Freebies- ಇದು ಅವರವರ ಭಾವಕ್ಕೆ, ಅವರವರ ಲಾಭಕ್ಕೆ? ಮಹಾರಾಷ್ಟ್ರ ರಾಜಕೀಯ ಕೊಡುತ್ತಿರುವ ಸಂದೇಶ!

ಕರ್ನಾಟಕದ ವಿಧಾನಸಭೆ ಚುನಾವಣೆಗಳು ಬಂದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಉಚಿತ ಘೋಷಣೆಗಳನ್ನು ಸಹಜವಾಗಿಯೇ ಬಿಜೆಪಿ ಬೆಂಬಲಿಗರು ಗೇಲಿ ಮಾಡಿದ್ದರು. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಸಿಕ್ಕ ಅಸಾಧಾರಣ ಬಹುಮತದ ವಿಜಯವು “ಫ್ರೀಬಿ ವರ್ಕ್ ಆಗಿದೆ” ಬಿಡಿ ಎಂಬಂಥ ಭಾವನೆಯನ್ನು ಹುಟ್ಟುಹಾಕಿತು.
Ladki bahin programme and Maharashtra CM Shindhe (file pic)
ಲಡ್ಕಿ ಬಹಿನ್ ಯೋಜನೆ, ಮಹಾರಾಷ್ಟ್ರ ಸಿಎಂ ಶಿಂಧೆ (ಸಾಂಕೇತಿಕ ಚಿತ್ರ)online desk
Updated on

ಫ್ರೀಬಿ ಇಲ್ಲವೇ ಜನವರ್ಗಗಳ ಖಾತೆಯಲ್ಲಿ ಏನಾದರೊಂದು ಮಾರ್ಗದಿಂದ ಹಣವಿರಿಸುವ ಮಾದರಿ ಇದೀಗ ಭಾರತೀಯ ರಾಜಕೀಯದ ವಾಸ್ತವ. ಇದೀಗ, ಚುನಾವಣೆ ಹೊಸ್ತಿಲಿನಲ್ಲಿರುವ ಮಹಾರಾಷ್ಟ್ರದಲ್ಲಿ ಚರ್ಚಾ ಕೇಂದ್ರದಲ್ಲಿರುವ ಸಂಗತಿಗಳಲ್ಲೊಂದು - ಲಡ್ಕಿ ಬಹಿನ್ ಯೋಜನಾ.

ಕರ್ನಾಟಕದ ವಿಧಾನಸಭೆ ಚುನಾವಣೆಗಳು ಬಂದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಉಚಿತ ಘೋಷಣೆಗಳನ್ನು ಸಹಜವಾಗಿಯೇ ಬಿಜೆಪಿ ಬೆಂಬಲಿಗರು ಗೇಲಿ ಮಾಡಿದ್ದರು. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಸಿಕ್ಕ ಅಸಾಧಾರಣ ಬಹುಮತದ ವಿಜಯವು “ಫ್ರೀಬಿ ವರ್ಕ್ ಆಗಿದೆ” ಬಿಡಿ ಎಂಬಂಥ ಭಾವನೆಯನ್ನು ಹುಟ್ಟುಹಾಕಿತು. ಆದರೆ, ಅದರ ಬೆನ್ನಲ್ಲೇ ಬಂದ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿ ಮೈತ್ರಿಗೇ ಹೆಚ್ಚಿನ ಸಂಸದ ಸ್ಥಾನಗಳನ್ನು ಕೊಟ್ಟಾಗ, “ಫ್ರೀಬಿಯೇ ಎಲ್ಲ ಅಲ್ಲ ಕಣ್ರೀ” ಎಂಬಂತಹ ವಿಶ್ಲೇಷಣೆಗಳು ಶುರುವಾದವು. ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಾಗುತ್ತಿರುವ ಹೊತ್ತಿನಲ್ಲಿ, ಫ್ರೀಬಿಗಾಗಿ ಸಂಪನ್ಮೂಲ ಹೊಂದಾಣಿಕೆಗೆ ಕಷ್ಟದಲ್ಲಿರುವಂತೆ ತೋರುತ್ತಿರುವ ಕರ್ನಾಟಕ ಸರ್ಕಾರದ ಅಧಿಕಾರಸ್ಥರ ಬಾಯಿಂದ, ಕೆಲವು ಉಚಿತ ನೀಡಿಕೆಗಳನ್ನು ಮರು ಪರಿಷ್ಕರಿಸುವ ಮಾತುಗಳು ಬರುತ್ತಿವೆ. 

ಸ್ವಾರಸ್ಯ ನೋಡಿ. ಅತ್ತ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮೈತ್ರಿಯು ಚುನಾವಣೆಗೆ ಕೆಲವು ತಿಂಗಳಿರುವಾಗ ತಾನು ಘೋಷಿಸಿರುವ ಫ್ರೀಬಿ ಯೋಜನೆಗಳನ್ನು ಅತಿಯಾಗಿ ಪ್ರಚಾರ ಮಾಡಿಕೊಳ್ಳುತ್ತಿದೆ. ಅತ್ತ, ಕಾಂಗ್ರೆಸ್ - ಎನ್ಸಿಪಿ- ಉದ್ಧವ್ ಠಾಕ್ರೆ ಪ್ರಣೀತ ಶಿವಸೇನೆ ಮೈತ್ರಿ (ಮಹಾ ವಿಕಾಸ ಅಗಡಿ) ಯಲ್ಲಿ ತಾವೂ ಪ್ರಣಾಳಿಕೆಯಲ್ಲಿ ಇಂಥ ಭರವಸೆಗಳನ್ನು ಕೊಡಬೇಕೋ, ಬೇಡವೋ ಎಂಬ ಬಗ್ಗೆ ಆಂತರಿಕ ಚರ್ಚೆಗಳಾಗುತ್ತಿವೆ.

Ladki bahin programme and Maharashtra CM Shindhe (file pic)
ಖಾಲಿಸ್ಥಾನಿಗಳಿಗೇಕೆ ಕೆನಡಾದ ಆಶ್ರಯ? ಇವರ ಹಿಂದು ದ್ವೇಷಕ್ಕಿರುವ ಪ್ರಚೋದನೆಯಾದರೂ ಏನು? (ತೆರೆದ ಕಿಟಕಿ)

ಮಹಾ ವಿಕಾಸ ಅಗಡಿಯ ಕೆಲ ನಾಯಕರು, ನಾವು ಭರವಸೆಗಳನ್ನು ಕೊಡುವುದರಲ್ಲಿ ಮಿತಿ ಮೀರಬಾರದು, ಏಕೆಂದರೆ ನಂತರ ಅವನ್ನು ಪೂರೈಸಲಿಕ್ಕಾಗುವುದಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಇನ್ನು ಕೆಲವರು, ಬಿಜೆಪಿ ಮಾತ್ರಿ ಸರ್ಕಾರದ ಲಡ್ಕಿ ಬಹಿನ್ ಯೋಜನೆ ಅವರ ಪಾಲಿಗೆ ಮತ ಸೆಳೆಯಬಲ್ಲದು. ಹೀಗಾಗಿ ಅದನ್ನು ಮಂಕಾಗಿಸುವಂಥ ಗ್ಯಾರಂಟಿಯ ಭರವಸೆಯನ್ನು ಪ್ರತಿಪಕ್ಷ ಮೈತ್ರಿಯೂ ಕೊಡಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.

ಇಷ್ಟಕ್ಕೂ ಏನಿದು ಲಡ್ಕಿ ಬಹಿನ್ ಯೋಜನೆ? ಮಹಾರಾಷ್ಟ್ರದಲ್ಲಿ ಯಾವ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರುಪಾಯಿಗಳ ಒಳಗಿದೆಯೋ ಅಂಥ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಪ್ರತಿ ತಿಂಗಳು 1,500 ರುಪಾಯಿಗಳನ್ನು ಕೊಡುವ ಯೋಜನೆ ಇದು. ಈವರೆಗೆ 5 ಕಂತುಗಳ ಹಣ ನೀಡಿಕೆ ಪೂರೈಸಿದ್ದಾಗಿ ಮಹಾರಾಷ್ಟ್ರದ ಮಹಾಯುತಿ ಮೈತ್ರಿ ಸರ್ಕಾರ ಹೇಳಿಕೊಂಡಿದೆ.

ಖರ್ಗೆಯವರಿಗೆ ಕರ್ನಾಟಕದ ಅನುಭವ ಬಿಸಿ ಮುಟ್ಟಿಸಿತೇ?

ಇದೀಗ ಮಹಾರಾಷ್ಟ್ರದ ಚುನಾವಣಾ ಪ್ರಚಾರ ಕಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯೊಂದನ್ನು ಇಟ್ಟುಕೊಂಡು ಮುಖ್ಯಮಂತ್ರಿ ಏಕನಾಥ ಶಿಂಧೆ ಭಾವನಾತ್ಮಕ ಬಾಣಗಳನ್ನು ಕಾಂಗ್ರೆಸ್ಸಿನತ್ತ ತೂರುತ್ತಿದ್ದಾರೆ. 

ಇತ್ತ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೇ ಹೆಚ್ಚಿನ ಹಣ ವ್ಯಯವಾಗುವುದರಿಂದ ಕ್ಷೇತ್ರದ ಸೌಕರ್ಯಾಭಿವೃದ್ಧಿ ಕಾರ್ಯಗಳಿಗೆ ತಮಗೆ ಹಣ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಅಲವತ್ತುಕೊಂಡಿದ್ದು ಆಗೀಗ ಸುದ್ದಿಯಾಗಿತ್ತು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದರದ್ದೇ ಬಿಸಿ ತಟ್ಟಿರುವುದಕ್ಕೋ ಏನೋ, ಮಹಾರಾಷ್ಟ್ರ ಚುನಾವಣೆಯ ಪ್ರಚಾರ ಜಾರಿಯಲ್ಲಿರುವಾಗ ಅವರೊಂದು ಹೇಳಿಕೆ ಕೊಟ್ಟರು. ಅವರು ಹೇಳಿದ್ದು- “ಮಹಾರಾಷ್ಟ್ರದಲ್ಲಿ 5,10,20ರ ಸಂಖ್ಯೆಗಳಲ್ಲೆಲ್ಲ ಗ್ಯಾರಂಟಿಗಳನ್ನು ಘೋಷಿಸಿಬೇಡಿ ಎಂದು ಹೇಳಿದ್ದೇನೆ. ಬಜೆಟ್ಟಿನ ವ್ಯಾಪ್ತಿಯನ್ನು ಅರಿತು ಭರವಸೆಗಳನ್ನು ಕೊಡಬೇಕಾಗುತ್ತದೆ. ಹಾಗಲ್ಲದಿದ್ದರೆ ನಾವು ದಿವಾಳಿ ಎದುರಿಸಬೇಕಾಗುತ್ತದೆ. ಉತ್ತಮ ರಸ್ತೆ ಇತ್ಯಾದಿಗಳಿಗೆ ವ್ಯಯಿಸುವುದಕ್ಕೆ ಹಣವಿರದಿದ್ದರೆ ಜನರು ತಿರುಗಿ ಬೀಳುತ್ತಾರೆ. ಸರ್ಕಾರ ವಿಫಲವಾದರೆ ಒಂದು ಜನ ಪೀಳಿಗೆ ಹತ್ತು ವರ್ಷಗಳವರೆಗೆ ನೇಪಥ್ಯಕ್ಕೆ ಸರಿಯಬೇಕಾಗುತ್ತದೆ.”

ಖರ್ಗೆಯವರು ಹೀಗೆ ಹೇಳಿದ್ದೇ ತಡ ಅಲ್ಲಿನ ಮುಖ್ಯಮಂತ್ರಿ ಏಕನಾಥ ಶಿಂಧೆ ಈ ಬಗ್ಗೆ ಭಾರಿ ಗುಲ್ಲೆಬ್ಬಿಸುತ್ತಿದ್ದಾರೆ. “ಕಟಾಕಟ್ ಹಣ ಎಂದು ಭರವಸೆ ಕೊಟ್ಟಿದ್ದ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದಲ್ಲಿ ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಆದರೆ ನಮ್ಮ ಸರ್ಕಾರ ಹಾಗಲ್ಲ. ಲಡ್ಕಿ ಬಹಿನ್ ಥರದ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸಿದ್ದೇವೆ. ಈಗ ಮಹಾ ಅಗಡಿ ನಾಯಕರು ತಾವು ಅಧಿಕಾರಕ್ಕೆ ಬಂದರೆ ನಮ್ಮ ಯೋಜನೆಗಳನ್ನು ತನಿಖೆ ಮಾಡುವುದಾಗಿ ಹೇಳುತ್ತಿದ್ದಾರೆ. ಲಡ್ಕಿ ಬಹಿನ್ ಥರದ ಯೋಜನೆ ಅಪರಾಧ ಎನ್ನುವುದಾದರೆ, ಆ ಅಪರಾಧವನ್ನು ನಾನು ಮತ್ತೆ ಮತ್ತೆ ಮಾಡುತ್ತೇನೆ. ಈ ಯೋಜನೆಯ ಹಣದ ಮೊತ್ತವನ್ನು ಏರಿಸುವ ಕುರಿತೂ ಪರಾಮರ್ಶೆ ಆಗುತ್ತಿದೆ. ನಿಮ್ಮ ಲಾಭಗಳನ್ನು ಬಿಟ್ಟಿ ಎಂದು ಅಣಕಿಸುವವರಿಗೆ ಪಾಠ ಕಲಿಸಿ” ಎಂದೆಲ್ಲ ಶಿಂಧೆ ಜನರೆದುರು ಭಾಷಣ ಮಾಡುತ್ತಿದ್ದಾರೆ.

ಅಲ್ಲಿಗೆ ಫ್ರೀಬಿ ಎಂಬ ಪರಿಕಲ್ಪನೆ ಕುರಿತು ಯಾವ ಪಕ್ಷಗಳಿಗೂ ಸೈದ್ಧಾಂತಿಕ ಸ್ಪಷ್ಟತೆ ಎಂದೆನೂ ಇಲ್ಲ. ಅದು ಕಾಂಗ್ರೆಸ್ ಮೈತ್ರಿಕೂಟವಾಗಿದ್ದಿರಲಿ, ಬಿಜೆಪಿ ಮೈತ್ರಿಗಣವಾಗಿದ್ದಿರಲಿ ತಮ್ಮ ತಮ್ಮ ಅಧಿಕಾರದ ಅವಕಾಶ ಗಟ್ಟಿಗೊಳಿಸಿಕೊಳ್ಳುವುದಕ್ಕೆ ಸಂದರ್ಭಕ್ಕೆ ತಕ್ಕ ಫ್ರೀಬಿ ಆಟಗಳನ್ನು ಆಡಿಯೇ ಆಡುತ್ತಾರೆ ಎಂಬ ತಥ್ಯವನ್ನು ಮಹಾರಾಷ್ಟ್ರ ವಿಧಾನಸಭೆಯ ಪ್ರಚಾರಕಣವು ಸಾರಿ ಹೇಳುತ್ತಿರುವಂತಿದೆ. 

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com