ಲೋಕಸಭೆ: ಬಿಜೆಪಿಗೆ ಆ ನಾಲ್ಕು ಕ್ಷೇತ್ರಗಳದ್ದೇ ತಲೆನೋವು (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್"ಶತ್ರುವಿನ ಶತ್ರು ನನ್ನ ಮಿತ್ರ" ರಾಜಕಾರಣದಲ್ಲಿ ಎಲ್ಲ ಕಾಲಕ್ಕೂ ಪ್ರಚಲಿತದಲ್ಲಿರುವ ಮಾತು ಇದು.  ಲೋಕಸಭೆ ಚುನಾವಣೆ ಸನಿಹದಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಮೇಲಿನ ನಾಣ್ಣುಡಿ ಹೋಲಿಕೆಯಾಗುತ್ತದೆ.
ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿವಿ ಸದಾನಂದಗೌಡ- ಅಮಿತ್ ಶಾ-ಮೋದಿ- ಉತ್ತರ ಕನ್ನಡ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗ್ಡೆ
ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿವಿ ಸದಾನಂದಗೌಡ- ಅಮಿತ್ ಶಾ-ಮೋದಿ- ಉತ್ತರ ಕನ್ನಡ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗ್ಡೆ

"ಶತ್ರುವಿನ ಶತ್ರು ನನ್ನ ಮಿತ್ರ" ರಾಜಕಾರಣದಲ್ಲಿ ಎಲ್ಲ ಕಾಲಕ್ಕೂ ಪ್ರಚಲಿತದಲ್ಲಿರುವ ಮಾತು ಇದು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಹಂತದಲ್ಲಿ ರಾಜ್ಯದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಮೇಲಿನ ನಾಣ್ಣುಡಿ ಹೋಲಿಕೆಯಾಗುತ್ತದೆ. 

ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ನೇಮಕಗೊಂಡ ನಂತರ ಭುಗಿಲೆದ್ದಿರುವ ಆಂತರಿಕ ಭಿನ್ನಮತ ತಣ್ಣಗಾಗುವ ಮುನ್ನವೆ ಅಭ್ಯರ್ಥಿಗಳ ಆಯ್ಕೆ ಪಕ್ಷದ ನಾಯಕತ್ವಕ್ಕೆ ತಲೆ ನೋವು ತಂದೊಡ್ಡಿದೆ.

ಬಹು ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಡಿ.ವಿ. ಸದಾನಂದ ಗೌಡ ಇತ್ತೀಚೆಗೆ ಮೂರು ತಿಂಗಳ ಹಿಂದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು ಅದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಪ್ರತಿಕ್ರಿಯೆ ಸಣ್ಣ ವಿವಾದ ಸೃಷ್ಟಿಸಿತ್ತು. ಕಡೆಗೆ ಯಡಿಯೂರಪ್ಪನವರ ಸ್ಪಷ್ಟನೆ ನೀಡುವ ಮೂಲಕ ವಿವಾದ ತಣ್ಣಗಾಗಿತ್ತು.

ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸದಾನಂದ ಗೌಡರು ಹೇಳಿಕೆ ನೀಡಿದ ಮರು ಕ್ಷಣವೇ ಚುರುಕಾದ ಮತ್ತೊಬ್ಬ ಮುಖಂಡ ಮಾಜಿ ಸಚಿವ ಸಿ.ಟಿ. ರವಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಲು ತೆರೆ ಮರೆಯಲ್ಲಿ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳನ್ನೊಳಗೊಂಡ ಉತ್ತರ ಲೋಕಸಭಾ ಕ್ಷೇತ್ರ  ಬೇರೆ ಬೇರೆ ಕಾರಣಗಳಿಗೂ ಮಹತ್ವ ಪಡೆದುಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಮಹಾನಗರ ಹಾಗೂ ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರ ರಾಜಕೀಯ ಪಕ್ಷಗಳು ಹಾಗೂ ನಾಯಕರ ಪಾಲಿಗೆ ಆಕರ್ಷಣೆಯ ಕೇಂದ್ರ. ಉತ್ತರ ಕ್ಷೇತ್ರ ಸೇರಿದಂತೆ ಬೆಂಗಳೂರು ಮಹಾನಗರ ಹಾಗೂ ಅದಕ್ಕೆ ಅಂಟಿಕೊಂಡಿರುವ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗಬೇಕೆಂಬುದನ್ನು ನಿರ್ಧರಿಸುವ ಮಟ್ಟಿಗೆ ಈ ಉದ್ಯಮ ಬೆಳೆದಿದೆ. ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳಿಗೆ, ನಾಯಕರುಗಳಿಗೆ ಇದು ಆದಾಯದ ಮೂಲವೂ ಹೌದು. ಹೀಗಾಗೇ ಬೆಂಗಳೂರು ನಗರದ ಕ್ಷೇತ್ರಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.

ಸದಾನಂದ ಗೌಡರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸುತ್ತಿದ್ದಂತೆ ಚುರುಕಾದ ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ಬಿಜೆಪಿಯ ಇನ್ನೊಂದು ಗುಂಪು ಚುರುಕಾಗಿದೆ. ಈ ಹಂತದಲ್ಲೇ ಕೇಳಿ ಬಂದ ಹೆಸರು ಎಂದರೆ ಸದ್ಯ ಕೇಂದ್ರ ಸಚಿವೆ ಆಗಿರುವ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆಯವರದ್ದು. ಈ ಹಿಂದೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಆಯ್ಕೆಯಾಗಿ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವೆಯೂ ಆಗಿದ್ದ ಶೋಭಾ ಅವರಿಗೆ ಬೆಂಗಳೂರಿನ ರಾಜಕಾರಣದ ಸಮಗ್ರ ಮಾಹಿತಿಯೂ ಇದೆ. ನಗರ ಪ್ರದೇಶಗಳಲ್ಲಿ ಮೋದಿ ಅಲೆ ಇನ್ನೂ ಇರುವುದರಿಂದ ಇಲ್ಲಿಂದ ಅವರು ಸ್ಪರ್ಧಿಸಿದರೆ ಗೆಲುವು ನಿರಾಯಾಸ ಎಂಬ ಲೆಕ್ಕಾಚಾರ ಬೆಂಬಲಿಗರದ್ದು.

ಆದರೆ ಅವರ ವಿಚಾರದಲ್ಲೂ ಬೆಂಗಳೂರಿನ ಬಿಜೆಪಿ ನಾಯಕರುಗಳಿಗೆ ಸಮ್ಮತ ಇಲ್ಲ. ಸಿ.ಟಿ.ರವಿ ಅಥವಾ ಶೋಭಾ ಯಾರೇ ಬಂದರೂ ಬೆಂಗಳೂರಿನ ರಾಜಕಾರಣದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಾರೆ. ಹೀಗಾದಾಗ ಬೆಂಗಳೂರಿನ ರಾಜಕಾರಣದಲ್ಲಿ ತಾವು ಮೂಲೆಗುಂಪಾಗುವ ಅಪಾಯಗಳೇ ಹೆಚ್ಚು ಎಂಬ ನಿರ್ಧಾರಕ್ಕೆ ಬಂದಿರುವ ನಗರ ಬಿಜೆಪಿ ನಾಯಕರು ಈ ಇಬ್ಬರು ಪ್ರಮುಖರೂ ಬೆಂಗಳೂರಿನಿಂದ ಸ್ಪರ್ಧಿಗಳಾಗದಂತೆ ಪ್ರತಿತಂತ್ರ ರೂಪಿಸಿದ್ದಾರೆ.

ಇದರ ಮುಂದುವರಿದ ಭಾಗವೇ ಚುನಾವಣಾ ನಿವೃತ್ತಿ ಘೋಷಿಸಿದ್ದ ಡಿ.ವಿ.ಸದಾನಂದ ಗೌಡರ ಮನವೊಲಿಕೆ. ಇತ್ತೀಚೆಗೆ ಅವರನ್ನು ಭೇಟಿಯಾದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ಶಾಸಕ ಡಾ. ಅಶ್ವತ್ಥನಾರಾಯಣ ಸೇರಿದಂತೆ ಕೆಲವು ಮುಖಂಡರು ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ್ದಾರೆ. ಅದಕ್ಕೆ ಮಣಿದ ಸದಾನಂದ ಗೌಡ ತಮ್ಮ ನಿಲುವು ಬದಲಿಸಲು ಒಪ್ಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿರುವುದರಿಂದ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

ಈ ವಿಚಾರದಲ್ಲಿ ಪಕ್ಷದ ಹಿತ ಹಾಗೂ ಅವರ ಮೇಲಿನ ಅನುಕಂಪ ಗೌರವಕ್ಕಿಂತ  ಈ ನಾಯಕರಿಗೆ ದೂರಗಾಮಿ ಲೆಕ್ಕಾಚಾರ ಇದೆ. ಸದಾನಂದ ಗೌಡರು ಅಭ್ಯರ್ಥಿಯಾದರೆ ಹೇಗೂ ಗೆಲ್ಲುತ್ತಾರೆ. ಮೇಲಾಗಿ ಬೆಂಗಳೂರು ರಾಜಕಾರಣದಲ್ಲಿ ಇತರರಂತೆ ಉಪದ್ರ ಕೊಡುವ ಅಥವಾ ಹಿಡಿತ ಸಾಧಿಸುವ ವ್ಯಕ್ತಿಯಲ್ಲ, ತಮ್ಮ ಪಾಡಿಗೆ ತಾವಿರುತ್ತಾರೆ. ಅವರನ್ನು ಲೋಕಸಭೆಗೆ ಕಳಿಸಿದರೆ ಬೆಂಗಳೂರು ರಾಜಕಾರಣದಲ್ಲಿ ಮುಂದೆಯೂ ತಮ್ಮದೇ ಪ್ರಾಬಲ್ಯ ಮುಂದುವರಿಯಲು ಅನುಕೂಲ ಆಗುತ್ತದೆ ಎಂಬ ಲೆಕ್ಕಾಚಾರ ಈ ಮುಖಂಡರದ್ದು. ಆದರೆ ಈ ವಿಚಾರದಲ್ಲಿ ಹೈಮಾಂಡ್ ನಿಲುವು ಇನ್ನೂ ನಿಗೂಢ.

ಇನ್ನು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ ಸಿಂಹ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರೇ ಸಿಡಿದೆದ್ದಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಈ ಬಾರಿ ಟಿಕೆಟ್ ನೀಡುವುದು ಬೇಡ ಎಂಬ ಒತ್ತಡ ಸ್ಥಳೀಯ ಮುಖಂಡರಿಂದಲೇ ಬರುತ್ತಿದೆ. ಎರಡನೇ ಬಾರಿ ಲೋಕಸಭೆಗೆ ಆಯ್ಕೆಯಾದ ನಂತರ ಪ್ರತಾಪ ಸಿಂಹ ಸ್ಥಳೀಯ ನಾಯಕರನ್ನು ನಿರ್ಲಕ್ಷಿಸಿ ಏಕ ಚಕ್ರಾಧಿಪತ್ಯ ಮೆರೆಸಲು ಹೊರಟಿದ್ದಾರೆ. ಮಾಜಿ ಸಚಿವ ಎ.ರಾಮದಾಸ್ ವಿರುದ್ಧ ಬಹಿರಂಗ ಕಿತ್ತಾಟಕ್ಕೆ ಇಳಿದಿದ್ದಾರೆ. ಹಾಗೆ ನೋಡಿದರೆ ಮೋದಿ ಅಲೆಯ ಮೇಲೆ ಎರಡು ಬಾರಿ ಗೆದ್ದ ಅವರು, ರಾಜಕೀಯವಾಗಿ ಗಟ್ಟಿ ನೆಲೆ ಕಂಡುಕೊಳ್ಳಲು ಕಸರತ್ತು ನಡೆಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅವರು ಪಕ್ಷದ ಅಭ್ಯರ್ಥಿಗಳ ಪರ ಪಟ್ಟು ಹಿಡಿದು ಕೆಲಸ ಮಾಡಲಿಲ್ಲ ಎಂಬ ದೂರುಗಳೂ ಇವೆ. ಅದಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಲೋಕಸಭೆಯಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಕೆಲವು ಯುವಕರು ಸದನದೊಳಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿ ಆಗಿರುವ ಮೈಸೂರಿನ ಆರೋಪಿಗೆ ಲೋಕಸಭೆ ಕಲಾಪ ವೀಕ್ಷಣೆಗೆ  ಪ್ರತಾಪ ಸಿಂಹ ಅವರೇ ಪಾಸ್ ನೀಡಿರುವ ಪ್ರಕರಣವೂ ದೊಡ್ಡ ರಾದ್ಧಾಂತವಾಗಿದ್ದು ಇದು ಪ್ರತಿಪಕ್ಷಗಳಿಗೆ ಬಿಜೆಪಿ ವಿರುದ್ಧದ ಟೀಕೆಗೆ ಆಹಾರ ಒದಗಿಸಿದೆ.

ಸಹಜವಾಗೇ ಈ ಪ್ರಕರಣ ಪಕ್ಷದ ನಾಯಕತ್ವಕ್ಕೆ ಮುಜುಗುರ ತಂದಿದೆ. ಕಾಂಗ್ರೆಸ್ ಈ ವಿಷಯವನ್ನು ಬಳಸಿಕೊಂಡು ಪ್ರತಾಪ ಸಿಂಹ ವಿರುದ್ಧ ಸಮರಕ್ಕೆ ಇಳಿದಿದೆ. ಈ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಮಾಜಿ ಶಾಸಕ ಡಾ,ಯತೀಂದ್ರ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಇದೆ. ಇನ್ನೂ ಕೆಲವು ಪ್ರಮುಖ ಮುಖಂಡರು ಆಕಾಂಕ್ಷಿಗಳಾಗಿದ್ದಾರೆ. ಈ ಎಲ್ಲ ಮುಖಂಡರು ಸ್ಥಳೀಯವಾಗಿ ಬಿಜೆಪಿ ಅತೃಪ್ತರ ಜತೆ ಸೌಹಾರ್ದ ಸಂಬಂಧ ಕುದುರಿಸಿದ್ದಾರೆ. ಇದು ಪ್ರತಾಪ ಸಿಂಹ ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ.

ಇದಕ್ಕೆ ಸೇರಿಕೊಂಡಂತೆ ಅವರ ಸೋದರ ಬೇಲೂರು ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅರಣ್ಯ ಸಿಬ್ಬಂದಿಗಳಿಂದ ಬಂಧನಕ್ಕೊಳಗಾಗಿರುವುದು ಬಿಜೆಪಿಯನ್ನು ಮತ್ತಷ್ಟು ಮುಜುಗುರಕ್ಕೀಡು ಮಾಡಿದೆ. ಈ ಪ್ರಕರಣದಲ್ಲಿ ಪ್ರತಾಪ ಸಿಂಹ ಬೆಂಬಲಕ್ಕೆ ಬಿಜೆಪಿಯ ಯಾವ ಪ್ರಮುಖ ಮುಖಂಡರೂ ನಿಂತಿಲ್ಲ ಎಂಬುದು ಗಮನಾರ್ಹ ಅಂಶ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ತಹಶೀಲ್ದಾರ್ ಅವರು ನೀಡಿರುವ ವರದಿಯಲ್ಲೂ ಪರೋಕ್ಷವಾಗಿ ಪ್ರತಾಪ ಸಿಂಹ ಅವರ ಸೋದರನ ವಿರುದ್ಧ ಗುರುತರವಾದ ಆರೋಪಗಳನ್ನು ಹೊರಿಸಲಾಗಿದೆ.

ತಮ್ಮ ಸೋದರನ ಬಂಧನವಾದಾಗ ಪ್ರತಾಪ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೇ ಈ ವಿಚಾರದಲ್ಲಿ ಅನುಕಂಪ ಪಡೆಯುವ ಪ್ರಯತ್ನ ಮಾಡಿದರಾದರೂ ಬಿಜೆಪಿ ನಾಯಕರ ಬೆಂಬಲ ಸಿಗದ ಕಾರಣ ಆ ರಾಜಕೀಯ ತಂತ್ರವೂ ವಿಫಲವಾಯಿತು. ಮೈಸೂರು ರಾಜಕಾರಣದಲ್ಲಿ ಅವರೀಗ ಒಂಟಿ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಈ ವಿಚಾರದಲ್ಲಿ ಮೌನ ತಾಳಿದ್ದಾರೆ.ಇದಕ್ಕೆ ಇನ್ನೊಂದು ಕಾರಣ ಎಂದರೆ ಪ್ರತಾಪ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಶಿಷ್ಯರ ಗುಂಪಿನಲ್ಲಿ ಒಬ್ಬರಾಗಿರುವುದು. ಹಾಗೂ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಬಹು ಸಂಖ್ಯಾತ ಮುಖಂಡರು ಸಂತೋಷ್ ಅವರಿಂದ ಅಂತರ ಕಾಯ್ದುಕೊಂಡಿರುವುದನ್ನೂ ಗಮನಿಸಬಹುದು.

ಚುನಾವಣೆಗೆ ಜೆಡಿಎಸ್ ಜತೆ ಮೈತ್ರಿ ಪ್ರಸ್ತಾಪಗಳು ನಡೆದಿರುವುದರಿಂದ ಮೈಸೂರು- ಕೊಡಗು ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್ ಬಿಜೆಪಿ ವರಿಷ್ಠ ಮಂಡಳಿ ಮುಂದೆ ಪ್ರಸ್ತಾವನೆ ಮಂಡಿಸಿದೆ. ಪ್ರಮುಖ ಸಂಗತಿ ಎಂದರೆ ಇದಕ್ಕೆ ಸ್ಥಳೀಯ ಬಿಜೆಪಿ ಮುಖಂಡರೂ ಅನುಮೋದನೆ ನೀಡಿ ಬೆಂಬಲಿಸಿರುವುದು. ಮೈತ್ರಿಯಾದರೆ ಜೆಡಿಎಸ್ ನಿಂದ ಮಾಜಿ ಸಚಿವ ಸಾ.ರಾ. ಮಹೇಶ್ ಸ್ಪರ್ಧಿಯಾಗುತ್ತಾರೆ. 

ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಮುಂಬರುವ ಚುನಾವಣೆಗೆ ತಾವೇ ಸ್ಪರ್ಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜಿ ಘೋಷಿಸುವ ಮೂಲಕ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ. ಈ ಕ್ಷೇತ್ರದಲ್ಲೂ ಸಿ.ಟಿ. ರವಿ ಮತ್ತು ಶೋಭಾ ನಡುವಿನ ರಾಜಕೀಯ ಹೊಂದಾಣಿಕೆ ಚೆನ್ನಾಗಿಲ್ಲ. ಇಡೀ ಜಿಲ್ಲೆಯ ರಾಜಕಾರಣದಲ್ಲಿ ನಾನಾ ಕಾರಣಕ್ಕೆ ರವಿ ಪಕ್ಷದೊಳಗೇ ವಿರೋಧಿಗಳ ದೊಡ್ಡ ಪಡೆಯನ್ನೇ ಸೃಷ್ಟಿಸಿಕೊಂಡಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಇಳಿದ ನಂತರ ಅವರಿಗೆ ಪಕ್ಷದಲ್ಲೀಗ ಯಾವುದೇ ಹುದ್ದೆ ನೀಡಿಲ್ಲ. ಅವರೂ ಈಗ ಪ್ರತಾಪ ಸಿಂಹ ರಂತೆ ಒಂಟಿ.

ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಧಿಗ್ಗನೆ ಎದ್ದು ಕುಳಿತಿದ್ದಾರೆ. ಕಳೆದ ಬಾರಿ ಆಯ್ಕೆಯಾದ ನಂತರ ಅಜ್ಞಾತವಾಸಕ್ಕೆ ತೆರಳಿದ್ದ ಅವರು ಪಕ್ಷದ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದಲೂ ದೂರ ಇದ್ದರು. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸ್ವತಃ ಪ್ರಧಾನಿ ಮೋದಿಯೇ ಬಂದಿದ್ದರೂ ಅನಂತ್ ಹಾಜರಾಗಿರಲಿಲ್ಲ.  ಈ ಬಾರಿ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ತಯಾರಾಗುತ್ತಿದ್ದಾರೆ. ಆದರೆ ಬಹು ಸಂಖ್ಯೆಯ ಕಾರ್ಯಕರ್ತರಿಗೆ ಅವರ ಬಗ್ಗೆ ಒಲವಿಲ್ಲ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭ್ಯರ್ಥಿಯಾಗಲು ಪ್ರಯತ್ನ ನಡೆಸಿದ್ದಾರೆ. ಅವರಿಗೆ ಯಡಿಯೂರಪ್ಪ, ವಿಜಯೇಂದ್ರ ಬೆಂಬಲವಿದೆ. ಇನ್ನುಳಿದಂತೆ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಕೆಲವು ಹೆಸರುಗಳು ಪತ್ರಿಕೆಗಳಲ್ಲಷ್ಟೇ ವಿಜೃಂಬಿಸುತ್ತಿವೆ. ಬಿ.ಎಲ್. ಸಂತೋಷ್ ತಮ್ಮ ಶಿಷ್ಯರೊಬ್ಬರನ್ನು ಕಣಕ್ಕಿಳಿಸಲು ಸನ್ನಾಹ ನಡೆಸಿದ್ದಾರೆ. ಅವರ ಹೆಸರಿಗೆ ಸ್ಥಳೀಯವಾಗೇ ಒಲವಿಲ್ಲ.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com