ಕಾಂಗ್ರೆಸ್ ಗೆ ಹಿತ ಶತ್ರುಗಳ ಕಾಟ; ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ! (ಸುದ್ದಿ ವಿಶ್ಲೇಷಣೆ)

ನಿರ್ಣಾಯಕ ಹೋರಾಟಕ್ಕೆ ವೇದಿಕೆ ಸಜ್ಜಾಗಿರುವ ಈ ಹಂತದಲ್ಲಿ ಮೂರೂ ಪಕ್ಷಗಳಲ್ಲೂ ತಳಮಳ ಆರಂಭವಾಗಿದೆ. ಲೋಕಸಭೆಗೆ ಮೊದಲ ಹಂತದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಆರಂಭವಾಗಿದ್ದರೂ ಟಿಕೆಟ್ ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಸುಡುತ್ತಿದೆ.
ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ
ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ

ನಿರ್ಣಾಯಕ ಹೋರಾಟಕ್ಕೆ ವೇದಿಕೆ ಸಜ್ಜಾಗಿರುವ ಈ ಹಂತದಲ್ಲಿ ಮೂರೂ ಪಕ್ಷಗಳಲ್ಲೂ ತಳಮಳ ಆರಂಭವಾಗಿದೆ. ಲೋಕಸಭೆಗೆ ಮೊದಲ ಹಂತದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಆರಂಭವಾಗಿದ್ದರೂ ಟಿಕೆಟ್ ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಸುಡುತ್ತಿದೆ.

ಇದ್ದುದರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೆ.ಡಿ.ಎಸ್. ಪಕ್ಷದಲ್ಲಿ ಈ ಸಮಸ್ಯೆ ಇಲ್ಲವಾದರೂ ಮೈತ್ರಿ ಕುರಿತಂತೆ ಕೆಳ ಹಂತದ ಬಿಜೆಪಿ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲ ಇನ್ನೂ ಸರಿ ಹೋಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಪಕ್ಷದೊಳಗೇ ಆಂತರಿಕ ಭಿನ್ನಮತ ಸಮಸ್ಯೆ ತಂದೊಡ್ಡಿದೆ.

ಆದರೆ ಸಮಸ್ಯೆಯ ಸ್ವರೂಪವನ್ನು ಆಳಕ್ಕಿಳಿದು ನೋಡಿದರೆ ಬಿಜೆಪಿ ಭಿನ್ನಮತ, ಬಂಡಾಯದ ಕಾಟದಿಂದ ಪೂರ್ಣವಾಗಿ ಹೊರ ಬಂದಿಲ್ಲ. ಕಾಂಗ್ರೆಸ್ ನಲ್ಲೂ ಇದೇ ಸ್ಥಿತಿ. ಉನ್ನತ ಶ್ರೇಣಿಯ ನಾಯಕರು ಮೇಲ್ನೋಟಕ್ಕೆ ಎಷ್ಟೇ ಒಗ್ಗಟ್ಟು ಪ್ರದರ್ಶಿಸುತ್ತಿದ್ದರೂ ಆಂತರಿಕವಾಗಿ ಕುದಿಯುತ್ತಿರುವ ಅಸಮಾಧಾನ, ಗುಂಪುಗಾರಿಕೆ, ಕಿತ್ತಾಟ ಚುನಾವಣೆಯ ಮೇಲೂ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳೂ ಇವೆ.

ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಬರುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳು, ಸಂಭವನೀಯ ಫಲಿತಾಂಶದ ವಿವರಗಳನ್ನೇ ನಂಬಿಕೊಂಡು ಕೂರುವ ಪರಿಸ್ಥಿತಿಯಲ್ಲಿ ಮೂರೂ ಪಕ್ಷಗಳೂ ಇಲ್ಲ. ಬಹು ನಿರೀಕ್ಷಿತ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರೀಕ್ಷೆಯಂತೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ನಿರೀಕ್ಷೆ ಇಟ್ಟುಕೊಂಡಿದ್ದ ಪಕ್ಷೇತರ ಸಂಸದೆ ಸುಮಲತಾ ಮುನಿಸು ಮರೆತು ಬಿಜೆಪಿ ಸೇರಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರ ಬೆಂಬಲಿಗರು ಸಾರಾಸಗಟಾಗಿ ಕುಮಾರಸ್ವಾಮಿಯವರನ್ನು ಚುನಾವಣೆಯಲ್ಲಿ ಬೆಂಬಲಿಸುತ್ತಾರೆಂಬ ನಿರೀಕ್ಷೆಗಳು ಸದ್ಯಕ್ಕಂತೂ ಕಾಣುತ್ತಿಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಪರಾಭವದ ಕಹಿಯನ್ನು ನಿವಾರಿಸಿಕೊಳ್ಳಲು ಬಿಜೆಪಿ ನಾಯಕತ್ವದ ಒತ್ತಾಸೆ ಮೇರೆಗೆ ಸ್ವತಹಾ ಕುಮಾರಸ್ವಾಮಿಯವರೇ ಕಣಕ್ಕಿಳಿದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಪ್ರಬಲ ತಂತ್ರಗಾರಿಕೆಯನ್ನು ಅವರು ಎದುರಿಸಬೇಕಿದೆ. ಮಂಡ್ಯ ಕ್ಷೇತ್ರಕ್ಕೆ ಅಂಟಿಕೊಂಡಂತೆ ಇರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅವರ ಭಾವ ಹೆಸರಾಂತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅಲ್ಲಿ ಅವರು ಸತತವಾಗಿ ಗೆಲ್ಲುತ್ತಾ ಬಂದಿರುವ ಕಾಂಗ್ರೆಸ್ ನ ಡಿ.ಕೆ. ಸುರೇಶ್ ಅವರನ್ನು ಎದುರಿಸಬೇಕಿದೆ.

ಇದಕ್ಕಿಂತ ಮಿಗಿಲಾಗಿ ಗ್ರಾಮಾಂತರ ಕ್ಷೇತ್ರ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಪ್ರತಿಷ್ಠೆಯ ಕ್ಷೇತ್ರ. ಸ್ವಂತ ಕ್ಷೇತ್ರವೂ ಹೌದು ಸಹೋದರ ನ ಗೆಲುವಿಗೆ ಚುನಾವಣೆ ಘೋಷಣೆ ಆಗುವ ಮೊದಲೇ ತಯಾರಿಗಳನ್ನು ಮಾಡಿಕೊಂಡಿರುವುದರಿಂದ ಅವರಿಗೆ ಚುನಾವಣೆ ಸುಲಭ. ಆದರೆ ಡಾ. ಮಂಜುನಾಥ್ ಹಾಗಲ್ಲ ಆಕಸ್ಮಿಕವಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಾಜಕಾರಣವೂ ಹೊಸದು. ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ತಮ್ಮ ಚುನಾವಣೆಯನ್ನು ನೋಡಿಕೊಳ್ಳುವುದರ ಜತೆಗೇ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮ್ಮ ಭಾವನನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಪೂರ್ಣವಾಗಿ ಬಿಜೆಪಿ ನಾಯಕರನ್ನೇ ನಂಬಿ ಕುಳಿತುಕೊಳ್ಳುವಂತಿಲ್ಲ.ಏಕೆಂದರೆ ಇಲ್ಲೂ ಅವರು ತಮ್ಮ ಪರಂಪರಾನುಗತ ರಾಜಕೀಯ ವೈರಿ ಡಿ.ಕೆ.ಸಹೋದರರನ್ನೇ ಎದುರಿಸಬೇಕಿದೆ.

ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ
BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)

ಡಾ. ಮಂಜುನಾಥ್ ವೈದ್ಯರಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಸಂಭಾವಿತ ವ್ಯಕ್ತಿ ಮತ್ತು ಅವರ ಪರ ಗುಪ್ತವಾದ ಅಲೆ ಎದ್ದಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆಯಾದರೂ ಚುನಾವಣಾ ರಾಜಕೀಯ ತಂತ್ರಗಳಲ್ಲಿ ಪಳಗಿರುವ ಅವರ ವಿರುದ್ಧ ಸೆಣಸುವುದು ಅಷ್ಟು ಸಲೀಸಲ್ಲ. ಹಾಗೆಂದು ಇಡೀ ಗಮನವನ್ನು ಗ್ರಾಮಾಂತರ ಕ್ಷೇತ್ರಕ್ಕೆ ಸೀಮಿತವಾಗಿ ಕೇಂದ್ರೀಕರಿಸುವಂತಿಲ್ಲ. ಮಂಡ್ಯದಲ್ಲಿ ಅವರನ್ನು ಸೋಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೊಂಕ ಕಟ್ಟಿ ನಿಂತಿದ್ದಾರೆ. ಕುಮಾರಸ್ವಾಮಿ ಈ ಬಾರಿ ಚುನಾವಣೆಯಲ್ಲಿ ಸೋತರೆ ರಾಜಕೀಯವಾಗಿ ಜೆಡಿಎಸ್ ಇನ್ನಷ್ಟು ದುರ್ಬಲಗೊಳ್ಳಲಿದ್ದು ಅದರ ನೇರ ಲಾಭ ಕಾಂಗ್ರೆಸ್ ಗೆ ಆಗಲಿದೆ.

ಜತೆಗೇ ಒಕ್ಕಲಿಗರ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಿರುವುದು ವೈಯಕ್ತಿಕವಾಗಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ.ಹಾಗಾಗಿ ಇಲ್ಲಿ ಕುಮಾರಸ್ವಾಮಿಯವರನ್ನು ಕಟ್ಟಿ ಹಾಕುವ ತಂತ್ರಗಾರಿಕೆಯೂ ಇದೆ. ಮಂಡ್ಯಕ್ಕೆ ಕುಮಾರಸ್ವಾಮಿ ಸೀಮಿತವಾದರೆ ಗ್ರಾಮಾಂತರ ಕ್ಷೇತ್ರದತ್ತ ಅವರು ಗಮನ ಹರಿಸುವುದು ಕಡಿಮೆ ಆಗುತ್ತದೆ. ರಾಜ್ಯ ಪ್ರವಾಸ ಮಾಡುವುದೂ ಕಷ್ಟವಾಗಲಿದೆ. ಒಂಟಿ ಆಗುತ್ತಾರೆ ಎಂಬುದು ಈ ತಂತ್ರದ ಹಿಂದಿನ ಲೆಕ್ಕಾಚಾರ. ಒಂದು ರೀತಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಒತ್ತಡಕ್ಕೆ ಕಟ್ಟು ಬಿದ್ದ ಕುಮಾರಸ್ವಾಮಿ ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಚಕ್ರ ವ್ಯೂಹದಲ್ಲಿ ಸಿಲುಕಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ಮಂಡ್ಯದಲ್ಲಿ ಸ್ಪರ್ಧಿಸಿರುವ ಕುಮಾರಸ್ವಾಮಿಯವರ ಬೆಂಬಲಕ್ಕೆ ನಿಂತಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ್ ಒಂದು ವೇಳೆ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆಯಾದರೆ ತೆರವಾಗಲಿರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಜೆಡಿಎಸ್ ನ ಈ ವರೆಗಿನ ರಾಜಕೀಯ ನಡೆಯನ್ನು ನೋಡಿದವರಿಗೆ ಕುಮಾರಸ್ವಾಮಿ ಒಂದು ವೇಳೆ ಲೋಕಸಭೆಗೆ ಆಯ್ಕೆಯಾದರೆ ಈ ಕ್ಷೇತ್ರದ ಮೇಲೆ ಜೆಡಿಎಸ್ ತನ್ನ ಹಕ್ಕು ಸಾಧಿಸುತ್ತದೆ. ಅವರ ಕುಟುಂಬದ ಸದಸ್ಯರೊಬ್ಬರು ಉಪ ಚುನಾವಣೆಗೆ ಕಣಕ್ಕಿಳಿಯಲು ಈಗಾಗಲೇ ತಯಾರಿ ನಡೆದಿದೆ. ಹೀಗಿರುವಾಗ ಯೋಗೀಶ್ವರ್ ಆಸೆ ಫಲಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂದೂ ಹೇಳಬಹುದು.

ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ
ಯಡಿಯೂರಪ್ಪ ತಂತ್ರಕ್ಕೆ ವಿರೋಧಿಗಳು ತತ್ತರ! (ಸುದ್ದಿ ವಿಶ್ಲೇಷಣೆ)

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಂಡ್ಯದಷ್ಟೇ ಬೆಂಗಳೂರು ಗ್ರಾಮಾಂತರ ಪ್ರತಿಷ್ಠಿತ ಕ್ಷೇತ್ರವಾಗಿದೆ. ಸ್ವಂತ ಸೋದರನ ಗೆಲುವು ಅವರ ರಾಜಕೀಯ ಭವಿಷ್ಯದ ನಿರ್ಣಾಯಕವೆನಿಸಲಿದೆ.ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ನ ಸ್ಥಳೀಯ ನಾಯಕರುಗಳನ್ನು ಕಾಂಗ್ರೆಸ್ ಗೆ ಸೆಳೆಯುವ ಮೂಲಕ ಶಿವಕುಮಾರ್ ರಾಜಕೀಯವಾಗಿ ಕೊಂಚ ಮೇಲುಗೈ ಸಾಧಿಸಿದ್ದಾರೆ ಎಂಬುದೇನೋ ನಿಜ. ಆದರೆ ಮುಂದಿನ ಮುಖ್ಯಮಂತ್ರಿ ಆಗುವ ಮಹದಸೆ ಹೊತ್ತಿರುವ ಅವರನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ನಲ್ಲೇ ಅತೃಪ್ತರ ಪಡೆಯೊಂದು ರಹಸ್ಯ ರಣ ತಂತ್ರ ಹೆಣೆದಿರುವುದು ಸುಳ್ಳೇನೂ ಅಲ್ಲ. ಶತ್ರುವಿನ ಶತ್ರು ನನ್ನ ಮಿತ್ರ ಎಂಬ ಗಾದೆಯಂತೆ ಇಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಅವರನ್ನು ಕಾಂಗ್ರೆಸ್ ನ ಗುಂಪೊಂದು ರಹಸ್ಯವಾಗಿ ಬೆಂಬಲಿಸುವ ಸಾಧ್ಯತೆಗಳೂ ಇವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಕಾಂಗ್ರೆಸ್ –ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಕಾರಣವಾದ ಕಾಂಗ್ರೆಸ್ ನ ಒಂದು ಗುಂಪು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರನ್ನು ಮಣಿಸಲು ತಯಾರಿ ನಡೆಸಿದೆ. ಒಂದು ವೇಳೆ ಈ ತಂತ್ರ ಫಲಿಸಿ ಸುರೇಶ್ ಸೋತರೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷಗಿರಿಯ ಜತೆಗೇ ಉಪ ಮುಖ್ಯಮಂತ್ರಿ ಪಟ್ಟವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಈ ತಂತ್ರವನ್ನು ಮುಂದಾಗಿ ಅಂದಾಜಿಸಿರುವ ಅವರು ಜೆಡಿಎಸ್ ನ್ನು ದುರ್ಬಲಗೊಳಿಸುವುದರ ಜತೆಗೇ ತಮ್ಮದೇ ಸಂಘಟನೆಯನ್ನು ಬಿಗಿಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಮೈಸೂರಿನಲ್ಲಿ ಲಕ್ಷ್ಮಣ್ ಹಾಗೂ ಚಾಮರಾಜನಗರದಲ್ಲಿ ಸಚಿವ ಡಾ. ಮಹದೇವಪ್ಪ ಪುತ್ರ ಸುನಿಲ್ ಬೋಸ್ ರನ್ನು ಗೆಲ್ಲಿಸಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಸಿದ್ದರಾಮಯ್ಯರಿಗಿದೆ. ತವರಿನಲ್ಲೇ ಕಾಂಗ್ರೆಸ್ ಸೋತರೆ ಅದರಿಂದ ಮುಂದಾಗಬಹುದಾದ ರಾಜಕೀಯ ಪರಿಣಾಮಗಳ ಬಗ್ಗೆ ಅವರು ಎಚ್ಚೆತ್ತಿದ್ದು ಶತಾಯ ಗತಾಯ ಈ ಎರಡೂ ಕ್ಷೇತ್ರಗಳನ್ನು ಪ್ರತಿಷ್ಠೆಯ ಸವಾಲಾಗಿ ತೆಗೆದುಕೊಂಡಿದ್ದಾರೆ. ಇಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸ್ವಪಕ್ಷೀಯ ಗುಪ್ತ ಭಿನ್ನಮತೀಯರ ಕಾಟ ಇದ್ದೇ ಇದೆ. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜವಂಶಸ್ಥ ಯದುವೀರ್ ಸ್ಥಳೀಯವಾಗಿ ಇರುವ ಅನುಕಂಪದ ಅಲೆಯನ್ನು ನೆಚ್ಚಿಕೊಂಡಿದ್ದಾರೆ.

ಟಿಕೆಟ್ ವಂಚಿತ ಹಾಲಿ ಸಂಸದ ಪ್ರತಾಪ ಸಿಂಹ ಬಹಿರಂಗ ಸಭೆಗಳಲ್ಲಿ ಬಿಜೆಪಿ ಪರ ಉಗ್ರ ಭಾಷಣ ಮಾಡುತ್ತಿದ್ದಾರಾದರೂ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಅದು ಸಿದ್ದರಾಮಯ್ಯ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ ಅದರಿಂದ ಅವರ ಮುಖ್ಯಮಂತ್ರಿ ಪಟ್ಟಕ್ಕೂ ಸಂಚಕಾರ ಬರಬಹುದು ಎಂದು ಅಂದಾಜಿಸಿರುವ ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣ ತೊಟ್ಟಿದೆ. ಬಹು ಮುಖ್ಯವಾಗಿ ಮಾಜಿ ಸಚಿವ, ಜೆಡಿಎಸ್ ನ ಹಿರಿಯ ನಾಯಕ ಜಿ.ಟಿ.ದೇವೇಗೌಡ ಈ ಚುನಾವಣೆಯನ್ನುಸವಾಲಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಸೋಲುವುದು ಜೆಡಿಎಸ್ ಗೂ ಬೇಕಾಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಎದುರಾಳಿ ಪಕ್ಷದ ಜತೆಗೇ ಪಕ್ಷದೊಳಗೇ ಇದ್ದು ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸುವ ಅತೃಪ್ತ ಕಾಂಗ್ರೆಸ್ಸಿಗರ ಬಗ್ಗೆ ಸಿದ್ದರಾಮಯ್ಯ ಹೆಚ್ಚು ಚಿಂತೆಗೊಳಗಾಗಿದ್ದಾರೆ.

ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ
ಸುಮಲತಾ ರಾಜಕೀಯ ನಡೆಯ ನಿರ್ದೇಶಕರು ಯಾರು? (ಸುದ್ದಿ ವಿಶ್ಲೇಷಣೆ)

ಇತ್ತೀಚೆಗೆ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಪುತ್ರ ಮಾಜಿ ಶಾಸಕ ಯತೀಂದ್ರ ತಮ್ಮ ತಂದೆ ಐದು ವರ್ಷಗಳ ಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿರುತ್ತಾರೆ ಎಂಬುದನ್ನು ಹಲವಾರು ಬಾರಿ ಪುನರುಚ್ಚರಿಸುವ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ಅವರ ಬೆಂಬಲಿಗರ ಪರೋಕ್ಷ ಆಕ್ರೋಶಕ್ಕೆ ಗುರಿಯಾಗಿದ್ದರು. ಇನ್ನು ಚಾಮರಾಜನಗರ ಜಿಲ್ಲೆ ಪ್ರತಿನಿಧಿಸುತ್ತಿರುವ ಸಚಿವ ಡಾ. ಮಹದೇವಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ. ಬೇರೆ ಬೇರೆ ಕಾರಣಕ್ಕೆ ಪಕ್ಷದಲ್ಲಿ ವಿರೋಧಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈಗ ಪುತ್ರನೇ ಚುನಾವಣೆ ಕಣಕ್ಕೆ ಧುಮುಕಿರುವುದು ಅವರ ಒತ್ತಡವನ್ನು ಹೆಚ್ಚಿಸಿದೆ.

ಇಲ್ಲಿ ಗೆಲ್ಲದಿದ್ದರೆ ಸಚಿವ ಪದವಿ ತ್ಯಾಗ ಮಾಡಬೇಕಾದ ಸಂದರ್ಭವೂ ಎದುರಾಗಬಹುದು. ಅದಕ್ಕಾಗೇ ಅವರು ತಮ್ಮ ರಾಜಕೀಯ ವಿರೋಧಿಯಾಗಿದ್ದ ಬಿಜೆಪಿಯ ಸಂಸದ ಶ್ರೀನಿವಾಸ ಪ್ರಸಾದ್ ಮೊರೆ ಹೊಗಿದ್ದಾರೆ. ಪ್ರಸಾದ್ ಅವರ ಅಳಿಯಂದಿರು ಇತ್ತಿಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮೂಲಕ ಈ ಇಬ್ಬರು ನಾಯಕರ ನಡುವೆ ರಾಜಿ ಸಂಧಾನದ ಸೇತುವೆ ಆಗಿದ್ದಾರೆ.

ಮಂಡ್ಯ ಹೊರತು ಪಡಿಸಿದರೆ ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಹಿತ ಶತ್ರುಗಳ ಕಾಟವೇ ಸಮಸ್ಯೆಯಾಗಿದೆ. ಈ ಮೂರು ಕ್ಷೇತ್ರಗಳ ಫಲಿತಾಂಶ ರಾಜ್ಯರಾಜಕಾರಣದ ದಿಕ್ಕನ್ನು ಬದಲಿಸಿದರೂ ಅಚ್ಚರಿ ಏನಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com