ಪ್ರಧಾನಿ ಪಟ್ಟಕ್ಕೆ ಫಡ್ನವೀಸ್: ದೂರದೃಷ್ಟಿಯ ಲೆಕ್ಕಾಚಾರ? ಏನಿದರ ಹಿಂದಿನ ತರ್ಕ…

ಹಿನ್ನಡೆ ಎದುರಾದಾಗಲೂ ಹಿಂದಿ ಶಾಯರಿಯೊಂದರ ಮೂಲಕ ಸ್ಥೈರ್ಯ ಪ್ರದರ್ಶಿಸಿದ್ದ ರೀತಿಯೇ ಫಡ್ನವೀಸ್ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. “ನನ್ನ ನೀರಿಳಿದಿದೆ ಅಂತ ದಡದಲ್ಲಿ ಮನೆ ಕಟ್ಟಬೇಡ. ನಾನು ಸಮುದ್ರ… ಮರಳಿ ಬರುತ್ತೇನೆ!” ಈ ಚುನಾವಣೆಯಲ್ಲಿ ಉದ್ಧವರ ಶಿವಸೇನೆಯನ್ನು ಆಪೋಶನ ತೆಗೆದುಕೊಂಡು ಆ ಮಾತು ನಿಜವಾಗಿಸಿದ್ದಾರವರು.
Devendra Fadnavis
ದೇವೇಂದ್ರ ಫಡ್ನವಿಸ್ online desk
Updated on

ಹಿನ್ನಡೆ, ಸೋಲು ಇತ್ಯಾದಿಗಳನ್ನು ಗಣಿಸದೇ, ಉನ್ನತ ಗುರಿಯನ್ನೂ ಬಿಡದೇ ಸಾಗುವವನ ಪಾಲಿಗೆ ಕೆಲವೊಮ್ಮೆ ಸಮಯವೆಂಬುದು ಹೇಗೆಲ್ಲ ಬದಲಾಗಿಹೋಗುತ್ತದೆ ಎಂಬುದಕ್ಕೆ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಉದಾಹರಣೆ. 2022ರಲ್ಲಿ ಶಿವಸೇನೆ ಹೋಳಾಗಿ ವಿಚಿತ್ರ ರಾಜಕೀಯ ಸಮೀಕರಣವೊಂದು ಹೊರಹೊಮ್ಮಿದಾಗ, 2014ರಿಂದ 2019ರವರೆಗೆ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಅವರು ಏಕನಾಥ ಶಿಂಧೆ ಅವರಿಗೆ ಜಾಗ ಮಾಡಿಕೊಡಬೇಕಾಯಿತು. ಸರಿ..ಸೂಕ್ತ ಸಮಯ ಬರುವವರೆಗೆ ನೇಪಥ್ಯದಲ್ಲಿರೋಣ ಎಂದು ಬಯಸಿದ ಫಡ್ನವೀಸರಿಗೆ ಅಂತಹ ಅವಕಾಶವನ್ನೂ ಕೊಡಲಿಲ್ಲ ಬಿಜೆಪಿಯ ಹೈಕಮಾಂಡ್ ಲೆಕ್ಕಾಚಾರಗಳು. ಒಂದೊಮ್ಮೆ ಮುಖ್ಯಮಂತ್ರಿಯಾಗಿದ್ದ ಫಡ್ನವೀಸರು ಉಪಮುಖ್ಯಮಂತ್ರಿ ಪಟ್ಟವನ್ನು ಒಪ್ಪಿಕೊಳ್ಳಬೇಕಾಯಿತು.

ಈ ವಿದ್ಯಮಾನ ಹಾಗೂ ನಂತರದ ಲೋಕಸಭೆ ಚುನಾವಣೆ ವೇಳೆ ಪ್ರತಿಪಕ್ಷ ಇಂಡಿ ಮೈತ್ರಿಯೇ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು ಇವೆಲ್ಲವೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಹಾಗೂ ಬಿಜೆಪಿಗಳೆರಡರ ಪ್ರಭೆಯನ್ನೂ ಮಂಕಾಗಿಸಿದ್ದವು. ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದೇ 132 ಸ್ಥಾನಗಳನ್ನು ಗೆದ್ದುಕೊಂಡಿತು.

288 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಿದ್ದದ್ದು 145. ಶಿಂಧೆಯವರ ಶಿವಸೇನೆ ಬಣ ಹಾಗೂ ಅಜಿತ್ ಪವಾರ್ ಅವರ ಎನ್ ಸಿ ಪಿ ಕ್ರಮವಾಗಿ 56 ಮತ್ತು 41 ಸ್ಥಾನಗಳನ್ನು ಪಡೆದಿದ್ದರಿಂದ ಭರ್ಜರಿ ಬಲದೊಂದಿಗೆ ಸಹಕಾರ ರಚಿಸುವ ಭಾಗ್ಯ. ಬಿಜೆಪಿ ಏಕಾಂಗಿಯಾಗಿಯೇ ಹೆಚ್ಚು-ಕಡಿಮೆ ಬಹುಮತಕ್ಕೆ ಬೇಕಾಗುವಷ್ಟರ ಸನಿಹದ ಸ್ಥಾನಗಳನ್ನು ಪಡೆದಿದ್ದರಿಂದ ದೇವೇಂದ್ರ ಫಡ್ನವೀಸರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.

ಇವಿಷ್ಟೇ ಆಗಿದ್ದರೆ, ಇದನ್ನು ದೀರ್ಘಾವಧಿಯಲ್ಲಿ ಪರಿಣಾಮ ಬೀರುವ ವಿದ್ಯಮಾನ ಎಂದೇನೂ ಗಣಿಸಬೇಕಾಗುತ್ತಿರಲಿಲ್ಲ. ಆದರೆ, ದೇವೇಂದ್ರ ಫಡ್ನವೀಸ್ ಈ ಬಾರಿ ಮುಖ್ಯಮಂತ್ರಿಯಾಗಿರುವ ಸನ್ನಿವೇಶವು, ಇನ್ನು ಎರಡು ದಶಕಗಳ ಆಚೆಗೆ ಇವರು ಭಾರತದ ಪ್ರಧಾನಿಯಾಗಬಲ್ಲರೇ ಎಂಬ ಚರ್ಚೆಯೊಂದನ್ನು ರಾಜಕೀಯ ವಿಶ್ಲೇಷಕರ ವಲಯದಲ್ಲಿ ಹುಟ್ಟುಹಾಕಿದೆ!

ಮುಖ್ಯಮಂತ್ರಿಗಳ ನಡುವೆ ಫಡ್ನವೀಸ್ ವಿಚಾರದಲ್ಲಿ ಮಾತ್ರವೇಕೆ ಈ ಲೆಕ್ಕಾಚಾರ?

ಭಾರತದಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿ ಆದೊಡನೆ ಅವರನ್ನು ಮುಂದೆ ಪ್ರಧಾನಿಯಾಗಬಲ್ಲವರೆಂದು ಹೇಳಿಬಿಡುವುದಕ್ಕಾಗುತ್ತದೆಯೇ? ಹಾಗೇನಿಲ್ಲ. ಆದರೆ ಕೆಲವರ ವಿಚಾರದಲ್ಲಿ ಇಂಥ ಊಹೆಗಳಿಗೆ ಅವಕಾಶವಿದೆ. ಫಡ್ನವೀಸ್ ಆ ಸಾಲಿಗೆ ಸೇರಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಲೋಕಸಭೆಗೆ ಅತಿಹೆಚ್ಚು ಸ್ಥಾನಗಳನ್ನು ಕೊಡುವ ರಾಜ್ಯ ಉತ್ತರ ಪ್ರದೇಶ. ಇದನ್ನು ಎರಡನೇ ಬಾರಿಗೆ ಆಳುತ್ತಿರುವ ಯೋಗಿ ಆದಿತ್ಯನಾಥರಿಗೆ ಭವಿಷ್ಯದಲ್ಲಿ ಅಂಥದೊಂದು ಅವಕಾಶವನ್ನು ಊಹಿಸಲಾಗುತ್ತದೆ. ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ಯೋಗಿ ಅವರ ರೀತಿನೀತಿಗೆ ಆ ರಾಜ್ಯದ ಹೊರತಾಗಿಯೂ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರು ಭವಿಷ್ಯದಲ್ಲಿ ಪ್ರಧಾನಿಯಾಗಬಲ್ಲರೆಂಬ ಚರ್ಚೆಗಳಲ್ಲಿ ಸ್ಥಾನ ಪಡೆಯುತ್ತಾರೆ. ಇನ್ನು, ಅಸ್ಸಾಮಿನ ಹಿಮಂತ ಬಿಸ್ವ ಸರ್ಮ ಸಹ ಲೋಕಸಭೆ ವಿಚಾರದಲ್ಲಿ ದೊಡ್ಡ ಸಂಖ್ಯೆ ನೀಡುವ ಜಾಗದಲ್ಲಿರದಿದ್ದರೂ, ಮುಖ್ಯಮಂತ್ರಿಯಾಗಿ ಹಿಂದುತ್ವ ಪ್ರತಿಪಾದನೆಯಲ್ಲಿ ತೋರಿರುವ ಕಾಳಜಿ ಅವರನ್ನು ಬೇರೆಡೆಯೂ ಒಪ್ಪಿತ ಮುಖವನ್ನಾಗಿಸಿದೆ. ಇಷ್ಟಕ್ಕೂ ನರೇಂದ್ರ ಮೋದಿಯವರು ಪ್ರಧಾನಿ ಸ್ಥಾನಕ್ಕೆ ಬಂದಿದ್ದರ ಹಿಂದಿದ್ದದ್ದು ಮುಖ್ಯಮಂತ್ರಿಯಾಗಿ ಅವರು ಗುಜರಾತ್ ಅನ್ನು ಆರ್ಥಿಕ ಶಕ್ತಿಯಾಗಿ ಬ್ರಾಂಡ್ ಮಾಡಿದ ರೀತಿ ಹಾಗೂ ಹಿಂದುತ್ವದ ಆಸರೆ.

ಈ ಎಲ್ಲ ಹಿನ್ನೆಲೆಗಳಲ್ಲಿ ಫಡ್ನವೀಸ್ ರಾಷ್ಟ್ರ ರಾಜಕಾರಣದ ಚರ್ಚೆಯಲ್ಲಿ ಮುಖ್ಯರಾಗುತ್ತಾರೆ. ಲೋಕಸಭೆಗೆ 48 ಸ್ಥಾನಗಳನ್ನು ಕೊಡುವ ಮಹಾರಾಷ್ಟ್ರದಿಂದ ಮೂರನೇ ಬಾರಿಗೆ ಮುಖ್ಯಮಂತ್ರಿ ಆಗಿರುವವರು ಫಡ್ನವೀಸ್ ಎಂಬಂಶ ಅವರ ಸಾಧನಾವಿವರಕ್ಕೆ ತೂಕ ತರುತ್ತದೆ. ವಯಸ್ಸಿನ್ನೂ 54. ಹೀಗಾಗಿ ಎರಡು ದಶಕದ ನಂತರ, ಈಗಿರುವ ಸಂಭಾವ್ಯ ನೇತಾರರು ತಮ್ಮ ಸರದಿ ಮುಗಿಸಿದ ಮೇಲೆ ಅಗ್ರಸ್ಥಾನಕ್ಕೆ ಪರಿಗಣಿತವಾಗುವ ಅವಕಾಶ ಇದೆ. ಇಡೀ ದೇಶವನ್ನು ಪ್ರಭಾವಿಸುವ ದೇಶದ ವಿತ್ತ ಕೇಂದ್ರ ಮುಂಬಯಿಯನ್ನು ತನ್ನಲ್ಲಿರಿಸಿಕೊಂಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿಯ ತೂಕ ವ್ಯಾವಹಾರಿಕವಾಗಿ ಇತರ ರಾಜ್ಯಗಳಿಗಿಂತ ಹೆಚ್ಚೆ ಇರುತ್ತದೆ. ಅಲ್ಲದೇ, ಮರಾಠಿ ಜತೆ ಜತೆಗೆ ಹಿಂದಿಯನ್ನೂ ವ್ಯಾಪಕವಾಗಿ ಬಳಸುವ ಹಾಗೂ ಅದರಲ್ಲಿ ಅಭಿವ್ಯಕ್ತಿಸುವ ಮಹಾರಾಷ್ಟ್ರದ ನೆಲದಿಂದ ಬರುವ ನೇತಾರರಿಗೆ ದೆಹಲಿ ರಾಜಕಾರಣವು ಬೇಗ ಒಳಗೆ ಬಿಟ್ಟುಕೊಳ್ಳುತ್ತದೆ. ಹಿಂದಿಯಲ್ಲಿ ಸುಲಲಿತವಾಗಿ ಮಾತನಾಡುವ ದೇವೇಂದ್ರ ಫಡ್ನವೀಸ್ ಭವಿಷ್ಯದ ರಾಷ್ಟ್ರ ರಾಜಕಾರಣಕ್ಕೆ ಸಹಜ ಸರಕು. ಉದ್ಧವ ಠಾಕ್ರೆ ಸಿಡಿದು ಹೋಗಿದ್ದರಿಂದ 2019ರಲ್ಲಿ ಅಧಿಕಾರ ಕಳೆದುಕೊಂಡಿದ್ದವರು ಫಡ್ನವೀಸ್. ಹೀಗೆ ಹಿನ್ನಡೆ ಎದುರಾದಾಗಲೂ ಹಿಂದಿ ಶಾಯರಿಯೊಂದರ ಮೂಲಕ ಸ್ಥೈರ್ಯ ಪ್ರದರ್ಶಿಸಿದ್ದ ರೀತಿಯೇ ಫಡ್ನವೀಸ್ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. “ನನ್ನ ನೀರಿಳಿದಿದೆ ಅಂತ ದಡದಲ್ಲಿ ಮನೆ ಕಟ್ಟಬೇಡ. ನಾನು ಸಮುದ್ರ…ಮರಳಿ ಬರುತ್ತೇನೆ!” ಈ ಚುನಾವಣೆಯಲ್ಲಿ ಉದ್ಧವರ ಶಿವಸೇನೆಯನ್ನು ಆಪೋಶನ ತೆಗೆದುಕೊಂಡು ಆ ಮಾತು ನಿಜವಾಗಿಸಿದ್ದಾರವರು. 

Devendra Fadnavis
Freebies- ಇದು ಅವರವರ ಭಾವಕ್ಕೆ, ಅವರವರ ಲಾಭಕ್ಕೆ? ಮಹಾರಾಷ್ಟ್ರ ರಾಜಕೀಯ ಕೊಡುತ್ತಿರುವ ಸಂದೇಶ!

ಒಮ್ಮೆ ಮುಖ್ಯಮಂತ್ರಿಯಾಗಿದ್ದ ತನ್ನನ್ನು ಪಕ್ಷದ ಹೈಕಮಾಂಡ್ ಉಪಮುಖ್ಯಮಂತ್ರಿಯಾಗಿಸಿಬಿಟ್ಟಿತೆಂದು ಮನಸ್ಸು ಕಹಿಗೊಳಿಸಿಕೊಳ್ಳದ ಫಡ್ನವೀಸ್ ಗುಣ ಹಾಗೂ ಅಧಿಕಾರವಿರದಿದ್ದರೂ ಹಿಂದುತ್ವದ ವಿಚಾರಕ್ಕೆ ತೋರಿದ ನಿಷ್ಠೆ ಇವೆಲ್ಲವೂ ಫಡ್ನವೀಸರನ್ನು ರಾಜಕಾರಣದ ದೀರ್ಘಾವಧಿ ಆಟಗಾರನನ್ನಾಗಿಸಿದೆ. ಉದ್ಧವ ಬಣದ ಶಿವಸೇನೆಯು ಬಾಳಾ ಸಾಹೇಬರ ಹಿಂದುತ್ವಕ್ಕೆ ಹೇಗೆ ಬೆನ್ನು ತೋರಿಸಿದೆ ಎಂಬುದನ್ನು ನಿರಂತರವಾಗಿ ತಮ್ಮ ಭಾಷಣಗಳಲ್ಲಿ ಹೇಳುತ್ತ ಹೋದವರು ಫಡ್ನವೀಸ್. 

ಮುಂಬೈನ ಥಳಕುಬಳುಕಿನ ಲೋಕ ಹಾಗೂ ಅದಕ್ಕೆ ಅಂಟಿಕೊಂಡಿರುವ ಹಿಂದುತ್ವಕ್ಕೆ ವಿಮುಖವಾಗಿರುವ ಸಂಗತಿಗಳೊಂದಿಗೆ ಅವರ ಪತ್ನಿ ಅಮೃತಾ ಫಡ್ನವೀಸ್ ನಂಟು ಹೆಚ್ಚಿದೆ. ಅದವರ ವೈಯಕ್ತಿಕತೆ. ಆದರೆ ಆ ಅಂಶವು ತಮ್ಮ ಆಡಳಿತವನ್ನು ಪ್ರಭಾವಿಸದಂತೆ ದೇವೇಂದ್ರರು ಕಾದುಕೊಂಡಿದ್ದೇ ಆದರೆ, ಈ ಅವಧಿ ಮುಗಿಯುತ್ತಲೇ ಅವರು ರಾಷ್ಟ್ರರಾಜಕಾರಣದ ಬಿಜೆಪಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಪ್ರಖರವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com