ಯತ್ನಾಳ್ ಬಂಡಾಯದ ಹಿಂದೆ ಬಿಜೆಪಿ ಮುಖಂಡರ ನೆರಳು! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಮನೆಯೊಂದು ಮೂವತ್ತಾರು ಬಾಗಿಲು ರಾಜ್ಯ ಬಿಜೆಪಿಯ ಸ್ಥಿತಿ ಇದು. ನೂತನ ಅಧ್ಯಕ್ಷ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರು, ರಾಜ್ಯ ಸಮಿತಿ ಪದಾಧಿಕಾರಿಗಳ ನೇಮಕದ ನಂತರವೂ ಪಕ್ಷದೊಳಗಿನ ಅಂತಃ ಕಲಹ ನಿಂತಿಲ್ಲ.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ಮನೆಯೊಂದು ಮೂವತ್ತಾರು ಬಾಗಿಲು ರಾಜ್ಯ ಬಿಜೆಪಿಯ ಸ್ಥಿತಿ ಇದು. ನೂತನ ಅಧ್ಯಕ್ಷ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರು, ರಾಜ್ಯ ಸಮಿತಿ ಪದಾಧಿಕಾರಿಗಳ ನೇಮಕದ ನಂತರವೂ ಪಕ್ಷದೊಳಗಿನ ಅಂತಃ ಕಲಹ ನಿಂತಿಲ್ಲ. ಸದ್ಯಕ್ಕೆ ನಿಲ್ಲುವ ಲಕ್ಷಣಗಳೂ ಇಲ್ಲ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಯುದ್ಧ ಘೋಷಿಸಿರುವ ಹಿರಿಯ ಮುಖಂಡ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೋವಿಡ್ ಸಂದರ್ಭದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಮಾಡಿದ್ದಷ್ಟೇ ಅಲ್ಲ. ಅದರ ಕುರಿತಾದ ದಾಖಲೆಗಳೂ ತನ್ನಲ್ಲಿವೆ ಎಂದೂ ಘೋಷಿಸಿದ್ದಾರೆ. ಮತ್ತೊಂದು ಕಡೆ ಗುರುವಾರ ನಡೆದ ಬಿಜೆಪಿ ನೂತನ ಪದಾಧಿಕಾರಿಗಳ ಮೊದಲ ಸಭೆಯಲ್ಲೂ ಯತ್ನಾಳ್ ಪದೇ ಪದೇ ಪಕ್ಷದ ನಾಯಕತ್ವದ ವಿರುದ್ಧ ನಡೆಸುತ್ತಿರುವ ವಾಗ್ದಾಳಿಯ ಕುರಿತು ಪ್ರಸ್ತಾಪವಾಗಿದೆಯಾದರೂ ಒಮ್ಮತದ ನಿಲುವು ವ್ಯಕ್ತವಾಗಿಲ್ಲ. ಅವರನ್ನು ಪಕ್ಷದಿಂದ ಉಚ್ಛಾಟಿಸಲು ಕೇಂದ್ರ ಸಮಿತಿಗೆ ಶಿಫಾರಸು ಮಾಡಬೇಕೆಂದು ಒಂದಷ್ಟು ಮಂದಿ ಒತ್ತಾಯಿಸಿದರೆ, ಉಳಿದ ಕೆಲವು ಹಿರಿಯ ಮುಖಂಡರು ಈ ವಿಷಯದಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಪದಾಧಿಕಾರಿಗಳ ನೇಮಕದ ಕುರಿತಾಗಿಯೇ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಇದಕ್ಕೆ ಧ್ವನಿಗೂಡಿಸಿದ್ದಾರೆ. ಒಂದಂತೂ ಸತ್ಯ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದೊಂದಿಗೆ ಎಲ್ಲವೂ ಬಗೆಹರಿಯಿತೆಂದು ನಿರೀಕ್ಷಿಸಿರುವಾಗಲೇ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಹಂತಕ್ಕೆ ಮುಟ್ಟಿದೆ. ಲೋಕಸಭೆಗೆ ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ ಬಿಜೆಪಿಗೆ ಆಂತರಿಕ ಭಿನ್ನಮತವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. 

ಡಿ.ವಿ.ಸದಾನಂದ ಗೌಡ ಪಕ್ಷದ ವಿದ್ಯಮಾನಗಳ ಕುರಿತು ಬಹಿರಂಗವಾಗೇ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಮಾತುಗಳಲ್ಲಿ ವರಿಷ್ಠರ ದಿವ್ಯ ಮೌನದ ಕುರಿತೇ ಆಕ್ಷೇಪ ಹೆಚ್ಚಾಗಿದೆ. ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ಅವರು ಈಗ ಕರ್ನಾಟಕದ ವಿದ್ಯಮಾನಗಳ ಕುರಿತಂತೆ ಪಕ್ಷದ ರಾಷ್ಟ್ರೀಯ ನಾಯಕರು ಅನುಸರಿಸುತ್ತಿರುವ ಏಕ ಪಕ್ಷೀಯ ಧೋರಣೆ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಅವರ ಮಾತುಗಳ ಒಳ ಹೊಕ್ಕು ನೋಡಿದರೆ  ಪಕ್ಷದ ರಾಷ್ಟ್ರೀಯ ಮುಖಂಡರಿಗೆ ಆಪ್ತರಾಗಿದ್ದು ದಿಲ್ಲಿಯಲ್ಲಿ ಪ್ರಭಾವಿ ಆಗಿರುವ ಕೆಲವು ಮುಖಂಡರೇ ರಾಜ್ಯದಲ್ಲಿ ಭಿನ್ನಮತದ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ ಎಂಬ ಸಂಗತಿ ಕಂಡು ಬರುತ್ತದೆ. ಇದಕ್ಕೆ ಪೂರಕ ಎಂಬಂತೆ ಬಿಜೆಪಿಯ ಇನ್ನೊಬ್ಬ ಮುಖಂಡ, ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜ್ಯ ನಾಯಕತ್ವದ ವಿರುದ್ಧ ಸಿಡಿದು ನಿಲ್ಲುವ ಸೂಚನೆಗಳನ್ನು ನೀಡಿದ್ದು ವೈಯಕ್ತಿಕವಾಗಿಯೂ ಕೆಲವು ನಾಯಕರ ವಿರುದ್ಧ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. 

ಈ ಬೆಳವಣಿಗೆಗಳನ್ನು ನೋಡಿದರೆ ಪಕ್ಷದ ನೂತನ ಅಧ್ಯಕ್ಷ  ಬಿ.ವೈ. ವಿಜಯೇಂದ್ರ ಅವರ ಮುಂದಿನ ಹಾದಿ ಸುಲಭದ್ದಂತೂ ಅಲ್ಲ ಹಾಗೆಯೇ ಪಕ್ಷದಲ್ಲಿ ತಮ್ಮ ತಂದೆ ಯಡಿಯೂರಪ್ಪ ಅವರಂತೆ ಪ್ರಾಬಲ್ಯ ಸಾಧಿಸಲು ಅವರಿಗೆ ವಿರೋಧಿ ಗುಂಪು ಅವಕಾಶ ನೀಡದಿರಲು ನಿರ್ಧರಿಸಿರುವುದು ಗೊತ್ತಾಗುತ್ತದೆ. ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳಿಗಿರುವ ಆತಂಕ ಎಂದರೆ ವಿಜಯೇಂದ್ರ ಅಧ್ಯಕ್ಷರಾದ ನಂತರ ತಮಗೆ ಆಪ್ತರಾದವರನ್ನು ಮಾತ್ರ ಪದಾಧಿಕಾರಿಗಳಾಗಿ ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು. ರಾಜ್ಯ ಸಮಿತಿಯ ಪದಾಧಿಕಾರಿಗಳ ಪಟ್ಟಿ ಗಮನಿಸಿದರೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಿರುವ ಕಾರ್ಕಳದ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಹೊರತು ಪಡಿಸಿದರೆ ಉಳಿದವರ ಪೈಕಿ ಹೆಚ್ಚಿನವರಿಗೆ ಸಂಘಟನಾತ್ಮಕವಾಗಿ ಅಂತಹ ಹೋರಾಟದ ಹಿನ್ನೆಲೆಯೇನೂ ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಕುರಿತಾಗಿ ಇದ್ದ ನಿಷ್ಠೆಯೇ ಪ್ರಮುಖ ಮಾನದಂಡವಾಗಿದೆ. 

ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕರಾಗಿ ನೇಮಕವಾಗುವರೆಂದೇ ನಿರೀಕ್ಷಿಸಲಾಗಿದ್ದ ಸುನಿಲ್ ಕುಮಾರ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಬೇರೆ ದಾರಿ ಇಲ್ಲದೇ ಒಪ್ಪಿಕೊಂಡಿದ್ದಾರೆ. ಹಾಗೆ ನೋಡಿದರೆ ಚಿಕ್ಕಮಗಳೂರಿನ ದತ್ತ ಪೀಠದ ಚಳವಳಿಯನ್ನು ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯೂ ಆಗಿದ್ದ ಅವರನ್ನು ಸಂಘಟನೆಯಲ್ಲಿ ಬರೇ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಉಳಿದ ಪ್ರದಾನ ಕಾರ್ಯದರ್ಶಿಗಳ ಸಾಲಿನಲ್ಲಿ ಅವರೂ ಒಬ್ಬರು ಎಂಬುದನ್ನ ಬಿಟ್ಟರೆ ಉಳಿದಂತೆ ಯಾವುದೇ ವಿಶೇಷ ಹೊಣೆಗಾರಿಕೆಗಳು ಅವರಿಗಿಲ್ಲ. ಇನ್ನುಳಿದಂತೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ನೇಮಕಗೊಂಡಿರುವ ಕೋಟಾ ಶ್ರೀನಿವಾಸ ಪೂಜಾರಿ ವ್ಯಕ್ತಿಗತವಾಗಿ ಸಜ್ಜನ ಮತ್ತು ಭ್ರಷ್ಟರಲ್ಲ ಎಂಬುದನ್ನು ಬಿಟ್ಟರೆ ಸ್ವತಂತ್ರವಾಗಿ ಎದ್ದು ನಿಲ್ಲುವ, ಪಕ್ಷದಲ್ಲಿನ ಅವ್ಯವಸ್ಥೆಗಳ ಬಗ್ಗೆ ಸಿಡಿದೇಳುವ ಮನೋಭಾವದವರಲ್ಲ.ಅವರನ್ನು ಪ್ರತಿಪಕ್ಷದ ನಾಯಕರಾಗಿ ನೇಮಿಸಿ ನೆಪ ಮಾತ್ರಕ್ಕೆ ಎಂಬಂತೆ ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯ ನೀಡಲಾಗಿದೆ.

ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪಗಳಿಂದ ತಪ್ಪಿಸಿಕೊಳ್ಳಲು ಹುಬ್ಬಳ್ಳಿಯ ಶಾಸಕ ಅರವಿಂದ ಬೆಲ್ಲದ ಅವರನ್ನು ವಿಧಾನಸಭೆ ಉಪ ನಾಯಕನಾಗಿ ನೇಮಕ ಮಾಡಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಸಾರ್ವಜನಿಕವಾಗಿ ಚರ್ಚೆಯಲ್ಲಿದ್ದಾಗ ಬೆಲ್ಲದ್ ಹೆಸರೂ ಕೆಲವು ಮಾಧ್ಯಮಗಳಲ್ಲಿ ಕೇಳಿ ಬಂದಿತ್ತು. ನಂತರ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿಗೂ ಅವರ ಹೆಸರು ಕೇಳಿ ಬಂದಿತ್ತು. ಆದರೆ ಕಡೆಗೆ ನಡೆದಿದ್ದೇ ಬೇರೆ. ಬೆಲ್ಲದ್ ಸೇರಿದಂತೆ ಆಯ್ದ ಕೆಲವು ಉತ್ತರ ಕರ್ನಾಟಕದ ಶಾಸಕರಿಗೆ ವಿಧಾನಸಭೆ, ಪರಿಷತ್ ನಲ್ಲಿ ಅಷ್ಟೇನೂ ಪ್ರಾಮುಖ್ಯವಲ್ಲದ ಹುದ್ದೆಗಳನ್ನು ನೀಡುವ ಮೂಲಕ ಉತ್ತರ ಕರ್ನಾಟಕದ ಭಾಗವನ್ನು ಪ್ರಾತಿನಿಧ್ಯ ನೀಡಿಕೆ ವಿಚಾರದಲ್ಲಿ ಕಡೆಗಣಿಸಲಾಗಿದೆ ಎಂಬ ಯತ್ನಾಳ್ ಅವರ ಆರೋಪಕ್ಕೆ ಉತ್ತರ ನೀಡಲಾಗಿದೆ. 

ಬಿಜೆಪಿಯಲ್ಲಿ ಹೆಚ್ಚು ಪಾಲು ನಾಯಕರಿಗೆ ಪಕ್ಷದಲ್ಲಿ ಮತ್ತೆ ಯಡಿಯೂರಪ್ಪನವರೇ ಕೇಂದ್ರ ಬಿಂದುವಾಗಿ ಅಧಿಕಾರದ ಎಲ್ಲ ಹಂತಗಳಲ್ಲೂ ಆವರಿಸಿಕೊಳ್ಳುತ್ತಾರೆ ಹೀಗಾದಲ್ಲಿ ಭವಿಷ್ಯದಲ್ಲಿ ತಮಗೆ ಪಕ್ಷದೊಳಗೆ ಅಸ್ತಿತ್ವ ಇಲ್ಲದಂತಾಗುತ್ತದೆ ಎಂಬ ಆತಂಕವೇ ಈಗ ಸಂಘಟನೆಯ ಕುರಿತಂತೆ ಅಸಮಾಧಾನದ ಮಾತುಗಳನ್ನು ಆಡಲು ಪ್ರೇರೇಪಿಸಿದೆ. ಅಧ್ಯಕ್ಷರಾದ ನಂತರ ವಿಜಯೇಂದ್ರ ಉರುಳಿಸುತ್ತಿರುವ ಒಂದೊಂದೇ ದಾಳಗಳು ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸಂಫೂರ್ಣ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುವ ಪರಿಸ್ಥಿತಿಗಳನ್ನು ಮನಗಂಡೇ ಸಂಘಟನೆಯ ವಿಚಾರದಲ್ಲಿ ಹಿರಿಯ ನಾಯಕರು ತಗಾದೆ ತೆಗೆದಿದ್ದಾರೆ.

ಯತ್ನಾಳ್ ಆರೋಪ ತಂದ ಕೋಲಾಹಲ: 

ವಿಜಯೇಂದ್ರ ವಿರುದ್ಧ ಸಿಡಿದು ನಿಂತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೋವಿಡ್ ನಿಯಂತ್ರಣ ಹೆಸರಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ನೇರವಾಗಿ ಆರೋಪಿಸಿರುವುದು ಬಿಜೆಪಿಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಹಾಗೆ ನೋಡಿದರೆ ಬಿಜೆಪಿ ಸರ್ಕಾರದ ಆಳ್ವಿಕೆ ಅವಧಿಯಲ್ಲೇ ಈ ಆರೋಪಗಳು ಅಲ್ಲಲ್ಲಿ ಕೇಳಿ ಬಂದಿತ್ತು. ಪ್ರಮುಖವಾಗಿ ಅಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ. ಸುಧಾಕರ್ ವಿರುದ್ಧ ಪಕ್ಷದ ಶಾಸಕರೇ ಈ ಕುರಿತಾದ ಆರೋಪಗಳನ್ನು ಮಾಡಿದ್ದರು.

ಅದು ಅಷ್ಟೊಂದು ಪ್ರಾಮುಖ್ಯ ಪಡೆಯದಂತೆ ನೋಡಿಕೊಳ್ಳಲಾಗಿತ್ತು. ದಿಲ್ಲಿಯ ಬಿಜೆಪಿ ಹಿರಿಯ ನಾಯಕರೊಬ್ಬರ ಪುತ್ರನ ಜತೆಗಿನ ಸುಧಾಕರ್ ಅತಿಯಾದ ಒಡನಾಟ ಪಕ್ಷದಲ್ಲಿ ಆರ್.ಅಶೋಕ್ ಸೇರಿದಂತೆ ಹಲವರಿಗೆ ಕಿರಿಕಿರಿ ತಂದಿತ್ತು. ಈ ಒಡನಾಟದಿಂದ ಉತ್ತೇಜನಗೊಂಡಿದ್ದ ಸುಧಾಕರ್ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಾಗಿ ಬಿಂಬಿಸಿಕೊಳ್ಳುವ ಪ್ರಯತ್ನಗಳನ್ನೂ ಮಾಡಿದ್ದರು. ಅವರು ರಾಮನಗರ ಚೆನ್ನಪಟ್ಟಣ ಭಾಗಗಳಲ್ಲಿ ನಡೆಸಿದ್ದ ಪಕ್ಷದ ಸ್ಥಳೀಯ ಮುಖಂಡರ ರಹಸ್ಯ ಸಭೆಗಳೂ ಈ ಅನುಮಾನಗಳಿಗೆ ಪುಷ್ಟಿ ಒದಗಿಸಿದ್ದವು.

ಆದರೆ ಅವರ ಕುರಿತಾಗಿ ಅಸಮಾಧಾನ ಹೊಂದಿದ್ದ ಅಶೋಕ್,ಅಶ್ವತ್ಥನಾರಾಯಣ ಸೇರಿದಂತೆ ಇತರ ಕೆಲವು ಮುಖಂಡರು ಈ ಆಶಯ ಈಡೇರದಂತೆ ಒಟ್ಟಾಗಿ ಪ್ರತಿ ತಂತ್ರಗಳನ್ನು ರೂಪಿಸಿದ ಫಲವಾಗಿ ಬಿಜೆಪಿಯಲ್ಲಿ ಒಕ್ಕಲಿಗ ನಾಯಕನಾಗಿ ಅಸ್ತಿತ್ವ ಕಂಡುಕೊಳ್ಳುವ ಸುಧಾಕರ್ ಕನಸು ಭಗ್ನವಾಯಿತು. ಅಧಿಕಾರದಲ್ಲಿದ್ದ ಅವಧಿಯಲ್ಲಿ ಅವರಿಂದ ಸಾಕಷ್ಟು ಲಾಭ ಪಡೆದ  ದಿಲ್ಲಿಯ ಪ್ರಭಾವೀ ನಾಯಕರೊಬ್ಬರ ಪುತ್ರ ಕೂಡಾ ಅವರನ್ನು ಕೈಬಿಟ್ಟರು. ಈಗ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಬಿಜೆಪಿ ಅವದಿಯಲ್ಲಿ ಭಾರೀ ಮೊತ್ತದ ಭ್ರಷ್ಟಾಚಾರ ನಡೆದಿದ್ದು ಪಕ್ಷದಿಂದ ತನ್ನನ್ನು ಉಚ್ಚಾಟನೆ ಮಾಡಿದರೆ ಆ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಯತ್ನಾಳ್ ಘೋಷಿಸಿದ್ದಾರೆ. 

ತಮ್ಮ ಹೇಳಿಕೆಗಳ ಪರಿಣಾಮ ಏನಾಗಬಹುದೆಂದು ಅರಿತಿರುವ ಯತ್ನಾಳ್ ಪಕ್ಷದಿಂದ ಉಚ್ಛಾಟನೆ ಮಾಡಿದರೆ ಮಾಡಲಿ ಎಂಬ ನಿರ್ಧಾರಕ್ಕೆ ಬಂದಂತಿದೆ. ಶಾಸನಾತ್ಮಕವಾಗಿ ಈ ಪ್ರಕ್ರಿಯೆಗೆ ಯಾವುದೇ ಮಾನ್ಯತೆಗಳಿಲ್ಲ, ಶಾಸಕತ್ವಕ್ಕೂ ಧಕ್ಕೆ ಆಗುವುದಿಲ್ಲ. ಯಡಿಯೂರಪ್ಪ ವಿರುದ್ಧ ಮತ್ತಷ್ಟು ದಾಳಿಗೆ ಪರವಾನಗಿ ಸಿಕ್ಕಂತಾಗುತ್ತದೆ. ಈ ಹೋರಾಟವನ್ನು ಜೀವಂತವಾಗಿಟ್ಟುಕೊಂಡು ತಮ್ಮದೇ ಸಮುದಾಯವಾದ ಪಂಚಮಸಾಲಿ ಲಿಂಗಾಯಿತರ ಪ್ರಶ್ನಾತೀತ ನಾಯಕನಾಗಿ ಹೊರ ಹೊಮ್ಮುವುದು ಆ ಮೂಲಕ ಯಡಿಯೂರಪ್ಪ ಲಿಂಗಾಯಿತರ ಪ್ರಶ್ನಾತೀತ ನಾಯಕರಲ್ಲ ಎಂಬುದನ್ನು ಬಿಜೆಪಿ ನಾಯಕತ್ವಕ್ಕೆ ಮನದಟ್ಟು ಮಾಡಿಕೊಡುವುದು ಅವರ ಸದ್ಯದ ತಂತ್ರ.

ಇದನ್ನು ಮುಂದಾಗೇ ಅರಿತಿರುವ ಯಡಿಯೂರಪ್ಪ, ಇದೇ ಸಮುದಾಯಕ್ಕೆ ಸೇರಿದ ಅರವಿಂದ ಬೆಲ್ಲದ ಅವರನ್ನು ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕನ ಸ್ಥಾನಕ್ಕೆ ನೇಮಕವಾಗುವಂತೆ ನೋಡಿಕೊಳ್ಳುವ ಮೂಲಕ ಇಡೀ ಸಮುದಾಯದ ಬೆಂಬಲ ಯತ್ನಾಳ್ ಗೆ ಇಲ್ಲ ಎಂಬುದನ್ನು ಸಾಬೀತು ಪಡಿಸುವ ತಂತ್ರಕ್ಕೆ ಶರಣಾಗಿದ್ದಾರೆ. ಕೋವಿಡ್ ಹಗರಣದ ಕುರಿತು ಮಾಡಿರುವ ಆರೋಪಗಳ ಮೂಲಕ  ಕಾಂಗ್ರೆಸ್ ನಾಯಕರ ಕೈಗೆ ಯತ್ನಾಳ್ ತಾವಾಗೇ ಅಸ್ತ್ರ ಕೊಟ್ಟಿದ್ದಾರೆ. ಮೋದಿ ಮುಂದಿನ ಪ್ರಧಾನಿ ಆಗಬೇಕು ಎಂದು ಹೇಳುತ್ತಲೇ ಸ್ವಪಕ್ಷೀಯ ನಾಯಕರ ವಿರುದ್ಧವೇ ಬಂಡಾಯ ಸಾರಿರುವ ಅವರಿಗೆ ದಿಲ್ಲಿ ಬಿಜೆಪಿ ಅಂಗಳದಲ್ಲಿರುವ ರಾಜ್ಯದ ಕೆಲವು ಬಿಜೆಪಿ ನಾಯಕರ ಬೆಂಬಲ ಇದೆ. ಅವರಿಗೂ ರಾಜ್ಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಸದ್ಯಕ್ಕೆ ಈ ಗೊಂದಲಗಳು ಬಗೆಹರಿಯುವ ಸೂಚನೆಗಳು ಇಲ್ಲ.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com