ಯಡಿಯೂರಪ್ಪ 'ಶಿಕಾರಿ'; ವಿರೋಧಿಗಳು ದಿಕ್ಕಾಪಾಲು! (ಸುದ್ದಿ ವಿಶ್ಲೇಷಣೆ)

ಶೆಟ್ಟರ್ ಪಕ್ಷಕ್ಕೆ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತ್ರ ಹಾಜರಿದ್ದರು. ರಾಜ್ಯದವರೇ ಆದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೈರು ಹಾಜರಿ ಅಕಸ್ಮಿಕವಂತೂ ಅಲ್ಲ.
ಶೆಟ್ಟರ್ ಪಕ್ಷಕ್ಕೆ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಯಡಿಯೂರಪ್ಪ
ಶೆಟ್ಟರ್ ಪಕ್ಷಕ್ಕೆ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಯಡಿಯೂರಪ್ಪ

ನಿಜಕ್ಕೂ ಬೆಚ್ಚಿ ಬಿದ್ದಿರುವುದು ಯಾರು…….?

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್  ಅವರನ್ನು ಕಾಂಗ್ರೆಸ್  ಬಿಡಿಸಿ ಬಿಜೆಪಿಗೆ ಮರಳಿ ಕರೆತರುವಲ್ಲಿ ಯಶಸ್ವಿಯಾಗಿ ಯಾಗಿರುವ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸುವ ತಂತ್ರದಲ್ಲಿ ಯಶಸ್ವಿಯಾಗಿದ್ದಾರೆ.  ಸೇರಿದ ಆರೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ವಾಪಸು ಬಿಜೆಪಿಗೆ ಶೆಟ್ಟರ್ ಮರಳಿರುವುದು ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತ ಎಂದು ಕಂಡು ಬಂದರೂ ವಾಸ್ತವವೇ ಬೇರೆ.

ಈ ಮೂಲಕ ಬಿಜೆಪಿಯಲ್ಲೇ ಇರುವ  ತಮ್ಮ ವಿರೋಧಿಗಳಶಕ್ತಿ ಕುಂದುವಂತೆ ಮಾಡುವಲ್ಲಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಶಸ್ವಿಯಾಗಿದ್ದರೆ, ಅವರ ಈ ತಂತ್ರಕ್ಕೆ ವಿರೋಧಿಗಳು ಬೆಚ್ಚಿ ಬಿದ್ದಿದ್ದಾರೆ. ಈ ಪೆಟ್ಟಿನಿಂದ ಅವರು ಮೇಲೇಳುವುದು ಸದ್ಯಕ್ಕೆ ಕಷ್ಟ. ಕಳೆದ ಮೇ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ತಾವು ಸೂಚಿಸಿದ ಬಹಳಷ್ಟು ಮಂದಿಗೆ ಪಕ್ಷದೊಳಗಿನ ತಮ್ಮ ವಿರೋಧಿಗಳೇ ಟಿಕೆಟ್ ತಪ್ಪಿಸಿದಾಗ ಕುದ್ದು ಹೋಗಿದ್ದ ಯಡಿಯೂರಪ್ಪ ಅಸಮಾಧಾನ ಅದುಮಿಟ್ಟುಕೊಂಡು ತಮ್ಮ ಪುತ್ರ ಬಿ.ವೈ ವಿಜಯೇಂದ್ರ ರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಮೂಲಕ ಮತ್ತೆ ಪಕ್ಷದಲ್ಲಿ ಹಿಡಿತ ಸಾಧಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು. ಇದು ಅದರ ಮುಂದುವರಿದ ಭಾಗ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನಿಂದ ವಂಚಿತರಾಗಿ ಕಡೆಗೆ ಕಾಂಗ್ರೆಸ್ ಸೇರಿ ಸ್ಪರ್ಧಿಸಿ ಸೋತು ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರವರನ್ನು ವಾಪಸು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗುವ ಮೂಲಕ ಪಕ್ಷದೊಳಗಿನ ತಮ್ಮ ವಿರೋಧಿಗಳು ಕಂಗಾಲಾಗುವಂತೆ ಮಾಡಿದ್ದಾರೆ.

ಗುರುವಾರ( ಜನವರಿ 25) ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮ್ಮುಖದಲ್ಲಿ ಶೆಟ್ಟರ್ ಬಿಜೆಪಿಗೆ ಮರಳಿ ಸೇರ್ಪಡೆಯಾದಾಗ ವೇದಿಕೆಯಲ್ಲಿದ್ದ ಇತರ ಮೂವರು ಪ್ರಮುಖರು ಎಂದರೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಯಡಿಯೂರಪ್ಪ ಮತ್ತು ವಿಜಯೇಂದ್ರ ಮಾತ್ರ. ಇನ್ನುಳಿದಂತೆ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರಿಗೆ ಪರಮಾಪ್ತರಾಗುವ ಮೂಲಕ ರಾಜ್ಯದ ವಿದ್ಯಮಾನಗಳನ್ನು ನಿಯಂತ್ರಿಸುತ್ತಿರುವವರೆಂದೇ ಹೇಳಲಾಗುತ್ತಿರುವ ಶೆಟ್ಟರ್ ಅವರು ಪ್ರತಿನಿಧಿಸುವ ಧಾರವಾಡ ಜಿಲ್ಲೆಯವರೇ ಆದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಈ ಸೇರ್ಪಡೆ ಪ್ರಸಂಗಕ್ಕೆ ಗೈರು ಹಾಜರಾಗಿದ್ದರು. 

ಬಿಜೆಪಿ ಮೂಲಗಳೇ ಹೇಳುವ ಪ್ರಕಾರ ಶೆಟ್ಟರ್ ವಾಪಸು ವಿಚಾರ ರಾಷ್ಟ್ರೀಯ ನಾಯಕತ್ವಕ್ಕೆ ಹತ್ತಿರವಾದ ಇಬ್ಬರಿಗೂ ತಿಳಿಯದೇ ಇರಲು ಸಾಧ್ಯವೇ ಇಲ್ಲ. ಹಾಗಿದ್ದೂ  ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲವೇಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಶೆಟ್ಟರ್ ಸೇರ್ಪಡೆ ಗೆ ಅವರ ಸಮ್ಮತಿ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬರುತ್ತದೆ.  ಚುನಾವಣೆಯಲ್ಲಿ ಶೆಟ್ಟರ್ ಗೆ ಯಡಿಯೂರಪ್ಪ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರಷ್ಟೇ ಅಲ್ಲ. ವರಿಷ್ಠರನ್ನು ನೇರವಾಗಿ ಸಂಪರ್ಕಿಸಿ ಒತ್ತಡ ಹೇರಿದ್ದರು. ಆದರೆ ನಿರೀಕ್ಷೆ ಸುಳ್ಳಾಗಿತ್ತು. ಇದರಿಂದ ಅವರು ಅಸಮಾಧಾನಗೊಂಡಿದ್ದರೂ ಅದನ್ನು ತೋರ್ಪಡಿಸಿಕೊಂಡಿರಲಿಲ್ಲ. ಅದಕ್ಕೆ ಎರಡು ಕಾರಣಗಳಿತ್ತು. ಶಿಕಾರಿ ಪುರದಲ್ಲಿ ವಿಜಯೇಂದ್ರ ಗೆದ್ದು, ನಂತರ ರಾಜ್ಯಾಧ್ಯಕ್ಷರಾಗಬೇಕಿತ್ತು. ಈ ಎರಡೂ ಕೆಲಸಗಳನ್ನು ಅತ್ಯಂತ ಜಾಣ್ಮೆ ಮತ್ತು ಅಪರೂಪದ ತಾಳ್ಮೆ ಪ್ರದರ್ಶಿಸಿ ಸಾಧಿಸಿಕೊಂಡ ಅವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಮರು ಸಾಧಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 

ಲಕ್ಷ್ಮಣ ಸವದಿ ನಡೆ ಏನು?
ಮುಂದಿನ ದಿನಗಳಲ್ಲಿ ಈ ಸೇರ್ಪಡೆ ಪರ್ವಕ್ಕೆ ಪಕ್ಷ ತೊರೆದು ಕಾಂಗ್ರೆಸ್ ನಲ್ಲಿರುವ ಇನ್ನಷ್ಟು ನಾಯಕರೂ ಸೇರಬಹುದು. ಬಹು ಮುಖ್ಯವಾಗಿ ಮಾಜಿ ಉಪ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವಾಪಸು ಬಿಜೆಪಿಗೆ ಬರುತ್ತಾರೆ ಎಂಬ ವದಂತಿಗಳಿವೆ.ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾದ ಮರು ಘಳಿಗೆಯೇ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲಕ್ಷ್ಮಣ ಸವದಿಯವರೊಂದಿಗೆ ದಿಢಿರ್ ಸುದಿರ್ಘ ಚರ್ಚೆ ನಡೆಸಿರುವುದು ಗಮನ ಸೆಳೆದಿದೆ. ಶೆಟ್ಟರ್ ಅವರಂತೆ ಸವದಿ ಕೂಡಾ ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಗಮನಾರ್ಹ.

ಬಿಜೆಪಿ ಸೇರಿರುವ ಶೆಟ್ಟರ್ ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ, ಇಲ್ಲವೇ ರಾಜ್ಯಪಾಲರಾಗುತ್ತಾರೆ ಅಥವಾ ರಾಜ್ಯ ಸಬೆಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ವದಂತಿಗಳು ಇವೆ. ಹಾವೇರಿಯಿಂದ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಹಾಗು ಯಡಿಯೂರಪ್ಪ ಕುಟುಂಬಕ್ಕೆ ಆಪ್ತರಾದ ನಿವೃತ್ತ ಅಧಿಕಾರಿ ಪಾಟೀಲ್ ಆಸಕ್ತರಾಗಿದ್ದಾರೆ. ಈ ಪಟ್ಟಿಗೆ ಶೆಟ್ಟರ್ ಇನ್ನೊಂದು ಸೇರ್ಪಡೆ. 

ಬೆಳಗಾವಿ ಕ್ಷೇತ್ರವನ್ನು ದಿವಂಗತ ಲೋಕಸಭಾ ಸದಸ್ಯ ಸುರೇಶ ಅಂಗಡಿಯವರ ಪತ್ನಿ ಶ್ರೀಮತಿ ಮಂಗಳಾ ಅಂಗಡಿ ಪ್ರತಿನಿಧಿಸುತ್ತಿದ್ದಾರೆ. ಅವರು ಶೆಟ್ಟರ್ ಅವರ ಬೀಗರೂ ಹೌದು. ನೆಂಟಸ್ತಿಕೆ ಮತ್ತು ರಾಜಕಾರಣ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಶೆಟ್ಟರ್ ಬಯಸಿದ್ದಾರೆ. ಮುಂದಿನದು ಕಾದು ನೋಡಬೇಕು. ಈ ಬೆಳವಣಿಗೆ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯಿಂದ ದೂರ ಹೋಗಿದ್ದ ಲಿಂಗಾಯಿತ ಸಮುದಾಯವನ್ನು ಮತ್ತೆ ಹತ್ತಿರ ತಂದು ಪಕ್ಷದಲ್ಲಿ ತಮ್ಮ ಸಂಪೂರ್ಣ ಸಾರ್ವಭೌಮತ್ವವನ್ನು ಸ್ಥಾಪಿಸಲು ನಡೆಸಿರುವ  ಪ್ರಯತ್ನದ ಮುಂದುವರಿದ ಭಾಗವೂ ಇದಾಗಿದೆ.

ಶೆಟ್ಟರ್ ಮತ್ತು ಜೋಶಿ ಸಂಬಂಧ ಇತ್ತೀಚಿನ ತಿಂಗಳುಗಳಲ್ಲಿ ಚೆನ್ನಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಯ ನಂತರ ಅಥವಾ ಅದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂದೂ ಹೇಳಲಾಗುತ್ತಿದ್ದು ಪ್ರಹ್ಲಾದ ಜೋಶಿಯವರನ್ನು ಆ ಹುದ್ದೆಗೆ ಆಯ್ಕೆ ಮಾಡುವ ಪ್ರಕ್ರಿಯೆಗಳು ನಡೆದಿವೆ.  ಒಂದು ವೇಳೆ ಇದೇ ನಿಜವಾದರೆ ರಾಜ್ಯದಲ್ಲಿ ತಮ್ಮನ್ನು ಮತ್ತೆ ಮೂಲೆ ಗುಂಪು ಮಾಡುವ ಪ್ರಯತ್ನಗಳು ನಡೆಯುತ್ತವೆ ಎಂಬ ದೂರಾಲೋಚನೆ ಹೊಂದಿರುವ ಯಡಿಯೂರಪ್ಪ, ಶೆಟ್ಟರ್ ಸೇರ್ಪಡೆ ಮೂಲಕ ಅದಕ್ಕೊಂದು ತಡೆ ಗೋಡೆ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಜಾತಿ ಗಣತಿ ವರದಿಯೂ ಸೇರಿದಂತೆ ವಿವಿಧ ಕಾರಣಗಳಿಗೆ ಲಿಂಗಾಯಿತ ಸಮುದಾಯ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ಸಂಪೂರ್ಣವಾಗಿ ಸಮುದಾಯ ಒಪ್ಪಿಕೊಂಡಿಲ್ಲ.ಇದಕ್ಕೆ ಆಗಾಗ ಸರ್ಕಾರದ ವಿರುದ್ಧ ಆ ಸಮಾಜದ ನಾಯಕರು ನಡೆಸುತ್ತಿರುವ ವಾಗ್ದಾಳಿಯೇ ನಿದರ್ಶನ. ತಮ್ಮಸಮುದಾಯದ ಒಬ್ಬ ನಾಯಕ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಪ್ರಯತ್ನಗಳೂ ನಡೆದಿವೆ.ಆದರೆ ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಅಂತಹ ಅವಕಾಶಗಳಿಲ್ಲ. ಪ್ರಭಾವಿ ಮಂತ್ರಿ ಆಗಬಹುದಾಗಿದ್ದ ಎಂ.ಬಿ.ಪಾಟೀಲ್ ಇನ್ನೂ ಭದ್ರ ನೆಲೆ ಕಂಡು ಕೊಂಡಿಲ್ಲ.

ಮುಖ್ಯವಾಗಿ ಜೆಡಿಎಸ್ ಜತೆ ಹೊಂದಾಣಿಕೆ ವಿಚಾರದಲ್ಲಿ  ಪಕ್ಷದ ಹೈಕಮಾಂಡ್ ತೀರಾ ಉತ್ಸುಕವಾಗಿರುವುದು ಯಡಿಯೂರಪ್ಪನವರನ್ನು ಅಸಮಾಧಾನಕ್ಕೀಡು ಮಾಡಿದೆ. ಸಂಘಟನಾತ್ಮಕವಾಗಿ ತನ್ನ ನೆಲೆಗಳಲ್ಲೇ ಕುಸಿದಿರುವ ಜೆಡಿಎಸ್ ಗೆ ನೀರೆರೆದು ಮತ್ತೆ ಅದು ಸಂಘಟನಾತ್ಮಕವಾಗಿ ಬೆಳೆದರೆ, ಮುಂದೆ ಅದರಿಂದ ಸಮಸ್ಯೆಗಳೇ ಜಾಸ್ತಿ ಎಂದು ಅರಿತಿರುವ ಯಡಿಯೂರಪ್ಪ ಈ ಸಂಗತಿಯನ್ನು ವರಿಷ್ಠರಿಗೂ ಮುಟ್ಟಿಸಿದ್ದಾರೆ. ಈ ವಿಚಾರದಲ್ಲಿ ಮತ್ತೆ ಹೈಕಮಾಂಡ್ ಅಳೆದೂ… ಸುರಿದೂ ನೋಡುವ ತಂತ್ರ ಅನುಸರಿಸುತ್ತಿದೆ. ಭವಿಷ್ಯದಲ್ಲಿ ರಾಜಕೀಯವಾಗಿ ತಮ್ಮ ಪುತ್ರ ವಿಜಯೇಂದ್ರರನ್ನು ಮುಖ್ಯಮಂತ್ರಿ ಪಟ್ಟಕ್ಕೆ ತರುವ ಪ್ರಯತ್ನದಲ್ಲಿರುವ ಯಡಿಯೂರಪ್ಪ ಅದಕ್ಕಾಗಿ ಪಕ್ಷ ತೊರೆದ ಪ್ರಮುಖ ಲಿಂಗಾಯಿತ ಮುಖಂಡರನ್ನು ಮರಳಿ ಕರೆತರುವ ಮೂಲಕ ತಮ್ಮ ಶಕ್ತಿಯನ್ನು ಇನ್ನಷ್ಟು ಬಲ ಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಜಗದೀಶ ಶೆಟ್ಟರ್ ಯಡಿಯೂರಪ್ಪನವರಿಗೆ ಹೋಲಿಸಿದರೆ ಪ್ರಬಲ ನಾಯಕ ಅಲ್ಲವಾದರೂ ಅವರ ವಿಚಾರದಲ್ಲಿ ನಿಷ್ಠೆ ಹೊಂದಿದ್ದಾರೆ. ಇದೇ ಅನುಕೂಲಕರ ಅಂಶ. ಯಡಿಯೂರಪ್ಪ ಕುಟುಂಬದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿಯ ಇನ್ನೊಬ್ಬ ನಾಯಕ ಬಸವನಗೌಡ ಪಾಟೀಲ ಯತ್ನಾಳ ತಣ್ಣಗಾಗಿದ್ದಾರೆ. ಬಂಡಾಯಕ್ಕೆ ಸಜ್ಜಾಗುತ್ತಿದ್ದ ಮಾಜಿ ಸಚಿವ ವಿ. ಸೋಮಣ್ಣ ಕೂಡಾ ಈಗ ರಾಜಿ ಆಗಿದ್ದಾರೆ. ಅಲ್ಲಿಗೆ ಪಕ್ಷದೊಳಗಿನ ಅಸಮಾಧಾನಿತ ಲಿಂಗಾಯಿತ ನಾಯಕರನ್ನು ತಣ್ಣಾಗಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಪಕ್ಷ ತೊರೆದಿರುವ ಮುಖಂಡರನ್ನು ವಾಪಸು ಕರೆತರುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ಗುರಿ ಯಡಿಯೂರಪ್ಪ ಅವರದ್ದು. 

ಈಗಿನ ಸಮೀಕ್ಷೆಗಳ ಪ್ರಕಾರ 28 ಸ್ಥಾನಗಳ ಪೈಕಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಜೆಡಿಎಸ್ ಒಂದು ಸ್ಥಾನ ಮತ್ತು ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆಗಳಿವೆ. ಅಯೋಧ್ಯೆಯ ಕಾರ್ಯಕ್ರಮದ ನಂತರ ಮೋದಿ ಜನಪ್ರಿಯತೆ ಹೆಚ್ಚಿದೆಯಾದರೂ ರಾಜ್ಯದಲ್ಲಿ ಆ ಜನಪ್ರಿಯತೆಯೊಂದೇ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ. ಇಲ್ಲಿ ಜಾತಿ ಸಮೀಕರಣಗಳನ್ನೂ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.  ಇದರ ಜತೆಗೇ ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಜನರಲ್ಲಿ ಬೀರಿರುವ ಪರಿಣಾಮವನ್ನೂ ನಿರ್ಲಕ್ಷಿಸುವಂತಿಲ್ಲ. ಕಾಂಗ್ರೆಸ್ ಕಳೆದ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪ್ರಯತ್ನದಲ್ಲಿದೆ. ಹೀಗಾದಾಗ ಅದರಿಂದ  25 ಸಂಸದರನ್ನು ಬಿಜೆಪಿಗೆ ನಷ್ಟವಾಗಲಿದೆ. ಜಾತಿ ಸಮೀಕರಣವೂ ಸೇರಿದಂತೆ ಎಲ್ಲ ಅವಕಾಶ ಬಳಸಿಕೊಂಡು ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗಳಿಸಿಕೊಡುವುದು ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಗುರಿ. ಲೋಕಸಭಾ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಅದು ಸರ್ಕಾರದ ಅಸ್ತಿತ್ವದ ಮೇಲೂ ಪರಿಣಾಮ ಬೀರುತ್ತದೆ ಎಂದೂ ಹೇಳಲಾಗುತ್ತಿದೆ. ಈ ಬೆಳವಣಿಗೆ ಕಾಂಗ್ರೆಸ್ ನ ಅಂತಃ ಕಲಹದ ಫಲಿತಾಂಶದ ಮೇಲೆ ನಿಂತಿದೆ.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com