ಬೀಸೋ ದೊಣ್ಣೆಯಿಂದ ಪಾರು: ಯಡಿಯೂರಪ್ಪ ಮುಂದಿನ ನಡೆಯೇ ಈಗ ಕುತೂಹಲ! (ಸುದ್ದಿ ವಿಶ್ಲೇಷಣೆ)

ಒಂದು ವೇಳೆ ಈ ಪ್ರಕರಣದಲ್ಲಿ ಯಡಿಯೂರಪ್ಪನವರು ಬಂಧನಕ್ಕೀಡಾಗಿದ್ದರೆ ಬಿಜೆಪಿ ರಾಜ್ಯ ಮಟ್ಟದಲ್ಲಿ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿತ್ತು. ಆದರೆ ಸದ್ಯಕ್ಕೆ ಅಂಥದೊಂದು ಬಿಕ್ಕಟ್ಟಿನ ಸನ್ನಿವೇಶದಿಂದ ಪಕ್ಷವೂ ಪಾರಾಗಿದೆ.
Union minister HD Kumaraswamy, BL Santosh, Former CM Yeddiyurappa
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ- ಬಿಎಲ್ ಸಂತೋಷ್, ಮಾಜಿ ಸಿಎಂ ಯಡಿಯೂರಪ್ಪfile pic
Updated on

ಇದು ಬೀಸುವ ದೊಣ್ಣೆಯಿಂದ ಪಾರಾದಂತೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯಕ್ಕೆ ಪಾರಾಗಿದ್ದಾರೆ. ಅವರನ್ನು ಬಂಧಿಸದಂತೆ ಹೈಕೋರ್ಟ್ ಸೂಚನೆ ನೀಡಿದ್ದು ಪ್ರಕರಣದ ವಿಚಾರಣೆಯನ್ನು ಎರಡುವಾರ ಕಾಲ ಮುಂದೂಡಿದೆ. ಸದ್ಯಕ್ಕೆ ಅವರು ನಿರಾಳ. ಆದರೆ ಪ್ರಕರಣ ಇತ್ಯರ್ಥವಾಗಲು ಇನ್ನೂ ಕಾಯಬೇಕು.

ಅದೇನೇ ಇರಲಿ. ಇಡೀ ಪ್ರಕರಣದ ಹಿಂದೆ ಬಿಜೆಪಿ ನಾಯಕರು ದೂಷಿಸುತ್ತಿರುವಂತೆ ರಾಜಕೀಯ ಪಿತೂರಿ ಇದೆಯಾ? ಇದ್ದರೆ ಅದು ಯಾರಿಗೆ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಯಡಿಯೂರಪ್ಪನವರು ಬಂಧನಕ್ಕೀಡಾಗಿದ್ದರೆ ಬಿಜೆಪಿ ರಾಜ್ಯ ಮಟ್ಟದಲ್ಲಿ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿತ್ತು. ಆದರೆ ಸದ್ಯಕ್ಕೆ ಅಂಥದೊಂದು ಬಿಕ್ಕಟ್ಟಿನ ಸನ್ನಿವೇಶದಿಂದ ಪಕ್ಷವೂ ಪಾರಾಗಿದೆ.

ಸಹಾಯ ಯಾಚಿಸಿ ಬಂದ ಮಹಿಳೆಯ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದರು ಎಂಬುದು ಅವರ ವಿರುದ್ಧದ ಆರೋಪ. ಆದರೆ ಇಡೀ ಪ್ರಕರಣದ ಹಿನ್ನೆಲೆ ನೋಡಿದರೆ ಆರೋಪಗಳು ಸಹಜವಾಗಿಲ್ಲ ಎಂಬ ಸಂಶಯಗಳು ಸಹಜವಾಗೇ ತಲೆ ಎತ್ತಿದ್ದವು. ದೂರು ನೀಡಿದ ಮಹಿಳೆ ಇತ್ತೀಚೆಗೆ ಅನಾರೋಗ್ಯದಿಂದ ನಿಧರಾಗಿದ್ದಾರೆ. ಆದರೆ ಅವರ ಹಿನ್ನೆಲೆ ಗಮನಿಸಿದರೆ ಸುಮಾರು 53 ಪ್ರಕರಣಗಳಲ್ಲಿ ಸರ್ಕಾರದ ವಿವಿಧ ಹಿರಿಯ ಪೊಲಿಸ್ ಅಧಿಕಾರಿಗಳು, ರಾಜಕೀಯ ನಾಯಕರ ವಿರುದ್ಧವೂ ಅವರು ದೂರುಗಳನ್ನು ಈ ಹಿಂದೆ ದಾಖಲಿಸಿದ್ದಾರೆ, ಈ ಯಾವ ಪ್ರಕರಣಗಳೂ ತಾರ್ಕಿಕ ಅಂತ್ಯ ಕಂಡಿಲ್ಲ.

ಯಡಿಯೂರಪ್ಪ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲಿಸರ ನಡವಳಿಕೆಯೇ ಪ್ರಶ್ನಾರ್ಹವಾಗಿದೆ. ಮಾರ್ಚ್ 12 ರಂದು ಅವರ ವಿರುದ್ಧ ಪ್ರಕರಣ ದಾಖಲಾದ ನಂತರ ಜೂನ್ 12 ರವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದ್ದು ಯಾಕೆ. ಇದ್ದಕ್ಕಿದ್ದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮಹಿಳೆಯ ಪುತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯದ ಸೂಚನೆವರೆಗೆ ಯಾಕೆ ಕಾದರು? ಅದೂ ತರಾತುರಿಯಲ್ಲಿ ನೋಟೀಸ್ ನೀಡಿ ಇದ್ದಕ್ಕಿದ್ದಂತೆ ಪೊಲೀಸರು ಚುರುಕಾಗಿದ್ದು ಏಕೆ? ಎಂಬುದೇ ಪ್ರಶ್ನಾರ್ಹವಾಗಿದೆ.

ಇಡೀ ಪ್ರಕರಣ ಈಗ ಹೈಕೊರ್ಟ್ ಮುಂದೆ ಇರುವುದರಿಂದ ವಿಚಾರಣೆ ಆರಂಭವಾದ ನಂತರ ಅನೇಕ ಸತ್ಯ ಸಂಗತಿಗಳು ಹೊರ ಬರಬಹುದು. ಆದರೆ ಈ ಪ್ರಕರಣದಲ್ಲಿ ಲೋಕಸಭೆ ಚುನಾವಣೆಗೆ ಮೊದಲೇ ದೂರು ದಾಖಲಾದಾಗ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕಾದು ನೋಡುವ ನಿರ್ಧಾರಕ್ಕೆ ಬಂದಿತ್ತು.

ಸ್ವಯಂ ಗೃಹ ಸಚಿವ ಡಾ. ಪರಮೇಶ್ವರ್ ಅವರ ಹೇಳಿಕೆಯೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಬಯಲುಗೊಳಿಸಿತ್ತು. ಚುನಾವಣೆ ಸಂದರ್ಭದಲ್ಲಿ ದೂರು ಬಂದಾಗಲೇ ಸರ್ಕಾರ ಪ್ರಕರಣದ ತನಿಖೆಗೆ ಹಿಂಜರಿಯಲು ಯಡಿಯೂರಪ್ಪ ಪ್ರಭಾವಿ ರಾಜಕೀಯ ನಾಯಕ ಎಂಬುದು ಒಂದು ಕಾರಣವಾದರೆ ಮತ್ತೊಂದು ಬಿಜೆಪಿ ಈ ಪ್ರಕರಣವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳನ್ನೂ ಸರ್ಕಾರ ಗುರುತಿಸಿತ್ತು. ಈ ಕಾರಣಕ್ಕಾಗೇ ಕ್ರಮಕ್ಕೆ ಹಿಂದೇಟು ಹಾಕಿತ್ತು. ಆದರೆ ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ ಇದ್ದಕ್ಕಿದ್ದಂತೆ ಸರ್ಕಾರ ಚುರುಕಾಗಿದ್ದರ ಹಿಂದೆ ರಾಜಕೀಯ ಪ್ರಭಾವ ಇತ್ತು ಎಂಬ ಸಂಶಯಗಳು ಈಗ ತಲೆ ಎತ್ತಿದೆ. ಹಾಗಿದ್ದಲ್ಲಿ ಅಂತಹ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದ ಪ್ರಭಾವೀ ನಾಯಕರು ಯಾರು? ಯಡಿಯೂರಪ್ಪ ಪ್ರಕರಣವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವ ಹುನ್ನಾರಗಳೂ ಇತ್ತು ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.

Union minister HD Kumaraswamy, BL Santosh, Former CM Yeddiyurappa
ಬಿಜೆಪಿಯಲ್ಲಿ ಕಿಚ್ಚೆಬ್ಬಿಸಿದ ಕುಮಾರ ಪರ್ವ (ಸುದ್ದಿ ವಿಶ್ಲೇಷಣೆ)

ಒಂದಂತೂ ಸ್ಪಷ್ಟ. ನ್ಯಾಯಾಲಯದ ಆದೇಶದಿಂದ ನಿಟ್ಟುಸಿರು ಬಿಟ್ಟಿರುವ ಯಡಿಯೂರಪ್ಪ, ತಮ್ಮ ವಿರುದ್ಧದ ರಾಜಕೀಯ ಪಿತೂರಿಯ ವಿರುದ್ಧ ಸಿಡಿದೇಳುತ್ತಾರಾ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ನಾಲ್ಕು ದಶಕಗಳ ಅವರ ರಾಜಕೀಯ ನಡೆಯನ್ನು ಗಮನಿಸುತ್ತಾ ಬಂದಿರುವವರಿಗೆ ಅವರು ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂಬುದು ತಿಳಿದೇ ಇದೆ. ವಿಶೇಷ ಎಂದರೆ ಈ ಪ್ರಕರಣದಲ್ಲಿ ವಿರುದ್ಧ ಆರೋಪಗಳು ಕೇಳಿ ಬಂದಾಗ ಬಿಜೆಪಿಯ ರಾಜ್ಯ ನಾಯಕರು ಅವರ ಬೆಂಬಲಕ್ಕೆ ನಿಂತರೆ, ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ತಪ್ಪಿದ ಸಿಟ್ಟಿಗೆ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗೇ ಸಿಡಿದು ನಿಂತ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡಾ ಈ ಪ್ರಕರಣದಲ್ಲಿ ಯಡಿಯೂರಪ್ಪ ಪರವೇ ನಿಂತು ಅವರನ್ನು ಸಮರ್ಥಿಸಿಕೊಂಡರು. ರಾಜಕೀಯಕ್ಕೆ ಈ ಪ್ರಕರಣವನ್ನು ಬಳಸಿಕೊಳ್ಳುವ ಸಣ್ಣತನ ತೋರಿಸಲಿಲ್ಲ ಎಂಬುದು ಪ್ರಮುಖ ಅಂಶ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ನಡುವೆ ಸರ್ಕಾರದ ಆಡಳಿತ, ನೀತಿ ನಿರೂಪಣೆ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷದ ನಿಲುವುಗಳಿಗೆ ಸಂಬಂಧಿಸಿದಂತೆ ಅನೇಕ ಸಂದರ್ಭದಲ್ಲಿ ತೀವ್ರ ಸ್ವರೂಪದ ವಾಕ್ಸಮರ ನಡೆದಿದೆ. ಆದರೆ ವೈಯಕ್ತಿಕ ಮಟ್ಟದಲ್ಲಿ ಅವರಿಬ್ಬರ ನಡುವೆ ಪಕ್ಷ ರಾಜಕಾರಣ ಮೀರಿದ ಸ್ನೇಹ, ಸಂಬಂಧ ಇದೆ. ರಾಜಕಾರಣದ ವಿವಿಧ ಸಂದರ್ಭಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ನೆರವಾಗಿದ್ದೂ ಈಗ ಗುಟ್ಟೇನಲ್ಲ. ಇದು ಕಾಂಗ್ರೆಸ್ ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಗುಂಪಿಗೆ ಅಸಹನೆ ತಂದಿದೆ. ಇದು ಈ ಪ್ರಕಣದಲ್ಲಿ ರಾಜಕೀಯ ಕೈವಾಡ ಇದೆಯೆ? ಎಂಬ ಸಂಶಯಗಳನ್ನು ಹುಟ್ಟುಹಾಕಿದೆ.

ಸದ್ಯಕ್ಕಂತೂ ಯಡಿಯೂರಪ್ಪ ಬಂಧನದ ಭಿತಿಯಿಂದ ಪಾರಾಗಿದ್ದಾರೆ. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣವೂ ಇದೆ. ಬಿಜೆಪಿಯಲ್ಲಿ ಅವರು ಪ್ರಭಾವೀ ನಾಯಕರಾಗಿದ್ದರೂ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅವರ ಮಾತನ್ನು ಬಿಜೆಪಿ ವರಿಷ್ಠರು ಪೂರ್ಣವಾಗಿ ಪರಿಗಣಿಸಲಿಲ್ಲ. ತುಮಕೂರು ಮತ್ತು ಚಿಕ್ಕ ಬಳ್ಳಾಪುರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಅವರ ಮಾತಿಗೆ ವರಿಷ್ಠರು ಮನ್ನಣೆ ನೀಡಲಿಲ್ಲ. ಫಲಿತಾಂಶದ ನಂತರವೂ ಪಕ್ಷದ ವೈಫಲ್ಯಗಳನ್ನು ಅವರ ತಲೆಗೇ ಕಟ್ಟುವ ಪ್ರಯತ್ನಗಳು ದಿಲ್ಲಿ ಮಟ್ಟದಲ್ಲಿ ರಾಜ್ಯದ ಕೆಲವು ನಾಯಕರುಗಳಿಂದ ನಡೆದವು ಸಚಿವ ಸಂಪುಟ ರಚನೆ ವಿಚಾರದಲ್ಲೂ ಅವರನ್ನು ವಿರೋಧಿ ವಿ. ಸೋಮಣ್ಣ ಅವರಿಗೆ ಮಣೆ ಹಾಕಲಾಯಿತು. ಅಸಮಾಧಾನ, ಅಪಮಾನಗಳಿಂದ ಯಡಿಯೂರಪ್ಪ ಕುದಿಯುತ್ತಿದ್ದಾರೆ.

Union minister HD Kumaraswamy, BL Santosh, Former CM Yeddiyurappa
ಮುಖ್ಯಮಂತ್ರಿ ಸ್ಥಾನ: ಸಿದ್ದು–ಡಿಕೆಶಿ ನಡುವೆ ಮತ್ತೆ ಚದುರಂಗದಾಟ ಆರಂಭ (ಸುದ್ದಿ ವಿಶ್ಲೇಷಣೆ)

ಸಂತೋಷ್ ವಿರುದ್ಧ ಅಸಮಾಧಾನದ ಹೊಗೆ

ಈ ಬಾರಿಯ ಚೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಜತೆಗೆ ಹೊಂದಾಣಿಕೆಗೆ ಹೆಚ್ಚು ಆಸಕ್ತರಾಗಿದ್ದು ರಾಜ್ಯದವರೇ ಆದ ದಿಲ್ಲಿ ಬಿಜೆಪಿ ಪಡಸಾಲೆಯಲ್ಲಿ ಪ್ರಭಾವ ಹೊಂದಿರುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್. ಚುನಾವಣೆ ಫಲಿತಾಂಶದ ನಂತರ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಆ ಪಕ್ಷದ ನಾಯಕರು ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಜೆಡಿಎಸ್ ಬೆಂಬಲವೇ ಕಾರಣ ಎಂದು ಸಾರ್ವತ್ರಿಕವಾಗಿ ಬಿಂಬಿಸಲು ಹೊರಟಿರುವುದು ಬಿಜೆಪಿಯ ನಾಯಕರುಗಳನ್ನು ಕೆರಳಿಸಿದೆ. ಕುಮಾರಸ್ವಾಮಿ ಹಾಗೂ ವಿ. ಸೋಮಣ್ಣ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿಸುವಲ್ಲಿ ಮತ್ತು ಮಹತ್ವದ ಖಾತೆ ಕೊಡಿಸುವಲ್ಲಿ ಸಂತೋಷ್ ಪಾತ್ರ ಹೆಚ್ಚಿದೆ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲೇ ಕೇಳಿ ಬರುತ್ತಿದೆ.

ಕುಮಾರಸ್ವಾಮಿ ಜತೆಯಾದರೆ ರಾಜ್ಯ ರಾಜಕಾರಣದಲ್ಲಿ ತಮಗೊಂದು ಬಲವಾದ ಆಸರೆ ಸಿಗುತ್ತದೆ ಎಂಬ ದೂರಾಲೋಚನೆ ಸಂತೋಷ್ ಅವರದ್ದು. ಇದೇ ಕಾರಣಕ್ಕೆ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕುದಿಯುತ್ತಿದ್ದ ಸೋಮಣ್ಣ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿಸುವ ಮೂಲಕ ಮತ್ತೊಬ್ಬ ಪರ್ಯಾಯ ಲಿಂಗಾಯಿತ ನಾಯಕನ ಸೃಷ್ಟಿಗೂ ಮುನ್ನುಡಿ ಬರೆದಿದ್ದಾರೆ. ಇದು ಸೈದ್ಧಾಂತಿಕವಾಗಿ ಬಿಜೆಪಿಯನ್ನೇ ನಂಬಿಕೊಂಡು ಬಂದಿರುವ ಅಧಿಕ ಸಂಖ್ಯೆಯ ಮುಖಂಡರುಗಳಲ್ಲಿ ಅಸಮಾಧಾನದ ಕಿಚ್ಚು ಎಬ್ಬಿಸಿದೆ.

ಜೆಡಿಎಸ್ ಪಾದಕ್ಕೆ ಬಿಜೆಪಿ ಅರ್ಪಣೆ?

ನಿಶ್ಯಕ್ತವಾಗಿ ಮಲಗಿದ್ದ ಜೆಡಿಎಸ್ ಗೆ ಹೊಂದಾಣಿಕೆಯ ಔಷಧಿ ನೀಡಿ ಆ ಪಕ್ಷ ಮರುಹುಟ್ಟು ಪಡೆಯಲು ದಿಲ್ಲಿಯಲ್ಲಿ ಪ್ರಭಾವ ಹೊಂದಿರುವ ರಾಜ್ಯ ಬಿಜೆಪಿ ನಾಯಕರು ಕಾರಣರಾಗುವ ಮೂಲಕ ಬಿಜೆಪಿಯನ್ನು ಜೆಡಿಎಸ್ ನಾಯಕರ ಪದತಲಕ್ಕೆ ಅರ್ಪಿಸಿದ್ದಾರೆ ಎಂಬ ವ್ಯಂಗ್ಯ ಭರಿತ ಆಕ್ರೋಶದ ಮಾತುಗಳೂ ಈಗ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಈ ಅಸಮಾಧಾನಕ್ಕೆ ಧ್ವನಿಯಾದರೂ ಆಶ್ಚರ್ಯವೇನಿಲ್ಲ.

ಬಿಜೆಪಿ ಜತೆಗಿನ ಹೊಂದಾಣಿಕೆಯಿಂದ ಹೆಚ್ಚು ಲಾಭವಾಗಿರುವುದು ಜೆಡಿಎಸ್ ನೇತಾರ ಕುಮಾರಸ್ವಾಮಿಯವರಿಗೆ. ಮೋದಿ ಸಂಪುಟದಲ್ಲಿ ಈಗ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿರುವುದರಿಂದ ದಿಲ್ಲಿ ಬಿಜೆಪಿ ನಾಯಕರಿಗೆ ಇನ್ನಷ್ಟು ನಿಕಟವಾಗುವ ಪ್ರಯತ್ನ ನಡೆಸಲಿದ್ದಾರೆ. ಇದರಿಂದ ನಿಜವಾಗಿ ಆತಂಕ ಎದುರಾಗಿರುವುದು ಬಿಜೆಪಿಯಲ್ಲಿದ್ದು ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿರುವ ವಿಧಾನಸಬೆ ಪ್ರತಿಪಕ್ಷದ ನಾಯಕ ಆರ್. ಅಶೊಕ್, ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಮೊದಲಾದವರಿಗೆ ಕುಮಾರಸ್ವಾಮಿ ಬಿಜೆಪಿ ಜತೆಗಿನ ಸಖ್ಯದಿಂದ ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತು ಅರ ಪಕ್ಷ ಮತ್ತೆ ಪ್ರಬಲವಾದರೆ ಭವಿಷ್ಯದಲ್ಲಿ ತಮ್ಮ ಅಸ್ತಿತ್ವಕ್ಕೇ ಧಕ್ಕೆ ಬರುವುದು ನಿಶ್ಚಿತ ಎಂಬ ಆತಂಕ ಅವರೆಲ್ಲರನ್ನು ಕಾಡುತ್ತಿದೆ. ಹೀಗಾಗೇ ಯಡಿಯೂರಪ್ಪ ಜತೆಗಿನ ಹಳೆಯ ಕಹಿಯನ್ನು ಮರೆತು ಮತ್ತೆ ಅವರ ಜತೆ ಒಂದಾಗಿದ್ದಾರೆ. ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ಆರೋಪ ಬಂದಾಗ ಅವರ ಬೆಂಬಲಕ್ಕೆ ನಿಂತಿದ್ದು ಇದೇ ಸಿ.ಟಿ.ರವಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಎಂಬುದು ಇಲ್ಲಿ ಗಮನಾರ್ಹ ಅಂಶ.

Union minister HD Kumaraswamy, BL Santosh, Former CM Yeddiyurappa
ಪ್ರಜ್ವಲ್ ಪ್ರಕರಣ: ಕಾಂಗ್ರೆಸ್ ಗೆ ದಿಗ್ವಿಜಯದ ಉನ್ಮಾದ, ಜೆಡಿಎಸ್ ಗೆ ಅಸ್ತಿತ್ವದ್ದೇ ಚಿಂತೆ (ಸುದ್ದಿ ವಿಶ್ಲೇಷಣೆ)

ಈ ಬೆಳವಣಿಗೆಗಳಿಗೆ ಪುಟವಿಟ್ಟಂತೆ ಕೇಂದ್ರದ ನೂತನ ಸಚಿವ ವಿ. ಸೋಮಣ್ಣ ಪುತ್ರ ಅರುಣ್ ಸೋಮಣ್ಣ ವಿರುದ್ಧ ಇತ್ತಿಚೆಗೆ ಕ್ರಿಮಿನಲ್ ಪ್ರಕಣವೊಂದು ದಾಖಲಾಗಿದೆ. ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸೊಂಡೂರು ಶಾಸಕ ತುಕಾರಾಂ ಅವರು ಸದ್ಯದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು ತೆರವಾಗುವ ಈ ಮೂರು ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ ಆದ ನಂತರ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಮತ್ತಷ್ಟು ಚುರುಕಾಗಲಿದೆ. ಚನ್ನಪಟ್ಟಣ ಕ್ಷೇತ್ರದ ಮೇಲೆ ವಿದಾನ ಪರಿಷತ್ ಸದಸ್ಯ ಬಿಜೆಪಿಯ ಸಿ.ಪಿ. ಯೋಗೀಶ್ವರ್ ಕಣ್ಣಿಟ್ಟಿದ್ದಾರೆ. ಆದರೆ ಅಲ್ಲಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚು. ಕಾಂಗ್ರೆಸ್ ನಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ.ಸುರೇಶ್ ಕಣಕ್ಕಿಳಿಯಬಹುದು. ಲೋಕಸಭಾ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಶಿವಕುಮಾರ್ ಕೂಡಾ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳು ಹಲವು ಕುತೂಹಲಗಳಿಗೆ ದಾರಿ ಮಾಡಿಕೊಡಲಿವೆ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com