ಬಿಜೆಪಿ ನಾಯಕರ ನಿದ್ದೆಗೆಡಿಸಿದ ಕುಮಾರಸ್ವಾಮಿ! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಅದೊಂದು ಬೆಳವಣಿಗೆ. ಬಿಜೆಪಿಯ ಬಹಳಷ್ಟು ನಾಯಕರು ತಲ್ಲಣಗೊಂಡಿದ್ದಾರೆ. ಈ ಎಲ್ಲರಲ್ಲೂ ಮೂಡಿರುವ ಆತಂಕ ಎಂದರೆ ಇದು ಹೀಗೇ ಮುಂದುವರಿದರೆ, ಪಕ್ಷದಲ್ಲಿ ಮುಂದಿನ  ದಿನಗಳಲ್ಲಿ ತಮ್ಮ ಸ್ಥಾನ ಮಾನಗಳ ಕತೆ ಏನು? ಎಂಬುದು.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಅದೊಂದು ಬೆಳವಣಿಗೆ. ಬಿಜೆಪಿಯ ಬಹಳಷ್ಟು ನಾಯಕರು ತಲ್ಲಣಗೊಂಡಿದ್ದಾರೆ. ಈ ಎಲ್ಲರಲ್ಲೂ ಮೂಡಿರುವ ಆತಂಕ ಎಂದರೆ ಇದು ಹೀಗೇ ಮುಂದುವರಿದರೆ, ಪಕ್ಷದಲ್ಲಿ ಮುಂದಿನ  ದಿನಗಳಲ್ಲಿ ತಮ್ಮ ಸ್ಥಾನ ಮಾನಗಳ ಕತೆ ಏನು? ಎಂಬುದು. 
ಈ ಪ್ರಶ್ನೆಗೆ ಪಕ್ಷದ ವರಿಷ್ಟರಿಂದಲೇ ಸ್ಪಷ್ಟನೆ ಕೇಳೋಣ ಎಂದರೆ ಅದು ಸಾಧ್ಯವಿಲ್ಲದ ಮಾತು. ಅದಕ್ಕಿಂತ ಹೆಚ್ಚಾಗಿ ಈ ಮುಖಂಡರಿಗೆ ವರಿಷ್ಠರ ಎದುರು ಮಾತನಾಡುವ ಧೈರ್ಯವೂ ಇಲ್ಲ. ಒಟ್ಟಿನಲ್ಲಿ ಇಬ್ಬಂದಿ ಸ್ಥಿತಿ.

ಸದ್ಯದಲ್ಲೇ ಬರಲಿರುವ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್ ಜತೆ ಕ್ಷೇತ್ರಗಳ ಹೊಂದಾಣಿಕೆ ಕುರಿತಂತೆ ಬಿಜೆಪಿಯ ದಿಲ್ಲಿ ಮಟ್ಟದ ನಾಯಕರು ಮಾತುಕತೆ ನಡೆಸಿದ್ದಾರೆ. ಅದಿನ್ನೂ ಅಂತಿಮ ಹಂತ ತಲುಪಿಲ್ಲ. ಈವರೆಗಿನ ವರ್ತಮಾನಗಳ ಪ್ರಕಾರ ಹಾಸನ, ಮಂಡ್ಯ ಸೇರಿದಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ. ಇನ್ನು ಒಂದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಚೌಕಾಶಿ ನಡೆಸುತ್ತಿದೆ.

ಆದರೆ ಸಮಸ್ಯೆ ಇರುವುದು ಅದರ ಬಗ್ಗೆ ಅಲ್ಲ. ಮೈತ್ರಿ ಮಾತುಕತೆ ಆರಂಭವಾದಂದಿನಿಂದ ಬಿ.ವೈ.ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗುವವರೆಗೆ ಬಿಜೆಪಿ ವರಿಷ್ಠರು ತಮ್ಮ ಪಕ್ಷದ ಸ್ಥಳೀಯ ನಾಯಕರನ್ನು ಈ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ, ದಿಲ್ಲಿಯಲ್ಲಿ ಏನು ಬೇಳವಣಿಗೆ ನಡೆಯುತ್ತಿದೆ ಎಂಬುದರ ಮಾಹಿತಿಯೇ ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಟ್ಟು ಉಳಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ರಾಜ್ಯ ಬಿಜೆಪಿಯ ಪ್ರಮುಖ ನಾಯಕರಿಗೆ ಇಲ್ಲ. ಬಹು ಮುಖ್ಯವಾಗಿ ಇದರಿಂದ ಪಕ್ಷದಲ್ಲಿರುವ ಒಕ್ಕಲಿಗ ಮುಖಂಡರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕಾರಣ ಬಿಜೆಪಿಯ ಸಿದ್ಧಾಂತಗಳ ಕುರಿತಂತೆ ಮೊದಲಿನಿಂದಲೂ ಕಡು ವಿರೋಧ ಹೊಂದಿದ್ದ ಮಾಜಿ ಪ್ರಧಾನಿ ದೇವೇಗೌಡರೂ ಮತ್ತು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿಧಾನವಾಗಿ ಬಿಜೆಪಿಯ ಎಲ್ಲ ಹಂತಗಳಲ್ಲಿ ಆವರಿಸಿಕೊಳ್ಳಲು ಆರಂಭಿಸುವ ಮೂಲಕ ಪರ್ಯಾಯ ಅಧಿಕಾರದ ಕೇಂದ್ರವಾಗುತ್ತಿರುವುದು. 

ಒಂದಂತೂ ಸ್ಪಷ್ಟ. ಮೈತ್ರಿ ಮಾತುಕತೆಗಳು ಆರಂಭವಾದ ನಂತರ ಕುಮಾರಸ್ವಾಮಿಯವರ ನಡೆಯೇ ಬದಲಾಗಿದೆ. ಬದಲಾದ ಸನ್ನಿವೇಶದಲ್ಲಿ ಹಿಂದುತ್ದ ಸಿದ್ದಾಂತವನ್ನು ಮೂಲ ಬಿಜೆಪಿ ನಾಯಕರು, ಮುಖಂಡರಿಗಿಂತ ಹೆಚ್ಚಾಗಿ ಒಪ್ಪಿಕೊಂಡಿರುವ ಅವರು ಹಿಂದುತ್ವದ ನಾಯಕರಂತೆ ಕಂಗೊಳಿಸುತ್ತಿದ್ದಾರೆ. ಬಿಜೆಪಿಯಲ್ಲಿ ನಾನಾ ಕಾರಣಗಳಿಗೆ ಅತೃಪ್ತರಾಗಿರುವ ಮುಖಂಡರುಗಳನ್ನು ತಮ್ಮ ಬಿಡದಿಯ ತೋಟದ ಮನೆಗೆ ಕರೆಸಿಕೊಂಡು ಅತ್ಯಂತ ಆಪ್ತವಾಗಿ ಅವರೊಂದಿಗೆ ಮುಂದಿನ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸುತ್ತಾರೆ. ಒಂದೆರಡು ಪ್ರಕರಣಗಳಲ್ಲಿ ಮುನಿಸಿಕೊಂಡ ನಾಯಕರುಗಳನ್ನು ತಾವೇ ಮುತುವರ್ಜಿ ವಹಿಸಿ ದಿಲ್ಲಿ ಬಿಜೆಪಿ ನಾಯಕರ ಜತೆ ಮಾತನಾಡಿಸಿ ಅಸಮಾಧಾನ ತಣ್ಣಗಾಗಿಸುವ ಮೂಲಕ ರಾಜೀ ಸಂಧಾನ ಮಾಡಿಸಿದ್ದಾರೆ. ಈ ಪ್ರಕ್ರಿಯೆ ಸಹಜವಾಗೇ ಬಿಜೆಪಿಯಲ್ಲಿನ ಕೆಲವು ಅತೃಪ್ತ ನಾಯಕರಿಗೆ ಇಷ್ಟವಾಗಿದೆ. ಅವರೆಲ್ಲರಿಗೆ ಈಗ ಕುಮಾರಸ್ವಾಮಿ ಹಿರಿಯ ನಾಯಕ ಯಡಿಯೂರಪ್ಪನವರಿಗಿಂತ ಹೆಚ್ಚು ಆಪ್ತ ರಕ್ಷಕನಾಗಿ ಗೋಚರಿಸುತ್ತಿದ್ದಾರೆ. ಅಲ್ಲಿಗೆ ಬಿಜೆಪಿಯ ವಿಶ್ವಾಸ ಗಳಿಸುವ ಮೂಲಕ ಒಕ್ಕಲಿಗರೇ ಪ್ರಬಲರಾಗಿರುವ ಜಿಲ್ಲೆಗಳಲ್ಲಿ ಮತ್ತೆ ತಮ್ಮ ಪ್ರಾಬಲ್ಯ ಸ್ಥಾಪಿಸಲು ಆ ಮೂಲಕ ಪಕ್ಷದ ಮೇಲೂ ಹಿಡಿತ ಸಾಧಿಸುವ ಜೆಡಿಎಸ್ ನಾಯಕರ ಈ ಪ್ರಯತ್ನದ ಮೊದಲ ಹಂತ ಯಶಸ್ವಿಯಾಗಿದೆ.

ಇದಕ್ಕೆ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿ ಬಂದ ಪ್ರಕರಣ, ಮೈಸೂರಿನ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ನಂತರ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಮುಖಂಡ, ಮಾಜಿ ಸಚಿವ ವಿ.ಸೋಮಣ್ಣ ಅವರ ಕೋಪವನ್ನು ತಣಿಸಿ ರಾಜೀ ಸಂಧಾನ ಮಾಡಿಸಿದ ಪ್ರಕರಣವೇ ಸಾಕ್ಷಿ. ಇದಿಗ ಕುಮಾರಸ್ವಾಮಿಯವರ ತೋಟದ ಮನೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಸಿ.ಟಿ.ರವಿ. ಸೇರಿದಂತೆ ಕೆಲವು ಪ್ರಮುಖರು ಪದೇ ಪದೇ ಭೇಟಿ ಕೊಡುತ್ತಿರುವುದು, ಆಪ್ತ ವಲಯಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರ ಹಿನ್ನಲೆಯನ್ನು ಗಮನಿಸಿದರೆ ನಿಧಾನವಾಗಿ ಕುಮಾರ ಸ್ವಾಮಿ ಬಿಜೆಪಿ ವಿದ್ಯಮಾನಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವುದು ಗೋಚರವಾಗುತ್ತದೆ.

ಇತ್ತೀಚೆಗೆ ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮಾನ್ ಧ್ವಜ ವಿವಾದ ಕುರಿತ ಪ್ರತಿಭಟನೆಯಲ್ಲಿ ಕುಮಾರಸ್ವಾಮಿ ಕೇಸರಿ ಶಾಲು ಹೊದ್ದು ಬಿಜೆಪಿ ನಾಯಕರಿಗಿಂತ ಮುಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಉಗ್ರ ಮಾತುಗಳ ಧಾಳಿ ನಡೆಸಿದರು. ಆ ಮೂಲಕ ಮುಂದಿನ ದಿನಗಳಲ್ಲಿ ಮಂಡ್ಯದ ರಾಜಕಾರಣದಲ್ಲಿ ತಾನು ಸಕ್ರಿಯವಾಗಿ ಪಾಲ್ಗೊಳ್ಳುವ ಸಂದೇಶವನ್ನು ಸಮುದಾಯಕ್ಕೆ ಅದರಲ್ಲೂ ಕಾಂಗ್ರೆಸ್ ನಾಯಕರಿಗೆ ರವಾನಿಸಿದರು.

ಮಂಡ್ಯದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ಆರಂಭಿಸಿರುವ ಕುಮಾರ ಸ್ವಾಮಿಗೆ ಕೆರೆಗೋಡು ವಿವಾದ ತಾನಾಗೆ ಒದಗಿಬಂದ ಅವಕಾಶವಾಗಿದ್ದು ಆ ವಿವಾದವನ್ನು ಲೋಕಸಭೆ ಚುನಾಣೆವರೆಗೆ ಜೀವಂತವಾಗಿರಿಸುವ ಚಿಂತನೆಯಲ್ಲೂ ಇದ್ದಾರೆ. ಸ್ಥಳೀಯವಾಗಿ ಬಗೆಹಿರಯಬೇಕಾಗಿದ್ದ ಈ ವಿವಾದ ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಬಿಜೆಪಿಗೆ ಮತ್ತು ಜೆಡಿಎಸ್ ಗೆ ಇಲ್ಲಿ ರಾಜಕೀಯವಾಗಿ ಅಸ್ತಿತ್ವ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಕೆರೆಗೋಡಿಗಷ್ಟೇ ಸೀಮಿತವಾಗಿದ್ದ ಈ ವಿವಾದವನ್ನು ಇದೀಗ ಮಂಡ್ಯಕ್ಕೂ ತರುವ ಮೂಲಕ ಇಡೀ ಜಿಲ್ಲೆಯ ಜನರ ಧಾರ್ಮಿಕ ನಂಬಿಕೆಗೆ ಮತ್ತು ಭಾವನೆಗಳಿಗೆ ಕಾಂಗ್ರೆಸ್ ಸರ್ಕಾರ ಧಕ್ಕೆ ತಂದಿದೆ ಎಂದು ಬಿಂಬಿಸುವ ಪ್ರಯತ್ನದ ಹಿಂದೆ ನಿಸ್ಸಂಶಯವಾಗಿ ಮತ್ತೆ ಮಂಡ್ಯದಲ್ಲಿ ತಮ್ಮ ರಾಜಕೀಯ ಪ್ರಾಬಲ್ಯವನ್ನು ಮರು ಸ್ಥಾಪಿಸುವ ಚಿಂತನೆಯಂತೂ ಅವರಿಗಿದೆ. 

ಇದಕ್ಕೆ ಕಾರಣ ಎಂದರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಮಂಡ್ಯ ಸೇರಿದಂತೆ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಲ್ಲಿ ವೈಯಕ್ತಿಕ ರಾಜಕೀಯ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿ ಭಾಗಶಃ ಯಶಸ್ವಿಯಾಗಿರುವುದು. ಮಂಡ್ಯದ ವಿಚಾರದಲ್ಲೂ ಕುಮಾರಸ್ವಾಮಿಯವರ ನೇರ ಗುರಿ ಇರುವುದು ಡಿ.ಕೆ.ಶಿವಕುಮಾರ್ ಎಂಬುದು ಗುಟ್ಟೇನಲ್ಲ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಾಬಲ್ಯವನ್ನು ದುರ್ಬಲಗೊಳಿಸಬೇಕಾದರೆ ಬರೀ ಲಿಂಗಾಯಿತರ ಬೆಂಬಲ ಇದ್ದರೆ ಸಾಲದು  ಒಕ್ಕಲಿಗ ಸಮುದಾಯದ ಬೆಂಬಲವೂ ಬೇಕು ಎಂಬ ಸೂತ್ರಕ್ಕೆ ಶರಣಾದ ಬಿಜೆಪಿ ದಿಲ್ಲಿ ವರಿಷ್ಠರು ವಿಧಾನಸಭೆಯಲ್ಲಿ ಸೋತು ನಿಶ್ಶಕ್ತವಾಗಿದ್ದ ಜೆಡಿಎಸ್ ಗೆ  ಮೈತ್ರಿಯ  ಆಮಿಷ ಒಡ್ಡುವ ಮೂಲಕ ಕೆಂಪು ಹಾಸಿನ ಸ್ವಾಗತ ನೋಡಿದರು. ಅಸ್ತಿತ್ವ ಉಳಿಸಿಕೊಳ್ಳಲು ಆಸರೆ ಬಯಸಿದ್ದ ಕುಮಾರಸ್ವಾಮಿಗೂ ಇದು ಅಗತ್ಯವಾಗಿತ್ತು. ಇದಕ್ಕಿಂತ ಮುಖ್ಯವಾಗಿ ಬಿಜೆಪಿಯಲ್ಲೇ ಇರುವ ಒಕ್ಕಲಿಗ ಮುಖಂಡರಾದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಮೊದಲಾದವರು ಪಕ್ಷ ಅವಕಾಶಗಳನ್ನು ಕೊಟ್ಟರೂ ಕೇವಲ ಬೆಂಗಳೂರಿನ ತಮ್ಮ ಕ್ಷೇತ್ರಗಳಿಗೆ ಸೀಮಿತರಾದರೇ ಹೊರತೂ ಸಮುದಾಯದ ನಾಯಕರಾಗಿ ಹೊರ ಹೊಮ್ಮಲಿಲ್ಲ. 

ಮೈತ್ರಿ ಶಾಶ್ವತವೆ?

ಮತ್ತೊಂದು ಕಡೆ ಯಡಿಯೂರಪ್ಪ ನಾಯಕತ್ವ ಮತ್ತು ಪ್ರಾಬಲ್ಯವನ್ನು ಅನಿವಾರ್ಯವಾಗಿ ಒಪ್ಪಿಕೊಂಡ ಬಿಜೆಪಿ ಹೈಕಮಾಂಡ್ ಗೆ ಲಿಂಗಾಯಿತರಿಗೆ ಪರ್ಯಾಯವಾಗಿ ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರ ಆಸರೆ ಬೇಕಿತ್ತು. ಕುಮಾರಸ್ವಾಮಿ ಸದ್ಯಕ್ಕೆ ಆ ಬಯಕೆಯನ್ನು ಪೂರೈಸಿದ್ದಾರೆ. ಭವಿಷ್ಯದಲ್ಲಿ ಈ ಮೈತ್ರಿ ಹೀಗೇ ಮುಂದುರಿಯುತ್ತದೆಯಾ ಎಂಬುದು ಲೋಕಸಭೆ ಚುನಾವಣೆಯ ನಂತರವಷ್ಟೇ ಹೇಳಲು ಸಾಧ್ಯ. ಫಲಿತಾಂಶದಲ್ಲಿ ಏರುಪೇರಾದರೆ ಆಗಲೂ ಕುಮಾರಸ್ವಾಮಿ ಸ್ನೇಹ ಹೀಗೆಯೇ ಮುಂದುವರಿಯುತ್ತಾ ಎಂಬುದನ್ನು ಕಾದು ನೋಡಬೇಕು.

ಮತ್ತೆ ಬಿಎಸ್ ವೈ ಪ್ರಾಬಲ್ಯ

ದಿಲ್ಲಿ ವರಿಷ್ಠರ ಈ ಜಾಣ ನಡೆಯ ಹಿಂದಿನ ಸೂಕ್ಷ್ಮಗಳನ್ನು ಮೊದಲೇ ಅರ್ಥ ಮಾಡಿಕೊಂಡಿದ್ದ ಯಡಿಯೂರಪ್ಪ ತಮ್ಮ ಪುತ್ರನನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನನ್ನಾಗಿ ನೇಮಿಸುವ ವಿಚಾರದಲ್ಲಿ ಮೇಲುಗೈ ಸಾಧಿಸಿರುವುದಷ್ಟೇ ಅಲ್ಲ. ಕಾಂಗ್ರೆಸ್ ಸೇರಿದ್ದ ಜಗದೀಶ ಶೆಟ್ಟರ್ ರವರನ್ನು ವಾಪಸು ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮುಂದಿನ ಗುರಿ ಶಾಸಕ ಹಾಗೂ ಬೆಳಗಾವಿಯ ಪ್ರಭಾವಿ ರಾಜಕಾರಣಿ ಲಕ್ಷ್ಮಣ ಸವದಿ. ಆ ಮೂಲಕ ಲಿಂಗಾಯಿತ ಸಮುದಾಯದ ಸಣ್ಣ ಸಣ್ಣ ಪಂಗಡಗಳನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ. 

ಬಿಜೆಪಿ ಮೂಲಗಳ ಪ್ರಕಾರ ಈಗ ಕಾಂಗ್ರೆಸ್ ನಲ್ಲಿರುವ ಲಕ್ಷ್ಮಣ ಸವದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕೇಂದ್ರದಲ್ಲಿ ಸಚಿವರನ್ನಾಗಿಸುವ ಭರವಸೆ ನೀಡಲಾಗಿದೆ ಎಂದೂ ಹೇಳಲಾಗುತ್ತಿದೆ. ಶೆಟ್ಟರ್ ಹಾವೇರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಎದುರಿಸುತ್ತಾರೆ. ಇದಕ್ಕೆ ಪೂರಕ ಎಂಬಂತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಜತೆ ಹಳೆಯ ಮುನಿಸು ಮರೆತು ಸವದಿ ಮಾತಾಡಿದ್ದಾರೆ ಎಂಬ ಮಾಹಿತಿ ಇದೆ. 

ರಾಜ್ಯ ಬಿಜೆಪಿಯಲ್ಲಿ ಮತ್ತೆ  ಪ್ರಶ್ನಾತೀತ ನಾಯಕರಾಗಿ ಪ್ರಾಬಲ್ಯ ಸಾಧಿಸಿರುವ ಯಡಿಯೂರಪ್ಪ, ಲಿಂಗಾಯಿತ ಮತ ಬ್ಯಾಂಕ್ ಗಟ್ಟಿಗೊಳಿಸಲು ಆ ಮೂಲಕ ತಮ್ಮ ಅನಿವಾರ್ಯತೆಯನ್ನು ಸಾಬೀತು ಪಡಿಸಲು ಮುಂದಾಗಿದ್ದಾರೆ. 

ಸೋಮಣ್ಣ ಕತೆ ಏನು?
ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಸೋಮಣ್ಣ ಯಡಿಯೂರಪ್ಪನವರಿಗಿಂತ ಹೆಚ್ಚಾಗಿ ಕುಮಾರಸ್ವಾಮಿ ಮತ್ತು ದೇವೇಗೌಡರ ಜತೆಗೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಯಡಿಯೂರಪ್ಪನವರ ನಡೆಯೇ ಬೇರೆಯದಾಗಿದೆ. ಅದು ಏನೆಂಬುದು ಸದ್ಯಕ್ಕೆ ನಿಗೂಢ.!

ಈ ವಿದ್ಯಮಾನಗಳಿಂದ ನಿಜಕ್ಕೂ ಚಿಂತೆಗೊಳಗಾಗಿರುವ ನಾಯಕರೆಂದರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬಿಜೆಪಿಯ ಇನ್ನೊಬ್ಬ ನಾಯಕ ಕೆ.ಎಸ್. ಈಶ್ವರಪ್ಪ. ವರಿಷ್ಠರ ನಿಗೂಢ ಲೆಕ್ಕಾಚಾರವನ್ನು ಅರಿಯುವಲ್ಲಿ ಸೋತಿರುವ ಇಬ್ಬರೂ ಈಗ ಆತಂಕಕ್ಕೆ ಒಳಗಾಗಿರುವುದಂತೂ ಸತ್ಯ. 

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com