ಸುಮಲತಾ ರಾಜಕೀಯ ನಡೆಯ ನಿರ್ದೇಶಕರು ಯಾರು? (ಸುದ್ದಿ ವಿಶ್ಲೇಷಣೆ)

ಸಂಸದರಾದ ನಂತರ ಕಡೆಯ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಆ ಪಕ್ಷದ ಜತೆ ಇದ್ದೂ ಇಲ್ಲದಂತೆ ಅತ್ಯಂತ ಎಚ್ಚರದಿಂದ ಅಂತರ ಕಾಪಾಡಿಕೊಂಡರು. ಈಗ ಪರಿಸ್ಥಿತಿ ಬದಲಾಗಿದೆ.
ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್online desk

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಮತ್ತೆ ಐದು ವರ್ಷಗಳ ನಂತರ ಇಡೀ ರಾಜ್ಯದ ಗಮನ ಸೆಳೆದಿದ್ದು ಕುತೂಹಲದ ಜತೆಗೇ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಬಿಜೆಪಿ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಹಾಲಿ ಸಂಸತ್ ಸದಸ್ಯೆ ಸುಮಲತಾ ಅಂಬರೀಷ್ ಅವರ ನಿರೀಕ್ಷೆಯನ್ನು ಸುಳ್ಳಾಗಿಸಿರುವ ಆ ಪಕ್ಷ ಮಿತ್ರ ಕೂಟದ ಜೆಡಿಎಸ್ ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಕಣಕ್ಕೆ ಇಳಿಯಲಿದ್ದಾರೆ.

ವ್ಯತ್ಯಾಸ ಇಷ್ಟೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅವರ ಪುತ್ರ ನಿಖಿಲ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದರು. ಆಗ ಅವರಿಗೆ ಕಾಂಗ್ರೆಸ್ ಬಹಿರಂಗ ಬೆಂಬಲ ಘೋಷಿಸಿತ್ತು. ಅಂದು ಕಾಂಗ್ರೆಸ್ ನಾಯಕರಾದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಪ್ರಮುಖ ನಾಯಕರು ಜೆಡಿಎಸ್ ಅಭ್ಯರ್ಥಿ ಪರ ಬಹಿರಂಗ ಪ್ರಚಾರಕ್ಕೆ ಧುಮುಕಿದ್ದರು. ಆದರೆ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಪುತ್ರ 1,25, 876 ಮತಗಳ ಅಂತರದಿಂದ ಸೋತರು. ಮಂಡ್ಯ ಜನರ ಸ್ವಾಭಿಮಾನದ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತ ಅಂಬರೀಷ್ ಪ್ರಚಂಡ ಗೆಲುವು ಸಾಧಿಸಿದರು. ಚುನಾವಣೆ ಫಲಿತಾಂಶದ ನಂತರ ತಮ್ಮ ಪುತ್ರನ ಸೋಲಿಗೆ ಕಾಂಗ್ರೆಸ್ ನಾಯಕರು ನಡೆಸಿದ ಒಳ ಸಂಚೇ ಕಾರಣ. ಮೈತ್ರಿ ಧರ್ಮ ಪಾಲಿಸಲಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಒಂದರ್ಥದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತ್ತು ಸುಮಲತ ಅವರು ಸಂಸದರಾಗಿ ಆಯ್ಕೆಯಾದ ನಂತರ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಜತೆಗೆ ಐದು ವರ್ಷಗಳ ಅವಧಿಯಲ್ಲಿ ಸಂಘರ್ಷ ನಡೆಸಿದ್ದೇ ಹೆಚ್ಚು.

ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಕೆಲವು ಆಶ್ವಾಸನೆಗಳನ್ನು ಸುಮಲತಾ ಅವರು ಗೆದ್ದ ನಂತರ ಐದು ವರ್ಷಗಳ ಅವಧಿಯಲ್ಲಿ ಈಡೇರಿಸಲು ಸಾಧ್ಯವಾಗಲಿಲ್ಲ. ಐದು ವರ್ಷಗಳ ಅವಧಿಯಲ್ಲಿ ಮಂಡ್ಯದ ಜನರ ಜೀವನಾಡಿ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಹಾಗೆಯೇ ರಾಜಕಾರಣದ ಲೆಕ್ಕಾಚಾರಗಳೂ ಬದಲಾಗಿವೆ.

ಸಂಸದರಾದ ನಂತರ ಕಡೆಯ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಆ ಪಕ್ಷದ ಜತೆ ಇದ್ದೂ ಇಲ್ಲದಂತೆ ಅತ್ಯಂತ ಎಚ್ಚರದಿಂದ ಅಂತರ ಕಾಪಾಡಿಕೊಂಡರು. ಈಗ ಪರಿಸ್ಥಿತಿ ಬದಲಾಗಿದೆ. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯದಂತೆ ಬಿಜೆಪಿ ಅವರ ಮನವೊಲಿಸುತ್ತಿದೆ. ಆದರೆ ಮನಸ್ಸಿನೊಳಗಿನ ನಿರ್ಧಾರವನ್ನು ಅವರಿನ್ನೂ ಪ್ರಕಟಿಸಿಲ್ಲ. ಕಳೆದ ಬಾರಿ ಅವರನ್ನು ಬೆಂಬಲಿಸಿದ್ದ ಬಿಜೆಪಿ ಈ ಬಾರಿ ಕುಮಾರಸ್ವಾಮಿ ಬೆನ್ನಿಗೆ ನಿಂತಿದೆ. ಕಾಂಗ್ರೆಸ್ ಸ್ಥಳಿಯರೇ ಆದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಂಡ್ಯ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಧರಿಸಿದರೂ ಆಶ್ಚರ್ಯವೇನಿಲ್ಲ.

ಸುಮಲತಾ ಅಂಬರೀಶ್
BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)

ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರ ಸಭೆ ನಡೆಸಿದ ಸುಮಲತಾ ಮೇಲ್ನೋಟಕ್ಕೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲವಾದರೂ ಸದ್ಯದ ಪರಿಸ್ಥಿತಿಯಲ್ಲಿ ಅವರು ಬಿಜೆಪಿ ನಾಯಕರ ಭರವಸೆಗಳಿಗೆ ಮಣಿದು ಮೈತ್ರಿಕೂಟದ ಅಭ್ಯರ್ಥಿ ಕುಮಾರಸ್ವಾಮಿಯವರನ್ನು ಸಾರಾಸಗಾಗಿ ಬೆಂಬಲಿಸುತ್ತಾರೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಐದು ವರ್ಷಗಳ ಅವಧಿಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಅವರು ನಡೆಸಿದ ಯುದ್ಧವನ್ನು ಇಷ್ಟು ಬೇಗ ಮರೆತು ಕುಮಾರಸ್ವಾಮಿಯವರನ್ನು ಬೆಂಬಲಿಸುತ್ತಾರೆ ಎಂದು ಹೇಳಲು ಆಗುವುದಿಲ್ಲ.

ಹಾಗಿದ್ದರೆ ಅವರ ಮುಂದಿನ ಆಯ್ಕೆ ಏನು? ಸದ್ಯಕ್ಕೆ ಅದು ಇನ್ನೂ ನಿಗೂಢ. ಏಪ್ರಿಲ್ 3 ರಂದು ಮಂಡ್ಯದಲ್ಲಿ ಮತ್ತೊಮ್ಮೆ ಅಭಿಮಾನಿಗಳು ಮತ್ತು ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿದ್ದ ಜಿಲ್ಲೆಯ ಪ್ರಮುಖ ನಾಯಕರಲ್ಲಿ ಒಂದಿಬ್ಬರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಇದೇ ಹಿನ್ನಲೆಯಲ್ಲಿ ಸುಮಲತಾ ಕೂಡಾ ಕಾಂಗ್ರೆಸ್ ಸೇರಬಹುದು ಎಂಬ ಲೆಕ್ಕಾಚಾರವೂ ಇದೆ. ಕಳೆದ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿಯವರನ್ನು ಕಾಂಗ್ರೆಸ್ ಬಹಿರಂಗವಾಗಿ ಬೆಂಬಲಿಸಿತ್ತಾದರೂ ಸ್ಥಳೀಯವಾಗಿ ಹೊಂದಾಣಿಕೆ ಫಲ ನೀಡಿರಲಿಲ್ಲ. ಇದರ ಲಾಭ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಗೆಲುವಿಗೆ ಸಹಕಾರಿ ಆಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಂತಹ ಭದ್ರ ನೆಲೆಗಟ್ಟನ್ನೇನೂ ಹೊಂದಿಲ್ಲ. ಇತ್ತೀಚೆಗೆ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿತ್ತಾದರೂ ಅದರ ರಾಜಕೀಯ ಲಾಭ ಬಿಜೆಪಿಗೆ ಸಿಗುವ ಯಾವುದೇ ಸಾಧ್ಯತೆ ಇಲ್ಲ.

ಮೊದ ಮೊದಲು ಮಂಡ್ಯದಿಂದ ಸ್ಪರ್ಧಿಸಬೇಕೆಂಬ ಬಿಜೆಪಿ ರಾಷ್ಟ್ರೀಯ ನಾಯಕರ ಒತ್ತಾಯಕ್ಕೆ ಒಪ್ಪದ ಕುಮಾರಸ್ವಾಮಿ ಇದೀಗ ಅನಿವಾರ್ಯ ಎಂಬಂತೆ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ. ಬಹು ಮುಖ್ಯವಾಗಿ ನೋಡಬೇಕೆಂದರೆ ಮಂಡ್ಯದಲ್ಲಿ ಜೆಡಿಎಸ್ ಗಿಂತ ಕಾಂಗ್ರೆಸ್ ಇದೀಗ ಪ್ರಬಲವಾಗಿದೆ. ಸಚಿವ ಚೆಲುವರಾಯಸ್ವಾಮಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಜತೆಗೆ ಅವರಿಗಿರುವ ರಾಜಕೀಯ ವೈರತ್ವವೂ ಕಾರಣ. ಕಾಂಗ್ರೆಸ್ ಅಭ್ಯರ್ಥಿ ಹೆಸರು ಅಧಿಕೃತವಾಗಿ ಪ್ರಕಟವಾಗುವ ಮೊದಲೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿರುವ ಚೆಲುವರಾಯಸ್ವಾಮಿ ರಾಜಕೀಯ ಕಾರ್ಯತಂತ್ರಗಳನ್ನು ಹೆಣೆಯುವುದರಲ್ಲಿ ತಮ್ಮ ರಾಜಕೀಯ ಗುರು ಮಾಜಿ ಪ್ರಧಾನಿ ದೇವೇಗೌಡರಷ್ಟೇ ನಿಪುಣರು. ಕಾಂಗ್ರೆಸ್ ಸೇರುವ ಮುನ್ನ ಜೆಡಿಎಸ್ ನಲ್ಲೇ ಇದ್ದ ಅವರಿಗೆ ಗೌಡರ ಕುಟುಂಬದ ಎಲ್ಲ ರಾಜಕೀಯ ತಂತ್ರಗಾರಿಕೆಗಳೂ ಗೊತ್ತು. ಇದಕ್ಕೆ ಪೂರಕ ಎಂಬಂತೆ ಅವರ ಬೆನ್ನಿಗೆ ಕಾಂಗ್ರೆಸ್ ನ ಪ್ರಬಲ ಶಕ್ತಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಬಲ ಇದೆ.

ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗರ ಕೋಟೆಯನ್ನು ಕೈವಶ ಮಾಡಿಕೊಂಡು ಸಮುದಾಯದ ಪ್ರಶ್ನಾತೀತ ನಾಯಕನಾಗುವ ಹಂಬಲದಲ್ಲಿರುವ ಡಿ.ಕೆ.ಶಿವಕುಮಾರ್ ಗೂ ಮಂಡ್ಯ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ದೇವೇಗೌಡರ ಕುಟುಂಬ ಅವರ ನೇರ ರಾಜಕೀಯ ಎದುರಾಳಿ ಆಗಿರುವುದು ಇನ್ನೊಂದು ಪ್ರಮುಖ ಕಾರಣ. ಮತ್ತೊಂದು ಕಡೆ ಕುಮಾರಸ್ವಾಮಿಯವರ ಬೆಂಬಲಕ್ಕೆ ಜೆಡಿಎಸ್ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ನಿಂತಿದೆಯಾದರರೂ ಸ್ಥಳೀಯವಾಗಿ ಮಂಡ್ಯ ಸೇರಿದಂತೆ ರಾಜ್ಯದಲ್ಲಿ ಕೆಳ ಹಂತದಲ್ಲಿ ಹೊಂದಾಣಿಕೆಗೆ ನಿರೀಕ್ಷಿಸಿದಷ್ಟು ಸ್ಪಂದನೆ ಬಿಜೆಪಿ ಕಾರ್ಯಕರ್ತರಿಂದ ಸಿಕ್ಕಿಲ್ಲ. ಜೆಡಿಎಸ್ ಗೆ ಇದೂ ದೊಡ್ಡ ಸವಾಲೆ. ಇನ್ನುಳಿದಂತೆ ಇತ್ತೀಚೆಗಷ್ಟೇ ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿ ನೇರವಾಗಿ ಚುನಾವಣಾ ಸಮರಕ್ಕೆ ಧುಮುಕಿರುವ ಕುಮಾರಸ್ವಾಮಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಚುನಾವನೆಗೆ ಸನ್ನದ್ದರಾಗುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಇದೇ ಭಾವನಾತ್ಮಕ ವಿಷಯವಾಗಿ ಚರ್ಚೆಯಾಗುವ ಸಾಧ್ಯತೆಗಳನ್ನು ಕಾಂಗ್ರೆಸ್ ನಾಯಕರೇ ಹುಟ್ಟುಹಾಕಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಚುನಾವಣಾ ಕಣ ಹೊಸ ರಾಜಕೀಯ ಸಂಘರ್ಷಕ್ಕೆ ವೇದಿಕೆ ಆಗುವ ಸೂಚನೆಗಳನ್ನು ಹುಟ್ಟುಹಾಕಿದೆ.

ಸುಮಲತಾ ಅಂಬರೀಶ್
ಯಡಿಯೂರಪ್ಪ ತಂತ್ರಕ್ಕೆ ವಿರೋಧಿಗಳು ತತ್ತರ! (ಸುದ್ದಿ ವಿಶ್ಲೇಷಣೆ)

ಮಂಡ್ಯ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಇಷ್ಟ ಪಡುವ ಒಂದು ವರ್ಗವೇ ಇದೆ. ನಿರಾವರಿ ಸಚಿವರಾಗಿ ಮುಖ್ಯಮಂತ್ರಿಯಾಗಿ ಸಮುದಾಯಕ್ಕೆ ಅವರ ಕೊಡುಗೆಯೂ ದೊಡ್ಡದು. ಚುನಾವಣೆಯಲ್ಲಿ ಈ ಅಂಶವೂ ಪ್ರಧಾನವಾಗಲಿದೆ. ಇನ್ನು ಹಾಲಿ ಸಂಸದ ಸುಮಲತಾ ಮುಂದಿನ ರಾಜಕೀಯ ನಡೆಯೇ ಕುತೂಹಲಕ್ಕೆ ಕಾರಣವಾಗಿದೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ದಶಕಗಳ ರಾಜಕಾರಣದ ಅನುಭವ ಇರುವ ರಾಜಕಾರಣಿಯಂತೆ ತಮ್ಮ ರಾಜಕಾರಣದ ಒಂದೊಂದು ಹೆಜ್ಜೆಯನ್ನೂ ಅತ್ಯಂತ ಲೆಕ್ಕಾಚಾರದಿಂದ ಇಡುತ್ತಿರುವ ಸುಮಲತಾ ಅವರಿಗೇನೋ ಬೆಂಬಲಿಗರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ.

ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಅಭಿಮಾನಿಗಳಷ್ಟೇ ಸಂಖ್ಯೆಯಲ್ಲಿ ಅವರು ವಿರೋಧಿಗಳ ದೊಡ್ಡ ಪಡೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಿಂತ ಹೆಚ್ಚಾಗಿ ಅವರಿಗೆ ಕೆ.ಆರ್.ಎಸ್. ಸುತ್ತಮುತ್ತ ನಡೆದಿದ್ದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧದ ಹೋರಾಟವೇ ಪ್ರಮುಖ ವಿಷಯವಾಯಿತು ಎಂಬ ಟೀಕೆಗಳೂ ಅವರ ವಿರುದ್ಧ ಕೇಳಿ ಬರುತ್ತಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ದೊಡ್ಡ ಮಟ್ಟದ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಾರೆಯೆ? ಎಂಬುದು ಸದ್ಯದ ಪ್ರಶ್ನೆ.

ಮಂಡ್ಯದಲ್ಲಿ ಅಂಬರೀಷ್ ಅಭಿಮಾನಿಗಳ ದೊಡ್ಡ ಪಡೆಯೇ ಇದೆ. ಅಷ್ಟೂ ಮಂದಿ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ ಎಂಬುದೇನೋ ನಿಜ .ಆದರೆ ರಾಜಕಾರಣದ ವಾಸ್ತವ ನೆಲೆಟ್ಟಿನಲ್ಲಿ ಈ ಅಭಿಮಾನವನ್ನೂ ಮೀರಿದ ಲೆಕ್ಕಾಚಾರಗಳೇ ಪ್ರಧಾನವಾಗುತ್ತವೆ. ಹೀಗಾಗಿ ಐದು ವರ್ಷಗಳ ಅವಧಿಯಲ್ಲಿ ರಾಜಕಾರಣದ ಒಳಸುಳಿಗಳನ್ನು ಸಾಕಷ್ಟು ಪರಿಚಯ ಮಾಡಿಕೊಂಡಿರುವ ಅವರು ಭಾವನೆಗಳಿಗೆ ಕಟ್ಟು ಬಿದ್ದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ. ಹಾಗೊಂದು ವೇಳೆ ಅಂತಹ ನಿರ್ಧಾರ ಕೈಗೊಂಡರೂ ಅದರ ಲಾಭ ಪಡೆಯಲು ಕಾಂಗ್ರೆಸ್ ಕಾಯುತ್ತಿದೆ. ಹೀಗಾಗಿ ಏಪ್ರಿಲ್ 3 ರಂದು ಅವರ ನಿರ್ಧಾರ ಏನೆಂಬುದು ಸ್ಪಷ್ಟವಾಗಲಿದೆ.

ಮೂಲಗಳ ಪ್ರಕಾರ ಯಾವುದೇ ಪಕ್ಷಕ್ಕೂ ಬೆಂಬಲ ಸೂಚಿಸದೇ ಅವರು ತಟಸ್ಥವಾಗಿ ಉಳಿಯಬಹುದು. ಆದರೆ ಅಂತಹ ನಿರ್ಧಾರದಿಂದ ಭವಿಷ್ಯದಲ್ಲಿ ತನಗೆ ಯಾವುದೇ ಲಾಭ ಆಗುವುದಿಲ್ಲ ಎಂಬುದರ ಅರಿವೂ ಅವರಿಗಿದೆ. ಮಂಡ್ಯವೇ ತಮ್ಮ ಕರ್ಮ ಭೂಮಿ ಎಂದು ಅವರು ಹೇಳುತ್ತಿರುವುದರ ಹಿಂದೆ ನಾನಾ ರಾಜಕೀಯ ಲೆಕ್ಕಾಚಾರಗಳೂ ಅಡಗಿವೆ. ಕಾಂಗ್ರೆಸ್ ನ ಹಿರಿಯ ಮತ್ತು ಪ್ರಭಾವೀ ನಾಯಕರೊಬ್ಬರು ಸುಮಲತಾ ರಾಜಕೀಯ ನಡೆಯನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಮಾತಿದೆ. ಈಗಿನ ಒಟ್ಟು ರಾಜಕೀಯ ಸ್ಥಿತಿಯನ್ನು ನೋಡಿದರೆ ಆ ಮಾತು ಸುಳ್ಳೇನೂ ಅಲ್ಲ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com