾವುದೇ ಕೋನದಿಂದ ನೋಡಿದರೂ ಯಡಿಯೂರಪ್ಪ ಪ್ರಾಬಲ್ಯ ಎದ್ದು ಕಾಣುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ಪುತ್ರ ವಿಜಯೇಂದ್ರ ರನ್ನು ಮುಖ್ಯಮಂತ್ರಿ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವ ಅವರು ಈ ಹಾದಿಗೆ ಅಡ್ಡಿಯಾಗ ಬಹುದಾಗಿದ್ದ ಪ್ರಮುಖ ಲಿಂಗಾಯಿತ ನಾಯಕರನ್ನು ಲೋಕಸಭೆಗೆ ಅಭ್ಯರ್ಥಿಗಳಾಗಿಸುವ ಮೂಲಕ ಅಡ್ಡಿ ನಿವಾರಣೆ ಮಾಡಿಕೊಂಡಿದ್ದಾರೆ. ವಿರೋಧಿಗಳಾದ ಸಿ.ಟಿ. ರವಿ, ಪ್ರತಾಪ ಸಿಂಹ ಈಶ್ವರಪ್ಪ ಮತ್ತಿತರರನ್ನು ಮೂಲೆಗುಂಪು ಮಾಡಿದ್ದಾರೆ.

'ನೀರಿಗಿಂತ ರಕ್ತ ಹೆಚ್ಚು ಗಟ್ಟಿ.'

ಲೋಕಸಭೆ ಚುನಾವಣೆಗೆ ಅಧಿ ಸೂಚನೆ ಪ್ರಕಟವಾಗುವ ಮುನ್ನವೇ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಸಹಜವಾಗೇ ಇದು ನಾಲ್ಕು ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಅಸಮಧಾನಗೊಂಡು ಬಂಡಾಯ ಎದ್ದಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಂಡಾಯ ಎದ್ದವರ ಪೈಕಿ ಕೆಲವರು ತಣ್ಣಗಾಗಲೂ ಬಹುದು. ಹಾಗೆಯೇ ಸಮಾಧಾನಗೊಳ್ಳದಿದ್ದವರು ಕಾಂಗ್ರೆಸ್ ನತ್ತ ತಮ್ಮ ಹೆಜ್ಜೆ ಇಡಲೂ ಬಹುದು. ಅಧಿಕಾರವೇ ಪ್ರಧಾನ ಗುರಿಯಾಗಿರುವ ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ.

ಆದರೆ ಅಭ್ಯರ್ಥಿಗಳ ಪಟ್ಟಿ ಗಮನಿಸಿದರೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾಬಲ್ಯ ಸಾಧಿಸಿರುವುದು ಎದ್ದು ಕಾಣುತ್ತದೆ. ತಮ್ಮ ನಿಷ್ಠರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡುವಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ. ಹಾಗೆಯೇ ಇದರಿಂದ ಪಕ್ಷದ ರಾಜ್ಯ ಘಟಕದ ಮೇಲೆ ಅವರು ಇನ್ನಷ್ಟು ಬಲವಾದ ಹಿಡಿತ ಸಾಧಿಸಿದ್ದಾರೆ. ಇದೇ ವೇಳೆ ತನ್ನ ನಾಯಕತ್ವದ ವಿರುದ್ಧ ನಿಂತವರಿಗೆ ಲೋಕಸಭೆ ಟಿಕೆಟ್ ತಪ್ಪಿಸುವ ಮೂಲಕ ವಿರೋಧಿ ಬಣಕ್ಕೆ ನನ್ನನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.ಒಂದಂತೂ ಸ್ಪಷ್ಟವಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮಾತಿಗೆ ಎದುರಾಡಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ದೊಡ್ಡ ಸವಾಲೂ ಈಗ ಅವರ ಹೆಗಲ ಮೇಲೆ ಬಿದ್ದಿದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸಲೂ ಬಹುದು.

ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾ
ಬಿಜೆಪಿ ನಾಯಕರ ನಿದ್ದೆಗೆಡಿಸಿದ ಕುಮಾರಸ್ವಾಮಿ! (ಸುದ್ದಿ ವಿಶ್ಲೇಷಣೆ)

ಬಹು ಮುಖ್ಯವಾಗಿ ವಿಧಾನಸಭೆ ಚುನಾವಣೆಯ ನಂತರ ಮುನಿಸಿಕೊಂಡು ನಾನಾ ಕಾರಣಗಳಿಗಾಗಿ ದೂರವಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಕೆಲವು ಪ್ರಭಾವಿ ಲಿಂಗಾಯಿತ ಮುಖಂಡರಿಗೆ ಲೋಕಸಭೆಗೆ ಪಕ್ಷದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವ ಮೂಲಕ ಮತ್ತೆ ತಮ್ಮ ನಾಯಕತ್ವದ ತೆಕ್ಕೆಗೇ ಅವರನ್ನು ತೆಗೆದುಕೊಂಡಿರುವುದರ ಹಿಂದೆಯೂ ತಮ್ಮ ಪುತ್ರರಾದ ಬಿ.ವೈ ರಾಘವೇಂದ್ರ ಮತ್ತು ಬಿ.ವೈ ವಿಜಯೇಂದ್ರ ಅವರಿಗೆ ರಾಜಕೀಯವಾಗಿ ಉನ್ನತಾದಿಕಾರದ ಸುಭದ್ರ ನೆಲೆ ಕಲ್ಪಿಸುವ ದೂರಗಾಮಿ ಲೆಕ್ಕಾಚಾರವೂ ಇದರ ಹಿಂದೆ ಇದೆ.

ಪ್ರಧಾನಿ ನರೇಂದ್ರ ಮೋದಿ ಇದೇ 18 ರಿಂದ ಶಿವಮೊಗ್ಗದಿಂದಲೇ ಲೋಕಸಭೆ ಚುನಾವಣಾ ಪ್ರಚಾರ ಆರಂಭಿಸಿಲಿದ್ದಾರೆ. ಇಂತಹ ಸನ್ನಿವೇಶದಲ್ಲೇ ತಮ್ಮ ಪುತ್ರ ಕೆ.ಇ. ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ತಪ್ಪಿದ್ದಕ್ಕಾಗಿ ಆಕ್ರೋಶಗೊಂಡಿರುವ ಮಾಜಿ ಸಚಿವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಿಂದ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ. ಒಂದು ಕಾಲಕ್ಕೆ ಯಡಿಯೂರಪ್ಪನವರ ಪರಮಾಪ್ತರೇ ಆಗಿದ್ದ ಈಶ್ವರಪ್ಪ ಇತ್ತೀಚಿನ ವರ್ಷಗಳಲ್ಲಿ ಅವರ ಪ್ರಭಾ ವಲಯದಿಂದ ಹೊರ ಬಂದು ಸ್ವಂತ ರಾಜಕೀಯ ಅಸ್ತಿತ್ವ ರೂಪಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿದರಾದರೂ ಸಮರ್ಪಕ ತಯಾರಿ ಮತ್ತು ಬದ್ಧತೆ ಇಲ್ಲದ ಪರಿಣಾಮ ಅವೆಲ್ಲವೂ ಗುರಿ ಮುಟ್ಟದೇ ಅರ್ಧಕ್ಕೇ ಮುಕ್ತಾಯಗೊಂಡವು. ಅವರ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಬೆಂಬಲಿಸಿದವರೂ ರಾಜಕೀಯವಾಗಿ ದಿಕ್ಕಾಪಾಲಾದರು.

ರಾಜಕೀಯವಾಗಿ ದ್ವಂದ್ವಗಳನ್ನೇ ಇಟ್ಟುಕೊಂಡಿರುವ ಈಶ್ವರಪ್ಪ ಏನೇ ಅಬ್ಬರಿಸಿದರೂ ಮುಂದಿನ ದಿನಗಳಲ್ಲಿ ತಣ್ಣಗಾಗುವುದು ಖಚಿತ. ಅವರ ರಾಜಕಾರಣದ ಹಾದಿಯನ್ನು ಕಂಡವರಿಗೆ ಈಗಿನ ಬಂಡಾಯವೂ ಗಂಭೀರ ಸ್ವರೂಪ ಪಡೆಯುವುದಿಲ್ಲ ಎಂಬುದು ಮನವರಿಕೆ ಆಗುತ್ತದೆ. ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಸಿ.ಟಿ.ರವಿ. ಹಾಗೂ ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿದು ನಿಂತಿರುವ ವಿಜಾಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅಸಮಧಾನಿತ ಪಕ್ಷದ ಮುಖಂಡರ ಬೆಂಬಲದ ನಿರೀಕ್ಷೆಯೊಂದಿಗೆ ಈಶ್ವರಪ್ಪ ಬಂಡಾಯದ ಕಹಳೆ ಮೊಳಗಿಸಿದ್ದಾರಾದರೂ ಈ ಮುಖಂಡರು ಯಾರೂ ಪಕ್ಚದ ಶಿಸ್ತಿನ ಚೌಕಟ್ಟು ಹಾಗೂ ಸಂಘ ಪರಿವಾರದ ಕಟ್ಟು ಕಟ್ಟಳೆ ಮೀರಿ ಅವರ ಜತೆ ನಿಲ್ಲುವ ಸಾಧ್ಯತೆಗಳು ಇಲ್ಲ. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದರೂ ಸದಾನಂದ ಗೌಡ ಮತ್ತು ಸಿ.ಟಿ.ರವಿ ಪಕ್ಷದ ವಿರುದ್ಧ ಸಿಡಿದೇಳೂ ಸಾಧ್ಯತೆಗಳು ದೂರ. ಅವರಿಬ್ಬರೂ ಅಧಿಕಾರದ ರಾಜಕಾರಣದಲ್ಲಿ ಮುಂದೆ ಮುಟ್ಟಬೇಕಾದ ಗುರಿಯ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಈಶ್ವರಪ್ಪ ಹೋರಾಟಕ್ಕೆ ಈ ನಾಯಕರು ಒಂದು ಸಣ್ಣ ಅನುಕಂಪ ಸೂಚಿಸಬಹುದೇ ಹೊರತೂ ಸಾರಾಸಗಟಾಗಿ ಅವರನ್ನು ಬೆಂಬಲಿಸುವ ಸಾಧ್ಯತೆಗಳು ಇಲ್ಲ. ಹಾಗೆ ನೋಡಿದರೆ ನಾಲ್ಕು ದಶಕಗಳ ರಾಜಕಾರಣದ ಅವಧಿಯಲ್ಲಿ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಹಲವು ಅಧಿಕಾರ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದರೂ ಈಶ್ವರಪ್ಪ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿ ಬೆಳೆದಿಲ್ಲ. ಯಡಿಯೂರಪ್ಪ ವಿರುದ್ಧ ಆಗಾಗ ಹೋರಾಟದ ಹುಮ್ಮಸ್ಸು ತೋರಿಸಿದರೂ ನಂತರ ದಿನಗಳಲ್ಲಿ ಅವರ ನಾಯಕತ್ವಕ್ಕೇ ಶರಣಾಗತರಾದ ಉದಾಹರಣೆಗಳು ಸಾಕಷ್ಟಿವೆ.

ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾ
ಯಡಿಯೂರಪ್ಪ 'ಶಿಕಾರಿ'; ವಿರೋಧಿಗಳು ದಿಕ್ಕಾಪಾಲು! (ಸುದ್ದಿ ವಿಶ್ಲೇಷಣೆ)

ಹೆಚ್ಚಿನ ಸಂದರ್ಭಗಳಲ್ಲಿ ಈಶ್ವರಪ್ಪ ಸಂಘ ಪರಿವಾರದ ನಾಯಕರ ರಾಜಕೀಯ ಸ್ವಾರ್ಥ ಸಾಧನೆಗೆ ಯಡಿಯೂರಪ್ಪ ವಿರುದ್ಧ ಅಸ್ತ್ರವಾಗಿ ಬಳಕೆಯಾಗಿದ್ದಾರೆ ಎಂಬುದೇ ದುರಂತ. ಬಿಜೆಪಿಯಿಂದ ಸಿಡಿದೆದ್ದು ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗಲೂ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಶ್ವರಪ್ಪ ಸೋತು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಈಗ ಮತ್ತೆ ಅದೇ ಇತಿಹಾಸ ಪುನರಾವರ್ತನೆಯಾಗಿದೆ. ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಿಂದಲೇ ಕಣಕ್ಕಿಳಿಯುವುದಾಗಿ ಘೋಷಿಸಿರುವ ಅವರ ರಣಕಹಳೆಯನ್ನು ಯಡಿಯೂರಪ್ಪ ಗಂಭೀರವಾಗಿ ತೆಗೆದುಕೊಂಡಿಲ್ಲ. ಸ್ಪರ್ಧೆ ಕುರಿತು ಈಶ್ವರಪ್ಪ ಅವರಲ್ಲೇ ಗೊಂದಲಗಳಿವೆ. ಕುಟುಂಬ ರಾಜಕಾರಣದ ವಿರುದ್ಧ ತೊಡೆ ತಟ್ಟಿರುವ ಅವರ ಹೋರಾಟವೂ ತಮ್ಮದೇ ಪುತ್ರನಿಗೆ ರಾಜಕೀಯ ಅಸ್ತಿತ್ವ ಕಲ್ಪಿಸುವುದೇ ಆಗಿರುವುದರಿಂದ ಕಡೇ ಗಳಿಗೆಯಲ್ಲಿ ಈ ನಿರ್ಧಾರದಿಂದ ಅವರು ಹಿಂದೆ ಸರಿದು ರಾಘವೇಂದ್ರ ಪರವಾಗಿ ಪ್ರಚಾರಕ್ಕೆ ಹೊರಟರೂ ಆಶ್ಚರ್ಯ ಏನಿಲ್ಲ.

ಈಶ್ವರಪ್ಪ ಮುನಿಸು ತಣ್ಣಗೆ ಮಾಡುವ ಹೊಣೆಗಾರಿಕೆಯನ್ನು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ನೀಡಿರುವುದರ ಹಿಂದೆಯೂ ಲೆಕ್ಕಾಚಾರ ಅಡಗಿದೆ. ನೇರವಾಗಿ ತಾವೇ ಸಂಧಾನಕ್ಕೆ ಹೋಗುವ ಬದಲು ರಾಜಕೀಯವಾಗಿ ಅತ್ಯಂತ ಕಿರಿಯರಾದ ಜ್ಞಾನೇಂದ್ರ ಅವರನ್ನು ನಿಯೋಜಿಸುವ ಮೂಲಕ ಈ ಸಂಧಾನ ಯಶಸ್ವಿ ಆದರೂ ಅಷ್ಟೆ ಬಿಟ್ಟರೂ ಅಷ್ಟೆ ಎಂಬ ಯಡಿಯೂರಪ್ಪನವರ ಧೋರಣೆ ಮೇಲ್ನೋಟಕ್ಕೆ ಕಾಣುತ್ತದೆ. ಈ ಎಲ್ಲ ಬೆಳವಣಿಗೆಗಳನ್ನು ಆಳಕ್ಕಿಳಿದು ನೋಡಿದರೆ ಈಶ್ವರಪ್ಪ 18 ರಂದುಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಎಲ್ಲ ಸಾಧ್ಯತೆಗಳೂ ಇವೆ.

ಬಿಜೆಪಿಯಲ್ಲಿ ನಡೆದಿರುವ ಇದೇ ಬೆಳವಣಿಗೆಯ ಇನ್ನೊಂದು ಮಗ್ಗುಲನ್ನು ನೋಡಿದರೆ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಕಡೆಗೂ ರಾಜಿ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸೋಮಣ್ಣ ಚುನಾವಣೆಯಲ್ಲಿ ಸೋಲಿನ ನಂತರ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಅವರ ನಾಯಕತ್ವ ಒಪ್ಪಿಕೊಂಡು ರಾಜಿ ಆದರು.

ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾ
ಅನಂತ್ ಕುಮಾರ್ ಹೆಗಡೆ 'ಕರಾಟೆ ಕೌಶಲ್ಯ'ಕ್ಕೆ ನಲುಗಿದ ಬಿಜೆಪಿ! (ಸುದ್ದಿ ವಿಶ್ಲೇಷಣೆ)

ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದು ವಿಜಯೇಂದ್ರ ಅಧ್ಯಕ್ಷರಾದ ಕಾರಣಕ್ಕೆ ಸಿಗದಿದ್ದಾಗ ಯಡಿಯೂರಪ್ಪ ವಿರುದ್ಧ ಅಸಮಧಾನಗೊಂಡು ಇತ್ತೀಚಿನ ದಿನಗಳಲ್ಲಿ ಅವರಿಂದ ಅಂತರ ಕಾಯ್ದುಕೊಂಡಿದ್ದರು.ಈಗ ಅವರನ್ನು ಹಾವೇರಿ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಅಸಮಧಾನ ತನ್ಣಗೆ ಮಾಡಲಾಗಿದೆ. ಅದೇ ರೀತಿ ಧಾರವಾಡ ಅಥವಾ ಹಾವೇರಿಯಿಂದ ಕಣಕ್ಕಿಳಿಯಲು ಬಯಸಿ ಅದು ಈಡೇರದಿದ್ದಾಗ ಮುನಿಸಿಕೊಂಡಿದ್ದ ಶೆಟ್ಟರ್ ಅವರನ್ನು ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೊಪ್ಪಳ ಕ್ಷೇತ್ರದಿಂದ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಫಲಪ್ರದವಾಗಿಲ್ಲ. ಇದಕ್ಕೆ ಸಂಸದರಾಗಿ ಅವರ ರಾಜಕೀಯ ವೈಫಲ್ಯಗಳೇ ಕಾರಣ ಎಂದೂ ಹೇಳಲಾಗುತ್ತಿದೆ.

ವಿಶೇಷವಾಗಿ ಮೈಸೂರಿನಿಂದ ಎರಡುಬಾರಿ ಸಂಸದರಾಗಿದ್ದ ಪ್ರತಾಪ ಸಿಂಹಗೆ ಟಿಕೆಟ್ ತಪ್ಪಿರುವುದು ಬಿಜೆಪಿಯ ವಲಯಗಳಲ್ಲಿ ಹೆಚ್ಚಿನ ಮಂದಿಗೆ ಸಮಾಧಾನ ತಂದಿದೆ. ರಾಜಕಾರಣದ ಸೂಕ್ಷ್ಮತೆಗಳನ್ನು ಹಾಗೂ ತನ್ನ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳದ ಕಾರಣಕ್ಕೆ ಅವರು ಟಿಕೆಟ್ ವಂಚಿತರಾಗಿದ್ದಾರೆ. ಪಕ್ಷದ ನಾಯಕತ್ವಕ್ಕಿಂತ ಅವರು ತಮ್ಮ ರಾಜಕೀಯ ಗುರು ಬಿ.ಎಲ್ .ಸಂತೋಷ್ ಅವರಿಗೆ ನಿಷ್ಠರಾಗಿದ್ದೂ ಟಿಕೆಟ್ ಕೈತಪ್ಪಲು ಇನ್ನೊಂದು ಕಾರಣ. ಮೈಸೂರು –ಕೊಡುಗು ಲೋಕಸಭಾ ಕ್ಷೇತ್ರದಿಂದ ರಾಜ ವಂಶಸ್ಥ ಯದುವೀರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.ಮೈಸೂರು ಪ್ರಾಂತ್ಯದಲ್ಲಿ ಮಹಾರಾಜರ ಕುರಿತಾಗಿ ಇನ್ನೂ ಅಲ್ಲಲ್ಲಿ ಇರುವ ಗೌರವ ಭಕ್ತಿ ಭಾವನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ತಂತ್ರ ಇದು.

ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾ
ಲೋಕಸಭೆ: ಬಿಜೆಪಿಗೆ ಆ ನಾಲ್ಕು ಕ್ಷೇತ್ರಗಳದ್ದೇ ತಲೆನೋವು (ಸುದ್ದಿ ವಿಶ್ಲೇಷಣೆ)

ದಾವಣಗೆರೆಯಲ್ಲಿ ಹಾಲಿ ಸಂಸದ ಸಿದ್ದೇಶ್ವರ ಬದಲು ಅವರ ಪತ್ನಿಗೆ ಟಿಕೆಟ್ ನೀಡಿರುವುದು ಯಡಿಯೂರಪ್ಪ ಶಿಷ್ಯರ ಅಸಮಧಾನಕ್ಕೆ ಕಾರಣವಾಗಿದೆ.ಮಾಜಿ ಸಚಿವ ರೇಣುಕಾಚಾರ್ಯ ಇದೀಗ ಸಿಡಿದೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಅವರೂ ತಣ್ಣಗಾಗಬಹುದು. ಇತ್ತೀಚಿನ ದಿನಗಳಲ್ಲಿ ಅವರು ಕಾಂಗ್ರೆಸ್ ನಾಯಕ ಶಾಮನೂರು ಕುಟುಂಬಕ್ಕೆ ಹೆಚ್ಚು ಹತ್ತಿರವಾಗಿದ್ದಾರೆ ಎಂಬುದೂ ಇಲ್ಲಿ ಗಮನಿಸಬೇಕಾದ ಅಂಶ.

ಬಿಜೆಪಿ ಟಿಕೆಟ್ ಹಂಚಿಕೆಯ ಸಮೀಕರಣವನ್ನು ಯಾವುದೇ ಕೋನದಿಂದ ನೋಡಿದರೂ ಯಡಿಯೂರಪ್ಪ ಪ್ರಾಬಲ್ಯ ಎದ್ದು ಕಾಣುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ಪುತ್ರ ವಿಜಯೇಂದ್ರ ರನ್ನು ಮುಖ್ಯಮಂತ್ರಿ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವ ಅವರು ತಮ್ಮ ಪುತ್ರನ ಹಾದಿಗೆ ಅಡ್ಡಿಯಾಗ ಬಹುದಾಗಿದ್ದ ಪ್ರಮುಖ ಲಿಂಗಾಯಿತ ನಾಯಕರಾದ ಸೋಮಣ್ಣ, ಬೊಮ್ಮಾಯಿ, ಶೆಟ್ಟರ್ ಸೇರಿದಂತೆ ಕೆಲವರನ್ನು ಲೋಕಸಭೆಗೆ ಅಭ್ಯರ್ಥಿಗಳಾಗಿಸುವ ಮೂಲಕ ಅಡ್ಡಿ ನಿವಾರಣೆ ಮಾಡಿಕೊಂಡಿದ್ದಾರೆ.ಈಗಿನ ಸನ್ನಿವೇಶದಲ್ಲಿ ಈ ಮೂವರೂ ಗೆಲ್ಲಲೂ ಬಹುದು. ಹಾಗಾದರೆ ಸ್ವಜಾತಿಯಲ್ಲೇ ಪ್ರತಿಸ್ಪರ್ಧಿಗಳು ನಿವಾರಣೆ ಆಗುತ್ತಾರೆ. ಟಿಕೆಟ್ ಕೊಡಿಸಿದ, ಹಾಗೂ ಪ್ರಚಾರ ಮಾಡಿ ಗೆಲ್ಲಿಸಿದ ಋಣಭಾರವೂ ಇರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ತಮ್ಮ ವಿರುದ್ಧ ನಿಲ್ಲುವುದಿಲ್ಲ ಎಂಬುದು ಒಂದು ಲೆಕ್ಕಾಚಾರ. ರಾಜಕಾರಣದ ಈ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳದ ಹಿರಿಯ ನಾಯಕ ಈಶ್ವರಪ್ಪ ಯಡವಟ್ಟು ಮಾಡಿಕೊಂಡಿದ್ದಾರೆ. ಸಜ್ಜನಿಕೆಯ ನಾಯಕ ಸದಾನಂದ ಗೌಡರು ಕಾಂಗ್ರೆಸ್ ನತ್ತ ಅರ್ಧ ಆಸೆ ಕಣ್ಣುಗಳಿಂದ ನೋಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯ ರಾಜಕಾರಣ ಯಡಿಯೂರಪ್ಪ ಮತ್ತು ಅವರ ಪುತ್ರರತ್ತಲೇ ಸುತ್ತಿದರೆ ಅದೇನೂ ಆಶ್ಚರ್ಯವಲ್ಲ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com