ಗಂಟಲಲ್ಲಿನ ಬಿಸಿ ತುಪ್ಪದ ಸ್ಥಿತಿ. ನುಂಗುವಂತೆಯೂ ಇಲ್ಲ. ಹೊರಕ್ಕೆ ಚೆಲ್ಲುವಂತೆಯೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎದುರಿಸುತ್ತಿರುವ ಇಕ್ಕಟ್ಟಿನ ಸನ್ನಿವೇಶ ಇದು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರನ್ನು ಆಧರಿಸಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ತನಿಖೆಯ ವ್ಯಾಪ್ತಿ, ಯಾವ ಸಂಸ್ಥೆ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ.
ಸದ್ಯಕ್ಕೇನೋ ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಆದೇಶದಿಂದಾಗಿ ಇದೇ ತಿಂಗಳ 29 ರ ವರೆಗೆ ಪ್ರಕರಣದ ವಿಚಾರಣೆ ಮುಂದಕ್ಕೆ ಹೋಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಡೆ ಆದೇಶವನ್ನು ತೆರವು ಮಾಡಿ ಅನುಮತಿ ನೀಡಿದ್ದೇ ಆದಲ್ಲಿ ಅದರಿಂದ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಕ್ಕಬೇಕಾಗುತ್ತದೆ. ಈ ವಿಚಾರದಲ್ಲಿ ಅವರೇನೋ ಕಾನೂನು ಸಮರ ಮುಂದುವರಿಸಲು ನಿರ್ಧರಿಸಿದ್ದಾರೆ. ಆದರೆ ಅದರ ರಾಜಕೀಯ ಪರಿಣಾಮಗಳ ಬಗ್ಗೆ ಕಾಂಗ್ರೆಸ್ ನಲ್ಲೇ ಕಳವಳ ಆರಂಭವಾಗಿದೆ.
ಸಿದ್ದರಾಮಯ್ಯ ಉರುಳಿಸುತ್ತಿರುವ ಒಂದೊಂದೂ ರಾಜಕೀಯ ದಾಳಗಳಿಗೆ ಕಾಂಗ್ರೆಸ್ ನ ಘಟಾನುಘಟಿ ನಾಯಕರೇ ಕಂಗಾಲಾಗಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದು ಹೋರಾಟ ನಡೆಸಿವೆ. ಆದರೆ ಆ ಪಕ್ಷಗಳಲ್ಲೂ ಮುಂದಿನ ರಾಜಕೀಯ ಕಾರ್ಯತಂತ್ರದ ಬಗ್ಗೆ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ನ ಒಂದು ಗುಂಪಿಗೆ ಸಿದ್ದರಾಮಯ್ಯ ಮುಂದುವರಿಯುವುದು ಇಷ್ಟವಿಲ್ಲ. ಮೇಲ್ನೋಟಕ್ಕೆ ಅವರಿಗೆ ಬಹಿರಂಗ ನಿಷ್ಠೆ ವ್ಯಕ್ತಪಡಿಸುತ್ತಿರುವ ಅನೇಕ ನಾಯಕರು ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಆದರೆ ಅವರಿಗೆ ಅಗತ್ಯ ಶಾಸಕರ ಸಂಖ್ಯಾ ಬಲ ಇಲ್ಲ.
ಹಾಗೊಂದು ವೇಳೆ ಮುಖ್ಯಮಂತ್ರಿ ಸ್ಥಾನ ತೆರವಾದರೆ ಸಂದರ್ಭಕ್ಕೆ ಇರಲಿ ಎಂಬ ಕಾರಣಕ್ಕೆ ನಿಷ್ಠೆ ತೋರಿಸುವ ನೆಪದಲ್ಲಿ ಸಿದ್ದರಾಮಯ್ಯ ಕೃಪಾಕಟಾಕ್ಷ ಗಿಟ್ಟಿಸಿಕೊಳ್ಳಲು ಈ ನಾಯಕರು ಪೈಪೋಟಿಗೆ ಬಿದ್ದಿದ್ದಾರೆ. ಇವೆಲ್ಲ ಚಟುವಟಿಕೆಗಳು ಏನೇ ಇರಲಿ ನಿಜಕ್ಕೂ ಅವರು ರಾಜೀನಾಮೆ ನೀಡುತ್ತಾರಾ? ಅಥವಾ ರಾಜೀನಾಮೆ ನೀಡುವಂತೆ ಅವರಿಗೆ ಸೂಚನೆ ನೀಡುವಷ್ಟರ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಗಟ್ಟಿಯಾಗಿದೆಯಾ? ಎಂಬುದೇ ಸದ್ಯದ ಪ್ರಶ್ನೆ.
ಈಗಿನ ರಾಜಕೀಯ ಸನ್ನಿವೇಶ ನೋಡಿದರೆ ಪ್ರಕರಣದ ಕಾನೂನು ಹೋರಾಟ ನಿರ್ಣಾಯಕ ಘಟ್ಟ ಮುಟ್ಟುವವರೆಗೆ ರಾಜೀನಾಮೆ ನೀಡದಿರಲು ನಿರ್ಧರಿಸಿರುವ ಸಿದ್ಧರಾಮಯ್ಯ ಅದರ ಪರಿಣಾಮ ಎದುರಿಸಲು "ಎಲ್ಲ ಅಗತ್ಯ ಸಿದ್ಧತೆ" ಮಾಡಿಕೊಂಡಿದ್ದಾರೆ. ಪ್ರಕರಣವನ್ನು ಸುಪ್ರೀಂ ಕೋರ್ಟ್ ವರೆಗೆ ಕೊಂಡೊಯ್ಯಲು ಅವರು ತೀರ್ಮಾನಿಸಿದಂತೆ, ಕಾನೂನು ಹೋರಾಟ ಒಮ್ಮೆ ಆರಂಭವಾದರೆ ಅದು ಮುಕ್ತಾಯಗೊಳ್ಳಲು ದೀರ್ಘ ಸಮಯವೇ ಬೇಕಾಗುತ್ತದೆ. ಹೀಗಾಗಿ ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಕುರ್ಚಿ ಬಿಡದಿರಲು ಅವರು ನಿರ್ಧರಿಸಿದ್ದಾರೆ. ಸಂದರ್ಭ ಎದುರಾದರೆ ಹೈಕಮಾಂಡ್ ವಿರುದ್ಧವೂ ಯುದ್ಧಕ್ಕಿಳಿಯಲು ಅವರು ತಯಾರಾದಂತಿದೆ. ವಾಸ್ತವವಾಗಿ ಇದೇ ಕಾಂಗ್ರೆಸ್ ವರಿಷ್ಠರನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.
ರಾಜೀನಾಮೆ ಕೊಡಿ ಎಂದು ಧೈರ್ಯವಾಗಿ ಹೇಳುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಇಲ್ಲ. ಈಗಾಗಲೇ ತಮ್ಮ ವಿರುದ್ಧದ ಪ್ರಕರಣವನ್ನು ಅಹಿಂದ ಹೋರಾಟದ ಅಸ್ತ್ರವಾಗಿ ಮತ್ತೆ ಬಳಸಿಕೊಳ್ಳಲು ನಿರ್ಧರಿಸಿರುವ ಸಿದ್ದರಾಮಯ್ಯ ನಿಧಾನವಾಗಿ ತಮ್ಮ ಬೆಂಬಲಿಗರ ಮೂಲಕ ಆ ವರ್ಗಗಳ ಒಲವನ್ನು ಗಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಹು ಮುಖ್ಯವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಪ್ರಬಲ ಸಮುದಾಯಗಳು ಹುನ್ನಾರ ನಡೆಸಿವೆ ಎಂದು ಬಿಂಬಿಸುವ ಮೂಲಕ ಇಡೀ ಪ್ರಕರಣದ ಗಮನವನ್ನು ಏರೆ ಕಡೆ ತಿರುಗಿಸುವ ತಂತ್ರಕ್ಕೆ ಅವರು ಶರಣಾಗಿದ್ದಾರೆ. ಸಹಜವಾಗೇ ಇದು ಹೈಕಮಾಂಡ್ ಕಕ್ಕಾಬಿಕ್ಕಿ ಆಗುವಂತೆ ಮಾಡಿದೆ.
ರಾಜ್ಯ ರಾಜಕಾರಣವನ್ನು ಸಮಗ್ರವಾಗಿ ಗಮನಿಸಿದರೆ ಬಿಜೆಪಿ ಲಿಂಗಾಯಿತರು ಮತ್ತು ಸಾಮಾಜಿಕವಾಗಿ ಮುಂದುವರಿದ ಸಮುದಾಯಗಳ ಪಕ್ಷವಾಗಿ ಗುರುತಿಸಿಕೊಂಡಿದೆ. ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯ ಬಲ್ಲ ವರ್ಚಸ್ವಿ ನಾಯಕರು ಆ ಪಕ್ಷದಲ್ಲಿ ಇಲ್ಲ. ಇನ್ನು ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪಕ್ಷವಾಗಿದ್ದು ಅದಕ್ಕೆ ರಾಜ್ಯವ್ಯಾಪಿ ಬಲಿಷ್ಟ ಸಂಘಟನಾತ್ಮಕ ಶಕ್ತಿ ಇಲ್ಲ. ಒಂದು ಕಾಲಕ್ಕೆ ಆ ಪಕ್ಷದ ಪರವಾಗಿದ್ದ ಒಕ್ಕಲಿಗರು ಈಗ ಹಂಚಿ ಹೋಗಿದ್ದಾರೆ. ಹೀಗಾಗಿ ಸಂಘಟನೆಯನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡೇ ಮುಂದುವರಿಯಬೇಕಾದ ಪರಿಸ್ಥಿತಿ ಆ ಪಕ್ಷದ ನಾಯಕರದ್ದು. ಕಾಂಗ್ರೆಸ್ ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವುದರಿಂದ ಜತೆಗೇ ಮುಂದಿನ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿರುವುದರಿಂದ ಸಹಜವಾಗೇ ಸಮುದಾಯದ ಒಂದಷ್ಟು ಒಲವು ಅವರ ಕಡೆ ಇದೆ.
ಒಟ್ಟಾರೆ ನೋಡಿದರೆ ಪ್ರತಿಪಕ್ಷಗಳದ್ದು ಎಡಬಿಡಂಗಿ ಸ್ಥಿತಿ. ಬಿಜೆಪಿಯನ್ನೇ ಉದಾಹರಣಗೆ ತೆಗೆದುಕೊಂಡರೆ ಅಲ್ಲೂ ಭಿನ್ನಮತ, ಕಿತ್ತಾಟ ಬೀದಿಗೆ ಬಂದಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿರುವವರ ಗುಂಪು ದಿನೇ ದಿನೇ ಬಲಿಷ್ಠಗೊಳ್ಳುತ್ತಿದೆ. ಇತ್ತೀಚೆಗೆ ಮೂಲ ಬಿಜೆಪಿಯವರೇ ಆದ ಸಂಘ ಪರಿವಾರದ ನಿಷ್ಠ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇರವಾಗಿ ಅತೃಪ್ತ ಗುಂಪಿನ ಧ್ವನಿಯಾಗಿ ನಿಂತಿರುವುದು ಗಮನಿಸಬೇಕಾದ ಅಂಶ. ರಾಜ್ಯಾಧ್ಯಕ್ಷರಾಗಿ ಭರವಸೆಯ ನಾಯಕತ್ವ ನೀಡಬಹುದೆಂಬ ನಿರೀಕ್ಷೆಯಿದ್ದ ವಿಜಯೇಂದ್ರ ಹಳೆಯ ತಲೆಮಾರಿನ ನಾಯಕರ ಜತೆ ಹೊಂದಿಕೊಳ್ಳಲಾಗದೇ ತಮ್ಮದೇ ಪ್ರತ್ಯೇಕ ಗುಂಪನ್ನು ಸೃಷ್ಟಿ ಮಾಡಿಕೊಂಡಿರುವುದೂ ಪಕ್ಷದಲ್ಲಿ ಅವರ ವಿರುದ್ಧದ ದನಿ ಪ್ರಬಲವಾಗಲು ಕಾರಣವಾಗಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಒಡಕಿನ ಲಾಭ ಪಡೆಯುವ ಸ್ಥಿತಿಯಲ್ಲಿ ಬಿಜೆಪಿಯೂ ಇಲ್ಲ.
ಬಹು ಮುಖ್ಯವಾಗಿ ಸಿದ್ದರಾಮಯ್ಯ ಅವರಿಗೆ ವರವಾಗಿರುವ ಸಂಗತಿ ಇದೇ ಆಗಿದೆ. ಈ ಸೂಕ್ಷ್ಮ ಅರಿತಿರುವ ಅವರು ತಮ್ಮ ತಂತ್ರಗಾರಿಕೆ ಆರಂಭಿಸಿದ್ದಾರೆ. ಅದರ ಒಂದು ಭಾಗ ಎಂಬಂತೆ ಇಡೀ ಸಚಿವ ಸಂಪುಟ ಹಾಗೂ ಶಾಸಕಾಂಗ ಸಭೆಗಳಲ್ಲಿ ತಮ್ಮ ಪರವಾದ ನಿಷ್ಠೆಯ ಒಮ್ಮತದ ಕೂಗು ಹೊರ ಹೊಮ್ಮುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂದರ್ಭ ಎದುರಾದರೆ ತಮಗೆ ಬಹುಮತ ಇರುವುದನ್ನು ಸಾಬೀತು ಪಡಿಸಲು ವಿಧಾನಸಭೆಯ ವಿಶೇಷ ಅಧಿವೇಶನಬ ಕರೆದರೂ ಆಶ್ಚರ್ಯ ಏನೂ ಇಲ್ಲ. ಒಮ್ಮೆ ಸದನದೊಳಗೆ ತಮಗೆ ಬಹುಮತ ಇರುವುದು ಋಜುವಾತಾದರೆ ಆರು ತಿಂಗಳವರೆಗೆ ರಾಜೀನಾಮೆ ಅಥವಾ ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆಗಳು ನಡೆಯುವುದು ಸಾಧ್ಯವಿಲ್ಲ ಎಂಬುದು ಈ ತಂತ್ರದ ಇನ್ನೊಂದು ಭಾಗ.
ಈ ಎಲ್ಲ ಬೆಳವಣಿಗೆಗಳಿಂದ ಪೇಚಿಗೆ ಸಿಕ್ಕಿರುವುದು ಮಾತ್ರ ಕಾಂಗ್ರೆಸ್ ಹೈಕಮಾಂಡ್. ಒಂದು ವೇಳೆ ಒತ್ತಡಗಳಿಗೆ ಮಣಿದು ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದೇ ಆದಲ್ಲಿ ಅದರ ಮುಂದಿನ ಪರಿಣಾಮ ಎದುರಿಸಲು ಸಿದ್ಧವಾಗಬೇಕು. ಪಕ್ಷದಲ್ಲಿ ಅವರನ್ನು ಸರಿಗಟ್ಟುವ ಮತ್ತೊಬ್ಬ ನಾಯಕ ರಾಜ್ಯದಲ್ಲಿ ಇಲ್ಲ.
ಡಿಕೆಶಿ ನಿಷ್ಠೆಯ ಹಿಂದೆ ಲೆಕ್ಕಾಚಾರ?!
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಸಿದ್ದರಾಮಯ್ಯ ಪರ ಅಗತ್ಯಕ್ಕಿಂತ ಹೆಚ್ಚಾಗಿ ಬಹಿರಂಗವಾಗಿ ತಮ್ಮ ಅಚಲ ನಿಷ್ಠೆ ಪ್ರದರ್ಶಿಸುತ್ತಿದ್ದಾರೆ. ಇದೇ ಅನೇಕ ಸಂದೇಹಗಳಿಗೆ ಕಾರಣವಾಗಿದೆ. ಹಾಗೆ ನೋಡಿದರೆ ಅವರ ವಿರುದ್ಧವೂ ಅನೇಕ ಪ್ರಕರಣಗಳು ಸಿಬಿಐ, ಲೋಕಾಯುಕ್ತ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಲ್ಲಿವೆ. ಅವರೂ ಆರೋಪಗಳಿಂದ ಮುಕ್ತರಲ್ಲ. ಹೆಚ್ಚು ಸಂಖ್ಯೆಯ ಶಾಸಕರ ಬೆಂಬಲ ಶಿವಕುಮಾರ್ ಗೆ ಇಲ್ಲ.
ಇನ್ನುಳಿದಂತೆ ಸಚಿವ ಸತೀಶ್ ಜಾರಕಿಹೊಳಿಯವರ ಹೆಸರು ಅಲ್ಲಲ್ಲಿ ಕೇಳಿ ಬರುತ್ತಿದೆಯಾದರೂ ಅವರನ್ನು ಒಪ್ಪುವವರ ಸಂಖ್ಯೆ ಪಕ್ಷದಲ್ಲಿ ತೀರಾ ಕಡಿಮೆ. ಇನ್ನುಳಿದವರ ಪೈಕಿ ಯಾರಿಗೂ ಸಂಖ್ಯಾ ಬಲ ಇಲ್ಲ. ಈ ಅಂಶವನ್ನು ಮನಗಂಡಿರುವ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ. ಒಂದು ವೇಳೆ ಅಂತಹ ಒತ್ತಡ ಎದುರಾದರೆ ಬಲಾಬಲ ಪ್ರದರ್ಶನಕ್ಕೂ ಸಿದ್ದವಾಗಿದ್ದಾರೆ. ಇದು ಹೈಕಮಾಂಡ್ ಗೆ ತಲೆ ನೋವಾಗಿರುವ ಸಂಗತಿ. ಈ ಬೆಳವಣಿಗೆಗಳ ವಿಚಾರದಲ್ಲಿ ಏನೇ ತೀರ್ಮಾನ ಕೈಗೊಂಡರೂ ಅದರಿಂದ ಕರ್ನಾಟಕದಲ್ಲಿ ಪಕ್ಷ ಇಬ್ಭಾಗಾಗುವ ಅಪಾಯಕ್ಕೆ ಸಿಕ್ಕಬಹುದು ಎಂಬ ಆತಂಕ ಹೈಕಮಾಂಡ್ ನಾಯಕರನ್ನು ಕಾಡುತ್ತಿದೆ. ದಕ್ಷಿಣದಲ್ಲಿ ತಮ್ಮ ಸರ್ಕಾರವನ್ನು ಕಳೆದುಕೊಳ್ಳಲು ಅವರಿಗೆ ಇಷ್ಟವಿಲ್ಲ. ಆ ಕಾರಣಕ್ಕೆ ಕಾದು ನೋಡುವ ತಂತ್ರಕ್ಕೆ ಹೈಕಮಾಂಡ್ ಶರಣಾಗಿದೆ.
ಖರ್ಗೆಯವರತ್ತ ಎಲ್ಲರ ಚಿತ್ತ
ಇನ್ನುಳಿದಂತೆ ಕಾಂಗ್ರೆಸ್ ನಲ್ಲಿ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಚಾಲ್ತಿಗೆ ಬಂದಿದೆ. ರಾಜ್ಯ ಸಭೆಯ ಪ್ರತಿಪಕ್ಷದ ನಾಯಕರಾಗಿರುವ ಅವರಿಗೆ ದಿಲ್ಲಿಯಲ್ಲಿ ಹೆಚ್ಚು ಒತ್ತಡದ ಕೆಲಸಗಳೇನೂ ಇಲ್ಲ. ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳ ಸಚಿವರಾಗಿ ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿರುವ ಅವರು ವಿವಾದಗಳಿಂದ ಹೊರತಾದ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿರುವ ನಾಯಕ, ಕೆಪಿಸಿಸಿ ಅಧ್ಯಕ್ಷರಾಗಿಯೂ ರಾಜ್ಯದಲ್ಲಿ ಪಕ್ಷಕ್ಕೊಂದು ಸುಭದ್ರ ನೆಲೆ ಕಲ್ಪಿಸಿದ ಹೆಗ್ಗಳಿಕೆ ಇದೆ.
ಮುಖ್ಯಮಂತ್ರಿಯಾಗುವ ಅವಕಾಶ ಮೂರು ಬಾರಿ ತಪ್ಪಿ ಹೋಗಿದ್ದರ ಬಗ್ಗೆ ಅವರಿಗೂ ಬೇಸರ ಇದೆ. ಹಾಗಂತ ಹಠಕ್ಕೆ ಬಿದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಗೆ ಅವರು ಇಳಿಯುವ ಸಾಧ್ಯತೆಗಳು ದೂರ. ಒಂದು ವೇಳೆ ಸಿದ್ದರಾಮಯ್ಯ ನಿರ್ಗಮನವೇ ಖಚಿತವಾದರೆ ಅದರಿಂದ ಆಗಬಹುದಾದ ರಾಜಕೀಯ ನಷ್ಟ ಸರಿದೂಗಿಸಲು ಖರ್ಗೆಯವರಿಗಿಂತ ಸಮರ್ಥವಾದ ನಾಯಕ ಕಾಂಗ್ರೆಸ್ ನಲ್ಲಿ ಇನ್ನೊಬ್ಬರಿಲ್ಲ ಎಂಬುದೇನೋ ಸತ್ಯ. ಆದರೆ ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳುತ್ತವೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.
ಕುಮಾರಸ್ವಾಮಿ ಕನಸು:
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರಿಗೆ ಮತ್ತೆ ಮುಖ್ಯಮಂತ್ರಿ ಆಗುವ ಹಂಬಲ ಇದೆ. ಅದಕ್ಕೆ ಬಿಜೆಪಿ ಬೆಂಬಲ ಜತೆಗೇ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಬೇಕು. ಸಂಖ್ಯಾ ಬಲ ಇಲ್ಲ. ಆದರೆ ಜೆಡಿಎಸ್ ಜತೆಗಿನ ಮೈತ್ರಿ ಕುರಿತಾಗಿ ಬಿಜೆಪಿಯಲ್ಲೇ ಅಪಸ್ವರಗಳಿವೆ. ಸದ್ಯದ ಸ್ಥಿತಿಯಲ್ಲಿ ಅದು ಸಾಧ್ಯವೂ ಇಲ್ಲ.
ಈ ಎಲ್ಲ ಲೆಕ್ಕಾಚಾರಗಳನ್ನು ಅರಿತಿರುವ ಸಿದ್ದರಾಮಯ್ಯ ತಮ್ಮ ಒಂದೊಂದೇ ರಾಜಕೀಯ ದಾಳ ಉರುಳಿಸಲು ಆರಂಭಿಸಿದ್ದಾರೆ. ಕಾಂಗ್ರೆಸ್ ವರಿಷ್ಠರದ್ದು ಮಾತ್ರ ಉತ್ತರಕ್ಕೆ ತಡಕಾಡುವ ಸ್ಥಿತಿ.
Advertisement