ಭಾರತದ Olympics ಮಹತ್ವಾಕಾಂಕ್ಷೆ ಬೆಳಗುವುದಕ್ಕೆ ಕಾರಣ ಸರ್ಕಾರ-ಕಾರ್ಪೋರೇಟ್ ಕಂಪನಿಗಳ ಜುಗಲ್ಬಂದಿ! (ತೆರೆದ ಕಿಟಕಿ)

ಭಾರತೀಯರು ಅರ್ಹತೆ ಗಳಿಸಿರುವ ಒಟ್ಟೂ 16 ವಿಭಾಗಗಳಲ್ಲಿ 470 ಕೋಟಿ ರುಪಾಯಿಗಳನ್ನು ವ್ಯಯಿಸಲಾಗಿದೆ. ಈ ಹಂತದಲ್ಲೇ ಸರ್ಕಾರಕ್ಕೆ ಸಿಕ್ಕಿರುವುದು ತಮ್ಮ ಸಾಮಾಜಿಕ ಜವಾಬ್ದಾರಿ ಹಣಕಾಸು ನಿಧಿ ಅಡಿ ಹಣ ಹರಿಸಿರುವ ಭಾರತದ ಉದ್ಯಮ ದಿಗ್ಗಜ ಸಮೂಹಗಳ ಸಹಕಾರ.
Manu bhaker
ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮನು ಭಾಕರ್ (ಸಂಗ್ರಹ ಚಿತ್ರ)
Updated on

ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಕಂಚು ಗೆಲ್ಲುವುದರೊಂದಿಗೆ ಒಲಿಂಪಿಕ್ಸ್ ನಲ್ಲಿ ಭಾರತದ ಶುಭಾರಂಭವಾಗಿದೆ. ಪದಕಗಳ ಪಟ್ಟಿಯಲ್ಲಿ ಗಮನಾರ್ಹ ಸ್ಥಾನವನ್ನು ತಲುಪುವ ಹಂತಕ್ಕೆ ಭಾರತ ಹೋಗುವುದಕ್ಕೆ ಇನ್ನೂ ಹಲವು ವರ್ಷಗಳೇ ಬೇಕೇನೋ. ಆದರೆ, ಒಲಿಂಪಿಕ್ಸ್ ಎಂಬ ಜಾಗತಿಕ ಸೆಣಸಿನ ಹಬ್ಬದಲ್ಲಿ ನಮ್ಮ ದೇಶಕ್ಕೆ ಒಂದಿಷ್ಟು ಸಂಭ್ರಮಕ್ಕಂತೂ ಜಾಗವಿದೆ ಎಂಬ ಆಶಾದಾಯಕ ಪರಿಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ರೂಪುಗೊಂಡಿದೆ.

ಹೀಗೆ ಬದಲಾಗಿರುವ ಭಾರತದ ಕ್ರೀಡಾ ವಲಯದ ಶ್ರೇಯಸ್ಸನ್ನು ಮೋದಿ ಸರ್ಕಾರಕ್ಕೆ ಬಹುತೇಕರು ಒಪ್ಪಿಸುವುದಿದೆ. ಅದು ತಪ್ಪೇನಲ್ಲ. ಆದರೆ, ಕ್ರೀಡೆಯಲ್ಲಾಗುತ್ತಿರುವ ಸಕಾರಾತ್ಮಕ ಬದಲಾವಣೆಗೆ ಸರ್ಕಾರದ ಜತೆ ಜತೆಗೆ ಮತ್ತೊಂದು ಸಹಭಾಗಿತ್ವವೂ ಕಾರಣವಾಗಿದೆ. ಅದೆಂದರೆ ಭಾರತದ ಕಾರ್ಪೋರೇಟ್ ವಲಯ. ಈಗ ಪ್ಯಾರಿಸ್ ಒಲಿಂಪಿಕ್ಸ್ ಅಂಗಳದಲ್ಲಿ ನಿಂತಿರುವ ಅಥ್ಲೀಟ್, ಆಟಗಾರರಿಗೆ ಸಿಕ್ಕಿರುವ ಹಣಕಾಸು ಸಹಾಯ, ತರಬೇತಿ, ಪೂರಕ ಪೋಷಕಾಂಶ ವ್ಯವಸ್ಥೆ ಇವೆಲ್ಲವುಗಳಲ್ಲಿ ಭಾರತದ ದಿಗ್ಗಜ ಖಾಸಗಿ ಕಂಪನಿಗಳ ಕೋಟ್ಯಂತರ ರುಪಾಯಿಗಳ ಬಲವಿದೆ. 

ಕಾರ್ಪೋರೇಟ್ ಭಾರತದ ಲಾಭಕೋರತನ, ಅವು ಹುಟ್ಟುಹಾಕುತ್ತಿರುವ ಅತಿಯಾದ ಉಪಭೋಗ ವ್ಯವಸ್ಥೆ ಇತ್ಯಾದಿ ಆಯಾಮಗಳಲ್ಲಿ ಅವರನ್ನು ಟೀಕಿಸುವುದಕ್ಕೆ ನೂರೆಂಟು ಕಾರಣಗಳು ಸಿಗಬಹುದು. ಆದರೆ, ಶ್ರೇಯಸ್ಸು ಎಲ್ಲಿ ಸಲ್ಲಬೇಕೋ ಅಲ್ಲಿ ಸಲ್ಲಲೇಬೇಕು. ಭಾರತದ ಕ್ರೀಡಾಸ್ತರವನ್ನು ಜಾಗತಿಕವಾಗಿ ಎತ್ತರಿಸಿರುವುದರಲ್ಲಿ ಭಾರತದ ಖಾಸಗಿ ಕಂಪನಿಗಳ ಸಹಯೋಗವನ್ನು ನೆನಪಿಸಿಕೊಳ್ಳಲೇಬೇಕು.

ಬುನಾದಿ ಕಟ್ಟಿದ ಶ್ರೇಯಸ್ಸು ಸರ್ಕಾರಕ್ಕೆ…

ಕಾರ್ಪೋರೇಟ್ ಕಂಪನಿಗಳು ಭಾರತದ ಸ್ಪೋರ್ಟ್ಸ್ ವಲಯದಲ್ಲಿ ಆಸಕ್ತಿ ತೆಗೆದುಕೊಳ್ಳುವುದಕ್ಕೆ ಪೂರಕ ವಾತಾವರಣ ನಿರ್ಮಿಸಿದ ಶ್ರೇಯಸ್ಸು ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆಂಬುದರಲ್ಲಿ ಸಂಶಯವಿಲ್ಲ.

ಖೇಲೋ ಇಂಡಿಯಾ ಅಭಿಯಾನದ ಮೂಲಕ ಭಾರತವು ಒಂದು ಕ್ರೀಡಾ ಸಂಸ್ಕೃತಿಯನ್ನು ದೇಶದೆಲ್ಲೆಡೆ ಹಬ್ಬಿಸಿತು. ಇದಕ್ಕಾಗಿ ಅದು ದೇಶಾದ್ಯಂತ ಸಣ್ಣಪಟ್ಟಣಗಳಿಂದ ಹಿಡಿದು ಮಹಾನಗರಗಳವರೆಗೆ ಕ್ರೀಡೆಗೆ ಬೇಕಾದ ಮೂಲಸೌಕರ್ಯವನ್ನು ವೃದ್ಧಿಸಿತು. ಯುನಿವರ್ಸಿಟಿ, ರಾಷ್ಟ್ರೀಯ ಸ್ಥರಗಳಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟಗಳಾದವು ಹಾಗೂ ಸರ್ಕಾರದ ಮುಖ್ಯ ಸಚಿವರಿಂದ ಹಿಡಿದು ಆಡಳಿತ ವ್ಯವಸ್ಥೆ ಇದರಲ್ಲಿ ಅಬ್ಬರದಿಂದ ಭಾಗವಹಿಸಿತು. ಬೇರುಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಲಹುವ ಕಾರ್ಯವು ಆರಂಭವಾಗಿದ್ದು ಇಲ್ಲಿಂದಲೇ. ಆಯ್ದ ಸುಮಾರು 3,000 ಕ್ರೀಡಾ ಪ್ರತಿಭೆಗಳಿಗೆ ಸ್ಕಾಲರ್ಶಿಪ್ ಸಿಕ್ಕವು.

ಕ್ರೀಡಾಳುಗಳನ್ನು ಗುರುತಿಸುವ, ಸೌಕರ್ಯ ಒದಗಿಸುವ ಸರ್ಕಾರಿ ವ್ಯವಸ್ಥೆಯನ್ನು ಪಾರದರ್ಶಕವಾಗಿಸಿದ್ದು, ಕ್ರೀಡಾಳು ಸ್ನೇಹಿ ಆಗಿಸಿದ್ದು ಆಡಳಿತ ಹಂತದಲ್ಲಿ ಸರ್ಕಾರದ ಯಶಸ್ಸಾದರೆ ಮತ್ತೊಂದು ಮಹಾಕಾರ್ಯವನ್ನು ಅದು ಬ್ರಾಂಡಿಂಗ್ ವಿಭಾಗದಲ್ಲಿ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತವರ ಸಂಪುಟ ಸಹವರ್ತಿಗಳು ನಿರಂತರವಾಗಿ ಫಿಟ್ನೆಸ್ ಬಗ್ಗೆ, ಕ್ರೀಡೆಯ ಬಗ್ಗೆ ಜನಸಾಮಾನ್ಯರಲ್ಲಿ ಸಹ ಆದರಾಭಿಮಾನ ಉಕ್ಕುವಂತೆ ಪ್ರಚಾರಾಂದೋಲನಗಳನ್ನು ನಡೆಸಿದರು. ಕ್ರಿಕೆಟ್ ಆಚೆಗೂ ಕ್ರೀಡೆಗಳ ಬಗ್ಗೆ ಮಾತನಾಡುವುದು, ಅವುಗಳ ಬಗ್ಗೆ ಕುತೂಹಲ ಇರಿಸಿಕೊಳ್ಳುವುದು, ಹಾಗೂ ಒಂದು ವರ್ಗದಲ್ಲಿ ಕ್ರೀಡೆಗಳ ಮೂಲಕ ದೇಹಕ್ಷಮತೆ ಕಾಪಾಡಿಕೊಳ್ಳುವುದು ಇವೆಲ್ಲ ‘ಕೂಲ್’ ಸಂಗತಿಗಳಾದವು. 

Manu bhaker
ಬಾಂಗ್ಲಾದೇಶದ ಹಿಂಸೆಯ ಕಿಚ್ಚು ಭಾರತಕ್ಕೇಕೆ ಆತಂಕ ಮೂಡಿಸುತ್ತಿದೆ ಗೊತ್ತೇ? (ತೆರೆದ ಕಿಟಕಿ)

ಭಾರತಕ್ಕೆ ವಿಶ್ವಮಟ್ಟದಲ್ಲಿ ಪದಕ ತಂದುಕೊಟ್ಟ ಮೊದಲ ಅಥ್ಲೀಟ್ ಎಂದು 2003ರಲ್ಲೇ ಶ್ರೇಯಸ್ಸು ಪಡೆದಿದ್ದ ಅಂಜು ಬಾಬಿ ಜಾರ್ಜ್ ಅವರ ಮಾತುಗಳಲ್ಲಿ, ಭಾರತದ ಕ್ರೀಡಾವಲಯ ಬದಲಾಗಿರುವುದು ಹೇಗೆ ಎಂಬುದರ ಚಿತ್ರಣವಿದೆ. ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಅವರು ಹೀಗೆ ಹೇಳಿದ್ದರು...

ಕ್ರೀಡಾಳುವಾಗಿ ಸುಮಾರು 25 ವರ್ಷಗಳಿಂದ ಈ ವಲಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗ ಇಲ್ಲಿ ಪರಿವರ್ತನೆಗಳಾಗುತ್ತಿವೆ. 20 ವರ್ಷಗಳ ಹಿಂದೆ ಅಥ್ಲೆಟಿಕ್ ನಲ್ಲಿ ನಾನು ಭಾರತಕ್ಕೆ ಮೊದಲ ಮೆಡಲ್ ತಂದಾಗ ನನ್ನ ಡಿಪಾರ್ಟಮೆಂಟ್ ಸಹ ಪ್ರಮೋಷನ್ ನೀಡಲಿಲ್ಲ. ಆದರೆ ನೀರಜ್ ಚೋಪ್ರಾ ವಿಚಾರದಲ್ಲಿ ವ್ಯವಸ್ಥೆ ಎಷ್ಟು ತೀವ್ರವಾಗಿ ಸ್ಪಂದಿಸಿದೆ…ಬಹುಶಃ ಕ್ರೀಡಾಳುವಾಗಿ ನಾನು ತಪ್ಪಾದ ಕಾಲಘಟ್ಟದಲ್ಲಿದ್ದೆ, ಈಗಿನವರ ಬಗ್ಗೆ ಅಸೂಯೆಯಾಗುವಷ್ಟರಮಟ್ಟಿಗೆ ಪರಿಸ್ಥಿತಿ ಉತ್ತಮವಾಗಿದೆ

- ಅಂಜು ಬಾಬಿ ಜಾರ್ಜ್

ಇವೆಲ್ಲದರಿಂದ ಆದ ಬದಲಾವಣೆ ಎಂದರೆ, 2016ರ ರಿಯೊ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಪಡೆದಿದ್ದ ಭಾರತವು 2020ರ ಟೊಕಿಯೊ ಒಲಿಂಪಿಕ್ಸ್ ನಲ್ಲಿ 7 ಪದಕಗಳನ್ನು ಪಡೆಯಿತು. ಪ್ಯಾರಾಲಿಂಪಿಕ್ಸ್ ನಲ್ಲಿ ಸಹ ನಾಲ್ಕಿದ್ದ ಪದಕ 19 ಗೆಲ್ಲುವವರೆಗೆ ಹೋಯಿತು. 2016ರ ಏಷ್ಯನ್ ಗೇಮ್ಸ್ ನಲ್ಲಿ 70 ಪದಕ ಬಾಚಿದ್ದ ಭಾರತವು 2020ರಲ್ಲಿ ಅದನ್ನು ಸಹ ಉತ್ತಮಪಡಿಸಿಕೊಂಡು 106 ಪದಕಗಳನ್ನು ತಂದಿತು. 

ಈ ಬಾರಿ ಒಲಿಂಪಿಕ್ಸ್ ತಯಾರಿಗೆ ವರ್ಷಗಳ ಹಿಂದೆಯೇ ಟಾಪ್ (ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ) ಕಾರ್ಯಕ್ರಮ ಹಾಕಿಕೊಂಡು, ಯಾವೆಲ್ಲ ಕ್ರೀಡೆಗಳಲ್ಲಿ ನಮಗೆ ಪದಕ ಗೆಲ್ಲುವ ಸಾಧ್ಯತೆಗಳಿವೆಯೋ ಅಲ್ಲಿನ ಕ್ರೀಡಾಳುವಿಗೆ ಅಂತಾರಾಷ್ಟ್ರೀಯಮಟ್ಟದ ತರಬೇತು ಕೊಡಿಸಲಾಗಿದೆ. ಪ್ರಾರಂಭಿಕವಾಗಿ ಕಂಚು ಗೆದ್ದಿರುವ ಮನು ಭಾಕರ್ ಅವರಿಗೆ ಜರ್ಮನಿಯಲ್ಲಿ ತರಬೇತು ಲಭಿಸಿದೆ. ಭಾರತೀಯರು ಅರ್ಹತೆ ಗಳಿಸಿರುವ ಒಟ್ಟೂ 16 ವಿಭಾಗಗಳಲ್ಲಿ 470 ಕೋಟಿ ರುಪಾಯಿಗಳನ್ನು ವ್ಯಯಿಸಲಾಗಿದೆ. ಈ ಹಂತದಲ್ಲೇ ಸರ್ಕಾರಕ್ಕೆ ಸಿಕ್ಕಿರುವುದು ತಮ್ಮ ಸಾಮಾಜಿಕ ಜವಾಬ್ದಾರಿ ಹಣಕಾಸು ನಿಧಿ ಅಡಿ ಹಣ ಹರಿಸಿರುವ ಭಾರತದ ಉದ್ಯಮ ದಿಗ್ಗಜ ಸಮೂಹಗಳ ಸಹಕಾರ.

ಒಲಿಂಪಿಕ್ಸ್ ಸೆಣಸಿಗೆ ಕಾರ್ಪೋರೇಟ್ ಬಲ

ಜಿಂದಾಲ್ಸ್ ಸೌತ್ ವೆಸ್ಟ್ ಎನರ್ಜಿ, ರಿಲಾಯನ್ಸ್ ಫೌಂಡೇಶನ್, ಅದಾನಿ ಸಮೂಹ, ಟಾಟಾ ಸ್ಟೀಲ್ ಹಾಗೂ ಸರ್ಕಾರಿ ಸ್ವಾಮ್ಯದ ಎನ್ ಟಿ ಪಿ ಸಿ, ಎನ್ ಡಿ ಎಂ ಸಿ ಹೀಗೆ ದಿಗ್ಗಜ ಕಂಪನಿಗಳೆಲ್ಲ ಕ್ರೀಡಾಳುಗಳ ಒಲಿಂಪಿಕ್ಸ್ ಯಾನದಲ್ಲಿ ಭಾಗವಹಿಸಿವೆ. ಅಂದರೆ, ಕಳೆದ ನಾಲ್ಕು ವರ್ಷಗಳಿಂದಲೇ ಅಥ್ಲೀಟುಗಳು ತಯಾರಿ-ತರಬೇತುಗಳಲ್ಲಿ ತೊಡಗಿಕೊಂಡಿದ್ದರಲ್ಲ…ಮತ್ತೆ ಹಲವು ವಿಭಾಗಗಳಿಗೆ ತರಬೇತಿಗೆ ಉತ್ತಮ ಸಲಕರಣೆಗಳು ತಂತ್ರಜ್ಞಾನ ಸಹಯೋಗಳೆಲ್ಲ ಬೇಕಿತ್ತಲ್ಲ, ಅವನ್ನೆಲ್ಲ ಒದಗಿಸುವಲ್ಲಿ ಮುಂಚೂಣಿಯಲ್ಲಿ ನಿಂತವು ಇವೇ ಕಂಪನಿಗಳು. 

ತರಬೇತಿ ಎಂದರೆ ಇವತ್ತು ಕೇವಲ ಕೋಚ್, ಸಲಕರಣೆಗಳು ಮಾತ್ರವೇ ಅಲ್ಲ. ಕ್ರೀಡಾಳುವಿನ ಪೋಷಕಾಂಶದ ಆಹಾರಾಭ್ಯಾಸ, ಮಾನಸಿಕ ಗೋಜಲುಗಳಿಂದ ಬಿಡಿಸಿಕೊಳ್ಳುವ ಥೆರಪಿ ಇವೆಲ್ಲವೂ ತಯಾರಿಯ ಭಾಗಗಳಾಗಿರುತ್ತವೆ. ಇವಕ್ಕೆಲ್ಲ ದೊಡ್ಡಮಟ್ಟದ ಸಂಪನ್ಮೂಲಗಳು ಹೊಂದಾಣಿಕೆ ಆಗಬೇಕು. 

ಹಿಂದಿನ ಒಲಿಂಪಿಕ್ಸ್ ಗೆ ಹೋಲಿಸಿದರೆ ಈ ಬಾರಿ ಕಾರ್ಪೋರೇಟ್ ಕಂಪನಿಗಳ ಪ್ರಾಯೋಜಕತ್ವ ಮತ್ತು ತರಬೇತು ಸಹಯೋಗದ ಹಣ ನೀಡಿಕೆ ಶೇ. 30ರಿಂದ 40ರಷ್ಟು ಹೆಚ್ಚಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು. ಭಾರತದ ಪ್ಯಾರಿಸ್ ಒಲಿಂಪಿಕ್ಸ್ ಮೇಳದಲ್ಲಿರುವವರು 117 ಅಥ್ಲೀಟುಗಳು. ಆದರೆ, ವರ್ಷಗಳ ಮೊದಲೇ ಶುರುವಾಗುವ ತರಬೇತಿಯು ಈ ಅಂತಿಮ ಅರ್ಹರ ಹೊರತಾಗಿಯೂ ದೊಡ್ಡಮಟ್ಟದಲ್ಲಿ ಕ್ರೀಡಾಳುಗಳನ್ನು ಒಳಗೊಂಡಿರುತ್ತದೆ. ಸುಮಾರು 200 ಅಥ್ಲೀಟ್ ಗಳ ತರಬೇತಿಗೆ ಹಣ ವ್ಯಯಿಸಿದೆ ರಿಲಾಯನ್ಸ್ ಫೌಂಡೇಶನ್. ಜೆ ಎಸ್ ಡಬ್ಲು 2012ರಲ್ಲೇ ಕ್ರೀಡೆಗೆ ಸಂಬಂಧಿಸಿದ ವಿದ್ಯಾಲಯವನ್ನು ತೆರೆದಿತ್ತು. ಈಗಿರುವ ಪೂರಕ ವಾತಾವರಣದಲ್ಲಿ ಕ್ರೀಡಾ ಸಮುಚ್ಛಯಗಳನ್ನು ನಿರ್ಮಿಸುವುದಕ್ಕೆಂದೇ 150 ಕೋಟಿ ರುಪಾಯಿಗಳನ್ನು ವ್ಯಯಿಸಿರುವುದಾಗಿ ಹೇಳಿಕೊಂಡಿದೆ.

ಈ ಬಾರಿ ಒಲಿಂಪಿಕ್ಸ್ ಮೇಳದಲ್ಲಿರುವವರ ಪೈಕಿ 41 ಅಥ್ಲೀಟುಗಳನ್ನು ಜೆ ಎಸ್ ಡಬ್ಲು ಪ್ರಾಯೋಜಕತ್ವದೊಂದಿಗೆ ತರಬೇತು ಖರ್ಚು ನೋಡಿಕೊಂಡಿದೆ. ಬಿಲ್ಲು-ಬಾಣ ಸ್ಪರ್ಧೆಯ ಇಡೀ ಮಹಿಳಾ ತಂಡ ಸಿದ್ಧವಾಗಿರುವುದು ಟಾಟಾ ಆರ್ಚರಿ ಅಕಾಡೆಮಿಯಲ್ಲಿ. ಟಾಟಾ ಸ್ಟೀಲ್ಸ್ ವಾರ್ಷಿಕವಾಗಿ ಸುಮಾರು 75 ಕೋಟಿ ರುಪಾಯಿಗಳನ್ನು ಕ್ರೀಡೆಗೆ ಸಂಬಂಧಿಸಿ ವ್ಯಯಿಸುತ್ತದೆ. ಜೆ ಎಸ್ ಡಬ್ಲು ಥರದವು “ರುಕ್ನಾ ನಹೀ ಹೈಂ” ಎಂಬ ಥೀಮ್ ಇರಿಸಿಕೊಂಡು ಕ್ರೀಡಾಳುಗಳ ನಿರಂತರ ಪರಿಶ್ರಮ ಪ್ರತಿಬಿಂಬಿಸುವ ಪ್ರಚಾರಾಂದೋಲನದ ವಿಡಿಯೋಗಳನ್ನು ಸಹ ತಂದಿದ್ದಾರೆ. 

ಇಲ್ಲಿ ಉಲ್ಲೇಖಿಸಿದ್ದಕ್ಕೆ ಹೊರತಾದ ಹಲವು ಉದ್ಯಮಗಳೂ ಒಲಿಂಪಿಕ್ಸ್ ಮೇಳದ ಪ್ರವಾಸ, ಊಟ ಇತ್ಯಾದಿಗಳ ಪ್ರಾಯೋಜಕತ್ವಗಳಿಗೆಲ್ಲ ಹಣ ನೀಡಿವೆ. ಕ್ರೀಡಾಳುಗಳು ಪದಕ ಬಾಚಿ ಬಂದರೆ ದೇಶಕ್ಕೆ ಹೆಮ್ಮೆ. ಸರ್ಕಾರ ಸಹ ತನ್ನ ಪ್ರಯತ್ನದ ಬಗ್ಗೆ ಪ್ರಚಾರ ಕೊಟ್ಟುಕೊಳ್ಳಬಹುದು. ಆದರೆ, ಉದ್ಯಮಗಳು ಚಾರಿಟಿ ಮಾಡುತ್ತಲೇ ಸಾಧ್ಯವಾದಲ್ಲೆಲ್ಲ ಬಿಸಿನೆಸ್ ಸೆನ್ಸ್ ಅನ್ನು ಸಹ ಹುಡುಕುತ್ತವೆ. ಇದನ್ನು ನಕಾರಾತ್ಮಕವಾಗಿ ನೋಡಬೇಕಿಲ್ಲ.

ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರಳಿರುವ ನೂರು ಪ್ಲಸ್ ಕ್ರೀಡಾಳುಗಳಲ್ಲಿ ಕೆಲವೇ ಮಂದಿ ಪದಕ ತಂದರೂ ಅವರನ್ನು ತಮ್ಮ ಪ್ರಚಾರ ರಾಯಭಾರಿಗಳನ್ನಾಗಿಸುತ್ತವೆ ಉದ್ಯಮಗಳು. ಗೊತ್ತಿರಲಿ…ನಾವಿವತ್ತು ವಸ್ತು-ಸೇವೆಗಳನ್ನು ಖರೀದಿಸುತ್ತಿರುವುದು ಕೇವಲ ಅವುಗಳ ಉಪಯೋಗಕ್ಕಾಗಿ ಎಂದುಕೊಂಡಿದ್ದೇವೆ. ಆದರೆ, ವಾಸ್ತವದಲ್ಲಿ ನಾವು ನಿರ್ದಿಷ್ಟ ಉತ್ಪನ್ನದೊಂದಿಗೆ ತಳುಕುಹಾಕಿಕೊಂಡಿರುವ ‘ಕತೆ’ಗಾಗಿಯೂ ಅವನ್ನು ಖರೀದಿಸುತ್ತೇವೆ. ಉದಾಹರಣೆಗೆ, ಕೋಲಾವನ್ನೋ-ಪೆಪ್ಸಿಯನ್ನೋ ಖರೀದಿಸುವುದು ಬಾಯಾರಿಕೆ ಇಂಗಿಸಿಕೊಳ್ಳುವುದಕ್ಕಲ್ಲ, ಅದರ ಜತೆ ಬೆರೆತುಕೊಂಡಿರುವ ಯುವಭಾವ, ಜೋಶ್, ಕೂಲ್ ಭಾವನೆ ಇತ್ಯಾದಿ ‘ಕತೆ’ಗಳಿಗೆ ಮರುಳಾಗಿರುವುದರಿಂದ. ಇದರ ಆಧಾರದಲ್ಲೇ ಬಹುಕೋಟಿ ರುಪಾಯಿಗಳ ಬ್ರಾಂಡ್ ಉದ್ಯಮ ಬೆಳೆದಿದೆ. 

Manu bhaker
CNG Bike- Bajaj ಕಳೆದುಕೊಂಡಿದ್ದ ಬಜಾರನ್ನು ಮತ್ತೆ ಗೆಲ್ಲಲು ಸಾಧ್ಯವಾಗಿಸಬಲ್ಲುದಾ ಈ ಉತ್ಪನ್ನ? (ತೆರೆದ ಕಿಟಕಿ)

ಅಂಗೈ ಅಗಲದ ಒಲಿಂಪಿಕ್ಸ್ ಪದಕಕ್ಕಿರುವ ಬೆಲೆ ಅದರಲ್ಲಿರುವ ಚಿನ್ನ, ಬಂಗಾರ, ಕಂಚಿನ ಪ್ರಮಾಣಗಳಿಗೆ ಸೀಮಿತವಾದುದಲ್ಲ. ಒಲಿಂಪಿಕ್ಸ್ ಪದಕ ಎಂದರೆ ನಿರಂತರತೆ, ಶಿಸ್ತು, ಅತ್ಯುನ್ನತ ಪರಿಶ್ರಮ, ಏಕಾಗ್ರತೆ, ಮಾನಸಿಕ ಪ್ರಾಬಲ್ಯ ಮುಂತಾದ ಬೆಲೆಕಟ್ಟಲಾಗದ ಮೌಲ್ಯಗಳನ್ನು ಪ್ರತಿನಿಧಿಸುವಂಥಾದ್ದು. ಹಾಗೆಂದೇ ಒಲಿಂಪಿಕ್ಸ್ ಪದಕ ವಿಜೇತರು ನಾಳೆ ಬ್ರಾಂಡ್ ರಾಯಭಾರಿ ಆಗುತ್ತಲೇ ಆಯಾ ಉತ್ಪನ್ನಗಳಿಗೆ ಈ ಎಲ್ಲ ಮೌಲ್ಯದ ಕತೆ ಅಂಟಿಕೊಳ್ಳುತ್ತದೆ. ಹೀಗೆ ಹೀರೋಗಳನ್ನು ಹುಟ್ಟಿಸುವುದು ಕಾರ್ಪೋರೇಟ್ ಜಗತ್ತಿಗೆ ಅತ್ಯವಶ್ಯ ಲಾಭದಾಯಕ ಕಾರ್ಯ. ಅವೇನೇ ಇದ್ದರೂ, ಇವತ್ತು ಭಾರತದ ಒಲಿಂಪಿಕ್ಸ್ ಕದನ ಕುತೂಹಲವು ರಂಗೇರಿರುವುದಕ್ಕೆ ಕಾರಣ ಸರ್ಕಾರ ಮತ್ತು ಕಾರ್ಪೋರೇಟ್ ಭಾರತದ ಸಹಯೋಗವೇ.

-ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com