
114 ಮಂದಿ ಸತ್ತೇ ಹೋದರು, ನೂರಾರು ಮಂದಿ ಗಾಯಗೊಂಡರು. ಬಾಂಗ್ಲಾದೇಶದಾದ್ಯಂತ ಹಬ್ಬಿದ್ದ ಈ ಹಿಂಸೆ ಶಾಲಾ-ಕಾಲೇಜುಗಳ ಬಾಗಿಲು ಮುಚ್ಚಿಸಿತ್ತು. ವಾರದಮಟ್ಟಿಗೆ ಇಡೀ ದೇಶವೇ ಸೂತ್ರ ಹರಿದ ಪಟದಂತಾಗಿತ್ತು. ಕಳೆದ ವಾರ ಬಾಂಗ್ಲಾದೇಶದಲ್ಲಿ ಸರ್ಕಾರಿ ನೌಕರಿಯ ಮೀಸಲು ಸಂಬಂಧ ಎದ್ದ ಹಿಂಸಾತ್ಮಕ ಪ್ರತಿಭಟನೆಯ ಕರಾಳ ಪರಿಣಾಮದ ಸಾರವಿದು. ಯಾವುದೇ ದೇಶದಲ್ಲಿ ನಡೆಯಬಹುದಾದ ಅಶಾಂತ ವಿದ್ಯಮಾನಗಳಲ್ಲಿ ಇದೂ ಒಂದಾಗಿದ್ದರೆ, ತತ್ ಕ್ಷಣದ ಯಾವುದೋ ಕಾರಣಕ್ಕೆ ಘಟಿಸಿದ ಘಟನೆ ಇದಾಗಿದ್ದರೆ ಅದನ್ನೊಂದು ಸುದ್ದಿಯಾಗಿ ಮಾತ್ರವೇ ಓದಿಕೊಳ್ಳಬಹುದಿತ್ತಾಗಲೀ ಅಂಕಣದ ವಿಶ್ಲೇಷಣೆಯ ಪರಿಧಿಗೆ ಬರುತ್ತಿರಲಿಲ್ಲ.
ಆದರೆ, ಬಾಂಗ್ಲಾದೇಶದ ಹಿಂಸೆಯ ಹಿಂದಿರುವುದು ಉದ್ಯೋಗದ ಕೂಗು. ಅದು ಆ ದೇಶವನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ಆವರಿಸಿಕೊಳ್ಳಲಿದೆ. ಆ ದೇಶವು ಜನರಿಗೆ ಆದಾಯ ಕೊಡುವುದಕ್ಕೆ ವಿಫಲವಾಗುತ್ತ ಹೋದಂತೆಲ್ಲ ಭಾರತದ ಗಡಿಯುದ್ದಕ್ಕೂ ಅಕ್ರಮ ವಲಸಿಗರ ಒತ್ತಡ ಜೋರಾಗಲಿಕ್ಕಿದೆ. ಇದನ್ನು ಭಾರತದಲ್ಲಿ ತಮ್ಮ ಆಂತರಿಕ ರಾಜಕಾರಣಕ್ಕೆ ಉಪಯೋಗಿಸಿಕೊಳ್ಳುವವರಿಗೂ ಕೊರತೆ ಏನಿಲ್ಲ.
ಬಾಂಗ್ಲಾ ವಿಷಯದಲ್ಲಿ ಮಮತಾ ಬ್ಯಾನರ್ಜಿ ರಾಜಕೀಯ
ಬಾಂಗ್ಲಾದೇಶದಲ್ಲಿ ಮೀಸಲು ವಿಷಯದಲ್ಲಿ ದೊಂಬಿ-ಹಿಂಸೆಗಳು ತೆರೆದುಕೊಂಡಾಗ ಇತ್ತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಯನ್ನೇ ಗಮನಿಸಿ. ‘ಬಾಂಗ್ಲಾದೇಶದಲ್ಲಿ ಹಿಂಸೆಗೊಳಗಾದವರು ಆಶ್ರಯ ಕೋರಿದರೆ ತನ್ನ ರಾಜ್ಯದಲ್ಲಿ ಅವರಿಗೆ ಪ್ರವೇಶ ಕಲ್ಪಿಸುತ್ತೇನೆ’ ಎಂಬ ಹೇಳಿಕೆ ನೀಡುವುದಕ್ಕೆ ಮಮತಾ ಯಾವ ಮುಲಾಜನ್ನೂ ಇಟ್ಟುಕೊಳ್ಳಲಿಲ್ಲ. ಆದರೆ, ಬೇರೆ ದೇಶದ ಪ್ರಜೆಗಳನ್ನು ಒಳಗೆ ಬಿಟ್ಟುಕೊಳ್ಳಬೇಕೋ ಬೇಡವೋ, ನಿರಾಶ್ರಿತರ ಕುರಿತಂತೆ ನೀತಿಗಳು ಏನಿರಬೇಕು ಎಂಬುದನ್ನೆಲ್ಲ ನಿರ್ಧರಿಸಬೇಕಿರುವುದು ಕೇಂದ್ರ ಸರ್ಕಾರವೇ ಹೊರತು ಪಶ್ಚಿಮ ಬಂಗಾಳದ ಸರ್ಕಾರವಲ್ಲ. ಗಡಿ ನಿರ್ವಹಣೆ ಕೇಂದ್ರದ್ದು. ತನ್ನ ರಾಜ್ಯ ಗಡಿಭಾಗದಲ್ಲಿದೆ ಎಂಬ ಕಾರಣಕ್ಕೆ ಬೇರೆ ದೇಶದ ಜನರನ್ನು ಒಳಗೆಬಿಟ್ಟುಕೊಳ್ಳುವ ಅಧಿಕಾರ ಯಾವುದೇ ಮುಖ್ಯಮಂತ್ರಿಗಿಲ್ಲ. ಇಷ್ಟಕ್ಕೂ ಖುದ್ದು ಪಶ್ಚಿಮ ಬಂಗಾಳದವರೇ ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆಂಬುದು ವಾಸ್ತವ. ಅಷ್ಟಾಗಿಯೂ, ಬಾಂಗ್ಲಾದೇಶದವರಿಗೆ ಆಶ್ರಯ ಕೊಡುವ ಮಾತನಾಡಿದರೆ ಅದು ತನ್ನ ರಾಜ್ಯದ ನಿರ್ದಿಷ್ಟ ಕೋಮಿನ ಮತದಾರರ ಸಂತೋಷಕ್ಕೆ ಕಾರಣವಾಗುತ್ತದೆಂಬುದೇ ಮಮತಾ ಬ್ಯಾನರ್ಜಿ ಹೀಗೊಂದು ಮಾತನ್ನು ಹರಿಬಿಡುವುದಕ್ಕೆ ಪ್ರೇರಣೆ.
1971ರಲ್ಲಿ ಭಾರತದ ಬೆಂಬಲದೊಂದಿಗೆ ಪಾಕಿಸ್ತಾನದ ವಿರುದ್ಧ ಹೋರಾಡಿ ಅವತ್ತಿನ ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶವಾಯಿತಷ್ಟೆ. ಇವತ್ತು ಬಾಂಗ್ಲಾದೇಶದ ಪ್ರಧಾನಿಯಾಗಿರುವ ಶೇಖ್ ಹಸೀನಾರ ತಂದೆ ಶೇಖ್ ಮುಜಿಬುರ್ ರೆಹಮಾನ್ ಈ ವಿಮೋಚನಾ ಹೋರಾಟದ ನಾಯಕತ್ವ ಸ್ಥಾನದಲ್ಲಿದ್ದರು. 1973ರಲ್ಲಿ ಆ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಇವರದ್ದೇ ಪಕ್ಷ ಆವಾಮಿ ಲೀಗ್ ಅಧಿಕಾರಕ್ಕೆ ಬಂತು. ನಂತರ ಕೆಲವೇ ವರ್ಷಗಳಲ್ಲಿ ಬಾಂಗ್ಲಾದೇಶ ಮಿಲಿಟರಿ ಆಡಳಿತಕ್ಕೆ ಒಳಪಟ್ಟದ್ದು, 90ರ ದಶಕದಲ್ಲಿ ಕೆಲ ಸಮಯ ಖಲೀದಾ ಜಿಯಾ ಆಳ್ವಿಕೆ ಮಾಡಿದ್ದು ಎಲ್ಲವೂ ಸಂಕ್ಷಿಪ್ತ ಇತಿಹಾಸ. 2009ರಿಂದೀಚೆಗೆ ಶೇಖ್ ಹಸೀನಾ ಅವರ ಆವಾಮಿ ಲೀಗ್ ಕೈಯಲ್ಲೇ ಅಧಿಕಾರವಿದೆ.
ಹೀಗಿರುವಾಗ, ಶೇಖ್ ಮುಜಿಬುರ್ ಆಡಳಿತದಲ್ಲಿಯೇ ಅಲ್ಲಿನ ಸರ್ಕಾರಿ ನೌಕರಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತವರ ಮಕ್ಕಳಿಗೆ ಶೇ. 30ರಷ್ಟು ಮೀಸಲು ನೀಡಲಾಗಿತ್ತು. ಸಹಜವಾಗಿಯೇ ಇದು ಮುಜಿಬುರ್ ಅವರ ಆವಾಮಿ ಲೀಗ್ ಸದಸ್ಯರಿಗೇ ಹೆಚ್ಚಿನ ಲಾಭ ಮಾಡಿಕೊಟ್ಟಿತು. ಏಕೆಂದರೆ, ವಿಮೋಚನೆಯ ಮುಂಚೂಣಿಯಲ್ಲಿದ್ದವರು ಅವರೇ ಎಂಬ ಕಾರಣಕ್ಕೆ. ಸ್ವಾತಂತ್ರ್ಯ ಬಂದಿದ್ದ ಹೊಸತರಲ್ಲಿ ಇದು ನ್ಯಾಯವಾಗಿಯೂ ಕಾಣುತ್ತಿತ್ತು. ಕೆಲವರ್ಷಗಳ ಬಳಿಕ ಇದಕ್ಕೆ ಪ್ರತಿರೋಧ ಎದುರಾಯಿತು. ಅಲ್ಲಿನ ತರ್ಕವೂ ಸರಳವೇ. ಅದಾಗಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮತ್ತವರ ಮಕ್ಕಳು ಸರ್ಕಾರದ ಲಭ್ಯ ನೌಕರಿಗಳಲ್ಲಿ ಆದ್ಯತೆಯ ಸ್ಥಾನ ಪಡೆದಿದ್ದಾಗಿದೆ. ಹೀಗಿರುವಾಗ ಈ ಮೀಸಲು ಕೋಟಾವನ್ನು ಅವರ ಮೊಮ್ಮಕ್ಕಳ ಕಾಲಕ್ಕೂ ವಿಸ್ತರಿಸುವುದು ಉಳಿದವರಿಗೆ ಮಾಡುವ ಅನ್ಯಾಯವಾಗುತ್ತದೆ ಎನ್ನೋದು. 2018ರಲ್ಲಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆದಾಗ ಇದೇ ಶೇಖ್ ಹಸೀನಾ ಈ ಮೀಸಲು ಕೋಟಾವನ್ನು ತೆಗೆದು ಹಾಕಿದ್ದರು. ಈಗೇನೂ ಅವರು ಮತ್ತೆ ಆ ಮೀಸಲನ್ನು ಮರುಜಾರಿ ಮಾಡಿರಲಿಲ್ಲ.
ಆದರೂ ಹಿಂಸಾಚಾರ ಹುಟ್ಟಿಕೊಂಡಿದ್ದಾದರೂ ಹೇಗೆ? ಆಗಿದ್ದೇನೆಂದರೆ, ಯಾರೋ ಹೈಕೋರ್ಟಿಗೆ ಹೋಗಿ 2018ರಲ್ಲಿ ಮೀಸಲು ತೆಗೆದಿದ್ದನ್ನು ಪ್ರಶ್ನಿಸಿದ್ದರು. ಅದು ಇತ್ತೀಚೆಗೆ ಮತ್ತೆ ಅನುಷ್ಠಾನಕ್ಕೆ ಆದೇಶ ನೀಡಿತು. ವಿಪಕ್ಷಗಳು ನೇಪಥ್ಯಕ್ಕೆ ಸರಿದುಬಿಟ್ಟಿರುವ ಬಾಂಗ್ಲಾದೇಶದಲ್ಲಿ ನ್ಯಾಯಾಂಗ ಸೇರಿದಂತೆ ಎಲ್ಲವೂ ಶೇಖ ಹಸೀನಾ ಹಿಡಿತದಲ್ಲೇ ಇದೆ ಎಂಬ ಗ್ರಹಿಕೆ ಗಟ್ಟಿಯಾಗಿರುವುದರಿಂದ, ಇದನ್ನು ಆಕೆಯೇ ಮಾಡಿಸಿದ್ದು ಎಂದು ಆಕ್ರೋಶಗೊಂಡ ಯುವಜನರು ಬೀದಿಗೆ ಬಂದರು. ಇದೀಗ, ಆ ದೇಶದ ಸುಪ್ರೀಂಕೋರ್ಟ್ ಎಲ್ಲ ಬಗೆಯ ಮೀಸಲನ್ನು ಶೇ. 7ಕ್ಕೆ ಮಾತ್ರವೇ ಮಿತಿಗೊಳಿಸಿ, ಉಳಿದ 93 ಶೇಕಡ ಸರ್ಕಾರಿ ನೌಕರಿಗಳನ್ನು ಅರ್ಹರೆಲ್ಲರಿಗೂ ಲಭ್ಯವಾಗಿಸಿದೆ.
ಈ ನಿರ್ದಿಷ್ಟ ಪ್ರತಿಭಟನೆಯೇನೋ ಇದರಿಂದ ತಣ್ಣಗಾಗಬಹುದಾದರೂ ಈ ಉದ್ಯೋಗಕೇಂದ್ರೀತ ಪ್ರತಿಭಟನೆ-ಹಿಂಸಾಚಾರಗಳು ಬಾಂಗ್ಲಾದೇಶದ ಭವಿಷ್ಯದಲ್ಲಿ ಎಡಬಿಡದೇ ಕಾಡುವ ಆತಂಕವಿದೆ. ಉದ್ಯೋಗವೆಂಬುದು ಮುನ್ನೆಲೆಯಲ್ಲಿರುವ ಈ ಜನಾಕ್ರೋಶದ ಒಡಲಲ್ಲಿ ಹಲವು ಬಗೆಯ ಹತಾಶೆಗಳಿವೆ ಮತ್ತದು ಬಾಂಗ್ಲಾದೇಶವನ್ನು ನುಂಗುವುದಕ್ಕೆ ದಿನಗಣನೆ ಮಾಡುತ್ತಿದೆ!
ತಾಪಮಾನ ಬದಲಾವಣೆಯ ದುರ್ದೆಸೆಗಳ ಬಗ್ಗೆ ಇವತ್ತು ಜಾಗತಿಕವಾಗಿ ಯಾವ ಚರ್ಚೆ ನಡೆದಿದೆಯೋ, ಅದರ ಮುಖ್ಯ ಶಿಕಾರಿಗಳಲ್ಲಿ ಒಂದಾಗಲಿರುವ ದೇಶ ಬಾಂಗ್ಲಾದೇಶ. 2050ರ ಹೊತ್ತಿಗೆ ಸಮುದ್ರಮಟ್ಟದಲ್ಲಾಗುವ ಏರಿಕೆಯಿಂದ ಬಾಂಗ್ಲಾದೇಶವು ತನ್ನ ಶೇಕಡ 17ರಷ್ಟು ಭೂಭಾಗವನ್ನು ಕಳೆದುಕೊಳ್ಳುತ್ತದೆ ಹಾಗೂ ಸುಮಾರು 2 ಕೋಟಿ ಮಂದಿಗೆ ನೆಲೆಯಿಲ್ಲದಂತಾಗುತ್ತದೆ ಅಂತ ಹವಾಮಾನ ಪರಿಣತರು ಭವಿಷ್ಯ ನುಡಿದಿದ್ದಾರೆ.
ಈ ಭವಿಷ್ಯವನ್ನು ನಿಜವಾಗಿಸುವ ರೀತಿಯಲ್ಲೇ ಬಾಂಗ್ಲಾದೇಶದ ಭೌಗೋಳಿಕ ರಚನೆಯಿದೆ ಹಾಗೂ ಈ ಭಯಾನಕ ಭವಿಷ್ಯದ ಮಾದರಿಗಳು ಅದಾಗಲೇ ಅಲ್ಲಿ ವಾಸ್ತವವಾಗಿ ಕಂತುಕಂತುಗಳಲ್ಲಿ ತೆರೆದುಕೊಳ್ಳುತ್ತಿವೆ. ಬಾಂಗ್ಲಾದೇಶಕ್ಕೆ ಪ್ರವಾಹ ಹೊಸತಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ಚಂಡಮಾರುತ ಮತ್ತು ಮಳೆ ಪ್ರಭಾವಗಳೆರಡೂ ಹೆಚ್ಚಾಗಿವೆ. ಇನ್ನೊಂದೆಡೆ ಸಮುದ್ರಮಟ್ಟ ಏರುತ್ತಿದೆ. ಸಮುದ್ರ ತೀರಕ್ಕಂಟಿಕೊಂಡಿರುವ ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ಸಮುದ್ರ ಕೊರೆತ ಮತ್ತು ಸಮುದ್ರಮಟ್ಟದ ಏರಿಕೆಗಳು ಅಲ್ಲಿನ ಕೃಷಿ ಅರ್ಥವ್ಯವಸ್ಥೆಯ ಬಲವನ್ನೇ ಕಸಿದಿವೆ. ಸಮುದ್ರ ಉಕ್ಕಿ ಹಿಂದೆ ಸರಿದ ನಂತರವೂ ಅಲ್ಲಿನ ಮಣ್ಣಿನಲ್ಲಿ ಲವಣಾಂಶವೇ ನಿಂತುಬಿಡುವುದರಿಂದ ಈ ಪ್ರಾಂತ್ಯದ ಬತ್ತದ ಗದ್ದೆಗಳೆಲ್ಲ ಕೃಷಿ ಮಾಡಲಾಗದ ರೀತಿ ಬದಲಾಗಿವೆ. ಅಲ್ಲಿ ಕೆಲವರು ಸಮುದ್ರ ಸಿಗಡಿಯನ್ನು ಸಾಕಿ ಅವನ್ನು ಆಹಾರವಸ್ತುವನ್ನಾಗಿ ಮಾರುವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರಾದರೂ ಇದು ಮೊದಲಿನ ಬತ್ತ ಬೆಳೆಯುವ ಅರ್ಥವ್ಯವಸ್ಥೆಗೆ ಸಮಾನಾಗಿ ಇಲ್ಲ. ನೆಲ ಹದ ಮಾಡುವುದು, ನಾಟಿ, ಫಸಲು ಕೊಯ್ಯುವುದು ಹೀಗೆ ವರ್ಷದುದ್ದಕ್ಕೂ ಚಾಲ್ತಿಯಲ್ಲಿರುತ್ತಿದ್ದ ಆರ್ಥಿಕ ಚಕ್ರವೊಂದು ಅಲ್ಲಿನ ಬಹುದೊಡ್ಡ ಪ್ರಮಾಣದ ಜನರಿಗೆ ಆಸರೆ ನೀಡಿತ್ತು. ಸಿಗಡಿ (Shrimp) ಸಾಕುವಿಕೆ ಆ ಪ್ರಮಾಣದಲ್ಲೇನೂ ಉದ್ಯೋಗ ಕೊಡಲಾರದು.
ಇದು ಸಮುದ್ರ ತಡಿಯ ಕತೆಯಾದರೆ, ಹಿಮಾಲಯದೊಂದಿಗೆ ತಂತು ಹೊಂದಿರುವ ಗಂಗಾ, ಬ್ರಹ್ಮಪುತ್ರ, ಮೇಘನಾ ನದಿಗಳು ತಮ್ಮ ಹರಿವಿನ ಪ್ರಾಂತ್ಯದಲ್ಲಿ ಸೃಷ್ಟಿಸುತ್ತಿರುವ ಪ್ರವಾಹದ ಪ್ರಮಾಣವೂ ಹೆಚ್ಚಿಕೊಂಡು ಅಲ್ಲಿನ ಕೃಷಿ ಸಹ ಅತ್ಯಂತ ಪ್ರಯಾಸದ್ದಾಗಿ ಮಾರ್ಪಟ್ಟಿದೆ. ಸಿಲ್ಹೆಟ್, ಸುನಾಮಗಂಜ್, ನೆತ್ರೊಕೋನ, ಕಿಶೋರ್ಗಂಜ್ ಹೀಗೆ ಬಾಂಗ್ಲಾದೇಶದಲ್ಲಿ ನದಿ ಹರಿವಿನ ಪ್ರದೇಶಗಳೆಲ್ಲ ಮಳೆಗಾಲದಲ್ಲಿ ಅತಿ ಪ್ರವಾಹಕ್ಕೆ ಸಿಕ್ಕು ಒದ್ದಾಡುತ್ತಿವೆ. ಪ್ರತಿವರ್ಷ ಸುಮಾರು 14,000 ಮಕ್ಕಳು ಬಾಂಗ್ಲಾದೇಶದಲ್ಲಿ ಮುಳುಗಿ ಸಾಯುತ್ತಾರೆ ಎಂಬ ಸಂಖ್ಯೆಯನ್ನು ಮುಂದಿಟ್ಟುಕೊಂಡಾಗ ಪರಿಸ್ಥಿತಿಯ ಗಹನತೆ ಅರ್ಥವಾಗುತ್ತದೆ.
ಇವೆಲ್ಲದರ ಪರಿಣಾಮ ಏನಾಗಿದೆಯೆಂದರೆ, ಬಾಂಗ್ಲಾದೇಶದ ಬೇರೆ ಬೇರೆ ಭಾಗಗಳಿಂದ ರಾಜಧಾನಿ ಢಾಕಾಕ್ಕೆ ಬಂದು ನೆಲೆಸಿದವರ ಸಂಖ್ಯೆ ಹೆಚ್ಚಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯೊಂದರ ಪ್ರಕಾರ ಬಾಂಗ್ಲಾದೇಶದ ಹಳ್ಳಿಗಳು ಮತ್ತು ಕರಾವಳಿ ಪ್ರದೇಶಗಳಿಂದ ಪ್ರತಿವರ್ಷ 5 ಲಕ್ಷ ಮಂದಿ ಢಾಕಾಕ್ಕೆ ಬಂದು ನೆಲೆಸುತ್ತಿದ್ದಾರೆ. ಇದು ಅಲ್ಲಿನ ನಾಗರಿಕ ಸೇವೆಗಳ ಮೇಲೆ ಒತ್ತಡ ಸೃಷ್ಟಿಸಿದೆ. ನಗರ ಯೋಜನೆರಹಿತವಾಗಿ ಬೇಕುಬೇಕಾದಂತೆ ಬೆಳೆಯುತ್ತಿರುವುದರಿಂದ ಅಲ್ಲಿನ ನೀರು ಪೂರೈಕೆ, ಚರಂಡಿ ವ್ಯವಸ್ಥೆ, ಸಂಚಾರ ವ್ಯವಸ್ಥೆ, ವಸತಿ ಸಮುಚ್ಛಯಗಳೆಲ್ಲವೂ ಕೆಟ್ಟ ಸ್ಥಿತಿ ತಲುಪುತ್ತಿವೆ. ಅಲ್ಲದೇ, ಹಳ್ಳಿಗಳಿಂದ ನಗರಗಳಿಗೆ ಬಂದವರಲ್ಲಿ ಹೆಚ್ಚಿನವರಿಗೆ ಕಸ ಎತ್ತುವ, ಗುಜರಿ ಕೆಲಸ ಮಾಡುವ, ಕೂಲಿಯಾಳಾಗುವ ಕೆಲಸಗಳಷ್ಟೇ ಸಿಗುತ್ತಿವೆಯಾದ್ದರಿಂದ ಜೀವನಮಟ್ಟ ಸಹ ಅಷ್ಟಕಷ್ಟೆ. ಆದರೇನಂತೆ, ದೇಶದಲ್ಲಾಗುತ್ತಿರುವ ಉದ್ಯೋಗಸೃಷ್ಟಿಯ ಶೇ.48ರ ಪಾಲು ಢಾಕಾದ್ದೇ.
ಆರ್ಥಿಕ ವಲಯದಲ್ಲಿ ಭಾರತವನ್ನು ಟೀಕಿಸುವ ಸಂದರ್ಭ ಬಂದಾಗ ಬಹಳಷ್ಟು ವಿಶ್ಲೇಷಕರು ಹಾಗೂ ಬರಹಗಾರರು ಬಾಂಗ್ಲಾದೇಶದ ಅರ್ಥವ್ಯವಸ್ಥೆಯನ್ನು ಉದಾಹರಿಸಿ ನಮ್ಮ ದೇಶವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಂಕಿಸಂಖ್ಯೆಗಳ ಲೆಕ್ಕದಲ್ಲಿ ನೋಡಿದಾಗ ಬಾಂಗ್ಲಾದೇಶದಲ್ಲಿ ಭಾರತವನ್ನು ಹಿಂದಿಕ್ಕುವ ಅಂಶಗಳಿರುವುದು ನಿಜ. ಇತ್ತೀಚಿನ ಕೆಲವರ್ಷಗಳಲ್ಲಿ ಬಾಂಗ್ಲಾದೇಶದ ಜಿಡಿಪಿ ಬೆಳವಣಿಗೆ ದರ ಭಾರತವನ್ನು ಮೀರಿಸಿತ್ತು, ಅಲ್ಲಿನ ತಲಾ ಆದಾಯ ಭಾರತಕ್ಕಿಂತ ಹೆಚ್ಚು. ಆದರೆ, ಭಾರತದ ಅರ್ಥವ್ಯವಸ್ಥೆಯ ವಿಸ್ತಾರ ಮತ್ತು ಅದು ಒಳಗೊಂಡಿರುವ ಅಂಶಗಳು ಇವೆಲ್ಲವನ್ನೂ ಮೀರಿ ನಿಲ್ಲುತ್ತವೆ. ಉದಾಹರಣೆಗೆ, ಬಟ್ಟೆ ತಯಾರಿಕೆ ಉದ್ದಿಮೆಯನ್ನೇ ಅತಿದೊಡ್ಡಮಟ್ಟದಲ್ಲಿ ಅವಲಂಬಿಸಿರುವ ದೇಶ ಬಾಂಗ್ಲಾದೇಶ. ಅದರ ಹೊರತಾದ ಇಂಡಸ್ಟ್ರಿಗಳು ಅಲ್ಲಿ ಎಣಿಕೆಗೆ ಕಷ್ಟ. ಭಾರತವು ಮೊಬೈಲ್ ಫೋನ್ ತಯಾರಿಕೆಯಿಂದ ಬಾಹ್ಯಾಕಾಶ ಉದ್ದಿಮೆವರೆಗೆ ಹಲವು ವಿಸ್ತಾರಗಳನ್ನು ಪಡೆದಿರುವುದರಿಂದ ಈ ದೇಶದ ಅವಕಾಶಗಳು ಮತ್ತು ಕೌಶಲಗಳು ಬಾಂಗ್ಲಾದೇಶಕ್ಕಿಂತ ಅವೆಷ್ಟೋ ಪಟ್ಟು ವ್ಯಾಪಕತೆ ಹೊಂದಿರುವಂಥದ್ದು. ಹೀಗಾಗಿ, ಕೆಲವು ಧನಾತ್ಮಕ ಅಂಶಗಳನ್ನು ಬಾಂಗ್ಲಾದೇಶದಿಂದ ಪಡೆದುಕೊಳ್ಳುವುದಕ್ಕೆ ಅಡ್ಡಿ ಇಲ್ಲವಾದರೂ ಸುದೀರ್ಘ-ಸುಸ್ಥಿರ ಆರ್ಥಿಕತೆಯ ಸಾಧ್ಯತೆಯನ್ನು ಬಾಂಗ್ಲಾದೇಶ ಖಂಡಿತ ಹೊಂದಿಲ್ಲ. ನಮ್ಮಂತೆ ಭವಿಷ್ಯದ ಮೂಲಸೌಕರ್ಯಗಳಿಗೆ ಹಣಹಾಕುವ ಸಾಮರ್ಥ್ಯ ಅಲ್ಲಿ ಕಾಣುತ್ತಿಲ್ಲ.
ಎಲ್ಲ ನಿಸರ್ಗ ಮುನಿಸುಗಳನ್ನೂ ಮೆಟ್ಟಿನಿಂತು, ಜಾಗತಿಕ ಸಹಕಾರದೊಂದಿಗೆ ದೇಶಕಟ್ಟಿಬಿಡುತ್ತೇನೆ ಎಂಬ ಉಮೇದನ್ನಾದರೂ ಇಟ್ಟುಕೊಳ್ಳುವುದಕ್ಕೆ ಬಾಂಗ್ಲಾದೇಶದಲ್ಲಿ ನಾಯಕತ್ವದ ಕೊರತೆಯೂ ಇದೆ. ಶೇಖ್ ಹಸೀನಾ ಹಾಗೂ ಖಲೀದಾ ಬೇಗಂ ಜಿಯಾ ಇವರಿಬ್ಬರ ಕುಟುಂಬ ರಾಜಕಾರಣದ ನಡುವೆಯೇ ಬಾಂಗ್ಲಾದೇಶವಿದೆ. ಇವರಿಬ್ಬರೂ 70ರ ಪ್ರಾಯ ದಾಟಿದ್ದಾರೆ. ಈ ಎರಡು ಕುಟುಂಬದ ನಡುವಿಂದಾಗಲೀ, ಹೊರಗಿನಿಂದಾಗಲೀ ಒಂದು ಹೊಸ ಯೋಚನೆಯ ನಾಯಕತ್ವ ಇವತ್ತಿನವರೆಗೂ ಟಿಸಿಲೊಡೆದಿಲ್ಲ. ಶೇಖ್ ಹಸೀನಾ ಆಡಳಿತವು ಭಾರತ ಮತ್ತು ಚೀನಾಗಳೆರಡರಿಂದಲೂ ಲಾಭ ಎತ್ತಿಕೊಳ್ಳುವ ಪ್ರಯತ್ನ ಮಾಡಿಕೊಂಡು ಬಂತು. ಬಾಂಗ್ಲಾದೇಶದಲ್ಲಿ ಹಸೀನಾ ಆಡಳಿತವು ಹೂಡಿಕೆಗಳ ವಿಚಾರದಲ್ಲಿ ಅತಿಯಾಗಿ ಚೀನಾವನ್ನು ಒಳಬಿಟ್ಟುಕೊಂಡಿರುವುದರಿಂದ ಅಮೆರಿಕ ಅದಾಗಲೇ ದೂರವಾಗಿದೆ. ಈ ಬಾರಿ ಚುನಾವಣೆಯಲ್ಲಿ ಅದು ಹಸ್ತಕ್ಷೇಪ ಮಾಡಿ ಹಸೀನಾರನ್ನು ಬದಲಿಸುವುದಕ್ಕೂ ಪ್ರಯತ್ನ ಮಾಡಿತ್ತು. ಹೀಗೆ ಚೀನಾವನ್ನು ಬಹುವಾಗಿ ಅಪ್ಪಿಕೊಂಡ ಹಸೀನಾ ಇತ್ತೀಚಿನ ತಮ್ಮ ಬೀಜಿಂಗ್ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿಬಂದಿರುವುದು ಅಲ್ಲಿಯೂ ಎಲ್ಲವೂ ಸರಿಯಿಲ್ಲವೆಂಬುದನ್ನು ಸಾರುತ್ತಿದೆ. ಭಾರತಕ್ಕೆ ಹಸೀನಾರನ್ನು ಬಿಟ್ಟರೆ, ಇಸ್ಲಾಂ ಮೂಲಭೂತವಾದವನ್ನು ಅತಿಯಾಗಿ ಪೋಷಿಸುವ ಜಿಯಾ ಆಡಳಿತ ಬಂದುಬಿಡುತ್ತದೆಂಬ ಆತಂಕವಿರುವುದರಿಂದ ನಮ್ಮೆದುರು ಆಯ್ಕೆಗಳಿಲ್ಲ.
2004ರಲ್ಲಿ ಅವತ್ತಿನ ಯುಪಿಎ ಸರ್ಕಾರವು ಭಾರತದಲ್ಲಿ ಸುಮಾರು 1.2 ಕೋಟಿ ಬಾಂಗ್ಲಾದೇಶಿ ಅಕ್ರಮ ವಲಸಿಗರಿರಬಹುದೆಂಬುದನ್ನು ಅಂದಾಜು ಹಾಕಿತ್ತು. ಈ ಬಗ್ಗೆ ಚರ್ಚೆ ಹೆಚ್ಚಾದಾಗ ಸಚಿವರು ತಮ್ಮ ಈ ಹೇಳಿಕೆಯನ್ನು ಹಿಂಪಡೆದರೆಂಬುದು ಬೇರೆ ಕತೆ. 2016ರಲ್ಲಿ ಎನ್ ಡಿ ಎ ಸಚಿವ ಕಿರಿಣ್ ರಿಜಿಜು ಅವರು ರಾಜ್ಯಸಭೆಯಲ್ಲಿ ನೀಡಿದ್ದ ಮಾಹಿತಿ ಪ್ರಕಾರ, ದೇಶದಾದ್ಯಂತ ಇರುವ ಅಕ್ರಮ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ 2 ಕೋಟಿ ಎಂದು ಕೇಂದ್ರ ಅಂದಾಜಿಸಿತ್ತು. ನಾವೇನೂ ಯುಪಿಎ ಸರ್ಕಾರದ ರೀತಿ ಈ ಅಂದಾಜು ಅಂಕಿಯಿಂದ ಹಿಂದೆ ಸರಿಯುವುದಿಲ್ಲ, ಈ ನಿಟ್ಟಿನಲ್ಲಿ ಪರಿಹಾರೋಪಾಯ ಹುಡುಕುತ್ತೇವೆಂದು ಅವತ್ತಿಗೆ ರಿಜಿಜು ಹೇಳಿದ್ದರು.
ಕೇಂದ್ರದಲ್ಲಿ ಸರ್ಕಾರ ಯಾವುದೇ ಇರಲಿ, ಅತ್ತ ಢಾಕಾದಲ್ಲಿ ಜನಸಂಖ್ಯೆಯ ಸಾಂದ್ರತೆ ಹೆಚ್ಚುತ್ತ ಹೋದಂತೆ, ಅಲ್ಲಿನ ಜನರಿಗೆ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗುತ್ತ ಹೋದಂತೆ ಭಾರತದತ್ತ ಅಕ್ರಮ ವಲಸೆ ಹೆಚ್ಚಲಿದೆ. ಬಾಂಗ್ಲಾದೇಶದೊಂದಿಗೆ ಭಾರತದ್ದು ನಾಲ್ಕು ಸಾವಿರ ಚಿಲ್ಲರೆ ಕಿಲೊಮೀಟರುಗಳ ವಿಸ್ತಾರದ ಗಡಿ. ಭೂರಚನೆ ಮತ್ತು ನದಿ ಹರಿವುಗಳು ಎಲ್ಲ ಕಡೆ ಬೇಲಿ ಹಾಕುವ ಅವಕಾಶ ಕೊಡುವುದಿಲ್ಲ. ಮೇಲಿಂದ ಮಮತಾ ಬ್ಯಾನರ್ಜಿಯಂಥವರ ತುಷ್ಟೀಕರಣದ ನಡೆಗಳು.
ನಿಸರ್ಗದ ಮುನಿಸು, ನಿರುದ್ಯೋಗ, ನಾಯಕತ್ವದ ನಿರ್ವಾತ ಇವೆಲ್ಲವೂ ಬಾಂಗ್ಲಾದೇಶವನ್ನು ಗ್ಯಾರಂಟಿಯಾಗಿ ಕಾಡಲಿರುವ ಸವಾಲುಗಳು. ಇದರ ಕಂಪನಗಳು ಭಾರತವನ್ನೂ ದೊಡ್ಡದಾಗಿಯೇ ತಾಗಲಿವೆ ಅನ್ನೋದು ನಮ್ಮೆದುರಿನ ವಾಸ್ತವ.
-ಚೈತನ್ಯ ಹೆಗಡೆ
cchegde@gmail.com
Advertisement