ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಮರಳುವರೇ ಸುನಿತಾ ವಿಲಿಯಮ್ಸ್? ಎದುರಿಸಬೇಕಾದ ಆರೋಗ್ಯ ಅಪಾಯಗಳೇನು? (ಜಾಗತಿಕ ಜಗಲಿ)

ಇಬ್ಬರು ಗಗನಯಾತ್ರಿಗಳನ್ನು ಐಎಸ್ಎಸ್‌ಗೆ ಬೋಯಿಂಗ್‌ ಸಂಸ್ಥೆಯ ನಿರ್ಮಾಣದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಕಳುಹಿಸಲಾಗಿತ್ತು. ಇದು ಸ್ಟಾರ್‌ಲೈನರ್‌ನ ಮೊದಲ ಮಾನವಸಹಿತ ಗಗನಯಾತ್ರೆಯಾಗಿತ್ತು.
sunita williams
ಸುನಿತಾ ವಿಲಿಯಮ್ಸ್online desk
Updated on

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂ ಕಾರ್ಯ ನಿರ್ವಹಿಸುತ್ತಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬದಲು, ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಫೆಬ್ರವರಿ 2025ರಲ್ಲಿ ಭೂಮಿಗೆ ಮರಳುವ ಸಾಧ್ಯತೆಗಳಿವೆ ಎಂದು ನಾಸಾ ಘೋಷಿಸಿದೆ.

ಈ ನಿರ್ಧಾರ, ಪ್ರಸ್ತುತ ನಡೆಯುತ್ತಿರುವ ಸ್ಟಾರ್‌ಲೈನರ್ ಸುರಕ್ಷತಾ ಪರೀಕ್ಷೆಗಳ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಈಗಾಗಲೇ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದೆ.

ಯೋಜನೆಯಲ್ಲಿ ವಿಳಂಬ

ಇವರಿಬ್ಬರು ಗಗನಯಾತ್ರಿಗಳನ್ನು ಐಎಸ್ಎಸ್‌ಗೆ ಬೋಯಿಂಗ್‌ ಸಂಸ್ಥೆಯ ನಿರ್ಮಾಣದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಕಳುಹಿಸಲಾಗಿತ್ತು. ಇದು ಸ್ಟಾರ್‌ಲೈನರ್‌ನ ಮೊದಲ ಮಾನವಸಹಿತ ಗಗನಯಾತ್ರೆಯಾಗಿತ್ತು.

ಉದ್ದೇಶಿತ ಸ್ಟಾರ್‌ಲೈನರ್ ಯೋಜನೆ ಎಂಟು ದಿನಗಳ ಯೋಜನೆಯಾಗಿತ್ತು. ಆದರೆ ಸ್ಟಾರ್‌ಲೈನರ್ ನೌಕೆಯ ಪ್ರೊಪಲ್ಷನ್ ವ್ಯವಸ್ಥೆಯಲ್ಲಿದ್ದ ಸಮಸ್ಯೆಗಳ ಕಾರಣದಿಂದ ಐಎಸ್ಎಸ್‌ನಲ್ಲಿ ಅವರ ವಾಸ್ತವ್ಯ ಇನ್ನಷ್ಟು ಸುದೀರ್ಘವಾಯಿತು. ಇಂತಹ ಸಮಸ್ಯೆಗಳು ಸ್ಟಾರ್‌ಲೈನರ್ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರಬಲ್ಲದೇ ಎಂಬ ಪ್ರಶ್ನೆಗಳನ್ನೂ ಮೂಡಿಸಿದವು

ಪ್ರೊಪಲ್ಷನ್ ಸಿಸ್ಟಮ್ ಮತ್ತು ಥ್ರಸ್ಟರ್‌ಗಳು

ಪ್ರೊಪಲ್ಷನ್ ಸಿಸ್ಟಮ್ ಎನ್ನುವುದು ಕಾರ್‌ಗಳು, ವಿಮಾನಗಳು, ಅಥವಾ ರಾಕೆಟ್‌ಗಳು ಮುಂದೆ ಸಾಗುವಂತೆ ಮಾಡಲು ಅವಶ್ಯಕ ಯಾಂತ್ರಿಕ ವ್ಯವಸ್ಥೆಯಾಗಿದ್ದು, ಅವುಗಳು ಸಾಗಲು ಅಗತ್ಯವಾದ ಥ್ರಸ್ಟ್ ಅನ್ನು (ವಸ್ತುವೊಂದು ಮುಂದೆ ಸಾಗಲು ಅಗತ್ಯ ಬಲ) ಉತ್ಪಾದಿಸುತ್ತದೆ. ಈ ಥ್ರಸ್ಟರ್‌ಗಳು ಶಕ್ತಿಯನ್ನು (ಇಂಧನ ಅಥವಾ ವಿದ್ಯುತ್ ಶಕ್ತಿ) ಚಲನೆಯಾಗಿ ಪರಿವರ್ತಿಸಿ, ವಾಹನಗಳು ಮುಂದೆ ಸಾಗುವಂತೆ ಮಾಡುವ ಇಂಜಿನ್‌ಗಳು, ಮೋಟರ್‌ಗಳನ್ನು ಒಳಗೊಂಡಿರುತ್ತವೆ.

ಸ್ಟಾರ್‌ಲೈನರ್ ಹೊಂದಿರುವ 28 ರಿಯಾಕ್ಷನ್ ಕಂಟ್ರೋಲ್ ಥ್ರಸ್ಟರ್‌ಗಳ (ಆರ್‌ಸಿಟಿ) ಪೈಕಿ 5 ಥ್ರಸ್ಟರ್‌ಗಳ ಅಸಮರ್ಪಕ ಕಾರ್ಯಾಚರಣೆ, ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಸರಿಪಡಿಸಲು ಬೋಯಿಂಗ್ ನಿರಂತರವಾಗಿ ಪ್ರಯತ್ನಿಸುತ್ತಿದೆ.

ರಿಯಾಕ್ಷನ್ ಕಂಟ್ರೋಲ್ ಥ್ರಸ್ಟರ್‌ಗಳು ಬಾಹ್ಯಾಕಾಶ ನೌಕೆಯಲ್ಲಿರುವ ಸಣ್ಣ ಇಂಜಿನ್‌ಗಳಾಗಿದ್ದು, ನೌಕೆಯ ಸ್ಥಾನ ಅಥವಾ ದಿಕ್ಕನ್ನು ಬದಲಾಯಿಸಲು ನೆರವಾಗುತ್ತದೆ. ಇವುಗಳು ಅನಿಲ ಅಥವಾ ಇತರ ವಸ್ತುಗಳನ್ನು ಹೊರಹಾಕಿ, ಅದರ ವಿರುದ್ಧ ದಿಕ್ಕಿನಲ್ಲಿ ಬಾಹ್ಯಾಕಾಶ ನೌಕೆ ವಿರುದ್ಧ ದಿಕ್ಕಿನಲ್ಲಿ ಮುಂದೆ ಸಾಗುವಂತೆ ಮಾಡುತ್ತವೆ. ಇಂತಹ ಥ್ರಸ್ಟರ್‌ಗಳು ಬಾಹ್ಯಾಕಾಶ ನೌಕೆಯ ಪಥ ಬದಲಾಯಿಸಲು, ಇತರ ಬಾಹ್ಯಾಕಾಶ ನೌಕೆಗಳೊಡನೆ ಡಾಕಿಂಗ್ ನಡೆಸುವುದು ಸೇರಿದಂತೆ, ಬಾಹ್ಯಾಕಾಶದಲ್ಲಿನ ಚಲನೆಗಳನ್ನು ನಿರ್ವಹಿಸಲು ಅತ್ಯಂತ ಮುಖ್ಯವಾಗಿವೆ.

ಹೀಲಿಯಂ ಸೋರಿಕೆ

ಹೀಲಿಯಂ ಒಂದು ಪ್ರತಿಕ್ರಿಯಾತ್ಮಕವಲ್ಲದ ಅನಿಲವಾಗಿದ್ದು, ಥ್ರಸ್ಟರ್‌ಗಳ ಇಂಧನವಾಗಿ ಬಳಕೆಯಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹೀಲಿಯಂ ಅನಿಲವೇನಾದರೂ ಸೋರಿಕೆಯಾದರೆ, ಇಂಧನ ಕೊರತೆಯಿಂದ ಥ್ರಸ್ಟರ್‌ಗಳು ಸಮರ್ಪಕವಾಗಿ ಕಾರ್ಯಾಚರಿಸದಿರುವ ಸಾಧ್ಯತೆಗಳಿವೆ.

ಭೂಮಿಗೆ ಮರಳಲು ಪರ್ಯಾಯ ವ್ಯವಸ್ಥೆ?

ಗಗನಯಾತ್ರಿಗಳು ಸ್ಟಾರ್‌ಲೈನರ್ ಮೂಲಕ ಸುರಕ್ಷಿತವಾಗಿ ಬಾಹ್ಯಾಕಾಶ ನಿಲ್ದಾಣವನ್ನೇನೋ ಸೇರಿದ್ದಾರೆ. ಆದರೆ, ಅದೇ ಸ್ಟಾರ್‌ಲೈನರ್ ನೌಕೆ ಭೂಮಿಗೆ ಮರಳಲು ಸುರಕ್ಷಿತವಲ್ಲದೇ ಹೋದರೆ, ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು ಅನಿವಾರ್ಯವಾಗುತ್ತದೆ.

ಆಗಸ್ಟ್ 7, ಬುಧವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಸಾ ಅಧಿಕಾರಿಗಳು, ಮುಂದಿನ ಹೆಜ್ಜೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ ಎಂದಿದ್ದಾರೆ.

"ನಮ್ಮ ಪ್ರಮುಖ ಗುರಿ ಬುಚ್ ಮತ್ತು ಸುನಿತಾರನ್ನು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ಮರಳಿ ಕರೆತರುವುದು. ಆದರೆ, ಒಂದು ವೇಳೆ ಈ ಆಯ್ಕೆ ಸರಿಯಾಗದಿದ್ದಲ್ಲಿ, ಬದಲಿ ಆಯ್ಕೆಯನ್ನು ಕೈಗೊಳ್ಳುವ ಕುರಿತು ನಾವು ಆಲೋಚನೆ ನಡೆಸುತ್ತಿದ್ದೇವೆ" ಎಂದು ನಾಸಾದ ಕಮರ್ಷಿಯಲ್ ಕ್ರ್ಯೂ ಯೋಜನಾ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದ್ದಾರೆ.

ಈಗ ನಾಸಾ ಮುಂದಿರುವ ಆಯ್ಕೆಗಳ ಪೈಕಿ, ಬುಚ್ ಮತ್ತು ಸುನಿತಾರನ್ನು ಸೆಪ್ಟೆಂಬರ್ ತಿಂಗಳಲ್ಲಿ ಉಡಾವಣೆಗೊಳ್ಳಲಿರುವ ಕ್ರ್ಯೂ-9 ಯೋಜನೆಯ ಭಾಗವಾಗಿಸಿ, 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಿ ಕರೆತರುವುದು ಸಹ ಸೇರಿದೆ.

sunita williams
ಟೆಹರಾನ್‌ನಲ್ಲಿ ಆಂತರಿಕ ವಿದ್ರೋಹ: ಹನಿಯೆಹ್ ಹತ್ಯೆಗೆ ಸಹಕರಿಸಿದವರ ಬೇಟೆಗಿಳಿದ ಇರಾನ್! (ಜಾಗತಿಕ ಜಗಲಿ)

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕ್ರ್ಯೂ-9 ಯೋಜನೆಯನ್ನು ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ನೌಕೆ ಒಯ್ಯಲಿದೆ. ಇದು ಆರಂಭದಲ್ಲಿ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಒಯ್ಯುವ ಉದ್ದೇಶ ಹೊಂದಿತ್ತಾದರೂ, ಈಗ ಅಗತ್ಯ ಬಿದ್ದರೆ ಎರಡು ಆಸನಗಳನ್ನು ಖಾಲಿ ಬಿಟ್ಟು ಉಡಾವಣೆಗೊಳಿಸಲಾಗುತ್ತದೆ. ಉಳಿದ ಎರಡು ಆಸನಗಳು ಸುನಿತಾ ಮತ್ತು ಬುಚ್‌ರನ್ನು ಭೂಮಿಗೆ ಕರೆತರಲು ನೆರವಾಗಲಿದೆ.

ಒಂದು ವೇಳೆ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಕೇವಲ ಎಂಟು ದಿನಗಳ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಎಂಟು ತಿಂಗಳಿಗೂ ಹೆಚ್ಚು ಕಾಲ ಐಎಸ್ಎಸ್‌ನಲ್ಲಿ ನೆಲೆಸಬೇಕಾಗುತ್ತದೆ.

ಕ್ರ್ಯೂ ಡ್ರ್ಯಾಗನ್ ನೌಕೆಯನ್ನು ಬಳಸಿದರೆ, ಸ್ಟಾರ್‌ಲೈನರ್ ನೌಕೆ ಸಿಬ್ಬಂದಿ ರಹಿತವಾಗಿ, ಕಂಪ್ಯೂಟರ್ ನಿಯಂತ್ರಣದ ಮೂಲಕ ಭೂಮಿಗೆ ಮರಳಬೇಕಾಗುತ್ತದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಕನಿಷ್ಠ ಒಂದು ವಾರ ಬೇಕಾಗುತ್ತದೆಂದು ನಾಸಾ ತಿಳಿಸಿದೆ.

ನಾಸಾದ ಬಾಹ್ಯಾಕಾಶ ಕಾರ್ಯಾಚರಣಾ ನಿರ್ದೇಶಕರಾದ ಕೆನ್ ಬೋವರ್‌ಸಾಕ್ಸ್ ಅವರು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಸ್ಟಾರ್‌ಲೈನರ್ ನೌಕೆ ಸಿಬ್ಬಂದಿ ರಹಿತವಾಗಿ ಭೂಮಿಗೆ ಬರುವ ಸಾಧ್ಯತೆಗಳು ಕೊಂಚ ಹೆಚ್ಚಾಗಿವೆ ಎಂದಿದ್ದಾರೆ. ಆ ಕಾರಣದಿಂದಲೇ, ನಾವು ಎಲ್ಲಕ್ಕೂ ಸಿದ್ಧರಾಗುವ ನಿಟ್ಟಿನಲ್ಲಿ ಬದಲಿ ಆಯ್ಕೆಗಳನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದಿದ್ದಾರೆ.

ಆದರೆ, ಒಂದು ವೇಳೆ ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ಸ್ಟಾರ್‌ಲೈನರ್ ಬದಲು ಸ್ಪೇಸ್ಎಕ್ಸ್ ನೌಕೆಯನ್ನು ಬಳಸಿದರೆ, ಹಲವಾರು ವರ್ಷಗಳಿಂದ ಸ್ಪೇಸ್ಎಕ್ಸ್ ಮತ್ತದರ ಅನುಭವಿ ಕ್ರ್ಯೂ ಡ್ರ್ಯಾಗನ್ ನೌಕೆಗಳೊಡನೆ ಸ್ಪರ್ಧಿಸುತ್ತಿರುವ ಬೋಯಿಂಗ್‌ಗೆ ಹಿನ್ನಡೆ ಉಂಟು ಮಾಡಲಿದೆ.

ಈ ವಾರದ ಆರಂಭದಲ್ಲಿ, ಇಬ್ಬರು ಗಗನಯಾತ್ರಿಗಳಿಗೆ ಅವಶ್ಯಕವಾದ ಹೆಚ್ಚುವರಿ ಆಹಾರ, ಪೂರೈಕೆಗಳು, ಮತ್ತು ಬಟ್ಟೆಗಳನ್ನು ಒದಗಿಸಲು ನಾಸಾ ಸ್ಪೇಸ್ಎಕ್ಸ್ ರಾಕೆಟ್ ಒಂದನ್ನು ಬಳಸಿಕೊಂಡಿತ್ತು.

ಕಳೆದ ತಿಂಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಗಗನಯಾತ್ರಿಗಳು ಭೂಮಿಗೆ ಯಶಸ್ವಿಯಾಗಿ ಮರಳುವ ಕುರಿತು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದು, ಸ್ಟಾರ್‌ಲೈನರ್ ಸಾಮರ್ಥ್ಯ ನಿಜಕ್ಕೂ ಉತ್ತಮವಾಗಿದೆ ಎಂದಿದ್ದರು.

ನಿವೃತ್ತ ನೌಕಾಪಡೆಯ ಹೆಲಿಕಾಪ್ಟರ್ ಪೈಲಟ್ ಆಗಿರುವ ಸುನಿತಾ ವಿಲಿಯಮ್ಸ್ ಅವರಿಗೆ ಐಎಸ್ಎಸ್‌ಗೆ ಇದು ಮೂರನೇ ಬಾರಿಯ ಭೇಟಿಯಾಗಿದೆ. ಮಾಜಿ ಯುದ್ಧ ವಿಮಾನ ಪೈಲಟ್ ಆಗಿರುವ ಬುಚ್ ವಿಲ್ಮೋರ್ ಸಹ ಈ ಹಿಂದೆ‌ ಎರಡು ಬಾರಿ ಬಾಹ್ಯಾಕಾಶ ಯಾತ್ರೆ ನಡೆಸಿದ ಅನುಭವಿಯಾಗಿದ್ದಾರೆ.

ನಾವು ಬಾಹ್ಯಾಕಾಶ ನಿಲ್ದಾಣದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಹೊಂದಿದ್ದೇವೆ. ಇದು ಒಂದು ರೀತಿ ನನಗೆ ಮರಳಿ ಮನೆಗೆ ಬಂದ ಅನುಭವ ನೀಡುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತಂಡದೊಂದಿಗೆ ಇಲ್ಲಿ ಕಾರ್ಯಾಚರಿಸುವುದು ಒಂದು ಉತ್ತಮ ಅನುಭವವಾಗಿದೆ

ಸುನಿತಾ ವಿಲಿಯಮ್ಸ್

ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಯೋಜನೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಮತ್ತು ಮರಳುವ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಬಹುದು ಎಂದು ನಾಸಾ ಆಶಾ ಭಾವನೆ ಹೊಂದಿತ್ತು. ಈ ಉದ್ದೇಶಕ್ಕಾಗಿ ನಾಸಾ ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಅನ್ನು 2020ರಿಂದ ಬಳಸುತ್ತಿತ್ತು.

ಬಾಹ್ಯಾಕಾಶದಲ್ಲಿ ಸುದೀರ್ಘ ಅವಧಿ

ಇವರಿಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ಕಳೆಯುತ್ತಾರಾದರೂ, ಇತರ ಗಗನಯಾತ್ರಿಗಳು ಇವರಿಗಿಂತಲೂ ಹೆಚ್ಚು ಸಮಯವನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.

1990ರ ದಶಕದ ಮಧ್ಯಭಾಗದಲ್ಲಿ, ರಷ್ಯನ್ ಕಾಸ್ಮೋನಾಟ್ ವಲೇರಿ ಪೋಲಿಯಾಕೊವ್ ಮಿರ್ ಬಾಹ್ಯಾಕಾಶ ನಿಲ್ದಾಣದಲ್ಲಿ 437 ದಿನಗಳನ್ನು ಕಳೆದಿದ್ದರು. ಕಳೆದ ವರ್ಷ, ಫ್ರಾಂಕ್ ರುಬಿಯೋ ಅವರು ಐಎಸ್ಎಸ್‌ನಲ್ಲಿ 371 ದಿನಗಳನ್ನು ಕಳೆದು, ಭೂಮಿಗೆ ಮರಳಿ ಆಗಮಿಸಿದ್ದರು. ಬಾಹ್ಯಾಕಾಶದಲ್ಲಿ ಅತ್ಯಂತ ದೀರ್ಘಾವಧಿಗೆ ಉಳಿದುಕೊಂಡ ಅಮೆರಿಕನ್ ಎಂಬ ದಾಖಲೆ ಫ್ರಾಂಕ್ ರುಬಿಯೋ ಹೆಸರಿನಲ್ಲಿದೆ.

ಈಗ ಐಎಸ್ಎಸ್‌ನಲ್ಲಿರುವ ರಷ್ಯಾದ ಒಲೆಗ್ ಕೊನೊನೆಂಕೋ ಅವರು ತನ್ನ ವೃತ್ತಿಜೀವನದಾದ್ಯಂತ 1,000ಕ್ಕೂ ಹೆಚ್ಚು ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದ ಮೊದಲ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ.

sunita williams
ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)

ಗಗನಯಾತ್ರಿಗಳ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮ

  • ಬಾಹ್ಯಾಕಾಶ ಅಸ್ವಸ್ಥತೆ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಅಥವಾ ಬಾಹ್ಯಾಕಾಶ ನೌಕೆಯಂತಹ ಬಾಹ್ಯಾಕಾಶದಲ್ಲಿ ಭೂಮಿಗಿಂತ ಗುರುತ್ವಾಕರ್ಷಣೆ ಅತ್ಯಂತ ಕಡಿಮೆಯಿರುತ್ತದೆ. ಇದು ತಲೆನೋವು, ವಾಕರಿಕೆ, ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಒಳಗೊಂಡ ಬಾಹ್ಯಾಕಾಶ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಭೂಮಿಯಲ್ಲಿ ಗುರುತ್ವಾಕರ್ಷಣೆ ನಮ್ಮ ಮೇಲೆ ಪರಿಣಾಮ ಉಂಟುಮಾಡಿ, ನಮ್ಮ ಕಿವಿಯ ಹಿಂಭಾಗದಲ್ಲಿರುವ ವೆಸ್ಟಿಬುಲಾರ್ ಆರ್ಗನ್ ಎಂಬ ಸಣ್ಣ ಅಂಗ ನಮ್ಮ ಸಮತೋಲನ ಕಾಪಾಡಿಕೊಳ್ಳಲು ನೆರವು ನೀಡುತ್ತದೆ. ಈ ಅಂಗ ಗುರುತ್ವಾಕರ್ಷಣೆ ಮತ್ತು ವೇಗಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿದ್ಯುತ್ ಸಂಕೇತಗಳನ್ನಾಗಿಸಿ, ಮೆದುಳಿಗೆ ಕಳುಹಿಸುತ್ತದೆ. ಭೂಮಿಯಲ್ಲಿ ವೆಸ್ಟಿಬುಲಾರ್ ಅಂಗಗಳು ಮೆದುಳಿಗೆ ನಿರಂತರವಾಗಿ ಗುರುತ್ವಾಕರ್ಷಣೆಯ ಸಂಕೇತ ನೀಡಿ, ದೇಹದ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯ ಕೊರತೆಯ ಕಾರಣದಿಂದ ಮೆದುಳಿಗೆ ರವಾನೆಯಾಗುವ ವೆಸ್ಟಿಬುಲಾರ್ ಅಂಗದ ಸಂಕೇತಗಳು ಬದಲಾಗಿ, ಬಾಹ್ಯಾಕಾಶ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಹಾಗೆಂದು ಇದೇನು ಶಾಶ್ವತ ಸಮಸ್ಯೆಯಲ್ಲ. ಬಾಹ್ಯಾಕಾಶದಲ್ಲಿ ಕೆಲವು ದಿನಗಳನ್ನು ಕಳೆದಂತೆ, ಮೆದುಳು ಹೊಸ ಸಂಕೇತಗಳಿಗೆ ಹೊಂದಿಕೊಂಡು, ಬಾಹ್ಯಾಕಾಶ ಅಸ್ವಸ್ಥತೆ ದೂರಾಗುತ್ತದೆ.

  • ಬಾಹ್ಯಾಕಾಶದಲ್ಲಿ ಮುಖ ಊದುವಿಕೆ: ಭೂಮಿಯಲ್ಲಿ ರಕ್ತ ಮತ್ತು ದೇಹದ ದ್ರವಗಳು ದೇಹದ ಕೆಳಭಾಗಕ್ಕೆ ಚಲಿಸುತ್ತವೆ. ಆದರೆ ಬಾಹ್ಯಾಕಾಶದಲ್ಲಿ, ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ ದ್ರವಗಳು ಕೆಳಗೆ ಚಲಿಸುವ ಬದಲು ಮೇಲಕ್ಕೆ ಸಾಗಿ, ಮುಖ ಊದಿಕೊಳ್ಳುತ್ತದೆ. ಬಾಹ್ಯಾಕಾಶದಲ್ಲಿ, ಮೂಗಿನಲ್ಲಿರುವ ಲೋಳೆಯ ಪೊರೆಗಳೂ ಊದಿಕೊಂಡು, ಗಗನಯಾತ್ರಿಗಳಿಗೆ ಮೂಗು ಕಟ್ಟಿದಂತಾಗುತ್ತದೆ. ಬಾಹ್ಯಾಕಾಶದಲ್ಲಿ ಕೆಲಸಮಯ ಕಳೆದ ಬಳಿಕ, ದೈಹಿಕ ದ್ರವಗಳು ಸಮತೋಲನ ಹೊಂದಿ, ಮುಖದ ಊದುವಿಕೆ ಕೆಲವು ವಾರಗಳಲ್ಲಿ ಇಳಿಕೆ ಕಾಣುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಭೂಮಿಗೆ ಮರಳಿದ ಬಳಿಕ ಎದ್ದು ನಿಲ್ಲುವ ಸಂದರ್ಭಗಳಲ್ಲಿ ಗಗನಯಾತ್ರಿಗಳಿಗೆ ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಎನ್ನಲಾಗುತ್ತದೆ. ಭೂಮಿಯಲ್ಲಿ ಗುರುತ್ವಾಕರ್ಷಣೆ ಹೆಚ್ಚಿದ್ದು, ಹೃದಯ ರಕ್ತವನ್ನು ತಲೆಗೆ ಪಂಪ್ ಮಾಡಲು ಹೆಚ್ಚು ಪ್ರಯತ್ನ ಪಡಬೇಕಾಗುವ ಕಾರಣದಿಂದ ಈ ಪರಿಸ್ಥಿತಿ ಉಂಟಾಗುತ್ತದೆ. ಬಾಹ್ಯಾಕಾಶದಲ್ಲಿ ರಕ್ತ ಸುಲಭವಾಗಿ ಸಂಚರಿಸುವುದರಿಂದ ರಕ್ತನಾಳಗಳು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ಎದ್ದು ನಿಲ್ಲುವಾಗ ತಲೆಸುತ್ತು ಬರುತ್ತದೆ. ದೇಹ ಭೂಮಿಗೆ ಹೊಂದಿಕೊಳ್ಳುತ್ತಿದ್ದಂತೆ ಈ ಸಮಸ್ಯೆಯೂ ಪರಿಹಾರಗೊಳ್ಳುತ್ತದೆ.

  • ಮೂಳೆಗಳು ಮತ್ತು ಮಾಂಸಖಂಡಗಳು ದುರ್ಬಲವಾಗುವುದು: ಬಾಹ್ಯಾಕಾಶದಲ್ಲಿ ಸುದೀರ್ಘ ಸಮಯ ಕಳೆದಾಗ, ಮಾಂಸಖಂಡಗಳು ಮತ್ತು ಮೂಳೆಗಳು, ಅದರಲ್ಲೂ ಬೆನ್ನಿನ ಕೆಳಭಾಗದ ಮೂಳೆಗಳು ದುರ್ಬಲಗೊಳ್ಳುತ್ತವೆ. ಭೂಮಿಯಲ್ಲಿ ಗುರುತ್ವಾಕರ್ಷಣೆಯ ಕಾರಣದಿಂದಾಗಿ ಮಾನವರು ದೇಹದ ಕೆಳಭಾಗವನ್ನು ಅರಿವಿಲ್ಲದೆಯೂ ಬಳಸುತ್ತಿರುತ್ತಾರೆ. ಆದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯ ಕೊರತೆಯಿಂದಾಗಿ ನಿಲ್ಲಲು ಅಥವಾ ಚಲಿಸಲು ಕಾಲುಗಳ ಅವಶ್ಯಕತೆಯಿಲ್ಲ. ಇದರ ಪರಿಣಾಮವಾಗಿ ಮೂಳೆಗಳು ಸವೆತಕ್ಕೊಳಗಾಗಿ, ಶಕ್ತಿ ಮತ್ತು ಸಹಿಷ್ಣುತೆ ಕಡಿಮೆಯಾಗುತ್ತದೆ. ಇದನ್ನು ತಡೆಯಲು ಔಷಧಗಳ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಗಗನಯಾತ್ರಿಗಳು ಇದಕ್ಕಾಗಿ ಪ್ರತಿದಿನವೂ ಎರಡು ಗಂಟೆಗಳಷ್ಟು ಐಎಸ್ಎಸ್ ನಲ್ಲಿ ವ್ಯಾಯಾಮ ನಡೆಸುತ್ತಾರೆ.

  • ಬಾಹ್ಯಾಕಾಶ ನೌಕೆಉ ವೈರಾಣು ಅಪಾಯ: ಸೂಕ್ಷ್ಮ ಗುರುತ್ವಾಕರ್ಷಣೆ ಕೇವಲ ಮೂಳೆಗಳು ಮತ್ತು ಮಾಂಸಖಂಡಗಳಿಗೆ ಸೀಮಿತವಲ್ಲ. ಅಪೋಲೋ 7 ಯೋಜನೆಯಲ್ಲಿ, ಮೂವರು ಗಗನಯಾತ್ರಿಗಳಿಗೆ ಶೀತ ಉಂಟಾಗಿತ್ತು. ಐಎಸ್ಎಸ್‌ನಲ್ಲಿ ಹಲವಾರು ಗಗನಯಾತ್ರಿಗಳಿಗೆ ಚರ್ಮದ ಸಮಸ್ಯೆ ಉಂಟಾಗಿತ್ತು. ಬಾಹ್ಯಾಕಾಶ ಪ್ರಯಾಣದಿಂದ, ಸರ್ಪಸುತ್ತು, ಚಿಕನ್‌ಪಾಕ್ಸ್‌ನಂತಹ ವೈರಾಣುಗಳು ಮರಳಿ ಸಕ್ರಿಯಗೊಳ್ಳುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಇಂತಹ ವೈರಾಣುಗಳು ದೇಹದಲ್ಲಿ ಸುದೀರ್ಘ ಕಾಲ ಉಳಿದುಕೊಂಡು, ಸಮಸ್ಯೆ ಉಂಟುಮಾಡದಿರಬಹುದು. ಆದರೆ, ಬಾಹ್ಯಾಕಾಶದಲ್ಲಿ ಅವು ಮರಳಿ ಸಕ್ರಿಯವಾಗುವ ಸಾಧ್ಯತೆಗಳಿವೆ.

  • ಬಾಹ್ಯಾಕಾಶದಲ್ಲಿ ವಿಕಿರಣಗಳು ಹೆಚ್ಚೇ?: ಬಾಹ್ಯಾಕಾಶದಲ್ಲಿ ವಾತಾವರಣ ಇಲ್ಲದಿರುವುದರಿಂದ ವಿಕಿರಣಗಳು ಹೆಚ್ಚು ತೀಕ್ಷ್ಣವಾಗಿರುತ್ತವೆ. ಇಂತಹ ತೀಕ್ಷ್ಣ ವಿಕಿರಣಗಳು ಮಾನವ ದೇಹದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರುತ್ತವೆ. ಭೂಮಿಯಲ್ಲಿ ಇರುವ ವಾತಾವರಣ ನಮಗೆ ಉಸಿರಾಡಲು ಮತ್ತು ಯುವಿ ಕಿರಣಗಳಿಂದ ರಕ್ಷಿಸಿಕೊಳ್ಳಲು ಬೇಕಾದ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಆದರೆ ವಾತಾವರಣದ ಕೊರತೆಯಿಂದಾಗಿ, ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಭೂಮಿಗಿಂತ ಹೆಚ್ಚಿನ ವಿಕಿರಣಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ವಿಕಿರಣಗಳಿಗೆ ತುತ್ತಾಗುವುದು ಕ್ಯಾನ್ಸರ್ ರೀತಿಯ ಕಾಯಿಲೆಗಳನ್ನು ಉಂಟುಮಾಡಬಲ್ಲದು. ಐಎಸ್ಎಸ್‌ನಲ್ಲಿ ಇದಕ್ಕಾಗಿ ಜಲಜನಕ ಭರಿತ ವಸ್ತುಗಳಾದ ಪಾಲಿಥೈಲೀನ್‌ಗಳನ್ನು ಹೆಚ್ಚಾಗಿ ಬಳಸುವ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ. ಇದು ಗಗನಯಾತ್ರಿಗಳು ವಿಕಿರಣಗಳಿಗೆ ತುತ್ತಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶ ಉಡುಪು, ಹೆಲ್ಮೆಟ್‌ಗಳನ್ನು ಧರಿಸಬೇಕಾಗುತ್ತದೆ.

  • ಕಡಿಮೆ ಸ್ಥಳಾವಕಾಶ ನೀಡುವ ಒತ್ತಡ: ಐಎಸ್ಎಸ್ ತುದಿಯಿಂದ ತುದಿಗೆ 357 ಅಡಿಗಳಷ್ಟು (ಬಹುತೇಕ ಫುಟ್‌ಬಾಲ್‌ ಮೈದಾನದಷ್ಟು) ಉದ್ದವಿದ್ದು, ಹಿಂದಿನ ಬಾಹ್ಯಾಕಾಶ ನೌಕೆಗಳಿಗಿಂತ ಹೆಚ್ಚು ಸ್ಥಳಾವಕಾಶ ಹೊಂದಿದೆ. ಆದರೆ ಭೂಮಿಗೆ ಹೋಲಿಸಿದರೆ, ಅಲ್ಲಿ ಚಟುವಟಿಕೆಗಳಿಗೆ ಅತ್ಯಂತ ಕಡಿಮೆ ಸ್ಥಳಾವಕಾಶವಿದೆ. ತಿಂಗಳುಗಳ ಕಾಲ ಕನಿಷ್ಠ ಸ್ಥಳಾವಕಾಶದಲ್ಲಿ ಕೆಲಸ, ಜೀವನ ನಡೆಸುವುದು ಗಗನಯಾತ್ರಿಗಳಲ್ಲಿ ಒತ್ತಡ ಸೃಷ್ಟಿಸುವ ಸಾಧ್ಯತೆಗಳಿವೆ. ಒತ್ತಡಗಳನ್ನು ಕಡಿಮೆಗೊಳಿಸುವ ಸಲುವಾಗಿ, ಗಗನಯಾತ್ರಿಗಳು ಅವರ ಕುಟುಂಬದವರೊಡನೆ, ಸ್ನೇಹಿತರೊಡನೆ ಸಂವಹನ ನಡೆಸಲು ಅವಕಾಶವಿದೆ. ಬಾಹ್ಯಾಕಾಶ ಆಹಾರವನ್ನೂ ಈಗ ಉತ್ತಮಗೊಳಿಸಲಾಗಿದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com