ಚಂದ್ರನ ಗುಹೆ, ಮಂಗಳದ ಗರ್ಭಜಲ, ನಕ್ಷತ್ರ ಸ್ಫೋಟ, ಹಾಗೂ ಕುರುಡಾಗಲಿರುವ ಎಕ್ಸ್ ರೇ ಕಣ್ಣು! (ತೆರೆದ ಕಿಟಕಿ)

ಮಂಗಳನಲ್ಲಿ ಹಿಮರೂಪದಲ್ಲಿ ನೀರಿದೆ ಎನ್ನುವುದು ವಿಜ್ಞಾನಿಗಳು ಯಾವತ್ತಿಗೋ ನಿರ್ಧಾರಕ್ಕೆ ಬಂದಿರುವ ಅಂಶ. ಹಾಗೆಂದೇ, ಎಲಾನ್ ಮಸ್ಕ್ ಥರದ ಸಾಹಸಿಗರು ಮಂಗಳನ ಐಸ್ ಟೊಪ್ಪಿಗೆಗಳು ಕರಗುವಂತೆ, ಇಡೀ ಗ್ರಹ ಬೆಚ್ಚಗಾಗುವಂತೆ ಅಲ್ಲಿ ಅಣ್ವಸ್ತ್ರ ಸಿಡಿಸಬೇಕು ಎಂಬಂತಹ ಐಡಿಯಾಗಳನ್ನು ಬಿಚ್ಚಿಡುತ್ತಿರುವುದು.
file pic
ಸಂಗ್ರಹ ಚಿತ್ರonline desk
Updated on

ಹಗರಣ, ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ಗಲಾಟೆ, ಅತ್ಯಾಚಾರ ಇತ್ಯಾದಿಗಳ ಕುರಿತ ಸುದ್ದಿ-ವಿಶ್ಲೇಷಣೆಗಳನ್ನೆಲ್ಲ ಓದುತ್ತ ಒಂದು ಬಗೆಯ ವಿಷಣ್ಣತೆ ಆವರಿಸಿದ್ದರೆ ನಾವು ಮಾಡಬೇಕಿರುವ ಕೆಲಸ ಆಗಸದಾಚೆ ದೃಷ್ಟಿ ನೆಡಬೇಕಿರುವುದು. ವಿಶಾಲ ಬಾಹ್ಯಾಕಾಶದಲ್ಲಿ ಇತ್ತೀಚಿನ ದಿನಗಳಲ್ಲಿ ಏನೆಲ್ಲ ಅಚ್ಚರಿಯ ವಿದ್ಯಮಾನಗಳು ವರದಿಯಾಗಿವೆ ಗೊತ್ತೇ? ಅಲ್ಲೂ ಆತಂಕ-ವಿಷಾದದ ಛಾಯೆಗಳೆಲ್ಲ ಇದ್ದೇ ಇವೆ. ಖುಷಿ-ರೋಚಕತೆಗಳೂ ಇವೆ. ಹಾಗಾದರೆ ನಮ್ಮ ಭುವಿಯ ಚರ್ವಿತಚರ್ವಣ ಸುದ್ದಿಪ್ರವಾಹಗಳಿಂದ ತಪ್ಪಿಸಿಕೊಂಡು, ತೆರೆದ ಕಿಟಕಿಯಲ್ಲಿ ಕಣ್ಣು ನೆಟ್ಟು ಬೇರೊಂದು ಜಗತ್ತಿಗೆ ನೆಗೆದು ಸುತ್ತಾಡಿ ಬರೋಣವೇ? 

ಕತೆ ಶುರುಮಾಡಲಿದೆಯೇ ಗುಹೆ?

ನಿಮ್ಮ ಬಾಲ್ಯದಲ್ಲಿ ಕೇಳಿದ ಕತೆಗಳನ್ನು ಮನಸ್ಸಿನಲ್ಲೇ ಮತ್ತೊಮ್ಮೆ ಸಂದರ್ಶಿಸಿ ನೋಡಿ. ಅವುಗಳಲ್ಲಿ ಗುಹೆಯೆಂಬ ಅಚ್ಚರಿಯೊಂದಿತ್ತು. ಕಾಡಿನ ರಾಜ ಸಿಂಹನ ಅರಮನೆಯಾಗಿದ್ದ ಗುಹೆ, ಬಕಾಸುರನು ನಿದ್ರಿಸಿಕೊಂಡಿದ್ದ ಗುಹೆ, ಶಮಂತಕ ಮಣಿಯ ಬೆಂಬತ್ತಿ ಕೃಷ್ಣನು ಹೊಕ್ಕ ಗುಹೆ, ರಾಮ-ಸೀತಾ-ಲಕ್ಷ್ಮಣರು ತಂಗಿದ್ದ ಗುಹೆ… ಗುಹೆಗಳೆಂದರೆ ಒಂದುಬಗೆಯ ಕತಾಗರ್ಭ!

ಆಧುನಿಕ ಇತಿಹಾಸ ಕಥನದಲ್ಲೂ ಗುಹೆಗಳ ಪಾತ್ರ ದೊಡ್ಡದು. ಏಕೆಂದರೆ, ಮನುಷ್ಯ ಒಂದೆಡೆ ನೆಲೆ ನಿಂತಾಗ ಮಾತ್ರವೇ ಆತ ತನ್ನ ಅಭಿವ್ಯಕ್ತಿಗಳನ್ನು ಕಾಪಿಡುವುದಕ್ಕೆ ಸಾಧ್ಯವಾಯಿತು. ಆದಿಮಾನವ ಹಗಲಿನಲ್ಲಿ ಗುಹೆಯಿಂದಾಚೆ ಹೋಗಿ ಬೇಟೆಯನ್ನೋ, ಹಣ್ಣು-ಗಡ್ಡೆ ಗೆಣಸು ತರುವುದನ್ನೋ ಮಾಡುತ್ತಿದ್ದ. ಸಂಜೆ ಬಂದು ಗುಹೆಯ ಗೋಡೆಗಳ ಮೇಲೆ ತಾನು ನೋಡಿದ್ದು, ಅನುಭವಿಸಿದ್ದನ್ನೆಲ್ಲ ಆತ ಕೆತ್ತಿಡುವ ಪ್ರಯತ್ನ ಮಾಡಿದ್ದರಿಂದಲೇ ಇವತ್ತಿಗೆ ನಾವು ಅವುಗಳ ಆಧಾರದಲ್ಲಿ ಹಿಂದಿನವರ ಬೇಟೆ, ಆಹಾರ-ವಿಹಾರ, ಕುಟುಂಬ ರಚನೆ, ಅವರ ಯೋಚನಾ ವಿನ್ಯಾಸ ಇತ್ಯಾದಿಗಳ ಬಗ್ಗೆ ತರ್ಕದ ನೆಲೆಯಲ್ಲೊಂದು ಕಥನ ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗಿದೆ.

ಇಂಥ ಗುಹೆಗಳ ನೆನಪು ಈಗೇಕೆ ಎಂದಿರಾ? ಚಂದ್ರನಲ್ಲಿ ಸುರಂಗರೂಪದ ಗುಹಾಜಾಲವೊಂದನ್ನು ನಾಸಾ ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ. ಚಂದ್ರನನ್ನು ಸುತ್ತುವುದಕ್ಕೆ 2010ರಲ್ಲೇ ಕಳುಹಿಸಿದ್ದ ಸಾಧನದಲ್ಲಿದ್ದ ಮಿನಿಯೇಚರ್ ರೆಡಿಯೊ ಫ್ರೀಕ್ವೆನ್ಸಿ ಉಪಕರಣವು ನೀಡಿರುವ ಸಂಜ್ಞೆಗಳನ್ನು ಅಧ್ಯಯನ ನಡೆಸಿ ವಿಜ್ಞಾನಿಗಳು ಇಂಥದೊಂದು ತೀರ್ಮಾನಕ್ಕೆ ಬಂದಿದ್ದಾರೆ.

ಅವೆಷ್ಟೋ ಬಿಲಿಯನ್ ವರ್ಷಗಳ ಹಿಂದೆ ಜ್ವಾಲಾಮುಖಿ ಸ್ಫೋಟದಲ್ಲಿ ಲಾವಾ ಎಂಬ ಕುದಿಗಲ್ಲು ರಸವು ಮೇಲುಕ್ಕಿ ಪ್ರವಹಿಸಿತಷ್ಟೆ. ಈ ಲಾವಾ ಗಟ್ಟಿಯಾದಾಗ ಘನಪದರವನ್ನು ರೂಪಿಸುತ್ತದೆ. ಅದರ ಉಷ್ಣಾಂಶ ಇನ್ನಿತರ ಪ್ರಮಾಣಗಳನ್ನು ಅನುಸರಿಸಿ ಕೆಲವೆಡೆ ಲಾವಾ ಟ್ಯೂಬ್ ಎಂದು ಕರೆಯಲಾಗುವ ಗುಹೆಗಳು ರೂಪುಗೊಳ್ಳುತ್ತವೆ. ಇದರ ಮೇಲ್ಪದರವು ಕೆಲವೆಡೆ ಶಿಥಿಲವಾದಾಗ ಅದು ಲಾವಾ ಸುರಂಗಕ್ಕೆ ದಾರಿಮಾಡಿಕೊಡುವ ಪ್ರವೇಶವೊಂದನ್ನು ನಿರ್ಮಿಸುತ್ತದೆ. ಮೊದಲ ಬಾರಿಗೆ ಮಾನವನು ಚಂದ್ರನ ಮೇಲಿಳಿದ ಜಾಗದಿಂದ ಈಶಾನ್ಯ ದಿಕ್ಕಿಗೆ 230 ಮೈಲು ದೂರದಲ್ಲಿ ಚಂದ್ರಗುಹೆ ಇರುವುದಾಗಿ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. 

ಮುಂದೊಮ್ಮೆ ಚಂದ್ರನಲ್ಲಿ ಮಾನವ ಶಿಬಿರಗಳು ಆರಂಭವಾದಾಗ ಈ ಗುಹೆಗಳು ಆಶ್ರಯತಾಣವಾದಾವು. ಏಕೆಂದರೆ, ಚಂದ್ರನ ಸುದೀರ್ಘ ರಾತ್ರಿಗಳು ಅತ್ಯಂತ ಶೀತಮಯ. ಆ ಸಮಯದಲ್ಲಿ ತುಸುಮಟ್ಟಿಗೆ ಬೆಚ್ಚಗಿರುವುದಕ್ಕೆ, ಚಂದ್ರನ ಇನ್ನೊಂದು ಬೆಳಗು ಆಗುವವರೆಗೆ ಉಪಕರಣಗಳನ್ನು ಕಾಯ್ದುಕೊಳ್ಳುವುದಕ್ಕೆ ಈ ಗುಹೆ ಸಹಾಯ ಮಾಡೀತೇನೋ ಎಂದೆಲ್ಲ ವಿಶ್ಲೇಷಣೆಗಳಿವೆ. ಹಾಗಾದಲ್ಲಿ, ಮತ್ತೆ ಮನುಷ್ಯ ಗುಹೆಯಲ್ಲಿ ತಂಗಿಕೊಂಡು ಮುಂದೆ ಮತ್ಯಾವುದೋ ಬಿಲಿಯಾಂತರ ವರ್ಷಗಳಾಚೆಗಿನ ಪೀಳಿಗೆಗೆ ದಕ್ಕಬಹುದಾದ ಇತಿಹಾಸ ಕಥಾನಕದ ಇಟ್ಟಿಗೆಗಳನ್ನು ಗುಹೆಯಲ್ಲಿ ಬಿಟ್ಟುಹೋಗುವ ಪುನರಾವರ್ತಿತ ಮಹಾಕಥನವೊಂದಕ್ಕೆ ನಾಂದಿ ಹಾಡುವಂತಾಗುತ್ತದೆಯೇನೋ. 

ಅಂದಹಾಗೆ, ಚಂದ್ರನಲ್ಲಿ ಹೋಗಿ ಏನೇ ಮಾಡಿದರೂ ಅಲ್ಲಿನ ಸಾಹಸಗಳು ವಾಸ್ತವ್ಯ ಸ್ಥಾಪಿಸುವುದಕ್ಕಲ್ಲ. ಬದಲಿಗೆ ಮಂಗಳನಂಗಳಕ್ಕೋ ಮತ್ತೆಲ್ಲಿಗೋ ಭವಿಷ್ಯದಲ್ಲಿ ನೆಗೆಯುವುದಕ್ಕೆ ಮಾನವಗೆ ಚಂದ್ರನೊಂದು ಚಿಮ್ಮುಹಲಗೆ, ತರಬೇತಿ ಪಾಠಶಾಲೆ, ಸಂಪನ್ಮೂಲ ಸಂಗ್ರಹಣಾ ಸ್ಥಳ. ಹೀಗನ್ನುತ್ತಲೇ ಮಂಗಳಿನಿಂದಲೂ ಹೊರಚಿಮ್ಮಿದೆ ಒಂದು ಸಕಾರಾತ್ಮಕ ಮಿನುಗು. 

file pic
ಅನ್ಯಗ್ರಹಗಳ ಪ್ರಯಾಣಕ್ಕೆ ಮನುಷ್ಯರು ಮಾತ್ರವೇ ಹೊರಟುನಿಂತಿಲ್ಲ, ಗೊತ್ತಿರಲಿ! (ತೆರೆದ ಕಿಟಕಿ)

ಮಂಗಳನೊಡಲಲ್ಲೊಂದು ಮಹಾಸಮುದ್ರ?

ಮಂಗಳನಲ್ಲಿ ಹಿಮರೂಪದಲ್ಲಿ ನೀರಿದೆ ಎನ್ನುವುದು ವಿಜ್ಞಾನಿಗಳು ಯಾವತ್ತಿಗೋ ನಿರ್ಧಾರಕ್ಕೆ ಬಂದಿರುವ ಅಂಶ. ಹಾಗೆಂದೇ, ಎಲಾನ್ ಮಸ್ಕ್ ಥರದ ಸಾಹಸಿಗರು ಮಂಗಳನ ಐಸ್ ಟೊಪ್ಪಿಗೆಗಳು ಕರಗುವಂತೆ, ಇಡೀ ಗ್ರಹ ಬೆಚ್ಚಗಾಗುವಂತೆ ಅಲ್ಲಿ ಅಣ್ವಸ್ತ್ರ ಸಿಡಿಸಬೇಕು ಎಂಬಂತಹ ಐಡಿಯಾಗಳನ್ನು ಬಿಚ್ಚಿಡುತ್ತಿರುವುದು. ಆದರೆ, ಇತ್ತೀಚೆಗೆ ಮಂಗಳನ ಕುರಿತ ವೈಜ್ಞಾನಿಕ ಮಾಹಿತಿ ಆಕರಗಳನ್ನು ವಿಶ್ಲೇಷಿಸಿಕೊಂಡು ಹೊರಬಿದ್ದಿರುವ ತೀರ್ಮಾನ ಎಂದರೆ, ಮಂಗಳನೊಡಲಲ್ಲಿ ಸಮುದ್ರಸದೃಶ ಜಲರಾಶಿಯೊಂದಿದೆ ಅನ್ನೋದು! ಆದರೆ ಇದು ಸುಮಾರು 20 ಕಿಲೊಮೀಟರ್ ಆಳದಲ್ಲಿರುವುದರಿಂದ ಅದನ್ನು ಪಡೆದುಕೊಳ್ಳಲಾಗದು. ನಿಮಗೆ ಗೊತ್ತಿರಲಿ, ಭೂಮಿಯ ಮೇಲೆ ಸಹ ಅತಿ ಆಳಕ್ಕೆ ಕೊರೆಯಲಾಗಿರುವ ರಂಧ್ರ ಎಂದರೆ 12.2 ಕಿ.ಮೀ ಮಾತ್ರ, ರಷ್ಯದಲ್ಲಿ. ಭೂಮಿಯ ಆರು ಸಾವಿರ ಚಿಲ್ಲರೆ ಕಿಲೋಮೀಟರುಗಳ ವ್ಯಾಸಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ. ಹೀಗಾಗಿ ಮಂಗಳನಲ್ಲಿ 20 ಕಿ.ಮೀ. ಆಳದಲ್ಲಿ ನೀರು ಅನ್ನೋದು ಸುಮ್ಮನೇ ಓದಿಕೊಳ್ಳುವುದಕ್ಕೆ ಏನು ಮಹಾ ಅನ್ನಿಸಬಹುದಾದರೂ ರಂಧ್ರ ಕೊರೆದು ಅಷ್ಟು ಆಳಕ್ಕೆ ತಲುಪುವ ತಂತ್ರಜ್ಞಾನವಿನ್ನೂ ಅನ್ವೇಷಣೆಯಾಗಿಲ್ಲ. 

ಆದರೆ, ಮಂಗಳನ ಹೊಟ್ಟೆ ಒಳಗೆ ನೀರಿದೆ ಎಂಬ ಒಂದು ಅಂಶವೇ, ಬಿಲಿಯಾಂತರ ವರ್ಷಗಳ ಹಿಂದೆ ಆ ನೀರು ಗರ್ಭ ಸೇರುವುದಕ್ಕೂ ಮೊದಲು ಅಲ್ಲಿದ್ದಿರಬಹುದಾದ ಜೀವಜಾಲದ ಸಾಧ್ಯತೆಗಳ ಬಗ್ಗೆ ವಿಜ್ಞಾನಿಗಳಿಗೆ ಹೊಸನೋಟಗಳನ್ನು ಕೊಡುತ್ತಿದೆ. 

ಇಷ್ಟಕ್ಕೂ ಇದು ಹೇಗೆ ಇತ್ತೀಚಿನ ಸಂಶೋಧನೆಯಾಗಿ ಹೊರಹೊಮ್ಮಿದೆ ಎಂದಿರಾ? 2018 ಮತ್ತು 2022ರ ನಡುವೆ ಮಂಗಳನ ಮೇಲ್ಮೈ ಮೇಲೆ ಕಾರ್ಯನಿರ್ವಹಿಸಿರುವ ಇನ್ ಸೈಟ್ ಲ್ಯಾಂಡರ್ ಅಲ್ಲಿಂದ ನೆಲಕಂಪನದ ಮಾಹಿತಿಗಳನ್ನು ಕಳುಹಿಸಿತ್ತು. ಸೂಕ್ಷ್ಮ ಅಲೆಯೊಂದನ್ನು ಭೂಮಿ ಒಳಕ್ಕೆ ತೂರಿದಾಗ ತಳದಲ್ಲಿ ಅದನ್ನು ಯಾವೆಲ್ಲ ವಸ್ತುಗಳು ಸುಲಭಕ್ಕೆ ಬಿಟ್ಟುಕೊಡುತ್ತವೆ ಹಾಗೂ ಯಾವೆಲ್ಲ ಎಷ್ಟರಮಟ್ಟಿಗೆ ತಡೆಒಡ್ಡುತ್ತವೆ ಎಂಬುದು ಸಂಜ್ಞೆಗಳಲ್ಲಿ ದಾಖಲಾಗುತ್ತದೆ. ಇದೇ ಮಾದರಿಯನ್ನು ಭೂಮಿಯ ಮೇಲೆ ತೈಲನಿಕ್ಷೇಪಗಳನ್ನು ಪತ್ತೆ ಹಚ್ಚುವುದಕ್ಕೆ ಬಳಸುತ್ತಾರೆ. ಮಂಗಳನಲ್ಲಿ ಹೀಗೆಯೇ ಭೂಫಲಕ ಮತ್ತು ಕಂಪನಗಳ ಸೆಸ್ಮಿಕ್ ಮಾದರಿಗಳ ಮಾಹಿತಿ ಆಧಾರದಲ್ಲಿ ಆ ಗ್ರಹದೊಡಲಲ್ಲೊಂದು ಜಲರಾಶಿ ಇರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. 

ಸೆಪ್ಟೆಂಬರಿನಲ್ಲೊಂದು ಸ್ಫೋಟಕ ದೃಶ್ಯಾವಳಿ?

ಆಗಸ್ಟ್ ಅಂತ್ಯ ಮತ್ತು ಸೆಪ್ಟೆಂಬರ್ ಪ್ರಾರಂಭದ ವೇಳೆ ಆಕಾಶಕ್ಕೆ ಕಣ್ಣುನೆಟ್ಟರೆ ‘ಹೊಸ ನಕ್ಷತ್ರ’ದ ಪ್ರಜ್ವಲನವೊಂದು ಕಾಣಬಹುದು ಎಂಬುದು ವಿಜ್ಞಾನಿಗಳು ಹೇಳಿರುವ ಭವಿಷ್ಯ. ಇದು ವ್ಯಕ್ತಿಯ ಜೀವಮಾನದಲ್ಲಿ ಒಮ್ಮೆ ಕಾಣಬಹುದಾಗಿದ್ದು ಎಂಬ ಆಮಿಷವೂ ಇದೆ!

ಟಿ ಕೊರೊನೆ ಬೊರಿಯಾಲಿಸ್ (T Coronae Borealis) ಎಂಬುದು ಭೂಮಿಯಿಂದ 3,000 ಜ್ಯೋತಿರ್ವರ್ಷಗಳ ದೂರದಲ್ಲಿರುವ ಒಂದು ಕುಬ್ಜ ನಕ್ಷತ್ರ. ಅಂದರೆ ಬೆಳಕಿನಷ್ಟು ವೇಗದಲ್ಲಿ ಭೂಮಿಯಿಂದ ಪ್ರಯಾಣಿಸಿದರೆ ಆ ನಕ್ಷತ್ರವನ್ನು ತಲುಪುವುದಕ್ಕೆ ಮೂರು ಸಾವಿರ ವರ್ಷಗಳು ಹಿಡಿಯುತ್ತವೆ ಎಂದರ್ಥ. ಈ ನಕ್ಷತ್ರವು ಪಕ್ಕದ ಕೆಂಪು ದೈತ್ಯ ಆಕಾಶಕಾಯವೊಂದರಿಂದ ದ್ರವ್ಯಪದಾರ್ಥಗಳನ್ನು ಸೆಳೆದುಕೊಳ್ಳುತ್ತಿದೆ. ಈ ಪ್ರಕ್ರಿಯೆಯಲ್ಲಿ ಥರ್ಮೊನ್ಯೂಕ್ಲಿಯರ್ ಸ್ಫೋಟಗಳು ಆಗಾಗ T Coronae Borealis ಆಲಿಯಾಸ್ ಬ್ಲೇಜ್ ನಕ್ಷತ್ರದ ಮೇಲ್ಮೈನಲ್ಲಿ ಸಂಭವಿಸುತ್ತವೆ. ಹಾಗೆ ಸಹಸ್ರ ಸಹಸ್ರ ವರ್ಷಗಳ ಹಿಂದೆ ಸಂಭವಿಸಿದ್ದ ಸ್ಫೋಟದ ಬೆಳಕು ಈಗ ಸೆಪ್ಟೆಂಬರಿನಲ್ಲಿ ಭೂಮಿಯನ್ನು ತಲುಪಿಕೊಳ್ಳುತ್ತಿದೆ ಎನ್ನುವುದು ವೈಜ್ಞಾನಿಕ ಲೆಕ್ಕಾಚಾರ. 

ನಾಸಾಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಬ್ಲೇಜ್ ಸ್ಟಾರ್ 1217ನೇ ಇಸ್ವಿಯಲ್ಲಿ ಒಮ್ಮೆ ಕಂಡಿತ್ತು. ನಂತರ 1946ರಲ್ಲಿ ಕಂಡಿತ್ತು. ಆದರೆ ಈ ಬಾರಿ ನಮ್ಮಲ್ಲಿ ಬಾಹ್ಯಾಕಾಶಕ್ಕೆ ಕಣ್ಣು ನೆಟ್ಟಿರುವ ಜೇಮ್ಸ್ ವೆಬ್ ಥರದ ಟೆಲಿಸ್ಕೋಪುಗಳಿವೆ. ಇವುಗಳು ಗ್ರಹಿಸುವ ಬೆಳಕಿನ ಮಾಹಿತಿಯು ನಕ್ಷತ್ರಗಳ ಬಗ್ಗೆ ಇನ್ನೂ ನಿಖರ ಮಾಹಿತಿಗಳಿಗೆ, ಹೊಸ ಹೊಳಹುಗಳಿಗೆ ದಾರಿಮಾಡಿಕೊಟ್ಟೀತೇನೋ ಎಂಬ ನಿರೀಕ್ಷೆ-ಉಮೇದಿಗಳು ವಿಜ್ಞಾನಿಗಳ ಬಳಗದಲ್ಲಿವೆ. 

ಹೀಗೊಂದು ವಿದಾಯದ ವಿಷಾದ!

ಈ ಮೇಲಿನ ಸೆಪ್ಟೆಂಬರ್ ಸ್ಫೋಟದ ವಿದ್ಯಮಾನದಲ್ಲಿ ನಾವು ಚರ್ಚಿಸಿರುವುದು ಕಣ್ಣಿಗೆ ಕಾಣುವ ಬೆಳಕನ್ನು. ಆದರೆ, ಬೆಳಕೆಂದರೆ ಕಣ್ಣಿಗೆ ಕಾಣುವುದಷ್ಟೇ ಅಲ್ಲ. ವಿದ್ಯುತ್ಕಾಂತೀಯ ಅಲೆಗಳ ಗುಚ್ಛದಲ್ಲಿ ದೃಗ್ಗೋಚರ ಬೆಳಕು ಒಂದು ವಿಧವಷ್ಟೆ. ರೆಡಿಯೊ ಅಲೆ, ಮೈಕ್ರೊವೇವ್, ಅತಿಗೆಂಪು, ಅತಿನೇರಳೆ, ಎಕ್ಸ್ ರೆ, ಗಾಮಾ ಇವೆಲ್ಲವೂ ಬೆಳಕುಗಳೇ. 

ಭೂವಾತಾವರಣದಾಚೆ ಎಕ್ಸ್ ರೆ ಬೆಳಕನ್ನು ಹೀರಿ ವಿಶ್ಲೇಷಿಸುವ ಕೆಲಸವನ್ನು 25 ವರ್ಷಗಳಿಂದ ಮಾಡಿಕೊಂಡಿತ್ತು ನಾಸಾದ ಚಂದ್ರ ಎಕ್ಸ್ ರೆ ದೂರದರ್ಶಕ. ಭಾರತ ಸಂಜಾತ ಅಮೆರಿಕ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ ಅವರ ಗೌರವಾರ್ಥವಾಗಿ ಚಂದ್ರ ಎಕ್ಸ್ ರೆ ಎಂಬ ಹೆಸರು ಇದಕ್ಕೆ. ಹಬಲ್, ಇತ್ತೀಚಿನ ಜೆಮ್ಸ್ ಹಬ್ ದೂರದರ್ಶಕಗಳೆಲ್ಲ ದೃಗ್ಗೋಚರ ಬೆಳಕು ಹಾಗೂ ಅತಿಗೆಂಪು ಬೆಳಕುಗಳನ್ನು ಗ್ರಹಿಸಿ ನಕ್ಷತ್ರಗಳು ಹಾಗೂ ತಾರಾಮಂಡಲಗಳ ಅಧ್ಯಯನ ಮಾಡಿದರೆ, ಆಕಾಶಕಾಯಗಳು ಹೊರಸೂಸುವ ಎಕ್ಸ್ ರೆ ಕಿರಣಗಳನ್ನು ಗ್ರಹಿಸಿ ಅಧ್ಯಯನಕ್ಕೆ ಅನುವು ಮಾಡಿಕೊಡುತ್ತಿರುವ ಜಗತ್ತಿನ ಏಕೈಕ ದೂರದರ್ಶಕವೆಂದರೆ ಚಂದ್ರ ಎಕ್ಸ್ ರೆ ಟೆಲಿಸ್ಕೋಪ್. ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಸಹ ನಕ್ಷತ್ರಗಳು ಮತ್ತು ಕಪ್ಪುಕುಳಿಗಳ ಬಗ್ಗೆ ವೈಜ್ಞಾನಿಕ ಸಿದ್ಧಾಂತಗಳನ್ನು ರೂಪಿಸಿದ್ದರಾದ್ದರಿಂದ ಈ ದೂರದರ್ಶಕಕ್ಕೆ ಅವರ ಹೆಸರಿಟ್ಟಿದ್ದು ಸೂಕ್ತವೂ ಆಗಿತ್ತು. 

file pic
Target Killing: ವರ್ತಮಾನದ ಯುದ್ಧಗಳನ್ನು ಹೇಗೆ ಮಾಡಬೇಕೆಂಬುದನ್ನು ತೋರಿಸಿಕೊಡ್ತಿದೆ Israel! (ತೆರೆದ ಕಿಟಕಿ)

ಭೂವಾತಾವರಣದಾಚೆ ಸುತ್ತುತ್ತ ಈ ಬ್ರಹ್ಮಾಂಡವನ್ನು 13 ಬಿಲಿಯನ್ ಜ್ಯೋತಿರ್ವರ್ಷಗಳ ವಿಸ್ತಾರದವರೆಗೆ ನಿರುಕಿಸುತ್ತಿತ್ತು ಚಂದ್ರ ಎಕ್ಸ್ ರೆ. ವಿದ್ಯುತ್ಕಾಂತೀಯ ವಿಕಿರಣಗಳಲ್ಲಿ ಎಕ್ಸ್ ರೆ ಎನ್ನುವುದು ಅತ್ಯಂತ ದಟ್ಟ ಶಕ್ತಿಯ ಗುಚ್ಛ. ಈ ಕಿರಣಗಳು ಅಣುವಿನಿಂದ ಎಲೆಕ್ಟ್ರಾನ್ಸ್ ಬೇರ್ಪಡಿಸಬಲ್ಲಷ್ಟು ಶಕ್ತಿಶಾಲಿಯಾದ್ದರಿಂದ, ತೀರ ಅಗತ್ಯವಿರದೇ ಎಕ್ಸ್ ರೇ ಪರೀಕ್ಷೆಗೆ ಮಾನವ ದೇಹವನ್ನು ಒಡ್ಡಬಾರದೆಂಬ ವೈದ್ಯಕೀಯ ಎಚ್ಚರಿಕೆ ಯಾವತ್ತಿಗೂ ಇದೆ. ನಕ್ಷತ್ರವು ಅತಿಉಷ್ಣತೆಯಲ್ಲಿ  ಸ್ಫೋಟಗಳನ್ನು ನಡೆಸುವಾಗ, ಕಪ್ಪುಕುಳಿಗೆ ಬೀಳುವ ಮುಂಚೆ ಆಕಾಶಕಾಯಗಳು ಧಗಧಗಿಸಿ ಅತಿಹೆಚ್ಚು ಶಕ್ತಿ ಬಿಡುಗಡೆ ಮಾಡುವಾಗ ಈ ಎಕ್ಸ್ ರೆ ಕಿರಣಗಳು ಹೊರಸೂಸುವುದರಿಂದ ಅವನ್ನು ಗ್ರಹಿಸುವ ದೂರದರ್ಶಕವು ಬ್ರಹ್ಮಾಂಡದ ಕಾರ್ಯನಿರ್ವಹಣೆಗಳ ಬಗ್ಗೆ ವಿಜ್ಞಾನಿಗಳು ಸಿದ್ಧಾಂತಗಳನ್ನು ರೂಪಿಸಿಕೊಳ್ಳುವುದಕ್ಕೆ ನೆರವಾಗುತ್ತಿತ್ತು. 

ಇದೀಗ, 25 ವರ್ಷ ಪೂರೈಸಿರುವ ಚಂದ್ರ ದೂರದರ್ಶಕವನ್ನು ಮತ್ತೆ ಮುಂದುವರಿಸುವುದು ಬಹಳ ದುಬಾರಿಯಾಗುತ್ತದೆ ಎಂದು ಅಮೆರಿಕವು ಈ ನಿಟ್ಟಿನಲ್ಲಿ ಹಣಕಾಸು ಪೂರೈಕೆ ಕಡಿಮೆ ಮಾಡಿದೆ. ಹೀಗಾಗಿ, ಚಂದ್ರ ಎಕ್ಸ್ ರೆ ವ್ಯವಸ್ಥೆ ಕ್ರಮೇಣ ನೇಪಥ್ಯಕ್ಕೆ ಸರಿಯುವ ಸೂಚನೆಯನ್ನು ವಿಜ್ಞಾನಿಗಳ ಬಳಗ ಅದಾಗಲೇ ನೋವಿನಿಂದ ಒಪ್ಪಿಕೊಳ್ಳುವುದಕ್ಕೆ ಸಿದ್ಧವಾಗುತ್ತಿದೆ. 

ಭೂಮಂಡಲದ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಬಾಹ್ಯಾಕಾಶಕ್ಕೆ ಮುಖವಿಟ್ಟರೆ ಅಲ್ಲಿ ಹೊಸಬೆಳಕು, ಹುಮ್ಮಸ್ಸು, ಕುತೂಹಲ, ಸಾಹಸಗಳ ಜತೆ ಜತೆ ಆತಂಕ, ತಣ್ಣನೆಯ ವಿಷಾದಗಳೂ ಸೋಕುತ್ತವೆ. ಆದರೂ ಅಲ್ಲಿನ ಸುಖ-ದುಃಖಗಳಲ್ಲೊಂದು ಹೊಸಬಗೆಯಿದೆ!

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com