
ಹಮಾಸ್ ಉಗ್ರ ಸಂಘಟನೆಯ ಪ್ರಮುಖ ನಾಯಕ ಇಸ್ಮಾಯಿಲ್ ಹನಿಯೆ ಹತ್ಯೆಗೆ ಹೇಗೆ ಪ್ರತಿಕ್ರಿಯಿಸಬೇಕು ಅಂತಲೂ ಗೊತ್ತಾಗದ ರೀತಿಯಲ್ಲಿದೆ ಜಗತ್ತು. ಏಕೆಂದರೆ, ಯುದ್ಧದ ಪರಿಭಾಷೆಯನ್ನೇ ಇಸ್ರೇಲ್ ಬದಲಿಸಿದೆ.
ಅಕ್ಟೋಬರ್ 7ರಂದು ತನ್ನ ಮೇಲೆ ದಾಳಿ ಮಾಡಿ, ನಾಗರಿಕರನ್ನು ಕೊಂದು, ಒತ್ತೆಯಾಳುಗಳನ್ನು ಎತ್ತಿಕೊಂಡುಹೋದ ಹಮಾಸ್ ಉಗ್ರದಾಳಿಗೆ ಪ್ರತೀಕಾರವಾಗಿ ಮೊದಲಿಗೆ ಗಾಜಾಪಟ್ಟಿಯನ್ನು ಹೆಚ್ಚೂಕಡಿಮೆ ನೆಲಸಮಗೊಳಿಸಿರುವ ಇಸ್ರೇಲ್, ನಂತರದಲ್ಲಿ ಗುರಿನಿಯೋಜಿತ ಹತ್ಯೆಗೆ, ಟಾರ್ಗೆಟ್ ಕಿಲ್ಲಿಂಗ್’ಗೆ ಕೈ ಹಾಕಿದಂತಿದೆ. ಈ ವಿಷಯದಲ್ಲಿ ಇಸ್ರೇಲ್ ಪಿಎಚ್ಡಿಯನ್ನೇ ಮಾಡಿದೆ. ಮೂನಿಕ್ ಒಲಿಂಪಿಕ್ಸ್ ನಲ್ಲಿ ತನ್ನ ಕ್ರೀಡಾಳುಗಳನ್ನು ಕೊಂದವರನ್ನು ವರ್ಷಗಳ ಕಾಲ ಬೇರೆ ಬೇರೆ ದೇಶಗಳಲ್ಲಿ ಬೇಟೆ ಆಡಿ ಕೊಂದಿದ್ದ ಇಸ್ರೇಲ್ ಕತೆಗಳೆಲ್ಲ ಹಳೆಯದಾದವು. ಈಗದು ತನ್ನವರನ್ನು ಅಷ್ಟಾಗಿ ಘಟನಾಸ್ಥಳಕ್ಕೆ ಕಳುಹಿಸದೆಯೂ ತಂತ್ರಜ್ಞಾನ ಸಹಾಯದಿಂದ ನಿಯೋಜಿತ ಹತ್ಯೆಗಳನ್ನು ಮಾಡುವಂತೆ ಭಾಸವಾಗುತ್ತಿದೆ.
ಅಂದಹಾಗೆ, ಹನಿಯೆ ಹತ್ಯೆಯನ್ನು ಇಸ್ರೇಲ್ ಏನೂ ಒಪ್ಪಿಕೊಂಡಿಲ್ಲವಾದರೂ, ಹೊಡೆಸಿಕೊಂಡವರೂ ಸೇರಿದಂತೆ ಜಗತ್ತೆಲ್ಲ ಅದರ ಜವಾಬ್ದಾರಿಯನ್ನು ಇಸ್ರೇಲ್ ತಲೆಗೇ ಕಟ್ಟುತ್ತಿದ್ದಾರೆ. ತನ್ನ ನೆಲದಲ್ಲಾಗಿರುವ ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದೆ. ಅಯ್ಯೋ, ಇಸ್ರೇಲಿನ ನಡೆಯಿಂದ ಯುದ್ಧವು ಉತ್ಕರ್ಷಕ್ಕೆ ಹೋಗುವಂತಾಗಿದೆ ಎಂದೆಲ್ಲ ಜಾಗತಿಕ ಮಾಧ್ಯಮ ಬೊಬ್ಬೆ ಇಡುತ್ತಿದ್ದರೆ, ಇಸ್ರೇಲ್ ಮಾತ್ರ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ತನ್ನ ಹಕ್ಕು ಎಂಬ ಗಟ್ಟಿ ನಿಲುವನ್ನೇ ಮೊದಲಿನಿಂದಲೂ ಇಟ್ಟುಕೊಂಡುಬಂದಿದೆ.
ತಮ್ಮ ಬಲವನ್ನು ಸೈನಿಕರ ಸಂಖ್ಯೆ, ಶಸ್ತ್ರಾಸ್ತ್ರಗಳ ಸಂಗ್ರಹ ಪ್ರಮಾಣ ಇಂಥವುದರ ಮೇಲಷ್ಟೇ ಅವಲಂಬಿತವಾಗಿರಸದೇ ಒಂದೆಡೆ ಕಡಿಮೆ ಆಗಿರಬಹುದಾದದ್ದನ್ನು ಇನ್ನೊಂದು ಒಳಮಾರ್ಗದ ಮೂಲಕ ತುಂಬಿಸಿಕೊಂಡವರೇ ಯುದ್ಧಗಳನ್ನು ಗೆದ್ದಿರುವ ಬಗ್ಗೆ ಇತಿಹಾಸ ಹಲವು ಉದಾಹರಣೆಗಳನ್ನು ಕೊಡುತ್ತದೆ. 1 ಕೋಟಿ ಜನಸಂಖ್ಯೆಯನ್ನೂ ಹೊಂದಿರದ ಇಸ್ರೇಲ್, 8 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿರುವ ಇರಾನ್ ಸೇರಿದಂತೆ ಹಲವು ಕೋಟಿ ಜನಸಂಖ್ಯೆಗಳನ್ನು ಪ್ರತಿನಿಧಿಸುವ ಅರಬ್ ಸೇನಾಬಲವನ್ನು ಅದೇ ಮಾರ್ಗದಲ್ಲೇ ಎದುರಿಸುತ್ತ ಹೋಗಿದ್ದರೆ ಬಹುಶಃ ಯಾವತ್ತೋ ಅಸ್ತಿತ್ವ ಕಳೆದುಕೊಂಡುಬಿಡುತ್ತಿತ್ತು.
ಅಮೆರಿಕದಂಥ ಅಸೀಮ ಮಿಲಿಟರಿ ಬಲಕ್ಕೆ ವಿಯೆಟ್ನಾಂನಂಥ ಚಿಕ್ಕ ದೇಶವನ್ನು ಸೋಲಿಸಲಾಗಲಿಲ್ಲ. ಇರಾಕ್-ಅಫಘಾನಿಸ್ತಾನಗಳಲ್ಲಿ ಹಲವು ವರ್ಷ ಅಂಡಲೆದು ಕೈಸುಟ್ಟುಕೊಂಡು ಹಿಂದೆ ಬರುವ ಪಾಡೇ ಅಮೆರಿಕದ್ದಾಯಿತು. ಉಗ್ರಗಾಮಿಗಳು ಸೇರಿದಂತೆ ಜಗತ್ತಿನಾದ್ಯಂತ ಹಲವು ಶಕ್ತಿಗಳು ಇಂಥದೊಂದು ಅಸಂಪ್ರದಾಯಿಕ ಹಾಗೂ ಅಸಮಬಲ ಯುದ್ಧ ಕೌಶಲವನ್ನು ತಮ್ಮದಾಗಿಸಿಕೊಂಡಿವೆ. ಇನ್ನು ಮುಂದೆ ತೆರೆದುಕೊಳ್ಳಲಿರುವ ಕೃತಕ ಬುದ್ಧಿಮತ್ತೆ ಯುಗದಲ್ಲಂತೂ ಸಮಬಲವೆಂಬ ಮಾತಿಗೆ ಅರ್ಥವೇ ಇರುವುದಿಲ್ಲ ಅಥವಾ ಹೊಸ ರೀತಿಯಲ್ಲಿ ಅರ್ಥೈಸಬೇಕಾಗುತ್ತದೆ. ಆಧುನಿಕ ಯುಗದಲ್ಲಿ ಇಂಥದೊಂದು ಮಾದರಿ ರೂಪಿಸಿಕೊಳ್ಳಬೇಕೆಂಬ ದೇಶಗಳಿಗೆ ಬಹುಶಃ ಇಸ್ರೇಲಿನ ಇತ್ತೀಚಿನ ನಡೆಗಳೇ ಪಠ್ಯವಾದಾವು.
ಹಿಂದಿನ ವರ್ಷ ಅಕ್ಚೋಬರಿನಿಂದ ಶುರುವಾಗಿರುವ ಸಂಘರ್ಷದಲ್ಲಿ ಇಸ್ರೇಲ್ ವಿರುದ್ಧ ಬಹಿರಂಗವಾಗಿಯೇ ಈ ಯುದ್ಧ ಮುನ್ನಡೆಸುತ್ತಿರುವುದು ಇರಾನ್ ದೇಶವೇ. ಹಾಗಂತ ಅದು ತನ್ನ ಯೋಧರನ್ನು ಕದನ ಕಣದಲ್ಲಿ ನಿಲ್ಲಿಸಿಲ್ಲ. ಬದಲಿಗೆ ಮೂರು ದಾಳಗಳನ್ನು ಬಳಸಿಕೊಂಡಿದೆ, ಮತ್ತದರ ಬಗ್ಗೆ ಅದೇನೂ ಮುಚ್ಚುಮರೆ ಇರಿಸಿಕೊಂಡಿಲ್ಲ. ಇರಾನ್ ಪರವಾಗಿ ಇಸ್ರೇಲ್ ವಿರುದ್ಧ ದಾಳಿಯಲ್ಲಿ ಪಾಲ್ಗೊಳ್ಳುತ್ತಿರುವ ಮೂರು ಶಕ್ತಿಗಳೆಂದರೆ- ಹಮಾಸ್, ಲೆಬನಾನಿನಿಂದ ಸಕ್ರಿಯವಾಗಿರುವ ಹಿಜ್ಬೊಲ್ಲ, ಇತ್ತ ಕೆಂಪು ಸಮುದ್ರದಲ್ಲಿ ಇಸ್ರೇಲ್ ಮತ್ತದರ ಮಿತ್ರರಿಗೆ ಸೇರಿದ ನೌಕೆಗಳ ಮೇಲೆ ದಾಳಿ ನಡೆಸುತ್ತಿರುವ ಯೆಮೆನ್ ದೇಶದ ಹೌತಿಗಳ ಪಡೆ.
ಈಗೆರಡು ವಾರಗಳಲ್ಲಿ ಇಸ್ರೇಲ್ ಈ ಮೂರೂ ಆಯಾಮಗಳಿಗೆ ಹೇಗೆ ಹೊಡೆತ ಕೊಟ್ಟಿದೆ ಗಮನಿಸಿ.
2017ರಿಂದ ಹಮಾಸ್ ಉಗ್ರ ಸಂಘಟನೆಯ ರಾಜಕೀಯ ಮುಖ್ಯಸ್ಥನಾಗಿದ್ದ ಇಸ್ಮಾಯಿಲ್ ಹನಿಯೆ ಕತಾರಿನಲ್ಲಿದ್ದುಕೊಂಡು ವೀರಾವೇಶ ತೋರುತ್ತಿದ್ದವ. ಈತ ಇರಾನಿನ ಹೊಸ ಅಧ್ಯಕ್ಷನ ಪ್ರಮಾಣವಚನ ಸಮಾರಂಭಕ್ಕೆ ಟೆಹರಾನಿಗೆ ಬಂದಿದ್ದಾಗಲೇ ಹತ್ಯೆ ನಡೆದಿದೆ. ಕೆಲವು ವಿಶ್ಲೇಷಕರು ಹನಿಯೆ ತಂಗಲಿದ್ದ ಕೊಠಡಿಯಲ್ಲಿ ಇಸ್ರೇಲಿ ಗುಪ್ತಚರರು ತಿಂಗಳ ಮೊದಲೇ ಬಾಂಬಿಟ್ಟು ಬಂದು ಈಗ ಸ್ಫೋಟಿಸಿದರು ಎಂದರೆ, ಇನ್ನು ಕೆಲವರು ಅವೆಲ್ಲ ಸಾಧ್ಯವಿಲ್ಲ ಕ್ಷಿಪಣಿ ಉಡಾಯಿಸಿ ಕೊಲ್ಲಲಾಗಿದೆ ಎನ್ನುತ್ತಿದ್ದಾರೆ. ಇದೇನೇ ಇದ್ದರೂ ಇದರ ಹಿಂದೆ ನಡೆದ ಗುಪ್ತಚರ ತಯಾರಿ, ತಂತ್ರಜ್ಞಾನ ನಿಯೋಜನೆಗಳೆಲ್ಲ ಎಷ್ಟು ಸೂಕ್ಷ್ಮ ಮತ್ತು ದೊಡ್ಡಮಟ್ಟದ್ದಿದ್ದಿರಬಹುದು ಯೋಚಿಸಿ!
ಇತ್ತ ಲೆಬನಾನಿನ ರಾಜಧಾನಿ ಬೀರತ್ ನಲ್ಲಿ ಹಿಜ್ಬೊಲ್ಲ ಉಗ್ರ ಸೇನೆಯ ಉನ್ನತ ಕಮಾಂಡರ್ ಫೌದ್ ಶುಕುರ್ ಇದ್ದ ಕಟ್ಟಡವನ್ನು ಗುರುತಿಸಿ ವಾಯುದಾಳಿ ನಡೆಸಿದ ಇಸ್ರೇಲ್ ಆತನನ್ನು ಇಲ್ಲವಾಗಿಸಿದೆ. ಅದಕ್ಕೆ ಕೆಲವು ವಾರಗಳ ಹಿಂದೆ ಗೋಲನ್ ಹೈಟ್ಸ್ ಪ್ರದೇಶದ ಮೇಲೆ ದಾಳಿ ಮಾಡಿದ್ದ ಹಿಜ್ಬೊಲ್ಲ 12 ಮಕ್ಕಳ ಸಾವಿಗೆ ಕಾರಣವಾಗಿದ್ದೇ ತನ್ನ ಈ ಪ್ರತಿಕಾರದ ದಾಳಿಗೆ ಕಾರಣ ಅಂತಲೂ ಇಸ್ರೇಲ್ ಜಗತ್ತಿನೆದುರು ಹೇಳಿದೆ.
ಇರಾನ್ ಬೆಂಬಲಿತ ಇನ್ನೊಂದು ಬಲ ಎಂದರೆ ಇಸ್ರೇಲಿನ ಗಡಿಯಿಂದ ದೂರವೇ ಇರುವ, ಯೆಮೆನ್ ನ ಒಂದು ಭಾಗವನ್ನು ಆಕ್ರಮಿಸಿಕೊಂಡಿರುವ ಹೌತಿ ಬಂಡುಕೋರರು. ಇವರು ಆಗೀಗ ತೂರಿಬಿಡುತ್ತಿದ್ದ ಕ್ಷಿಪಣಿಗಳೇನೂ ಇಸ್ರೇಲ್ ಅನ್ನು ತಲುಪುತ್ತಿರಲಿಲ್ಲ. ಆದರೆ, ಇತ್ತೀಚೆಗೆ ರೆಡ್ ಸೀ ಮಾರ್ಗದಲ್ಲಿ ಮುಖ್ಯವಾಗಿ ಇಸ್ರೇಲ್ ನೌಕೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಇವರ ದಾಳಿಗಳು ಜಗತ್ತಿಗೇ ತಲೆನೋವಾಗಿತ್ತು. ಜುಲೈ ಮಧ್ಯಭಾಗದಲ್ಲಿ ಟೆಲ್ ಅವಿವ್ ಮೇಲೆ ಹೌತಿಗಳು ನಡೆಸಿದ ಡ್ರೋನ್ ದಾಳಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಯಿತು. ಆಗ ಇಸ್ರೇಲ್ ರಂಗಕ್ಕಿಳಿಯಿತು. ಮೊದಲ ಬಾರಿಗೆ ಹೌತಿ ನಿಯಂತ್ರಣದ ಯೆಮನ್ ಬಂದರು ಹೊದೈದಾ ಮೇಲೆ ದಾಳಿ ಮಾಡಿತು.
ಈ ಹಿಂದೆ ಸೌದಿ ಹಾಗೂ ಅಮೆರಿಕದ ಪಡೆ ಸಹ ಹೌತಿಗಳ ಮೇಲೆ ದಾಳಿ ಮಾಡಿದ್ದಿದೆ. ಆದರೆ ಇಸ್ರೇಲ್ ಮಾತ್ರ ತನ್ನ ಗುರಿ ಆಯ್ದುಕೊಳ್ಳುವಲ್ಲಿ ಇಲ್ಲಿಯೂ ವಿಶೇಷ ಜ್ಞಾನ ತೋರಿದೆ. ತನ್ನ ಆಹಾರದ ಶೇ. 90 ಪಾಲನ್ನು ಯೆಮೆನ್ ಆಮದಿನ ಮೂಲಕವೇ ಪೂರೈಸಿಕೊಳ್ಳಬೇಕು. ಹಾಗೆಂದೇ ಮಾನವೀಯ ನೆರವು ಬರುವ ಮಾರ್ಗವಾಗಿರುವ ಹೊದೈದಾ ಬಂದರಿನ ಮೇಲೆ ಅಮೆರಿಕ ಮಿತ್ರಪಡೆ ಯಾವತ್ತೂ ದಾಳಿ ಮಾಡಿರಲಿಲ್ಲ. ಆದರೆ, ಇರಾನ್ ಇದೇ ಮಾರ್ಗದಲ್ಲಿ ಹೌತಿಗಳಿಗೆ ಶಸ್ತ್ರ ಪೂರೈಸುತ್ತಿದೆ ಎಂದು ಆರೋಪಿಸಿ ಇಸ್ರೇಲ್ ಮುಲಾಜಿಲ್ಲದೇ ದಾಳಿ ನಡೆಸಿತು. ಒಂದು ವಿದ್ಯುತ್ ತಯಾರಿಕೆ ಘಟಕ ಹಾಗೂ ಹಲವು ತೈಲ ಸಂಗ್ರಹಾರಗಳನ್ನೇ ಇಸ್ರೇಲ್ ದಾಳಿ ಧ್ವಂಸಗೊಳಿಸಿದೆ. 1,50,000 ಟನ್ನುಗಳಷ್ಟಿದ್ದ ಬಂದರಿನ ಇಂಧನ ಸಂಗ್ರಹ ಸಾಮರ್ಥ್ಯವು 50,000 ಟನ್ನುಗಳಿಗೆ ಕುಸಿದು ಹೌತಿಗಳಿಗೆ ಯಾವತ್ತೋ ಮುಟ್ಟಬೇಕಿದ್ದ ಆರ್ಥಿಕ ಬಿಸಿ ಇಸ್ರೇಲ್ ದಾಳಿಯಿಂದ ಸಾಕಾರಗೊಂಡಂತೆ ಆಗಿದೆ.
ಹಾಗೆ ನೋಡಿದರೆ ಇಸ್ರೇಲ್ ಮತ್ತು ಇರಾನ್ ಗಳು ಅದ್ಯಾವತ್ತೋ ಯುದ್ಧ ಪ್ರಾರಂಭಿಸಿಬಿಟ್ಟಿವೆ. ಇತ್ತೀಚಿನ ವಿದ್ಯಮಾನಗಳಲ್ಲಿ ಮಾತ್ರ ನಮಗೇಕೆ ಅದು ಅಭಿವ್ಯಕ್ತವಾಗುತ್ತಿದೆ ಎಂದರೆ ಈ ಹಿಂದಿನವುಗಳಲ್ಲಿ ‘ಯುದ್ಧದ ಥಿಯೇಟರು’ಗಳು ನಮ್ಮ ಕಣ್ಣಿಗೆ ಕಾಣುವಂತಿರಲಿಲ್ಲ.
ಇಸ್ರೇಲ್ ಇರದಿದ್ದರೆ ಅದ್ಯಾವತ್ತೋ ಇರಾನ್ ಅಣ್ವಸ್ತ್ರಯುಕ್ತ ರಾಷ್ಟ್ರವಾಗಿರುತ್ತಿತ್ತು. ಎರಡು ಬಗೆಗಳಲ್ಲಿ ಇಸ್ರೇಲ್ ಇದನ್ನು ತಡೆದಿದೆ. ಮೊದಲನೆಯದು, ಇರಾನಿನ ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಇರುವ ವಿಜ್ಞಾನಿಗಳನ್ನು ಗುರುತಿಸಿ ಅವರೆಲ್ಲರ ಹತ್ಯೆ! ಎರಡನೆಯದು, ಇರಾನಿನ ಅಣುಶಕ್ತಿ ಕೇಂದ್ರಗಳನ್ನು ಗುರುತಿಸಿ ಅವುಗಳ ಮೇಲೆ ದಾಳಿ.
ನವೆಂಬರ್ 2020ರ ಒಂದು ದಿನ. ಕ್ಯಾಸ್ಪಿಯನ್ ಸಮುದ್ರದ ತೀರದಲ್ಲಿ ತಾನು ರಜೆಯ ವಿಹಾರಕ್ಕೆಂದೇ ನಿರ್ಮಿಸಿಕೊಂಡಿದ್ದ ನಿವಾಸದಿಂದ ತನ್ನ ಹೆಂಡತಿಯೊಡಗೂಡಿ ತೆಹರಾನ್ ಬಳಿಯ ಅಬ್ಸಾರ್ದ್ ನಲ್ಲಿರುವ ತನ್ನ ಕಾಯಂ ನಿವಾಸಕ್ಕೆ ಹಿಂತಿರುಗುತ್ತಿದ್ದ ಮೊಹ್ಸೆನ್ ಫಕೀರಜದೇಹ್. ಆತನ ಮುಂದೊಂದು ಮತ್ತು ಹಿಂದೊಂದು ಬೆಂಗಾವಲು ವಾಹನಗಳಿದ್ದವು. ಆತ ಮನೆ ಪ್ರವೇಶಿಸುವುದಕ್ಕೆ ಮುಂಚೆ ಹೋಗಿ ಪರಿಶೀಲನೆ ನಡೆಸುವುದು ಮುಂದಿರುವ ವಾಹನದಲ್ಲಿದ್ದವರ ಕೆಲಸ. ಸಾಗುವಾಗ ರಸ್ತೆಯ ಮುರುಕಿಯಲ್ಲಿ ಹಾಳಾದ, ಯಾರೋ ಬಿಟ್ಟುಹೋದ ಸಣ್ಣ ಟ್ರಕ್ ಒಂದನ್ನು ದಾಟಿಕೊಂಡೇ ಆ ವಾಹನ ಸಾಗಿತ್ತು.
ಫಕೀರಜದೇಹ್ ಸಹ ಡ್ರೈವ್ ಮಾಡಿಕೊಂಡು ಇದೇ ಹಾದಿಯಲ್ಲಿ ಬಂದ. ಅವನ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಕ್ಕೆ ಬಹಳಷ್ಟು ಅಂತರವಿತ್ತು. ಹಾಳಾಗಿ ಪಕ್ಕ ನಿಂತಿದ್ದ ಟ್ರಕ್ ಓತಪ್ರೋತವಾಗಿ ಗುಂಡಿನ ಮಳೆಗರೆಯತೊಡಗಿತು. ಚಾಲಕ ಸ್ಥಾನದಲ್ಲಿ ಕುಳಿತಿದ್ದವನ ಮೇಲಷ್ಟೇ ಎಲ್ಲ ದಾಳಿ ಕೇಂದ್ರೀಕೃತ. ಕ್ರೀಚ್ ಎಂದು ಶಬ್ದ ಮಾಡುತ್ತ ನಿಂತ ಕಾರಿನಿಂದ ಅದಾಗಲೇ ಹಲವು ಹೊಡೆತಗಳನ್ನು ತಿಂದಂತಿದ್ದ ಫಕೀರಜದೇಹ್ ಎದೆ-ಹೊಟ್ಟೆಗಳನ್ನೆಲ್ಲ ಯಾತನೆಯಿಂದ ತಡವಿಕೊಳ್ಳುತ್ತ ಹೊರಗಿಳಿದ. ಅಷ್ಟೇ. ಇನ್ನೂ 15 ಸುತ್ತಿನ ಗುಂಡುಗಳು ಹಾರಿ ಮೊಹ್ಸೆನ್ ಫಕೀರಜದೇಹ್ ಪ್ರಾಣಪಕ್ಷಿಯನ್ನು ಮೇಲೆ ಚಿಮ್ಮಿಸಿದವು. ಹೊರಬಂದು ಮೃತದೇಹದ ಬಳಿ ಕುಸಿದುಕುಳಿತ ಹೆಂಡತಿಯನ್ನು ಒಂದೇ ಒಂದು ಬುಲೆಟ್ ಸಹ ತಾಗಿರಲಿಲ್ಲ. ಹಿಂದಿನಿಂದ ಬಂದ ಭದ್ರತಾ ಪಡೆಯವರು ಗುಂಡುಬಂದ ದಿಕ್ಕಿನಲ್ಲಿ ಹಂತಕನಿಗಾಗಿ ಹುಡುಕಿದರೆ ಅಲ್ಲಿ ಹಾಳಾದ ಟ್ರಕ್ ಬಿಟ್ಟರೆ ಮತ್ಯಾರ ಸುಳಿವಿರಲಿಲ್ಲ.
ಮೂರೂವರೆ ವರ್ಷಗಳ ಹಿಂದೆ ಹಾಗೆ ನಡುರಸ್ತೆಯಲ್ಲಿ ಹತ್ಯೆಗಾದ ಮೊಹ್ಸೆನ್ ಫಕೀರಜಹೇದ್ ಮತ್ಯಾರಲ್ಲ, ಇರಾನಿನ ಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗಿದ್ದ ಮುಖ್ಯ ವಿಜ್ಞಾನಿ. 2009ರಿಂದಲೂ ಪ್ರಯತ್ನಿಸಿ, ಕೊನೆಗೊಮ್ಮೆ ಆಯುಧದ ಬಿಡಿಭಾಗಗಳನ್ನೆಲ್ಲ ಬೇರೆ ಬೇರೆಯಾಗಿ ಇರಾನಿಗೆ ಸಾಗಿಸಿ, ಒಳಗಿದ್ದ ಏಜೆಂಟರು ಅವನ್ನೆಲ್ಲ ಕೂಡಿಸಿ ಹಾಳಾದ ಟ್ರಕ್ಕಿನೊಳಗಿರಿಸಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಉಪಯೋಗಿಸಿ ಇರಾನಿನಿಂದ ನೂರಾರು ಕಿಲೋಮೀಟರ್ ಹೊರಗೆ ನಿಂತೇ ಆಪರೇಟ್ ಮಾಡಿದರು. ಮೊಹ್ಸೆನ್ ಫಕೀರಜದೇಹ್ ಕಾರಿನಲ್ಲಿ ಎಲ್ಲಿ ಕುಳಿತಿದ್ದಾನೆಂದು ಗುರುತಿಸಿ, ಕಾರಿನ ವೇಗಕ್ಕೆ ತಕ್ಕನಾಗಿ ಗುರಿ ನಿರ್ದೇಶಿಸಿಕೊಂಡು ಆ ಎಐ ಗನ್ ತಾನೇ ಕೆಲಸ ಮಾಡಿತು. ಆ ವಿಜ್ಞಾನಿಯ ಸಾವು ಖಾತ್ರಿಯಾಗುವವರೆಗೂ ಗುಂಡು ತೂರಿ ನಂತರ ತನ್ನನ್ನು ತಾನೇ ನಾಶಪಡಿಸಿಕೊಂಡಿತು!
ಮಸೂದ್ ಅಲಿ ಮೊಹಮದಿ ಎಂಬ ಟೆಹರಾನಿನ ಭೌತವಿಜ್ಞಾನಿಯನ್ನು ರಿಮೋಟ್ ಕಂಟ್ರೋಲಿನಲ್ಲಿ ಚಲಿಸುವ ಮೊಟಾರುಬೈಕಿಗೆ ಬಾಂಬ್ ಕಟ್ಟಿ ಜನವರಿ 2010ರಲ್ಲಿ ಉಡಾಯಿಸಿತು. ನ್ಯೂಕ್ಲಿಯರ್ ಎಂಜಿನಿಯರಿಂಗ್ ಅಧ್ಯಾಪನ ವಿಭಾಗದ ಮಜಿದ್ ಶಾಹ್ರಿರಿ ಎಂಬಾತ ಕಾರು ವಿಸ್ಫೋಟದಲ್ಲಿ ಹತನಾದ. ಮೊಸ್ತಫಾ ಅಹಮದಿ ರೋಶನ್ ಎಂಬ ಕೆಮಿಕಲ್ ಎಂಜಿನಿಯರನನ್ನು ಮೊಟಾರುಸೈಕಲ್ಲಿನಲ್ಲಿ ಬಂದ ಆಗಂತುಕ ಆತನ ಕಾರಿಗೆ ಬಾಂಬಿರಿಸಿ ಕೊಂದ ವಿದ್ಯಮಾನ ಜನವರಿ 2012ರಲ್ಲಿ ನಡೆದಿತ್ತು. ನತಾಂಜ್ ಯುರೇನಿಯಂ ಸಂವರ್ಧನೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ, ಈತನನ್ನು ಇಸ್ರೇಲ್-ಅಮೆರಿಕಗಳೇ ಹತ್ಯೆ ಮಾಡಿವೆ ಅಂತ ಅವತ್ತಿಗೆ ಇರಾನ್ ಆರೋಪಿಸಿತ್ತು.
ಜೂನ್ 2010ರಲ್ಲಿ ಇರಾನಿನ ಬುಶೆರ್ ನಗರದಲ್ಲಿದ್ದ ಅಣುಶಕ್ತಿ ಸ್ಥಾವರದ ಕಂಪ್ಯೂಟರುಗಳಿಗೆ ಇಸ್ರೇಲ್ ಮತ್ತು ಅಮೆರಿಕ ಸೇರಿಕೊಂಡು ಸ್ಟಕ್ಸನೆಟ್ ಎಂಬ ವೈರಸ್ ಬಿಟ್ಟವು. ಅದು ನಿಧಾನಕ್ಕೆ ಬೇರೆ ವ್ಯವಸ್ಥೆಗಳಿಗೂ ಹರಡಿ, ಕೊನೆಗೊಂದು ದಿನ ಇರಾನಿನ ನತಾಂಜ್ ಪ್ರದೇಶದಲ್ಲಿ ಯುರೇನಿಯಂ ಸಂವರ್ಧನೆಗೆಂದೇ ಕೆಲಸ ಮಾಡುತ್ತಿದ್ದ ಸ್ಥಾವರದಲ್ಲಿ ಅಲ್ಲಿದ್ದ 9 ಸಾವಿರ ಸೆಂಟ್ರಿಫ್ಯೂಜ್ ಪೈಕಿ ಅನಾಮತ್ತು 1,000 ಸಾಧನಗಳನ್ನು ಸ್ಫೋಟಿಸಿ ಉಡಾಯಿಸಿಬಿಟ್ಟಿತು!
ಇದು ಸಾರ್ವಜನಿಕವಾಗಿ ದೊಡ್ಡಮಟ್ಟದಲ್ಲಿ ಬೆಳಕಿಗೆ ಬಂದ ವಿದ್ಯಮಾನ. ಆದರೆ ಇಂಥದ್ದೇ ಹಲವು ವೈರಸ್ ದಾಳಿಗಳನ್ನು ಅಣುಶಕ್ತಿ ಕೇಂದ್ರದ ಬೇರೆ ಬೇರೆ ಸಾಧನಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಿರಂತರವಾಗಿ ಮಾಡುತ್ತ ಬಂದಿದೆ.
ಆಫ್ಕೋರ್ಸ್…ಬೂಟ್ಸ್ ಆನ್ ದಿ ಗ್ರೌಂಡ್ ಅರ್ಥಾತ್ ಭೂಮಿ ಮೇಲೊಂದು ಕಾಲ್ದಳ ಬೇಕೇ ಬೇಕಾಗುತ್ತದೆ. ಆದರೆ ಅವುಗಳ ಮುಖಾಮುಖಿಯ ಮೂಲಕವೇ ಯುದ್ಧದ ಫಲಿತಾಂಶ ನಿರ್ಣಯವಾಗುವ ಕಾಲಘಟ್ಟದಲ್ಲಿ ಜಗತ್ತಿಲ್ಲ. ಶೆಲ್ ಮತ್ತು ಕ್ಷಿಪಣಿಗಳನ್ನೇ ಅವಲಂಬಿಸಿಕೊಂಡು ರಷ್ಯದ ದಾಳಿ ಎದುರಿಸುವುದಕ್ಕೆ ಹೋದಾಗ ಉಕ್ರೇನ್ ಪಾಲಿಗೆ ನಷ್ಟವಾಗಿತ್ತು. ಇದೇ ಉಕ್ರೇನ್ ಡ್ರೋನ್ ಗಳನ್ನು ಬಳಸಿಕೊಂಡು ಸಂಘರ್ಷ ಭೂಮಿಗಿಂತ ದೂರದಲ್ಲೇ ಯುವಕರನ್ನು ಕೂರಿಸಿ ಅವರು ರಷ್ಯದ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವ ಸ್ಥಿತಿಯಲ್ಲಿ ಗಣನೀಯ ಯಶ ಸಾಧಿಸಿದೆ ಎಂದು ಮಾಧ್ಯಮ ವರದಿಗಳು ಸಾರುತ್ತಿವೆ. ಭಾರತವು ತನ್ನ ವಿರುದ್ಧ ಕೆಲಸ ಮಾಡುತ್ತಿರುವವರನ್ನು ವಿದೇಶದ ನೆಲಗಳಲ್ಲಿ ಹತ್ಯೆ ಮಾಡುತ್ತಿದೆ ಎಂದು ವಿದೇಶಿ ಮಾಧ್ಯಮ ವೇದಿಕೆಗಳು ಬರೆದುಕೊಂಡಿವೆ. ಹೀಗೆ ಅಸಂಪ್ರದಾಯಿಕ ಕೌಶಲದಲ್ಲಿ ನಿಷ್ಣಾತರಾದಷ್ಟೂ ನಮ್ಮ ಅಸ್ತಿತ್ವ ಉಳಿಸಿಕೊಂಡು ವೈರಿಗಳನ್ನು ಸಂಹರಿಸಬಹುದೆಂಬ ಪಾಠವನ್ನು ಇಸ್ರೇಲ್ ನಡೆಗಳಂತೂ ಸಾರಿ ಸಾರಿ ಹೇಳುತ್ತಿವೆ. ಉಳಿದಂತೆ, ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಸಮ್ಮತವೇ ಎಂಬ ಮಾತೇ ಇದೆಯಲ್ಲ!
-ಚೈತನ್ಯ ಹೆಗಡೆ
cchegde@gmail.com
Advertisement