ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)

ಗೋಲನ್ ಹೈಟ್ಸ್ ಎನ್ನುವುದು ಇಸ್ರೇಲ್ ಮತ್ತು ಸಿರಿಯಾ ನಡುವಿನ ಒಂದು ವಿವಾದಾತ್ಮಕ ಪ್ರದೇಶವಾಗಿದ್ದು, ಇಸ್ರೇಲ್ ಇದನ್ನು 1967ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)
Updated on
  • ಕಳೆದ ವಾರದ ಅವಧಿಯಲ್ಲಿ, ಇಸ್ರೇಲ್ ಲೆಬನಾನ್ ಮತ್ತು ಇರಾನ್‌ಗಳಲ್ಲಿ ಎರಡು ಪ್ರಮುಖ ಹತ್ಯೆಗಳನ್ನು ನಡೆಸಿತ್ತು ಎನ್ನಲಾಗಿದೆ.

  • ಲೆಬನಾನ್‌ನಲ್ಲಿ, ಇಸ್ರೇಲಿ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಜೆಟ್‌ಗಳು ಓರ್ವ ಹೆಜ್ಬೊಲ್ಲಾ ಕಮಾಂಡರ್‌ನ ಹತ್ಯೆಗೈದವು. ಅದಾದ ಕೆಲ ಸಮಯದಲ್ಲಿ, ಓರ್ವ ಪ್ರಮುಖ ಹಮಾಸ್ ಮುಖಂಡ ಇರಾನಿನಲ್ಲಿ ಹತ್ಯೆಗೀಡಾದರು.

  • ಇವೆರಡು ಅನಿರೀಕ್ಷಿತ ಘಟನೆಗಳು ಇಸ್ರೇಲ್‌ಗೆ ಪ್ರಮುಖ ಗುಪ್ತಚರ ಯಶಸ್ಸುಗಳಾಗಿವೆ.

ಕಳೆದ ವಾರ, ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಯ ಉನ್ನತ ಹಂತದ ಕಮಾಂಡರ್ ಒಬ್ಬರನ್ನು ಮಾರಕ ದಾಳಿ ನಡೆಸಿ ಹತ್ಯೆಗೈದುದರ ಜವಾಬ್ದಾರಿಯನ್ನು ಇಸ್ರೇಲ್ ಹೊತ್ತುಕೊಂಡಿತು. ಅದಾಗಿ ಕೆಲವೇ ಗಂಟೆಗಳ ಬಳಿಕ, ಇರಾನ್‌ನಲ್ಲಿ ಓರ್ವ ಪ್ರಮುಖ ಹಮಾಸ್ ಮುಖಂಡನ ಹತ್ಯೆಯನ್ನು ಇಸ್ರೇಲ್ ನಡೆಸಿದೆ ಎಂಬ ಅನುಮಾನವೂ ಮೂಡಿತು.

ಇವೆರಡು ಇತ್ತೀಚಿನ ಅನಿರೀಕ್ಷಿತ ಹತ್ಯೆಗಳು ಇಸ್ರೇಲ್ ಪಾಲಿಗೆ ಪ್ರಮುಖ ಗುಪ್ತಚರ ಗೆಲುವಾಗಿದ್ದು, ತನ್ನ ಎದುರಾಳಿಗಳನ್ನು ಅವರ ಅರಿವಿಗೆ ಕಿಂಚಿತ್ತೂ ಬರದಂತೆ ಗಮನಿಸುವ ಮತ್ತು ನಿಖರವಾಗಿ ಅವರ ಮೇಲೆ ದಾಳಿ ನಡೆಸುವ ತನ್ನ ಸಾಮರ್ಥ್ಯವನ್ನು ಇಸ್ರೇಲ್ ಪ್ರದರ್ಶಿಸಿದೆ ಎಂದು ಮಧ್ಯ ಪೂರ್ವದ ಭದ್ರತೆ ಮತ್ತು ಭಯೋತ್ಪಾದನಾ ವಿರೋಧಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಇಸ್ರೇಲ್ ಕೈಗೊಂಡ ಕ್ರಮಗಳ ಪರಿಣಾಮಗಳು ಏನಾಗಬಹುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇಸ್ರೇಲ್ ನಡೆಸಿದೆ ಎನ್ನಲಾದ ಎರಡು ಹತ್ಯೆಗಳಿಗೆ ಪ್ರತಿಯಾಗಿ, ಇರಾನ್ ಮತ್ತು ಹೆಜ್ಬೊಲ್ಲಾ, ಹಮಾಸ್‌ನಂತಹ ಅದರ ಸಹಯೋಗಿಗಳು ತೀವ್ರ ಪ್ರತಿಕ್ರಿಯೆ ನೀಡುವ ಸಾಧ್ಯತೆಗಳಿದ್ದು, ಇದು ಕಳವಳಕ್ಕೆ ಕಾರಣವಾಗಿದೆ. ಇಸ್ರೇಲ್ ವಿರುದ್ಧವೇನಾದರೂ ದಾಳಿ ನಡೆದರೆ, ಇದರಿಂದ ಇಸ್ರೇಲಿ ಸಾವುನೋವುಗಳು ಸಂಭವಿಸಿ, ಮಧ್ಯ ಪೂರ್ವದ ಸ್ಥಿರತೆ ಇನ್ನಷ್ಟು ಕುಸಿಯುವ ಸಾಧ್ಯತೆಗಳಿವೆ.

ಲೆಬನಾನ್‌ನಲ್ಲಿನ ದಾಳಿ

ಜುಲೈ 30, ಮಂಗಳವಾರದಂದು, ಇಸ್ರೇಲಿ ಯುದ್ಧ ವಿಮಾನಗಳು ಲೆಬನಾನ್ ರಾಜಧಾನಿ ಬೈರೂತ್ ಮೇಲೆ ದಾಳಿ ನಡೆಸಿ, ಹೆಜ್ಬೊಲ್ಲಾ ಸಂಘಟನೆಯ ಕಮಾಂಡರ್ ಫೌದ್ ಶುಕರ್‌ನನ್ನು ಹತ್ಯೆಗೈದವು.

ಶುಕರ್ ಹೆಜ್ಬೊಲ್ಲಾ ಸಂಘಟನೆಯ ಅತ್ಯುನ್ನತ ಮಿಲಿಟರಿ ಅಂಗವಾದ 'ಜಿಹಾದ್ ಕೌನ್ಸಿಲ್' ಸದಸ್ಯನಾಗಿದ್ದ ಮತ್ತು ಹೆಜ್ಬೊಲ್ಲಾ ಸಂಘಟನೆಯ ಮುಖಂಡ ಹಸನ್ ನಸ್ರೊಲ್ಲಾಗೆ ಮುಖ್ಯ ಸಲಹೆಗಾರನೂ ಆಗಿದ್ದ. ಅಮೆರಿಕಾ ಸರ್ಕಾರ ಶುಕರ್‌ನನ್ನು ಬೈರೂತ್‌ನಲ್ಲಿನ ಯುಎಸ್ ಮರೀನ್ ಕಾರ್ಪ್ಸ್ ಬ್ಯಾರಕ್‌ಗಳ ಮೇಲೆ 1983ರಲ್ಲಿ ನಡೆದ ಬಾಂಬ್ ದಾಳಿಗಳ ರೂವಾರಿ ಎಂದು ಆರೋಪಿಸಿ, ಆತನನ್ನು ಸೆರೆಹಿಡಿದವರಿಗೆ 5 ಮಿಲಿಯನ್ ಡಾಲರ್ ಇನಾಮು ಘೋಷಿಸಿತ್ತು.

ಇಸ್ರೇಲ್ ಡಿಫೆನ್ಸ್ ಫೋರ್ಸಸ್ ಇಸ್ರೇಲ್ ಆಡಳಿತದ ಗೋಲನ್ ಹೈಟ್ಸ್ ಪ್ರದೇಶದಲ್ಲಿ ಇತ್ತೀಚೆಗೆ ಹಲವಾರು ಜನರ ಸಾವಿಗೆ ಕಾರಣವಾದ ರಾಕೆಟ್ ದಾಳಿಯ ಹಿಂದೆ ಶುಕರ್ ಕೈವಾಡವಿತ್ತು ಎಂದು ದೂಷಿಸಿತ್ತು. ಈ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ತಾನು ಶುಕರ್‌ನನ್ನು ಹತ್ಯೆಗೈದಿರುವುದಾಗಿಯೂ ಇಸ್ರೇಲ್ ಹೇಳಿಕೊಂಡಿತ್ತು.

ಗೋಲನ್ ಹೈಟ್ಸ್ ಎನ್ನುವುದು ಇಸ್ರೇಲ್ ಮತ್ತು ಸಿರಿಯಾ ನಡುವಿನ ಒಂದು ವಿವಾದಾತ್ಮಕ ಪ್ರದೇಶವಾಗಿದ್ದು, ಇಸ್ರೇಲ್ ಇದನ್ನು 1967ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಈ ಪ್ರದೇಶ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಪ್ರದೇಶವಾಗಿದ್ದು, ಮಧ್ಯ ಪೂರ್ವದ ರಾಜಕೀಯದಲ್ಲಿ ಗೋಲನ್ ಹೈಟ್ಸ್ ಒಂದು ವಿವಾದದ ವಿಚಾರವಾಗಿಯೇ ಉಳಿದುಕೊಂಡಿದೆ.

ಪೆಂಟಗನ್‌ನ ಮಾಜಿ ರಾಜಕೀಯ ಮಿಲಿಟರಿ ವಿಶ್ಲೇಷಕರಾದ ಜೊನಾಥನ್ ಲಾರ್ಡ್ ಅವರು ಶುಕರ್‌ನನ್ನು ಹತ್ಯೆಗೈಯಲು ಇಸ್ರೇಲ್ ನಡೆಸಿದ ದಾಳಿ ಬಹುತೇಕ ಯುದ್ಧ ಗುಪ್ತಚರ ಮಾಹಿತಿಯ ಆಧಾರದಲ್ಲಿ ನಡೆದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಸ್ರೇಲ್ ಒಂದು ನಿರ್ದಿಷ್ಟ ಸಮಯದಲ್ಲಿ ಶುಕರ್ ತಾಣವನ್ನು ಪತ್ತೆಹಚ್ಚಿದ್ದು, ಅವಕಾಶ ಸಿಕ್ಕಿದ ತಕ್ಷಣವೇ ವಿಳಂಬ ಮಾಡದೆ ಕಾರ್ಯಾಚರಣೆ ನಡೆಸಿದೆ.

ಸೆಂಟರ್ ಫಾರ್ ಎ ನ್ಯೂ ಅಮೆರಿಕನ್ ಸೆಕ್ಯುರಿಟಿ ಎಂಬ ಥಿಂಕ್ ಟ್ಯಾಂಕ್ ಸಂಸ್ಥೆಯ ಮಧ್ಯ ಪೂರ್ವ ಭದ್ರತಾ ಕಾರ್ಯಕ್ರಮ ನಿರ್ದೇಶಕರಾದ ಲಾರ್ಡ್ ಅವರು, ವಾಸ್ತವ ಸಮಯದಲ್ಲಿ ಓರ್ವ ವ್ಯಕ್ತಿಯ ಚಲನವಲನಗಳನ್ನು ಇಷ್ಟೊಂದು ಕರಾರುವಾಕ್ಕಾಗಿ ಗಮನಿಸಿರುವ ಇಸ್ರೇಲ್ ಕೌಶಲವನ್ನು ಶ್ಲಾಘಿಸಿದ್ದಾರೆ. ತನಗೆ ಬೇಕಾದ ವ್ಯಕ್ತಿಗಳು ಈಗ ಎಲ್ಲಿದ್ದಾರೆ, ಮುಂದಿನ ಇಷ್ಟು ಸಮಯದಲ್ಲಿ ಅವರು ಇಂತಹ ಸ್ಥಳದಲ್ಲಿ ಇರಲಿದ್ದಾರೆ ಎಂಬುದನ್ನು ನಿಖರವಾಗಿ ತಿಳಿಯುವ ಇಸ್ರೇಲ್‌ನ ಸಾಮರ್ಥ್ಯ ಅದಕ್ಕೆ ಇಂತಹ ಗುರುತರವಾದ ದಾಳಿಗಳನ್ನು ಯಶಸ್ವಿಯಾಗಿ ನಡೆಸುವ ಸಾಮರ್ಥ್ಯ ಒದಗಿಸಿದೆ ಎಂದು ಲಾರ್ಡ್ ವಿವರಿಸಿದ್ದಾರೆ.

ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ ಸಂಸ್ಥೆಯ ಭಯೋತ್ಪಾದನಾ ನಿಗ್ರಹ ತಜ್ಞರಾದ ಬ್ರೂಸ್ ಹಾಫ್‌ಮನ್ ಅವರು ಬೈರೂತ್ ದಾಳಿ ಅತ್ಯಂತ ಕರಾರುವಾಕ್ಕಾದ ದಾಳಿ ನಡೆಸುವ ಇಸ್ರೇಲಿನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಗುರಿಯ ಸುತ್ತಮುತ್ತ ಹೆಚ್ಚಿನ ಹಾನಿಯಾಗದಂತೆ ತಡೆದಿದೆ ಎಂದಿದ್ದಾರೆ. ಆದರೆ, ಶುಕರ್ ಹೊರತಾಗಿ, ಇಬ್ಬರು ಮಕ್ಕಳು ಸೇರಿದಂತೆ, ಮೂವರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಪ್ರತಿಷ್ಠೆ ಎಲ್ಲಕ್ಕಿಂತಲೂ ಮುಖ್ಯ!

ಬೈರೂತ್ ಮೇಲಿನ ದಾಳಿ ನಡೆದ ಕೆಲವೇ ಗಂಟೆಗಳ ಬಳಿಕ, ಇನ್ನಷ್ಟು ಮಹತ್ವದ ಘಟನೆಯೊಂದು ನಡೆಯಿತು: ಹಮಾಸ್ ಸಂಘಟನೆಯ ರಾಜಕೀಯ ವಿಭಾಗದ ಉನ್ನತ ನಾಯಕ, ಇಸ್ಮಾಯಿಲ್ ಹನಿಯೆಹ್ ಅನ್ನು ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಹತ್ಯೆಗೈಯಲಾಯಿತು. ಹನಿಯೆಹ್ ಇರಾನಿನ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಕೆಲ ಗಂಟೆಗಳ ಒಳಗಾಗಿ ಆತನ ಹತ್ಯೆಯೂ ನಡೆಯಿತು.

ಆರಂಭದಲ್ಲಿ, ಹನಿಯೆಹ್ ಹತ್ಯೆಗೆ ಸಂಬಂಧಿಸಿದ ವಿವರಗಳು ಅಸ್ಪಷ್ಟವಾಗಿದ್ದವು. ಹನಿಯೆಹ್ ವಾಯುದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ ಎಂದು ಆರಂಭಿಕ ವರದಿಗಳು ಹೇಳಿದ್ದವು. ಆದರೆ, ಆಗಸ್ಟ್ 1ರಂದು ಲಭ್ಯವಾದ ವರದಿಗಳ ಪ್ರಕಾರ, ಹನಿಯೆಹ್ ಟೆಹರಾನ್‌ನಲ್ಲಿ ನೆಲೆಸಿದ್ದ ಮನೆಯಲ್ಲಿ ತಿಂಗಳುಗಳ ಹಿಂದೆಯೇ ಯಾರೋ ತಂದಿಟ್ಟಿದ್ದ ಸ್ಫೋಟಕ ವಸ್ತು ಸ್ಫೋಟಗೊಂಡು ಹನಿಯೆಹ್ ಸಾವು ಸಂಭವಿಸಿದೆ. ಹನಿಯೆಹ್ ಸ್ಫೋಟಕವಿದ್ದ ಕೊಠಡಿಯಲ್ಲಿ ಇದ್ದುದು ಖಚಿತವಾದ ಬಳಿಕ, ದೂರದಿಂದಲೇ ಆ ಸ್ಫೋಟಕವನ್ನು ಸ್ಫೋಟಿಸಿ, ಆತನ ಹತ್ಯೆ ನಡೆಸಲಾಗಿದೆ.

ಹನಿಯೆಹ್ ಹತ್ಯೆಯ ಹಿಂದೆ ಇಸ್ರೇಲ್ ನೇರ ಕೈವಾಡವಿದೆ ಎಂದು ಆರೋಪಿಸಿದ ಇರಾನ್ ಮತ್ತು ಹಮಾಸ್, ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಶಪಥ ಕೈಗೊಂಡಿವೆ.

ಇಸ್ರೇಲ್ ಈ ಕೃತ್ಯದಲ್ಲಿ ತನ್ನ ಪಾತ್ರ ಇರುವುದನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ, ಮೊಸಾದ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ, ಇಸ್ರೇಲಿನ ಉನ್ನತ ಅಧಿಕಾರಿಗಳು ಅಕ್ಟೋಬರ್ 7ರ ದಾಳಿಗೆ ಕಾರಣರಾದ ಹಮಾಸ್ ನಾಯಕರು ಎಲ್ಲಿದ್ದರೂ ಅವರನ್ನು ಬಿಡುವುದಿಲ್ಲ ಎಂದಿದ್ದರು.

ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)
ಗಾಜಾ ಯುದ್ಧದ ನಡುವೆ ಬೀಜಿಂಗ್‌ನಲ್ಲಿ ಒಪ್ಪಂದಕ್ಕೆ ಫತಾ-ಹಮಾಸ್ ಸಹಿ! (ಜಾಗತಿಕ ಜಗಲಿ)

ಮೊಸಾದ್ ಸಂಸ್ಥೆ

ಮೊಸಾದ್ ಸಂಸ್ಥೆ ಇಸ್ರೇಲ್‌ನ ಹೊರಗೆ ತನ್ನ ಶತ್ರುಗಳ ಹತ್ಯೆ ನಡೆಸುವುದಕ್ಕೆ ಹೆಸರುವಾಸಿಯಾಗಿದೆ. ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದರ ಪ್ರಕಾರ, ಮೊಸಾದ್ ಏಜೆಂಟರು ಟೆಹರಾನ್‌ನಲ್ಲಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ನಿರ್ವಹಿಸುತ್ತಿದ್ದ ಅತಿಥಿ ಗೃಹದಲ್ಲಿ ರಹಸ್ಯವಾಗಿ ಸ್ಫೋಟಕ ಉಪಕರಣವೊಂದನ್ನು ಅಳವಡಿಸಿದ್ದರು. ಬಳಿಕ, ಇರಾನ್ ಒಳಗೇ ಯಾವುದೋ ಪ್ರದೇಶದಿಂದ ಅದನ್ನು ಸ್ಫೋಟಿಸಿದ್ದರು.

ಇರಾನ್ ಒಳಗೆ ಅತ್ಯಂತ ಸುರಕ್ಷಿತವಾದ ಸ್ಥಳಗಳಲ್ಲಿ ಒಂದಾಗಿದ್ದ ಆ ಅತಿಥಿ ಗೃಹದೊಳಗೆ ಇಸ್ರೇಲ್ ಏಜೆಂಟರು ಪ್ರವೇಶಿಸಲು ಅಗತ್ಯ ಸಂಪನ್ಮೂಲಗಳು ಮತ್ತು ಕೌಶಲಗಳನ್ನು ಪ್ರದರ್ಶಿಸಿದ್ದು ನಿಜಕ್ಕೂ ಅವಿಸ್ಮರಣೀಯ ಎಂದು ಹಾಫ್‌ಮನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 1, ಗುರುವಾರದಂದು ಇನ್ನೊಂದು ಮಹತ್ವದ ವಿಚಾರ ತಿಳಿಸಿದ ಇಸ್ರೇಲ್, ತಾನು ಹಮಾಸ್‌ನ ಮಿಲಿಟರಿ ವಿಭಾಗದ ಕಮಾಂಡರ್ ಆಗಿರುವ ಮೊಹಮ್ಮದ್ ದೇಫ್‌ನನ್ನು ಜುಲೈ ಮಧ್ಯಭಾಗದಲ್ಲಿ ಗಾಜಾ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಹತ್ಯೆಗೈದಿರುವುದಾಗಿ ಇಸ್ರೇಲ್ ಬಹಿರಂಗಪಡಿಸಿತ್ತು. ಆದರೆ ಹತ್ತಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರ ಹತ್ಯೆಗೆ ಕಾರಣವಾಗಿದೆ ಎನ್ನಲಾದ ಈ ದಾಳಿಯಲ್ಲಿ ದೇಫ್ ಸಾವನ್ನಪ್ಪಿದ ಕುರಿತು ಹಮಾಸ್ ಇನ್ನೂ ಖಾತ್ರಿಪಡಿಸಿಲ್ಲ.

ಇಸ್ರೇಲ್‌ನ ರಕ್ಷಣಾ ಸಚಿವರಾದ ಯೊಆವ್ ಗ್ಯಾಲಂಟ್ ಅವರು ಆಗಸ್ಟ್ 1ರಂದು ಐಡಿಎಫ್ ಹಾಗೂ ಇತರ ಇಸ್ರೇಲಿ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದು, ಅವುಗಳು ತಮ್ಮ ಕಾರ್ಯಾಚರಣೆಗಳನ್ನು ನಿಖರತೆಯಿಂದಲೂ, ವೃತ್ತಿಪರತೆಯಿಂದಲೂ ನಡೆಸಿವೆ ಎಂದಿದ್ದರು.

ಪೆಂಟಗನ್‌ನ ಮಾಜಿ ವಿಶ್ಲೇಷಕರಾದ ಲಾರ್ಡ್ ಅವರು ಇಸ್ರೇಲ್ ಯುದ್ಧತಂತ್ರದ ಗುಪ್ತಚರ ಮಾಹಿತಿ ಕಲೆಹಾಕುವಲ್ಲಿ ನಿಜಕ್ಕೂ ಎತ್ತಿದ ಕೈ ಎಂದು ಬಣ್ಣಿಸಿದ್ದಾರೆ. ಆದರೆ, ಅಕ್ಟೋಬರ್ 7ರ ದಾಳಿಗೂ ಮುನ್ನ ಇಸ್ರೇಲ್ ಗುಪ್ತಚರ ಸಮುದಾಯ ಭಾರೀ ವೈಫಲ್ಯ ಅನುಭವಿಸಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಕ್ಟೋಬರ್ 7ರ ದುರಂತ ನರಮೇಧದ ಬಳಿಕ, ಇಸ್ರೇಲಿನ ರಾಜಕೀಯ, ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಗಳು ವ್ಯಾಪಕ ಟೀಕೆ ಮತ್ತು ಆಕ್ರೋಶಕ್ಕೆ ತುತ್ತಾದವು. 1973ರ ಯೋಮ್ ಕಿಪ್ಪುರ್ ಯುದ್ಧದ ಬಳಿಕ, ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಗಂಭೀರವಾದ, ಭಾರೀ ಪ್ರಮಾಣದ ಈ ಭದ್ರತಾ ಉಲ್ಲಂಘನೆ ನಡೆದುದಾದರೂ ಹೇಗೆ ಎಂದು ಇಸ್ರೇಲ್ ಜನತೆ ಇಂದಿಗೂ ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ.

ಭದ್ರತಾ ವಿಭಾಗದ ಉನ್ನತ ಅಧಿಕಾರಿಗಳು ಹಮಾಸ್ ಒಂದು ಗಂಭೀರ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಎಚ್ಚರಿಕೆಗಳನ್ನು ಸಾರಾಸಗಟಾಗಿ ನಿರ್ಲಕ್ಷಿಸಿದ್ದರು. ಇಂತಹ ದಾಳಿ ಇಸ್ರೇಲ್ ಮೇಲೆ ನಡೆಯಲು ಸಾಧ್ಯವೇ ಇಲ್ಲ ಎಂದು ಅವರು ಪರಿಗಣಿಸಿದ್ದರಿಂದ, ಗಂಭೀರ ಅಪಾಯ ಎದುರಾದಾಗ ಅದಕ್ಕೆ ಹೇಗೆ ತಕ್ಷಣವೇ ಪ್ರತಿಕ್ರಿಯಿಸಬೇಕು ಎಂಬುದೂ ಅವರಿಗೆ ತೋಚಲಿಲ್ಲ. ಎಪ್ರಿಲ್ ತಿಂಗಳಲ್ಲಿ, ಇಸ್ರೇಲಿನ ಮಿಲಿಟರಿ ಗುಪ್ತಚರ ಮುಖ್ಯಸ್ಥ ನಾನು ನನಗೆ ವಹಿಸಿದ್ದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಕಾರಣ ನೀಡಿ, ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇಸ್ರೇಲ್ ಇತ್ತೀಚೆಗೆ ಹಲವರನ್ನು ಗುರಿಯಾಗಿಸಿ ದಾಳಿ, ಮತ್ತು ಹತ್ಯೆ ನಡೆಸುತ್ತಿರುವುದು ಅದು ಕಳೆದುಕೊಂಡಿರುವ ಅದರ ಗುಪ್ತಚರ ಇಲಾಖೆಗಳ ಗೌರವವನ್ನು ಮರಳಿ ಪಡೆಯುವ ಪ್ರಯತ್ನದ ಭಾಗವಾಗಿದೆ ಎಂದು ಹಾಫ್‌ಮನ್ ಅಭಿಪ್ರಾಯ ಪಟ್ಟಿದ್ದಾರೆ. ಇಸ್ರೇಲ್‌ನ ಹೆಜ್ಜೆಗಳು ಭವಿಷ್ಯದಲ್ಲಿ ನಾವು ಇಂತಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ಇರಾನ್‌ನಂತಹ ವಿರೋಧಿಗಳೆದುರು ಪ್ರಬಲವಾಗಿ ಕಾಣಿಸಿಕೊಳ್ಳಬೇಕು ಎಂಬ ಗುರಿಯನ್ನು ಹೊಂದಿವೆ.

"ಮಧ್ಯ ಪೂರ್ವ ಪ್ರದೇಶದಲ್ಲಿ ಪ್ರತಿಷ್ಠೆ, ಖ್ಯಾತಿಯೇ ಎಲ್ಲಕ್ಕಿಂತಲೂ ಮುಖ್ಯವಾದುದು ಎಂಬುದನ್ನು ಇಸ್ರೇಲ್ ಚೆನ್ನಾಗಿ ತಿಳಿದುಕೊಂಡಿದೆ. ಇಂತಹ ಸರಣಿ ಹತ್ಯೆಗಳ ಮೂಲಕ ಕಳೆದುಕೊಂಡಿದ್ದ ಗೌರವವನ್ನು ಮರಳಿ ಸಂಪಾದಿಸುವುದು ಇಸ್ರೇಲ್‌ಗೆ ಅಗತ್ಯ ಮತ್ತು ಅನಿವಾರ್ಯವಾಗಿತ್ತು" ಎಂದು ಹಾಫ್‌ಮನ್ ಅಭಿಪ್ರಾಯ ಪಟ್ಟಿದ್ದಾರೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com